`ಕಡ್ಡಿಪುಡಿ' ಚಿತ್ರದ ಯಶಸ್ಸಿನ ನಂತರ ಶಿವಣ್ಣ ಇನ್ನಷ್ಟು ಜನಪ್ರಿಯರಾಗುತ್ತಿದ್ದಾರೆ. ಅವರ ಸ್ಟಾರ್ ವ್ಯಾಲ್ಯೂ ಹೆಚ್ಚುತ್ತಿದೆ. ಒಳ್ಳೆ ಸ್ಕ್ರಿಪ್ಟ್ ತರುವ ಯುವ ನಿರ್ದೇಶಕರನ್ನು ಸಾಕಷ್ಟು ಪ್ರೋತ್ಸಾಹಿಸುವ ಶಿವಣ್ಣ ಹಿರಿಯ ನಿರ್ದೇಶಕರನ್ನು ಮರೆತಿಲ್ಲ. ಅವರ ಮೆಚ್ಚಿನ ನಿರ್ದೇಶಕರಲ್ಲೊಬ್ಬರಾದ ಡಿ. ರಾಜೇಂದ್ರಬಾಬು ಅವರ `ಆರ್ಯನ್' ಚಿತ್ರದಲ್ಲೂ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೆಲ್ಲದರ ನಡುವೆ ಸೆಂಚುರಿ ಸ್ಟಾರ್ ಅನಿಸಿಕೊಂಡಿರು ಶಿವಣ್ಣ `ಭಜರಂಗಿ'ಯಾಗಿ ಹರ್ಷ ನಿರ್ದೇಶನದಲ್ಲಿ ನಟಿಸುತ್ತಿದ್ದಾರೆ.
ನೃತ್ಯ ನಿರ್ದೇಶಕ ಹರ್ಷ ಈಗಾಗಲೇ `ಗೆಳೆಯ,' `ಬಿರುಗಾಳಿ,' `ಚಿಂಗಾರಿ'ಯಂಥ ಚಿತ್ರಗಳನ್ನು ಕೊಟ್ಟಿದ್ದಾರೆ. ಅವರಿಗೆ ಮೊದಲಿನಿಂದಲೂ ಶಿವಣ್ಣ ಫೇವರಿಟ್. ಅವರ ಜೊತೆ ಒಂದು ಚಿತ್ರ ಮಾಡುವ ಆಸೆ ಇದ್ದೇ ಇತ್ತು. ಅದಕ್ಕಾಗಿ ಒಳ್ಳೆ ಸಬ್ಜೆಕ್ಟ್ ಹುಡುಕುತ್ತಲೇ ಇದ್ದರು. `ಶಿವರಾಜ್ ಕುಮಾರ್ ಅವರನ್ನು ಬೇರೆಯೇ ರೂಪದಲ್ಲಿ ತೆರೆ ಮೇಲೆ ತೋರಿಸಬೇಕೆಂಬ ಆಸೆ ಮೊದಲಿನಿಂದಲೂ ಇತ್ತು. `ನಾನು ಶೋಗಳಲ್ಲಿ ಡ್ಯಾನ್ಸ್ ಮಾಡುತ್ತಿರುವಾಗಲೂ ಸಹ ಶಿವಣ್ಣ ನನ್ನನ್ನು ಕಂಡರೆ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಅವರಂಥ ದೊಡ್ಡ ಕಲಾವಿದರ ಜೊತೆ ನಾನು ಸಿನಿಮಾ ಮಾಡಲು ಸಾಧ್ಯವೇ ಅಂತ ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತಿದ್ದೆ. ನಾನು ನಿರ್ದೇಶಕನಾಗಿ ನನ್ನ ಪ್ರತಿಭೆ ತೋರಿಸಿದ ನಂತರವೇ ಶಿವಣ್ಣ ಅವರೆದುರು ಹೋಗಿ, ಕಥೆ ಹೇಳುವಷ್ಟು ಧೈರ್ಯ ಬಂದಿತು,' ಎನ್ನುವ ಹರ್ಷ `ಭಜರಂಗಿ' ಚಿತ್ರದಲ್ಲಿ ಶಿಣ್ಣನವರನ್ನು ವೈವಿಧ್ಯಮಯ ಪಾತ್ರದಲ್ಲಿ ತೋರಿಸಲು ತುದಿಗಾಲಲ್ಲಿ ನಿಂತಿದ್ದಾರೆ.
