ದೀಪದ ಹಬ್ಬದಲ್ಲಿ ನಮ್ಮವರ ಮೇಲೆ ನಾನು ಅಗಾಧ ಪ್ರೀತಿ ತೋರ್ಪಡಿಸುತ್ತೇನೆಂದು ನಿಮಗೆ ನೀವೇ ಪ್ರಮಾಣ ಮಾಡಿ. ನಿಮ್ಮ ಈ ಪ್ರಮಾಣ ಎಂದೂ ಮುಗಿಯದ ಖುಷಿ ನೀಡುತ್ತದೆ.
ದೀಪಾವಳಿ ಖುಷಿಯ ಹಬ್ಬ. ಈ ಹಬ್ಬದ ಸಂದರ್ಭದಲ್ಲಿ ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡು ಖುಷಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಾರೆ. ಆದರೆ ಆಧುನಿಕ ಸನ್ನಿವೇಶದಲ್ಲಿ ಕೆಲವರು ಖುಷಿಯ ಈ ಹಬ್ಬದಲ್ಲಿ ಕಹಿ ಬಿತ್ತಲು ಶುರು ಮಾಡಿದ್ದಾರೆ. ಅಂಧಕಾರದಲ್ಲಿ ಬೆಳಕು ಬೀರುವ ಬದಲು ಕೆಲವು ಸ್ತ್ರೀ-ಪುರುಷರು ಜೂಜಾಟ ಹಾಗೂ ಮದ್ಯದ ಅಮಲಿನಲ್ಲಿ ಕತ್ತಲೆಯ ದಾರಿಯಲ್ಲಿ ನಡೆಯುತ್ತ ದೀಪಾವಳಿಯ ಖುಷಿಯಿಂದ ಕೂಡಿದ ಜೀವನದಲ್ಲಿ ಕಹಿಬೆರೆಸುವ ಯತ್ನ ಮಾಡುತ್ತಿದ್ದಾರೆ.
ದೀಪಾವಳಿಯ ಹಬ್ಬದಲ್ಲಿ ಜೂಜಾಟ ಆಡುವ ಪರಂಪರೆ ಯಾವುದೋ ಮೂಢನಂಬಿಕೆಯ ಕಾರಣದಿಂದ ಆರಂಭವಾಗಿತ್ತು. ಆಧುನಿಕ ಸನ್ನಿವೇಶದಲ್ಲಿ ಹಣದ ಅಧಿಕ ಲಭ್ಯತೆ, ಸುಖಸೌಲಭ್ಯಗಳ ಕಾರಣದಿಂದಾಗಿ ಮನೆಮನೆಯಲ್ಲಿ ಜೂಜು ಅಡ್ಡೆಗಳು ತೆರೆಯುತ್ತಿವೆ.
ಈಗ ಫೈವ್ ಸ್ಟಾರ್ ಹೋಟೆಲ್ ಗಳಲ್ಲೂ ಕೂಡ ಜೂಜಾಟಗಳನ್ನು ಏರ್ಪಡಿಸಲಾಗುತ್ತಿದೆ. ಕಾರ್ಡ್ ಪಾರ್ಟಿಗಳ ಹೆಸರಿನ ಮೇಲೆ ಸಾವಿರ ಲಕ್ಷಗಳಲ್ಲ, ಕೋಟ್ಯಂತರ ರೂಪಾಯಿಗಳ ಜೂಜಾಟ ಆಡಲಾಗುತ್ತಿದೆ. ಮದ್ಯ ಸೇವನೆ ಕೂಡ ಜೋರಾಗಿಯೇ ಇರುತ್ತದೆ.
ಮೊದಲು ಈ ಜೂಜಾಟ ಹಾಗೂ ಮದ್ಯ ಪುರುಷರಿಗಷ್ಟೇ ಸೀಮಿತವಾಗಿತ್ತು. ಆದರೆ ಈಗ ಮಹಿಳೆಯರೂ ಇದರಲ್ಲಿ ಶಾಮೀಲಾಗುತ್ತಿದ್ದಾರೆ. ಇಷ್ಟೇ ಅಲ್ಲ, ಮದ್ಯದ ಪಾರ್ಟಿಗಳಲ್ಲಿ ಸ್ತ್ರೀಯರು ನಾ ಮುಂದೆ ತಾ ಮುಂದೆ ಎಂಬಂತೆ ಪಾಲ್ಗೊಳ್ಳುತ್ತಿದ್ದಾರೆ.
