ನಿಮ್ಮ ಪಡಸಾಲೆ ಅಥವಾ ಲಿವಿಂಗ್ ರೂಮ್ ಸುಂದರವಾಗಿ ಕಾಣಬೇಕಾದಲ್ಲಿ ಅತಿಯಾದ ಖರ್ಚಿನ ಅಗತ್ಯವಿಲ್ಲ, ಸರಳವಾಗಿ ಕಡಿಮೆ ವಸ್ತುಗಳಲ್ಲೇ ಅಲಂಕರಿಸುವಿಕೆ ಇರಲಿ ಮತ್ತು ಉಪಯುಕ್ತತೆಯ ಕಡೆಯೂ ಗಮನವಿರಲಿ.
ಒಂದಿಲ್ಲೊಂದು ದಿನ ಸ್ವಂತ ಮನೆ ಮಾಡಿಕೊಳ್ಳಬೇಕೆಂಬುದು ಎಲ್ಲರ ಜೀವನದ ಕನಸಂತೂ ಹೌದು. ಸಣ್ಣದೋ, ಪುಟ್ಟದೋ, ದೊಡ್ಡದೋ, ಊರಾಚೆಯೋ ಅಥವಾ ಊರ ಒಳಗೋ ಎಲ್ಲರಿಗೂ ಒಂದು ಸ್ವಂತ ಮನೆ ಬೇಕೇಬೇಕು. ಇಲ್ಲವಾದಲ್ಲಿ ಬಾಡಿಗೆ ಮನೆಗಳನ್ನು ಬದಲಿಸುವುದರಲ್ಲಿ ಜೀವನ ಕಳೆದು ಹೋಗಿಬಿಡುತ್ತದೆ. ಇಂದು ಇದ್ದ ಬಾಡಿಗೆ ನಾಳೆ ಇಲ್ಲ, ಯಾವಾಗಲಾದರೂ ಮನೆ ಬಿಡಬೇಕಾಗಬಹುದು.
ಇವೆಲ್ಲದರ ಶಾಶ್ವತ ಪರಿಹಾರವೆಂಬಂತೆ ಪ್ರತಿಯೊಬ್ಬರೂ ಜೀವನದಲ್ಲಿ ತಮ್ಮದೇ ಆದ ಮನೆಯನ್ನು ಕಟ್ಟಿಕೊಳ್ಳಲು ಬಯಸುತ್ತಾರೆ. ಮನೆ ಕಟ್ಟುವುದೆಂದಾಗ ಮನೆ ಹೇಗಿರಬೇಕೆನ್ನುವ ರೂಪುರೇಷೆಯ ತಯಾರಿ ಪ್ರಾರಂಭವಾಗುತ್ತದೆ. ಆಗ ಮನೆಯ ಯಾವ ವಿಭಾಗಗಳು ಹೇಗಿರಬೇಕೆಂದು ಯೋಚಿಸುವಾಗ ಎಲ್ಲಕ್ಕಿಂತ ಮೊದಲ ಆದ್ಯತೆ ಮನೆಯೊಡತಿಯ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಲಿವಿಂಗ್ ರೂಮ್ ಅರ್ಥಾತ್ ಪಡಸಾಲೆಯದಾಗುತ್ತದೆ.
