ವಿಶ್ವ ವೈದ್ಯರ ಸಮ್ಮೇಳನ :
ಬೆಂಗಳೂರಿನ ಲಿ ಮೆರಿಡಿಯನ್ ಹೋಟೆಲ್ ನ ಸಭಾಂಗಣದಲ್ಲಿ ಇತ್ತೀಚೆಗೆ ಫೆಡರೇಶನ್ ಆಫ್ ಆ್ಯಬ್‌ಸ್ಪೆಸ್ಟ್ರಿಕ್ಸ್ ಗೈನಕಾಲಜಿ ಸೊಸೈಟಿ ಆಫ್ ಇಂಡಿಯಾ ಸಂಸ್ಥೆ ಏರ್ಪಡಿಸಿದ್ದ ವಿಶ್ವ ವೈದ್ಯರ ಸಮ್ಮೇಳನದಲ್ಲಿ, ಭಾರತದ ವಿವಿಧ ರಾಜ್ಯಗಳ ಖ್ಯಾತ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞರು ಭಾಗವಹಿಸಿದ್ದರು. ಬಹಳ ವಿಜೃಂಭಣೆಯಿಂದ ನಡೆದ ಈ ಸಮಾವೇಶದಲ್ಲಿ ವೈದ್ಯರು ಮಹಿಳೆಯರ ಆರೋಗ್ಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ವಿಚಾರ ವಿನಿಮಯ ಮಾಡಿಕೊಂಡರು. ಜೊತೆಗೆ ದೇಶದ ಎಲ್ಲ ಭಾಗಗಳ ಹಾಗೂ ಪಂಥಗಳ ಮದುವೆಯ ವೇಷ, ಆಭರಣ, ಸಂಗೀತ ಹಾಗೂ ನೃತ್ಯ ವಿವಾಹದ ಥೀಮ್ ನಲ್ಲಿ ಮೂಡಿಬಂದ ಫ್ಯಾಷನ್ ಶೋ ಈ ಕಾರ್ಯಕ್ರಮಕ್ಕೆ ವಿಶಿಷ್ಟ ಅರ್ಥವನ್ನು ನೀಡಿತು.
ನಾಟಕ ಪ್ರದರ್ಶನ :
`ಪಂಚಮ ಸಂಭ್ರಮ’ದ ನಿಮಿತ್ತ ಇತ್ತೀಚೆಗೆ ನಡೆದ `ಕಲ್ಯಾಣ ಸಂಧ್ಯ’ ನಾಟಕ ನೆರೆದವರನ್ನು ರಂಜಿಸಿತು.
ಎನ್. ನರಸಿಂಹಯ್ಯ ಪ್ರಶಸ್ತಿ ಪ್ರದಾನ : `
ಸಮ್ಮಿಲನ’ ಕಲೆಸಾಹಿತ್ಯ ಸಾಂಸ್ಕೃತಿಕ ವೇದಿಕೆಯು ಕನ್ನಡ ಚಳುವಳಿಗಾರ ವಾಟಾಳ್ ನಾಗರಾಜ್ ಅವರಿಗೆ ಪತ್ತೇದಾರಿ ಕಾದಂಬರಿ ಸಾರ್ವಭೌಮ `ಎನ್. ನರಸಿಂಹಯ್ಯ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. `ಸಮ್ಮಿಲನ’ದ ಸಂಸ್ಥಾಪಕ ಕುವರ ಯಲ್ಲಪ್ಪ, ಸಾಹಿತಿ ಚಂಪಾ, ಚಿತ್ರ ನಿರ್ಮಾಪಕ ಸಾ.ರಾ. ಗೋವಿಂದು ಉಪಸ್ಥಿತರಿದ್ದರು. ಬೆಳದಿಂಗಳಿಗೆ ರಂಗೇರಿಸಿದ ವೈಣುಗಾನ : ಮೈಸೂರಿನ ಸುತ್ತೂರು ಮಠದಲ್ಲಿ ಜರುಗಿದ 140ನೇ ಬೆಳದಿಂಗಳ ಸಂಗೀತ ಕಾರ್ಯಕ್ರಮದಲ್ಲಿ ವೇಣುಗಾನ ಖ್ಯಾತ ಕಲಾವಿದ ಸಹೋದರರಾದ ವಿದ್ವಾನ್ ಮೋಹನ್ ರಂಗನ್ ಮತ್ತು ವಿದ್ವಾನ್ ರವಿಕಿರಣ್, ಜುಗಲ್ ಬಂದಿ ಕೊಳಲು ವಾದನದ ಮೂಲಕ ಕಲಾರಾಧಕರ ಮನಸ್ಸನ್ನು ಸೂರೆಗೊಂಡರು.
