ಶಿವಮೊಗ್ಗಕ್ಕೆ ಹೊರಡಲು ಇನ್ನಿದಕ್ಕಿಂತ ಕಾರಣ ಬೇಕೇ? ಸಹ್ಯಾದ್ರಿಯ ಮಡಿಲಲ್ಲಿರುವ ಶಿವಮೊಗ್ಗ ಜಿಲ್ಲೆಯು ಅನೇಕ ಸುಂದರ ಪ್ರವಾಸಿ ತಾಣಗಳನ್ನು ಹೊಂದಿದೆ. ವಿಶ್ವವಿಖ್ಯಾತ ಜೋಗ ಜಲಪಾತ ಈ ಜಿಲ್ಲೆಯ ಪ್ರಮುಖ ಆಕರ್ಷಣೆ. ಈ ಜಿಲ್ಲೆಯಲ್ಲಿ ನೋಡಬಹುದಾದ ಸ್ಥಳಗಳೆಂದರೆ ಲಿಂಗನಮಕ್ಕಿ ಡ್ಯಾಂ, ಗಾಜನೂರು ಡ್ಯಾಂ, ಸಕ್ರೆಬೈಲು ಆನೆ ಶಿಬಿರ, ತ್ಯಾವರೆಕೊಪ್ಪದ ಹುಲಿಸಿಂಹಧಾಮ, ಗುಡವಿ, ಮಂಡಗದ್ದೆಯ ಪಕ್ಷಿಧಾಮಗಳು, ಆಗುಂಬೆ, ಕುಂದಾದ್ರಿಬೆಟ್ಟ, ಕುಪ್ಪಳ್ಳಿಯ ಕವಿಶೈಲ, ಹೊನ್ನೆಮರಡು, ಶರಾವತಿ ನದಿಯ ಉಗಮಸ್ಥಾನ ಅಂಬುತೀರ್ಥ ಮುಂತಾದವು.

ದೇವಸ್ಥಾನಗಳತ್ತ ಗಮನಹರಿಸುವುದಾದರೆ ಕೆಳದಿಯ ದೇವಾಲಯಗಳು, ಇಕ್ಕೇರಿಯ ದೇವಾಲಯಗಳು, ಬನವಾಸಿಯ ಮಧುಕೇಶ್ವರ ದೇವಾಲಯ, ಸಿಗಂಧೂರಿನ ಚೌಡೇಶ್ವರಿ ದೇವಸ್ಥಾನ, ಚಂದ್ರಗುತ್ತಿಯ ರೇಣುಕಾದೇವಿ, ತುಂಗಭದ್ರಾ ನದಿಗಳು ಸಂಗಮಗೊಳ್ಳುವ `ಕೂಡ್ಲಿ’ ಎಂಬ ಸ್ಥಳದಲ್ಲಿರುವ ದೇವಾಲಯಗಳನ್ನು ನೋಡಬಹುದಾಗಿದೆ.

ಜೋಗ ಜಲಪಾತ

ಸಾಗರದಿಂದ ಸುಮಾರು 35 ಕಿ.ಮೀ. (ಶಿವಮೊಗ್ಗದಿಂದ 105 ಕಿ.ಮೀ) ದೂರದಲ್ಲಿ ವಿಶ್ವವಿಖ್ಯಾತ ಜೋಗ ಜಲಪಾತವಿದೆ. ಸುಮಾರು 962 ಅಡಿಗಳಷ್ಟು ಆಳದ ಕಮರಿಗೆ ಧುಮ್ಮಿಕ್ಕುವ ಈ ಜಲಪಾತ ರಾಜಾ, ರಾಣಿ, ರೋರರ್‌, ರಾಕೆಟ್‌ ಎಂಬ ನಾಲ್ಕು ಕವಲುಗಳನ್ನು ಹೊಂದಿದೆ. ಮಳೆಗಾಲದಲ್ಲಿ ಮೈದುಂಬಿ ಧುಮುಕುವ ಈ ಜಲಪಾತ ನಯನಮನೋಹರ. ಜಲಪಾತದ ಸಮೀಪದಲ್ಲಿ ಮಹಾತ್ಮಾ ಗಾಂಧಿ ವಿದ್ಯುದಾಗಾರವಿದೆ.

ಗಾಜನೂರು ಡ್ಯಾಂ

ಶಿವಮೊಗ್ಗ ತೀರ್ಥಹಳ್ಳಿ ರಸ್ತೆಯಲ್ಲಿ ಸುಮಾರು 10 ಕಿ.ಮೀ. ಪ್ರಯಾಣಿಸಿದರೆ ಗಾಜನೂರು ಡ್ಯಾಂ ಸಿಗುತ್ತದೆ. ತುಂಗಾ ನದಿಗೆ ಕಟ್ಟಿರುವ ಹಳೆಯ ಅಣೆಕಟ್ಟು ನೋಡಲು ಸುಂದರವಾಗಿದೆ.

