ಯಾವುದೇ ವಯೋಮಾನದಲ್ಲಿ ವಿವಿಧ ಕಾರಣಗಳಿಂದಾಗಿ ಹಲ್ಲುಗಳು ಬಿದ್ದುಹೋಗುವ ಸಾಧ್ಯತೆ ಇದೆ. ಹಲ್ಲುಗಳಿಗೆ ಹಾನಿಯಾಗುವುದರಿಂದ ಮುಖದ ಸೌಂದರ್ಯ ಕುಗ್ಗುವುದು ಸಹಜ. ಆದರೆ, ದಂತ ವೈದ್ಯಕೀಯ ವಿಜ್ಞಾನ ಸಂಶೋಧಿಸಿದ `ಡೆಂಟಲ್ ಇಂಪ್ಲಾಂಟ್’ ಎಂಬ ಚಿಕಿತ್ಸೆಯು ದಂತ ಭಗ್ನರಿಗೊಂದು ವರದಾನವಾಗಿ ಪರಿಣಮಿಸಿದೆ ಎಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ.
ಮೀನಾಕ್ಷಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಅಂತಿಮ ವರ್ಷದ ವಿದ್ಯಾರ್ಥಿನಿ. ಅವಳ ಹಾಲು ಹಲ್ಲುಗಳು ಬಿದ್ದುಹೋದಾಗ ಅವಳಿನ್ನೂ ಪುಟ್ಟ ಬಾಲಕಿ. ಕಾಲಕ್ರಮೇಣ ಅವಳ ಎಲ್ಲಾ ಹೊಸ ಹಲ್ಲುಗಳು ಬೆಳೆದವಾದರೂ, ಮೇಲಿನ ದವಡೆಯ ಮುಂಭಾಗದ ಎರಡು ದಂತಗಳು ಚಿಗುರಲೇ ಇಲ್ಲ.
ಹೀಗಾಗಿ ಮೀನಾಕ್ಷಿ ಡೆಂಟಲ್ ಸರ್ಜನ್ ಒಬ್ಬರನ್ನು ಸಂಪರ್ಕಿಸಿದಾಗ, ವೈದ್ಯರು ಪ್ಲಾಸ್ಟಿಕ್ ಡೆಂಚರ್ ಅಳವಡಿಸಿದರು. ಇದರಿಂದಾಗಿ ಅವಳಿಗೆ ಅನುಕೂಲ ಆಯಿತು. ಬೇಕೆನಿಸಿದಾಗ ಡೆಂಚರ್ ಹಾಕಿಕೊಳ್ಳುತ್ತಿದ್ದಳು, ಬೇಡವಾದಾಗ ಕಳಚುತ್ತಿದ್ದಳು.
ಆದರೆ ಆ ಬಾಲ್ಯಾವಸ್ಥೆಯಲ್ಲಿ ಮೀನಾಕ್ಷಿಗೆ ಡೆಂಚರ್ ಬಳಸುವುದು ತುಸು ಕಷ್ಟಕರ ಎನಿಸುತ್ತಿತ್ತು. ಸ್ನೇಹಿತರ ಎದುರು ನಗೆಪಾಟಲಿಗೆ ಈಡಾಗಬಾರದೆಂದು ಅನಿವಾರ್ಯವಾಗಿ ಆ ಕಷ್ಟವನ್ನು ಸಹಿಸಿಕೊಂಡಿದ್ದಳು. ಇದೇ ಸಮಯದಲ್ಲಿ ದಿನಪತ್ರಿಕೆ ಒಂದರಲ್ಲಿ ಡೆಂಟಲ್ ಇಂಪ್ಲಾಂಟ್ ಕುರಿತಾದ ಲೇಖನ ಓದಿ ಉತ್ಸುಕಳಾಗಿ ಡೆಂಟಲ್ ಸರ್ಜನ್ ಬಳಿ ತೆರಳಿ ಆ ಚಿಕಿತ್ಸೆಯ ಕುರಿತಾಗಿ ಸಾಕಷ್ಟು ಚರ್ಚೆ ಮಾಡಿದಳು. ಕೆಲವೇ ದಿನಗಳಲ್ಲಿ ಚಿಕಿತ್ಸೆ ಕೂಡ ಪಡೆದುಕೊಂಡು, ತನ್ನ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಂಡಳು.
ಮೀನಾಕ್ಷಿಯ ಮೇಲ್ದವಡೆಯಲ್ಲಿರುವ ಖಾಲಿ ಜಾಗದಲ್ಲಿ ಎರಡು ಕೃತಕ ಹಲ್ಲುಗಳನ್ನು ಅಳವಡಿಸಲಾಯಿತು. ಅದೆಷ್ಟು ಸಹಜವಾಗಿ ಗೋಚರಿಸುತ್ತಿತ್ತು ಎಂದರೆ, ಯಾರಾದರೂ ಬೆರಳಿನಿಂದ ಸ್ಪರ್ಶಿಸಿ ನೋಡಿದರೂ ಅವು ಕೃತಕವೆಂದು ಅನಿಸುವುದಿಲ್ಲ.
ಡೆಂಟಲ್ ಇಪ್ಲಾಂಟ್ ನಿಂದಾಗಿ ಮೀನಾಕ್ಷಿಗೆ ಸಂತೃಪ್ತಿ ದೊರೆಯಿತು. ಇದೀಗ ಅವಳು ನಿಸ್ಸಂಕೋಚದಿಂದ ಬಾಯ್ದೆರೆದು ನಗುವಂತಾಗಿದೆ. ಜೊತೆಗೆ, ಆಹಾರವನ್ನು ಚೆನ್ನಾಗಿ ಅಗಿದು ನುಂಗಲು ಸಹಕಾರಿಯಾಗಿದೆ. ಅವಳಿಗೀಗ ಆ ಕೃತಕ ಹಲ್ಲುಗಳನ್ನು ಕಳಚಿ ಶುಭ್ರಪಡಿಸುವ ಪ್ರಮೇಯವೇ ಇಲ್ಲ ಹಾಗೂ ಮಾತನಾಡುವಾಗ, ನಗುವಾಗ ಆಕಸ್ಮಿಕವಾಗಿ ಕಳಚಿ ಬಿದ್ದೀತೆಂಬ ಆತಂಕ ಇಲ್ಲ.
