ಬೆಂಗಳೂರಿನಿಂದಾಚೆ ಹೊರವಲಯದಲ್ಲೊಂದು ಪಂಚತಾರಾ ಹೋಟೆಲ್, ತಾರೆಯರ ಗ್ಲಾಮರ್ ಗೆಂದೇ ಮಾಡಿರುವಂಥ ಸುಸಜ್ಜಿತ ಹೋಟೆಲ್. ಪತ್ರಕರ್ತರಿಗಾಗಿ ಅಲ್ಲೊಂದು ಗ್ರ್ಯಾಂಡ್ ಎಂಟ್ರಿ ಕಾದಿತ್ತು. ಅಂದು `ಸ್ವೀಟಿ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ, ಸ್ಟಾರ್ ನೈಟ್ ಎಂದೇ ಹೇಳಬಹುದಿತ್ತು. ಪಿಂಕ್ ಮತ್ತು ಬಿಳಿ ಬಣ್ಣದ ಹಾರ್ಟ್ ಶೇಪಿನ ಬಲೂನ್ ಗಳಿಂದ ತುಂಬಿದ್ದ ವೇದಿಕೆ, ಬ್ಯಾಕ್ ಡ್ರಾಪಲ್ಲಿ ತೆರೆ ಮೇಲೆ ಮೂಡಿಬರುತ್ತಿದ್ದ `ಸ್ವೀಟಿ’ ಚಿತ್ರದ ಫೋಟೋಗಳು, ಕಲರ್ ಫುಲ್ ಲೈಟ್ ಗಳು. `ಸ್ವೀಟಿ’ ಚಿತ್ರದ ನಿರ್ದೇಶಕಿ ವಿಜಯಲಕ್ಷ್ಮಿಸಿಂಗ್ ಎಂದಿನಂತೆ ಮಿನುಗುತ್ತ ಮಿಂಚಿನಂತೆ ಓಡಾಡುತ್ತಿದ್ದರು.
ಚಿತ್ರರಂಗದ ಹಿರಿಯರು, ಫಿಲಂ ಚೇಂಬರ್ ಅಧ್ಯಕ್ಷ ವಿಜಯ್ ಕುಮಾರ್, ವಿತರಕ ಗಂಗಾರಾಜ್, ಹಿರಿಯ ನಿರ್ದೇಶಕರಾದ ಸಾಯಿಪ್ರಕಾಶ್, ಸಮಾರಂಭಕ್ಕೆ ಆಗಮಿಸಿ `ಸ್ವೀಟಿ’ಗೆ ಶುಭಕೋರಲು ಬಂದಿದ್ದರು. ಕಾರ್ಯಕ್ರಮದ ನಿರೂಪಕಿ ನಿಲ್ಲದ ಮಳೆಯಂತೆ ಹೊಗಳಿಕೆಯ ಮಾತುಗಳನ್ನು ಸಂದಾಯ ಮಾಡುತ್ತಲೇ ಇದ್ದಳು. ಸ್ವೀಟ್ ಸ್ವಲ್ಪ ಓವರ್ ಡೋಸ್ ಆದಂತೆಯೇ ಇತ್ತು.
ಸಮಾರಂಭದ ಪ್ರಮುಖ ಆಕರ್ಷಣೆ `ಸ್ವೀಟಿ’ ಉರ್ಫ್ ರಾಧಿಕಾ ಕುಮಾರಸ್ವಾಮಿ ಎಲ್ಲಿದ್ದಾಳೆ? ಯಾವಾಗ ಬರುತ್ತಾಳೆ? ಹೇಗೆ ಶೃಂಗರಿಸಿಕೊಂಡಿರುತ್ತಾಳೆ ಎನ್ನುವ ಕುತೂಹಲ ಎಲ್ಲರನ್ನೂ ಕಾಡುತ್ತಲೇ ಇತ್ತು. ಆಡಿಯೋ ಬಿಡುಗಡೆ ಸಮಾರಂಭವಾಗಿದ್ದರಿಂದ ಸಂಗೀತ ಸಂಯೋಜಕ ಅರ್ಜುನ್ ಜನ್ಯ ಅವರೇ ಹೀರೋ. ಹಾಡುಗಳಿಗೆ ಸಾಹಿತ್ಯ ಒದಗಿಸಿದವರೇ ಹೀರೋಯಿನ್‌ಎನ್ನಬಹುದಿತ್ತು.
