ಸುಂದರ ನಿರ್ಮಾಪಕಿ
`ಅಭಿನೇತ್ರಿ' ಪೂಜಾಗಾಂಧಿ ನಿರ್ಮಾಣದ ಹೊಸ ಚಿತ್ರ. ನಿರ್ಮಾಣದಲ್ಲಿ ಪಾರ್ಟ್ ನರ್ ಆಗಿರುವ ಮತ್ತೊಬ್ಬ ಯುವತಿ
ವೈಜಯಂತಿ ಕೂಡಾ ನಾಯಕಿಗಿರುವಷ್ಟೇ ಗ್ಲಾಮರ್ ಹೊಂದಿರುವಂಥ ಹುಡುಗಿ. ಮುಹೂರ್ತದ ದಿನವೇ ಎಲ್ಲರ ಗಮನ ಸೆಳೆಯುತ್ತಿದ್ದ ವೈಜಯಂತಿ ಹೊಸಪೇಟೆಯ ಶ್ರೀಮಂತ ಗಣಿ ದಣಿಯ ಪುತ್ರಿ. ಎಂಜಿನಿಯರಿಂಗ್ ವಿದ್ಯಾರ್ಥಿ, ಸಿನಿಮಾ ನಿರ್ಮಾಣ ಮಾಡಬೇಕೆಂಬುದು ಆಕೆ ತಾಯಿಯ ಆಸೆಯಾಗಿತ್ತು. ಮಗಳಿಗೆ ಯಾವಾಗಲೂ ನೀನೊಂದು ಒಳ್ಳೆ ಕನ್ನಡ ಚಿತ್ರ ನಿರ್ಮಿಸಬೇಕು ಎಂದು ಹೇಳುತ್ತಿದ್ದರಂತೆ. ವೈಜಯಂತಿ ತಾಯಿ ಕನಸನ್ನು `ಅಭಿನೇತ್ರಿ' ಚಿತ್ರ ನಿರ್ಮಿಸುವುದರ ಮೂಲಕ ನನಸು ಮಾಡಿದ್ದಾಳೆ. `ಅಭಿನೇತ್ರಿ' ಚಿತ್ರದ ನಂತರ ಎಲ್ಲಾ ಭಾಷೆಗಳಲ್ಲೂ ಸಿನಿಮಾ ಮಾಡಬೇಕೆಂಬ ಯೋಜನೆ ಹಾಕಿಕೊಂಡಿರುವ ವೈಜಯಂತಿ ನೋಡಲು ಸುಂದರವಾಗಿದ್ದರೂ ನಟನೆಯಲ್ಲಿ ಆಸಕ್ತಿ ಇಲ್ಲ ಎಂದು ಹೇಳುತ್ತಾಳೆ.
ಮೋಹಕತಾರೆ ಈಗ ಕಿರಿಯ ಸಂಸದೆ
ಸ್ಯಾಂಡಲ್ ವುಡ್ ನ ರಾಣಿ ಮಹಾರಾಣಿ ರಮ್ಯಾ ಊರಿಗೊಬ್ಬಳೇ ಪದ್ಮಾವತಿ ಎಂದೇ ಜನಪ್ರಿಯ. ಕನ್ನಡದ ನಂ.ಒನ್ ನಾಯಕಿಯಾಗಿ ಮೆರೆಯುತ್ತಿರುವ ಈ ತಾರೆ ಇತ್ತೀಚೆಗಷ್ಟೇ ಮಂಡ್ಯದಿಂದ ಸ್ಪರ್ಧಿಸಿ ಲೋಕಸಭಾ ಸದಸ್ಯೆಯಾದರು. ದೇವರ ಹೆಸರಿನಲ್ಲಿ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದ ರಮ್ಯಾ ತನ್ನನ್ನು ಹೆಚ್ಚು ಸಮಯ ರಾಜಕೀಯಕ್ಕಾಗಿ ಹಾಗೂ ಮಂಡ್ಯ ಜನರ ಸೇವೆಗಾಗಿ ಮೀಸಲಿಡುತ್ತಿದ್ದಾಳೆ. ಹಗಲು ರಾತ್ರಿ ಎನ್ನದೇ ಚುನಾವಣಾ ಪ್ರಚಾರದಲ್ಲಿ ತಿರುಗಿರುವುದರಿಂದ ರಮ್ಯಾ ಆರೋಗ್ಯದಲ್ಲಿ ಹೆಚ್ಚು ಕಡಿಮೆಯಾಗಿ ವಿರಾಮ ಪಡೆಯುತ್ತಿದ್ದಾಳಂತೆ. ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸಿಕೊಡುವುದಾಗಿ ಹೇಳಿರುವ ರಮ್ಯಾ ಇನ್ನು ಶುರುವಾಗದೇ ಇವರು ಚಿತ್ರಗಳಿಂದ ಪಡೆದಿದ್ದ ಅಡ್ವಾನ್ಸ್ ಹಣವನ್ನು ಹಿಂತಿರುಗಿಸಿದ್ದಾಳೆ ಎಂಬುದು ಸುದ್ದಿ.
