ದೀಪದ ಹಬ್ಬದಲ್ಲಿ ನಮ್ಮವರ ಮೇಲೆ ನಾನು ಅಗಾಧ ಪ್ರೀತಿ ತೋರ್ಪಡಿಸುತ್ತೇನೆಂದು ನಿಮಗೆ ನೀವೇ ಪ್ರಮಾಣ ಮಾಡಿ. ನಿಮ್ಮ ಈ ಪ್ರಮಾಣ ಎಂದೂ ಮುಗಿಯದ ಖುಷಿ ನೀಡುತ್ತದೆ.
ದೀಪಾವಳಿ ಖುಷಿಯ ಹಬ್ಬ. ಈ ಹಬ್ಬದ ಸಂದರ್ಭದಲ್ಲಿ ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡು ಖುಷಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಾರೆ. ಆದರೆ ಆಧುನಿಕ ಸನ್ನಿವೇಶದಲ್ಲಿ ಕೆಲವರು ಖುಷಿಯ ಈ ಹಬ್ಬದಲ್ಲಿ ಕಹಿ ಬಿತ್ತಲು ಶುರು ಮಾಡಿದ್ದಾರೆ. ಅಂಧಕಾರದಲ್ಲಿ ಬೆಳಕು ಬೀರುವ ಬದಲು ಕೆಲವು ಸ್ತ್ರೀ-ಪುರುಷರು ಜೂಜಾಟ ಹಾಗೂ ಮದ್ಯದ ಅಮಲಿನಲ್ಲಿ ಕತ್ತಲೆಯ ದಾರಿಯಲ್ಲಿ ನಡೆಯುತ್ತ ದೀಪಾವಳಿಯ ಖುಷಿಯಿಂದ ಕೂಡಿದ ಜೀವನದಲ್ಲಿ ಕಹಿಬೆರೆಸುವ ಯತ್ನ ಮಾಡುತ್ತಿದ್ದಾರೆ.
ದೀಪಾವಳಿಯ ಹಬ್ಬದಲ್ಲಿ ಜೂಜಾಟ ಆಡುವ ಪರಂಪರೆ ಯಾವುದೋ ಮೂಢನಂಬಿಕೆಯ ಕಾರಣದಿಂದ ಆರಂಭವಾಗಿತ್ತು. ಆಧುನಿಕ ಸನ್ನಿವೇಶದಲ್ಲಿ ಹಣದ ಅಧಿಕ ಲಭ್ಯತೆ, ಸುಖಸೌಲಭ್ಯಗಳ ಕಾರಣದಿಂದಾಗಿ ಮನೆಮನೆಯಲ್ಲಿ ಜೂಜು ಅಡ್ಡೆಗಳು ತೆರೆಯುತ್ತಿವೆ.
ಈಗ ಫೈವ್ ಸ್ಟಾರ್ ಹೋಟೆಲ್ ಗಳಲ್ಲೂ ಕೂಡ ಜೂಜಾಟಗಳನ್ನು ಏರ್ಪಡಿಸಲಾಗುತ್ತಿದೆ. ಕಾರ್ಡ್ ಪಾರ್ಟಿಗಳ ಹೆಸರಿನ ಮೇಲೆ ಸಾವಿರ ಲಕ್ಷಗಳಲ್ಲ, ಕೋಟ್ಯಂತರ ರೂಪಾಯಿಗಳ ಜೂಜಾಟ ಆಡಲಾಗುತ್ತಿದೆ. ಮದ್ಯ ಸೇವನೆ ಕೂಡ ಜೋರಾಗಿಯೇ ಇರುತ್ತದೆ.
ಮೊದಲು ಈ ಜೂಜಾಟ ಹಾಗೂ ಮದ್ಯ ಪುರುಷರಿಗಷ್ಟೇ ಸೀಮಿತವಾಗಿತ್ತು. ಆದರೆ ಈಗ ಮಹಿಳೆಯರೂ ಇದರಲ್ಲಿ ಶಾಮೀಲಾಗುತ್ತಿದ್ದಾರೆ. ಇಷ್ಟೇ ಅಲ್ಲ, ಮದ್ಯದ ಪಾರ್ಟಿಗಳಲ್ಲಿ ಸ್ತ್ರೀಯರು ನಾ ಮುಂದೆ ತಾ ಮುಂದೆ ಎಂಬಂತೆ ಪಾಲ್ಗೊಳ್ಳುತ್ತಿದ್ದಾರೆ.
