ಸಾಮಾನ್ಯವಾಗಿ ದೀಪ್ತಿಯ ಕಾಲುಗಳು ನೀಟಾಗಿರುವುದಿಲ್ಲ. ಅವಳ ಪಾದಗಳಂತೂ ಸದಾ ಒಡೆದಿರುತ್ತವೆ. ಒಮ್ಮೊಮ್ಮೆ ಬೇಸಿಗೆ ಅಥವಾ ಚಳಿಗಾಲದಲ್ಲಿ ಅದರಿಂದ ರಕ್ತ ತೊಟ್ಟಿಕ್ಕುತ್ತದೆ. ಆಫೀಸ್ ನಲ್ಲಂತೂ ದೀಪ್ತಿ ತನ್ನ ಪಾದಗಳು ಕಾಣದಿರಲು ಸಾಕ್ಸ್ ಧರಿಸುತ್ತಾಳೆ. ಒಂದು ದಿನ ಅವಳು ಮಾರ್ಕೆಟ್ ನಿಂದ ಮೆಟಲ್ ಸ್ಕ್ರಬರ್ ತಂದಳು ಹಾಗೂ ಅದರಿಂದ ತನ್ನ ಹಿಮ್ಮಡಿಯನ್ನು ಚೆನ್ನಾಗಿ ತಿಕ್ಕಿ ತಿಕ್ಕಿ ತೊಳೆದಳು. ಅದನ್ನು ಒರೆಸಿದ ನಂತರ ಮಾಯಿಶ್ಚರೈಸರ್ ಹಚ್ಚಿದಳು. ಆದರೆ ಮಾರನೇ ದಿನ ಹಿಮ್ಮಡಿಗಳಲ್ಲಿ ಹೆಚ್ಚಿನ ನವೆಯುಂಟಾಗಿ ಅವು ಕೆಂಪು ಬಣ್ಣಕ್ಕೆ ತಿರುಗಿದ. ಅವಳು ತಕ್ಷಣ ವೈದ್ಯರ ಬಳಿ ಹೋದಾಗ, ಅವರು ದೀಪ್ತಿಗೆ ಫಂಗಲ್ ಇನ್ಫೆಕ್ಷನ್ ಆಗಿದೆ ಎಂದರು, ಅದರ ಚಿಕಿತ್ಸೆ ಬಹಳ ದಿನ ನಡೆಯಿತು. ಬಹಳಷ್ಟು ಮಂದಿ ತಮ್ಮ ಮುಖ ಹಾಗೂ ಕೇಶ ಸೌಂದರ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸುತ್ತಾರೆಯೇ ವಿನಾ ಕಾಲುಗಳ ಕಡೆ ನಿರ್ಲಕ್ಷ್ಯ ತೋರುತ್ತಾರೆ. ಕ್ರಮೇಣ ವಯಸ್ಸಾದ ಹಾಗೆ ಇದರ ಪರಿಣಾಮ ಕಾಣಿಸುತ್ತದೆ. ಕಾಲುಗಳು ನಿಮ್ಮ ಇಡೀ ದೇಹದ ತೂಕ ಹೊರುತ್ತವೆ, ಆದ್ದರಿಂದ ಅವುಗಳನ್ನು ಎಂದೂ ನಿರ್ಲಕ್ಷಿಸಬೇಡಿ. ಹಾಗಿದ್ದರೆ ಯಾವ ಯಾವ ಋತುವಿನಲ್ಲಿ ಕಾಲುಗಳ ಸಂರಕ್ಷಣೆಯನ್ನು ಹೇಗೆ ಮಾಡಿಕೊಳ್ಳಬೇಕೆಂದು ವಿವರವಾಗಿ ತಿಳಿಯೋಣವೇ?