ಆಕರ್ಷಣೆಯ ಜೊತೆ ಉಪಯುಕ್ತತೆ
ಮನೆಗೆ ಬಂದವರ ಮೊದಲ ನೋಟ ಬೀಳುವುದು ಪಡಸಾಲೆಗೇ, ನಂತರ ಮಿಕ್ಕ ಸ್ಥಳಗಳ ಕಡೆ ನೋಡುಗರ ಗಮನ ಹೋಗುತ್ತದೆ. ಆದ್ದರಿಂದ ಒಳಾಂಗಣ ಅಲಂಕಾರದ ಜಾಣ್ಮೆ ಪಡಸಾಲೆಯನ್ನು ಅಂದವಾಗಿ ರೂಪಿಸುವುದೇ ಆಗಿರುತ್ತದೆ. ಬರೀ ಚಂದವಾಗಿದ್ದರೆ ಸಾಕೇ? ಅದು ಉಪಯುಕ್ತ ಆಗಿರಬೇಕು. ಮನೆಯವರೆಲ್ಲರೂ ಒಟ್ಟಿಗೆ ಕುಳಿತು ಅವರ ದಿನದ ಹೆಚ್ಚು ಸಮಯವನ್ನು ಅಲ್ಲೇ ಕಳೆಯುವುದರಿಂದ ಮನೆಯ ಎಲ್ಲ ಸದಸ್ಯರಿಗೂ ಅನುಕೂಲಕರವಾಗಿರುವುದು ಬಹು ಮುಖ್ಯವಾಗುತ್ತದೆ. ಎಲ್ಲ ವಯಸ್ಸಿನವರೂ ಅಲ್ಲಿ ಆರಾಮವಾಗಿ ಕುಳಿತುಕೊಳ್ಳುವಂತೆ ಪೀಠೋಪಕರಣಗಳನ್ನು ಜೋಡಿಸಬೇಕಾಗುತ್ತದೆ. ಮನೆಯವರೆಲ್ಲರ ಮುಖ್ಯ ಆಕರ್ಷಣೆಯಾದ ಟಿ.ವಿ.ಯೂ ಪಡಸಾಲೆಯಲ್ಲೇ ಪ್ರತಿಷ್ಠಿತವಾಗಿರುವುದರಿಂದ ಎಲ್ಲರೂ ಅಲ್ಲಿ ತಮ್ಮ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಈಗಂತೂ ಅನೇಕ ಮನೆಗಳಲ್ಲಿ ಎಲ್ಲರ ಕೋಣೆಯಲ್ಲೂ ಟಿ.ವಿ. ಇರುತ್ತದೆ ಮತ್ತು ಹೋಮ್ ಥಿಯೇಟರ್ ಎಂದು ಪ್ರತ್ಯೇಕವಾಗಿ ಒಂದು ದೊಡ್ಡ ಸ್ಥಳವನ್ನೇ ರೂಪಿಸಲಾಗಿರುತ್ತದೆ. ಆದರೂ ನಮ್ಮ ಬಹಳಷ್ಟು ಮಧ್ಯಮ ವರ್ಗದ ಮನೆಗಳಲ್ಲಿ ಪಡಸಾಲೆಯಲ್ಲಿ ಕುಳಿತು ಟಿ.ವಿ. ನೋಡುವುದೇ ಹೆಚ್ಚು. ಆದ್ದರಿಂದ ಪಡಸಾಲೆಯ ಆಸನಗಳನ್ನು ರೂಪಿಸುವಾಗ ಈ ವಿಷಯವನ್ನು ಖಂಡಿತ ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ.
ಎಲ್ಲರಿಗೂ ಹೊಂದಿಕೊಳ್ಳುವ ಪೀಠೋಪಕರಣ
ಪಡಸಾಲೆಯ ಅಂದವನ್ನು ಹೆಚ್ಚಿಸುವ ಸೋಫಾ ಸೆಟ್ ನ ಜೊತೆ ವಯಸ್ಸಾದವರು ಕುಳಿತುಕೊಳ್ಳಲು ಒಂದು ಆರಾಮ ಕರ್ಚಿ, ಹರೆಯದವರಿಗೆ ಒಳಗೆ ಹುದುಗಿಹೋಗುವಂತಹ ಬೀನ್ ಬ್ಯಾಗ್, ಪಡಸಾಲೆಯ ಅಂದವನ್ನು ಹೆಚ್ಚಿಸುವುದರ ಜೊತೆಗೆ ಕುಳಿತು ಆಡುವ ಪುಟಾಣಿಗಳಿಗಾಗಿ ಸೋಫಾ ಸೆಟ್ ನ ಮುಂದುಗಡೆ ಮೃದುವಾದ ಒಂದು ಸುಂದರ ರತ್ನಗಂಬಳಿ, ಮನೆಯಲ್ಲಿನ ಸಂಗೀತಪ್ರಿಯರಿಗಾಗಿ ಒಂದು ಮೂಲೆಯಲ್ಲಿ ಕ್ಯಾಸಿಯೋ ಹೀಗೆ…. ಎಲ್ಲದಕ್ಕೂ ಸ್ಥಳ ರೂಪಿಸಬೇಕಾಗುತ್ತದೆ.
