ದೊಡ್ಡ ಮನೆಯನ್ನು ಖರೀದಿಸುವುದು ಅಥವಾ ತಮ್ಮ ಮನೆಯನ್ನು ರೀಮಾಡೆಲಿಂಗ್‌ ಮಾಡಿಸುವುದು ಎಲ್ಲರಿಗೂ ಸಾಧ್ಯವಿಲ್ಲ. ಆದರೆ ಅದಕ್ಕೆ ಚಿಂತಿಸಬೇಕಾಗಿಲ್ಲ. ಕೆಲವು ಸಣ್ಣ ಪುಟ್ಟ ವಿಷಯಗಳನ್ನು ಗಮನಿಸಿದರೆ ನಿಮ್ಮ ಸಣ್ಣ ಮನೆಯೂ ಅರಮನೆಯಂತೆ ಸುಂದರವಾಗಿ ಕಾಣುತ್ತದೆ.

ಬಣ್ಣಗಳ ಆಯ್ಕೆ : ಸಣ್ಣ ಕೋಣೆಗಳಲ್ಲಿ ಯಾವಾಗಲೂ ತೆಳುವಾದ ಬಣ್ಣಗಳನ್ನು ಉಪಯೋಗಿಸಿ. ಗಾಢ ಬಣ್ಣಗಳನ್ನು ದೂರವಿಡಿ. ತೆಳುವಾದ ಬಣ್ಣಗಳು ಗೋಡೆಗಳು ಪರಸ್ಪರ ದೂರವಿರುವ ಅನುಭವ ಕೊಡುತ್ತದೆ. ಜೊತೆಗೆ ತೆಳು ಹಾಗೂ ಬ್ರೈಟ್‌ ಕಲರ್‌ ನ ಗೋಡೆಗಳು ಹೆಚ್ಚು ರಿಫ್ಲೆಕ್ಟಿವ್ ‌ಆದ್ದರಿಂದ ಆ ಜಾಗ ತೆರವಾಗಿರುವ ಭ್ರಮೆಯುಂಟಾಗುತ್ತದೆ. ಡಾರ್ಕ್‌ ಕಲರ್ಸ್‌ ಬೆಳಕನ್ನು ಹೀರಿಕೊಳ್ಳುವುದರಿಂದ ಕೋಣೆ ಚಿಕ್ಕದಾಗಿ ಕಾಣುತ್ತದೆ. ನಿಮಗೆ ಯಾವುದಾದರೂ ಡಾರ್ಕ್‌ ಕಲರ್‌ ವಿಶೇಷವಾಗಿ ಇಷ್ಟವಾಗಿದ್ದು ನೀವು ಅದನ್ನು ಕೋಣೆಯಲ್ಲಿ ಉಪಯೋಗಿಸಲು ಬಯಸಿದರೆ ಇಡೀ ಗೋಡೆಯ ಮೇಲೆ ಹಾಕಿಸದೆ ಸುಮಾರು 8-10 ಇಂಚು ವರ್ಟಿಕಲ್ ಅಥವಾ ಹಾರಿಜಾಂಟಲ್ ಸ್ಟ್ರೈಪ್ಸ್ ನ ಪ್ಯಾಟರ್ನ್‌ ಉಪಯೋಗಿಸಿ. ಕುಶನ್ಸ್, ಕಾರ್ಪೆಟ್‌, ಬೆಡ್‌ ಶೀಟ್‌ ಇತ್ಯಾದಿ ಡಾರ್ಕ್ ಕಲರ್‌ ಆ್ಯಕ್ಸೆಸರೀಸ್‌ ಉಪಯೋಗಿಸಬಹುದು.

ಗೋಡೆಗಳ ಮೇಲೆ ಸಣ್ಣ ಪ್ಯಾಟರ್ನ್‌ ನ ಟೆಕ್ಸ್ ಚರ್‌ ಇದ್ದರೆ ಸ್ಪಷ್ಟವಾಗಿ ಅಗಲವಾಗಿ ಕಾಣುತ್ತದೆ. ಸಣ್ಣ ಮನೆಯಲ್ಲಿ ಕೋಣೆಯ ಫ್ಲೋರಿಂಗ್‌ಕೂಡ ತೆಳುಬಣ್ಣದಲ್ಲಿರಬೇಕು. ಇದರಿಂದ ಕೋಣೆ ದೊಡ್ಡದಾಗಿ ಕಾಣುತ್ತದೆ.

