ಅವತ್ತು ಭಾನುವಾರವಾಗಿದ್ದರಿಂದ ರಾಹುಲ್ ಇನ್ನೂ ಮಲಗಿದ್ದ. ಟೆಲಿಫೋನ್‌ ಗಂಟೆ ಒಂದೇ ಸಮನೆ ಬಾರಿಸತೊಡಗಿತ್ತು. ಇಂತಹ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಸ್ನೇಹಾಳೇ ಕಾಲ್ ಗಳನ್ನು ರಿಸೀವ್ ‌ಮಾಡುವುದು, ಪ್ರತಿದಿನ ಬೆಳಗ್ಗೆ ಬೆಡ್‌ ಕಾಫಿ ತೆಗೆದುಕೊಂಡು ಬಂದು ಮಂಚದ ಪಕ್ಕದ ಟೀಪಾಯ್‌ ಮೇಲಿಟ್ಟು ರಾಹುಲ್ ‌ನನ್ನು ಎಬ್ಬಿಸುವುದು ಸಂಪ್ರದಾಯ. ಇಂದು ಅದು ಕೂಡ ಮಿಸ್ಸಿಂಗ್‌. ಸ್ನೇಹಾಳನ್ನು ಕೂಗಿದನಾದರೂ ಯಾವುದೇ ಪ್ರತಿಕ್ರಿಯೆ ಬರದಿದ್ದರಿಂದ, ರಾಹುಲ್ ‌ಸ್ವತಃ ಮಂಚದಿಂದ ಎದ್ದು ಟೆಲಿಫೋನ್‌ ನತ್ತ ನಡೆದ.

“ಹಲೋ, ನಾನು ಸ್ನೇಹಾ ಮಾತಾಡ್ತಾ ಇದೀನಿ,” ಅತ್ತಲಿಂದ ಸ್ನೇಹಾಳ ಧ್ವನಿ ಕೇಳಿಸಿತ್ತು.

“ಅರೆ, ಎಲ್ಲಿಂದ ಮಾತನಾಡುತ್ತಿರುವೆ?” ಎಂದು ಕೇಳಿದ.

“ನಾನು ಅಪಾರ್ಟ್‌ ಮೆಂಟ್‌ ನಲ್ಲಿ ಒಂದು ಫ್ಲ್ಯಾಟ್‌ ಬಾಡಿಗೆಗೆ ತೆಗೆದುಕೊಂಡಿದ್ದೇನೆ. ಇನ್ನು ಮುಂದೆ ನಾನು ನಿನ್ನೊಂದಿಗೆ ಇರಲು ಸಾಧ್ಯವಿಲ್ಲ.”

“ಇಲ್ಲ….ಇಲ್ಲ…. ನೀನು ಹಾಗೆಲ್ಲ ಮಾಡಬಾರದು,” ಎಂದು ರಾಹುಲ್ ‌ಆತಂಕದಿಂದ ಹೇಳಿದ.

“ಇಲ್ಲ ರಾಹುಲ್‌, ನಾನು ಏನು ಯೋಚಿಸಿದ್ದೇನೊ ಅದನ್ನೇ ಮಾಡೋದು. ನೀನು ಕೆಲಸವಿಲ್ಲದೆ ಅಲೆಯುವುದು, ನನ್ನ ಸಂಪಾದನೆಯಲ್ಲೇ ಸಂಸಾರ ನಿಭಾಯಿಸುವುದು, ಇದೆಲ್ಲ ಎಷ್ಟು ದಿನಗಳವರೆಗೆ ನಡೆಯುತ್ತೆ? ನಾನೇನು ನಿನಗೆ ಡೈವೋರ್ಸ್ ಕೊಡುತ್ತಿಲ್ಲ. ಒಂದು ಹಂತದವರೆಗೆ ಒಂಟಿಯಾಗಿ ಬದುಕುವೆ ಅಷ್ಟೆ. ನಾನು ನಿನ್ನನ್ನು ತುಂಬಾ ಇಷ್ಟಪಡುತ್ತೇನೆ ರಾಹುಲ್‌, ಆದರೆ ನಿನ್ನನ್ನು ಇಂತಹ ನಿಷ್ಪ್ರಯೋಜಕ ಸ್ಥಿತಿಯಲ್ಲಿ ನೋಡಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನೀನು ಏನಾದರೊಂದು ಸಾಧಿಸಿದಾಗಲೇ ನಿನ್ನೊಂದಿಗೆ ಒಂದಾಗುವುದಾಗಿ ನಿಶ್ಚಯಿಸಿದ್ದೇನೆ.”

“ನಿನ್ನ ತವರುಮನೆಗಾದರೂ ಹೋಗಬಹುದಿತ್ತಲ್ಲ. ಅಲ್ಲಿ ಉಳಿದರೆ ಎಲ್ಲಾ ರೀತಿಯ ಅನುಕೂಲವಿರುತ್ತೆ,” ಎಂದು ರಾಹುಲ್ ಸಲಹೆ ನೀಡಿದ. ಈ ಮಾತು ಕೇಳಿ ಕೋಪಗೊಂಡ ಸ್ನೇಹಾ, “ತವರುಮನೆಗೆ ಹೋಗುವುದಂತೂ ಸಾಧ್ಯವೇ ಇಲ್ಲ. ನನ್ನ ಸ್ವಾಭಿಮಾನ ಇದಕ್ಕೆ ಒಪ್ಪಲಾರದು. ಚಿಂತಿಸಬೇಡ, ನಾನು ಎಲ್ಲರೊಂದಿಗೂ ಸಂಪರ್ಕದಲ್ಲಿರುತ್ತೇನೆ. ಆದರೆ ನೀನು ಮಾತ್ರ ಜೀವನದಲ್ಲೊಂದು ಉತ್ತಮ ಸಾಧನೆ ಮಾಡಿದ ನಂತರವೇ ನಿನ್ನ ಜೊತೆಗೂಡುತ್ತೇನೆ,” ಎಂದಳು.