`ಬುಲ್ ಬುಲ್' 100 ದಿನಗಳು
ದರ್ಶನ್ ಸಿನಿಮಾ ಅಂದ್ರೆ ಅದು ಗ್ಯಾರಂಟಿ ಹಿಟ್ ಎನ್ನುವಷ್ಟು ಈ ಚಾಲೆಂಜಿಂಗ್ ಸ್ಟಾರ್ ಎತ್ತರಕ್ಕೆ ಬೆಳೆದು ನಿಂತಿದ್ದಾರೆ. `ಸಾರಥಿ' ಚಿತ್ರದ ಯಶಸ್ಸಿನ ನಂತರ ಅವರ ತಾರಾ ವೃತ್ತಿಯೇ ಬದಲಾಯ್ತು. ಸಾಕಷ್ಟು ಕಹಿ ಪ್ರಸಂಗಗಳು ಜೀವನದಲ್ಲಿ ನಡೆದಿದ್ದರೂ ಅದೃಷ್ಟ ದೇವತೆ ದರ್ಶನ್ ಕೈ ಹಿಡಿದಳು. ಸಾರಥಿ ನಂತರ ಬಂದಂಥ `ಸಂಗೊಳ್ಳಿ ರಾಯಣ್ಣ' ಇನ್ನಷ್ಟು ಜನಪ್ರಿಯತೆ ತಂದುಕೊಟ್ಟಿತು. ಒಟ್ಟಿನಲ್ಲಿ ದರ್ಶನ್ ಗೆ ಶುಭಕಾಲ ಬಂದೈತೆ! ಇತ್ತೀಚೆಗೆ ಇವರು ನಟಿಸಿದ `ಬುಲ್ ಬುಲ್' ನೂರು ದಿನ ಆಚರಿಸಿತು. ತಾಂತ್ರಿಕ ವರ್ಗದವರೆಲ್ಲರೂ ಸೇರಿ ನಿರ್ಮಿಸಿದ್ದ `ಬುಲ್ ಬುಲ್' ಚಿತ್ರದಲ್ಲಿ ದರ್ಶನ್ ಒಂದು ಒಳ್ಳೆ ಉದ್ದೇಶವಿಟ್ಟುಕೊಂಡು ನಟಿಸಿದ್ದರು. ಬಂದ ಲಾಭದಲ್ಲಿ ನಿರ್ಮಾಪಕರು ಎಲ್ಲರಿಗೂ ಸಮಪಾಲು ಹಂಚಿದರು. ಅಂದರೆ ನಿರ್ದೇಶಕ, ಸಂಗೀತ ನಿರ್ದೇಶಕ, ಛಾಯಾಗ್ರಾಹಕ, ಗೀತರಚನೆಕಾರ ಹೀಗೆ ಸಿನಿಮಾ ವಿಭಾಗದ ಎಲ್ಲರೂ ಸೇರಿ ಈ ಚಿತ್ರ ನಿರ್ಮಿಸಿದ್ದು ಅವರು ಕೂಡಾ ಲಾಭದ ಖುಷಿಯಲ್ಲಿದ್ದಾರೆ. `ಬುಲ್ ಬುಲ್' ಚಿತ್ರದಲ್ಲಿ ನಟಿಸಿದ್ದ ಅಂಬರೀಷ್ ಇಂದು ಸಚಿವರಾಗಿದ್ದಾರೆ. ಅವರು ಕೂಡಾ ನೂರರ ಸಂಭ್ರಮದಲ್ಲಿ ಪಾಲ್ಗೊಂಡರು.