ದಂತಕ್ಷಯದ ಮೂಲಗಳು
ವಿವಿಧ ಕಾರಣಗಳಿಂದಾಗಿ ಯಾವುದೇ ವಯೋಮಾನದಲ್ಲೂ ಹಲ್ಲುಗಳು ಬಿದ್ದುಹೋಗುತ್ತವೆ. ಸಾಕಷ್ಟು ಜನ ತಮ್ಮ ಸುಂದರ ದಂತಪಂಕ್ತಿಗಳನ್ನು ಹಾನಿ ಮಾಡಿಕೊಳ್ಳಲು ಪ್ರಮುಖ ಕಾರಣವೇನೆಂದರೆ, ಬಾಲ್ಯದಿಂದಲೇ ಬೆಳೆದು ಬಂದ ದಂತ ಆರೋಗ್ಯದ ಕುರಿತಾದ ಅಸಡ್ಡೆ. ಇದರ ಪರಿಣಾಮದಿಂದಾಗಿಯೇ ಕಾಲಕ್ರಮೇಣ ವಸಡುಗಳಲ್ಲಿ ಊತ, ದಂತಕ್ಷಯ, ಹಲ್ಲುಗಳು ಸಡಿಲಗೊಳ್ಳುವ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಇಷ್ಟವಾದರೂ ಚಿಕಿತ್ಸೆ ಪಡೆಯದಿದ್ದರೆ ಹಲ್ಲುಗಳು ಒಂದೊಂದಾಗಿ ಉದುರಿಹೋಗುತ್ತವೆ.
ವಿಟಮಿನ್ `ಸಿ’ ಕೊರತೆ, ಅತಿಯಾದ ಸಿಹಿ ಸೇವನೆ, ಅಡಕೆ ಜಗಿಯುವುದು ಮುಂತಾದ ಅಭ್ಯಾಸಗಳಿಂದಾಗಿ ಹಲ್ಲುಗಳ ಆರೋಗ್ಯ ಕುಂಠಿತಗೊಳ್ಳುತ್ತದೆ. ಕೆಲವು ಸಲ ಆಕಸ್ಮಿಕ ಅಪಘಾತ ಹಾಗೂ ದುರ್ಘಟನೆಗಳಿಂದಲೂ ದಂತ ಭಗ್ನ ಆಗುವುದು ಸ್ವಾಭಾವಿಕ. ಕೆಲವು ಆನುವಂಶಿಕ ಸಮಸ್ಯೆಗಳಿಂದಾಗಿಯೂ ವಸಡು ಮತ್ತು ದಂತಗಳ ಮೇಲೆ ದುಷ್ಪರಿಣಾಮ ಉಂಟಾಗಿ ಹಲ್ಲುಗಳು ಬೀಳುತ್ತವೆ. ಮಧುಮೇಹ ಕಾಯಿಲೆಯಿಂದಲೂ ಹಲ್ಲುಗಳ ಆರೋಗ್ಯಕ್ಕೆ ಆಪತ್ತು ಎದುರಾಗುತ್ತದೆ.
ಕೃತಕ ದಂತ
ಕೃತಕ ದಂತಗಳನ್ನು ಎರಡು ಪ್ರಮುಖ ವರ್ಗಗಳಲ್ಲಿ ವಿಂಗಡಿಸಲಾಗುತ್ತದೆ. ಮೊದಲನೆಯದಾಗಿ, ಸುಲಭವಾಗಿ ಮತ್ತು ಬೇಕೆನಿಸಿದಾಗ ಧರಿಸಬಲ್ಲ ಹಾಗೂ ಕಳಚಬಲ್ಲ ಹಲ್ಲುಗಳು. ಇಂತಹ ಹಲ್ಲುಗಳನ್ನೇ `ಡೆಂಚರ್’ ಎಂದು ಕರೆಯಲಾಗುತ್ತದೆ. ಒಂದು ಅಥವಾ ಎರಡಕ್ಕಿಂತಲೂ ಅಧಿಕ ಮತ್ತು ಅವಶ್ಯವಾದಲ್ಲಿ ಎಲ್ಲ ಮೂವತ್ತೆರಡು ಹಲ್ಲುಗಳಿಗೂ ಡೆಂಚರ್ ಅಳವಡಿಸಬಹುದಾಗಿದೆ. ಎರಡನೇಯದಾಗಿ ಕೃತಕ ದಂತಗಳು. ಹಾನಿಗೊಳಗಾಗಿ ಬಿದ್ದುಹೋದ ಹಲ್ಲುಗಳ ಜಾಗದಲ್ಲಿ ಕೃತಕ ದಂತಗಳನ್ನು ಶಾಶ್ವತವಾಗಿ ಅವಳಡಿಸಲಾಗುತ್ತದೆ. ದಂತಕುಳಿಗಳ ಮೇಲೆ ಹಾಕಲಾಗುವ `ಡೆಂಟಲ್ ಬ್ರಿಜ್’ ಮತ್ತು `ಡೆಂಟಲ್ ಇಂಪ್ಲಾಂಟ್’ ಕೂಡ ಕೃತಕ ಹಲ್ಲುಗಳಂತೆಯೇ ಶಾಶ್ವತವಾಗಿ ಅಳವಡಿಸುವ ವರ್ಗಕ್ಕೆ ಸೇರುತ್ತವೆ.