ಮಳೆಗಾಲದಲ್ಲಿ ಆರೈಕೆ
ಮಳೆಗಾಲದ ದಿನಗಳಲ್ಲಂತೂ ಕಾಲುಗಳನ್ನು ಬಲು ವಿಶೇಷವಾಗಿ ನೋಡಿಕೊಳ್ಳಬೇಕು. ಏಕಂದರೆ ಜಿಟಿ ಜಿಟಿ ಮಳೆಯಿಂದಾಗಿ ಈ ಕಾಲದಲ್ಲಿ ಫಂಗಲ್ ಇನ್‌ಫೆಕ್ಷನ್ ಆಗುವ ಸಾಧ್ಯತೆಗಳು ಹೆಚ್ಚು. ಅದಕ್ಕಾಗಿಯೇ ಮಳೆಗಾಲದಲ್ಲಿ ಮಧುಮೇಹ ಹಾಗೂ ಆಸ್ತಮಾ ರೋಗಿಗಳು ತಮ್ಮ ಕಾಲುಗಳನ್ನು ಬಲು ಎಚ್ಚರಿಕೆಯಿಂದ ಗಮನಿಸಿಕೊಳ್ಳತಕ್ಕದ್ದು. ಏಕೆಂದರೆ ಅಂಥವರು ಬಲು ಬೇಗ ಸೋಂಕಿಗೆ ಈಡಾಗುತ್ತಾರೆ. ಹಾಗಾದರೆ ಮಳೆಗಾಲದಲ್ಲಿ ಕಾಲುಗಳ ಆರೈಕೆ ಹೇಗೆ ಮಾಡಬೇಕು?
ಈ ಕಾಲದಲ್ಲಿ ಆದಷ್ಟೂ ತೆರೆದ ಭಾಗವಿರುವ ಚಪ್ಪಲಿಯನ್ನೇ ಧರಿಸಿರಿ, ಆಗ ಅವು ಸುಲಭವಾಗಿ ಒಣಗುತ್ತವೆ.
ನೀವು ಹೊರಗಿನಿಂದ ಬರುವಾಗ ಮಳೆಯಲ್ಲಿ ನೆನೆದಿದ್ದರೆ, ಮೊದಲು ಮಾಮೂಲಿ ತಣ್ಣೀರಿನಿಂದಲೇ ಕಾಲು ತೊಳೆದು, ಉತ್ತಮ ಟವೆಲ್ ನಿಂದ ಅವನ್ನು ಒರೆಸಿ, ಮನೆಯಲ್ಲಿ ಹವಾಯಿ ಚಪ್ಪಲಿ ಧರಿಸಿ ಓಡಾಡಿರಿ.
ಮನೆಯ ಒಳಗೆ ಅಥವಾ ಹೊರಗೆ ಬರಿಗಾಲಲ್ಲಿ ಓಡಾಡಬೇಡಿ.
ನೀವು ಹೊರಗಿನ ಓಡಾಟಕ್ಕೆ ಶೂಸ್ ಬಯಸಿದರೆ ನೈಲಾನ್ ಬದಲಿಗೆ ಕಾಟನ್ ಸಾಕ್ಸ್ ನ್ನೇ ಧರಿಸಿ.
ಮನೆಯಿಂದ ಹೊರಗೆ ಹೋಗುವಾಗ, ಸದಾ ಒಂದು ಜೊತೆ ಎಕ್ಸ್ ಟ್ರಾ ಸಾಕ್ಸ್ ಇಟ್ಟುಕೊಳ್ಳಿ. ಆಕಸ್ಮಿಕವಾಗಿ ಸಾಕ್ಸ್ ಒದ್ದೆಯಾದರೆ, ಇನ್ನೊಂದನ್ನು ಧರಿಸಬಹುದು.
ಎಂದೂ ಒದ್ದೆಮುದ್ದೆ ಶೂಸ್ ಧರಿಸಬೇಡಿ. ಅವನ್ನು ಮಳೆ ಬರುವಾಗ ಒಣಗಿಸುವುದೂ ಕಷ್ಟ. ಆದರೂ ಮಳೆ ಬೀಳದ ಕಡೆ, ಅವನ್ನು ಪೇಪರ್ ಮೇಲೆ ಹರಡಿ ಒಣಗಿಸಲು ಪ್ರಯತ್ನಿಸಿ.