ದೀಪಾವಳಿಯ ಜೂಜಾಟದಲ್ಲಿ ಗೆದ್ದ ವ್ಯಕ್ತಿ ವರ್ಷವಿಡೀ ಗೆಲ್ಲುತ್ತಾ ಇರುತ್ತಾನೆ ಎನ್ನುವ ಮೂಢನಂಬಿಕೆಯಿಂದ ಎಲ್ಲ ವರ್ಗದ ಜನರು ಜೂಜಾಟದಲ್ಲಿ ಪಾಲ್ಗೊಳ್ಳುತ್ತಾರೆ. ಸ್ತ್ರೀಯರೂ ಕೂಡ ಜೂಜಾಟದಲ್ಲಿ ಹಿಂದಿಲ್ಲ. ಶ್ರೀಮಂತ ವರ್ಗದ ಮಹಿಳೆಯರಷ್ಟೇ ಅಲ್ಲ, ಮಧ್ಯಮ ವರ್ಗದ ಸ್ತ್ರೀಯರೂ ಕೂಡ ಜೂಜಾಟದಲ್ಲಿ ಪಾಲ್ಗೊಳ್ಳುತ್ತಾರೆ. ಶ್ರೀಮಂತ ವರ್ಗದವರಿಗಂತೂ ಅದು ಪ್ರತಿಷ್ಠೆಯ ಸಂಕೇತವಾಗಿದೆ.
ದೀಪಾವಳಿಯ ರಾತ್ರಿಯಲ್ಲಷ್ಟೇ ಅಲ್ಲ, ದೀಪಾವಳಿಯ ಹಿಂದಿನ ಮುಂದಿನ ದಿನಗಳಲ್ಲೂ ಜೂಜಾಟ ಆಡಲಾಗುತ್ತದೆ. ಕ್ಯಾಸಿನೊ, ಫಾರ್ಮ್ ಹೌಸ್ ಹಾಗೂ ದೊಡ್ಡ ದೊಡ್ಡ ಹೋಟೆಲ್ ಗಳಲ್ಲಿ ಹಾಲ್ ಬುಕ್ ಮಾಡಿ ಜೂಜಾಟ ಏರ್ಪಡಿಸಲಾಗುತ್ತದೆ. ಇದರಲ್ಲಿ ಭಾರಿ ಮೊತ್ತವನ್ನು ಪಣಕ್ಕೊಡ್ಡಲಾಗುತ್ತದೆ. 20-30 ಸಾವಿರ ರೂ. ಸೋಲುವ ವ್ಯಕ್ತಿಯ ಕಡೆ ಯಾರೂ ನೋಡುವುದೇ ಇಲ್ಲ, 5-10 ಲಕ್ಷ ರೂ. ಸೋಲುವವನ ಹೆಸರು ಎಲ್ಲರ ಬಾಯಲ್ಲೂ ಇರುತ್ತದೆ.
ಲಕ್ಷ ಕೋಟಿ ಪಣಕ್ಕೆ ಕ್ಯಾಸಿನೊದಲ್ಲಿ 10-20 ಲಕ್ಷ ರೂ.ಗಳನ್ನು ಪಣಕ್ಕೊಡ್ಡುವವರಿಗಿಂತ ಈಗ 2-3 ಕೋಟಿ ರೂ.ಗಳನ್ನು ಪಣಕ್ಕೊಡ್ಡುವವರೂ ಕೂಡ ಮುಂದೆ ಬರುತ್ತಿದ್ದಾರೆ. ಸ್ತ್ರೀಯರು ದೊಡ್ಡ ಮೊತ್ತವನ್ನು ಸೋತ ಬಳಿಕ ದುಃಖಿತರಾಗುವ ಬದಲು ಖುಷಿಗೊಳ್ಳುವುದನ್ನು ಕಾಣಬಹುದಾಗಿದೆ. ಹಣ ಕಳೆದುಕೊಳ್ಳುವುದು ಕೂಡ ಈಗ ಪ್ರತಿಷ್ಠೆಯ ಸಂಕೇತವಾಗಿಬಿಟ್ಟಿದೆ. ದೀಪಾವಳಿ ಹಬ್ಬದಲ್ಲಿ 2-3 ಲಕ್ಷ ರೂ. ಕಳೆದುಕೊಳ್ಳುವ ಮಹಿಳೆ ಕಿಟಿ ಪಾರ್ಟಿಯಲ್ಲಿ ಅತ್ಯಂತ ಹೆಮ್ಮೆಯಿಂದ ತಾನು ಕಳೆದುಕೊಂಡ ಹಣದ ಬಗ್ಗೆ ಹೇಳುತ್ತಾಳೆ. ಆಗ ಉಳಿದ ಮಹಿಳೆಯರು ಅವಳನ್ನು ಗೌರವದ ದೃಷ್ಟಿಯಿಂದ ನೋಡುತ್ತಾರೆ.