ಡೆಂಚರ್
ಡೆಂಚರ್ ಎನ್ನುವುದು ಹಾನಿಗೊಳಗಾದ ಹಲ್ಲಿನ ಜಾಗದಲ್ಲಿ ಅಳವಡಿಸಲಾಗುವ ಕೃತಕ ದಂತ. ಅವಶ್ಯಕತೆಗೆ ಅನುಗುಣವಾಗಿ ಇವುಗಳನ್ನು ಬೇಕಾದ ಅಳತೆ ಮತ್ತು ಆಕಾರಗಳಲ್ಲಿ ತಯಾರಿಸಬಹುದಾಗಿದೆ ಮತ್ತು ಸುಲಭವಾಗಿ ವಸಡುಗಳಿಗೆ ಅಳವಡಿಸಬಹುದಾಗಿದೆ. ಇವುಗಳಲ್ಲೂ ಎರಡು ವಿಧಗಳಿವೆ. ಪಾರ್ಶಿಯಲ್ ಮತ್ತು ಕಂಪ್ಲೀಟ್ ಡೆಂಚರ್.
ಪಾರ್ಶಿಯಲ್ ಡೆಂಚರ್ : ಕೆಲವೇ ಹಲ್ಲುಗಳು ಭಗ್ನಗೊಂಡಿದ್ದರೆ, ಅಂತಹಗಳನ್ನು ತುಂಬಲು ಪಾರ್ಶಿಯಲ್ ಡೆಂಚರ್ ನ್ನು ತಯಾರಿಸಲಾಗುತ್ತದೆ. ಇದನ್ನು ಪ್ರಯೋಗಿಸುವುದರಿಂದ ಹಲ್ಲುಗಳ ಚಿಕಿತ್ಸೆ ಸಂಪೂರ್ಣ ಆಗುವುದಷ್ಟೇ ಅಲ್ಲದೆ, ಆ ಹಲ್ಲುಗಳ ಅಕ್ಕಪಕ್ಕದ ಹಲ್ಲುಗಳು ಅಲುಗಾಡುವುದು ನಿಲ್ಲುತ್ತದೆ.
ಕಂಪ್ಲೀಟ್ ಡೆಂಚರ್ : ಎಲ್ಲಾ ಹಲ್ಲುಗಳೂ ಬಿದ್ದು ಹೋಗಿರುವವರಿಗೆ ಕಂಪ್ಲೀಟ್ ಡೆಂಚರ್ ಅಳವಡಿಸಲಾಗುತ್ತದೆ. ಇದರಲ್ಲೂ ಎರಡು ಪ್ರಕಾರಗಳಿವೆ, ಒಂದು ತಾತ್ಕಾಲಿಕ ಡೆಂಚರ್, ಸಹಜ ದಂತವನ್ನು ಕಿತ್ತ ತಕ್ಷಣವೇ ಅಳವಡಿಸುವಂಥದ್ದು. ಎರಡನೆಯದು ಟ್ರೆಡಿಷನಲ್ ಕಂಪ್ಲೀಟ್ ಡೆಂಚರ್, ಇದನ್ನು ಹಲ್ಲು ಕಿತ್ತ ಸುಮಾರು 10-12 ವಾರಗಳ ನಂತರ ಅಳವಡಿಸಲಾಗುತ್ತದೆ.
ಡೆಂಚರ್ ಎಲ್ಲರಿಗೂ ಸೂಕ್ತವಲ್ಲ!
ಡೆಂಚರ್ ಅಳವಡಿಕೆ ಎಲ್ಲರಿಗೂ ಸೂಕ್ತವಾಗಲಾರದು. ಡೆಂಚರ್ ಅಳವಡಿಕೆ ಹಾಗೂ ಕಳಚುವಿಕೆಯೇ ಒಂದು ಕ್ಲಿಷ್ಟಕರ ಕಾರ್ಯ. ಮಲಗುವ ಮುನ್ನ ಡೆಂಚರ್ ನ್ನು ಕಳಚಿ ಇಡಲೇಬೇಕು. ಬಹುತೇಕ ಜನರಿಗೆ, ಸಾರ್ವಜನಿಕವಾಗಿ ಆಕಸ್ಮಾತ್ ಡೆಂಚರ್ ಕಳಚಿಕೊಂಡು ಹೊರಬಂದುಬಿಟ್ಟರೆ ಅದೆಂತಹ ಮುಜುಗರ ಎಂಬ ಆತಂಕ ಕಾಡುತ್ತದೆ. ಡೆಂಚರ್ ನಿಂದಾಗಿ ವಸಡುಗಳಲ್ಲಿ ನೋವು ಕೂಡ ಕಾಣಿಸಬಹುದಾಗಿದೆ. ಕೆಲವು ಆಹಾರವನ್ನು ಜೀರ್ಣಿಸಲೂ ಅನಾನುಕೂಲವಾಗುತ್ತದೆ. ಆದರೂ, ಶಸ್ತ್ರಚಿಕಿತ್ಸೆ ರಹಿತ ಹಾಗೂ ಮಿತವ್ಯಯಕಾರಿ ಕೃತಕ ದಂತಗಳನ್ನು ಬಯಸುವವರಿಗೆ ಇದೊಂದು ವರದಾನವೇ ಸರಿ.
