ಚಿಕ್ಕ ವಯಸ್ಸಿನಲ್ಲಿಯೇ ಭರತನಾಟ್ಯ ಕಲೆಯಲ್ಲಿ ಮೇರು ಸಾಧನೆಯತ್ತ ಮುನ್ನಡೆಯುತ್ತಿರುವ ವಿದುಷಿ ಮಿತ್ರಾ ನವೀನ್, ಪಂದನಲ್ಲೂರು ಶೈಲಿಯಲ್ಲಿ ಭರತನಾಟ್ಯ ಅಭ್ಯಾಸ ಮಾಡಿದ್ದಾರೆ. 1979ರಲ್ಲಿ ಜನಿಸಿದ ಇವರು ಚಿಕ್ಕ ವಯಸ್ಸಿನಲ್ಲಿಯೇ ನೃತ್ಯ ಕಲಿಕೆ ಆರಂಭಿಸಿದರು. ಪ್ರಥಮ ಪ್ರಾರಂಭಿಕ ಪಾಠವನ್ನು ವಿದುಷಿ ಕೃಷ್ಣವೇಣಿಯರಲ್ಲಿ ಪ್ರಾರಂಭಿಸಿದರು. ನಂತರ ವಿದ್ವತ್ ಪಾಠಾಂತರದವರೆಗೂ ಗುರು ವಿದುಷಿ ಕೃಪಾಫಡ್ಕೆಯವರ ಬಳಿ ಅಭ್ಯಸಿಸಿದರು. ಅನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕರ್ನಾಟಕ ಕಲಾತಿಲಕ, ಶಾಂತಾ ಪ್ರಶಸ್ತಿ ಪುರಸ್ಕೃತರಾದ ನಾಟ್ಯಾಚಾರ್ಯ ಕೆ. ಮುರಳೀಧರ ರಾವ್ ಬಳಿ ಮುಂದುವರಿಸಿದರು.
ಇಂದು ತಮ್ಮದೇ ಆದ ಕಲಾ ಸಂಸ್ಥೆ `ನಾದ ವಿದ್ಯಾಲಯ’ ಸಂಗೀತ ಮತ್ತು ನೃತ್ಯ ಅಕಾಡೆಮಿ (ರಿ) ಮೂಲಕ ತಮ್ಮ ಪತಿ ಸಂಗೀತ ವಿದ್ವಾನ್ ಎಂ.ಎಸ್. ನವೀನ್ ರವರ ಜೊತೆಯಲ್ಲಿ ಕಲಾಸೇವೆ ಸಲ್ಲಿಸುತ್ತಾ, ಮೈಸೂರಿನಲ್ಲಿ ಮುಂಚೂಣಿಯಲ್ಲಿರುವ ಪ್ರಸಿದ್ಧ ಕಲಾವಿದರ ಸಾಲಿಗೆ ಸೇರಿದ್ದಾರೆ.
ಶೈಕ್ಷಣಿಕ ಸಾಧನೆ
ಇಂಗ್ಲಿಷ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿ, ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ವಿದ್ವತ್ ದರ್ಜೆಯ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ಪಡೆದು ಹೆಸರು ಗಳಿಸಿದ್ದಾರೆ. ಬೆಂಗಳೂರಿನ ದೂರದರ್ಶನದ `ಗ್ರೇಡೆಡ್’ ಕಲಾವಿದೆಯೂ ಆಗಿದ್ದಾರೆ. ಅಲ್ಲದೆ, ಎನ್.ಸಿ.ಸಿ.ಯ ಜಲಸೇವೆ (ನೇವಿ)ಯ ಹಲವಾರು ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಾರೆ.