ಪಡಸಾಲೆಯನ್ನು ಅಂದಗೊಳಿಸುವ ನಿಟ್ಟಿನಲ್ಲಿ ಕಂಡ ಕಂಡ ಸುಂದರ ವಸ್ತುಗಳೆಲ್ಲವನ್ನೂ ಅಲ್ಲಿಯೇ ಪೇರಿಸಬೇಕಾಗಿಲ್ಲ, ಯಾವುದೇ ಸ್ಥಳವಾದರೂ ಅಲ್ಲಿ ವಸ್ತುಗಳು ತುಂಬಿಕೊಂಡಂತೆ ಇದ್ದಾಗ ಸ್ಥಳ ಇಕ್ಕಟ್ಟೆನಿಸುತ್ತದೆ. ಆದ್ದರಿಂದ ಅತ್ಯಂತ ಕಡಿಮೆ ವಸ್ತುಗಳಿದ್ದಾಗ ಸ್ಥಳ ವಿಶಾಲವಾಗಿ ಸುಂದರ ನೋಟವನ್ನು ನೀಡುತ್ತದೆ.
ಬೆಳಕಿನ ವಿನ್ಯಾಸ ಲಿವಿಂಗ್ ರೂಮ್ ಗೆ ಸಾಕಷ್ಟು ನೈಸರ್ಗಿಕ ಬೆಳಕಿದ್ದರೆ ಚೆನ್ನ. ವಿಶಾಲವಾದ ಕಿಟಕಿಗಳಿದ್ದಾಗ ಬೆಳಕಿನ ಜೊತೆ ಗಾಳಿಯೂ ಬೀಸುತ್ತದೆ. ಈಗೀಗ ನಗರದಲ್ಲಂತೂ ನಿವೇಶನದ ಬೆಲೆ ಗಗನಕ್ಕೇರಿರುವುದರಿಂದ ಯಾರೂ ಒಂದು ಇಂಚಿನಷ್ಟು ಸ್ಥಳವನ್ನೂ ವ್ಯರ್ಥ ಮಾಡಲು ಇಷ್ಟಪಡುವುದಿಲ್ಲ. ಆದರೂ ಗಾಳಿ ಬೆಳಕಿನ ಕಡೆ ಗಮನ ನೀಡುವುದು ಅಗತ್ಯವೇ ಸರಿ. ನಿವೇಶನ ವಿಶಾಲವಾಗಿದ್ದು ಅವಕಾಶವಿದ್ದರೆ ಪಡಸಾಲೆಯ ಪಕ್ಕಕ್ಕೆ ನಿಮ್ಮ ಸುಂದರ ಹಸಿರು ತೋಟವಿದ್ದಲ್ಲಿ ನಿಮ್ಮ ಭಾಗ್ಯಕ್ಕೆ ಎಣೆಯೇ ಇಲ್ಲ. ಪಡಸಾಲೆಯಲ್ಲಿ ಕುಳಿತಾಗ ವಿಶಾಲವಾದ ಗಾಜಿನ ಕಿಟಕಿಗಳ ಮೂಲಕ ಹಸಿರು ಹೂವಿನ ತೋಟದ ದೃಶ್ಯ ಕಂಡರೆ ನಿಜಕ್ಕೂ ನಗರ ಜೀವನದ ಒತ್ತಡಗಳೆಲ್ಲಾ ಮಾಯವಾಗಿಬಿಡುತ್ತದೆ. ಇಲ್ಲವಾದಲ್ಲಿ ಲಭ್ಯವಿರುವ ಸ್ವಲ್ಪ ಸ್ಥಳದಲ್ಲೇ ಕೆಲವು ಕುಂಡಗಳನ್ನಿಡಬಹುದು. ಮನೆಗೆ ಬೇಕಾದ ಹೂವು ತರಕಾರಿ ಬೆಳೆಸಬಹುದು. ಇಲ್ಲವಾದಲ್ಲಿ ಹಸಿರು ಎಲೆಗಳ ನೋಟವೇ ಸಾಕು, ಶುದ್ಧ ಗಾಳಿಯನ್ನು ಸೇವಿಸುವ ಅನುಭವ ನಿಮ್ಮದಾಗುವುದಂತೂ ಖಂಡಿತ. ನಮ್ಮ ಮನೆಯ ಮುಂದೆ ಇರುವ ಬಹಳ ಸಣ್ಣ ಸ್ಥಳದಲ್ಲೇ ಬೆಳೆದ ಅರಿವೆಸೊಪ್ಪಿನ ಹುಳಿ ಮಾಡಿ ತಿಂದಾಗ ನಿಜಕ್ಕೂ ನಮಗಾದ ಆನಂದ ಅಪಾರ! ಪಕ್ಕದಲ್ಲೇ ಇರುವ ದೊಡ್ಡಪತ್ರೆಯ ಚಟ್ನಿ ನಿಮ್ಮ ಊಟದ ರುಚಿಯನ್ನು ಮತ್ತೂ ಹೆಚ್ಚಿಸಬಹುದು. ಇದಕ್ಕೆಲ್ಲಾ ಹೆಚ್ಚಿನ ಸ್ಥಳ ಬೇಕಿಲ್ಲ, ಮಾಡುವ ಆಸಕ್ತಿ ಇದ್ದರೆ ಸಾಕು. ನೈಸರ್ಗಿಕ ಗಾಳಿ ಬೆಳಕು ನೋಟದ ವಿಷಯವಾಯಿತು, ಇವನ್ನು ಅಗತ್ಯವಿರುವ ಬೆಳಕಿನ ವಿನ್ಯಾಸವನ್ನು ರೂಪಿಸುವಾಗ ಅಲ್ಲಿ ಕುಳಿತು ಓದುವವರ, ಟಿ.ವಿ. ನೋಡುವವರ ಕಣ್ಣಿಗೆ ಹಾನಿಯಾಗದಂತಹ ವಿನ್ಯಾಸ ಸೂಕ್ತ. ಓದುವವರ ಬೆನ್ನ ಹಿಂದಿನಿಂದ ಬೆಳಕು ಬಂದಾಗ ಕಣ್ಣುಗಳಿಗೆ ಶ್ರಮವಾಗದು.
ಟಿ.ವಿ. ಹಿಂದೆ ಒಂದು ಲೈಟ್ ಇದ್ದಾಗ ಅದರ ಬೆಳಕಿನ ತೀಕ್ಷ್ಣತೆಯಿಂದ ನಮ್ಮ ಕಣ್ಣುಗಳಿಗೆ ಹಾನಿಯಾಗದು. ಇನ್ನು ಅಲಂಕಾರದ ವಿಷಯಕ್ಕೆ ಬಂದರೆ ಅಂದದ ಜೊತೆಗೆ ಶುದ್ಧ ಮಾಡಲು ಅನುಕೂಲವಾಗಿರುವಂತಹ ಬೆಳಕಿನ ಉಪಕರಣಗಳೇ ಮೇಲು. ಅತಿಯಾದ ಕುಸುರಿ ಕೆಲಸದ ಉಪಕರಣಗಳ ಮೇಲೆ ಬಿದ್ದ ಧೂಳನ್ನು ಒರೆಸಲು ಖಂಡಿತ ಕಷ್ಟ. ಮನೆ ಎಂದಾಗ ಯಾವುದೇ ವಿಷಯಕ್ಕೆ ಬಂದಾಗ ಅಂದದ ಜೊತೆಗೆ ಅನುಕೂಲ ಮತ್ತು ಉಪಯುಕ್ತತೆಯ ಕಡೆಯೂ ಗಮನ ನೀಡುವುದು ಅತ್ಯಗತ್ಯ. ಪಡಸಾಲೆಯ ಸೂರಿಗೆ ಫಾಲ್ಸ್ ಸೀಲಿಂಗ್ ಮಾಡಿಸಿ ಅಲ್ಲಿ ಬೆಳಕಿನ ಉಪಕರಣಗಳನ್ನು ಹುದುಗಿಸಿದಾಗ ಸುಂದರ ನೋಟ ನೀಡುವುದಾದರೂ ಇದು ಸ್ವಲ್ಪ ದುಬಾರಿಯ ಬಾಬತ್ತೇ ಸರಿ. ನಿಮ್ಮ ಬಜೆಟ್ ಸಮ್ಮತಿಸಿದರೆ ಮಾಡಿಸುವುದರಲ್ಲಿ ಯಾವುದೇ ಅಭ್ಯಂತರವಿಲ್ಲ.