ಸಕ್ರೆಬೈಲು ಆನೆ ಶಿಬಿರ

ಗಾಜನೂರು ಡ್ಯಾಂ ಹಿನ್ನೀರಿನ ದಡದಲ್ಲಿ 3 ಕಿ.ಮೀ. ದೂರದಲ್ಲಿ ಸಕ್ರೆಬೈಲು ಆನೆ ಕ್ಯಾಂಪಿದೆ. ಇಲ್ಲಿ ಕಾಡಿನ ಆನೆಗಳನ್ನು ಪಳಗಿಸುತ್ತಾರೆ. ಇಲ್ಲಿ ಸಾಕಿದ ದೊಡ್ಡ ಆನೆಗಳು ಮತ್ತು ಮರಿಯಾನೆಗಳಿವೆ. ಇದು ಮಕ್ಕಳಿಗೆ ಅಚ್ಚುಮೆಚ್ಚಿನ ತಾಣವಾಗಿದೆ. ಪ್ರವಾಸಿಗರು ಬೆಳಗ್ಗೆ 10 ಗಂಟೆಯೊಳಗೆ ಭೇಟಿ ನೀಡುವುದು ಸೂಕ್ತ.

ಮಂಡಗದ್ದೆ ಪಕ್ಷಿಧಾಮ

ಸಕ್ರೆಬೈಲಿನಿಂದ ತೀರ್ಥಹಳ್ಳಿಗೆ ಹೋಗುವ ದಾರಿಯಲ್ಲಿ ಮಂಡಗದ್ದೆ ಪಕ್ಷಿಧಾಮವಿದೆ. ಗಾಜನೂರು ಡ್ಯಾಂನ ಹಿನ್ನೀರಿನಲ್ಲಿರುವ ನಡುಗಡ್ಡೆಗಳಲ್ಲಿ ದೇಶವಿದೇಶಗಳಿಂದ ವಲಸೆ ಬಂದು ಗೂಡು ಕಟ್ಟಿಕೊಂಡಿರುವ ವಿವಿಧ ಜಾತಿಯ ಹಕ್ಕಿಗಳ ಕಲರವವನ್ನು ಮೇ ತಿಂಗಳಿಂದ ನವೆಂಬರ್‌ ವರೆಗೆ ಕೇಳಬಹುದು.

ಗುಡವಿ ಪಕ್ಷಿಧಾಮ

shivmogga-2

ಸಾಗರದಿಂದ 47 ಕಿ.ಮೀ. ಹಾಗೂ ಸೊರಬದಿಂದ 15 ಕಿ.ಮೀ. ದೂರದಲ್ಲಿ ಗುಡವಿ ಪಕ್ಷಿಧಾಮವಿದೆ. ಇಲ್ಲಿ ಪಕ್ಷಿ ವೀಕ್ಷಣೆಗೆ ವೀಕ್ಷಣಾ ಗೋಪುರಗಳಿವೆ. ಗುಡವಿ ಕೆರೆಯಲ್ಲಿ ಬೋಟಿಂಗ್‌ ವ್ಯವಸ್ಥೆಯಿದೆ. ಸುತ್ತಮುತ್ತಲಿನ ಪರಿಸರ ಸುಂದರವಾಗಿದೆ.

ತ್ಯಾವರೆ ಕೊಪ್ಪ

ಶಿವಮೊಗ್ಗದಿಂದ 10 ಕಿ.ಮೀ. ದೂರದಲ್ಲಿ ಸಾಗರಕ್ಕೆ ಹೋಗುವ ದಾರಿಯಲ್ಲಿ ತ್ಯಾವರೆಕೊಪ್ಪ ವನ್ಯಧಾಮವಿದೆ. ಇಲ್ಲಿ 20 ಎಕರೆಯಷ್ಟು ಪ್ರದೇಶದಲ್ಲಿ `ಟೈಗರ್‌ ಸಫಾರಿ’ ಇದೆ. ಮತ್ತೊಂದು ಬದಿಯಲ್ಲಿ ಲಯನ್‌ ಸಫಾರಿ ಇದೆ. ಇವುಗಳಲ್ಲದೆ ಚಿರತೆ, ಕರಡಿ, ನರಿ ಮುಂತಾದ ಪ್ರಾಣಿಗಳು, ವಿವಿಧ ರೀತಿಯ ಪಕ್ಷಿಗಳೂ ಇವೆ.

