ಯಾಂತ್ರಿಕ ಜೀವನದ ಜಂಜಾಟ ತಪ್ಪಿಸಲೆಂದೇ ಅನಾದಿಕಾಲದಿಂದ ನಮ್ಮ ಪೂರ್ವಜರು ಹಬ್ಬಗಳ ಆಚರಣೆಯನ್ನು ಜಾರಿಗೆ ತಂದರು. ಹೀಗಾಗಿ ಹಬ್ಬಗಳು ಬಂದಾಗ ಮೋಜು, ಸಡಗರ, ಸಂಭ್ರಮ ಉತ್ಸಾಹ ಇತ್ಯಾದಿ ಹೆಚ್ಚುತ್ತವೆ. ಈ ಹಬ್ಬಗಳ ಆಚರಣೆಯೂ ಏಕತಾನತೆ ತರಿಸಿದರೆ ಅದರಲ್ಲಿ ಒಂದಿಷ್ಟು ವೈವಿಧ್ಯತೆ ಬೇಕೆನಿಸುತ್ತದೆ. ಪ್ರತಿ ವರ್ಷ ಹಬ್ಬಗಳು ಒಂದೇ ರೀತಿಯಲ್ಲಿ ಬಂದು ಹೋಗಿಬಿಡುತ್ತವೆ. ಎಷ್ಟೋ ಸಲ ಈ ಗಡಿಬಿಡಿಗಳ ಮಧ್ಯೆ ನಮ್ಮ ಪ್ರಿಯ ಬಂಧುಮಿತ್ರರು, ಆಪ್ತೇಷ್ಟರನ್ನು ಸರಿಯಾಗಿ ವಿಚಾರಿಸಕೊಳ್ಳಲಿಕ್ಕೇ ಆಗುವುದಿಲ್ಲ. ಈ ಸಲದಿಂದ ಹಬ್ಬಗಳಲ್ಲಿ ಒಂದಷ್ಟು ವಿಭಿನ್ನತೆ ತಂದುಕೊಂಡರೆ ಹೇಗೆ?
ಸಾಮಾನ್ಯವಾಗಿ ನೆಂಟರಿಷ್ಟರು, ಫ್ಯಾಮಿಲಿ ಫ್ರೆಂಡ್ಸ್, ಆತ್ಮೀಯರೆಲ್ಲ ಒಂದೆಡೆ ಕಲೆತು ಪಾರ್ಟಿ ತರಹ ಏರ್ಪಡಿಸಿ, ಹೆಚ್ಚಿನ ಮನರಂಜನೆಗೆ ಒತ್ತುಕೊಟ್ಟರೆ ಹಬ್ಬಗಳು ಮತ್ತಷ್ಟು ರಂಗೇರುತ್ತವೆ, ವಾತಾವರಣ ಕಳೆಗಟ್ಟುತ್ತದೆ. ಇಂದಿನ ದಿನಗಳಲ್ಲಿ ಎಲ್ಲೆಡೆ ವಿಭಕ್ತ ಕುಟುಂಬಗಳೇ ತುಂಬಿರುವಾಗ, ಒಬ್ಬರೇ ಮನೆಯವರು ಪಾರ್ಟಿ ಅರೇಂಜ್ ಮಾಡುವುದು ಕಷ್ಟ. ಹೀಗಾಗಿ ನಾಲ್ಕಾರು ಜನ ಕೈಗೂಡಿಸಿದರೆ ಬಹಳ ಚೆನ್ನಾಗಿರುತ್ತದೆ, ಅಲ್ಲವೇ?