ಈ ಸಮಸ್ಯೆ ನಿವಾರಿಸಲು ಮಳೆಗಾಲದಲ್ಲಿ ಕನಿಷ್ಠ 2-3 ಜೊತೆ ಶೂ, ಚಪ್ಪಲಿ ಅಥವಾ ಸ್ಯಾಂಡಲ್ಸ್ ಇರಲಿ.
ಮಧುಮೇಹ, ಆಸ್ತಮಾದಿಂದ ಬಳಲುತ್ತಿರುವ ರೋಗಿಗಳಂತೂ ಈ ಕಾಲದಲ್ಲಿ ತಮ್ಮ ಕಾಲುಗಳ ಸಂರಕ್ಷಣೆಯತ್ತ ವಿಶೇಷ ಗಮನಹರಿಸಬೇಕು, ಏಕೆಂದರೆ ಈ ಸಂದರ್ಭದಲ್ಲಿ ಅವರ ಪಾದಗಳಿಗೆ ಸೋಂಕು ತಗುಲುವ ಸಂಭವ ಹೆಚ್ಚು.
ಚಳಿಗಾಲದಲ್ಲಿ ಆರೈಕೆ
ಚಳಿಗಾಲದಲ್ಲಿ ಚರ್ಮ ಹೆಚ್ಚು ಶುಷ್ಕವಾಗತೊಡಗುತ್ತದೆ. ಕಾಲುಗಳು ಸಹ ಬೇಗ ಡ್ರೈ ಆಗಿ, ಪಾದಗಳು ಒಡೆಯಲಿಕ್ಕೂ ಆರಂಭಿಸುತ್ತವೆ. ಆದ್ದರಿಂದ ಇವುಗಳ ಆರೈಕೆಗೆ ಹೀಗೆ ಮಾಡಿ :
ಕಾಲುಗಳಿಗೆ ಸದಾ ಆರ್ದ್ರತೆಯುಳ್ಳ ಕ್ರೀಂ ಹಾಗೂ ಲೋಶನ್ ನಿಂದ ಮಸಾಜ್ ಮಾಡಬೇಕು.
ಒಮ್ಮೊಮ್ಮೆ ಕಾಲುಗಳನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬಹುದು. ನಂತರ ಟವೆಲ್ ನಿಂದ ಒರೆಸಿ, ಒಣಗಿಸಿ ಮಾಯಿಶ್ಚರೈಸರ್ ಹಚ್ಚಿ 5-10 ನಿಮಿಷ ಮಸಾಜ್ ಮಾಡಿ.
ಅರ್ಧ ಬಕೆಟ್ ಬಿಸಿ ನೀರಿಗೆ ತುಸು ಕಲ್ಲುಪ್ಪು, ಸ್ಛಟಿಕ (ಆ್ಯಲಂ), 2 ಚಿಟಕಿ ವಾಷಿಂಗ್ ಪೌಡರ್ ಬೆರೆಸಿ ಕಾಲನ್ನು ಅದ್ದಿಡಿ. ಇದು ಒಡೆದ ಹಿಮ್ಮಡಿಗಳಿಗೆ ಉತ್ತಮ ಚಿಕಿತ್ಸೆಯಾಗಿದೆ. ನಂತರ ಒರೆಸಿ ವ್ಯಾಸಲೀನ್, ಕೋಲ್ಡ್ ಕ್ರೀಂ ಹಚ್ಚಬೇಕು.
ನೆಲದ ಮೇಲೂ ಸಹ ಬರಿಗಾಲಲ್ಲಿ ಓಡಾಡಬೇಡಿ. ಹೊರಗೆ ಹೋಗುವಾಗೆಲ್ಲ ಅಗತ್ಯ ಸಾಕ್ಸ್ ಧರಿಸಿರಿ.