ಜೂಜಾಟದ ಪರಂಪರೆಯನ್ನು ಈಗ ಕಿಟಿ ಪಾರ್ಟಿಯಲ್ಲೂ ನೋಡಬಹುದಾಗಿದೆ. ಅಂದಹಾಗೆ ಮಹಿಳೆಯರು ಈಗ ಕಿಟಿಪಾರ್ಟಿಗಳಲ್ಲಿ ಬೇಕೆಂದಾಗ ಜೂಜಾಟದಲ್ಲಿ ನಿರತರಾಗಿರುವುದನ್ನು ಕಾಣಬಹುದು. ಆದರೆ ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಅದನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಆಡಲಾಗುತ್ತದೆ.
ದೀಪಾವಳಿಯ ಆಸುಪಾಸಿನ ದಿನಗಳಲ್ಲಿ ಯಾವ ಮನೆ ಅಥವಾ ಫ್ಲ್ಯಾಟ್ ನಲ್ಲಿ ಕಿಟಿ ಪಾರ್ಟಿ ಏರ್ಪಡಿಸಲಾಗಿರುತ್ತದೋ, ಆ ಮನೆಯ ಮಹಿಳೆ ಅದರಲ್ಲಿ ಇಸ್ಪೀಟ್ ಆಟವನ್ನು ಸೇರಿಸಿರುತ್ತಾಳೆ. ಪಾರ್ಟಿಯಲ್ಲಿ ಮಹಿಳೆಯರು ಬೇರೆಬೇರೆ ಗುಂಪು ರಚಿಸಿಕೊಂಡು ಜೂಜಾಟದಲ್ಲಿ ನಿರತರಾಗುತ್ತಾರೆ.
ದೀಪಾವಳಿಯ ಜೂಜಾಟಗಳ ಏರ್ಪಾಡು ಹೋಟೆಲ್ ಗಿಂತ ಹೆಚ್ಚಾಗಿ ಫಾರ್ಮ್ ಹೌಸ್ ಗಳಲ್ಲೇ ಮಾಡಲಾಗುತ್ತದೆ. ಏಕೆಂದರೆ ದೀಪಾವಳಿಯ ಸಂದರ್ಭಗಳಲ್ಲಿ ಹೋಟೆಲ್ ಗಳಲ್ಲಿ ಜಾಗ ಸಿಗುವುದೇ ಕಷ್ಟವಾಗುತ್ತದೆ. ಬಹಳಷ್ಟು ಸ್ತ್ರೀ-ಪುರುಷರು ಹೋಟೆಲ್ ಗಳಿಗೆ ಹೋಗಲು ಇಷ್ಟಪಡುವುದಿಲ್ಲ. ಇಂತಹ ಜನರು ಫಾರ್ಮ್ ಹೌಸ್ ಗಳಲ್ಲಿ ಕಾರ್ಡ್ ಪಾರ್ಟಿಗಳ ಹೆಸರಿನ ಮೇಲೆ ಪಾರ್ಟಿ ಏರ್ಪಡಿಸುತ್ತಾರೆ. ಆಯೋಜಕರು ತಮ್ಮ ಪರಿಚಿತರನ್ನು ಈ ಪಾರ್ಟಿಗಳಿಗೆ ಆಹ್ವಾನಿಸುತ್ತಾರೆ. ಫೇಸ್ ಬುಕ್ ನಲ್ಲಿ ಈ ಬಗ್ಗೆ ತಿಳಿಸಿ ಇತರರನ್ನು ಆಮಂತ್ರಿಸಲಾಗುತ್ತದೆ. ಬೇರೆಯವರು ಫೋನ್‌ನಲ್ಲಿ ಸೀಟ್ ಬುಕ್ ಮಾಡಿ ಪಾರ್ಟಿಯಲ್ಲಿ ಸೇರ್ಪಡೆಗೊಳ್ಳುತ್ತಾರೆ.
