`ಗುಬ್ಬಚ್ಚಿಗಳು,' `ಶಿಕಾರಿ' ಚಿತ್ರಗಳನ್ನು ನೀಡಿರುವ ಪ್ರತಿಭಾವಂತ ನಿರ್ದೇಶಕ ಅಭಯಸಿಂಹ ಅವರ ಮೂರನೇ ಚಿತ್ರ `ಸಕ್ಕರೆ.' ಈ ಚಿತ್ರದ ಟೈಟಲ್ಲೇ ಆಕರ್ಷಕವಾಗಿದೆ. ತೆರೆಗೆ ಬರಲು ರೆಡಿಯಾಗಿರುವ `ಸಕ್ಕರೆ' ಹಾಡುಗಳು ಟೈಟಲ್ ನಷ್ಟೇ ಸಿಹಿಯಾಗಿವೆ ಎನ್ನಬಹುದು. ಹರಿಕೃಷ್ಣರ ಮ್ಯೂಸಿಕ್ ನ `ಸಕ್ಕರೆ' ಹಾಡುಗಳು ಜನಪ್ರಿಯವಾಗುತ್ತಿವೆ.
``ಒಂದೇ ರೀತಿ ಚಿತ್ರಗಳನ್ನು ಮಾಡಬೇಕೆಂದು ಬಂದವನಲ್ಲ ನಾನು. ಎಲ್ಲ ತರಹದ ಚಿತ್ರ ಮಾಡಬೇಕು. ನೈಜತೆಗೆ ಹೆಚ್ಚು ಒತ್ತು ಕೊಡುವುದನ್ನು ಮರೆಯಬಾರದು ಅಷ್ಟೆ ಎಂದುಕೊಂಡು `ಸಕ್ಕರೆ' ಸಬ್ಜೆಕ್ಟ್ ಮಾಡಿದೆ. ನಿರ್ಮಾಪಕರಾದ ಬಿ. ಸುರೇಶ್, ಶೈಲಜಾ ಇಷ್ಟಪಟ್ಟರು.
``ಪಕ್ಕಾ ಕಮರ್ಷಿಯಲ್ ಚಿತ್ರವಾದರೂ ನಿರೂಪಣೆಯಲ್ಲಿ ವಿಭಿನ್ನತೆ ಕಾಣಬಹುದು. ನನ್ನ ಎಲ್ಲ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡುತ್ತಾ ಬೆನ್ನೆಲುಬಾಗಿ ನಿಂತವರು ಬಿ. ಸುರೇಶ್. ಅವರು ಕೂಡಾ ಸದಭಿರುಚಿ ಚಿತ್ರಗಳನ್ನು ನೋಡುತ್ತಾ, ಮಾಡುತ್ತಾ ಬೆಳೆದರು. ಹಾಗಾಗಿ ನಾವೇ ಹೊಸದಾಗಿ ಹೇಳುವ ಪ್ರಯತ್ನ ಮಾಡುವಾಗ ಹುರಿದುಂಬಿಸುತ್ತಿದ್ದರು,'' ಎಂದು ಅಭಯ್ ಹೇಳುತ್ತಾರೆ.
`ಸಕ್ಕರೆ' ಲವ್ ಸ್ಟೋರಿಯಾಗಿದ್ದು ಅದನ್ನು ನಾವು ಮೂರು ಆ್ಯಂಗಲ್ ನಲ್ಲಿ ಹೇಳುತ್ತಾ ಹೋಗಿದ್ದೇವೆ. ಕಂಪ್ಲೀಟ್ ಸಿನಿಮಾ ಅಂತ ನಾವೇನು ಕರೆಯುತ್ತೇವೋ ಅದನ್ನು ಮಾಡುವ ಪ್ರಯತ್ನ ನಮ್ಮದಾಗಿದೆ. ನಾನೂ ಗಣೇಶ್ ಬಹಳ ವರ್ಷಗಳಿಂದ ಪರಿಚಿತರು. ``ಗಣೇಶ್ ಅವರನ್ನು `ಮುಂಗಾರು ಮಳೆ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಂದು ಭೇಟಿಯಾಗಿದ್ದೆ. ಅದಕ್ಕೂ ಮೊದಲು ಪ್ರಮುಖ ಪಾತ್ರದಲ್ಲಿದ್ದ ಅವರ ಜೊತೆ `ವಠಾರ' ಧಾರಾವಾಹಿಯಲ್ಲಿ ನಾನು ಪುಡಿ ಮಾತ್ರ ಮಾಡಿದ್ದೆ.
