ಆಗಿನ್ನೂ ಬೆಳಗಿನ ಜಾನ ಸುಮಾರು ಆರು ಗಂಟೆ ಆಗಿರಬಹುದು. ನಾವಿನ್ನೂ ಹಾಸಿಗೆಯಿಂದ ಎದ್ದಿರಲಿಲ್ಲ ಕೂಡ. ಅದೇ ಸಮಯದಲ್ಲಿ ಟೆಲಿಫೋನ್ ಗಂಟೆ ಬಾರಿಸತೊಡಗಿತು. ಕಾಲ್ ರಿಸೀವ್ ಮಾಡಿದ ಸೀಮಾ ನನ್ನೆಡೆಗೆ ತಿರುಗುತ್ತ, “ಆಸ್ಪತ್ರೆಯಿಂದ ನರ್ಸ್ ನಿರ್ಮಲಾ ಅರ್ಜೆಂಟಾಗಿ ನಿಮ್ಮೊಂದಿಗೇ ಮಾತನಾಡಬೇಕಂತೆ.”
ನರ್ಸ್ ಹೆಸರು ಕೇಳುತ್ತಿದ್ದಂತೆ ನನ್ನ ನಿದ್ದೆ ಹಾರಿಹೋಯಿತು. ಕ್ಷಣಮಾತ್ರದಲ್ಲಿ ಮನಸ್ಸಿನ ತುಂಬಾ ಅನಿತಾಳ ಕುರಿತ ಆಲೋಚನೆಗಳು ಭುಗಿಲೆದ್ದವು. ಏನಾಗಬಾರದೆಂದು ಅಂದುಕೊಂಡಿದ್ದೆನೋ ಅದೇ ನಡೆದು ಹೋಗಿತ್ತು. ರಾತ್ರಿಯೇ ಅನಿತಾ ಕೋಮಾ ಸ್ಥಿತಿ ತಲುಪಿದ್ದಾಳೆಂದು ನರ್ಸ್ ತಿಳಿಸಿದ್ದಳು.
ನನ್ನ ವ್ಯಾಕುಲತೆ ಕಂಡ ಸೀಮಾ, “ಯಾಕೆ? ಏನಾಯ್ತು? ಎಲ್ಲಾ ಸರಿಯಾಗಿದೆ ತಾನೆ?” ಎಂದು ಕೇಳಿದಳು.
“ಏನೊಂದೂ ಸರಿಯಾಗಿಲ್ಲ. ನಿನ್ನೆ ರಾತ್ರಿಯೇ ಅವಳು ಕೋಮಾಗೆ ಹೋಗಿದ್ದಾಳಂತೆ. ಇನ್ನೇನು ಅವಳು ಕೆಲವೇ ಗಂಟೆಗಳ ಅತಿಥಿ ಎಂದು ನರ್ಸ್ ಹೇಳಿದಳು.”
ಸೀಮಾ ನಿಶ್ಶಬ್ದಳಾದಳು. ಅವಳ ಮೌನ ಕಂಡು ನಾನೇ, “ಏಕೆ? ಏನು ಯೋಚಿಸುತ್ತಿರುವೆ?” ಎಂದೆ.
“ಇಲ್ಲಿ ಅವಳ ಸಂಬಂಧಿಕರು ಯಾರೂ ಇಲ್ಲವೇ? ಮೊನ್ನೆ ಯಾರೊ ಅವಳ ಅಕ್ಕ ಭಾವ ಇಲ್ಲಿಯೇ ಇದ್ದಾರೆ ಅಂತ ಹೇಳಿದಂತಿತ್ತಲ್ಲ.”
“ಹ್ಞಾಂ…. ಹೌದು, ನಾನು ಮೊದಲನೇ ಸಲ ಅವಳನ್ನು ಭೇಟಿಯಾದಾಗ ಅವಳು ಇಲ್ಲಿಯೇ ತನ್ನ ಅಕ್ಕ ಭಾವನೊಂದಿಗೆ ಇದ್ದಳು. ಆಮೇಲೆ ಸ್ವಲ್ಪ ದಿನಗಳ ನಂತರ ಅವರ ಬಗ್ಗೆ ವಿಚಾರಿಸಿದಾಗ, ಅವಳ ಅಕ್ಕ ತೀರಿಹೋಗಿದ್ದರಿಂದ, ಭಾವ ಮತ್ತೊಂದು ಮದುವೆ ಮಾಡಿಕೊಂಡು ಮಾರಿಷಸ್ ಗೆ ಹೋದರು ಎಂದು ಹೇಳಿದ್ದಳು. ಅವಳ ಅಕ್ಕ ನಮ್ರತಾಳಿಗೆ ಮಕ್ಕಳಿಲ್ಲವಾದ್ದರಿಂದ ಭಾವನ ಜೊತೆ ಈಗ ಸಂಪರ್ಕವೇ ಇಲ್ಲವಂತೆ.”
“ಈಗೇನು ಮಾಡೋದು?”
“ಇನ್ನೇನು ಮಾಡೋಕಾಗುತ್ತೆ? ಇಲ್ಲಿ ಅವಳ ಯಾವ ಸಂಬಂಧಿಕರೂ ಇಲ್ಲ. ಪರಿಚಿತರಂತೂ ಇಲ್ಲವೇ ಇಲ್ಲ. ಆದ್ದರಿಂದ ಅವಳ ಶವ ಸಂಸ್ಕಾರ ಮಾಡುವುದು ನಮ್ಮ ಕರ್ತವ್ಯ ಎಂದುಕೊಳ್ಳುತ್ತೇನೆ,” ಎಂದು ಅವಳ ಪ್ರತಿಕ್ರಿಯೆಗಾಗಿ ಎದುರು ನೋಡಿದೆ. ಸೀಮಾಳಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
ಸುಮಾರು ವರ್ಷಗಳ ನಂತರ, ಆರು ತಿಂಗಳ ಹಿಂದೆಯಷ್ಟೇ ಅನಿತಾ ಮಲ್ಲೇಶ್ವರದ ಮಂತ್ರಿ ಮಾಲ್ ನಲ್ಲಿ ಸಿಕ್ಕಿದ್ದಳು. ಅವಳು ಮೊದಲಿನಂತಿರಲಿಲ್ಲ. ಸಂಪೂರ್ಣ ಬದಲಾಗಿದ್ದಳು. ನೆರೆತ ತಲೆಗೂದಲು, ಕಳೆಗುಂದಿದ ಮುಖ, ಆಳಕ್ಕಿಳಿದ ಕಣ್ಣುಗಳು, ನನಗಂತೂ ಅವಳನ್ನು ಗುರುತಿಸಲೇ ಸಾಧ್ಯವಾಗಲಿಲ್ಲ. ಆದರೆ ಅವಳೇ ನನ್ನನ್ನು ಗುರುತಿಸಿ `ಹಲೋ’ ಎನ್ನುತ್ತಾ ಎದುರಿಗೆ ಬಂದಳು.
“ಹೇಗಿದ್ದಿಯಾ?” ಎಂದು ಕೇಳಿದೆ.
“ಚೆನ್ನಾಗಿದ್ದೇನೆ, ನೀನು ಹೇಗಿದ್ದಿಯಾ?”
“ಪರವಾಗಿಲ್ಲ, ಚೆನ್ನಾಗಿದ್ದೇನೆ.”
“ಮತ್ತೆ ಮಕ್ಕಳು?”
“ನಾಲ್ಕು ವರ್ಷದ ಮಗನಿದ್ದಾನೆ, ಆನಂದ್ ಅಂತ ಹೆಸರು. ತುಂಬಾ ಸುಂದರವಾಗಿ ಥೇಟ್ ಅವನ ಅಮ್ಮನಂತೆಯೇ ಇದ್ದಾನೆ.”
ಇದನ್ನು ಕೇಳಿ ಅವಳಿಗೆ ಕಸಿವಿಸಿ ಆದಂತಾಯಿತು. ಕಸಿವಿಸಿಗೊಂಡಿದ್ದು ಕಂಡು ನಾನೇ ಮಾತಿನ ಧಾಟಿ ಬದಲಾಯಿಸಿದೆ. ಸ್ವಲ್ಪ ಸಮಯದ ನಂತರ ಅವಳು ಕಾಫಿ ಕುಡಿಯಲು ಒಪ್ಪಿಕೊಂಡ ಮೇಲೆ ಕಾಫಿ ಡೇಯತ್ತ ಕರೆದುಕೊಂಡು ಬಂದೆ.
“ಏನಾದರೂ ತಿನ್ನುವೆಯಾ?” ಎಂದು ಕೇಳಿದೆ.