ಫಿಕ್ಸ್ಡ್ ಡೆಂಟಲ್ ಬ್ರಿಜ್
ಡೆಂಟಲ್ ಬ್ರಿಜ್ ನಲ್ಲಿ ಒಂದಕ್ಕಿಂತ ಹೆಚ್ಚು ಕೃತಕ ದಂತಗಳಿರುತ್ತವೆ. ಹಾನಿಯಾಗಿರುವ ಹಲ್ಲುಗಳ ಜಾಗದಲ್ಲಿ ಎರಡು ಹಲ್ಲುಗಳ ಮಧ್ಯೆ ಜೋಡಿಸಿ ಅಳವಡಿಸಲಾಗುತ್ತದೆ. ಫಿಕ್ಸ್ಡ್ ಡೆಂಟಲ್ ಬ್ರಿಜ್ ನ್ನು ಲೋಹ ಅಥವಾ ಸೆರಾಮಿಕ್ ನ್ನು ಬಳಸಿ ತಯಾರಿಸಲಾಗುತ್ತದೆ. ಹಲ್ಲುಗಳ ಬಣ್ಣ, ರೂಪ ಮತ್ತು ಆಕಾರ, ವ್ಯಕ್ತಿಯ ನೈಸರ್ಗಿಕ ಹಲ್ಲುಗಳನ್ನೇ ಹೋಲುವಂತಹದನ್ನು ಆಯ್ಕೆ ಮಾಡಲಾಗುತ್ತದೆ. ಕೃತಕ ದಂತಗಳು, ವ್ಯಕ್ತಿಯ ನೈಜ ದಂತಗಳನ್ನೇ ಹೋಲುವಂತೆ ಸಾಕಷ್ಟು ಶ್ರಮವಹಿಸಲಾಗಿರುತ್ತದೆ. ಫಿಕ್ಸ್ಡ್ ಡೆಂಟಲ್ ಬ್ರಿಜ್ 7-15 ವರ್ಷಗಳವರೆಗೆ ಬಾಳಿಕೆ ಬರುತ್ತದೆ. ಅವುಗಳನ್ನು ಸುರಕ್ಷಿತವಾಗಿಡಲು ಪ್ರತಿನಿತ್ಯ ದಂತ ಶುಚಿಗೊಳಿಸುವುದು ಅತ್ಯವಶ್ಯ. ಡೆಂಟಲ್ ಇಂಪ್ಲಾಂಟ್ ಗೆ ಹೋಲಿಸಿದರೆ, ಫಿಕ್ಸ್ಡ್ ಡೆಂಟಲ್ ಬ್ರಿಜ್ ತುಂಬಾ ಕಡಿಮೆ ವೆಚ್ಚದಾಯಕ. ಇವುಗಳನ್ನು ಅಳವಡಿಸುಲ್ಲಿ ಇರುವ ಒಂದೇ ಒಂದು ಡಿಮೆರಿಟ್ ಎಂದರೆ, ಅಕ್ಕಪಕ್ಕದ ಎರಡು ಆರೋಗ್ಯವಂತ ಹಲ್ಲುಗಳಿಗೂ ರಂಧ್ರ ಹೊಡೆಯಬೇಕಾಗುತ್ತದೆ. ಏಕೆಂದರೆ ಬಿದ್ದುಹೋದ ಹಲ್ಲುಗಳ ಮಧ್ಯೆ ಅಳಡಿಸುವ ಬ್ರಿಜ್ ಗೆ ಆಧಾರ ಬೇಕಲ್ಲ!
ಡೆಂಚರ್ ಫಿಕ್ಸ್ಡ್ ಡೆಂಟಲ್ ಬ್ರಿಜ್ ನ ಪರಿಮಿತಿಗಳು
ಡೆಂಚರ್ ಮತ್ತು ಫಿಕ್ಸ್ಡ್ ಡೆಂಟಲ್ ಬ್ರಿಜ್ ಗಳಲ್ಲಿ ಒಂದು ಪ್ರಮುಖ ಕೊರತೆ ಏನೆಂದರೆ, ಹಲ್ಲುಗಳು ಬಿದ್ದ ನಂತರ ವಸಡಿನಲ್ಲಿರುವ ಮೃದು ಮೂಳೆಯಲ್ಲಿನ ಕ್ಷಯವನ್ನು ಸಂಪೂರ್ಣವಾಗಿ ತಡೆಗಟ್ಟಲಾರದು. ಹಲ್ಲು ಬಿದ್ದನಂತರ, ನೈಸರ್ಗಿಕವಾಗಿ ಉದುರಿದ ಹಲ್ಲಿನ ಅಕ್ಕಪಕ್ಕದ ಮೂಳೆಯು ಸಂಕುಚಿತಗೊಳ್ಳತೊಡಗುತ್ತದೆ. ಇದರ ಅತಿಯಾದ ಸಂಕುಚಿತದಿಂದಾಗಿ ಡೆಂಚರ್ ಅಥವಾ ಡೆಂಟಲ್ ಬ್ರಿಜ್ ನ್ನು ಸೂಕ್ತವಾಗಿ ಅಳವಡಿಸಲಾಗದು. ಹೀಗಾಗಿ ವಿಪರೀತ ಆಕುಂಚನಗಳಿಂದ ಮುಖದ ಸೌಂದರ್ಯ ಹಿನ್ನಡೆ ಕಾಣಬೇಕಾಗುತ್ತದೆ.
ಡೆಂಟಲ್ ಇಂಪ್ಲಾಂಟ್
ಡೆಂಟಲ್ ಇಂಪ್ಲಾಂಟ್ ಗಳು ಕೂಡ ಬಹುಕಾಲದಿಂದಲೇ ನೈಸರ್ಗಿಕ ದಂತದಂತೆ ಗೋಚರಿಸುವ, ಬಿದ್ದುಹೋಗಿರುವ ಹಲ್ಲಿನ ಜಾಗವನ್ನು ಸಂಪೂರ್ಣ ಆರಿಸುವಂತಹ ಮತ್ತು ವಸಡಿನ ಮೂಳೆ ಮತ್ತು ವಸಡಿಗೆ ಗಟ್ಟಿಯಾಗಿ ಜೋಡಣೆಯಾಗಬಲ್ಲವು ಒಂದು ತಂತ್ರಜ್ಞಾನವನ್ನು ಕಂಡುಹಿಡಿಯಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಡೆಂಟಲ್ ಇಂಪ್ಲಾಂಟ್ ಎನ್ನುವುದು ಇಂಥದೇ ಒಂದು ಅವಿರತ ಪರಿಶ್ರಮದ ಪ್ರತಿಫಲ.