ರಾಹುಲ್ ‌ಗೆ ಕ್ಷಣಕಾಲ ದಿಕ್ಕು ತೋಚದಂತಾಯಿತು. ಸ್ನೇಹಾ ಹೀಗೆ ತನ್ನನ್ನು ತೊರೆದು ಒಂಟಿಯಾಗಿ ಬಾಳುವ ನಿರ್ಧಾರ ತಳೆಯಬಲ್ಲಳೆಂದು ಆತ ಕನಸು ಮನಸ್ಸಿನಲ್ಲೂ ಯೋಚಿಸಿರಲಿಲ್ಲ. ಸುಧಾರಿಸಿಕೊಂಡ ರಾಹುಲ್‌, “ನೀನು ಒಂಟಿಯಾಗಿ ಬಾಳುವ ನಿರ್ಧಾರವೇ ಅಂತಿಮವಾಗಿದ್ದಲ್ಲಿ, ನಿನ್ನ ತಂದೆಗೂ ಒಂದು ಸಲ ತಿಳಿಸುವುದು ಉತ್ತಮ,” ಎಂದ.

ಸ್ನೇಹಾಳಿಗೂ ಅವನ ಮಾತು ಸಮಂಜಸವೆನಿಸಿತು. ಅವಳ ತಂದೆ ತವರಿಗೇ ಬಂದುಬಿಡು ಎಂದು ಆಹ್ವಾನಿಸಿದಾಗ, “ಅಪ್ಪ, ಇಷ್ಟು ವರ್ಷ ನೀವು ನನ್ನನ್ನು ಹೆತ್ತು, ಹೊತ್ತು, ಬೆಳೆಸಿ, ಓದಿಸಿ ಸ್ವಾವಲಂಬಿಯನ್ನಾಗಿ ಮಾಡಿದ್ದೀರಿ. ನಾನೇನೂ ರಾಹುಲ್ ‌ಗೆ ಡೈವೋರ್ಸ್‌ ಕೊಡುತ್ತಿಲ್ಲ. ನಾನು ರಾಹುಲ್ ‌ನನ್ನು ಅದೆಷ್ಟು ಇಷ್ಟಪಡುತ್ತೇನೆಂದು ನಿಮಗೂ ತಿಳಿದೇ ಇದೆ. ನಿಮ್ಮ ಮತ್ತು ಅಮ್ಮನ ಒಪ್ಪಿಗೆ ಇಲ್ಲದಿದ್ದರೂ ರಾಹುಲ್ ನನ್ನೇ ಮದುವೆಯಾದೆ. ಒಟ್ಟಾರೆ ರಾಹುಲ್ ‌ಒಬ್ಬ ಯಶಸ್ವಿ ಪುರುಷನಾಗಬೇಕು ಎಂಬುದಷ್ಟೇ ನನ್ನ ಉದ್ದೇಶ,” ಎಂದಳು.

ಸ್ನೇಹಾಳ ಆಲೋಚನೆ ಅವಳ ತಂದೆಗೆ ಸಂಪೂರ್ಣ ಅರ್ಥವಾಯಿತು. “ಸ್ನೇಹಾ, ಈ ನಿನ್ನ ಕಠಿಣ ನಿರ್ಧಾರಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ  ಮಗಳೇ, ಆದರೂ ಏನಾದರೂ ಸಹಕಾರ ಬೇಕಾದಾಗ ನಮ್ಮನ್ನು ಕೇಳಲು ಸಂಕೋಚಪಟ್ಟುಕೊಳ್ಳಬೇಡ ಅಷ್ಟೇ,” ಎಂದರು.

ಏಕಾಏಕಿ ಸ್ನೇಹಾ ಮನೆಬಿಟ್ಟು ಹೋಗಿರುವುದು ರಾಹುಲ್‌ಗೆ ಇಷ್ಟವಾಗಲಿಲ್ಲವಾದರೂ, ತಾನು ಏನಾದರೊಂದು ನೌಕರಿ ಅಥವಾ ಬಿಸ್‌ ನೆಸ್‌ ಮಾಡಿ ಯಶಸ್ವಿಯಾದ ನಂತರವೇ ಒಟ್ಟಿಗೆ ಬಾಳುವುದನ್ನು ಖಚಿತವಾಗಿ ಹೇಳಿದ್ದನ್ನು ಕೇಳಿ ಕೊಂಚ ನಿರಾಳವಾದನು. ನಿನ್ನ ಸಂಪೂರ್ಣ ಗಮನವನ್ನು ಗುರಿಯತ್ತ ಕೇಂದ್ರೀಕರಿಸು ಎಂದು ಹೇಳಿದ ಸ್ನೇಹಾಳ ಮಾತಿನಲ್ಲಿ ರಾಹುಲ್ ‌ಬಗೆಗಿರುವ ಕಾಳಜಿ ಸ್ಪಷ್ಟವಾಗಿ ಗೋಚರಿಸಿತ್ತು. ರಾಹುಲ್ ‌ತನ್ನನ್ನು ಭೇಟಿ ಮಾಡುವ ಪ್ರಯತ್ನ ಮಾಡುವುದು ಮೊಬೈಲ್ ‌ನಲ್ಲಿ ಪದೇ ಪದೇ ಚರ್ಚೆ ಮಾಡುವುದು ಬೇಡ ಎಂದೂ ತಾಕೀತು ಮಾಡಿದ್ದಳು. ಆದರೆ ತನ್ನ ಫ್ಲ್ಯಾಟಿನ ವಿಳಾಸ ಕೂಡ ತಿಳಿಸದೆ ಅಲ್ಲಿಗೆ ಬರಲೇಬಾರದೆಂದು ನಿರ್ಬಂಧಿಸಿದ್ದು ಮಾತ್ರ ರಾಹುಲ್ ‌ಗೆ ನೋವನ್ನುಂಟು ಮಾಡಿತ್ತು. ತಾನು ಸ್ವಾವಲಂಬಿಯಾಗಿ, ಕೈತುಂಬಾ ಸಂಪಾದಿಸುವ ಆದಾಯ ಮೂಲವನ್ನು ಕಂಡುಕೊಂಡು, ತನ್ನ ಅವಶ್ಯಕತೆಗಳನ್ನು ಪೂರೈಸುವಷ್ಟು ಸಮರ್ಥನಾಗುವಂತಾದ ಮೇಲೆಯೇ ನನ್ನನ್ನು ನೋಡಬಹುದು ಎಂದಿದ್ದಳು.