ಅಂಗಳಕ್ಕೆ ಹೂ ಹಸೆ 12 :
ಉಪಾಸನಾ ಸುಗಮ ಸಂಗೀತ ಸಂಸ್ಥೆ ತನ್ನ ಎಂದಿನ `ಅಂಗಳಕ್ಕೆ ಹೂ ಹಸೆ’ಯ 12ನೇ ಸಮಾರಂಭವನ್ನು ಇತ್ತೀಚೆಗೆ ಗಿರಿನಗರದಲ್ಲಿ ಹರಿಪ್ರಿಯಾ ಗೆಳೆಯರ ಬಳಗದ ಸಹಕಾರದೊಂದಿಗೆ ನಡೆಸಿತು. ನಾಡಿನ ಖ್ಯಾತ ಕವಿಗಳ ಭಾವಗೀತೆಗಳನ್ನು ಉಪಾಸನಾ ಮೋಹನ್, ಪಂಚಮ್ ಹಳಿಬಂಡಿ, ವರ್ಷಾ ಸುರೇಶ್, ಶ್ಲಾಘ್ಯಾ ವಸಿಷ್ಠ, ಸಹನಾ ಭಟ್, ಮಂಗಳಾ ರೋಹಿತ್, ಶಾಲಿನಿ ವೆಂಕಟೇಶ್, ಮೇಘನಾ ಭಟ್ ಮುಂತಾದವರು ಸುಶ್ರಾವ್ಯವಾಗಿ ಹಾಡಿ ಸಂಗೀತ ಪ್ರೇಮಿಗಳನ್ನು ರಂಜಿಸಿದರು.
ರೋಮಾಂಚನಗೊಳಿಸಿದ ಸಾಹಸ :
ಇತ್ತೀಚೆಗೆ ತಮಿಳುನಾಡಿನ ಬೈಕ್ ಸಂಘದ ಸದಸ್ಯರಾದ ವಿನೋದ್, ಲೋಕೇಶ್ ಮತ್ತು ಸತ್ಯರಾಜ್ ರವರು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಯೂರೋಪಿನ ಮೋಟಾರ್ ರೇಸಿಂಗ್ ಲೆಜೆಂಡ್ ಕೆಟಿಎಂ ಬೈಕ್ ಗಳಿಂದ ರೋಮಾಂಚಕ ಸಾಹಸಮಯ ಸ್ಟಂಟ್ ಗಳ ಮೂಲಕ ನೆರೆದಿದ್ದ ಸಾರ್ವಜನಿಕರನ್ನು ಮೂಕವಿಸ್ಮತಗೊಳಿಸಿ ರಂಜಿಸಿದರು.
ರಶ್ಮಿಯ ರಂಗಪ್ರವೇಶ :
ಮೈಸೂರಿನ ಖ್ಯಾತ ನೃತ್ಯಗುರುಗಳಲ್ಲಿ ಒಬ್ಬರಾದ ಕೃಪಾ ಫಡ್ಕೆಯವರ ಶಿಷ್ಯೆ ಎಂ.ಆರ್. ರಶ್ಮಿ, ಜಗನ್ಮೋಹನ ಅರಮನೆಯ ಸಾಂಸ್ಕೃತಿಕ ವೇದಿಕೆಯಲ್ಲಿ ಹಿನ್ನೆಲೆ ತಾಳ, ಮೇಳದ ಗಾಯನಕ್ಕೆ ಪೂರಕವಾಗಿ ಲಯ, ಗತಿ, ಕರವಿನ್ಯಾಸ ಹಾಗೂ ಅಪೂರ್ವ ಹಾವಭಾವಗಳಿಂದ ಗೆಜ್ಜೆನಾದದ ಹೆಜ್ಜೆ ಹಾಕುವುದರ ಮೂಲಕ ಶಾಸ್ತ್ರೀಯ ಭರತನಾಟ್ಯ ಕಲಾಲೋಕಕ್ಕೆ ಪಾದಾರ್ಪಣೆ ಮಾಡಿದರು.
ಕಾಡಿದ ಕಲಾವಿದನ ಸವಿನೆನಪು :
ಇತ್ತೀಚೆಗೆ ಇಹಲೋಕ ಯಾತ್ರೆ ಪೂರೈಸಿ ಪ್ರಾತಃಸ್ಮರಣೀಯರಾದ ಖ್ಯಾತ ಹಿನ್ನೆಲೆ ಗಾಯಕ ಡಾ. ಪಿ.ಬಿ. ಶ್ರೀನಿವಾಸ್ ರವರಿಗೆ ಮೈಸೂರಿನ ಲಯನ್ಸ್ ಕ್ಲಬ್ ಆಫ್ ಮೈಸೂರ್ ಗಾರ್ಡನ್ ಸಿಟಿ ಕಲಾಮಂದಿರದಲ್ಲಿ ಖ್ಯಾತ ಕಲಾವಿದರುಗಳಾದ ಗಂಗಾಧರ್, ವಿಶ್ವನಾಥ್, ನಾಗಲಕ್ಷ್ಮಿ, ಶ್ರೇಯಾಭಟ್ ರವರ ಗಾನಸುಧೆಯ ಮೂಲಕ ಸ್ಮರಣೀಯ ಶ್ರದ್ಧಾಂಜಲಿ ಸಮರ್ಪಿಸಿತು.