ಡೆಂಟಲ್ ಇಂಪ್ಲಾಂಟ್ ನಲ್ಲಿ, ಸರ್ಜನ್ ಗಳು ಹಲ್ಲು ಬಿದ್ದ ಜಾಗದಲ್ಲಿಯೇ ಆ ಹಲ್ಲಿನ ಬೇರಿಗೆ ಮೊದಲು ವಸಡಿನ ಮೂಳೆಗೆ ಟೈಟಾನಿಯಂ ಪ್ಯಾಚ್ ಅಂಟಿಸುತ್ತಾರೆ. ಇಂತಹ ಪ್ಯಾಚ್ ವಸಡಿನ ಮೂಳೆ ಆಳದಲ್ಲಿ ಭದ್ರವಾಗಿ ನೆಲೆಯೂರಿದ ನಂತರ ಅದರ ಮೇಲೆ ಕೃತಕ ದಂತವನ್ನು ಕಸಿ ಮಾಡುತ್ತಾರೆ. ಇದರಲ್ಲಿ ಟೈಟಾನಿಯಂ ಪ್ಯಾಚ್ ಆಧಾರಸ್ತಂಭದಂತೆ ಕಾರ್ಯ ನಿರ್ವಹಿಸುತ್ತದೆ.
ಚಿಕಿತ್ಸಾ ಹಂತಗಳು
ಡೆಂಟಲ್ ಇಂಪ್ಲಾಂಟ್ ಚಿಕಿತ್ಸೆಯಲ್ಲಿ ನಾಲ್ಕು ಹಂತಗಳಿವೆ. ಮೊಟ್ಟ ಮೊದಲಿಗೆ ಯಾವಾಗ, ಹೇಗೆ, ಏನು ಮಾಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಎರಡನೇ ಹಂತದಲ್ಲಿ ಟೈಟಾನಿಯಂನ್ನು ಇಂಪ್ಲಾಂಟ್ ಸರ್ಜರಿಯ ಮೂಲಕ ದವಡೆಯ ಮೂಳೆಯಲ್ಲಿ ಸ್ಥಾಪಿಸಲಾಗುತ್ತದೆ. ಮೂರನೇ ಹಂತದಲ್ಲಿ ಇಂಪ್ಲಾಂಟ್ ನ ಮೇಲೆ ಡೆಂಟಲ್ ಕ್ರೌನ್ ಅಳವಡಿಸಲಾಗುತ್ತದೆ. ಕೊನೆಯ ಹಂತದಲ್ಲಿ, ವ್ಯಕ್ತಿಯು ದಂತ ನಿರ್ವಹಣೆಯ ಸೂತ್ರವನ್ನು ಸರಿಯಾಗಿ ಅರಿತುಕೊಂಡು, ಅವನ್ನು ನಿಯಮಿತವಾಗಿ ಪರಿಪಾಲಿಸುವುದಕ್ಕೆ ಹೆಚ್ಚಿನ ಗಮನ ನೀಡಲಾಗುತ್ತದೆ.
ಮೊದಲ ಹಂತ : ಚಿಕಿತ್ಸೆಯ ತಯಾರಿ ಡೆಂಟಲ್ ಸರ್ಜನ್ಸ್ ಮೊಟ್ಟ ಮೊದಲು ವಸಡುಗಳ ಎಕ್ಸ್-ರೇ ತೆಗೆದುಕೊಂಡು, ಪ್ರಸ್ತುತ ದಂತಗಳ ಮಾಡೆಲ್ ಗಳನ್ನು ತಯಾರಿಸಿ ಕೊಳ್ಳುತ್ತಾರೆ. ಹೀಗೆ ಮಾಡೆಲ್ ಗಳನ್ನು ತಯಾರಿಸಿಕೊಳ್ಳುವುದರಿಂದ ವಸಡಿನ ಮೂಳೆಯ ದಪ್ಪ ಕಡಿಮೆಯಾಗಿರುವಾಗ ಊತಕಗಳನ್ನು ಸ್ಥಾಪಿಸುವಲ್ಲಿ ಸಹಾಯವಾಗುತ್ತದೆ.
ಎರಡನೇ ಹಂತ : ಇಂಪ್ಲಾಂಟ್ ಅಳವಡಿಕೆ ಸೂಕ್ತ ಸಮಯದಲ್ಲಿ ಟೈಟಾನಿಯಂ ಇಂಪ್ಲಾಂಟ್ ಸರ್ಜರಿಯ ಮೂಲಕ ವಸಡಿನ ಮೂಳೆ ಆಳದಲ್ಲಿ ಸ್ಥಾಪಿಸಲಾಗುತ್ತದೆ. ಇದು ಮೂಳೆಯಲ್ಲಿ ಭದ್ರವಾಗಿ ನೆಲೆಗೊಳ್ಳುವವರೆಗೂ ಇದರ ಮೇಲೆ ಡೆಂಟಲ್ ಕ್ರೌನ್ ಅಳವಡಿಸಲಾಗುದಿಲ್ಲ. ಇದಕ್ಕೆ ಸುಮಾರು 5-6 ತಿಂಗಳ ಕಾಲಾವಕಾಶ ಬೇಕಾಗುತ್ತದೆ.