ಬೇಸಿಗೆಯಲ್ಲಿ ಆರೈಕೆ
ಬೇಸಿಗೆಯಲ್ಲಿ ಪಾದಗಳು ಹೆಚ್ಚು ಬೆವರುತ್ತವೆ, ಮುಖ್ಯವಾಗಿ ಬೆರಳ ಸಂದುಗಳು. ಹೀಗಿರುವಾಗ ಅಲ್ಲಿ ಯಾವ ಬಗೆಯ ಸೋಂಕಾದರೂ ತಗುಲಬಹುದು. ಜೊತೆಗೆ ಈ ಕಾಲದಲ್ಲಿ ಸನ್ ಬರ್ನ್ ಹಾಗೂ ಶುಷ್ಕ ಹಿಮ್ಮಡಿಗಳ ಸಮಸ್ಯೆಯೂ ಉಂಟು. ಹೀಗಾಗಿ ಬೇಸಿಗೆಯಲ್ಲೂ ಕಾಲುಗಳ ಆರೈಕೆ ಮಾಡುವ ಅಗತ್ಯವಿದೆ.
ಕವರ್ಡ್ ಶೂಸ್ ಧರಿಸುವ ಮೊದಲು ಬೆರಳು ಸಂದು, ಪಾದಕ್ಕೆ ಆ್ಯಂಟಿ ಬ್ಯಾಕ್ಟೀರಿಯಲ್ ಟ್ಯಾಲ್ಕಂ ಪೌಡರ್ ಚಿಮುಕಿಸಿಕೊಂಡು, ಶುಭ್ರ ಕಾಟನ್ ಸಾಕ್ಸ್ ಧರಿಸಿರಿ. ಇದರಿಂದ ಪಾದಗಳು ದುರ್ಗಂಧಯುಕ್ತ ಬೆವರು, ಕೀಟಾಣುಗಳಿಂದ ಸುರಕ್ಷಿತಗೊಳ್ಳುತ್ತವೆ.
ಈ ಕಾಲದಲ್ಲಿ ಹೊರಗೆ ಹೋಗುವಾಗ ಅಗತ್ಯವಾಗಿ ಪಾದಗಳಿಗೆ ಸನ್ ಸ್ಕ್ರೀನ್ ಲೋಶನ್ ಹಚ್ಚಿಕೊಳ್ಳಿ. ಏಕೆಂದರೆ ಪಾದಗಳ ಚರ್ಮ ಬಿಸಿಲಿನ ಕಾರಣ ಕಪ್ಪಾಗಬಹುದು.
ಬೇಸಿಗೆಯ ದಿನಗಳಲ್ಲಿ ಜನ ಹೆಚ್ಚು ಆ್ಯಕ್ಟಿವ್ ಆಗಿರುತ್ತಾರೆ. ಹಾಗಾಗಿ ಆರಾಮದಾಯಕ ಎನಿಸುವಂಥ ಚಪ್ಪಲಿ, ಸ್ಯಾಂಡಲ್ಸ್ ನ್ನೇ ಧರಿಸಿರಿ. ಸಂಜೆ ಬಿಡುವಿರುವಾಗ, ಉಗುರುಬೆಚ್ಚಗಿನ ನೀರಿಗೆ ತುಸು ಉಪ್ಪು ಬೆರೆಸಿ, ಅದರಲ್ಲಿ ಕಾಲದ್ದಿ ಕುಳಿತುಕೊಳ್ಳಿ. ಇದರಿಂದ ಕಾಲಿನ ಆಯಾಸ ದೂರವಾಗುತ್ತದೆ.
ಹೊರಗಿನಿಂದ ಮನೆಗೆ ಬಂದಾಗ, ಅಗತ್ಯವಾಗಿ ಕಾಲು ತೊಳೆದುಕೊಂಡು, ಮಾಯಿಶ್ಚರೈಸರ್ ಹಚ್ಚಿಕೊಳ್ಳಿ.