ಹೊನ್ನೆಮರಡು

ಬಂಗಾರದ ಮರಳಿನ ಪ್ರದೇಶವೆಂದು ಪ್ರಸಿದ್ಧಿಯಾಗಿರುವ ಈ ಸ್ಥಳ ದ್ವೀಪಗಳಿಂದ ಕೂಡಿದ್ದು, ಒಳ್ಳೆಯ ಪ್ರವಾಸಿ ತಾಣವಾಗಿದೆ. ಇಲ್ಲಿ ದೋಣಿ ವಿಹಾರ ಮಾಡಬಹುದು. ಪ್ರವಾಸಿಗಳಿಗೆ ತಂಗಲು ವಸತಿ ಸೌಕರ್ಯವಿದೆ. ಈ ಸ್ಥಳ ಸಾಗರದಿಂದ ಜೋಗಕ್ಕೆ ಹೋಗುವ ದಾರಿಯಲ್ಲಿ ತಾಳಗುಪ್ಪ ಸಮೀಪದಲ್ಲಿದೆ.

ಲಿಂಗನಮಕ್ಕಿ ಡ್ಯಾಂ

ಶರಾವತಿ ನದಿಗೆ `ಲಿಂಗನಮಕ್ಕಿ’ ಎಂಬಲ್ಲಿ ಅತಿ ಎತ್ತರವಾದ ಅಣೆಕಟ್ಟನ್ನು ಕಟ್ಟಲಾಗಿದೆ. ಈ ಅಣೆಕಟ್ಟು ಸಾಗರದಿಂದ 35 ಕಿ.ಮೀ. ದೂರದಲ್ಲಿದೆ. ಪ್ರಕೃತಿಯ ಮಡಿಲಲ್ಲಿರುವ ಈ ಅಣೆಕಟ್ಟು ಸುಂದರವಾಗಿದೆ.

ಕೂಡಲಿ

ಶಿವಮೊಗ್ಗ ಚನ್ನಗಿರಿ ರಸ್ತೆಯಲ್ಲಿ  ಸುಮಾರು 16 ಕಿ.ಮೀ. ದೂರದಲ್ಲಿ ತುಂಗಾ ಮತ್ತು ಭದ್ರಾ ನದಿಗಳು ಸೇರುವ ಸಂಗಮ ಸ್ಥಳವೇ ಕೂಡಲಿ ಕ್ಷೇತ್ರವಾಗಿದೆ. ಇಲ್ಲಿ ಹೊಯ್ಸಳ ಶೈಲಿಯ ರಾಮೇಶ್ವರ ದೇವಸ್ಥಾನ, ಶಾರದಾಂಬ ದೇವಸ್ಥಾನ ಹಾಗೂ ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ದಕ್ಷಿಣಾಮ್ನಾಯ ಪೀಠವಿದೆ.

ಸಿಗಂಧೂರು

ಸಾಗರದಿಂದ 45 ಕಿ.ಮೀ. ದೂರದಲ್ಲಿರುವ `ಹೊಳೆ ಬಾಗಿಲಿನ’ ನದಿ ದಂಡೆಗೆ ಹೋಗಿ ಶರಾವತಿ ಹಿನ್ನೀರಿನಲ್ಲಿ ಸುಮಾರು 2 ಕಿ.ಮೀ. ಲಾಂಚ್‌ ನಲ್ಲಿ ಪ್ರಯಾಣ ಮಾಡಿದರೆ `ತುಮರಿ’ ನದಿ ದಂಡೆ ಸಿಗುತ್ತದೆ. ಇಲ್ಲಿಂದ 6 ಕಿ.ಮೀ. ದೂರದಲ್ಲಿ ಸಿಗಂಧೂರು ಚೌಡೇಶ್ವರಿ ದೇವಿ ಕ್ಷೇತ್ರವಿದೆ. ಲಾಂಚ್‌ ನಲ್ಲಿ ಪ್ರಯಾಣ ಮಾಡುವಾಗ ನಿಸರ್ಗದ ರಮಣೀಯ ನೋಟವನ್ನು ಕಾಣಬಹುದು.

ಇಕ್ಕೇರಿ

ಸಾಗರದಿಂದ 6 ಕಿ.ಮೀ. ದೂರದಲ್ಲಿರುವ ಐತಿಹಾಸಿಕ ಸ್ಥಳ. ಕೆಳದಿ ನಾಯಕರಿಗೆ 2ನೇ ರಾಜಧಾನಿಯಾಗಿತ್ತು. ಅಘೋರೇಶ್ವರ ದೇವಾಲಯ, ಗಣಪತಿ ದೇವಾಲಯ ಮತ್ತು ಆಂಜನೇಯ ದೇವಸ್ಥಾನಗಳು ಇಲ್ಲಿನ ಪ್ರಮುಖ ದೇವಾಲಯಗಳಾಗಿವೆ.

