ದೊಡ್ಡ ಮನೆಯನ್ನು ಖರೀದಿಸುವುದು ಅಥವಾ ತಮ್ಮ ಮನೆಯನ್ನು ರೀಮಾಡೆಲಿಂಗ್ ಮಾಡಿಸುವುದು ಎಲ್ಲರಿಗೂ ಸಾಧ್ಯವಿಲ್ಲ. ಆದರೆ ಅದಕ್ಕೆ ಚಿಂತಿಸಬೇಕಾಗಿಲ್ಲ. ಕೆಲವು ಸಣ್ಣ ಪುಟ್ಟ ವಿಷಯಗಳನ್ನು ಗಮನಿಸಿದರೆ ನಿಮ್ಮ ಸಣ್ಣ ಮನೆಯೂ ಅರಮನೆಯಂತೆ ಸುಂದರವಾಗಿ ಕಾಣುತ್ತದೆ.
ಬಣ್ಣಗಳ ಆಯ್ಕೆ : ಸಣ್ಣ ಕೋಣೆಗಳಲ್ಲಿ ಯಾವಾಗಲೂ ತೆಳುವಾದ ಬಣ್ಣಗಳನ್ನು ಉಪಯೋಗಿಸಿ. ಗಾಢ ಬಣ್ಣಗಳನ್ನು ದೂರವಿಡಿ. ತೆಳುವಾದ ಬಣ್ಣಗಳು ಗೋಡೆಗಳು ಪರಸ್ಪರ ದೂರವಿರುವ ಅನುಭವ ಕೊಡುತ್ತದೆ. ಜೊತೆಗೆ ತೆಳು ಹಾಗೂ ಬ್ರೈಟ್ ಕಲರ್ ನ ಗೋಡೆಗಳು ಹೆಚ್ಚು ರಿಫ್ಲೆಕ್ಟಿವ್ ಆದ್ದರಿಂದ ಆ ಜಾಗ ತೆರವಾಗಿರುವ ಭ್ರಮೆಯುಂಟಾಗುತ್ತದೆ. ಡಾರ್ಕ್ ಕಲರ್ಸ್ ಬೆಳಕನ್ನು ಹೀರಿಕೊಳ್ಳುವುದರಿಂದ ಕೋಣೆ ಚಿಕ್ಕದಾಗಿ ಕಾಣುತ್ತದೆ. ನಿಮಗೆ ಯಾವುದಾದರೂ ಡಾರ್ಕ್ ಕಲರ್ ವಿಶೇಷವಾಗಿ ಇಷ್ಟವಾಗಿದ್ದು ನೀವು ಅದನ್ನು ಕೋಣೆಯಲ್ಲಿ ಉಪಯೋಗಿಸಲು ಬಯಸಿದರೆ ಇಡೀ ಗೋಡೆಯ ಮೇಲೆ ಹಾಕಿಸದೆ ಸುಮಾರು 8-10 ಇಂಚು ವರ್ಟಿಕಲ್ ಅಥವಾ ಹಾರಿಜಾಂಟಲ್ ಸ್ಟ್ರೈಪ್ಸ್ ನ ಪ್ಯಾಟರ್ನ್ ಉಪಯೋಗಿಸಿ. ಕುಶನ್ಸ್, ಕಾರ್ಪೆಟ್, ಬೆಡ್ ಶೀಟ್ ಇತ್ಯಾದಿ ಡಾರ್ಕ್ ಕಲರ್ ಆ್ಯಕ್ಸೆಸರೀಸ್ ಉಪಯೋಗಿಸಬಹುದು.
ಗೋಡೆಗಳ ಮೇಲೆ ಸಣ್ಣ ಪ್ಯಾಟರ್ನ್ ನ ಟೆಕ್ಸ್ ಚರ್ ಇದ್ದರೆ ಸ್ಪಷ್ಟವಾಗಿ ಅಗಲವಾಗಿ ಕಾಣುತ್ತದೆ. ಸಣ್ಣ ಮನೆಯಲ್ಲಿ ಕೋಣೆಯ ಫ್ಲೋರಿಂಗ್‌ಕೂಡ ತೆಳುಬಣ್ಣದಲ್ಲಿರಬೇಕು. ಇದರಿಂದ ಕೋಣೆ ದೊಡ್ಡದಾಗಿ ಕಾಣುತ್ತದೆ.
ಕೋಣೆಯಲ್ಲಿ ಟೈಲ್ಸ್ ಅಥವಾ ಮಾರ್ಬಲ್ಸ್ ಹಾಕಿ ಕಾರ್ಪೆಟ್ ಹಾಸಿದ್ದರೆ ಅವುಗಳ ಬಣ್ಣ ತೆಳುವಾಗಿರುವಂತೆ ನೋಡಿಕೊಳ್ಳಿ. ಬಿಳಿ ಅಮೃತಶಿಲೆಯ ಮೇಲೆ ಜೆಮಿಟ್ರಿಕ್ ಪ್ಯಾಟರ್ನ್ ನ ಚಿಕ್ಕ ಕಾರ್ಪೆಟ್ ಹರಡಿ. ಇದು ಕೋಣೆಯ ಪೇಕ್ ಪಾಯಿಂಟ್ ಆಗಿ ಕಾಣುತ್ತದೆ ಮತ್ತು ಕೋಣೆಯೂ ದೊಡ್ಡದಾಗಿ ಕಾಣುತ್ತದೆ.