ಮೂರನೇ ಹಂತ : ಕ್ರೌನ್ ಅಳವಡಿಸುವಿಕೆ ಟೈಟಾನಿಯಂ ಪ್ಯಾಚ್ ವಸಡಿನ ಮೂಳೆಯಲ್ಲಿ ಭದ್ರವಾಗಿ ನೆಲೆಗೊಂಡ ನಂತರವಷ್ಟೇ ಕ್ರೌನ್ ಅಳವಡಿಸಲಾಗುತ್ತದೆ. ಆದರೆ ಕೆಲವು ಜನರ ವಿಚಾರದಲ್ಲಿ ಡೆಂಟಲ್ ಸರ್ಜನ್ ಗಳು ಈ ಪ್ರಕಿಯೆಗಾಗಿ ಕಾಯುವುದಿಲ್ಲ. ಪರಿಸ್ಥಿತಿಗಳು ಅನುಕೂಲಕರವಾಗಿದ್ದರೆ, ಸರ್ಜನ್ಸ್ ಇಂಪ್ಲಾಂಟ್ ಮಾಡುವುದರ ಜೊತೆಗೆ ಕ್ರೌನ್ ಕೂಡ ಅಳವಡಿಸಿಬಿಡುತ್ತಾರೆ. ಇದರಿಂದಾಗುವ ಒಂದು ಪ್ರಯೋಜನವೆಂದರೆ, ಮೂಳೆಯ ಕಾರ್ಯಕ್ಷಮತೆ ಕುಂಠಿತಗೊಳ್ಳಲಾರದು.
ನಾಲ್ಕನೇ ಹಂತ : ಹಲ್ಲುಗಳ ಸೂಕ್ತ ನಿರ್ವಹಣೆ ಇಂಪ್ಲಾಂಟ್ ದೀರ್ಘಕಾಲ ಬಾಳಿಕೆ ಬರಬೇಕೆಂದರೆ ಅದನ್ನು ಪ್ರತಿನಿತ್ಯ ನಿಯಮಿತವಾಗಿ ಶುಚಿಗೊಳಿಸುವುದು ಅತ್ಯವಶ್ಯಕ. ಹೀಗೆ ಶುಭ್ರಗೊಳಿಸುವ ಕಾರ್ಯವನ್ನು ನಿಮ್ಮ ದಿನಚರಿಯ ಬಹುಮುಖ್ಯ ಕೆಲಸವನ್ನಾಗಿಸಿಕೊಂಡರೆ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.
ಡೆಂಟಲ ಇಂಪ್ಲಾಂಟ್ ಸರ್ಜರಿಯ ಸಾಲುಗಳು ಡೆಂಟಲ್ ಇಂಪ್ಲಾಂಟ್ ಸರ್ಜರಿಯಲ್ಲಿ ಪ್ರತಿಯೊಂದು ಅಳವಡಿಕೆಗೆ ಸುಮಾರು 15 ರಿಂದ 50 ಸಾವಿರದವರೆಗೆ ವೆಚ್ಚವಾಗುತ್ತದೆ ಹಾಗೂ ಸುಮಾರು 3-6 ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಈ ಕಾರಣದಿಂದಾಗಿಯೇ ಡೆಂಟಲ್ ಬ್ರಿಜ್ ನ್ನು ಕೆಲವೇ ದಿನಗಳಲ್ಲಿ ಅಳವಡಿಸಲಾಗುತ್ತದೆ. ಕೆಲವ ವ್ಯಕ್ತಿಗಳ ವಸಡಿನ ಮೂಲೆಯಲ್ಲಿ ಟೈಟಾನಿಯಂ ಇಂಪ್ಲಾಂಟ್ ನೆಲೆಗೊಳ್ಳುವುದು ಕಷ್ಟಸಾಧ್ಯ. ಕೆಲವರ ರಕ್ತನಾಳಗಳಲ್ಲಿ ರಕ್ತ ಪರಿಚಲನೆಯು ಸಮರ್ಪಕವಾಗಿ ಇಲ್ಲದಿರುವುದರಿಂದ ಕೂಡ ವಸಡಿನಲ್ಲಿ ಇಂಪ್ಲಾಂಟ್ ನೆಲೆಗೊಳ್ಳುವುದು ಕಷ್ಟಕರ. ಧೂಮಪಾನಿಗಳಲ್ಲಿ ಹಾಗೂ ಮಧುಮೇಹಿಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.
ಡೆಂಟಲ್ ಇಂಪ್ಲಾಂಟ್ ಸರ್ಜರಿಗೆ ವಸಡುಗಳು ಆರೋಗ್ಯಯುತ ಹಾಗೂ ಸದೃಢವಾಗಿರುವುದು ಬಹುಮುಖ್ಯ. ಕೆಲವರಲ್ಲಿ ಪ್ಲಾಕ್ ಮತ್ತು ಟಾರ್ಟರ್ ಗಳನ್ನು ನಿವಾರಿಸಲು ಇಂಪ್ಲಾಂಟ್ ಗೂ ಮೊದಲೇ ವಸಡು ಮತ್ತು ಹಲ್ಲುಗಳಿಗೆ ಪೂರ್ವ ಚಿಕಿತ್ಸೆ ನೀಡಬೇಕಾಗಬಹುದು. ಡೆಂಟಲ್ ಇಂಪ್ಲಾಂಟ್ ಗಳಲ್ಲಿ ಪ್ರತಿದಿನ ನಡೆಯುತ್ತಿರುವ ಆವಿಷ್ಕಾರಗಳು ಜನರ ಮೆಚ್ಚುಗೆಗೆ ಪಾತ್ರವಾಗುತ್ತವೆ. ಏಕೆಂದರೆ, ಡೆಂಟಲ್ ಇಂಪ್ಲಾಂಟ್ ಸರ್ಜರಿಯ ಮೂಲಕ ವಿನಾಶದಂಚಿಗೆ ಬಂದ ಅವರ ಸೌಂದರ್ಯ, ಪುನರ್ ಯೌವನ ಪಡೆಯುತ್ತಿದೆಯಲ್ಲ!