ದೀಪಾವಳಿಯ ಜೂಜಾಟದಲ್ಲಿ ಗೆದ್ದ ವ್ಯಕ್ತಿ ವರ್ಷವಿಡೀ ಗೆಲ್ಲುತ್ತಾ ಇರುತ್ತಾನೆ ಎನ್ನುವ ಮೂಢನಂಬಿಕೆಯಿಂದ ಎಲ್ಲ ವರ್ಗದ ಜನರು ಜೂಜಾಟದಲ್ಲಿ ಪಾಲ್ಗೊಳ್ಳುತ್ತಾರೆ. ಸ್ತ್ರೀಯರೂ ಕೂಡ ಜೂಜಾಟದಲ್ಲಿ ಹಿಂದಿಲ್ಲ. ಶ್ರೀಮಂತ ವರ್ಗದ ಮಹಿಳೆಯರಷ್ಟೇ ಅಲ್ಲ, ಮಧ್ಯಮ ವರ್ಗದ ಸ್ತ್ರೀಯರೂ ಕೂಡ ಜೂಜಾಟದಲ್ಲಿ ಪಾಲ್ಗೊಳ್ಳುತ್ತಾರೆ. ಶ್ರೀಮಂತ ವರ್ಗದವರಿಗಂತೂ ಅದು ಪ್ರತಿಷ್ಠೆಯ ಸಂಕೇತವಾಗಿದೆ.
ದೀಪಾವಳಿಯ ರಾತ್ರಿಯಲ್ಲಷ್ಟೇ ಅಲ್ಲ, ದೀಪಾವಳಿಯ ಹಿಂದಿನ ಮುಂದಿನ ದಿನಗಳಲ್ಲೂ ಜೂಜಾಟ ಆಡಲಾಗುತ್ತದೆ. ಕ್ಯಾಸಿನೊ, ಫಾರ್ಮ್ ಹೌಸ್ ಹಾಗೂ ದೊಡ್ಡ ದೊಡ್ಡ ಹೋಟೆಲ್ ಗಳಲ್ಲಿ ಹಾಲ್ ಬುಕ್ ಮಾಡಿ ಜೂಜಾಟ ಏರ್ಪಡಿಸಲಾಗುತ್ತದೆ. ಇದರಲ್ಲಿ ಭಾರಿ ಮೊತ್ತವನ್ನು ಪಣಕ್ಕೊಡ್ಡಲಾಗುತ್ತದೆ. 20-30 ಸಾವಿರ ರೂ. ಸೋಲುವ ವ್ಯಕ್ತಿಯ ಕಡೆ ಯಾರೂ ನೋಡುವುದೇ ಇಲ್ಲ, 5-10 ಲಕ್ಷ ರೂ. ಸೋಲುವವನ ಹೆಸರು ಎಲ್ಲರ ಬಾಯಲ್ಲೂ ಇರುತ್ತದೆ.
ಲಕ್ಷ ಕೋಟಿ ಪಣಕ್ಕೆ ಕ್ಯಾಸಿನೊದಲ್ಲಿ 10-20 ಲಕ್ಷ ರೂ.ಗಳನ್ನು ಪಣಕ್ಕೊಡ್ಡುವವರಿಗಿಂತ ಈಗ 2-3 ಕೋಟಿ ರೂ.ಗಳನ್ನು ಪಣಕ್ಕೊಡ್ಡುವವರೂ ಕೂಡ ಮುಂದೆ ಬರುತ್ತಿದ್ದಾರೆ. ಸ್ತ್ರೀಯರು ದೊಡ್ಡ ಮೊತ್ತವನ್ನು ಸೋತ ಬಳಿಕ ದುಃಖಿತರಾಗುವ ಬದಲು ಖುಷಿಗೊಳ್ಳುವುದನ್ನು ಕಾಣಬಹುದಾಗಿದೆ. ಹಣ ಕಳೆದುಕೊಳ್ಳುವುದು ಕೂಡ ಈಗ ಪ್ರತಿಷ್ಠೆಯ ಸಂಕೇತವಾಗಿಬಿಟ್ಟಿದೆ. ದೀಪಾವಳಿ ಹಬ್ಬದಲ್ಲಿ 2-3 ಲಕ್ಷ ರೂ. ಕಳೆದುಕೊಳ್ಳುವ ಮಹಿಳೆ ಕಿಟಿ ಪಾರ್ಟಿಯಲ್ಲಿ ಅತ್ಯಂತ ಹೆಮ್ಮೆಯಿಂದ ತಾನು ಕಳೆದುಕೊಂಡ ಹಣದ ಬಗ್ಗೆ ಹೇಳುತ್ತಾಳೆ. ಆಗ ಉಳಿದ ಮಹಿಳೆಯರು ಅವಳನ್ನು ಗೌರವದ ದೃಷ್ಟಿಯಿಂದ ನೋಡುತ್ತಾರೆ.