“ಊಹೂಂ…. ಏನೂ ಬೇಡ. ಕಾಫಿ ಅಷ್ಟೇ ಸಾಕು.”
`ನಿನಗಿನ್ನೂ ಚಹಾ ಕುಡಿಯುವ ಅಭ್ಯಾಸವಾಗಿಲ್ಲವೇ?”
ಅವಳೇನೂ ಪ್ರತಿಕ್ರಿಯಿಸಲಿಲ್ಲ. ಸುಮ್ಮನೆ ಒಂದು ಹುಸಿ ನಗೆ ನಕ್ಕಳು.
“ಇತ್ತೀಚೆಗೆ ನೀನು ಮುಂಬೈನಲ್ಲಿ ಸೆಟ್ಲ್ ಆಗಿರುವೆ ಅಂತ ಕೇಳಿದ್ದೆ. ಏನಾದರೂ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿರುವೆಯೋ ಹೇಗೆ?” ಎಂದು ಕಾಫಿ ಲಾಂಜ್ ನಲ್ಲಿ ಕುಳಿತುಕೊಳ್ಳುತ್ತ ಪ್ರಶ್ನಿಸಿದೆ.
“ಮುಂಬೈನಲ್ಲಿದ್ದೆ ನಿಜ, ಆದರೆ ಈಗಿಲ್ಲ. ಸುಮಾರು ಆರು ತಿಂಗಳ ಹಿಂದೆಯೇ ಮರಳಿ ಬೆಂಗಳೂರಿಗೆ ಬಂದಿದ್ದೇನೆ,” ಎಂದಳು.
“ಏಕೆ, ಅಲ್ಲಿನ ವಾತಾವರಣ ಹಿಡಿಸಲಿಲ್ಲವೋ?”
“ಇಲ್ಲ, ಹಾಗೇನಿಲ್ಲ. ನಿನಗೆಲ್ಲ ಗೊತ್ತಿದೆಯಲ್ಲ. ಉಡುಪಿಯಿಂದ ಬೆಂಗಳೂರಿಗೆ ಬಂದಾಗ, ಅಕ್ಕ ಭಾವನಿಗೆ ಬೇಸರವಾಗಬಾರದೆಂದು ಅವರ ಜೊತೆಯಲ್ಲೇ ಉಳಿದುಕೊಂಡಿದ್ದೆ. ನಿನ್ನನ್ನು ಮೊದಲ ಸಲ ಭೇಟಿಯಾಗಿದ್ದೂ ಅದೇ ಅಕ್ಕನ ಮನೆಯಲ್ಲಿ ಅಲ್ವಾ?” ಎನ್ನುತ್ತಾ ನನ್ನನ್ನೇ ದಿಟ್ಟಿಸಿದಳು.
“ಹ್ಞಾಂ….. ನಿನ್ನ ಅಕ್ಕ ನಮ್ರತಾ ಪಿಯುಸಿವರೆಗೂ ನನ್ನ ಜೊತೆಯಲ್ಲೇ ಓದಿದ್ದು. ಆ ಪರಿಚಯದಿಂದಲೇ ಆಗಾಗ್ಗೆ ಅವಳನ್ನು ನೋಡಲು ಹೋಗುತ್ತಿದ್ದೆ. ಆದರೆ ಅವಳು ಯಾವತ್ತೂ ಮನೆಗೆ ಬಾ ಎಂದು ಕರೆಯಲಿಲ್ಲ. ಬಹುಶಃ ನಿಮ್ಮ ಭಾವನಿಗೆ ಅದೆಲ್ಲ ಇಷ್ಟವಿರಲಿಲ್ಲವೋ ಏನೋ. ಆದರೆ ಕೆಲವು ದಿನಗಳ ನಂತರ ನಿನ್ನನ್ನು ನೋಡಲೆಂದೇ ಬರತೊಡಗಿದ್ದೆ,” ಎಂದೆ ನಸುನಗುತ್ತ.
ಅವಳು ಸಂಕೋಚದಿಂದ ತನ್ನ ನೋಟವನ್ನು ಬದಲಾಯಿಸಿ ಕಾಫಿ ಕಪ್ ನ್ನೇ ದಿಟ್ಟಿಸತೊಡಗಿದಳು.
ಕೆಲವು ಕ್ಷಣಗಳ ನಂತರ, “ಅಕ್ಕ ಸುಶಿಕ್ಷಿತಳಾಗಿದ್ದು, ಸುಂದರವಾಗಿ ಆಕರ್ಷಕವಾಗಿದ್ದಳು. ಅವಳ ಮೈಬಣ್ಣವಂತೂ ಬೆಳದಿಂಗಳ ಬೆಳಕಿನಂತಿತ್ತು. ಆದರೆ ಬಹುಶಃ ಭಾವನಿಗೆ ಅಕ್ಕನ ಮೇಲೆ ಆಸಕ್ತಿ ಇರಲಿಲ್ಲವೇನೋ! ಅದೇ ಸಮಯದಲ್ಲಿ ನಾನೂ ಅವರೊಂದಿಗೇ ವಾಸಿಸತೊಡಗಿದೆ. ಮೊದಮೊದಲು ಭಾವ ಕೂಡ ನನ್ನನ್ನು ಚೆನ್ನಾಗಿಯೇ ನೋಡಿಕೊಂಡರು. ಆನಂತರ ಅದೇನಾಯಿತೋ ಗೊತ್ತಿಲ್ಲ, ಅವರಿಗೆ ನಾನು ಭಾರವಾಗಿದ್ದೇನೆ ಎಂಬಂತೆ ವರ್ತಿಸತೊಡಗಿದರು. ಹೀಗಾಗಿ ನಾನೇ ಮುಂಬೈಗೆ ಟ್ರಾನ್ಸ್ ಫರ್ ಮಾಡಿಸಿಕೊಂಡು ಹೊರಟುಹೋದೆ.
“ಮುಂಬೈನಲ್ಲಿ ಅಂಜಲಿ ಎಂಬುವಳೊಂದಿಗೆ ಇರತೊಡಗಿದೆ. ಅವಳೂ ಉಡುಪಿ ಪಕ್ಕದ ಮಣಿಪಾಲದವಳು. ಮೊದಲಿನಿಂದಲೇ ಅವಳ ಪರಿಚಯವಿದ್ದರಿಂದ ಅವಳೊಂದಿಗೆ ಒಳ್ಳೆಯ ಹೊಂದಾಣಿಕೆ ಕೂಡ ಆಯ್ತು. ಮುಂಬೈನ ಯಾವುದೋ ಒಂದು ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಅವಳೂ ಜಾಬ್ ಮಾಡುತ್ತಿದ್ದಳು.
“ಅವಳು ಸ್ವತಂತ್ರ ಜೀವಿ. ಬದುಕನ್ನು ಇನ್ನಿಲ್ಲದಂತೆ ಪ್ರೀತಿಸುತ್ತಾ ಜೀವಿಸುತ್ತಿದ್ದಳು. ಅವಳ ಆಪ್ತರಲ್ಲಿ ಗಂಡಸರ ಸಂಖ್ಯೆಯೇ ಹೆಚ್ಚು. ಹೀಗಾಗಿ ಸದಾಕಾಲ ಗಂಡಸರೊಂದಿಗೇ ಸಮಯ ಕಳೆಯುತ್ತಿದ್ದಳು. ಕೆಲವು ಸಲ ರಾತ್ರಿಗಳನ್ನು ಹೊರಗಡೆಯೇ ಕಳೆದು ಬರುತ್ತಿದ್ದಳು. ಇನ್ನೂ ಕೆಲವು ಸಲ ತಡರಾತ್ರಿಯ ನಂತರ ಮನೆಗೆ ಬರುತ್ತಿದ್ದಳು. ಅವಳು ಹೊರಹೋದ ನಂತರ ನಾನು ಮನೆಯಲ್ಲಿ ಒಂಟಿಯಾಗಿಬಿಡುತ್ತಿದ್ದೆ. ಆರಂಭದ ದಿನಗಳಲ್ಲಿ ಇದು ನನಗೆ ತುಂಬಾ ಹಿಂಸೆಯಾಗುತ್ತಿತ್ತು.