ರಂಜಿಸಿದ ಕವಿಗೋಷ್ಠಿ :
ಸ್ಪರ್ಧಾ ಚೈತ್ರ ತರಬೇತಿ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ಅಮೋಘ ಕವಿಗೋಷ್ಠಿಯಲ್ಲಿ ಕೇಂದ್ರದ ಮುಖ್ಯಸ್ಥರಾದ ಜಿ. ಹರಿಪ್ರಸಾದ್, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾದ ಡಾ. ವಸುಂಧರಾ ಭೂಪತಿ, ಹಿರಿಯ ಕವಿಗಳಾದ ಚಂದ್ರಶೇಖರ ಪಾಟೀಲ್, ದೂರದರ್ಶನ ನಿವೃತ್ತ ನಿರ್ದೇಶಕರಾದ ಜಿ.ಎಂ. ಶಿರಹಟ್ಟಿ, ಕನ್ನಡ ಹೋರಾಟಗಾರ ರಾ.ನಂ. ಚಂದ್ರಶೇಖರ್, ಖ್ಯಾತ ವೈದ್ಯರಾದ ಡಾ. ಖ.ವಿ. ಹಳ್ಳಿಗುಡಿ ಮುಂತಾದವರು ಭಾಗವಹಿಸಿದ್ದರು.
ಪರಿಸರದ ಕಾಳಜಿ :
ಮೈಸೂರು ಜಿಲ್ಲೆಯ ಕೃಷ್ಣರಾಜನಗರದಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಸ್ಥೆ ಹಾಗೂ ನಗರ ಪುರಸಭೆಯ ಸದ್ಯಸರು ಜಂಟಿಯಾಗಿ ವಿಶ್ವ ಪರಿಸರ ದಿನವನ್ನು ಆಚರಿಸಿ ಸ್ವಚ್ಛ, ಸ್ವಸ್ಥ್ಯ ಹಾಗೂ ಸುಂದರ ಪರಿಸರಕ್ಕಾಗಿ ಶ್ರಮಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿ ಮೆರವಣಿಗೆ ಮಾಡುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.
ಸನ್ಮಾನ ಕಾರ್ಯಕ್ರಮ :
ಹೊರನಾಡಲ್ಲಿ ಕನ್ನಡ ಅಭಿವೃದ್ಧಿಗಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ ದೆಹಲಿ ಕನ್ನಡಿಗ ಪತ್ರಿಕೆ ಸಂಪಾದಕ ಬಾ. ಸಾಮಗ ಅವರನ್ನು ಇಂಡಿಯನ್ ಓವರ್ ಸೀಸ್ ಬ್ಯಾಂಕಿನ ಮಹಾಪ್ರಬಂಧಕ ವೈ.ಸಿ. ಜೈನ್ ಹಾಗೂ ಉಪಮಹಾಪ್ರಬಂಧಕ ಸುಜೈ ರಾವ್ ಅವರು ಸನ್ಮಾನಿಸಿದರು.
ಅಭಿನಂದನಾ ಸಮಾರಂಭ :
ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ವಾಸವಾಗಿದ್ದು ಕೆಂಪೇಗೌಡ ಪ್ರಶಸ್ತಿ ಪಡೆದ ಕೆ.ಎನ್. ಲಕ್ಷ್ಮಣ್ ಗೌಡ ಹಾಗೂ ಪುಟ್ಟಶಂಕರಯ್ಯರವರಿಗೆ ಶಾಸಕ ರವಿಸುಬ್ರಹ್ಮಣ್ಯ ಕೆಂಪೇಗೌಡ ಬಡಾವಣೆಯ ಕೆಂಪೇಗೌಡ ಉದ್ಯಾನವನದಲ್ಲಿ ಕೆಂಪೇಗೌಡರ ಪ್ರತಿಮೆ ಮುಂದೆ ಅಭಿನಂದಿಸಿದರು.