ಬಣ್ಣದ ಕಚಗುಳಿ ನಿವೇಶನ ವಿಶಾಲವಾಗಿದ್ದಾಗ ನೀವು ಬಣ್ಣಗಳೊಡನೆ ಆಟವಾಡಬಹುದು. ಒಂದೊಂದು ಗೋಡೆಗೆ ಒಂದೊಂದು ಬಣ್ಣ ಆರಿಸಬಹುದು. ಒಂದೆಡೆ ಗಾಢ ಮತ್ತೊಂದೆಡೆ ತಿಳಿಯ ಬಣ್ಣಗಳ ಮ್ಯಾಚ್ ಮಾಡಬಹುದು. ಇಲ್ಲವಾದಲ್ಲಿ ಒಂದು ಗೋಡೆಯಿಂದ ಮತ್ತೊಂದು ಗೋಡೆಗೆ ಸ್ವಲ್ಪ ಸ್ವಲ್ಪವೇ ಗಾಢವಾಗುತ್ತಾ ವಿಭಿನ್ನ ನೋಟವನ್ನು ಹೊಮ್ಮಿಸಬಹುದು. ಇವೆಲ್ಲಾ ನೋಡಲು ಬಹು ಚೆನ್ನವಾದರೂ ಮತ್ತೊಮ್ಮೆ ಬಣ್ಣ ಹೊಡೆಸುವಾಗ ಅದೇ ಮ್ಯಾಚಿಂಗ್ ಮಾಡುವುದು ಕಷ್ಟವಾಗಬಹುದು. ಆದ್ದರಿಂದ ತಿಳಿಯಾದ ಕೆನೆಯ ಬಣ್ಣ ತಂಪಾಗಿ ಮನಕ್ಕೆ ಮುದವನ್ನು ನೀಡುತ್ತದೆ.
ವಿದೇಶಗಳ ಎಲ್ಲ ಮನೆಗಳಲ್ಲೂ ಕೆನೆ ಬಣ್ಣವನ್ನೇ ಬಳಸುತ್ತಾರೆ ಮತ್ತು ಬಹಳ ಸರಳವಾಗಿ ಪಡಸಾಲೆಯನ್ನು ಅಲಂಕರಿಸುತ್ತಾರೆ. ಅದು ನಿಜಕ್ಕೂ ನೋಡಲು ಬಲು ಚಂದವೆನಿಸುತ್ತದೆ. ಜೊತೆಗೆ ತಿಳಿಯಾದ ಬಣ್ಣಗಳನ್ನು ಬಳಸಿದಾಗ ಸ್ಥಳ ವಿಶಾಲವಾಗಿ ಕಾಣುತ್ತದೆ. ಅಮೆರಿಕಾದ ಮನೆಗಳನ್ನು ಬಹಳ ಸರಳವಾಗಿ ತಿಳಿ ಬಣ್ಣಗಳಿಂದ ಅಲಂಕರಿಸುತ್ತಾರೆ. ನಮ್ಮ ಏಷ್ಯನ್ನರೇ ಸ್ವಲ್ಪ ಢಾಳಾದ ಅಲಂಕಾರ ಮಾಡುವುದು. ಇರಲಿ ಬಿಡಿ, ಆಯ್ಕೆ ನಿಮ್ಮದು. ನೀವು ಆರಿಸುವ ಬಣ್ಣ ಎಲ್ಲಕ್ಕಿಂತಾ ನಿಮ್ಮ ಮನಕ್ಕೆ ಸಂತಸವನ್ನಿತ್ತರಾಯಿತು.