ತನಗಿನ್ನೂ ಮಗುವಾಗಿಲ್ಲದೇ ಇರುವುದರಿಂದ ಆಫೀಸಿನ ಕರ್ತವ್ಯಗಳನ್ನು ನಿರಾಯಾಸವಾಗಿ ಪೂರೈಸಬಲ್ಲವಳಾಗಿದ್ದರಿಂದ ಸ್ನೇಹಾಳಿಗೂ ನೆಮ್ಮದಿಯಾಗಿತ್ತು. ಸ್ನೇಹಾಳ ಬಾಸ್‌ ಕೂಡ ಇಳಿವಯಸ್ಸಿನವರಾಗಿದ್ದು, ಮಾನವೀಯ ಮೌಲ್ಯಗಳಲ್ಲಿ ಭರವಸೆ ಹೊಂದಿದವರಾಗಿದ್ದರು. ಸಂಪೂರ್ಣ ಸರಳ ವ್ಯಕ್ತಿತ್ವ ಅವರದ್ದಾಗಿತ್ತು.

ಹೀಗಾಗಿ ಆಫೀಸ್‌ ವಾತಾವರಣ ಆರೋಗ್ಯಕರವಾಗಿತ್ತು. ಸ್ನೇಹಾಳ ಜಾಣ್ಮೆ, ಸಾಮರ್ಥ್ಯ ಮತ್ತು ಆಧುನಿಕತೆಯನ್ನು ಮೈಗೂಡಿಸಿಕೊಂಡಿದ್ದ ಕಾರಣ ಆಫೀಸಿನಲ್ಲಿ ತನ್ನದೇ ಆದ ವರ್ಚಸ್ಸನ್ನು ಉಳಿಸಿಕೊಂಡಿದ್ದಳು. ಸಹೋದ್ಯೋಗಿಗಳು ಕೂಡ ಅವಳನ್ನು ಆದರದಿಂದ ನೋಡುತ್ತಿದ್ದರು.

ರಾಹುಲ್ ‌ಸ್ನೇಹಾಳನ್ನು ಮೊಟ್ಟ ಮೊದಲ ಬಾರಿಗೆ ಕಾಲೇಜ್‌ ಕ್ಯಾಂಟೀನ್‌ ನಲ್ಲಿ ಕಂಡಿದ್ದ. ಆತ ತನ್ನ ತಂಗಿ ಸೀಮಾಳ ಬಿ.ಎ. ಅಡ್ಮಿಶನ್‌ ಗೆಂದು ಕಾಲೇಜಿಗೆ ತೆರಳಿದ್ದ. ಮೊದಲ ನೋಟದಲ್ಲೇ ಸ್ನೇಹಾ ಅವನಿಗೆ ಅದ್ಭುತವಾಗಿ ಕಂಡಿದ್ದಳು. ನಂತರದ ದಿನಗಳಲ್ಲಿ ತಂಗಿಯನ್ನು ಕಾಲೇಜಿಗೆ ಡ್ರಾಪ್‌ ಮಾಡುವ ನೆಪದಲ್ಲಿ ರಾಹುಲ್ ‌ಸ್ನೇಹಾಳನ್ನು ನೋಡಲೆಂದೇ ಪ್ರತಿದಿನ ಕಾಲೇಜಿಗೆ ಹೋಗತೊಡಗಿದ. ಮತ್ತೆ ಮತ್ತೆ ಕಂಡ ರಾಹುಲ್‌ ನ ಆಕರ್ಷಕ ವ್ಯಕ್ತಿತ್ವ, ನಡೆನುಡಿ, ರೀತಿ ನೀತಿ ಸ್ನೇಹಾಳಿಗೂ ಇಷ್ಟವಾಯಿತು. ಕೊನೆಗೊಂದು ದಿನ ತನ್ನ ತಂಗಿಯ ಸಹಾಯದಿಂದ ಸ್ನೇಹಾಳ ಪರಿಚಯ ಮಾಡಿಕೊಂಡುಬಿಟ್ಟ ರಾಹುಲ್. ನಂತರ ಅವರಿಬ್ಬರು ಮದುವೆಯಾಗುವ ಸಮಯಕ್ಕೆ ರಾಹುಲ್ ‌ನ ಪೋಸ್ಟ್ ಗ್ರ್ಯಾಜುಯೇಶನ್‌ ಮುಗಿದಿತ್ತು. ಆದರೆ ಯಾವುದೇ ನೌಕರಿ ಸಿಕ್ಕಿರಲಿಲ್ಲ ಮತ್ತು ಎಂಬಿಎ ಮುಗಿಸಿದ ಸ್ನೇಹಾ ತಕ್ಷಣ ಸಿಕ್ಕ ನೌಕರಿ ಸೇರಿಕೊಂಡಿದ್ದಳು.