``ನಾನು ಪೂನಾ ಫಿಲಂ ಇನ್ ಸ್ಟಿಟಿಟ್ಯೂಟ್ ಗೆ ಹೋದ ನಂತರ ಮತ್ತೆ ಸಿಕ್ಕಿದ್ದು `ಮುಂಗಾರು ಮಳೆ' ಆಡಿಯೋ ಬಿಡಗಡೆ ದಿನ. ಇಂದು ನಾವಿಬ್ಬರೂ ಒಂದೇ ಚಿತ್ರದಲ್ಲಿ ಕೆಲಸ ಮಾಡುವಂತಾಗಿದೆ. ಅಷ್ಟೇ ಅದ್ಧೂರಿಯಾಗಿ `ಸಕ್ಕರೆ' ಚಿತ್ರದ ಆಡಿಯೋ ಬಿಡುಗಡೆಯಾಗಿದೆ,'' ಎಂದು ಅಭಯ್ ನೆನಪು ಮಾಡಿಕೊಳ್ಳುತ್ತಾರೆ.
ಹಾಡುಗಳ ಬಗ್ಗೆ ಹೇಳುತ್ತಾ.... ಮಡಿಕೇರಿ, ಚಿಕ್ಕಮಗಳೂರು, ಹಾಸನಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಹರ್ಷ, ಚಿನ್ನಿ ಪ್ರಕಾಶ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಕಲಾ ನಿರ್ದೇಶಕ ಶಶಿಧರ್ ಹಡಪ ಸುಂದರವಾದ ಸೆಟ್ ಹಾಕಿದ್ದಾರೆ. ಅವರ ಕಾಂಟ್ರಿಬ್ಯೂಷನ್ ತುಂಬಾ ಇದೆ. ಹಾಡುಗಳು ಹೀಗೆಯೇ ಬರಬೇಕೆಂದು ಮೊದಲೇ ಕುಳಿತು ಪ್ಲಾನ್ ಮಾಡಿದ್ದರಿಂದ ಕಥೆಗೆ ಪೂರಕವಾಗಿವೆ.
ನಾಯಕಿ ದೀಪಾ ಸನ್ನಿಧಿ
ದೀಪಾ ಸನ್ನಿಧಿ `ಸಕ್ಕರೆ' ಚಿತ್ರದ ನಾಯಕಿ. ಒಂದೆರಡು ಸೀನ್ಸ್, ನಾಲ್ಕು ಹಾಡುಗಳಲ್ಲಿ ಬಂದು ಹೋಗುವಂಥದ್ದಲ್ಲ. ಆಕೆಯ ಪಾತ್ರಕ್ಕೆ ತುಂಬಾ ಪ್ರಾಮುಖ್ಯತೆ ಇದೆ. ಸಿನಿಮಾದಲ್ಲಿ ದೀಪಾ ಮೂರು ವಿಭಿನ್ನವಾದ ಶೇಡ್ಸ್ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಸಾಂಪ್ರದಾಯಿಕ ಹುಡುಗಿಯಾಗಿ, ರಾಕ್ ಸ್ಟಾರ್ ಆಗಿ, ಹೀಗೆ ಬೇರೆ ಬೇರೆ ರೂಪ ತಾಳುತ್ತಾ ಪಾತ್ರ ಹೋಗುತ್ತದೆ. ದೀಪಾ ತಮ್ಮ ಪಾತ್ರವನ್ನು ತುಂಬಾ ಜವಾಬ್ದಾರಿಯಿಂದ ನಿರ್ವಹಿಸಿದ್ದಾರೆ.
ನಾಯಕ ಗೋಲ್ಡನ್ ಸ್ಟಾರ್ ಗಣೇಶ್
ಗಣೇಶ್ ಪ್ರತಿಭೆ ಬಗ್ಗೆ ನಾವೇನೂ ಹೇಳುವಂತಿಲ್ಲ. ಅದ್ಭುತವಾದ ನಟ. ಆತನ ಜೊತೆ ಕೆಲಸ ಮಾಡಲು ಖುಷಿಯಾಗುತ್ತೆ. ಗಣೇಶ್ ಹಿಂದೆಂದೂ ತಮ್ಮ ಚಿತ್ರಗಳಲ್ಲಿ ಇಂಥ ಪಾತ್ರ ಮಾಡಿಲ್ಲ ಎನ್ನಬಹುದು. ಅವರು ಕೂಡಾ ಮೂರು ವಿಭಿನ್ನವಾದ ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಗಣೇಶ್ ಒಬ್ಬ ಟ್ಯಾಲೆಂಟೆಡ್ ಆ್ಯಕ್ಟರ್ ಆಗಿರೋದ್ರಿಂದ ಪಾತ್ರಕ್ಕೆ ಹೇಗೆ ಜೀವ ತುಂಬಬೇಕೆಂಬುದು ಚೆನ್ನಾಗಿ ಗೊತ್ತಿದೆ.