“ಅವಳು ಯಾವತ್ತೂ ನನ್ನನ್ನು ತನ್ನ ಜೊತೆಗೆ ಬಾ ಎಂದು ಕರೆದಿರಲಿಲ್ಲ. ಆದರೆ ಒಂಟಿತನದಿಂದ ಬೇಸತ್ತ ನಾನೇ ಅವಳೊಂದಿಗೆ ಹೊರಗೆ ಸುತ್ತಾಡಲು ಹೋಗತೊಡಗಿದೆ. ಮುಂಬೈ ಎಂದರೆ ಅದೊಂದು ಬಣ್ಣದ ಲೋಕ. ಕೆಲವೇ ದಿನಗಳಲ್ಲಿ ಆ ಹೊಸ ಲೋಕಕ್ಕೆ ನಾನು ಕೂಡ ಹೊಂದಿಕೊಂಡಿದ್ದೆ. ಫೈವ್ ಸ್ಟಾರ್ ಫುಡ್, ಹೈ ಪ್ರೊಫೈಲ್ ಡ್ರಿಂಕ್ಸ್, ದಿನಕ್ಕೊಂದು ಹೊಸ ಪರಿಚಯಗಳು. ಎಲ್ಲವೂ ರೋಮಾಂಚಕಾರಿ. ಆ ಬಣ್ಣದ ಲೋಕದಲ್ಲಿ ನಾನು ಯಾವಾಗ ಕಳೆದುಹೋದೆನೆಂಬುದು ನನಗೇ ಗೊತ್ತಾಗಲಿಲ್ಲ. ಹೊಸ ಜೀವನಶೈಲಿಗೆ ಮಾರುಹೋದ ನಾನು ಸ್ವಚ್ಛಂದ ಹಕ್ಕಿಯಂತೆ ಹಾರಾಡತೊಡಗಿದ್ದೆ.
“ಆದರೆ ದೇಹದ ತುಂಬೆಲ್ಲ ಬೊಜ್ಜು ತುಂಬಿಕೊಂಡು ಮೈಮೇಲೆ ಮಾಂಸದ ಮಡಿಕೆಗಳು ತೂಗಾಡತೊಡಗಿದಾಗ ಮುಖದ ಮೇಲಿನ ಮಂದಹಾಸವನ್ನೇ ಕಳೆದುಕೊಂಡಿದ್ದೆ. ಅದೇನು ದೊಡ್ಡ ವಿಷಯವಲ್ಲ. ಅಲ್ಲಿ ಹೊಸ ಪರಿಚಯಗಳಿಗೇನೂ ಕೊರತೆಯಿರಲಿಲ್ಲ ಮತ್ತು ನಮ್ಮಗಳ ಮಧ್ಯೆ ಯಾವುದೇ ಭಾವನಾತ್ಮಕ ಬಂಧ ಇರುತ್ತಿರಲಿಲ್ಲ. ಯಾರೊಬ್ಬರೂ ಇನ್ನೊಬ್ಬರ ಕುರಿತಾಗಿ ದುಃಖಿಸುವ ಪ್ರಮೇಯವೇ ಬರುತ್ತಿರಲಿಲ್ಲ.
“ಅಷ್ಟೊತ್ತಿಗೆ ಎಲ್ಲಾ ಐಷಾರಾಮಿಯೂ ನನಗೆ ಜರೂರತ್ತಾಗಿಬಿಟ್ಟಿತ್ತು. ನನ್ನ ಶಾಪಿಂಗ್ ಹುಚ್ಚಿನಿಂದ ಹೊರಬರುವುದೇ ಕಷ್ಟವಾಯಿತು. ಮದುವೆ ಕುರಿತಾಗಿ ಯೋಚಿಸಲೇ ಸಾಧ್ಯವಿರಲಿಲ್ಲ. ಏಕೆಂದರೆ ಅದಾಗಲೇ ಪ್ರ್ಯೊಲಾಪ್ಸಿ ಸರ್ಜರಿ ಮೂಲಕ ಎಲ್ಲವನ್ನೂ ತೆಗೆಸಿಕೊಂಡಿದ್ದೆ.
“ಅಲ್ಲಿ ನನ್ನವರು ಅಂತಾ ಯಾರೂ ಇರಲಿಲ್ಲ. ಅಂಜಲಿಯಂತೂ ತನ್ನ ಬಾಯ್ ಫ್ರೆಂಡ್ ಜೊತೆಯಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಿ ಸೆಟಲ್ ಆಗಿಬಿಟ್ಟಳು. ಇನ್ನುಳಿದ ಯಾರೊಬ್ಬರೂ ನನ್ನನ್ನು ಒಳ್ಳೆಯ ದೃಷ್ಟಿಯಲ್ಲಿ ನೋಡುತ್ತಿರಲಿಲ್ಲ. ಇನ್ನೇನು ಮಾಡುವುದು? ನನಗೆ ಬೇರೆ ಊರುಗಳ ಪರಿಚಯ ಕೂಡ ಇರಲಿಲ್ಲ, ಹೀಗಾಗಿ ಬೆಂಗಳೂರಿಗೇ ವಾಪಸು ಬರಬೇಕಾಯಿತು….”
ಅವಳ ಮಾತುಗಳು ಇನ್ನೂ ಮುಗಿದಿರಲೇ ಇಲ್ಲ. ಅಷ್ಟರಲ್ಲಿ ಅಚಾನಕ್ಕಾಗಿ ಏನೋ ನೆನಪಾದವಳಂತೆ ಎದ್ದು ನಿಂತಳು. ಅವಳು ಪರಿಚಯಾದಾಗಿನಿಂದಲೇ ಹೀಗೆ ಮಾಡುತ್ತಾಳೆ, ಅದು ಅವಳ ಸ್ವಭಾವ.
“ಯಾವುದೋ ಒಂದು ಅರ್ಜೆಂಟ್ ಕೆಲಸ ನೆನಪಾಯಿತು ಗಿರೀಶ್, ಸಾರಿ ಮತ್ತೆ ಇನ್ನೊಂದ್ಸಲ ಭೇಟಿಯಾಗೋಣ,” ಎಂದು ಹೇಳಿ ತನ್ನ ಕಾರ್ಡ್ ಒಂದನ್ನು ತೆಗೆದುಕೊಡುತ್ತಾ, ಫೋನ್ ಮಾಡ್ತಾ ಇರು ಎಂದು ಹೇಳಿ ಹೊರಟುಹೋದಳು.
ಅನಿತಾಳನ್ನು ನಾನು ಮೊಟ್ಟ ಮೊದಲ ಬಾರಿ ಭೇಟಿಯಾಗಿದ್ದು ನಮ್ರತಾಳ ಮನೆಯಲ್ಲೇ. ಅವಳು ಆಗಷ್ಟೇ ಉಡುಪಿಯಿಂದ ಬೆಂಗಳೂರಿಗೆ ಹೊಸದಾಗಿ ಬಂದಿದ್ದಳು. ತೆಳ್ಳಗೆ, ಬೆಳ್ಳಗೆ, ದೊಡ್ಡ ಕಂಗಳ ಆಕರ್ಷಕ ಮೈಮಾಟ ಅವಳದು. ವೆಸ್ಟರ್ನ್ ಡ್ರೆಸ್, ಅದರಲ್ಲೂ ಜೀನ್ಸ್ ಪ್ಯಾಂಟ್ ಹಾಗೂ ಟಾಪ್ ಗಳಲ್ಲಿ ಅವಳು ಇನ್ನೂ ಅದ್ಭುತವಾಗಿ ಕಾಣಿಸುತ್ತಿದ್ದಳು.
ಅವತ್ತು ಮೊದಲ ಸಲ ಅವಳನ್ನು ಕಂಡಾಗ ಎವೆಯಿಕ್ಕದೆ ನಾನು ಅವಳನ್ನೇ ನೋಡುತ್ತಿರುವುದನ್ನು ಕಂಡು, “ಏನು ನೋಡುತ್ತಿರುವೆ? ನಾನು ಅಷ್ಟೊಂದು ಸುಂದರವಾಗಿದ್ದೇನೆಯೇ?” ಎಂದಿದ್ದಳು.
ಕಕ್ಕಾಬಿಕ್ಕಿಯಾದ ನಾನು, “ಹೌದು ಅದ್ಭುತ ಸೌಂದರ್ಯದ ಗಣಿ ನೀನು. ತಿಲೋತ್ತಮೆಗಿಂತಲೂ ಮಿಗಿಲಾದ ರೂಪರಾಶಿ ನಿನ್ನದು,” ಎಂದೆ.
“ಸುಳ್ಳು.”
“ಇಲ್ಲ….ನಿಜವಾಗ್ಲೂ.”