ನೆಲ
ನೆಲದ ವಿಷಯಕ್ಕೆ ಬಂದಾಗ ಈ ಮಾರುಕಟ್ಟೆಯಲ್ಲಿ ವಿಪುಲವಾದ ಆಯ್ಕೆಗಳಿವೆ. ವಿಟ್ರಿಫೈಡ್ ಟೈಲ್ಸ್ ನಲ್ಲೇ ವಿಭಿನ್ನ ರೀತಿಗಳಿವೆ. ಇನ್ನು ಮಾರ್ಬಲ್, ಇಟಾಲಿಯನ್ ಮಾರ್ಬಲ್, ಗ್ರಾನೈಟ್, ಮರದ ನೆಲ, ಮರದಂತೆ ಕಾಣುವ ವಿಟ್ರಿಫೈಡ್, ಈ ರೀತಿ ತರಹೇವಾರಿ ಆಯ್ಕೆಗಳಿವೆ. ಇಲ್ಲೂ ನಿಮ್ಮ ಬಜೆಟ್, ಸ್ಥಳಾವಕಾಶ, ನಿಮ್ಮ ಆಸಕ್ತಿ ಎಲ್ಲಕ್ಕೂ ಗಮನ ನೀಡಿ ಆರಿಸಿಕೊಳ್ಳಬಹುದು.
ಅಲಂಕಾರ
ಅಗತ್ಯವಿರುವುದೆಲ್ಲಾ ಮುಗಿದಾಗ ಅಲಂಕಾರದ ಕಡೆಯೂ ನಮ್ಮ ಗಮನ ಹೋಗುತ್ತದೆ. ಬಂದವರೆಲ್ಲರ ಮೊದಲ ನೋಟ ಬೀಳುವುದು ಪಡಸಾಲೆಯಲ್ಲೇ, ಹೀಗಿರುವಾಗ ನೋಡಿದವರು ವಾಹ್ ಎನ್ನಲಿ ಎನ್ನುವುದು ಎಲ್ಲರ ಮನದಾಳದ ಆಸೆಯೇ ಸರಿ. ಆದರೂ ಅಲಂಕಾರಕ್ಕಾಗಿ ಆರಿಸುವ ವಸ್ತುಗಳು ಬಹಳ ಕಡಿಮೆ ಇರಲಿ ಮತ್ತು ಅಪರೂಪದ್ದಾಗಿರಲಿ. ಗೋಡೆಗೆ ಯಾವುದಾದರೂ ಒಂದು ಕಲಾತ್ಮಕ ಚಿತ್ರ, ಮೂಲೆಗೊಂದು ಸುಂದರ ಕ್ರಿಸ್ಟಲ್ ಹೂದಾನಿ ಇಲ್ಲವೇ ಸುಂದರ ಶಿಲ್ಪ, ಈ ರೀತಿ ನಿಮ್ಮ ಆಯ್ಕೆ ಸರಳವಾಗಿರಲಿ. ಅತಿಯಾಗಿ ವಸ್ತುಗಳನ್ನು ತುಂಬಬೇಡಿ. ಪಡಸಾಲೆಯ ಕಿಟಕಿ ಬಾಗಿಲುಗಳಿಗೆ ಹಾಕುವ ಪರದೆಗಳೂ ಸಹ ಸರಳವಾಗಿರಲಿ. ಈಚೆಗಂತೂ ಬೆಳಗಿನ ಬಿಸಿಲನ್ನು ತಡೆಯಲು ಮತ್ತು ಸಂಜೆಗಾಗಿಯೇ ವಿಭಿನ್ನ ಎಂದು ಒಂದೇ ಕಿಟಕಿಗೆ ಎರಡು ರೀತಿಯ ಪರದೆಗಳನ್ನು ಹಾಕುತ್ತಾರೆ. ನಿಮ್ಮ ಕಿಟಕಿ ಇರುವ ಸ್ಥಳಕ್ಕನುಗುಣವಾಗಿ ಇವನ್ನು ಆರಿಸಿಕೊಳ್ಳಿ. ಎಲ್ಲ ಮುಗಿಯಿತೆಂದಾಗ ಕೊನೆಗೆ ನೀವು ಹಾಸುವ ಒಂದು ಸುಂದರ ರತ್ನಗಂಬಳಿ, ನಿಮ್ಮ ಪಡಸಾಲೆಯ ಅಲಂಕಾರ ಒಂದು ಹದಕ್ಕೆ ಬಂದಿತೆಂದೇ ಅರ್ಥ.
