ವಿಶ್ವ ವೈದ್ಯರ ಸಮ್ಮೇಳನ :
ಬೆಂಗಳೂರಿನ ಲಿ ಮೆರಿಡಿಯನ್ ಹೋಟೆಲ್ ನ ಸಭಾಂಗಣದಲ್ಲಿ ಇತ್ತೀಚೆಗೆ ಫೆಡರೇಶನ್ ಆಫ್ ಆ್ಯಬ್‌ಸ್ಪೆಸ್ಟ್ರಿಕ್ಸ್ ಗೈನಕಾಲಜಿ ಸೊಸೈಟಿ ಆಫ್ ಇಂಡಿಯಾ ಸಂಸ್ಥೆ ಏರ್ಪಡಿಸಿದ್ದ ವಿಶ್ವ ವೈದ್ಯರ ಸಮ್ಮೇಳನದಲ್ಲಿ, ಭಾರತದ ವಿವಿಧ ರಾಜ್ಯಗಳ ಖ್ಯಾತ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞರು ಭಾಗವಹಿಸಿದ್ದರು. ಬಹಳ ವಿಜೃಂಭಣೆಯಿಂದ ನಡೆದ ಈ ಸಮಾವೇಶದಲ್ಲಿ ವೈದ್ಯರು ಮಹಿಳೆಯರ ಆರೋಗ್ಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ವಿಚಾರ ವಿನಿಮಯ ಮಾಡಿಕೊಂಡರು. ಜೊತೆಗೆ ದೇಶದ ಎಲ್ಲ ಭಾಗಗಳ ಹಾಗೂ ಪಂಥಗಳ ಮದುವೆಯ ವೇಷ, ಆಭರಣ, ಸಂಗೀತ ಹಾಗೂ ನೃತ್ಯ ವಿವಾಹದ ಥೀಮ್ ನಲ್ಲಿ ಮೂಡಿಬಂದ ಫ್ಯಾಷನ್ ಶೋ ಈ ಕಾರ್ಯಕ್ರಮಕ್ಕೆ ವಿಶಿಷ್ಟ ಅರ್ಥವನ್ನು ನೀಡಿತು.
ನಾಟಕ ಪ್ರದರ್ಶನ :
`ಪಂಚಮ ಸಂಭ್ರಮ'ದ ನಿಮಿತ್ತ ಇತ್ತೀಚೆಗೆ ನಡೆದ `ಕಲ್ಯಾಣ ಸಂಧ್ಯ' ನಾಟಕ ನೆರೆದವರನ್ನು ರಂಜಿಸಿತು.
ಎನ್. ನರಸಿಂಹಯ್ಯ ಪ್ರಶಸ್ತಿ ಪ್ರದಾನ : `
ಸಮ್ಮಿಲನ' ಕಲೆಸಾಹಿತ್ಯ ಸಾಂಸ್ಕೃತಿಕ ವೇದಿಕೆಯು ಕನ್ನಡ ಚಳುವಳಿಗಾರ ವಾಟಾಳ್ ನಾಗರಾಜ್ ಅವರಿಗೆ ಪತ್ತೇದಾರಿ ಕಾದಂಬರಿ ಸಾರ್ವಭೌಮ `ಎನ್. ನರಸಿಂಹಯ್ಯ' ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. `ಸಮ್ಮಿಲನ'ದ ಸಂಸ್ಥಾಪಕ ಕುವರ ಯಲ್ಲಪ್ಪ, ಸಾಹಿತಿ ಚಂಪಾ, ಚಿತ್ರ ನಿರ್ಮಾಪಕ ಸಾ.ರಾ. ಗೋವಿಂದು ಉಪಸ್ಥಿತರಿದ್ದರು. ಬೆಳದಿಂಗಳಿಗೆ ರಂಗೇರಿಸಿದ ವೈಣುಗಾನ : ಮೈಸೂರಿನ ಸುತ್ತೂರು ಮಠದಲ್ಲಿ ಜರುಗಿದ 140ನೇ ಬೆಳದಿಂಗಳ ಸಂಗೀತ ಕಾರ್ಯಕ್ರಮದಲ್ಲಿ ವೇಣುಗಾನ ಖ್ಯಾತ ಕಲಾವಿದ ಸಹೋದರರಾದ ವಿದ್ವಾನ್ ಮೋಹನ್ ರಂಗನ್ ಮತ್ತು ವಿದ್ವಾನ್ ರವಿಕಿರಣ್, ಜುಗಲ್ ಬಂದಿ ಕೊಳಲು ವಾದನದ ಮೂಲಕ ಕಲಾರಾಧಕರ ಮನಸ್ಸನ್ನು ಸೂರೆಗೊಂಡರು.