ಇದಾದ ನಂತರ ಮತ್ತೆರಡು ಬಾರಿ ಅವಳನ್ನು ಭೇಟಿಯಾಗುವಷ್ಟರಲ್ಲಿ ನನ್ನ ಹೃದಯ ಅವಳಿಗೋಸ್ಕರ ಹಾತೊರೆಯತೊಡಗಿತ್ತು. ಅದು ಸಹಜ ಅಲ್ಲವೇ? ಅವಳು ಸುಂದರಿಯೂ ಹೌದು, ಸುಶಿಕ್ಷಿತಳೂ ಹೌದು. ಮಣಿಪಾಲ್ ನಲ್ಲಿ ಎಂಬಿಎ ಮುಗಿಸಿ ಬೆಂಗಳೂರಿನ ಮಲ್ಟಿ ನ್ಯಾಷನಲ್ ಕಂಪನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಳು.
ಒಂದು ದಿನ ಅವಳ ಭೇಟಿಯಾದಾಗ, “ಹೊರಗಡೆ ಎಲ್ಲಾದರೂ ಸುತ್ತಾಡಿ ಊಟ ಮಾಡಿಕೊಂಡು ಬರೋಣ. ನಾನೇ ನಿನ್ನನ್ನು ಮನೆಗೆ ಡ್ರಾಪ್ ಮಾಡುವೆ,” ಎಂದೆ.
“ಸರಿ, ಆದ್ರೆ ಮೊದಲು ಒಂದು ಲಾಂಗ್ ಡ್ರೈವ್ ಹೋಗೋಣ. ಆಮೇಲೆ ನಿನ್ನಿಷ್ಟದಂತೆ ಎಲ್ಲಾದರೂ ಸರಿ ಹೊರಡೋಣ,” ಎಂದಿದ್ದಳು.
ಬೆಂಗಳೂರು ತುಮಕೂರು ಹೆದ್ದಾರಿಯ ಮೇಲೆ ನನ್ನ ಕಾರು ಏದುಸಿರಿಲ್ಲದೆ ಓಡತೊಡಗಿತ್ತು. ಶಿರಾ ತಲುಪುವಷ್ಟರಲ್ಲಿ ಎರಡು ಬಾರಿ ಅಲ್ಲಲ್ಲಿ ನಿಂತು ಎಳನೀರು ಕುಡಿದದ್ದಾಯಿತು. ಶಿರಾದಿಂದ ಕಾರನ್ನು ತಿರುಗಿಸಿಕೊಂಡು ಎಲ್ಲೂ ನಿಲ್ಲದೇ ಒಂದೇ ಉಸಿರಿನಲ್ಲಿ ಸದಾಶಿವನಗರದ ಸ್ಯಾಂಕಿ ಕೆರೆಯವರೆಗೂ ಓಡಿಸಿಕೊಂಡು ಬಂದೆ. ಅಂದು ಭಾನುವಾರ, ಸ್ಯಾಂಕಿ ಕೆರೆಯ ಪರಿಸರ ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ಒಂದು ರೌಂಡ್ ಸ್ಯಾಂಕಿ ಕೆರೆ ಸುತ್ತಿದ್ದಾಯ್ತು.
ಸ್ವಲ್ಪ ಸಮಯದ ನಂತರ ಕೂಗಳತೆಯಲ್ಲಿದ್ದ ಲಿ ಮೆರಿಡಿಯನ್ ಗೆ ತೆರಳಿ ಗಾರ್ಡನ್ ಲಾಂಜ್ ನಲ್ಲಿ ಕುಳಿತೆ. ತಣ್ಣನೆ ಗಾಳಿ ಆಹ್ಲಾದಕರವಾಗಿತ್ತು. ಮೋಡ ಕವಿದ ವಾತಾವರಣವಾದ್ದರಿಂದ ಸೂರ್ಯನ ಪ್ರಖರತೆ ಕೊಂಚ ಇಳಿಮುಖವಾಗಿತ್ತು. ಅವಳು ಸುತ್ತಲಿನ ಹೂಬಳ್ಳಿಗಳನ್ನೇ ದಿಟ್ಟಿಸತೊಡಗಿದ್ದಳು.
“ಏಕೆ ಮೌನವಾಗಿ ಕುಳಿತುಬಿಟ್ಟೆ? ಏನಾದ್ರೂ ಮಾತನಾಡು!” ಎಂದೆ.
ಅವಳು ನನ್ನತ್ತಲೇ ನೋಡುತ್ತ, “ಇಲ್ಲ, ಇವತ್ತು ಏನಿದ್ರೂ ಕೇವಲ ನಿನ್ನ ಮಾತುಗಳನ್ನು ಕೇಳಬೇಕು ಎಂದುಕೊಂಡಿದ್ದೇನೆ,” ಎಂದಳು.
ನನಗಂತೂ ಇದೊಂದು ಸುವರ್ಣ ಸಂದರ್ಭ. ಏನಾದರೂ ಹೇಳೋಣ ಎನ್ನುವಷ್ಟರಲ್ಲಿ ವೇಟರ್ ಬಂದು ಎರಡು ಲೆಮನ್ ಜ್ಯೂಸ್ ಸ್ಟಾರ್ಟರ್, ಪಕ್ಕದಲ್ಲೇ ಎರಡು ಸ್ಟ್ರಾ ಹಾಗೂ ಮೆನು ಇಟ್ಟು ಹೊರಟುಹೋದ. ಇನ್ನವನು ನಾವು ಕೂಗುವವರೆಗೂ ಬರಲಾರ.
ಅಷ್ಟರಲ್ಲಿ ವೇಗವಾಗಿ ಬೀಸಿದ ಗಾಳಿ ಸ್ಟ್ರಾ ಒಂದನ್ನು ಎಗರಿಸಿಕೊಂಡು ದೂರಕ್ಕೆ ಕರೆದೊಯ್ಯಿತು. ಉಳಿದ ಒಂದು ಸ್ಟ್ರಾ ಅವಳಿಗೆ ಕೊಟ್ಟೆ. ಇನ್ನೇನು ವೇಟರ್ ನನ್ನು ಕೂಗಿ ಇನ್ನೊಂದು ಸ್ಟ್ರಾ ತರಿಸಿಕೊಳ್ಳೋಣ ಎನ್ನುವಷ್ಟರಲ್ಲಿ ಅವಳು ಒಂದೇ ಸ್ಟ್ರಾನಲ್ಲಿ ಕುಡಿಯೋಣವೆಂದಳು. ಇಬ್ಬರೂ ಹಂಚಿಕೊಂಡು ಕುಡಿದೆವು. ಜ್ಯೂಸ್ ಕುಡಿಯುವಾಗ ಅವಳ ಬಟ್ಟಲ ಕಂಗಳು ನನ್ನನ್ನೇ ನೋಡುತ್ತಿದ್ದವು. ಅದ್ಭುತ ಮಂದಹಾಸ ಅವಳ ತುಟಿಯಂಚಿನಲ್ಲಿ ಹರಡಿತ್ತು. ಜ್ಯೂಸ್ ಕುಡಿದ ನಂತರ ಸ್ಟ್ರಾವನ್ನು ಪರ್ಸ್ ನಲ್ಲಿ ತೆಗೆದು ಇಟ್ಟುಕೊಳ್ಳುತ್ತಾ, “ಮೊಟ್ಟ ಮೊದಲ ಬಾರಿಗೆ ಹೀಗೆ ಇನ್ನೊಬ್ಬರೊಂದಿಗೆ ಸ್ಟ್ರಾ ಹಂಚಿಕೊಂಡ ನೆನಪಿಗೆ ಇದು ನನ್ನ ಬಳಿಯಿರಲಿ,” ಎಂದಳು.
ನನ್ನ ಸಂತಸಕ್ಕೆ ಪಾರವೇ ಇಲ್ಲದಂತಾಯಿತು.
ತುಂಬಾ ಹೊತ್ತು ಅಲ್ಲಿಯೇ ಕುಳಿತಿದ್ದೆ. ಊಟ ಮಾಡಿದ ನಂತರ, ಪ್ರೀತಿಯಿಂದ ಅವಳ ಮುಂಗೈ ಹಿಡಿದು ಏನಾದರೂ ಹೇಳಬಾರದೆ? ಎಂದೆ.
“ಬೇಡ, ಇವತ್ತಿಗಿಷ್ಟು ಸಾಕು. ನೀನು ಏನನ್ನೂ ಹೇಳಬೇಡ, ನಾನೂ ಏನನ್ನೂ ಹೇಳುವುದು ಬೇಡ,” ಎಂದುಬಿಟ್ಟು, ನಿಧಾನವಾಗಿ ನನ್ನ ಭುಜಕ್ಕೊರಗಿದಳು. ನಾನು ಅವಳ ನವಿರಾದ ಬೆರಳುಗಳೊಂದಿಗೆ ಆಟವಾಡುತ್ತಲೇ ಇದ್ದೆ. ಬಿಟ್ಟ ಕಂಗಳಿಂದ ಅವಳನ್ನೇ ದಿಟ್ಟಿಸುತ್ತಿದ್ದೆ. ಅದೆಷ್ಟು ಹೊತ್ತು ಹಾಗೇ ಕುಳಿತಿದ್ದೆವೋ ಏನೋ? ಮುಸ್ಸಂಜೆಯ ಮಳೆ ಹನಿಗಳು ಪಟಪಟ ಎಂದು ಮೈಮೇಲೆ ಬಿದ್ದಾಗ ಎಚ್ಚರಗೊಂಡೆವು. ಲಗುಬಗೆಯಿಂದ ಕಾರನ್ನೇರಿ ಮನೆಯತ್ತ ಹೊರಟೆ. ಅವಳ ಮನೆಯ ಬಳಿ ಡ್ರಾಪ್ ಮಾಡಿದೆ. ನಾನು ಅಲ್ಲಿಂದ ಹೊರಡುವ ಮುನ್ನ ಮನೆ ತಲುಪಿದ ತಕ್ಷಣ ಕಾಲ್ ಮಾಡು ಎಂದಳು.
ಅವತ್ತಿನ ದಿನ ನನ್ನ ಪಾಲಿನ ಅತ್ಯಂತ ಸಂತಸದ ದಿನ. ನನ್ನ ಸಂತೋಷಕ್ಕೆ ಮಿತಿಯೇ ಇಲ್ಲದಂತಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಅವಳು ಮುಂಬೈಗೆ ಹೊರಟುಹೋಗಿದ್ದಳು. ಪ್ರಾರಂಭದಲ್ಲಿ ನಮ್ಮಿಬ್ಬರ ಮಧ್ಯೆ ನಿರಂತರ ಸಂಪರ್ಕವಿತ್ತು. ಆದರೆ ಕ್ರಮೇಣ ಆ ಸಂಪರ್ಕ ನಿಂತು ಹೋಗಿ ಕೊನೆಗೊಮ್ಮೆ ಅವಳು ಕಾಲ್ ರಿಸೀವ್ ಮಾಡುವುದನ್ನೇ ನಿಲ್ಲಿಸಿಬಿಟ್ಟಳು. ನಾನು ವಿಲವಿಲ ಒದ್ದಾಡುವಂತಾಯಿತು. ತಕ್ಷಣ ಬಾಂಬೆಗೆ ತೆರಳಿ ನೋಡೋಣ ಎಂದುಕೊಂಡರೂ, ಆಗ ನಾನು ಕಂಪನಿ ಕೆಲಸದ ಮೇಲೆ ಮಲೇಷಿಯಾದಲ್ಲಿದ್ದೆ. ಹೀಗಾಗಿ ಮುಂಬೈಗೆ ತೆರಳಲೂ ಸಾಧ್ಯವಿರಲಿಲ್ಲ.
ಅತ್ತ ಬೆಂಗಳೂರಿನಲ್ಲಿ ಅಮ್ಮನ ಆರೋಗ್ಯ ಗಂಭೀರವಾಗಿತ್ತು. ಸೊಸೆಯನ್ನು ಕಾಣಬೇಕೆಂಬುದೇ ಅಮ್ಮನ ಅಂತಿಮ ಆಸೆಯಾಗಿತ್ತು. ಅಮ್ಮನ ಕೊನೆಯ ಬಯಕೆ ಈಡೇರಿಸಲೆಂದೇ ಸೀಮಾಳನ್ನು ಮದುವೆ ಮಾಡಿಕೊಳ್ಳಬೇಕಾಯಿತು. ಸೀಮಾ ಕೂಡ ತುಂಬಾ ಲಕ್ಷಣವಾಗಿದ್ದಳು. ಅವಳ ರೂಪರಾಶಿಯ ವ್ಯಾಮೋಹದಲ್ಲಿ ಅನಿತಾಳನ್ನು ಮರೆತುಬಿಟ್ಟಿದ್ದೆ.
ಎರಡು ತಿಂಗಳ ಹಿಂದೆ, ಒಂದು ದಿನ ಅವಳ ಕಾಲ್ ಬಂದಿತ್ತು, “ಅರ್ಜೆಂಟಾಗಿ ನಿನ್ನನ್ನು ಭೇಟಿಯಾಗಬೇಕು, ಒಂದು ಮುಖ್ಯ ಕೆಲಸವಿದೆ. ಭೇಟಿಯಾಗೋಲ್ಲ ಎಂದು ಮಾತ್ರ ಹೇಳಬೇಡ,” ಎಂದು ಗೋಗರೆದಿದ್ದಳು.
“ಆಫೀಸ್ ನಲ್ಲಿ ಒಂದು ಇಂಪಾರ್ಟೆಂಟ್ ಮೀಟಿಂಗ್ ಇದೆ. ಅದೆಲ್ಲ ಮುಗಿಸಿಕೊಂಡು ಸಂಜೆ ಮನೆಗೆ ಹೋಗುವಾಗ ಖಂಡಿತ ಭೇಟಿಯಾಗುವೆ,” ಎಂದೆ.
ಅವತ್ತು ಆಫೀಸ್ ಗೆ ಹೊರಡುವಾಗಲೇ ಸೀಮಾಳಿಗೆ ಹೇಳಿದ್ದೆ, “ಸಂಜೆ ಮನೆಗೆ ಬರುವಾಗ ಅನಿತಾಳನ್ನು ಭೇಟಿಯಾಗಬೇಕಿದೆ. ಫೋನ್ ಮಾಡಿ ಏನೋ ಅರ್ಜೆಂಟ್ ಮಾತನಾಡುವುದಿದೆ ಎಂದು ಹೇಳುತ್ತಿದ್ದಳು. ಆಫೀಸ್ ನಲ್ಲಿ ಬೋರ್ಡ್ ಮೀಟಿಂಗ್ ಇದೆ. ನಾನು ಮರಳಿ ಮನೆಗೆ ಬರುವಷ್ಟರಲ್ಲಿ ತಡವಾಗಬಹುದು. ನೀನು ಊಟ ಮಾಡಿಬಿಡು.”
ಆಫೀಸ್ ಕೆಲಸಗಳನ್ನು ಮುಗಿಸಿ ಅನಿತಾಳ ಮನೆ ತಲುಪಿದಾಗ ಕತ್ತಲಾಗಿತ್ತು. ಅವಳ ಮನೆಯ ಕಾರಿಡಾರ್ ನಲ್ಲೂ ಬೆಳಕಿರಲಿಲ್ಲ. ಅದ್ಹೇಗೋ ಕಷ್ಟಪಟ್ಟು ಮೇನ್ ಡೋರ್ ತಲುಪಿ ಕಾಲಿಂಗ್ ಬೆಲ್ ಅದುಮಿದೆ. ಆಗ ಒಳಗಿನಿಂದ ಧ್ವನಿ ಕೇಳಿ ಬಂತು, “ಬಾಗಿಲು ತೆರೆದೇ ಇದೆ, ಒಳಗೆ ಬಾ.”
ಒಳಗೆ ಹೆಜ್ಜೆ ಇಟ್ಟಾಗ ಅವಳು ಕಿಟಕಿಯ ಬಳಿ ನಿಂತು ಹೊರಗಿನ ಮಂದ ಬೆಳಕಿನ ದೃಶ್ಯವನ್ನು ನಿರ್ಭಾವುಕಳಾಗಿ ಗಮನಿಸುತ್ತಿರುವುದು ಗೋಚರಿಸಿತು.
“ಏನು ನೋಡುತ್ತಿರುವೆ?”
“ಕತ್ತಲೆಯನ್ನು”
“ವಾಟ್?”
ಆಗ ಅಳು ನನ್ನತ್ತ ತಿರುಗಿ ನೋಡಿದಳು. ಅವಳ ದೇಹ ಅರ್ಧಕ್ಕರ್ಧ ಇಳಿದುಹೋಗಿತ್ತು. ಅದನ್ನು ಕಂಡು ಆತಂಕಗೊಂಡು “ಏನಾಯಿತು? ಹುಷಾರಾಗಿದ್ದೀಯೋ ಇಲ್ಲವೋ?” ಎಂದೆ.