ಫರ್ನೀಚರ್, ಬೆಡ್ ಶೀಟ್, ಕಾರ್ಪೆಟ್, ಗೋಡೆಯ ಬಣ್ಣದೊಂದಿಗೆ ಮ್ಯಾಚ್ ಆಗುವಂತಿರಲಿ. ಆದರೆ ಅದರಲ್ಲಿ ಹೆಚ್ಚು ಡಿಸೈನ್ ಅಥವಾ ಪ್ಯಾಟರ್ನ್ ಇರಬಾರದು.
ಬೆಳಕು : ಕೋಣೆಯಲ್ಲಿ ಪ್ರಾಕೃತಿಕ ಬೆಳಕು ಬರುವಂತೆ ಮಾಡಿ. ಬೆಳಕಿನಿಂದ ಕೋಣೆ ದೊಡ್ಡದಾಗಿ ಕಾಣುತ್ತದೆ. ಪ್ರಾಕೃತಿಕ ಬೆಳಕು ಬರದಿದ್ದರೆ ಒಳ್ಳೆಯ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಿ. ಕಿಟಕಿಯ ಮೂಲಕ ಸೂರ್ಯನ ಬೆಳಕು ಒಳಬರಲಿ. ತೆರೆದ ಕಿಟಕಿ ಕೋಣೆಯನ್ನು ದೊಡ್ಡದಾಗಿ ತೋರಿಸುತ್ತದೆ. ಏಕೆಂದರೆ ನಮ್ಮ ದೃಷ್ಟಿ ಹೊರಗೆ ದೂರದವರೆಗೆ ಹೋಗುತ್ತದೆ. ಕಿಟಕಿ ತೆರೆದಾಗ ವ್ಯೂ ಚೆನ್ನಾಗಿಲ್ಲದಿದ್ದರೆ ಹ್ಯಾಂಗಿಂಗ್ ಪ್ಲ್ಯಾಂಟ್ಸ್ ಉಪಯೋಗಿಸಬಹುದು. ಅದನ್ನು ಕಿಟಕಿಯ ಹೊರಗೆ ಅಲಂಕರಿಸಿ.
ಮಿರರ್ ಮ್ಯಾಜಿಕ್ : ಮನೆಯ ಯಾವುದೇ ಗೋಡೆಯಲ್ಲಿ ಕನ್ನಡಿ ಹಾಕಿಸಿದರೆ ಕೋಣೆ ದೊಡ್ಡದಾಗಿ ಕಾಣಿಸುವುದಲ್ಲದೆ, ಕೋಣೆಗೆ ಹೊಸ ಲುಕ್ ಕೊಡುತ್ತದೆ. ಪಾರ್ಲರ್ ಇತ್ಯಾದಿಗಳಲ್ಲಿ ಕನ್ನಡಿ ಹಾಕಿದಾಗಲೇ ಕೋಣೆ ದೊಡ್ಡದಾಗಿ ಕಾಣಿಸುತ್ತದೆ.
ಕೊಳೆಯಾಗಿರುವ ಅಥವಾ ಹಸಿಯಾಗಿರುವ ಗೋಡೆಯ ಮೇಲೆ ಕನ್ನಡಿಯನ್ನು ಹಾಕಿ. ಅದರಿಂದ ಆ ದೋಷ ಮುಚ್ಚಿಹೋಗುತ್ತದೆ ಮತ್ತು ಕೋಣೆಯೂ ಚೆನ್ನಾಗಿ ಕಾಣುತ್ತದೆ. ಗಾಜಿನ ಫರ್ನೀಚರ್ ಪಾರದರ್ಶಕವಾದ್ದರಿಂದ ಹೆಚ್ಚು ಜಾಗವಿರುವಂತೆ ಕಾಣುತ್ತದೆ. ಗೋಡೆಗಳ ಮೇಲೆ ಮಿರರ್ ಪ್ಯಾನೆಲಿಂಗ್ ಕೂಡ ಮಾಡಿಸಬಹುದು. ಇದರಿಂದ ಕೋಣೆ ಸಾಕಷ್ಟು ದೊಡ್ಡದಾಗಿ ಕಾಣುತ್ತದೆ. ಏಕೆಂದರೆ ಕನ್ನಡಿಯಲ್ಲಿ ಪ್ರತಿಬಿಂಬಿಸುವುದರಿಂದ ಕೋಣೆ ಗೋಡೆಯು ಇನ್ನೊಂದು ಕಡೆ ಹರಡಿರುವಂತೆ ಕಂಡು ದೊಡ್ಡದಾಗಿ ಕಾಣಿಸುತ್ತದೆ. ಕಿಟಕಿಯ ಬಳಿ ಕನ್ನಡಿ ಹಾಕುವುದು ಉತ್ತಮ. ಇದರಿಂದ ಹೊರಗಿನ ದೃಶ್ಯ ರಿಫ್ಲೆಕ್ಟ್ ಆಗುತ್ತದೆ.