– ಡಾ. ಯತೀಶ್ ಅಗ್ರವಾಲ್
ಚಿಕಿತ್ಸೆಗಿಂತ ಮುಂಜಾಗ್ರತೆ ಮುಖ್ಯ
ಎಲ್ಲಕ್ಕಿಂತ ಮುಖ್ಯವಾಗಿ ನಾವು ನಮ್ಮ ವಸಡು ಮತ್ತು ಹಲ್ಲುಗಳ ಮಹತ್ವವನ್ನು ಅರಿತುಕೊಳ್ಳಬೇಕು. ಕಣ್ಣು, ಕಿವಿ, ಮೂಗು, ಬಾಯಿ, ಹೃದಯ, ಶ್ವಾಸಕೋಶ ಇತ್ಯಾದಿಗಳು ಹೇಗೆ ಆರೋಗ್ಯಕರವಾಗಿ ಇರಬೇಕೊ ಹಾಗೆಯೇ ವಸಡು ಮತ್ತು ಹಲ್ಲುಗಳು ಕೂಡ ಆರೋಗ್ಯಯುತವಾಗಿರಬೇಕು.
ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಹಾಗೂ ರಾತ್ರಿ ಮಲಗುವ ಮುನ್ನ ತಪ್ಪದೇ ಬ್ರಶ್ ಮಾಡಬೇಕು. ಹಲ್ಲುಗಳಲ್ಲಿ ಏನಾದರೂ ಸಿಕ್ಕಿಕೊಂಡಾಗ ಡೆಂಟಲ್ ಫ್ಲಾಸ್ ನಿಂದ ತೆಗೆಯಿರಿ. ಆಹಾರ ಸೇವಿಸಿದ ನಂತರ ಪ್ರತಿ ಬಾರಿಯೂ ನೀರಿನಿಂದ ಬಾಯಿ ಮುಕ್ಕಳಿಸಲು ಮರೆಯದಿರಿ. ಹಲ್ಲಿನಿಂದ ಬಾಟಲಿಗಳ ಮುಚ್ಚಳ ತೆರೆಯುವ ಸಾಹಸಕ್ಕೆ ಕೈ ಹಾಕದಿರಿ. ಬಾಕ್ಸಿಂಗ್, ಹಾಕಿ, ಬಾಸ್ಕೆಟ್‌ಬಾಲ್ ನಂತಹ ಕ್ರೀಡೆಗಳಲ್ಲಿ ಮೌಥ್ ಗಾರ್ಡ್ ನ್ನು ಅವಶ್ಯವಾಗಿ ಬಳಸಿರಿ. ಇಷ್ಟಾಗ್ಯೂ ಆಕಸ್ಮಿಕವಾಗಿ ಹಲ್ಲುಗಳು ಗಾಯಗೊಂಡರೆ ಡೆಂಟಲ್ ಸರ್ಜನ್ ರನ್ನು ಸಂಪರ್ಕಿಸಿ.
ವಸಡು ಮತ್ತು ಹಲ್ಲುಗಳ ಯಾವುದೇ ಸಮಸ್ಯೆಯನ್ನು ಉದಾಸೀನ ಮಾಡಬೇಡಿ. ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಪಡೆದುಕೊಂಡು, ನಿಮ್ಮ ಹಲ್ಲುಗಳಿಗೆ ದೀರ್ಘಾಯುಷ್ಯ ಒದಗಿಸಿ.
ಬಹೂಪಯೋಗಿ ಹಲ್ಲುಗಳು
ಯಾರು ಎಷ್ಟೇ ಸುಂದರವಾಗಿದ್ದರೂ, ಮನಸಾರೆ ಬಾಯ್ದೆರೆದು ನಗದಿದ್ದರೆ ಇನ್ನೊಬ್ಬರ ಹೃದಯ ಗೆಲ್ಲಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೇ, ಹಲ್ಲುಗಳು ಶಬ್ದಗಳ ಉಚ್ಚಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಲ್ಲುಗಳಿಲ್ಲದೆ ನಿಮ್ಮ ಧ್ವನಿಯಲ್ಲಿ ಎದುರಿನವರನ್ನು ಪ್ರಸನ್ನಗೊಳಿಸುವಂತಹ ಏರಿಳಿತ ಉಂಟಾಗಲು ಸಾಧ್ಯವೇ ಇಲ್ಲ. ಹಲ್ಲುಗಳ ಬಹುದೊಡ್ಡ ಕೆಲಸವೇನೆಂದರೆ ಆಹಾರವನ್ನು ಅಗಿಯುವುದು. ಹಲ್ಲುಗಳು ಇರುವುದರಿಂದಲೇ ನಾವು ಆಹಾರವನ್ನು ಚೆನ್ನಾಗಿ ಅಗಿದು, ಜಗಿದು ಸ್ವಾದವನ್ನು ಸಂಪೂರ್ಣ ಅನುಭವಿಸಬಹುದಾಗಿದೆ.
ಸೌಂದರ್ಯಕ್ಕೆ ಆಪತ್ತು
ಹಲ್ಲುಗಳ ಮಹತ್ವ ಅವುಗಳನ್ನು ಕಳೆದುಕೊಂಡವರಿಗೆ ಗೊತ್ತು. ಯಾರದಾದರೂ ಮುಂದಿನ ಒಂದೇ ಒಂದು ಹಲ್ಲು ಮುರಿದರೂ ಅವರ ಸೌಂದರ್ಯ ಮಂಕಾಗಿಬಿಡುತ್ತದೆ. ಒಂದಕ್ಕಿಂತ ಹೆಚ್ಚು ಹಲ್ಲು ಉದುರಿಹೋದರೆ ಮುಖದ ಅಂದವೇ ಹಾಳಾಗಿಬಿಡುತ್ತದೆ. ಆಹಾರ ಜಗಿಯಲು ಇನ್ನಿಲ್ಲದ ಸಮಸ್ಯೆ ಎದುರಾಗುತ್ತದೆ.