“ಹೌದು ಹುಷಾರಿಲ್ಲ,” ಎನ್ನುತ್ತ ಕಿಟಕಿಯಿಂದ ಸರಿದು ಹಾಲ್ ನ ಮಧ್ಯೆ ಬಂದು ಸೋಫಾದ ಮೇಲೆ ಕುಳಿತಳು. ಕೆಲವು ಕ್ಷಣಗಳ ನಂತರ ದುಪಟ್ಟಾದಿಂದ ಮುಖ ಮುಚ್ಚಿಕೊಂಡು ಬಿಕ್ಕಳಿಸಿ ಅಳತೊಡಗಿದಳು.
“ಯಾಕೆ? ಏನಾಯಿತು? ಯಾರಾದರೂ ಏನಾದರೂ ಹೇಳಿದರಾ?” ಕೇಳಿದೆ.
“ಕೆಲವು ದಿನಗಳಿಂದ ಆರೋಗ್ಯ ತುಂಬ ಹದೆಗೆಟ್ಟು ಹೋಗಿತ್ತು. ಡಾಕ್ಟರ್ ರ ಸಲಹೆಯ ಮೇರೆಗೆ ಎಚ್‌ಐವಿ ಟೆಸ್ಟ್ ಗೆ ಹೋಗಿದ್ದೆ. ಡಾಕ್ಟರ್ ರಿಪೋರ್ಟ್ ಬಂದಿದೆ. ನಾನು ಎಚ್‌ಐವಿ ಪಾಸಿಟಿವ್ ಅಂತೆ! ತುಂಬಾ ಅಡ್ವಾನ್ಸ್ ಸ್ಟೇಜ್ ನಲ್ಲಿದೆಯಂತೆ. ಇನ್ನೇನೂ ಮಾಡೊಕ್ಕಾಗಲ್ವಂತೆ. ನನ್ನ ಸಮಾಧಾನಕ್ಕೆಂದು ಕೆಲವು ಮಾತ್ರೆಗಳನ್ನು ಕೊಟ್ಟಿದ್ದಾರಷ್ಟೆ.”
ಈ ಆಘಾತಕಾರಿ ವಿಷಯ ಕೇಳಿ ಕಾಲಡಿಯ ಭೂಮಿಯೇ ಕುಸಿದಂತಾಯಿತು. ಅವಳಿಗೆ ಹೇಗೆ ಸಂತೈಸಬೇಕೆಂಬುದೇ ತಿಳಿಯಲಿಲ್ಲ. ಸ್ವಲ್ಪ ಸಮಾಧಾನವನ್ನಾದರೂ ಹೇಳೋಣ ಎಂದರೆ ಗಂಟಲ ಸೆರೆಯುಬ್ಬಿ ಮಾತೇ ಹೊರಡಲಿಲ್ಲ. ತುಂಬಾ ಹೊತ್ತು ಅವಳ ಬಳಿ ಮೌನವಾಗಿಯೇ ಕುಳಿತಿದ್ದೆ. ಆ ಮೌನ ರೋದನ ಅವಳಿಗೆ ಕೇಳಿಸಿರಬಹುದು. ಬಹುಶಃ ಅದು ಎರಡನೇ ಬಾರಿ, ಅವಳ ಮುಂಗೈ ಹಿಡಿದು, “ಹೆದರಬೇಡ, ನಿನಗೇನೂ ಆಗುವುದಿಲ್ಲ. ಎಲ್ಲ ಸರಿಹೋಗುತ್ತೆ,” ಎಂದು ಧೈರ್ಯ ಹೇಳಿದೆ.
ಆದರೆ ಅವಳು ಮತ್ತೆ ಬಿಕ್ಕಳಿಸಿ ಅಳತೊಡಗಿದ್ದಳು. ನಾನು ಅವಳನ್ನೇ ನೋಡುತ್ತ ಕುಳಿತೆ, ಆದರೆ ಏನೂ ಮಾತನಾಡಲು ಆಗಲಿಲ್ಲ. ಮೂಕವೇದನೆಯಲ್ಲಿ ಮಾತು ಮರೆತು ಕುಳಿತ ನಮಗೆ ಸಮಯ ಸರಿದದ್ದೇ ಅರಿವಾಗಿರಲಿಲ್ಲ, ತಡ ರಾತ್ರಿಯಾಗಿದ್ದರಿಂದ, “ನೀನಿನ್ನು ಹೊರಡು. ಮನೆಯಲ್ಲಿ ನಿನ್ನ ಹೆಂಡತಿ ಕಾಯುತ್ತಿರುತ್ತಾಳೆ,” ಎಂದಳು.
ಆದರೆ ಮತ್ತವಳ ದುಃಖ ಉಮ್ಮಳಿಸಿ ಬಂದಿತ್ತು. ನಾನು ಮರಳಿ ಮನೆಗೆ ಬಂದಾಗ ಸರಿ ರಾತ್ರಿ ಎರಡು ಗಂಟೆಯಾಗಿತ್ತು. ಸೀಮಾ ಇನ್ನೂ ಕಾಯುತ್ತಲೇ ಕುಳಿತಿದ್ದಳು, “ತುಂಬಾ ತಡ ಮಾಡಿದಿರಲ್ಲಾ, ಎಲ್ಲಾ ಸರಿಯಾಗಿದೆ ತಾನೆ?” ಎಂದು ಕೇಳಿದಳು.
“ಅನಿತಾಳನ್ನು ಭೇಟಿಯಾಗಿ ಬರುವಷ್ಟರಲ್ಲಿ ಇಷ್ಟೊಂದು ಲೇಟಾಯಿತು,” ಎಂದೆ. ನಂತರ ಅನಿತಾಳ ಕುರಿತಾಗಿ ಸೀಮಾಗೆ ಎಲ್ಲವನ್ನು ವಿವರಿಸಿ ಹೇಳಿದೆ. ಅಂದು ರಾತ್ರಿ ನಾವಿಬ್ಬರೂ ಊಟವಿಲ್ಲದೇ ಭಾರದ ಮನಸ್ಸಿನಿಂದ ಮಲಗಿಬಿಟ್ಟೆವು. ಇಡೀ ರಾತ್ರಿ ನಿದ್ರೆ ಬಳಿ ಸುಳಿಯಲಿಲ್ಲ. ನಾನು ಅನಿತಾಳ ಚಿಂತೆಯಲ್ಲೇ ಮುಳುಗಿ ಹೋಗಿದ್ದೆ. ಅವಳ ಬದುಕು ಹೀಗೆ ಕೊನೆಗೊಂಡೀತು ಎಂದು ನಾನು ಯೋಚಿಸಿರಲೇ ಇಲ್ಲ.
ಎರಡು ದಿನಗಳ ನಂತರ ಸ್ನೇಹಿತರ ಸಹಾಯದಿಂದ ಅನಿತಾಳನ್ನು ಆಸ್ಪತ್ರೆಗೆ ಸೇರಿಸಿ ಮರಳಿ ಬರುವಾಗ, ಅವಳು ಇನ್ನಿಲ್ಲದ ಪ್ರೀತಿಯಿಂದ ನನ್ನೆಡೆಗೆ ನೋಡುತ್ತಿದ್ದಳು. ಅದನ್ನು ಕಂಡು, “ಇಂತಹ ಅಡ್ವಾನ್ಸ್ ಸ್ಟೇಜ್ ನಲ್ಲಿ ಏನೂ ಮಾಡೋಕ್ಕಾಗಲ್ಲ ಅಂತ ನಿನಗೂ ಗೊತ್ತು. ನೀನು ಇಲ್ಲಿ ಇದ್ದರೆ, ನರ್ಸ್ ಗಳಾದರೂ ನಿನ್ನನ್ನು ನೋಡಿಕೊಳ್ಳುತ್ತಾರೆ,” ಎಂದೆ.
ಅದಕ್ಕೆ ಅವಳೇನೂ ಪ್ರತಿಕ್ರಿಯಿಸಲಿಲ್ಲ. ನಿಧಾನವಾಗಿ ಅವಳು ಕಣ್ಣುರೆಪ್ಪೆ ತೆರೆದಾಗ ಕಳಕ್ಕೆಂದು ಉದುರಿದ ಕಣ್ಣೀರು ಕಂಡು ನನಗೂ ಅಳು ಬಂದುಬಿಟ್ಟಿತ್ತು. ಮತ್ತೆ ಸ್ವಲ್ಪ ಸಮಯ ಅವಳ ಬಳಿಯೇ ಕುಳಿತಿದ್ದೆ. ಇನ್ನೇನು ಮನೆಗೆ ಹೊರಡೋಣ ಎಂದುಕೊಂಡು ಎದ್ದು ನಿಂತಾಗ, “ಆನಂದ್ ಹೇಗಿದ್ದಾನೆ?” ಎಂದು ಕೇಳಿದಳು.