ಸಿನಿಮಾ ಸಂಗೀತ ಮತ್ತು ಹಾಡುಗಳ ಬಗ್ಗೆ ಮಾತುಗಳು ವೀಡಿಯೋ ರೂಪದಲ್ಲಿ ಹರಿದುಬಂದಿತು. ಎಲ್ಲವನ್ನೂ ಮೊದಲೇ ರೆಡಿ ಮಾಡಿಟ್ಟುಕೊಂಡಿದ್ದರಿಂದ ಕಾರ್ಯಕ್ರಮ ಅಂದುಕೊಂಡಂತೆ ಸಾಗುತ್ತಿತ್ತು.
ರಾಧಿಕಾಳಿಗೆ ಸಿನಿಮಾದಲ್ಲಿ ಮತ್ತೆ ನಟಿಸಬೇಕೆಂಬ ಆಸೆ ಹುಟ್ಟಿದಾಗ ಅದನ್ನಾಕೆ ಬಹಳ ಗ್ರ್ಯಾಂಡ್ ಆಗಿಯೇ ಎಂಟ್ರಿ ಕೊಡಬೇಕೆಂದು ಆಸೆಪಟ್ಟಿದ್ದಳು. `ಸ್ವೀಟಿ’ ಸಿನಿಮಾಗೆ ತಕ್ಕಂತೆ ಸ್ವೀಟಾಗಿಯೇ ಫೋಟೋಗಳಲ್ಲಿ ಕಾಣಿಸುತ್ತಿದ್ದ ರಾಧಿಕಾಳ ಆಗಮನದ ನಿರೀಕ್ಷೆಯಲ್ಲಿದ್ದ ಎಲ್ಲರಿಗೂ ಸರ್‌ಪ್ರೈಸ್ ಕಾದಿತ್ತು. ಎಲ್ಲ ಲೈಟ್ ಗಳು ಆಫ್ ಆದವು. ಒಂದೇ ಒಂದು ಸ್ಪಾಟ್ ಲೈಟ್ ರಾಧಿಕಾಳ ಮೇಲೆ ಬಿದ್ದಿತು. ರಾಜಕುಮಾರಿಯಂತೆ ನಡೆದು ಬಂದು ವೇದಿಕೆ ಏರಿದಾಗ ಮುಖದಲ್ಲಿ ಸಂತೋಷ ಕುಣಿದಾಡುತ್ತಿತ್ತು. ಇಂಥವೊಂದು ಗ್ರ್ಯಾಂಡ್ ಎಂಟ್ರಿಯನ್ನು ಇಲ್ಲಿಯವರೆಗೂ ತನ್ನ ಯಾವುದೇ ಚಿತ್ರದ ಸಮಾರಂಭಗಳಲ್ಲಿ ಕೊಟ್ಟಿರಲಿಲ್ಲ. ತಾನೊಬ್ಬ ರಾಜಕುಮಾರಿ ಆಗಬೇಕೆಂದು ಅವಳು ಕಂಡಿದ್ದ ಕನಸು ಅಂದು ನನಸಾದಂತಿತ್ತು.
ರಾಧಿಕಾ ತುಂಬಾನೆ ಎಗ್ಸೈಟ್ ಆಗಿದ್ದಳು, “ನಾನು ಮತ್ತೆ ಸಿನಿಮಾದಲ್ಲಿ ನಟಿಸಲೇಬೇಕೆಂದರೆ ಅದೊಂದು ಒಳ್ಳೆ ಚಿತ್ರವಾಗಿರಬೇಕು. ಅಂಥವೊಂದು ಸಬ್ಜೆಕ್ಟ್ ಹುಡುಕಾಟದಲ್ಲಿದ್ದಾಗ, ವಿಜಯಲಕ್ಷ್ಮಿ ಮೇಡಂ ಒಂದು ಕಥೆ ಹೇಳಿದರು. ಆ ಚಿತ್ರವನ್ನು ಅವರು ತಾವೇ ನಿರ್ಮಿಸಿ ನಿರ್ದೇಶಿಸಬೇಕೆಂದು ಕೊಂಡಿದ್ದರು. ನನಗೆ ತುಂಬಾ ಹಿಡಿಸಿದ ಸಬ್ಜೆಕ್ಟ್ ಅದಾಗಿತ್ತು.