ದೀಪಾವಳಿಯಂದು ಜೂಜಾಟ, ಮೋಜು ಮಜ ಮಾಡಲು ಈಗ ಕಾರ್ಡ್ ಪಾರ್ಟಿಗಳನ್ನು ಆಯೋಜಿಸಲಾಗುತ್ತದೆ. ಕಾರ್ಡ್ ಪಾರ್ಟಿಗಳನ್ನು ಫಾರ್ಮ್ ಹೌಸ್ ಗಳಲ್ಲಿ ಏರ್ಪಡಿಸಲಾಗುತ್ತದೆ. ಮದ್ಯದ ಪಾರ್ಟಿಗಳು ಕಾರ್ಡ್ ಪಾರ್ಟಿಗಳಲ್ಲಿ ಮುಕ್ತವಾಗಿ ಜೂಜಾಟ ನಡೆಯುತ್ತದೆ ಹಾಗೂ ಮದ್ಯದ ಹಾವಳಿಯೂ ಜೋರಾಗಿಯೇ ಇರುತ್ತದೆ. ಈ ಫಾರ್ಮ್ ಹೌಸ್ ಗಳಲ್ಲಿ ಪೊಲೀಸರ ಹಸ್ತಕ್ಷೇಪ ಅತ್ಯಂತ ಕಡಿಮೆ. ಏಕೆಂದರೆ ಈ ಫಾರ್ಮ್ ಹೌಸ್ ಗಳು ದೊಡ್ಡ ದೊಡ್ಡ ಉದ್ದಿಮೆದಾರರಿಗೆ ಸೇರಿರುತ್ತವೆ. ಈ ಉದ್ದಿಮೆದಾರರಿಗೆ ದೊಡ್ಡ ದೊಡ್ಡ ರಾಜಕಾರಣಿಗಳಿಂದ ರಕ್ಷಣೆಯೂ ದೊರೆಯುತ್ತದೆ.
ಮುಖಂಡರಿಂದ ಸಂರಕ್ಷಣೆ ದೊರೆತ ಪಾರ್ಟಿಗಳಲ್ಲಿ ಜೂಜಾಟದ ಜೊತೆಗೆ ಮದ್ಯ ಹಾಗೂ ಇತರೆ ಮೋಜಿನ ಪಾರ್ಟಿಗಳು ನಡೆಯುತ್ತವೆ. ಇಸ್ಪೀಟಾಟವನ್ನು ಮಹಿಳೆ ಹಾಗೂ ಪುರುಷರು ಜೊತೆಗೆ ಆಡುತ್ತಾರೆ. ಹೀಗೆ ಬೇರೆ ಬೇರೆ ಜೋಡಿಗಳು ಸೇರಿ ಮೋಜು ಮಜ ಕೂಡ ಮಾಡುತ್ತಾರೆ.
ಜೂಜಾಟದ ವಿಧಾನಗಳು ಕೂಡ ಹೋಟೆಲ್ ಗಳಲ್ಲಿ ಹಾಗೂ ಫಾರ್ಮ್ ಹೌಸ್ ಗಳಲ್ಲಿ ಬೇರೆ ಬೇರೆ ರೂಪ ಪಡೆದುಕೊಳ್ಳುತ್ತವೆ. ಇಂತಹ ಪಾರ್ಟಿಗಳಲ್ಲಿ ಪಾಲ್ಗೊಳ್ಳುವ ನವ ಯುವತಿಯರು ಮನೆ ಅಥವಾ ಆಫೀಸಿನಲ್ಲಿ ಯಾರೊಬ್ಬರ ಮುಂದೆಯೂ ಬಾಯಿ ಬಿಡುವುದಿಲ್ಲ. ಆದರೆ ಹೆಚ್ಚಿನ ಯುವತಿಯರು ಇಂತಹ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಾರೆ.
ಒಬ್ಬ ಯುವತಿ ಕಾರ್ಡ್ ಪಾರ್ಟಿ ಕುರಿತಂತೆ ಹೇಳಿದಳು, ಅವಳು ಮುಂಚೆ ತನ್ನ ಬಾಯ್ ಫ್ರೆಂಡ್ ಜೊತೆಗೆ `ಲಿವ್ ಇನ್ ರಿಲೇಶನ್ ಶಿಪ್’ನಲ್ಲಿದ್ದಳು. ಅವನ ಜೊತೆ ಅವಳು ಹಲವು ಕಾರ್ಡ್ ಪಾರ್ಟಿಗಳಿಗೆ ಹೋಗುತ್ತಿದ್ದಳು. ಕಳೆದ ವರ್ಷ ದೀಪಾವಳಿಯ ಸಂದರ್ಭದಲ್ಲಿ ಹೋಗಿದ್ದ ಕಾರ್ಡ್ ಪಾರ್ಟಿಯಲ್ಲಿ ಟೆಡ್ಡಿಬೇರ್ ಆಟ ಆಡಿದ್ದಳು.