“ಚೆನ್ನಾಗಿದ್ದಾನೆ. ಅವನನ್ನು ಕಂಡರೆ ನಿನಗಿಷ್ಟವೇ? ನಾಳೆ ಬರುವಾಗ ಅವನನ್ನೂ ಕರೆದುಕೊಂಡು ಬರುತ್ತೇನೆ ಬಿಡು,” ಎಂದೆ.
“ಬೇಡ….ಬೇಡ…. ಅವನನ್ನು ಇಲ್ಲಿಗೆ ಕರೆತರಬೇಡ. ಅವನಿನ್ನೂ ತುಂಬಾ ಚಿಕ್ಕ ಹುಡುಗ. ಇಂತಹ ಜಾಗಕ್ಕೆ ಅವನನ್ನು ಕರೆದುಕೊಂಡು ಬರುವುದು ಸರಿಯಲ್ಲ,” ಎಂದ ಅನಿತಾ ತನ್ನ ನೋಟ ಬದಲಾಯಿಸಿದಳು.
“ಸರಿ ಹಾಗಾದ್ರೆ. ನೀನು ಹುಷಾರಾಗಿರು. ನಾಳೆಯಿಂದ ಪ್ರತಿದಿನ ನಿನ್ನನ್ನು ನೋಡಲು ಬರುತ್ತೇನೆ,” ಎಂದು ಹೇಳಿ ನಾನು ಹೊರಡಲು ಅಣಿಯಾದೆ. ಅವಳು ಮೌನವಾಗಿಯೇ ಇದ್ದಳು. ನನ್ನನ್ನೇ ನೋಡುತ್ತಿದ್ದಳು. ನೋಟದಲ್ಲಿ ತೀಕ್ಷ್ಣತೆಯಿತ್ತು. ಮತ್ತೆ ಮರಳಿ ಹೋಗಿ ಅವಳ ಮುಂಗೈ ಹಿಡಿದುಕೊಂಡು ಸಮಾಧಾನಪಡಿಸಿ ಅಲ್ಲಿಂದ ಹೊರಟುಬಿಟ್ಟೆ.
ಆದರೆ ಇಂದು, ಅವಳು ಶಾಶ್ವತವಾಗಿ ಕಣ್ಣುಮುಚ್ಚಿದ್ದಳು.
“ರಾತ್ರಿ ಅವಳು ನಿಮ್ಮ ಬಗ್ಗೆಯೇ ಮಾತನಾಡಿದ್ದಳು. ಬಹುಶಃ ತಾನು ಸಾಯುತ್ತೇನೆಂಬುದು ಅವಳಿಗೆ ಖಚಿತವಾಗಿತ್ತೇನೋ?” ಎಂದಳು ನರ್ಸ್.
ಅನಿತಾಳ ಶವದ ಮುಖಚರ್ಯೆ ನಿರ್ಭಾವುಕವಾಗಿತ್ತು. ಆ ಮುಖದ ಮೇಲೆ ಯಾವುದೇ ಆತಂಕ, ವಿಷಾದದ ಛಾಯೆ ಇರಲಿಲ್ಲ. ಕೈಗಳಲ್ಲಿ ಹಸಿರು ಬಳೆ ತೊಟ್ಟಿದ್ದಳು. ಅದನ್ನು ಕಂಡು ನರ್ಸ್ ಳತ್ತ ತಿರುಗಿ ನೋಡಿದೆ.
“ಆ ಹಸಿರು ಬಳೆಗಳನ್ನು ಪ್ರತಿ ದಿನ ಪರ್ಸ್ ನಿಂದ ತೆಗೆದು ಗಂಟೆಗಟ್ಟಲೇ ಅವನ್ನೇ ನೋಡುತ್ತ ಕುಳಿತುಕೊಳ್ಳುತ್ತಿದ್ದಳು. ಮತ್ತೆ ಪರ್ಸ್ ನಲ್ಲಿಯೇ ಮುಚ್ಚಿಡುತ್ತಿದ್ದಳು. ನಿನ್ನೆ ತುಂಬಾ ಹಠ ಮಾಡಿದಳು. ಆದ್ದರಿಂದ ನಾನೇ ಅವಳಿಗೆ ಬಳೆ ತೊಡಿಸಿದೆ. ರಾತ್ರಿ ಅವನ್ನು ತೆಗೆದುಬಿಡಮ್ಮ ಎಂದು ಹೇಳಿದಾಗ, `ಇಲ್ಲ, ಇವತ್ತು ರಾತ್ರಿ ನಾನಿವನ್ನು ಧರಿಸಿಕೊಂಡೇ ಮಲಗಬೇಕು,’ ಎಂದು ಗಲಾಟೆ ಮಾಡಿದಳು.
ಅಂತಿಮ ಸಂಸ್ಕಾರ ಮುಗಿಸಿ ಮರಳಿ ಮನೆ ತಲುಪಿದ ನಂತರ, “ಅದೊಂದು ಪಾಪದ ಹೂವು. ನೋವಿನಿಂದ ತುಂಬಾ ನಲುಗಿತ್ತು. ಹೀಗಾಗಿ ಅವಳು ಕಣ್ಣು ಮುಚ್ಚಿದ್ದೇ ಒಳ್ಳೆಯದು. ಇನ್ನಾದರೂ ನೀವು ನಿಶ್ಚಿಂತೆಯಿಂದ ನಿದ್ದೆ ಮಾಡಿ,” ಎಂದಿದ್ದಳು ಸೀಮಾ.
ನಾನು ಮೌನವಾಗಿದ್ದೆ. ಸೀಮಾ ಇನ್ನೂ ಸ್ವಲ್ಪ ಹೊತ್ತು ನನ್ನೆದುರಿಗೆ ನಿಂತಿದ್ದು ನಂತರ, “ಆ ಹಸಿರು ಬಳೆಗಳಿಗೂ ನಿಮಗೂ ಏನು ಸಂಬಂಧ?” ಎಂದು ಕೇಳಿದಳು. `ಅಂದು ಸ್ಯಾಂಕಿ ಕೆರೆಯ ಬಳಿ ತಿರುಗಾಡುತ್ತಿರುವಾಗ ಪಕ್ಕದಲ್ಲೇ ಬಳೆ ಮಾರುತ್ತಿರುವವನ ಗಾಡಿಯಲ್ಲಿ ಕಂಡ ಆ ಹಸಿರು ಬಳೆಗಳನ್ನು ಕೊಡಿಸು ಎಂದು ಕೇಳಿದ್ದಳು. ಮುಂದೆ ಒಂದು ದಿನ ರಾತ್ರಿ ಅದೇ ಬಳೆಗಳನ್ನು ತೊಟ್ಟು ನಿನಗೋಸ್ಕರವೇ ಕಾಯುತ್ತೇನೆ ಎಂದಿದ್ದಳು.”
“ಆಮೇಲೆ?”
“ಆಮೇಲೆ, ಇನ್ನೇನಿದೆ? ಕೊನೆಗಾಲದವರೆಗೂ ಅವಳು ತನ್ನ ಭಾವನೆಗಳೊಂದಿಗೇ ಬದುಕಿಬಿಟ್ಟಳಲ್ಲ!”
ಮರುದಿನವೇ ನಮ್ಮ ಮನೆಗೊಂದು ರಿಜಿಸ್ಟರ್ಡ್ ಪೋಸ್ಟ್ ಬಂದಿತ್ತು. ಅದು ಅನಿತಾಳ ವಕೀಲರು ಕಳುಹಿಸಿದ್ದು. ಅವಳು ತನ್ನೆಲ್ಲ ಸ್ಥಿರಚರಾಸ್ತಿಯನ್ನು ಆನಂದ್ ನ ಹೆಸರಿಗೆ ವರ್ಗಾಯಿಸಿದ್ದಳು. ಕುಮಾರಕೃಪಾ ರಸ್ತೆಯಲ್ಲಿರುವ ಅವಳ ಮೂರು ಬೆಡ್ ರೂಮಿನ ಫ್ಲ್ಯಾಟ್ ಹಾಗೂ ಬ್ಯಾಂಕ್ ನಲ್ಲಿದ್ದ ಒಂದು ಕೋಟಿ ಡಿಪಾಸಿಟ್ ಹಣವನ್ನೂ ಆನಂದ್ ನ ಹೆಸರಿಗೇ ವರ್ಗಾಯಿಸಿದ್ದಳು. ಜೊತೆಗೆ ಅವಳು ಬರೆದ ಪತ್ರ ಅದರಲ್ಲಿತ್ತು. ಪತ್ರದಲ್ಲಿ ಹೀಗೆ ಬರೆದಿದ್ದಳು!