2003ರಲ್ಲಿ ತಮ್ಮ ಭರತನಾಟ್ಯ ರಂಗಪ್ರವೇಶವನ್ನು ವಿದ್ವಜ್ಜನರ ಸಮ್ಮುಖದಲ್ಲಿ ಗುರುಗಳ ಪ್ರೇರಣೆಯ ಮೂಲಕ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನೃತ್ಯ ಪ್ರದರ್ಶಿಸಿ ಕಲಾರಸಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನೀಡಿದ ಕಾರ್ಯಕ್ರಮಗಳು
ಮಿತ್ರಾ ನವೀನ್ ಎಲ್ಲಾ ಪ್ರಖ್ಯಾತ ಮಹೋತ್ಸವಗಳು, ರಾಜ್ಯ ಹಾಗೂ ರಾಷ್ಟ್ರಮಟ್ಟದ ಭರತನಾಟ್ಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಅವುಗಳಲ್ಲಿ ಮುಖ್ಯವಾದವು : ಮೈಸೂರು ದಸರಾ ಮಹೋತ್ಸವ, ಕರಾವಳಿ ಉತ್ಸವ, ಸರ್ಧರ್ಮ ಸಾಹಿತ್ಯ ಸಮ್ಮೇಳನ, ತಲಕಾಡು ಪಂಚಲಿಂಗ ಉತ್ಸವ, ಕುಂಭಮೇಳ, ಪಲ್ಲೋತ್ಸವ, ಭಾರತೀಯ ವಿದ್ಯಾಭವನದ ಭವನೋತ್ಸವ, ಇಸ್ಕಾನ್‌ವತಿಯಿಂದ ಗೀತಾಜಯಂತಿ, ನರಸಿಂಹ ಜಯಂತಿ, ರೋಟರಿ ಸೆಂಟ್ರಲ್ ಆಯೋಜಿಸಿದ್ದ ಸಾಂಸ್ಕೃತಿಕ ಉತ್ಸವ, ಬೆಂಗಳೂರು ದೂರದರ್ಶನದ ಕಾರ್ಯಕ್ರಮಗಳು, ಐ.ಸಿ.ಸಿ.ಆರ್ ವತಿಯಿಂದ `ಯವನಿಕಾ’ ಕಾರ್ಯಕ್ರಮ, ಧರ್ಮಸ್ಥಳದ ಲಕ್ಷದೀಪೋತ್ಸವ, ಮಡಿಕೇರಿ ದಸರಾ, ಮೈಸೂರು ವಸ್ತುಪ್ರದರ್ಶನ ಪ್ರಾಧಿಕಾರದ ನೃತ್ಯ ಕಾರ್ಯಕ್ರಮ, ಕೇಂದ್ರ ಸರ್ಕಾರದ ದಕ್ಷಿಣ ಲಯ ಯುವ ಸಂಗೀತ ನೃತ್ಯ ಮಹೋತ್ಸವ, ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಕಾರ್ಯಕ್ರಮ, ಗ್ರಾಮಶ್ರೀ ಮೇಳ ಅಹಮದಾಬಾದ್, ಗುಜರಾತ್ ನಲ್ಲಿ ನೃತ್ಯ ಪ್ರದರ್ಶನ, ಎನ್.ಸಿ.ಇ.ಆರ್.ಟಿ ವತಿಯಿಂದ ಮೈಸೂರಿನ ಆರ್‌ಐಇ ಪ್ರಾದೇಶಿಕ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ರಾಷ್ಟ್ರೀಯ ಭಾವೈಕ್ಯತೆ ಸಾರುವ ಸಂಗೀತ, ನೃತ್ಯ ಪ್ರದರ್ಶನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಎರಡು ವರ್ಷಗಳ ಕಾಲ ಸೇಲೆ ಸಲ್ಲಿಸಿದ್ದಾರೆ. ಈ ಮೂಲಕ ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕದ ಹತ್ತು ಸಾವಿರ ಮಕ್ಕಳಿಗೆ ತರಬೇತಿ ನೀಡಿದ್ದಾರೆ. ಜೊತೆಗೆ ಹಲವಾರು ನೃತ್ಯ ಕಲಾವಿದರಿಗೆ ನಟುವಾಂಗ ಸಹಕಾರ ಕೂಡ ನೀಡಿದ್ದಾರೆ.