ಆ ಪಾರ್ಟಿಯಲ್ಲಿ ಗಂಡಹೆಂಡತಿಯರು ಹಾಗೂ ಕೆಲವು ಪುರುಷರು ತಮ್ಮ ಗರ್ಲ್ ಫ್ರೆಂಡ್ ಗಳೊಂದಿಗೆ ಬಂದಿದ್ದರು. ಪಾರ್ಟಿಯಲ್ಲಿ ಒಂದು ದೊಡ್ಡ ಟೇಬಲ್ ಮೇಲೆ ಒಂದು ಟೆಡ್ಡಿಬೇರ್ ಇಡಲಾಗಿತ್ತು. ದೂರದಲ್ಲಿ ನಿಂತ ಯುವಕ ಯುವತಿಯರು ಕೈಯಲ್ಲಿ ರಿಂಗ್ ಹಿಡಿದು ಆ ಟೆಡ್ಡಿ ಬೇರ್ ಮೇಲೆ ಎಸೆಯುತ್ತಿದ್ದರು. ಮೊದಲು ಒಬ್ಬ ಯುವತಿ ಟೆಡ್ಡಿಬೇರ್ ಮೇಲೆ ರಿಂಗ್ ಎಸೆದಳು. ಅದು ಟೆಡ್ಡಿ ಬೇರ್ ಮೇಲೆ ಹೋಗಿ ಸರಿಯಾಗಿ ಕೂತಿತು. ಈಗ ಯುವಕರ ಸರದಿ. ಒಬ್ಬ ಯುವಕ ರಿಂಗ್ ಎಸೆದ. ಅದು ಟೆಡ್ಡಿ ಬೇರ್ ಮೇಲೆ ಬೀಳಲಿಲ್ಲ.
ನಂತರ ಮತ್ತೊಬ್ಬ ಯುವಕ ಬಂದ, ಅವನ ಗುರಿಯೂ ತಪ್ಪಿತು. ಹೀಗೆ 5-6 ಜನ ಯುವಕರು ಪ್ರಯತ್ನಿಸಿದರೂ ಯಾರೂ ಯಶಸ್ವಿಯಾಗಲಿಲ್ಲ. ಕೊನೆಗೊಬ್ಬ ಯುವಕ ಟೆಡ್ಡಿಬೇರ್ ಮೇಲೆ ರಿಂಗ್ ಬೀಳಿಸುವಲ್ಲಿ ಯಶಸ್ವಿಯಾದ. ಮೋಜುಮಜದ ಆಧಾರ ದೀಪಾವಳಿ ಸಮಯದಲ್ಲಿ ಜೂಜಾಟ ಆಡುವವರ ಕಥೆ ಕೇಳಿದರೆ ಮಹಾಭಾರತದ ಯುಧಿಷ್ಠಿರ ಜೂಜಾಟ ಆಡಿದ್ದು, ದ್ರೌಪದಿಯನ್ನು ಕಳೆದುಕೊಂಡಿದ್ದು ಕೂಡ ಕ್ಷುಲ್ಲಕ ಎನಿಸುತ್ತದೆ. ಇಂದಿನ ಆಧುನಿಕ ಸನ್ನಿವೇಶದಲ್ಲಿ ಬಗೆಬಗೆಯ ಜೂಜಾಟ ಆಡಲಾಗುತ್ತದೆ. ಇಲ್ಲಿನ ಜೂಜಾಟದಲ್ಲಿ ಗಂಡನೊಬ್ಬ ತನ್ನ ಹೆಂಡತಿಯನ್ನು ಸೋತರೆ ದುಃಖಿತನಾಗುವ ಬದಲು ಖುಷಿಪಡುತ್ತಾನೆ. ಏಕೆಂದರೆ ಅವನಿಗೆ ಬೇರೆ ಸ್ತ್ರೀಯ ಜೊತೆಗೆ ಮೋಜುಮಜ ಮಾಡುವ ಅವಕಾಶ ಸಿಗುತ್ತಲ್ಲ ಎಂದು ಖುಷಿ. ಜೂಜಾಟದ ಕೆಟ್ಟ ಕೃತ್ಯಗಳ ಜೊತೆಗೆ ಬೇರೆ ಕೆಲವು ದುಷ್ಟ ಕೃತ್ಯಗಳು ಇದರಲ್ಲಿ ಸೇರ್ಪಡೆಗೊಳ್ಳುತ್ತಿವೆ.