ಬೆಳ್ಳಂ ಬೆಳಗ್ಗೆಯೇ ಸೀಮಾ ಲಗುಬಗೆಯಿಂದ ತಯಾರಾಗುತ್ತಿರುವುದನ್ನು ಕಂಡು, “ಏನು ಸಮಾಚಾರ ಸೀಮಾ? ಇಷ್ಟೊಂದು ಬೇಗ ಹೊರಡಲು ತಯಾರಾಗುತ್ತಿರುವೆ?” ಎಂದೆ.
“ಅನಿತಾಳ ವಕೀಲರನ್ನು ಭೇಟಿಯಾಗಲು ಹೊರಟಿದ್ದೇನೆ. ಅವಳ ಎಲ್ಲಾ ಉಡುಗೊರೆಯನ್ನು ಅನಾಥಾಶ್ರಮಗಳಿಗೆ ನೀಡಬೇಕು ಎಂದುಕೊಂಡಿದ್ದೇನೆ,” ಎಂದಳು.
ನಂತರದ ದಿನಗಳಲ್ಲಿ ಎಲ್ಲವನ್ನೂ ಅನಾಥಾಶ್ರಮಗಳಿಗೆ ದಾನ ಮಾಡಿ ಸೀಮಾಳೊಂದಿಗೆ ಮನೆಗೆ ಮರಳಿ ಬರುತ್ತಿರುವಾಗ, ಪಕ್ಕದ ಸೀಟ್ ನಲ್ಲಿ ಅನಿತಾಳೇ ಕುಳಿತು ಲಾಂಗ್ ಡ್ರೈವ್ ಗೆ ತೆರಳುತ್ತಿರುವಂತೆ ಭಾಸವಾಗತೊಡಗಿತು. ಪ್ರೀತಿಯ ಗೆಳೆಯ,
ಇತ್ತೀಚಿನ ದಿನಗಳು ತೀವ್ರ ಯಾತನಾಮಯವಾಗಿವೆ. ಕಾಲಕ್ರಮೇಣ ಯಾತನೆ ಕಡಿಮೆಯಾದೀತು ಎಂದುಕೊಂಡೆ. ಆದರೆ, ಇದೇಕೊ ನನ್ನನ್ನು ಬಿಟ್ಟು ತೊಲಗುವ ಲಕ್ಷಣಗಳೇ ಗೋಚರಿಸುತ್ತಿಲ್ಲ.
ಕಳೆದುಹೋದ ಹಳೆಯ ನೆನಪುಗಳು ಪ್ರತಿಕ್ಷಣ ಕಾಡುತ್ತಲಿವೆ. ನಿಸ್ಸಹಾಯಕಳಾಗಿ ರೋದಿಸುವುದೊಂದೇ ನನಗುಳಿದ ದಾರಿ. ಆ ಹಳೆಯ ಮಧುರ ನೆನಪುಗಳು ಪೀಡಿಸಿದಾಗೆಲ್ಲ ನಿನ್ನನ್ನು ಕಾಣಬೇಕೆಂಬ ಅದಮ್ಯ ಆಸೆಯೊಂದು ಭೋರ್ಗರೆಯುತ್ತದೆ. ಆದರೆ ಇದನ್ನೆಲ್ಲ ನಿನ್ನೊಂದಿಗೆ ಯಾವ ರೀತಿ ಹಂಚಿಕೊಳ್ಳಬೇಕೆಂಬುದೇ ಅರ್ಥವಾಗಲಿಲ್ಲ.
ಅವತ್ತೊಂದು ದಿನ ಆನಂದ್ ನನ್ನು ಕಂಡರೆ ನಿನಗಿಷ್ಟನಾ? ಅಂತ ಕೇಳಿದ್ದೆಯಲ್ಲ, ಹೌದು. ನಾನವನನ್ನು ತುಂಬಾ ಇಷ್ಟಪಡುತ್ತೇನೆ. ಅವನ ಮುದ್ದು ಮುಖ ನೆನಪಾದಾಗೆಲ್ಲ ನನ್ನ ಅಂತರಾತ್ಮ ಸಾಕಷ್ಟು ಪಶ್ಚಾತ್ತಾಪಪಟ್ಟಿದೆ. ಇತ್ತೀಚೆಗಂತೂ, ನಿನ್ನನ್ನೇ ಮದುವೆಯಾಗಿದ್ದರೆ, ಬದುಕು ಅದೆಷ್ಟು ಸುಂದರವಾಗಿರುತ್ತಿತ್ತು ಎಂದು ವಿಹ್ವಲಳಾಗುತ್ತಿರುತ್ತೇನೆ. ನಿನಗೋಸ್ಕರ ಗಂಟೆಗಟ್ಟಲೇ ಸಿಂಗರಿಸಿಕೊಂಡು, ಆನಂದ್ ನೊಂದಿಗೆ ಆಟವಾಡಿಕೊಂಡಿದ್ದರೆ ಜೀವನ ಅದೆಷ್ಟು ಸೊಗಸಾಗಿರುತ್ತಿತ್ತು! ಆದರೆ, ವಿಧಿಯಾಟ ಹಾಗಾಗಲಿಲ್ಲ. ಅದೆಲ್ಲಿಲ್ಲಿಯೋ ತಿರುಗಾಡಿದ ನನಗೆ ಕೊನೆಗೂ ಒಂದು ಅಂತಿಮ ಕಾಲ ಬಂದೇಬಿಟ್ಟಿತಲ್ಲ ಗೆಳೆಯ, ಇಂತಹ ದುರ್ಭರ ಯಾತನೆಯನ್ನು ನಾನಿನ್ನು ಸಹಿಸಲಾರೆ.
ಬೆಂಗಳೂರು ಬಿಟ್ಟು ಮುಂಬೈಗೆ ತೆರಳಿದ್ದು ನನ್ನ ಬದುಕಿನ ಬಹುದೊಡ್ಡ ಪ್ರಮಾದ. ಇದರಲ್ಲಿ ನಿನ್ನದೇನೂ ತಪ್ಪಿಲ್ಲ. ಅವತ್ತೇ ನಿನ್ನ ಕಣ್ಣುಗಳ ಬೆಳಕಿನಲ್ಲಿ ಅಡಗಿರುವ ಜೀವನೋತ್ಸಾಹವನ್ನು ನಾನು ಗುರುತಿಸಿದ್ದರೆ, ಇವತ್ತು ಇಂತಹ ದುಸ್ಥಿತಿ ಅನುಭವಿಸುವ ಸಂದರ್ಭವೇ ಎದುರಾಗುತ್ತಿರಲಿಲ್ಲ. ಊರಿಗೆ ಊರೇ ಲೂಟಿಯಾದ ನಂತರ ಇಂತಹ ಮಾತುಗಳನ್ನು ವ್ಯಕ್ತಪಡಿಸುವುದರಲ್ಲಿ ಯಾವ ಅರ್ಥವೂ ಇಲ್ಲ ಬಿಡು. ನಿನ್ನ ಬದುಕಿಗೆ ಒಂದರೆ ಕ್ಷಣ ನಾನು ಆಧಾರವಾಗಲಿಲ್ಲ. ಆದರೆ ನನ್ನ ವಿಧಿ ಎಂತಹುದು ನೋಡು, ನನ್ನ ಶವ ಹೊತ್ತೊಯ್ಯಲು ನಿನ್ನನ್ನು ಬಿಟ್ಟರೆ ಬೇರಾರೂ ಗತಿ ಇಲ್ಲ.
ಈ ಜನ್ಮದಲ್ಲಂತೂ ನಿನ್ನೊಂದಿಗೆ ಬಾಳಲು ಸಾಧ್ಯವಾಗಲಿಲ್ಲ. ಕೊನೆ ಪಕ್ಷ ಮುಂದಿನ ಜನ್ಮದಲ್ಲಾದರೂ ನಿನ್ನೊಂದಿಗೆ ಜೀವಿಸುವಂತಾಗಲಿ, ಬದುಕನ್ನು ಹಂಚಿಕೊಳ್ಳುವಂತಾಗಲಿ ಎಂದು ಬಯಸುವೆ. ನೀನು ಹೇಗೆ ಹೇಳುವೆಯೋ ಹಾಗೆ ಕೇಳಿಕೊಂಡು, ಕಮಕ್ ಕಿಮಕ್ ಎನ್ನದೆ ನಿನ್ನೊಂದಿಗೆ ಕೊನೆಯವರೆಗೂ ಬದುಕುವೆ.
ನಿನ್ನವಳೇ ಅನಿತಾ