ಸ್ಪೆಷಲ್ ಎಫೆಕ್ಟ್ ನ ಕಮಾಲ್!
ನಿಮಗೆ ಸಾಕಷ್ಟು ಸ್ಥಳಾವಕಾಶವಿದ್ದು ಹಣದ ಅನುಕೂಲ ಇದ್ದರೆ ಅದ್ಭುತಗಳನ್ನು ಸೃಷ್ಟಿಸಬಹುದು. ಪಡಸಾಲೆಯಲ್ಲೇ ಹಸಿರಿನ ತೋಟ ಮೂಡಿಸಬಹುದು. ಇಲ್ಲವಾದಲ್ಲಿ ಪಕ್ಕದಲ್ಲೇ ನಂದನವನದ ನೋಟ ನೀಡಬಹುದು. ಸೋಫಾ ಮೇಲೆ ಕುಳಿತು ಪತ್ರಿಕೆಯ ಮೇಲೆ ದೃಷ್ಟಿ ಹಾಯಿಸುವುದರ ಜೊತೆಗೆ ನೀರಿನ ತುಂತುರು ನಿಮ್ಮನ್ನು ಸ್ಪರ್ಶಿಸುವಂತೆ ಮಾಡಬಹುದು. ತಾರಸಿ ಮೇಲಿನಿಂದ ನಿಮ್ಮ ಪಡಸಾಲೆಯ ಗಾಜಿನ ಗೋಡೆಯ ಮೇಲೆ ನೀರು ಇಳಿದು ಮೂಡಿಸುವ ನೋಟ ಎಲ್ಲರೂ ವಾಹ್ ಎಂದು ಉದ್ಗರಿಸುವಂತೆ ಮಾಡಬಹುದು. ಆದರೆ ಇವೆಲ್ಲಾ ಸ್ವಲ್ಪ ಖರ್ಚಿನ ವಿಷಯ, ಜೊತೆಗೆ ನಿವೇಶನ ಅತಿ ದುಬಾರಿಯಾಗಿರುವ ನಮ್ಮ ಬೆಂಗಳೂರಿನಲ್ಲಿ ಬಹು ಅಪರೂಪ ಎನ್ನಬಹುದು.
ಇಷ್ಟೆಲ್ಲಾ ಕನಸುಗಳ ಬೆನ್ನೇರಿ ಹೋಗಬೇಕೆ? ಅನುಕೂಲಕರವಾದ ಅಚ್ಚುಕಟ್ಟಾದ ನಿಮ್ಮ ಜೀವನಶೈಲಿಗೆ ಅನುಗುಣವಾದ, ಒಳಗೆ ಪ್ರವೇಶಿಸಿದೊಡನೆಯೇ ನಿಮ್ಮಲ್ಲಿ ಜೀವಂತಿಕೆಯ ಕೆಟಲಿಸ್ಟ್ ನಂತೆ ಕಾರ್ಯ ನಿರ್ವಹಿಸುವ ಪಡಸಾಲೆಗಿಂತ ಮತ್ತಿನ್ನೇನು ಬೇಕು, ಅಲ್ಲವೇ? ಅಷ್ಟೊಂದು ಖರ್ಚು ಮಾಡಿ ಕಷ್ಟಪಟ್ಟು ಕಟ್ಟಿಸಿದ ಮನೆಯವರ ಮನಸ್ಸಿಗೆ ಸಂತಸ ನೀಡುವ ಜೀವಂತಿಕೆಯನ್ನು ಪ್ರತಿಬಿಂಬಿಸುವ ಪಡಸಾಲೆ ನಿಮ್ಮದಾಗಲಿ!
– ಮಂಜುಳಾ ರಾಜ್.