ದೀಪಾವಳಿ ಎಂದರೆ ಕತ್ತಲೆಯಲ್ಲಿ ದೀಪ ಬೆಳಗಿಸಿ ಖುಷಿ ಪಡುವ ಹಬ್ಬ. ಆದರೆ ಜನರು ಜೂಜಾಟ ಹಾಗೂ ಮದ್ಯದ ಅಮಲಿನಲ್ಲಿ ತೇಲಾಡಿ ತಮ್ಮ ಜೀವನವನ್ನು ಅಂಧಕಾರಮಯಗೊಳಿಸುತ್ತಾರೆ. ಜೂಜಾಟ ಆಡುವ ವ್ಯಕ್ತಿ ತನ್ನ ಬಳಿಯಿರುವ ಹಣವನ್ನು ಕಳೆದುಕೊಂಡ ಬಳಿಕ ಬೇರೆ ಯಾರಿಂದಾದರೂ ಹಣ ಸಾಲ ಪಡೆದು ಪುನಃ ಜೂಜಾಡುತ್ತಾನೆ. ಆ ಹಣವನ್ನು ಸೋತು ಬಿಟ್ಟಾಗ ಅವನ ಕುಟುಂಬದ ಮೇಲೆ ಒಮ್ಮೆಲೆ ಬರಸಿಡಿಲು ಬಡಿದಂತಾಗುತ್ತದೆ. ಜೂಜಾಟದಲ್ಲಿ ಹೆಚ್ಚು ಹಣ ಕಳೆದುಕೊಂಡ ವ್ಯಕ್ತಿ ಸಾಲದ ಸುಳಿಯಿಂದ ಹೊರಬರಲಾರದೆ ಖಿನ್ನತೆಗೆ ತುತ್ತಾಗುತ್ತಾನೆ, ಆತ್ಮಹತ್ಯೆಗೂ ಮುಂದಾಗುತ್ತಾನೆ.
ಖುಷಿಯ ಮೌಲ್ಯ ಅರಿತುಕೊಳ್ಳಿ
ಜೂಜಾಟ ಹಾಗೂ ಮದ್ಯದ ಅಮಲಿನಲ್ಲಿ ಮುಳುಗಿದ ವ್ಯಕ್ತಿಗೆ ಪ್ರಜ್ಞೆ ಬಂದಾಗ ತನ್ನನ್ನು ತಾನು ಖಾಲಿ ಕೈ ಎಂದು ಭಾವಿಸಿಕೊಳ್ಳುತ್ತಾನೆ. ಇಂತಹ ಸ್ಥಿತಿಯಲ್ಲಿ ಅವರಿಗೆ ಪಶ್ಚಾತ್ತಾಪದ ಹೊರತಾಗಿ ಬೇರೇನೂ ಪರ್ಯಾಯ ಇರುವುದಿಲ್ಲ.
ಇಂದಿನ ಧಾವಂತದ ಜೀವನದಲ್ಲಿ ನಮ್ಮವರೊಂದಿಗೆ ಕಳೆಯುವ ಕ್ಷಣಗಳಾದರೂ ಎಷ್ಟು? ಈ ದೀಪಾವಳಿಯ ಸಂದರ್ಭದಲ್ಲಿ ಕುಟುಂಬದವರ ಜೊತೆಗೆ ಅಲ್ಲ, ನಿಮಗೆ ನೀವೇ `ನಾನು ಜೂಜಾಟ ಅಥವಾ ಅಮಲಿನಲ್ಲಿ ಹಣ ಹಾಗೂ ಸಮಯ ವ್ಯರ್ಥ ಮಾಡದೆ ಕುಟುಂಬದವರೊಂದಿಗೆ ಖುಷಿಯಿಂದ ಕಾಲ ಕಳೆಯುತ್ತೇನೆ,’ ಎಂದು ಪ್ರಮಾಣ ಮಾಡಿಕೊಳ್ಳಿ. ಆ ಕ್ಷಣಗಳು ಅದೆಷ್ಟು ಸ್ಮರಣಾರ್ಹವಾಗುತ್ತವೆ ಎಂಬುದು ಆ ಬಳಿಕ ನಿಮಗೇ ಅರಿವಿಗೆ ಬರುತ್ತದೆ.
– ಕೋಮಲಾ ಕೆ. ಮೂರ್ತಿ