ವ್ಯಕ್ತಿತ್ವದ ಮೇಲೆ ಪ್ರಭಾವ
ಮೇಲಿನ ಮತ್ತು ಕೆಳಗಿನ ದಂತಪಂಕ್ತಿಗಳ ಮಧ್ಯದ ಗ್ಯಾಪ್ ಲೈನ್ ಆಕರ್ಷಕವಾಗಿ ಗೋಚರಿಸಲು ಹಲ್ಲುಗಳು ನೈಸರ್ಗಿಕವಾಗಿ ತಂತಮ್ಮ ಜಾಗಗಳಲ್ಲಿರುವುದು ತುಂಬಾ ಮುಖ್ಯ. ಯಾವುದಾದರೊಂದು ಹಲ್ಲು ಉದುರಿಹೋದರೆ, ಹಲ್ಲುಗಳ ಮಧ್ಯ ಕಂದರ ಉಂಟಾಗುತ್ತದೆ. ಇದರಿಂದಾಗಿ ದಂತಪಂಕ್ತಿ ಜಾಳುಜಾಳಾಗಿ ಗೋಚರಿಸುತ್ತದೆ ಮತ್ತು ಅಧರಗಳು ತೆಳುವಾಗಿ ಕಾಣತೊಡಗುತ್ತವೆ. ವ್ಯಕ್ತಿಯು ತನ್ನ ಪ್ರಸ್ತುತ ವಯೋಮಾನಕ್ಕಿಂತಲೂ ಹೆಚ್ಚು ಮುದಿ ಬಿದ್ದಂತೆ ಕಾಣಿಸಬಹುದು. ಹಲ್ಲುಗಳು ಬೀಳುವುದರಿಂದ ಉಚ್ಚಾರದಲ್ಲಿ ಅಸ್ಪಷ್ಟತೆ ತಲೆದೋರುವುದು ಖಚಿತ. ಹೀಗಾಗಿ ಅವರು ಸಾರ್ವಜನಿಕವಾಗಿ ಬದುಕಲು ಹಿಂದೇಟು ಹಾಕತೊಡಗುತ್ತಾರೆ.
ದಂತಪಂಕ್ತಿ ಮತ್ತು ವಸಡಿನ ಮೂಳೆ
ಏಕಾಏಕಿ ಹಲ್ಲು ಬೀಳುವುದರಿಂದ ದಂತಪಂಕ್ತಿ ಹಾಗೂ ವಸಡಿನ ಮೂಳೆಯ ಸದೃಢತೆಗೆ ದುಷ್ಪರಿಣಾಮ ಉಂಟಾಗುತ್ತದೆ. ಬಿದ್ದುಹೋದ ಹಲ್ಲಿನ ಜಾಗದಲ್ಲಿ ಬೇಗನೆ ಬೇರೆ ಹಲ್ಲುಗಳನ್ನು ಅಳವಡಿಸದಿದ್ದಲ್ಲಿ, ಹಲ್ಲುಗಳು ಕ್ರಮೇಣ ಸಡಿಲಗೊಳ್ಳುತ್ತವೆ. ಇದರಿಂದಾಗಿ ಎರಡೂ ದಂತಪಂಕ್ತಿಗಳ ನಡುವಿನ ಗ್ಯಾಪ್ ವಿರೂಪಗೊಳ್ಳುತ್ತದೆ, ಆಹಾರ ತುಂಡರಿಸಲು ಸಮಸ್ಯೆಯಾಗುತ್ತದೆ, ವಸಡಿನ ಒಳಭಾಗದಲ್ಲಿ ಗಾಯವುಂಟಾಗುತ್ತದೆ. ಇದೇ ಕಾರಣಕ್ಕೆ ಕ್ರಮೇಣ ಇತರ ಹಲ್ಲುಗಳೂ ಬೀಳತೊಡಗುತ್ತವೆ.
ಪೋಷಣೆಗೂ ಪ್ರಾಬ್ಲಂ
ಹಲ್ಲುಗಳ ಅಗಿಯುವ ಸಾಮರ್ಥ್ಯ ಕುಂಠಿತಗೊಂಡಾಗ ಮನುಷ್ಯ ಸರಾಗವಾಗಿ ಆಹಾರವನ್ನು ಜಗಿಯಲಾರ. ಹೀಗಾಗಿ ಮನುಷ್ಯ ದ್ರವಾಹಾರವನ್ನೇ ಅವಲಂಬಿಸಬೇಕಾಗುತ್ತದೆ. ಆದರೆ ದ್ರವಾಹಾರಗಳಲ್ಲಿ ಕಾರ್ಬೊಹೈಡ್ರೇಟ್ ಗಳು ವಿಪುಲವಾಗಿದ್ದು, ಪೋಷಕಾಂಶಗಳು ವಿರಳವಾಗಿರುತ್ತವೆ. ಬಹುಕಾಲ ಇಂತಹ ಆಹಾರ ಸೇವಿಸಿದಾಗ ವ್ಯಕ್ತಿಯ ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾಗಿ ಆತ ಅಪೌಷ್ಟಿಕತೆಗೆ ಬಲಿಯಾಗಬೇಕಾಗುತ್ತದೆ. ಪೋಷಕಾಂಶಗಳ ಕೊರತೆಯಿಂದಾಗಿ ಮಾಂಸಖಂಡಗಳು ಸೊರಗಿಹೋಗುತ್ತವೆ, ಕ್ಯಾಲೋರಿಗಳ ಕೊರತೆಯಿಂದ ದೇಹದ ಭಾರ ಇಳಿದುಹೋಗುತ್ತದೆ. ವಿಶೇಷವಾಗಿ ವಿಟಮಿನ್ ಗಳ ಕೊರತೆಯಿಂದಾಗಿ ಅನೀಮಿಯಾ ತಗುಲುವುದರೊಂದಿಗೆ, ದೇಹದ ಬಹುತೇಕ ಅಂಗಾಂಗಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.