ರಾಹುಲ್ ನಿಂದ ದೂರವಾಗಿ ಬದುಕಬೇಕೆಂಬ ನಿರ್ಧಾರ ಸ್ನೇಹಾಳ ಸ್ವಯಂಕೃತ ಅಪರಾಧ ಆಗಿದ್ದರಿಂದ ಅವಳಿಗೆ ಅಗಲಿಕೆ ನೋವು ಅಂತಾ ಎನಿಸಲಿಲ್ಲ. ದೃಢಸಂಕಲ್ಪ ಹಾಗೂ ಆತ್ಮವಿಶ್ವಾಸಭರಿತ ಯುವತಿಯಾಗಿದ್ದರಿಂದ, ಆಕೆ ಬಾಸ್‌ ಗೆ ಪರ್ಸನಲ್ ಸೆಕ್ರೆಟರಿಯಾಗಿ ತನ್ನ ಕರ್ತವ್ಯಗಳನ್ನು ಸಮರ್ಥವಾಗಿ ನಿಭಾಯಿಸತೊಡಗಿದ್ದಳು. ಕ್ರಮೇಣ ಬಾಸ್‌ ಮತ್ತು ಸ್ನೇಹಾಳ ಸಾಮೀಪ್ಯ ಆಪ್ತವಾಗತೊಡಗಿತ್ತು. ಹೀಗಿರುವಾಗ ತಮ್ಮ ಒಡನಾಟಕ್ಕೆ ದ್ವಂದ್ವಾರ್ಥ ಉಂಟಾಗಬಾರದೆಂದು ಸ್ನೇಹಾಳೇ ತಮ್ಮ ಸಂಬಂಧದ ಕುರಿತಾಗಿ ಒಂದು ದಿನ ಸ್ಪಷ್ಟಪಡಿಸಿದ್ದಳು.

“ಸರ್‌, ನಾನು ನನ್ನ ಪತಿಯಿಂದ ದೂರವಿರುವುದೇನೋ ನಿಜ, ಹಾಗೆಂದ ಮಾತ್ರಕ್ಕೆ ನಾನು ಮರಳಿ ಅವರೊಂದಿಗೆ ಎಂದಿಗೂ ಜೊತೆಗೂಡಲಾರೆ ಎಂದರ್ಥವಲ್ಲ. ಫ್ಲರ್ಟ್‌ ಮಾಡುವುದೆಂದರೆ ನನಗೆ ಸುತಾರಾಂ ಇಷ್ಟವಿಲ್ಲ. ತಿಂಗಳಲ್ಲಿ ಒಂದು ಸಲ ಅಥವಾ ಎರಡು ಸಲ ನಿಮ್ಮೊಂದಿಗೆ ಲಂಚ್‌ ಯಾವುದಾದರೂ ಒಳ್ಳೆಯ ರೆಸ್ಟೋರೆಂಟ್‌ ಗೆ ಹೊರಡುವುದೆಂದರೆ ನನಗೇನೂ ಅಭ್ಯಂತರವಿಲ್ಲ. ಏಕೆಂದರೆ, ಆಕಸ್ಮಿಕವಾಗಿ ನಾನು ನಿಮ್ಮೊಂದಿಗೆ ತಿರುಗಾಡುವುದನ್ನು ಕಂಡು ನನ್ನ ಪತಿ ರಾಹುಲ್ ‌ಹೇಗೆ ಪ್ರತಿಕ್ರಿಯಿಸಬಹುದು, ಅವನಿಗೆ ನನ್ನ ಮೇಲೆ ಅದೆಷ್ಟು ವಿಶ್ವಾಸವಿದೆ ಎಂಬುದನ್ನು ಒರೆಗಿ ಹಚ್ಚುವುದೇ ನನ್ನ ಪ್ರಮುಖ ಉದ್ದೇಶ.”

ಅತ್ತ ರಾಹುಲ್ ತನ್ನ ಸಾಮರ್ಥ್ಯ ಹಾಗೂ ಅರ್ಹತೆಗಳ ಆಧಾರದ ಮೇಲೆ ಸಾಕಷ್ಟು ಸಂದರ್ಶನಗಳನ್ನು ಎದುರಿಸಿ ಒಂದು ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಒಳ್ಳೆಯ ನೌಕರಿಯನ್ನೇ ಗಿಟ್ಟಿಸಿದ್ದ. ಪಬ್ಲಿಕ್‌ ರಿಲೇಶನ್ಸ್ ಆಫೀಸರ್‌ ಹುದ್ದೆ ಅವನಿಗೆ ಒಲಿದು ಬಂದಿತ್ತು.

ನೌಕರಿ ಸೇರಿದ ಎರಡು ತಿಂಗಳ ನಂತರ ಸ್ನೇಹಾಳಿಗೆ ಫೋನ್‌ ಮಾಡಿದ ರಾಹುಲ್‌, “ಸ್ನೇಹಾ, ಕಳೆದೆರಡು ತಿಂಗಳಿಂದ ನಾನೂ ನೌಕರಿ ಮಾಡುತ್ತಿದ್ದೇನೆ,” ಎಂದು ತಿಳಿಸಿದ.

“ಕಂಗ್ರಾಜುಲೇಶನ್ಸ್ ರಾಹುಲ್‌…. ಆದಷ್ಟು ಬೇಗ ನೀನು ನಿನ್ನ ಸಾಮರ್ಥ್ಯ ಸಾಬೀತು ಮಾಡಬಲ್ಲೆ ಎಂದು ನನಗೆ ನಂಬಿಕೆ ಇತ್ತು.”

ಬಹುದಿನಗಳ ನಂತರ ಸ್ನೇಹಾಳೊಂದಿಗೆ ಮಾತನಾಡುವ ಅವಕಾಶ ಒದಗಿ ಬಂದಿತ್ತು. ಅವನ ಖುಷಿ ಫೋನ್‌ ನಲ್ಲಿ ಮಾತನಾಡುತ್ತಿರುವಾಗಲೇ ಸ್ನೇಹಾಳಿಗೆ ಮನವರಿಕೆಯಾಗಿತ್ತು. ಅವಳಿಗೂ ತುಂಬಾ ಸಂತಸವಾಗಿತ್ತು.

“ಪ್ಲೀಸ್‌ ಫೋನ್‌ ಕಟ್‌ ಮಾಡಬೇಡ, ನಿನ್ನೊಂದಿಗೆ ಇನ್ನೂ ಸ್ವಲ್ಪ ಮಾತನಾಡಬೇಕಿದೆ. ಆದಷ್ಟು ಬೇಗ ನನ್ನೊಂದಿಗೆ ಬಾಳುವ ಕುರಿತಾಗಿ ಸ್ವಲ್ಪ ಯೋಚಿಸು…..” ರಾಹುಲ್ ‌ಈ ಕುರಿತಾಗಿ ಇನ್ನೂ ಸಾಕಷ್ಟು ಮಾತನಾಡುವವನಿದ್ದ, ಆದರೆ ಸ್ನೇಹಾ ಮಾತುಗಳನ್ನು ಮಧ್ಯದಲ್ಲೇ ತುಂಡರಿಸುತ್ತಾ, “ಬಾಸ್‌ ನನಗೋಸ್ಕರ ವೇಯ್ಟ್ ಮಾಡುತ್ತಿದ್ದಾರೆ. ಯಾವುದೋ ಕಾನ್ಛರೆನ್ಸ್ ಗೋಸ್ಕರ ಅರ್ಜೆಂಟಾಗಿ ಫೈಲ್ ‌ರೆಡಿ ಮಾಡಬೇಕಿದೆ. ಇನ್ನುಳಿದ ವಿಷಯಗಳನ್ನು ನಂತರ ಚರ್ಚೆ ಮಾಡೋಣ,” ಎಂದವಳೇ ಫೋನ್‌ ಕಟ್‌ ಮಾಡಿದಳು.

ರಾಹುಲ್ ‌ನ ಶ್ರದ್ಧೆ, ಕಾರ್ಯದಕ್ಷತೆ ಹಾಗೂ ಅವಿರತ ಪರಿಶ್ರಮ ಗಮನಿಸಿದ ಕಂಪನಿ, ಆತನನ್ನು ಹೆಚ್ಚಿನ ತರಬೇತಿಗಾಗಿ ವಿದೇಶಕ್ಕೂ ಕಳುಹಿಸಿತು. ಒಂದೇ ವರ್ಷದಲ್ಲಿ ಅವನಿಗೆ ಪ್ರಮೋಶನ್‌ ಕೂಡ ಸಿಕ್ಕಿತು. ಪ್ರಾರಂಭದಲ್ಲಿ ಇಚ್ಛಾಶಕ್ತಿ ಹಾಗೂ ಆತ್ಮವಿಶ್ವಾಸದ ಕೊರತೆಗಳಿಂದ ಬಳಲುತ್ತಿದ್ದ ರಾಹುಲ್ ‌ಇದೀಗ ಒಬ್ಬ ದಕ್ಷ ಅಧಿಕಾರಿಯಾಗಿ ಹೊರಹೊಮ್ಮಿದ್ದ. ತನ್ನ ಬಳಿಗೆ ಬರುವ ಕುರಿತಾಗಿ ಸ್ನೇಹಾಳಿಂದ ಸಮಂಜಸ ಪ್ರತಿಕ್ರಿಯೆ ದೊರೆಯದಿದ್ದರೂ ಕೂಡ ಆತ ಆತಂಕಗೊಳ್ಳಲಿಲ್ಲ. ಬದಲಾಗಿ ತನ್ನ ಮೇಲೆ ಸ್ನೇಹಾಳಿಗಿರುವ ಒಲುಮೆಯನ್ನು ಗುರುತಿಸಿದ್ದ.

ರಾಹುಲ್ ‌ನೊಂದಿಗೆ ಸೇರಿಕೊಂಡು ಇಂದಿನಿಂದಲೇ ಸಹಜೀವನ ನಡೆಸಬೇಕೆಂದು ಸ್ನೇಹಾ ಕೂಡ ಚಡಪಡಿಸತೊಡಗಿದ್ದಳು. ಆದರೂ ಆತುರದಲ್ಲಿ ಯಾವ ನಿರ್ಧಾರವನ್ನೂ ಕೈಗೊಳ್ಳುವುದು ಬೇಡವೆಂದು ನಿರ್ಲಿಪ್ತಳಾಗಿದ್ದಳು.

sabse-bada-story-2

ಸ್ನೇಹಾಳ ತಂದೆ ಕೂಡ ಯಾವತ್ತೂ ಅವರಿಬ್ಬರ ಆತ್ಮಗೌರವಕ್ಕೆ ಧಕ್ಕೆ ತರುವಂತಹ ಪ್ರಯತ್ನಗಳನ್ನು ಮಾಡಲಿಲ್ಲ. ಸ್ನೇಹಾಳ ತಂದೆ ಆಗಾಗ್ಗೆ ರಾಹುಲ್ ‌ಗೆ ಫೋನ್‌ ಮಾಡಿ ಅವನ ಕೆರಿಯರ್‌ ಬಗ್ಗೆ ವಿಚಾರಿಸಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಿದ್ದರು ಎಂಬ ವಿಷಯ ಅವಳಿಗೆ ಗೊತ್ತೇ ಇರಲಿಲ್ಲ. ರಾಹುಲ್ ‌ಬಾಲ್ಯದಲ್ಲಿಯೇ ತನ್ನ ತಂದೆಯನ್ನು ಕಳೆದುಕೊಂಡಿದ್ದ. ಇದೀಗ ಅವನ ಕುಟುಂಬದಲ್ಲಿ ತಾಯಿ ಮತ್ತು ತಂಗಿಯರನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಒಂದು ದಿನ ಸ್ನೇಹಾಳ ಬಾಸ್‌, ದೆಹಲಿಯಲ್ಲಿ ನಡೆಯಲಿರುವ ಒಂದು ಮುಖ್ಯ ಮೀಟಿಂಗ್‌ ಗೆ ನೀನೂ ನನ್ನೊಂದಿಗೆ ಬರಬೇಕು ಎಂದು ತಿಳಿಸಿದರು. ಕೆಲವು ರಿಪೋರ್ಟ್‌ ಗಳನ್ನು ಸಿದ್ಧಗೊಳಿಸಿಕೊಂಡು ಲ್ಯಾಪ್‌ ಟಾಪ್‌ ಕೂಡ ತೆಗೆದುಕೊಂಡು ಬರಬೇಕು, ದೆಹಲಿ ಆಫೀಸ್‌ ನಲ್ಲೂ ಕೆಲವು ದಿನ ಕಾರ್ಯ ನಿರ್ವಹಿಸಬೇಕಿದೆ ಎಂದೂ ಹೇಳಿದ್ದರು. ದೆಹಲಿಗೆ ತೆರಳಿದ ನಂತರ ಅಷ್ಟೊಂದು ಆಫೀಸಿನ ಕೆಲಸ ಕಾರ್ಯಗಳ ಮಧ್ಯೆಯೂ ಬಿಡುವು ಮಾಡಿಕೊಂಡು ಕನ್ಹಾಟ್‌ ಪ್ಲೇಸ್‌ ನ ಭರ್ಜರಿ ರೆಸ್ಟೋರೆಂಟ್‌ ಒಂದಕ್ಕೆ ಡಿನ್ನರ್‌ ಗೆಂದು ಕರೆದೊಯ್ದಿದ್ದರು. ವಿಶೇಷವೆಂದರೆ, ಕ್ಲುಪ್ತವಾಗಿ ತಮ್ಮ ವೈಯಕ್ತಿಕ ಜೀವನದ ಕುರಿತಾದ ಕೆಲವು ವಿಚಾರಗಳನ್ನು ಸ್ನೇಹಾಳೊಂದಿಗೆ ಹಂಚಿಕೊಳ್ಳಬೇಕೆಂದಿದ್ದರು.

“ಸ್ನೇಹಾ, ನೀನು ಒಂದು ದಿನ ಫ್ಲರ್ಟ್‌ ಮಾಡುವುದೆಂದರೆ ನನಗೆ ಸುತಾರಾಂ ಇಷ್ಟವಿಲ್ಲ ಎಂದು ಹೇಳಿದ್ದೆಯಲ್ಲ, ಯಾರಾದರೂ ಒಬ್ಬರನ್ನು ಇಷ್ಟಪಡುವುದೆಂದರೆ ಫ್ಲರ್ಟ್‌ ಮಾಡುವುದೆಂದು ಅರ್ಥವಲ್ಲ. ನಿನ್ನ ಕಾರ್ಯನಿಷ್ಠೆ ಹಾಗೂ ನೇರ ನಡೆನುಡಿಗಳಿಂದಾಗಿ ನಿನ್ನನ್ನು ತುಂಬಾ ಇಷ್ಟಪಡುತ್ತೇನೆ. ನೀನು ಜಾಣೆ, ಎಲ್ಲಾ ಕೆಲಸಗಳನ್ನೂ ಚಾಣಾಕ್ಷತೆಯಿಂದ ನಿರ್ವಹಿಸುತ್ತೀಯ, ಆಫೀಸಿನ ಇತರ ಸಿಬ್ಬಂದಿಗಳೂ ನಿನ್ನ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದಾರೆ.”

ಬಾಸ್‌ ನ ಈ ನುಡಿಗಳನ್ನು ಆಲಿಸಿದ ಸ್ನೇಹಾ, “ಸರ್‌, ನೀವು ಹೇಳುತ್ತಿರುವುದು ನನಗೆ ಅರ್ಥವಾಯಿತು. ಆಫೀಸ್‌ ನಲ್ಲಿ ನಿಮ್ಮಿಂದಾಗಿ ನನಗ್ಯಾವ ಭೀತಿಯೂ ಇಲ್ಲ. ನೀವು ಸಂಪೂರ್ಣ ಗೌರವಾದರಗಳಿಂದಲೇ ನೋಡಿಕೊಳ್ಳುತ್ತಿರುವಿರಿ,” ಎಂದು ಪ್ರತಿಕ್ರಿಯಿಸಿದಳು.

“ನಾನು ಸಾಮಾನ್ಯವಾಗಿ ನನ್ನ ವೈಯಕ್ತಿಕ ಬದುಕಿನ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಆದರೆ ಅದೇಕೊ ನಿನ್ನೊಂದಿಗೆ ಮನಸ್ಸಿನ ಕೆಲವು ಮಾತುಗಳನ್ನು ಹೇಳಿಕೊಳ್ಳಬೇಕು ಎಂದೆನಿಸುತ್ತಿದೆ. ನೀನೂ ಒಬ್ಬ ನನ್ನ ಕುಟುಂಬ ಸದಸ್ಯೆ ಎಂಬಂಥ ಭಾವ ನನ್ನ ಮನಸ್ಸಿನಲ್ಲಿ ಮೊಳಕೆಯೊಡೆದಿದೆ.

“ಬಹುಶಃ ಜೀವನದಲ್ಲಿ ನಾನೂ ಮದುವೆಯಾಗಿದ್ದರೆ ನಿನ್ನಂತಹ ಒಬ್ಬ ಮಗಳು ಇರುತ್ತಿದ್ದಳೇನೋ…! ಬಾಲ್ಯದಲ್ಲೇ ತಂದೆ ತಾಯಂದಿರ ಆಸರೆ ಕಳೆದುಕೊಂಡ ನಾನು, ಇವತ್ತಿನವರೆಗೂ ಅಕ್ಷರಶಃ ಒಬ್ಬಂಟಿಯಾಗಿ ಬದುಕುತ್ತಿದ್ದೇನೆ. ಮನೆಗೆ ಹೋದರೆ ಸ್ಮಶಾನ ಮೌನ ಆವರಿಸಿಕೊಂಡುಬಿಡುತ್ತದೆ. ಸ್ನೇಹಿತರು ಸಾಕಷ್ಟು ಜನರಿದ್ದಾರೆ. ಆದರೆ ಅವರೆಲ್ಲ ನಿಮಿತ್ತಮಾತ್ರರು.

“ಎಲ್ಲರೂ ಸ್ವಾರ್ಥ ತುಂಬಿದ ಗೋಮುಖ ವ್ಯಾಘ್ರಗಳು. ಬೆಂಗಳೂರಿನಲ್ಲಿ ಯಾವೊಬ್ಬ ಸಂಬಂಧಿಯೂ ಇಲ್ಲ. ತಿಳಿದೊ, ತಿಳಿಯದೆಯೋ ನನ್ನ ನಡೆನುಡಿಗಳಲ್ಲಿ ಫ್ಲರ್ಟ್‌ ಮಾಡುವಂತೆ ಕಂಡುಬಂದಿರಬಹುದು. ಆದರೆ ಅದು ವಾಸ್ತವವಲ್ಲ. ತಂದೆ ತಾಯಂದಿರನ್ನು ಕಳೆದುಕೊಂಡ ಮೇಲೆ ನನಗ್ಯಾವತ್ತೂ ಮದುವೆಯಾಗಬೇಕೆಂಬ ಆಸೆಯೇ ಮೂಡಲಿಲ್ಲ.” ಇದೆಲ್ಲ ಕೇಳಿ ಸ್ನೇಹಾ ಕೂಡ ಕೊಂಚ ಭಾವುಕಳಾಗಿದ್ದಳು. ಜೀವನದಲ್ಲಿ ನಿಜವಾಗಿಯೂ ಒಬ್ಬ ಆಪ್ತ ಸ್ನೇಹಿತ ಅಂತ ಎಲ್ಲರಿಗೂ ಬೇಕೇ ಬೇಕು ಎಂದೆನಿಸಿತು. ಅವಳು ತನ್ನ ಗಂಡನಲ್ಲೂ ಒಬ್ಬ ಅತ್ಯುತ್ತಮ ಗೆಳೆಯನನ್ನು ಅಪೇಕ್ಷಿಸುತ್ತಿದ್ದಳು.

ಮೀಟಿಂಗ್‌ ಮುಗಿದ ಬಳಿಕ ಸ್ನೇಹಾ ಮತ್ತು ಬಾಸ್‌ ಇಬ್ಬರೂ ಬೆಂಗಳೂರಿಗೆ ಮರಳಿದರು. ಬಾಸ್‌ ನಂತಹ ಒಬ್ಬ ಅಪರೂಪದ ವ್ಯಕ್ತಿಯೊಂದಿಗೆ ಇದ್ದು ಬದುಕಿನ ಸಾಕಷ್ಟು ಒಳಮರ್ಮಗಳನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಸ್ನೇಹಾಳಿಗೆ ಸಂತೃಪ್ತಿಯಾಗಿತ್ತು.

ಸ್ನೇಹಾ ಮತ್ತೆ ರಾಹುಲ್ ‌ನೊಂದಿಗೆ ಜೀವಿಸಲು ತಮ್ಮ ಕೈಲಿಂದಾಗುವ ಎಲ್ಲ ಪ್ರಯತ್ನಗಳನ್ನೂ ತಾನು ಮಾಡುವುದಾಗಿ ಬಾಸ್ ಭರವಸೆ ಕೂಡ ಕೊಟ್ಟಿದ್ದರು. ಸ್ನೇಹಾ ಮನದಲ್ಲೇ ಹಿರಿಹಿರಿ ಹಿಗ್ಗಿದ್ದಳು. ಬಾಸ್‌ ನ ರೂಪದಲ್ಲಿ ಸಾಕ್ಷಾತ್‌ ಭಗವಂತನೇ ಗೋಚರಿಸಿದ್ದ ಅವಳಿಗೆ.

ಬಾಸ್‌ ದಿಲ್ಲಿಯಲ್ಲಿಯೇ ತಮ್ಮ ಮ್ಯಾನೇಜಿಂಗ್‌ ಡೈರೆಕ್ಟರ್‌ ರೊಂದಿಗೆ ಚರ್ಚಿಸಿ ಸ್ನೇಹಾಳಿಗೆ ಪ್ರಮೋಷನ್‌ ನೀಡುವ ಕುರಿತಾಗಿ ಅಂತಿಮ ನಿರ್ಧಾರ ಪಡೆದುಕೊಂಡಿದ್ದರು. ಆದರೆ ಈ ವಿಚಾರವನ್ನು ಎಲ್ಲೂ ಬಹಿರಂಗಪಡಿಸಿರಲಿಲ್ಲ. ಯಾವುದಾದರೊಂದು ಒಳ್ಳೆಯ ಸಂದರ್ಭ ನೋಡಿಕೊಂಡು ಪ್ರಮೋಷನ್‌ ಆರ್ಡರ್‌ ಕೊಡುವುದೆಂದು ಯೋಚಿಸಿದ್ದರು.

ಕಂಪನಿಯ ಆ್ಯನ್ಯುಯಲ್ ಜನರಲ್ ಬಾಡಿ ಮೀಟಿಂಗ್‌ ನ ಡೇಟ್‌ ಈಗಾಗಲೇ ನಿರ್ಧರಿಸಲ್ಪಟ್ಟಿತ್ತು. ಈ ಮೀಟಿಂಗ್‌ ನಲ್ಲಿ ಎಲ್ಲ ಸಿಬ್ಬಂದಿ ವರ್ಗದವರೂ ಹಾಗೂ ಶೇರ್‌ ಹೋಲ್ಡರ್‌ ಗಳು ಭಾಗವಹಿಸಲಿದ್ದರು. ಭವ್ಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಡ್ತಿ ಪಡೆದ ಎಲ್ಲ ಸಿಬ್ಬಂದಿಗಳ ಹೆಸರುಗಳನ್ನು ಘೋಷಿಸಲಾಯಿತು. ಅದರಲ್ಲಿ ಸ್ನೇಹಾಳ ಹೆಸರೂ ಪ್ರಸ್ತಾಪಗೊಂಡಿತು. ಸ್ನೇಹಾಳ ಗಂಡ ರಾಹುಲ್ ‌ಕೂಡ ಅಂದಿನ ಕಾರ್ಯಕ್ರಮಕ್ಕೆ ಬಂದಿದ್ದು ವಿಶೇಷವಾಗಿತ್ತು.

ಸ್ನೇಹಾ ಕೂಡ ಅವನನ್ನು ಕಂಡು ತುಂಬಾ ಸಂತಸಪಟ್ಟಳು. ಈ ಕುರಿತಾಗಿ ಅವಳು ತನ್ನ ಬಾಸ್‌ ನ್ನು ವಿಚಾರಿಸಿದಾಗ, “ಹೌದು ನಾನೇ ರಾಹುಲ್ ‌ನನ್ನು ಇನ್ವೈಟ್‌ ಮಾಡಿದ್ದು, ಅವರೂ ನಮ್ಮ ಕಂಪನಿಯ ಶೇರ್‌ ಹೋಲ್ಡರ್‌. ಇವತ್ತಿನ ದಿನ ನಿನ್ನ ಪಾಲಿಗೆ ಅವಿಸ್ಮರಣೀಯವಾಗಲಿದೆ. ಸ್ವಲ್ಪ ತಾಳ್ಮೆಯಿಂದಿರು, ನಾನು ನಿನ್ನ ಗಾರ್ಡಿಯನ್ನಾಗಿ ಏನೋ ಒಂದು ವಿಶೇಷ ತೋರಿಸಲಿದ್ದೇನೆ, ಎಂದಾಗ ಸ್ನೇಹಾ ಮೂಕವಿಸ್ಮಿತಳಾದಳು. ಇದೀಗ ಮೌನವಾಗಿರುವುದೇ ಉತ್ತಮ ಎಂದು ಭಾವಿಸಿದಳು.

ಬಡ್ತಿ ಪಡೆದ ಸಿಬ್ಬಂದಿಗಳ ಘೋಷಣೆ ಜಾರಿಯಲ್ಲಿತ್ತು. ಆಗ ಸ್ನೇಹಾಳ ಬಾಸ್‌, “ಸ್ನೇಹಿತರೆ, ಈ ವಿಷಯ ಕೇಳಿ ನಿಮ್ಮೆಲ್ಲರಿಗೂ ಸಂತೋಷವಾಗುತ್ತದೆ ಎಂದುಕೊಂಡಿದ್ದೇನೆ. ಅದೇನೆಂದರೆ, ಇಲ್ಲಿಗೆ ಬಂದಿರುವ ರಾಹುಲ್ ‌ಎಂಬುವರು ತಮ್ಮ ಅನುಭವ ಹಾಗೂ ಸಾಮರ್ಥ್ಯಗಳ ಮೇರೆಗೆ ನಮ್ಮ ಕಂಪನಿಯಲ್ಲಿ ಅಸಿಸ್ಟೆಂಟ್‌ ಜನರಲ್ ಮ್ಯಾನೇಜರ್‌ ಆಗಿ ನೇಮಕಗೊಂಡಿದ್ದಾರೆ. ರಾಹುಲ್ ಮತ್ತು ಅವರ ಪತ್ನಿ ಸ್ನೇಹಾರಿಗೆ ಶುಭಾಶಯಗಳು!” ಎಂದರು.

ಸ್ನೇಹಾಳ ಕಂಗಳಲ್ಲಿ ಆನಂದಭಾಷ್ಪ ಧಾರಾಕಾರವಾಗಿ ಸುರಿಯತೊಡಗಿತ್ತು. ಎಲ್ಲ ಅತಿಥಿ ಅಭ್ಯಾಗತರು ಹೊರಟ ಮೇಲೆ, ರಾಹುಲ್ ಮತ್ತು ಸ್ನೇಹಾ ಇಬ್ಬರೂ ಬಾಸ್‌ ಬಳಿ  ಬಂದು ತಮ್ಮ ಕೃತಜ್ಞತೆಗಳನ್ನು ಅರ್ಪಿಸಿದರು. ಅವತ್ತು ಇಡೀ ವಿಶ್ವವೇ ಸಂತೋಷದಿಂದ ಕುಣಿಯುತ್ತಿದ್ದಂತೆ ಭಾಸವಾಗಿತ್ತು.

“ಕ್ಯಾನ್‌ ಐ ಹಗ್‌ಯೂ?” ಬಾಸ್‌ ಕೇಳಿದರು.

“ಓಹ್‌ ಶ್ಯೂರ್‌, ವೈ ನಾಟ್‌?” ಎನ್ನುತ್ತಾ ಸ್ನೇಹಾಳೇ ಮುಂದಾಗಿ ತನ್ನನ್ನು ಹೆತ್ತ ತಂದೆಯನ್ನೇ ತಬ್ಬಿಕೊಂಡಂತೆ ಬಿಗಿದಪ್ಪಿಕೊಂಡಳು. ಅವಳ ಕಣ್ಣುಗಳಲ್ಲಿ ಆನಂದಬಾಷ್ಪ ಸುರಿಯುತ್ತಿತ್ತು. ಮುರುಟಿಹೋಗಿದ್ದ ತನ್ನ ಬದುಕಿನ ಬೇರುಗಳಿಗೆ ನೀರುಣಿಸಿದ ಪಿತೃ ನೀವು ಎಂಬ ಭಾವ ಅವಳಲ್ಲಿ ಗೋಚರಿಸುತ್ತಿತ್ತು.

ಬಾಸ್‌ ಕಣ್ಣುಗಳೂ ತೇಗೊಂಡಿದ್ದವು. ಗದ್ಗದಿತ ಸ್ವರದಲ್ಲೇ, “ಇನ್ನು ರಾಹುಲ್ ‌ನೊಂದಿಗೆ ನೀನು ಸುಖ ದಾಂಪತ್ಯಕ್ಕೆ ನಾಂದಿ ಹಾಡು. ಇದೀಗ ನೀವಿಬ್ಬರೂ ಬಹುಸಮರ್ಥರು ಎಂಬುದು ಖಚಿತವಾಯಿತು,” ಎಂದು ಎದೆ ತುಂಬಿ ಹರಸಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