“ನನ್ನ ಬ್ಯಾನರಿನಲ್ಲಿ ಇಂಥವೊಂದು ಚಿತ್ರವಾಗಬೇಕು, ನಾನು ಅದರಲ್ಲಿ ನಟಿಸಬೇಕು. ಕಥೆಯನ್ನು ನೀವೇ ಮಾಡಿದ್ದೀರಾ ನೀವೇ ನಿರ್ದೇಶಿಸಿ, ನಾನು ನಿರ್ಮಿಸುತ್ತೇನೆ ಅಂತ ಹೇಳಿದೆ. ನಮ್ಮ ಯಜಮಾನರು ಸಹ ಕಥೆ ಕೇಳಿದರು. ಅವರಿಗೂ ತುಂಬಾ ಇಷ್ಟವಾಯ್ತು.
“ಚಿತ್ರಕ್ಕೆ ಟೈಟಲ್ ಇನ್ನೂ ಇಟ್ಟಿರಲಿಲ್ಲ. ಆದಿತ್ಯ ಅವರು `ಸ್ವೀಟಿ’ ಅಂತ ಹೆಸರಿಟ್ಟರೆ ಚೆನ್ನಾಗಿರುತ್ತೆ ಅಂತ ವಿಜಯಲಕ್ಷ್ಮಿ ಮೇಡಂ ಬಳಿ ಹೇಳಿದರಂತೆ. ನನಗೆ ಫೋನ್ ಮಾಡಿ ತಿಳಿಸಿದಾಗ ನನಗಂತೂ ತುಂಬಾನೆ ಇಷ್ಟವಾಯ್ತು. `ಸ್ವೀಟಿ’ ನನ್ನ ಜೋಡಿ…. ಈ ಹಾಡು ಕೂಡಾ ತುಂಬಾನೆ ಫೇಮಸ್ ಆಗಿತ್ತು,” ಎಂದು ಮಾತನಾಡುತ್ತಾ, ರಾಧಿಕಾ, “ಮೇಡಂ, ನೀವು ನನ್ನ ಪಕ್ಕದಲ್ಲೇ ಇರಬೇಕು,” ಎಂದು ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ರನ್ನು ವೇದಿಕೆಗೆ ಆಹ್ವಾನಿಸಿದಳು. ಇಬ್ಬರು ಹೆಣ್ಣುಮಕ್ಕಳು, ಒಬ್ಬ ನಾಯಕಿ ಮತ್ತೊಬ್ಬಾಕೆ ನಿರ್ದೇಶಕಿ. ನೋಡುವುದಕ್ಕೂ ಚಂದವಾಗಿ ಕಾಣುತ್ತಿತ್ತು. ಹೆಣ್ಣುಮಕ್ಕಳು ಯಾವುದೇ ಕೆಲಸ ಮಾಡಲಿ ಅಚ್ಚುಕಟ್ಟಾಗಿ ಮಾಡುತ್ತಾರೆ ಎಂಬುದಕ್ಕೆ ಅಂದಿನ ಸಮಾರಂಭ ಸಾಕ್ಷಿಯಾಗಿತ್ತು.
ವಿಜಯಲಕ್ಷ್ಮಿ ಸಿಂಗ್ ಈಗಾಗಲೇ ನಿರ್ದೇಶಕರಾಗಿ ಮೂರು ಚಿತ್ರಗಳನ್ನು ನಿರ್ದೇಶಿಸಿದ ಅನುಭವಿದೆ. ಸಿನಿಮಾ ಕುಟುಂಬದಲ್ಲೇ ಹುಟ್ಟಿ ಬೆಳೆದಿರೋದ್ರಿಂದ ಎದ್ದರೂ, ಮಲಗಿದರೂ, ಮನೆಯಲ್ಲಿ ಸಿನಿಮಾದ್ದೇ ಮಾತುಗಳು. `ಈ ಬಂಧನ,’ `ಮಳೆ ಬರಲಿ ಮಂಜು ಇರಲಿ,’ `ವಾರೆವ್ಹಾ….’ ಚಿತ್ರಗಳನ್ನು ನಿರ್ದೇಶಿಸಿರುವ ವಿಜಯಲಕ್ಷ್ಮಿ ಸಿಂಗ್ ಗೆ `ಸ್ವೀಟಿ’ ಚಿತ್ರ ಒಂದು ಸತ್ವ ಪರೀಕ್ಷೆಯಾಗಲಿದೆ. ಮೊದಲ ಮೂರು ಚಿತ್ರಗಳು ಅಂಥಾದ್ದೇನು ಯಶಸ್ಸು ಕಂಡಿರಲಿಲ್ಲವಾದ್ದರಿಂದ ಈ ಬಾರಿ ಖಂಡಿತಾ ಒಂದು ಹಿಟ್ ಚಿತ್ರ ಕೊಟ್ಟೇ ಕೊಡಬೇಕೆಂದು ಒಳ್ಳೆ ಸಬ್ಜೆಕ್ಟನ್ನು ಬಹಳ ಸಮಯ ತಗೊಂಡು ರೆಡಿ ಮಾಡಿದ್ದಾರೆ.
`ಸ್ವೀಟಿ’ ಮೇಕಿಂಗ್ ಸೂಪರ್ಬ್. “ರಾಧಿಕಾ ನಾಯಕಿಯಷ್ಟೇ ಅಲ್ಲ, ನಿರ್ಮಾಪಕಿಯೂ ಆಗಿದ್ದರಿಂದ ಇಂಥಾದ್ದು ಬೇಕು ಅಂದಾಕ್ಷಣ ಅದು ಅಲ್ಲಿ ಇರೋದು. ಎಲ್ಲಿಯೂ ಕಾಂಪ್ರಮೈಸ್ ಮಾಡಿಕೊಂಡವಳಲ್ಲ, ಎಷ್ಟು ಮುದ್ದಾಗಿ ಕಾಣ್ತಾಳೆ! ಸಮಯಕ್ಕೆ ಸರಿಯಾಗಿ ವಿತ್ ಮೇಕಪ್ ರೆಡಿಯಾಗುತ್ತಿದ್ದಳು. ಬೆಳಗ್ಗೆ ಮೂರು ಗಂಟೆಗೆ ಶೂಟಿಂಗ್ ಅಂದರೂ ಚಕಾರ ಎತ್ತುತ್ತಿರಲಿಲ್ಲ. ಕಾಶ್ಮೀರದಲ್ಲಿ ನಡುಗುವಂಥ ಚಳಿಯಲ್ಲೂ ಮುಂಜಾನೆ ರೆಡಿಯಾಗಿ ಕುಳಿತಿರೋಳು.
“ರಾಧಿಕಾ ಎಂಥ ಅದ್ಭುತವಾದ ಡ್ಯಾನ್ಸರ್ ಅಂತ `ಸ್ವೀಟಿ’ ಚಿತ್ರದ ಮೂಲಕ ನನಗೆ ಸ್ಪಷ್ಟವಾಯ್ತು. ಅದೆಲ್ಲಿಂದ ಬರುತ್ತೊ ಎನರ್ಜಿ ಗೊತ್ತಿಲ್ಲ. ಮೂರ್ನಾಲ್ಕು ತಾಸು ಡ್ಯಾನ್ಸ್ ಮಾಡಿದ್ರೂ ಸುಸ್ತಾಗೋದಿಲ್ಲ. ತುಂಬಾನೆ ಉತ್ಸಾಹದಿಂದ ಪ್ರತಿಯೊಂದು ವಿಭಾಗದಲ್ಲೂ ಆಸಕ್ತಿ ವಹಿಸುತ್ತಿದ್ದಳು.
“ಸ್ವೀಟಿ ಅಂದ್ರೆ ಸ್ವೀಟಿನೇ…. ಇಡೀ ಕುಟುಂಬ ಕುಳಿತು ನೋಡುವಂಥ ಚಿತ್ರವಿದು. ಲಾಂಗು, ಮಚ್ಚು, ಹೊಡಿ ಬಡಿ ಚಿತ್ರಗಳಿಂದ ಬೇಸತ್ತಿರುವ ಪ್ರೇಕ್ಷಕನಿಗೆ `ಸ್ವೀಟಿ’ ಫ್ರೆಶ್ ಫೀಲಿಂಗ್ ಕೊಡುತ್ತೆ. ಒಳ್ಳೆಯದರ ಬಗ್ಗೆ ಯೋಚಿಸುತ್ತಾರೆ. ನಮಗೆ ಅದೇ ಬೇಕಿತ್ತು,” ಎಂದು ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ವಿವರವಾಗಿ ಮಾತನಾಡಿದರು.
`ಸ್ವೀಟಿ’ ಚಿತ್ರದ ನಾಯಕ ಆದಿತ್ಯ ಎಲ್ಲಿಯೂ ಕಾಣಿಸದೇ ಹೋದಾಗ ನಾಯಕನದೂ ಗ್ರ್ಯಾಂಡ್ ಎಂಟ್ರಿ ಆಗಬಹುದೇನೋ ಅಂತ ಎಲ್ಲರೂ ಸ್ಪಾಟ್ ಲೈಟ್ ಹುಡುಕಾಟದಲ್ಲಿದ್ದಾಗ ವೇದಿಕೆ ಪಕ್ಕದಿಂದಲೇ ಜಂಪ್ ಮಾಡಿ ಬಂದ ಆದಿತ್ಯ. ಅದೆಲ್ಲ ಬರೀ ಸ್ವೀಟಿಗೆ ನಮಗೇನಿದ್ದರೂ ಲೈಮ್ ಲೈಟ್ ಅಂತ ತಮಾಷೆ ಮಾಡಿದ. ಎಂದಿನಂತೆ ಆದಿತ್ಯ ಸ್ಮಾರ್ಟಾಗಿ ಕಾಣುತ್ತಿದ್ದ. ಸ್ವೀಟಿಗೆ ಹೇಳಿ ಮಾಡಿಸಿದಂಥ ಜೋಡಿ.
“ರಾಧಿಕಾ ಅವರಿಂದ ನಾನು ತುಂಬಾ ಕಲಿತಿದ್ದೀನಿ. ಶೂಟಿಂಗ್ ಸಂದರ್ಭದಲ್ಲಿ ಅವರು ಸಮಯಕ್ಕೆ ಕೊಡುವ ಬೆಲೆ, ವೃತ್ತಿ ಬಗ್ಗೆ ಅವರಿಗಿರುವ ಗೌರವ, ಎಲ್ಲವನ್ನೂ ಕಂಡಾಗ ಆಶ್ಚರ್ಯವಾಯ್ತು. ನಾನೂ ಕೂಡಾ ಹಾಗೆಯೇ ಇರಲು ಪ್ರಯತ್ನಪಡುತ್ತಿದ್ದೇನೆ. `ಸ್ವೀಟಿ’ ಚಿತ್ರದಲ್ಲಿ ರಾಧಿಕಾ ಅದ್ಭುತವಾಗಿ ಕಾಣಿಸುತ್ತಾರೆ, ನಟಿಸಿದ್ದಾರೆ, ಡ್ಯಾನ್ಸ್ ಮಾಡಿದ್ದಾರೆ. ಈ ಚಿತ್ರದ ನಂತರ ರಾಧಿಕಾ ಅವರನ್ನು ಎಲ್ಲರೂ ಸ್ವೀಟಿ ರಾಧಿಕಾ ಅಂತಾನೇ ಕರೆಯಲು ಶುರು ಮಾಡ್ತಾರೆ,” ಎಂದ ಆದಿತ್ಯ.
ತಾನು ಈ ಚಿತ್ರ ಒಪ್ಪಿಕೊಳ್ಳಲು ಕಾರಣ `ಡೆಡ್ಲಿ’ ತರಹದ್ದೇ ಅನೇಕ ಸಬ್ಜೆಕ್ಟ್ ಗಳು ತನ್ನನ್ನು ಹುಡುಕಿಕೊಂಡು ಬರುತ್ತಿದ್ದಾಗ ಎಲ್ಲವನ್ನೂ ರಿಜೆಕ್ಟ್ ಮಾಡಿ ಒಂದೊಳ್ಳೆ ಸ್ಕ್ರಿಪ್ಟ್ ಗಾಗಿ ಕಾಯುತ್ತಿದ್ದೆ. ಅಂಥ ಸಮಯದಲ್ಲಿ `ಸ್ವೀಟಿ’ ಸಬ್ಜೆಕ್ಟ್ ಕೇಳಿದಾಗ ಒಂಥರಾ ಖುಷಿಯಾಯ್ತು. ನನಗೂ ಚೇಂಜ್ ಬೇಕಿತ್ತು. ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿರೋದು ನನಗೂ ಖುಷಿ ಕೊಟ್ಟಿದೆ, ಎಂದು ಆದಿತ್ಯ ಅಭಿಪ್ರಾಯಪಟ್ಟರು.
– ಜಾಗೀರ್ ದಾರ್