`ಭಜರಂಗಿ' ಚಿತ್ರದ ಬಗ್ಗೆ ಶಿವಣ್ಣ ಅವರಿಗೂ ಸಾಕಷ್ಟು ಉತ್ಸಾಹವಿದೆ. `ಭಜರಂಗಿ' ಚಿತ್ರಕ್ಕಾಗಿಯೇ ಶಿವರಾಜ್ ಕುಮಾರ್ ಸಿಕ್ಸ್ ಪ್ಯಾಕ್ ಮಾಡಿಕೊಂಡಿದ್ದಾರೆ. ಈ ತಯಾರಿಗಾಗಿ ಶಿವಣ್ಣ ಒಂದು ತಿಂಗಳು ಕಳೆದಿದ್ದರು. `ಭಜರಂಗಿ' ಚಿತ್ರದಲ್ಲಿ ಹಿಂದಿನ ಕಾಲಮಾನವನ್ನು ನೋಡಬಹುದಾಗಿದೆ. ವಿಭಿನ್ನ ಗೆಟಪ್, ಡಕಾಯಿತನ ವೇಷ, ಮಂತ್ರವಾದಿ, ಅಘೋರಿಯಂತೆ ಕಾಣಿಸುವಂಥ ಲುಕ್ಸ್. ಶಿವಣ್ಣ ಇದೂವರೆಗೂ ಮಾಡದ ಪಾತ್ರವನ್ನು `ಭಜರಂಗಿ' ಚಿತ್ರದಲ್ಲಿ ಮಾಡಿದ್ದಾರೆ ಎನ್ನಲಾಗಿದೆ.
ಹರ್ಷ ಕೂಡಾ ಸಾಕಷ್ಟು ಹೋಂವರ್ಕ್ ಮಾಡಿಕೊಂಡು ಚಿತ್ರ ಶುರು ಮಾಡಿದ್ದರು. ಪೋಸ್ಟರ್ ವಿನ್ಯಾಸಕ್ಕೆ ಕಂಪ್ಯೂಟರ್ ಗ್ರಾಫಿಕ್ಸ್ ಬದಲು ಪೇಂಟಿಂಗ್ ಮಾಡಿಸಿದ್ದಾರಂತೆ. ಹರ್ಷ ಅವರ ಕಥೆಯಲ್ಲಿ ಒಂದಷ್ಟು ವೈವಿಧ್ಯತೆಯ ರೂಪಗಳಿರುವುದು ಚಿತ್ರದ ಪೋಸ್ಟರ್ ಗಳನ್ನು ನೋಡಿದಾಗಲೇ ತಿಳಿಯುತ್ತದೆ.
ಕುದುರೆ ಸವಾರನಾಗಿ, ಗದೆ ಹಿಡಿದು ದುಷ್ಟ ಸಂಹಾರಕ್ಕೆ ನಿಂತ ಆಂಜನೇಯನಾಗಿ ಶಿವರಾಜ್ ಕುಮಾರ್ ಅವರ ನಾನಾ ರೂಪಗಳನ್ನು ತೋರುವ ಮೂಲಕ ಹರ್ಷ ಸಾಕಷ್ಟು ಕುತೂಹಲ ಹುಟ್ಟಿಸಿದ್ದಾರೆ. ಅಂದಹಾಗೆ `ಭಜರಂಗಿ' ಚಿತ್ರದ ಕಥೆ ಏನು ಹೇಳುತ್ತೆ? ಹರ್ಷ ಹೇಳುವಂತೆ `ಭಜರಂಗಿ' ಸಾಮಾನ್ಯ ಮನುಷ್ಯನೊಬ್ಬನ ಕಥೆ. ಅವರನ್ನು ವಿಭಿನ್ನವಾಗಿ ಪ್ರೊಜೆಕ್ಟ್ ಮಾಡುವುದಷ್ಟೇ ಅವರ ಪ್ರಯತ್ನವಾಗಿದೆ. ಇಪ್ಪತ್ತು ವರ್ಷಗಳ ಹಿಂದೆ ಹರ್ಷ ಚಿಕ್ಕ ಹುಡುಗ. ಅಗಿನಿಂದಲೂ ಶಿವಣ್ಣನವರ ಅಭಿಮಾನಿಯಂತೆ. ಅವರ ಹಾಡುಗಳಿಗೆ ಡ್ಯಾನ್ಸ್ ಮಾಡೋದು, ಅವರಂತೆ ಹೇರ್ ಸ್ಟೈಲ್ ಮಾಡಿಸಿಕೊಳ್ಳೋದು, ನೃತ್ಯ ನಿರ್ದೇಶಕನಾದ ಮೇಲೆ ಶಿವಣ್ಣ ಅವರ ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡುವ ಅವಕಾಶ ಸಿಕ್ಕಿತು.