ಹೀಗಾಗಿ ಹಬ್ಬದ ನೆಪದಲ್ಲಿ ಒಂದು ಪಾರ್ಟಿ ಆಯೋಜಿಸಲು ಸಿದ್ಧರಾಗಿ. ಯಾವುದೇ ಹಬ್ಬ ಇರಬಹುದು, ಅದಕ್ಕೆ ಸಂಬಂಧಿಸಿದಂತೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಅತಿ ಮುಖ್ಯ. ನಿಮಗೆ ಬೇಕಾದ ಆಪ್ತೇಷ್ಟರಿಗೆ ಈ ಕುರಿತಾಗಿ ಮುಂಚೆಯೇ ಮಾಹಿತಿ ನೀಡಿ ಪಾರ್ಟಿಗಾಗಿ ಸಿದ್ಧಪಡಿಸಿಕೊಳ್ಳಿ. ಯಾವುದೇ ಪಾರ್ಟಿ ಇರಲಿ, ಅಲ್ಲಿ ಮನರಂಜನೆಗೆ ಮಹತ್ವ ಹೆಚ್ಚು. ಹೀಗಾಗಿ ಅಂತ್ಯಾಕ್ಷರಿ, ಲಘು ಸಂಗೀತ, ಹಾಡುಗಾರಿಕೆ, ಗಾನಬಜಾನಾ, ಲೈಟ್ ಡ್ಯಾನ್ಸ್, ನೃತ್ಯ ಇತ್ಯಾದಿಗಳನ್ನು ಏರ್ಪಡಿಸಬಹುದು. ಇತ್ತೀಚೆಗಂತೂ ನವರಾತ್ರಿಯ ಸಂದರ್ಭದಲ್ಲಿ ಒಂದು ಪುಟ್ಟ ಹಾಲ್ ಬುಕ್ ಮಾಡಿ, ಗುಜರಾತಿ ಶೈಲಿಯ ಗರ್ಭಾ ನೃತ್ಯಗಳನ್ನು ಏರ್ಪಡಿಸುವುದು ನಮ್ಮ ದ. ಭಾರತದಲ್ಲೂ ಬಲು ಸಾಮಾನ್ಯವಾಗಿಹೋಗಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ಕೊಚ್ಚಿನ್ ಗಳಲ್ಲಿ ಎಲ್ಲೆಡೆ ಇದು ರೂಢಿಗೆ ಬಂದಿದೆ. ಒಟ್ಟಾರೆ ಇಂಥ ಗೆಟ್ ಟು ಗೆದರ್ ಪಾರ್ಟಿಗಳಲ್ಲಿ ಮನರಂಜನೆ ಅಂದ ಮೇಲೆ ಹಾಡು, ನೃತ್ಯ, ಮೋಜುಮಸ್ತಿ ಇರಲೇಬೇಕು. ಇದಕ್ಕಾಗಿ ನಿಮಗೆ ಬೇಕಾದ ಪಾರ್ಟ್ ನರ್ ಅಥವಾ ಗುಂಪಿನ ಸದಸ್ಯರನ್ನು ಆರಿಸಿಕೊಂಡು ಹಾಡುನೃತ್ಯಗಳಿಗೆ ಬೇಕಾದ ಅಭ್ಯಾಸ ನಡೆಸಿರಿ. ಬನ್ನಿ, ಇಂಥ ಮೋಜಿನ ಪಾರ್ಟಿಗಳನ್ನು ಹೇಗೆ ಆಯೋಜಿಸುವುದೆಂದು ವಿವರವಾಗಿ ತಿಳಿಯೋಣ :
ವೆನ್ಯು ಅಥವಾ ಸ್ಥಳದ ಆಯ್ಕೆ : ಎಲ್ಲಕ್ಕೂ ಮೊದಲು ಪಾರ್ಟಿ ಯಾವಾಗ, ಎಲ್ಲಿ ಅರೇಂಜ್ ಮಾಡಬೇಕು ಅದಕ್ಕೆ ಎಷ್ಟು ಜನ ಬರುತ್ತಾರೆ ಎಂಬುದನ್ನು ಗುರುತಿಸಿಡಿ. ಅತಿಥಿಗಳ ಸಂಖ್ಯೆಯನ್ನು ಆಧರಿಸಿ ಪಾರ್ಟಿಯನ್ನು ಮನೆಯಲ್ಲೇ ಏರ್ಪಡಿಸುವುದೇ, ಶಾಮಿಯಾನಾ ಹಾಕಿ ಅಂಗಳಕ್ಕೂ ವಿಸ್ತರಿಸುವುದೇ ಅಥವಾ ಮಿನಿ ಹಾಲ್ ಬೇಕಾಗಬಹುದೇ ಎಂಬುದನ್ನು ನೋಡಿಕೊಳ್ಳಿ. ಅಗತ್ಯಬಿದ್ದರೆ ಪಾರ್ಟಿಗಾಗಿ ನಿಮ್ಮ ಇಡೀ ಬೀದಿಯನ್ನು ಸಹ ಬಳಸಿಕೊಳ್ಳಬಹುದು, ಆಗ ಅಕ್ಕಪಕ್ಕದವರ ನೆರವು ಸಿಗುತ್ತದೆ.
ಅಗತ್ಯದ ಲಿಸ್ಟ್ : ಪಾರ್ಟಿಗೆ ಬರಲಿರುವ ಅತಿಥಿಗಳ ಒಂದು ಪಟ್ಟಿ ತಯಾರಿಸಿ. ಪಾರ್ಟಿಗೆ 2-3 ದಿನಗಳ ಮೊದಲೇ ಅತಿಥಿಗಳಿಗೆ sms ಸಂದೇಶ ಅಥಾ ಕರೆ ಮಾಡಿ ಆಮಂತ್ರಣ ನೀಡಿ.