ಪಾಂಚಜನ್ಯ ಪ್ರಶಸ್ತಿ ವಿತರಣೆ :
ಯಲಹಂಕ ಸಮೀಪದ ಕಾಕೋಳು ಗ್ರಾಮದಲ್ಲಿ ಪಾಂಚಜನ್ಯ ಪ್ರತಿಷ್ಠಾನದ ಪ್ರಥಮ ವಾರ್ಷಿಕೋತ್ಸವ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಕ್ಯಾನ್ಸರ್ ತಜ್ಞ ಡಾ. ಕೊಡಗನೂರು ಎಸ್. ಗೋಪಿನಾಥ್ ಅವರಿಗೆ ಪಾಂಚಜನ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಎಸ್.ವಿ. ಸುಬ್ರಹ್ಮಣ್ಯ, ಟ್ರಸ್ಟ್ ಅಧ್ಯಕ್ಷ ಕಾಕೋಳು ರಾಘವೇಂದ್ರ, ನ್ಯಾ ಎಂ.ಎನ್. ವೆಂಕಟಾಚಲಯ್ಯ ಉಪಸ್ಥಿತರಿದ್ದರು.
ಪರಿಸರ ದಿನಾಚರಣೆ :
`ಬಸವನಗುಡಿ ಗಿರಿನಗರ ಪರಿಸರ ವೇದಿಕೆ’ ಗಿಡಗಳಿಗೆ ಗೊಬ್ಬರ ಮಣ್ಣು ಹಾಕುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸತ್ಯಭಾಮಾ ಕಂಬಾರ, ವಿ.ಎಸ್. ಮೋಹನ್ ಕುಮಾರ್, ಜಯಲಕ್ಷ್ಮಿ ನಾಗರಾಜನ್, ಅಶೋಕ್ ಅಯ್ಯರ್, ಕಾರ್ತಿಕ್ ಮುಂತಾದವರು ಉಪಸ್ಥಿತರಿದ್ದರು.
ಸಾಧನಶ್ರೀ ಪ್ರಶಸ್ತಿ ಪ್ರದಾನ :
ನಾವೀನ್ಯ ಸಾಂಸ್ಕೃತಿಕ ಅಕಾಡೆಮಿ ಈಚೆಗೆ ರಾಜ್ಯ ಮಟ್ಟದ ಜಾನಪದೋತ್ಸವ ಕಾರ್ಯಕ್ರಮ ಏರ್ಪಡಿಸಿತ್ತು. ಈ ಸಮಾರಂಭದಲ್ಲಿ ರಾಮಪ್ಪ, ರಮೇಶ ಸುರ್ವೆ, ವೆಂಕಟರಮಣಯ್ಯ ಹಾಗೂ ಕೊಪ್ಪರಂ ಅನ್ನಪೂರ್ಣಾ ಅವರಿಗೆ `ಸಾಧನಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಹರಿಹರಪ್ರಿಯ, ಡಾ. ವೀರೇಶ್ ಬಳ್ಳಾರಿ, ಡಾ. ವರದಾ ಶ್ರೀನಿವಾಸ್, ಸಿ.ಕೆ ರಾಮೇಗೌಡ, ಡಾ. ಕೆ.ಎಂ. ನಾಗಲಕ್ಷ್ಮಿ, ಎನ್. ಹನುಮಂತರಾವ್ ಇಂದು ವಾಸಿ ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರದಾನ ಸಮಾರಂಭ :
ದೇಶದಲ್ಲಿಯೇ ಅತ್ಯುತ್ತಮ ಆಡಳಿತ ಸಂಘವೆಂಬ ಖ್ಯಾತಿ ಪಡೆದಿರುವ ಬೆಂಗಳೂರು ಆಡಳಿತ ಸಂಘ, ಇತ್ತೀಚೆಗೆ ನಡೆಸಿದ ವಾರ್ಷಿಕೋತ್ಸವದ ಅಂಗವಾಗಿ, ಬೆಂಗಳೂರಿನ ವಿವಿಧ ಕ್ಷೇತ್ರಗಳ ಮಹಾಪುರುಷರನ್ನು ಗೌರವಿಸಿತು. ಬೆಂಗಳೂರು ಆಡಳಿತ ಸಂಘದ ಪ್ರಶಸ್ತಿಗಳು, ನಗರವನ್ನು ಒಂದು ಆವಿಷ್ಕಾರ ಕೇಂದ್ರವನ್ನಾಗಿ ರೂಪಿಸಿದ ವ್ಯಕ್ತಿಗಳು ಮತ್ತು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಆರೋಗ್ಯ ಪಾಲನೆ, ಶಿಕ್ಷಣ, ಉತ್ಪಾದನೆ ಮುಂತಾದ ಕ್ಷೇತ್ರಗಳಲ್ಲಿ ಪ್ರಾರಂಭಿಕ ಉದ್ಯಮಗಳನ್ನು ಸ್ಥಾಪಿಸಿ ಉದ್ಯಾನನಗರಿಯನ್ನು ರೂಪಿಸಿದ ಅನೇಕ ಗಣ್ಯ ವ್ಯಕ್ತಿಗಳಿಗೆ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿತು.