`ಡರ್ಟಿ ಪಿಕ್ಚರ್' ಚಿತ್ರ ಬಂದಾಗಿನಿಂದ ಸಿನಿಮಾ ತಾರೆಯರ ಬದುಕನ್ನು ತೆರೆ ಮೇಲೆ ತವರು ಹಾವಳಿ ಹೆಚ್ಚಾಗಿಬಿಟ್ಟಿದೆ. ಇತ್ತೀಚೆಗೆ `ಸಿಲ್ಕ್ ಸಖತ್ ಹಾಟ್' ಅಂತ ಚಿತ್ರವೊಂದು ಬಂದಿತ್ತು, ಅದು ಸಿಲ್ಕ್ ಹೆಸರನ್ನಷ್ಟೇ ಬಳಸಿಕೊಂಡಿತೇ ವಿನಾ ಚಿತ್ರನಟಿಯತ್ತ ತಲೆ ಹಾಕಿರಲಿಲ್ಲ.
ವಿದ್ಯಾಬಾಲನ್ ಳಷ್ಟು ಅದ್ಭುತವಾಗಿ ನಟನೆಯನ್ನು ಇಲ್ಲಿಯವರೆಗೂ ಯಾವ ನಟಿಯೂ ನೀಡಿರಲಿಲ್ಲ ಎನ್ನಬಹುದು. ಸ್ವತಃ ಸಿಲ್ಕ್ ಬಂದು ನೋಡಿದ್ರೂ ಆಶ್ಚರ್ಯಪಡುತ್ತಿದ್ದಳೇನೋ? ಬಹಳ ವರ್ಷಗಳ ಹಿಂದೆ ಸ್ಮಿತಾ ಪಾಟೀಲ್ ಮರಾಠಿ ನಟಿಯೊಬ್ಬರ ಲೈಫ್ ಸ್ಟೋರಿ `ಭೂಮಿಕಾ' ಚಿತ್ರದಲ್ಲಿ ಅದೇ ತಾರೆಯಾಗಿ ನಟಿಸಿದ್ದರು. ಅದು ಒಂದು ಕ್ಲಾಸ್ ಚಿತ್ರವಾಗಿತ್ತು.
ತಾರೆಯರು ತಮ್ಮ ಪ್ರೌಢತ್ವ ಬಳಸಿಕೊಳ್ಳುತ್ತಿರುವಂತೆ ಹೊಸ ಹೊಸ ಪ್ರಯೋಗದತ್ತ ಗಮನಹರಿಸೋದು ಸಾಮಾನ್ಯ. ತಮ್ಮನ್ನು ತಾವು ಮಹಿಳಾ ಪ್ರಧಾನ ಚಿತ್ರಗಳಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ಪೂಜಾಗಾಂಧಿ ಕನ್ನಡ ಸಿನಿಮಾರಂಗಕ್ಕೆ ಬಂದು ಆರು ವರ್ಷಗಳಾಗಿವೆ.
``ನಾನು ಕನ್ನಡ ಚಿತ್ರಗಳಲ್ಲಿ ನಟಿಸುತ್ತೇನೆಂದು ಗೊತ್ತಿರಲಿಲ್ಲ. ನನ್ನ ಮೊದಲ ಕನ್ನಡ ಚಿತ್ರ `ಮುಂಗಾರು ಮಳೆ' ಇತಿಹಾಸ ಸೃಷ್ಟಿಸುತ್ತೆ ಅಂತ ಅಂದುಕೊಂಡಿರಲಿಲ್ಲ. ರಾಜಕ್ಕೀಯಕ್ಕಿಳಿದು ರಾಯಚೂರಿನಿಂದ ಸ್ಪರ್ಧಿಸುತ್ತೇನೆಂದು ಊಹಿಸಿರಲಿಲ್ಲ. ಎಲ್ಲವೂ ಅದಾಗಿಯೇ ನನ್ನ ಪಾಲಿಗೆ ಬಂದುಬಿಡ್ತು,'' ಎಂದು ಖುಷಿಪಡುವ ಪೂಜಾ ತನ್ನನ್ನು ತಾನು ಕನ್ನಡತಿ ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತಾಳೆ.
ಪೂಜಾಗಾಂಧಿ ಇತ್ತೀಚೆಗೆ ತಮ್ಮದೇ ಆದ ಹೊಸ ಬ್ಯಾನರ್ ನ್ನು ಗೆಳತಿ ವೈಜಯಂತಿ ಜೊತೆಗೂಡಿ ಶುರು ಮಾಡಿದರು. ಕೃಷ್ಣ ಫಿಲಮ್ಸ್ ಹೆಸರಿನಡಿ `ಅಭಿನೇತ್ರಿ' ಎನ್ನುವ ಹೊಸ ಚಿತ್ರ ಪ್ರಾರಂಭಿಸಿದ್ದಾರೆ. ಈ ಚಿತ್ರದ ಮುಹೂರ್ತ ಅದ್ಧೂರಿಯಾಗಿ ನೆರವೇರಿತು. ಪತ್ರಿಕಾಗೋಷ್ಠಿಯನ್ನು ಪ್ರತ್ಯೇಕವಾಗಿ ಕರೆದಿದ್ದ ಪೂಜಾ ಎಲ್ಲರೊಂದಿಗೆ ತಮ್ಮ ಹೊಸ ಚಿತ್ರ `ಅಭಿನೇತ್ರಿ'ಗೆ ಮಾಡಿಸಲಾಗಿದ್ದ ಫೋಟೋ ಶೂಟ್ ಕುರಿತು ಹೇಳುತ್ತಿದ್ದರು, ಅದು ಮುಹೂರ್ತಕ್ಕೆ ಮೊದಲೇ ಭಾರಿ ಸುದ್ದಿ ಮಾಡಿತ್ತು. ಒಂದೊಂದು ಫೋಟೋನೂ ಮಿನುಗುತಾರೆ ಕಲ್ಪನಾರ ಸ್ಟೈಲನ್ನು ಹೋಲುವಂತಿತ್ತು. ಶರಪಂಜರದಲ್ಲಿನ ಗೆಟಪ್, ಕಲ್ಪನಾರಂತೆ ಸೀರೆ ಬ್ಲೌಸು ತೊಟ್ಟು ವಿಗ್ ಹಾಕಿಕೊಂಡ ಪೂಜಾಗಾಂಧಿ ಬಹಳ ವಿಭಿನ್ನವಾಗಿ ಕಾಣುತ್ತಿದ್ದಳು. `ಅಭಿನೇತ್ರಿ' ಕಲ್ಪನಾ ಅವರ ಲೈಫ್ ಸ್ಟೋರಿ ಇರಬಹುದೆಂದೇ ಎಲ್ಲರೂ ಭಾವಿಸಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಪೂಜಾಗಾಂಧಿ ಮಾತನಾಡುತ್ತಾ, ``ಬಹಳ ಜನ ತಪ್ಪಾಗಿ ತಿಳಿದಿದ್ದಾರೆ ಇದು ಖಂಡಿತಾ ಕಲ್ಪನಾ ಅವರ ಬದುಕಿನ ಕಥೆಯಲ್ಲ,'' ಎಂದು ಸ್ಪಷ್ಟಪಡಿಸಿದಾಗ ಹಾಗಾದ್ರೆ ಯಾವ ತಾರೆಯ ಜೀವನದ ಕಥೆ? ಎಂಬ ಪ್ರಶ್ನೆಗೆ
``ಭಾರತೀಯ ಚಿತ್ರರಂಗದಲ್ಲಿ ದುರಂತ ನಾಯಕಿಯರು ಎಂದೇ ಕರೆಯಲ್ಪಡುವ ಮೀನಾಕುಮಾರಿ, ಮಧುಬಾಲಾ, ಕಲ್ಪನಾ ಹೀಗೆ ಅನೇಕರಿದ್ದಾರೆ. ಅವರೆಲ್ಲರೂ ನನ್ನ `ಅಭಿನೇತ್ರಿ' ಚಿತ್ರಕ್ಕೆ ಸ್ಛೂರ್ತಿಯಾಗುತ್ತಾರೆ.
``ಮೊದಲಿಗೆ ಫೋಟೋ ಶೂಟ್ ಮಾಡಿದಾಗ ಕೆಲವರು ಮೀನಾಕುಮಾರಿ ತರಹ ಕಾಣ್ತೀರಾ ಅಂದ್ರು, ಇನ್ನೂ ಕೆಲವರು ಮೌಶಮಿ ಚಟರ್ಜಿಯಂತೆ ಹೇರ್ ಸ್ಟೈಲ್ ಇದೆ ಅಂದರು. ಮಿನುಗುತಾರೆ ಕಲ್ಪನಾರ ಸ್ಟೈಲ್ ಇದೆ ಎಂದರು. ಹಾಗಂತ ಅವರ ಬದುಕಿನ ಚಿತ್ರ `ಅಭಿನೇತ್ರಿ' ಅಲ್ಲ ಎಂದು ಪೂಜಾ ಪದೇ ಪದೇ ಕಲ್ಪನಾ ನಾನಲ್ಲ ನಾನಲ್ಲ ಎಂದು ಹೇಳುತ್ತಲೇ ಇದ್ದರು.