ಅಂಗಳಕ್ಕೆ ಹೂ ಹಸೆ 12 :
ಉಪಾಸನಾ ಸುಗಮ ಸಂಗೀತ ಸಂಸ್ಥೆ ತನ್ನ ಎಂದಿನ `ಅಂಗಳಕ್ಕೆ ಹೂ ಹಸೆ'ಯ 12ನೇ ಸಮಾರಂಭವನ್ನು ಇತ್ತೀಚೆಗೆ ಗಿರಿನಗರದಲ್ಲಿ ಹರಿಪ್ರಿಯಾ ಗೆಳೆಯರ ಬಳಗದ ಸಹಕಾರದೊಂದಿಗೆ ನಡೆಸಿತು. ನಾಡಿನ ಖ್ಯಾತ ಕವಿಗಳ ಭಾವಗೀತೆಗಳನ್ನು ಉಪಾಸನಾ ಮೋಹನ್, ಪಂಚಮ್ ಹಳಿಬಂಡಿ, ವರ್ಷಾ ಸುರೇಶ್, ಶ್ಲಾಘ್ಯಾ ವಸಿಷ್ಠ, ಸಹನಾ ಭಟ್, ಮಂಗಳಾ ರೋಹಿತ್, ಶಾಲಿನಿ ವೆಂಕಟೇಶ್, ಮೇಘನಾ ಭಟ್ ಮುಂತಾದವರು ಸುಶ್ರಾವ್ಯವಾಗಿ ಹಾಡಿ ಸಂಗೀತ ಪ್ರೇಮಿಗಳನ್ನು ರಂಜಿಸಿದರು.
ರೋಮಾಂಚನಗೊಳಿಸಿದ ಸಾಹಸ :
ಇತ್ತೀಚೆಗೆ ತಮಿಳುನಾಡಿನ ಬೈಕ್ ಸಂಘದ ಸದಸ್ಯರಾದ ವಿನೋದ್, ಲೋಕೇಶ್ ಮತ್ತು ಸತ್ಯರಾಜ್ ರವರು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಯೂರೋಪಿನ ಮೋಟಾರ್ ರೇಸಿಂಗ್ ಲೆಜೆಂಡ್ ಕೆಟಿಎಂ ಬೈಕ್ ಗಳಿಂದ ರೋಮಾಂಚಕ ಸಾಹಸಮಯ ಸ್ಟಂಟ್ ಗಳ ಮೂಲಕ ನೆರೆದಿದ್ದ ಸಾರ್ವಜನಿಕರನ್ನು ಮೂಕವಿಸ್ಮತಗೊಳಿಸಿ ರಂಜಿಸಿದರು.
ರಶ್ಮಿಯ ರಂಗಪ್ರವೇಶ :
ಮೈಸೂರಿನ ಖ್ಯಾತ ನೃತ್ಯಗುರುಗಳಲ್ಲಿ ಒಬ್ಬರಾದ ಕೃಪಾ ಫಡ್ಕೆಯವರ ಶಿಷ್ಯೆ ಎಂ.ಆರ್. ರಶ್ಮಿ, ಜಗನ್ಮೋಹನ ಅರಮನೆಯ ಸಾಂಸ್ಕೃತಿಕ ವೇದಿಕೆಯಲ್ಲಿ ಹಿನ್ನೆಲೆ ತಾಳ, ಮೇಳದ ಗಾಯನಕ್ಕೆ ಪೂರಕವಾಗಿ ಲಯ, ಗತಿ, ಕರವಿನ್ಯಾಸ ಹಾಗೂ ಅಪೂರ್ವ ಹಾವಭಾವಗಳಿಂದ ಗೆಜ್ಜೆನಾದದ ಹೆಜ್ಜೆ ಹಾಕುವುದರ ಮೂಲಕ ಶಾಸ್ತ್ರೀಯ ಭರತನಾಟ್ಯ ಕಲಾಲೋಕಕ್ಕೆ ಪಾದಾರ್ಪಣೆ ಮಾಡಿದರು.