ಕೋಣೆಯಲ್ಲಿ ಟೈಲ್ಸ್ ಅಥವಾ ಮಾರ್ಬಲ್ಸ್ ಹಾಕಿ ಕಾರ್ಪೆಟ್‌ ಹಾಸಿದ್ದರೆ ಅವುಗಳ ಬಣ್ಣ ತೆಳುವಾಗಿರುವಂತೆ ನೋಡಿಕೊಳ್ಳಿ. ಬಿಳಿ ಅಮೃತಶಿಲೆಯ ಮೇಲೆ ಜೆಮಿಟ್ರಿಕ್‌ ಪ್ಯಾಟರ್ನ್‌ ನ ಚಿಕ್ಕ ಕಾರ್ಪೆಟ್‌ ಹರಡಿ. ಇದು ಕೋಣೆಯ ಪೇಕ್‌ ಪಾಯಿಂಟ್‌ ಆಗಿ ಕಾಣುತ್ತದೆ ಮತ್ತು ಕೋಣೆಯೂ ದೊಡ್ಡದಾಗಿ ಕಾಣುತ್ತದೆ.

ಫರ್ನೀಚರ್‌, ಬೆಡ್‌ ಶೀಟ್‌, ಕಾರ್ಪೆಟ್‌, ಗೋಡೆಯ ಬಣ್ಣದೊಂದಿಗೆ ಮ್ಯಾಚ್‌ ಆಗುವಂತಿರಲಿ. ಆದರೆ ಅದರಲ್ಲಿ ಹೆಚ್ಚು ಡಿಸೈನ್‌ ಅಥವಾ ಪ್ಯಾಟರ್ನ್‌ ಇರಬಾರದು.

ಬೆಳಕು : ಕೋಣೆಯಲ್ಲಿ ಪ್ರಾಕೃತಿಕ ಬೆಳಕು ಬರುವಂತೆ ಮಾಡಿ. ಬೆಳಕಿನಿಂದ ಕೋಣೆ ದೊಡ್ಡದಾಗಿ ಕಾಣುತ್ತದೆ. ಪ್ರಾಕೃತಿಕ ಬೆಳಕು ಬರದಿದ್ದರೆ ಒಳ್ಳೆಯ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಿ. ಕಿಟಕಿಯ ಮೂಲಕ ಸೂರ್ಯನ ಬೆಳಕು ಒಳಬರಲಿ. ತೆರೆದ ಕಿಟಕಿ ಕೋಣೆಯನ್ನು ದೊಡ್ಡದಾಗಿ ತೋರಿಸುತ್ತದೆ. ಏಕೆಂದರೆ ನಮ್ಮ ದೃಷ್ಟಿ ಹೊರಗೆ ದೂರದವರೆಗೆ ಹೋಗುತ್ತದೆ. ಕಿಟಕಿ ತೆರೆದಾಗ ವ್ಯೂ ಚೆನ್ನಾಗಿಲ್ಲದಿದ್ದರೆ ಹ್ಯಾಂಗಿಂಗ್‌ ಪ್ಲ್ಯಾಂಟ್ಸ್ ಉಪಯೋಗಿಸಬಹುದು. ಅದನ್ನು ಕಿಟಕಿಯ ಹೊರಗೆ ಅಲಂಕರಿಸಿ.

ಮಿರರ್ಮ್ಯಾಜಿಕ್‌ : ಮನೆಯ ಯಾವುದೇ ಗೋಡೆಯಲ್ಲಿ ಕನ್ನಡಿ ಹಾಕಿಸಿದರೆ ಕೋಣೆ ದೊಡ್ಡದಾಗಿ ಕಾಣಿಸುವುದಲ್ಲದೆ, ಕೋಣೆಗೆ ಹೊಸ ಲುಕ್‌ ಕೊಡುತ್ತದೆ. ಪಾರ್ಲರ್‌ ಇತ್ಯಾದಿಗಳಲ್ಲಿ ಕನ್ನಡಿ ಹಾಕಿದಾಗಲೇ ಕೋಣೆ ದೊಡ್ಡದಾಗಿ ಕಾಣಿಸುತ್ತದೆ.

ಕೊಳೆಯಾಗಿರುವ ಅಥವಾ ಹಸಿಯಾಗಿರುವ ಗೋಡೆಯ ಮೇಲೆ ಕನ್ನಡಿಯನ್ನು ಹಾಕಿ. ಅದರಿಂದ ಆ ದೋಷ ಮುಚ್ಚಿಹೋಗುತ್ತದೆ ಮತ್ತು ಕೋಣೆಯೂ ಚೆನ್ನಾಗಿ ಕಾಣುತ್ತದೆ. ಗಾಜಿನ ಫರ್ನೀಚರ್‌ ಪಾರದರ್ಶಕವಾದ್ದರಿಂದ ಹೆಚ್ಚು ಜಾಗವಿರುವಂತೆ ಕಾಣುತ್ತದೆ. ಗೋಡೆಗಳ ಮೇಲೆ ಮಿರರ್‌ ಪ್ಯಾನೆಲಿಂಗ್‌ ಕೂಡ ಮಾಡಿಸಬಹುದು. ಇದರಿಂದ ಕೋಣೆ ಸಾಕಷ್ಟು ದೊಡ್ಡದಾಗಿ ಕಾಣುತ್ತದೆ. ಏಕೆಂದರೆ ಕನ್ನಡಿಯಲ್ಲಿ ಪ್ರತಿಬಿಂಬಿಸುವುದರಿಂದ ಕೋಣೆ ಗೋಡೆಯು ಇನ್ನೊಂದು ಕಡೆ ಹರಡಿರುವಂತೆ ಕಂಡು ದೊಡ್ಡದಾಗಿ ಕಾಣಿಸುತ್ತದೆ. ಕಿಟಕಿಯ ಬಳಿ ಕನ್ನಡಿ ಹಾಕುವುದು ಉತ್ತಮ. ಇದರಿಂದ ಹೊರಗಿನ ದೃಶ್ಯ ರಿಫ್ಲೆಕ್ಟ್ ಆಗುತ್ತದೆ.

ನಿರರ್ಥಕ ವಸ್ತುಗಳನ್ನು ಎಸೆಯಿರಿ : ನಿಮ್ಮ ಮನೆಗೆ ಸುಂದರ ಬಣ್ಣ ಹಾಕಿಸಿದ್ದೀರಿ, ಲೇಟೆಸ್ಟ್ ಸ್ಟೈಲ್ ‌ನಲ್ಲಿ ಅಲಂಕರಿಸಿದ್ದೀರಿ. ಆದರೂ ಕೋಣೆಯಲ್ಲಿ ಎಲ್ಲೆಲ್ಲೂ ಹಳೆಯ ಫೈಲುಗಳು, ಪುಸ್ತಕಗಳು, ಕಾಗದಗಳು, ಮೇಕಪ್‌ ಸಾಮಾನುಗಳು, ಗೊಂಬೆಗಳು ಇತ್ಯಾದಿ ನಿರರ್ಥಕ ವಸ್ತುಗಳು ಹರಡಿದ್ದರೆ ಕೋಣೆ ಚಿಕ್ಕದಾಗಿಯೇ ಕಾಣುತ್ತದೆ. ಆದ್ದರಿಂದ ಸಾಧ್ಯವಾದಷ್ಟೂ ಕೋಣೆಯಲ್ಲಿ ಕಡಿಮೆ ವಸ್ತುಗಳಿರಲಿ.

Chota-ghar-2

ಪೇಂಟಿಂಗ್ಸ್, ವಾಲ್ ‌ಹ್ಯಾಂಗಿಂಗ್‌, ಫೋಟೋಫ್ರೇಮ್ ಇತ್ಯಾದಿಗಳಿಂದ ಗೋಡೆ ಅಲಂಕೃತವಾಗಿರುತ್ತದೆ. ನೀವು ಕೋಣೆಯ ತುಂಬಾ ಅವನ್ನು ತುಂಬಿಸಿ ಕೋಣೆಯ ಅಂದ ಕೆಡಿಸಬೇಡಿ. ಹೆಚ್ಚು ಫರ್ನೀಚರ್‌ ಕೂಡ ಇರಬಾರದು. ಕೆಲವು ಫರ್ನೀಚರ್‌ ತೆಗೆಯಿರಿ.

ವ್ಯವಸ್ಥಿತವಾಗಿಡಿ : ಮನೆಯನ್ನು ವ್ಯವಸ್ಥಿತವಾಗಿಡಿ. ಸಣ್ಣ ಮನೆಗಳಲ್ಲಿ ಇನ್‌ ಬಿಲ್ಟ್ ಸ್ಟೋರೇಜ್‌ ಉಪಯೋಗಿಸಬಹುದು. ಸ್ಟಡಿ ಟೇಬಲ್, ಶೆಲ್ಫ್ ಇತ್ಯಾದಿಗಳಲ್ಲಿ ಡ್ರಾಯರ್‌ ಹಾಕಿಸಬಹುದು. ಕಬೋರ್ಡ್‌ ಗಳಲ್ಲಿ ಕೂಡ ಭಾರದ ವಸ್ತುಗಳನ್ನು ಇಡಬಹುದು.

ಮನೆಯ ಗೋಡೆಗಳಲ್ಲಿ ಮಾಡಿಸಿರುವ ಅಲಮಾರಿಗಳಲ್ಲೂ ಬಹಳಷ್ಟು ವಸ್ತುಗಳನ್ನು ಇಡಬಹುದು. ಬೇರೆ ಬೇರೆ ಕ್ಯಾಬಿನೆಟ್‌ ಗಳನ್ನು ಮಾಡಿಸಬಹುದು. ಅವಕ್ಕೆ ಸುಂದರ ಡಿಸ್‌ ಪ್ಲೇ ಮಾಡಿ ಅಲಂಕರಿಸಬಹುದು. ಅವು ಚೆನ್ನಾಗಿ ಕಂಡು ಬಂದು, ಹೆಚ್ಚು ವಸ್ತುಗಳನ್ನು ಅದರಲ್ಲಿಡಬಹುದು.

blue-carpet

ಟೇಬಲ್ ಮೇಲೆ ಅಥವಾ ಅತ್ತಿತ್ತ ಬಿದ್ದಿರುವ ನ್ಯೂಸ್‌ ಪೇಪರ್‌, ಪುಸ್ತಕಗಳು, ಮ್ಯಾಗಝೀನ್‌ ಇತ್ಯಾದಿಗಳನ್ನು ಬುಕ್‌ ಶೆಲ್ಫ್ ನಲ್ಲಿ ಸರಿಯಾಗಿ ಇಡಿ. ಬಟ್ಟೆ ಹ್ಯಾಂಗರ್‌ ಗೆ ಸಿಕ್ಕಿಸಿ ಅಲಮಾರಿನಲ್ಲಿಡಿ. ಇಂದು ಬಾಕ್ಸ್ ಇರುವ ಬೆಡ್‌, ಸೋಫಾ ಇತ್ಯಾದಿ ಬರುತ್ತವೆ. ಅದರಲ್ಲಿ ಹೆಚ್ಚುವರಿ ವಸ್ತುಗಳನ್ನು ಇಡಬಹುದು.

ಬಾಗಿಲಿನ ಹಿಂದೆ ಹುಕ್‌ ಹಾಕಿಸಿ ಬಟ್ಟೆಗಳು, ಪರ್ಸ್‌ ಇತ್ಯಾದಿ ಸಿಕ್ಕಿಸಬಹುದು.

ಪರದೆ : ಚಿಕ್ಕ ಮನೆಗೆ ಪರದೆಗಳನ್ನು ಚಿನ್ನಾಗಿ ಯೋಚಿಸಿ ಆಯ್ಕೆ ಮಾಡಬೇಕು. ಕೋಣೆಯನ್ನು ದೊಡ್ಡದಾಗಿ ತೋರಿಸಲು ಪಾರದರ್ಶಕವಾದ, ಸೂಕ್ಷ್ಮ ಫ್ಯಾಬ್ರಿಕ್‌ ನ ಪರದೆ ಒಳ್ಳೆಯ ಆಯ್ಕೆ. ಇದರಲ್ಲಿ ತೂರಿಬರುವ ಬೆಳಕು ಇಡೀ ಕೋಣೆಯ ಬಣ್ಣವನ್ನು ಬದಲಿಸುತ್ತದೆ. ಗಾಢ ಬಣ್ಣದ ಪರದೆಗಳಿಂದ ಕೋಣೆ ಚಿಕ್ಕದಾಗಿ ಕಾಣುತ್ತದೆ.

Chota-ghar-1

ಪೇಕ್ಪಾಯಿಂಟ್‌ : ಎಲ್ಲರ ಗಮನವನ್ನು ತನ್ನತ್ತ ಸೆಳೆಯುವಂತಹ ಪೇಕ್‌ ಪಾಯಿಂಟ್‌ ಸೆಲೆಕ್ಟ್ ಮಾಡಿ. ಈ ಪೇಕ್‌ ಪಾಯಿಂಟ್ ಯಾವುದೇ ಫರ್ನೀಚರ್‌, ಆರ್ಟ್‌ ವರ್ಕ್‌ ಅಥವಾ ವಿಶೇಷವಾಗಿ ಡೆಕೋರೇಟ್‌ ಮಾಡಿದ ಪ್ಲೇಸ್‌ ಆಗಿರಬಹುದು.

ಉದಾಹರಣೆಗೆ ಬೆಡ್‌ ರೂಮಿನಲ್ಲಿ ನಿಮ್ಮ ಸುಂದರ ಬೆಡ್‌ ನ್ನು ಪೇಕ್‌ ಪಾಯಿಂಟ್‌ ಮಾಡಿಕೊಳ್ಳಬಹುದು. ಕೋಣೆಯ ಇತರ ವಸ್ತುಗಳನ್ನು ಮನೆಗೆ ಬರುವ ವ್ಯಕ್ತಿಯ ದೃಷ್ಟಿ ಅಲ್ಲಿಯೇ ಬೀಳುವಂತೆ ಸಜ್ಜುಗೊಳಿಸಿ. ಅದರಿಂದ ಕೋಣೆ ಚಿಕ್ಕದರಂತೆ ಕಾಣುವುದಿಲ್ಲ.

ಗಿರಿಜಾ ಪ್ರಮೋದ್‌.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