ಕಲಾಸೇವೆ ಏಕ್ಯಕ್ತಿ ಪ್ರದರ್ಶನ, ಸಮೂಹ ನೃತ್ಯ ರೂಪಕಗಳನ್ನು ನಿರ್ದೇಶಿಸುವ ಮಿತ್ರಾ ನವೀನ್ ಭರತನಾಟ್ಯವನ್ನು ವೃತ್ತಿ, ಪ್ರವೃತ್ತಿ, ಹವ್ಯಾಸ ಒಟ್ಟಾರೆ ಹೇಳುವುದಾದರೆ ಜೀವನದ ಉಸಿರನ್ನಾಗಿಸಿಕೊಂಡಿದ್ದಾರೆ. ಭರತನಾಟ್ಯ ಶಿಕ್ಷಣವನ್ನು ಕೇವಲ ಮೇಲ್ವರ್ಗದ ಜನರಿಗೆ ಮಾತ್ರ ಮೀಸಲಾಗಿರಿಸದೆ, ಮಧ್ಯಮ ಹಾಗೂ ಕೆಳರ್ಗದ ಆಸಕ್ತರಿಗೂ ಬೋಧಿಸುತ್ತಿದ್ದಾರೆ. ಮಹಿಳೆಯರಿಗೆ ವಿಶೇಷ ತರಬೇತಿ ನೀಡುತ್ತ ಕಲೆಗೆ ವಯಸ್ಸಿನ ಅಂತರವಿಲ್ಲವೆಂದು ನಿರೂಪಿಸಿದ್ದಾರೆ. ಇವರ ಸಂಸ್ಥೆಯಲ್ಲಿ ಅಗತ್ಯವಿರುವ ಕೆಲವು ಮಕ್ಕಳು ಉಚಿತ ಶಿಕ್ಷಣ ಸಹ ಪಡೆಯುತ್ತಿದ್ದಾರೆ.
ಸೃಜನಶೀಲ ಕಾರ್ಯಕ್ರಮಗಳು
ಭರತನಾಟ್ಯ ಶಾಸ್ತ್ರಕ್ಕೆ ಎಲ್ಲೂ ಚ್ಯುತಿ ಬಾರದ ಹಾಗೆ ಶಿಕ್ಷಣವನ್ನು ಗುರಿಯಾಗಿಸಿ ಪಾಠಾಂತರ ನೀಡುತ್ತಾ ಬಂದಿದ್ದಾರೆ. ಹಳೆ ಬೇರು ಹೊಸ ಚಿಗುರು ಎಂಬಂತೆ ನಮ್ಮ ಪೂರ್ವಿಕರು ಅಂದರೆ ಕೃತಿಕಾರರು, ವಾಗ್ಮೇಯಕಾರರು, ದಾಸವರೇಣ್ಯರು, ತತ್ವಜ್ಞಾನಿಗಳು ರಚಿಸಿದ ಲಕ್ಷಾಂತರ ಅತ್ಯುನ್ನತ ಶ್ರೇಷ್ಠ ರಚನೆಗಳನ್ನು ಹೊರತರುವ ಪ್ರಯತ್ನದಲ್ಲಿ, ಅವರದೇ ರಚನೆಗಳನ್ನು ಅಳವಡಿಸಿ ನೃತ್ಯರೂಪಕಗಳನ್ನು ರಚಿಸಿ, ನಿರೂಪಿಸಿ, ನಿರ್ದೇಶಿಸಿದ್ದಾರೆ. ಇದು ನಿಜವಾಗಿಯೂ ಇವರ ಶ್ಲಾಘನೀಯ ಸಾಧನೆಯಾಗಿದೆ! ಅಂತಹ ನೃತ್ಯ ರೂಪಕಗಳಲ್ಲಿ ಶ್ರೀ ಕೃಷ್ಣವಿಲಾಸ, ದೇವಿ ವೈಭೋಗ, ಮಹದೇಶ್ವರ ವೈಭವ, ಪುರಂದರದಾಸಾಮೃತ, ಗೀತಾಮೃತಸಾರ, ಪುಣ್ಯಕೋಟಿ, ರಾಮಾಯಣ ದರ್ಶನಂ ಕೆಲವು. ಇದಲ್ಲದೆ ಇನ್ನೂ ಹಲವಾರು ರೂಪಕಗಳನ್ನು ನೀಡುವಲ್ಲಿ ತೊಡಗಿಸಿಕೊಂಡಿದ್ದಾರೆ.