ವಿನ್ನಿಂಗ್ ಸ್ಟಾರ್ ಆದ ಶರಣ್
ಕಾಮಿಡಿ ಪಾತ್ರಗಳನ್ನು ಮಾಡಿಕೊಂಡು ಆಗಾಗ ಮನಸ್ಸಿಲ್ಲದಿದ್ದರೂ ಸಣ್ಣಪುಟ್ಟ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದ ಶರಣ್ ಅನೇಕ ಬಾರಿ ತಮ್ಮ ನೋವನ್ನು ಹೇಳಿಕೊಂಡಿದ್ದಿದೆ. ಎಷ್ಟೋ ಸಲ ಅವರು ಮಾಡುತ್ತಿದ್ದ ಕಾಮಿಡಿ ಅವರಿಗೇ ಸಿಲ್ಲಿ ಎನಿಸುತ್ತಿತ್ತು. ಜನರನ್ನು ನ್ಯಾಯವಾಗಿ ನಗಿಸಬೇಕು, ಕಲಬೆರಕೆ ಇರಬಾರದು ಎಂದು ಅವರು ಆಸೆಪಡುತ್ತಿದ್ದರು. ಇಷ್ಟಾದರೂ ಸಹ ಶರಣ್ ಯಾವುದೇ ಪಾತ್ರ ಮಾಡುತ್ತಿರಲಿ ಫುಲ್ ನ್ಯಾಯ ಒದಗಿಸುತ್ತಿದ್ದರು, ಜನರನ್ನು ನಗಿಸುತ್ತಿದ್ದರು. ಶರಣ್`ರಾಂಬೋ' ಚಿತ್ರದಲ್ಲಿ ಹೀರೋ ಆಗಿ ನಟಿಸಿದಾಗ ಹಾಸ್ಯನಟನೊಬ್ಬ ಹೀರೋ ಆಗುತ್ತಿದ್ದಾನೆ, ನೋಡೋಣ ಎಂದು ಜನ ಆಡಿಕೊಂಡರು. ಆದರೆ `ರಾಂಬೋ' ಚಿತ್ರದಲ್ಲಿ ಶರಣ್ ನಾಯಕರಾಗಿ ಗೆದ್ದುಬಿಟ್ಟರು. ಹಾಡು, ಡ್ಯಾನ್ಸ್, ಅಭಿನಯ ಎಲ್ಲ ಕ್ಲಿಕ್ ಆಯ್ತು. ಒಳ್ಳೆ ಹೀರೋ ಆಗಿ ಯಶಸ್ವಿಯಾದ ಮೇಲೆ ಮತ್ತೆ ಕಾಮಿಡಿ ರೋಲ್ ಗಳತ್ತ ತಲೆ ಹಾಕುವಂತಿಲ್ಲ. ಆದರೆ ಶರಣ್ ಸ್ನೇಹದ ಸಲುವಾಗಿ `ಬುಲ್ ಬುಲ್' ಚಿತ್ರದಲ್ಲಿ ನಟಿಸಿದರು. ಈಗ ಶರಣ್ ವಿನ್ನಿಂಗ್ ಸ್ಟಾರ್ ಎನಿಸಿಕೊಳ್ಳುವಷ್ಟು ಜನಪ್ರಿಯರಾಗಿಬಿಟ್ಟಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ `ವಿಕ್ಟರಿ' ಚಿತ್ರದಲ್ಲಿ ಶರಣ್ ಮತ್ತೊಮ್ಮೆ ಜಯ ಸಾಧಿಸಿದ್ದಾರೆ. ಈ ಚಿತ್ರ ಸಾಕಷ್ಟು ಸುದ್ದಿ ಮಾಡುತ್ತಿದ್ದು, ಒಳ್ಳೆ ಗಳಿಕೆಯಾಗುತ್ತಿದೆ. ಶರಣ್ ನಾಯಕನಾಗಿ ನಟಿಸಿದ ಎರಡು ಚಿತ್ರಗಳೂ ಹಿಟ್ ಆಗಿರೋದ್ರಿಂದ ಈತ ಸ್ಯಾಂಡಲ್ ವುಡ್ ನ ವಿನ್ನಿಂಗ್ ಸ್ಟಾರ್ ಆಗಿದ್ದಾರೆ.