ಕೆಳದಿ

ಸಾಗರದಿಂದ 6 ಕಿ.ಮೀ. ದೂರದಲ್ಲಿ ತುಂಗಾ ನದಿಯ ದಂಡೆಯ ಮೇಲೆ ಕೆಳದಿ ಎಂಬ ಊರಿದೆ. ಇದು ಕೆಳದಿ ನಾಯಕರಿಗೆ ಮೊದಲನೇ ರಾಜಧಾನಿಯಾಗಿತ್ತು. ರಾಮೇಶ್ವರ ಮತ್ತು ವೀರಭದ್ರೇಶ್ವರ ಎಂಬ ಪುರಾತನ ಕಾಲದ ದೇವಸ್ಥಾನಗಳಿವೆ. ಪ್ರಾಚೀನ ವಸ್ತು ಸಂಗ್ರಹಾಲಯ ಮತ್ತು ಐತಿಹಾಸಿಕ ಸಂಶೋಧನಾ ಕೇಂದ್ರವಿದೆ.

ಕುಪ್ಪಳ್ಳಿ

ರಾಷ್ಟ್ರಕವಿ ಕುವೆಂಪುರವರ ಹುಟ್ಟೂರು. ಇಲ್ಲಿಗೆ ಸಮೀಪದಲ್ಲಿ ಕವಿಗೆ ಪ್ರಿಯವಾದ `ಕವಿಶೈಲ’ವಿದೆ. ಈ ಸ್ಥಳ ಶಿವಮೊಗ್ಗದಿಂದ ಸುಮಾರು 78 ಕಿ.ಮೀ. ದೂರದಲ್ಲಿದೆ. ಇಲ್ಲಿ ಕುವೆಂಪು ಅಧ್ಯಯನ ಕೇಂದ್ರವಿದೆ.

ಕುವೆಂಪುರವರ ಸಾಹಿತ್ಯ ಕೃಷಿ ಮಾಡುವವರಿಗೆ ಸಾಕಷ್ಟು ಮಾಹಿತಿ ಈ ಕೇಂದ್ರದಲ್ಲಿ ದೊರೆಯುತ್ತದೆ. ಇಲ್ಲಿನ ಸಂಗ್ರಹಾಲಯದಲ್ಲಿ ಕುವೆಂಪುರವರು ಬಳಸುತ್ತಿದ್ದ ವಸ್ತುಗಳಿವೆ.

ಆಗುಂಬೆ

ದಕ್ಷಿಣ ಭಾರತದ ಚಿರಾಪುಂಜಿ ಎಂದು ಕರೆಯಲ್ಪಡುವ ಆಗುಂಬೆ ಶಿವಮೊಗ್ಗದಿಂದ ಸುಮಾರು 90 ಕಿ.ಮೀ. ದೂರದಲ್ಲಿದೆ. ಈ ಸ್ಥಳ ಸೂರ್ಯಾಸ್ತಮಾನ ನೋಡಲು ಪ್ರಶಸ್ತ ತಾಣವಾಗಿದೆ. ಇಲ್ಲಿಂದ ಶೃಂಗೇರಿ 23 ಕಿ.ಮೀ. ದೂರದಲ್ಲಿದೆ.

ಕುಂದಾದ್ರಿ ಬೆಟ್ಟ

ಸಮುದ್ರ ಮಟ್ಟದಿಂದ ಸುಮಾರು 3200 ಅಡಿಗಳಷ್ಟು ಎತ್ತರವಿರುವ ಈ ಸ್ಥಳ, ತೀರ್ಥಹಳ್ಳಿಯಿಂದ 30 ಕಿ.ಮೀ. ದೂರದಲ್ಲಿದೆ. ಈ ಸ್ಥಳದಿಂದ ಸುರ್ಯೋದಯ ಮತ್ತು ಸೂರ್ಯಾಸ್ತಮಾನ ವೀಕ್ಷಣೆ ಬಲು ರಮಣೀಯ. ಇಲ್ಲಿನ ಹಿತಕರ ತಂಪು ಹವೆ ವರ್ಷದ ಬಹುತೇಕ ದಿನಗಳಲ್ಲಿರುತ್ತದೆ. ಕುಂದಾದ್ರಿ ಬೆಟ್ಟ ಚಾರಣಿಗರ ನೆಚ್ಚಿನ ತಾಣವಾಗಿದೆ. ಬೆಟ್ಟದ ಮೇಲೆ ಜೈನ ಮಂದಿರವಿದೆ.

ಡಿ.ಎಸ್‌. ಚಂದ್ರಕುಮಾರ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