ವೃತ್ತಿ ಜೀವನ ವಿದುಷಿ ಮಿತ್ರಾ ನವೀನ್ ದಂಪತಿಗಳ ಕನಸಿನ ಕೂಸಾದ `ನಾದವಿದ್ಯಾಲಯ’ ಸಂಗೀತ ಮತ್ತು ನೃತ್ಯ ಅಕಾಡೆಮಿ (ರಿ) ಯಿಂದ ನೂರಾರು ಮಕ್ಕಳು ಕರ್ನಾಟಕ ಶಾಸ್ತ್ರೀಯ ಸಂಗೀತ, ನೃತ್ಯ ಹಾಗೂ ಕೀಬೋರ್ಡ್ ತರಬೇತಿ ಪಡೆಯುತ್ತಿದ್ದಾರೆ. ಪ್ರತಿ ವರ್ಷ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸುವ ಜೂನಿಯರ್ ಹಾಗೂ ವಿದ್ವತ್ ಪರೀಕ್ಷೆಗಳಲ್ಲಿ ನಾದವಿದ್ಯಾಲಯದ ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದುತ್ತಿದ್ದಾರೆ. ಅನೇಕ ವಿದ್ಯಾರ್ಥಿಗಳು ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ ಮತ್ತು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಬೆರಳೆಣಿಕೆಗೂ ಮೀರಿದ ಹಲವಾರು ವಿದ್ಯಾರ್ಥಿಗಳು ಗುರುವಂದನಾ ರೂಪದಲ್ಲಿ ತಮ್ಮ ರಂಗಪ್ರವೇಶವನ್ನು ಸಲ್ಲಿಸಿರುತ್ತಾರೆ. ಮಿತ್ರಾ ನವೀನ್ ಅವರಿಗೆ 2013ರ `ಕಲ್ಪಶ್ರೀ’ ಪುರಸ್ಕಾರ ಲಭಿಸಿದೆ.
ಮಿತ್ರಾ ನವೀನ್ ತಮ್ಮ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕಾರ, ಸಂಸ್ಕೃತಿ, ಶಾಸ್ತ್ರೀಯತೆ, ಆಧ್ಯಾತ್ಮ, ತತ್ವ, ರೀತಿ ನೀತಿಗಳನ್ನು ನೀಡುವ ಪ್ರಯತ್ನದಲ್ಲಿ ಹಲವಾರು ಯೋಗ, ಪ್ರಸಾಧನ, ಸಂಗೀತ, ನಟುವಾಂಗದ ಕಾರ್ಯಾಗಾರಗಳು, ಉಪನ್ಯಾಸಗಳು, ಶೈಕ್ಷಣಿಕ ಪ್ರವಾಸಗಳನ್ನು ನುರಿತ ತಜ್ಞರಿಂದ ಏರ್ಪಡಿಸುತ್ತಾರೆ. ನಾದವಿದ್ಯಾಲಯದ ವಾರ್ಷಿಕೋತ್ಸವದ `ನಾದನೃತ್ಯೋಪಾಸನ’ ಸಂಗೀತ ನೃತ್ಯೋತ್ಸದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಿರಿಯ ಕಲಾವಿದರನ್ನು ಗುರುತಿಸಿ, ಗೌರವ ಸಮರ್ಪಿಸಿ, ಸನ್ಮಾನಿಸುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿರುವ ಮಿತ್ರಾ ನವೀನ್ ನಮ್ಮ ರಾಷ್ಟ್ರಕ್ಕೆ ಇನ್ನೂ ಹೆಚ್ಚಿನ ಕೀರ್ತಿ ತರಲಿ ಎಂದು ಗೃಹಶೋಭಾ ಹಾರೈಸುತ್ತಾಳೆ.
– ಬಿ. ಬಸವರಾಜು