ಧಾರಾಳವಾಗಿ ಗಾಳಿಯಾಡುವಂಥ ಚಪ್ಪಲಿ, ಸ್ಯಾಂಡಲ್ಸ್ ನ್ನೇ ಧರಿಸಿ. ಇದರಿಂದ ಬೆವರು ಹಾಗೂ ದುರ್ಗಂಧ ಎರಡೂ ಕಡಿಮೆಯಾಗುತ್ತದೆ.
ಹಿಮ್ಮಡಿಯ ಸಮಸ್ಯೆಗಳು
ಕಾಲುಗಳ ಸಂರಕ್ಷಣೆಯಲ್ಲಿ ಎಲ್ಲಕ್ಕಿಂತ ಹೆಚ್ಚಿನ ತೊಂದರೆ ಇರುವುದೇ ಒಡೆದ ಹಿಮ್ಮಡಿಗಳಲ್ಲಿ. ಇದರಲ್ಲಿ ಉರಿ, ನವೆ ಜೊತೆಗೆ ಒಮ್ಮೊಮ್ಮೆ ನೋವು ಇರುತ್ತದೆ. ಒಡೆದ ಹಿಮ್ಮಡಿಗಳಿಗೆ ಬೇಗ ಚಿಕಿತ್ಸೆ ಕೊಡಿಸದಿದ್ದರೆ, ಬಿರುಕು ಹೆಚ್ಚಾಗಿ ರಕ್ತ ಹನಿಯಲು ದಾರಿಯಾಗುತ್ತದೆ, ಸೂಕ್ಷ್ಮಾಣುಗಳು ಸೇರಿಕೊಂಡು ಸೋಂಕು ತಗುಲುತ್ತದೆ. ಹೀಗಾಗಿ ಒಡೆದ ಹಿಮ್ಮಡಿಯ ಸಮಸ್ಯೆ ನಿವಾರಿಸಲು ಈ ಸಲಹೆಗಳನ್ನು ಅನುಸರಿಸಿ :
ನಿಮ್ಮ ಹಿಮ್ಮಡಿಗಳಿಗೆ ಆದಷ್ಟೂ ಆರ್ದ್ರತೆ ಒದಗಿಸಿ. ಇದಕ್ಕಾಗಿ ಮಾಯಿಶ್ಚರೈಸರ್ ಹಚ್ಚಿಕೊಂಡ ನಂತರ, ಕಾಟನ್ ಸಾಕ್ಸ್ ಧರಿಸಲು ಮರೆಯದಿರಿ.
ಪಾದಗಳನ್ನು ಶುಚಿಗೊಳಿಸಲು ಆ್ಯಂಟಿಸೆಪ್ಟಿಕ್ ಸಾಬೂನು ಅಥವಾ ಲೋಶನ್ ಹಚ್ಚಿ, ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಡೆಡ್ ಸ್ಕಿನ್ ತೊಲಗಿಸಲು ಪ್ಯೂಮಿಕ್ ಸ್ಟೋನ್ ಬಳಸಿರಿ. ಆದರೆ ಇಲ್ಲಿ ನೀವು ಎಚ್ಚರ ವಹಿಸಬೇಕು.
ನಿಮ್ಮ ಒಡೆದ ಹಿಮ್ಮಡಿಗಳಿಗೆ ವಾರದಲ್ಲಿ 2-3 ಸಲ ಅಗತ್ಯವಾಗಿ ರಸ ಹಿಂಡಿದ (ಸ್ವಲ್ಪವೇ ರಸ ಉಳಿದಿದ್ದರೆ ಉತ್ತಮ) ನಿಂಬೆ ಸಿಪ್ಪೆಯಿಂದ ಚೆನ್ನಾಗಿ ತಿಕ್ಕಿರಿ, ಇದರಿಂದ ಆ ಭಾಗ ಮೃದುವಾಗುತ್ತದೆ, ಮುಂದೆ ಸಂದುಗಳು ಕೂಡಿಕೊಳ್ಳಲು ಹಿತಕಾರಿ.
ಡೆಡ್ ಸ್ಕಿನ್ ತೊಲಗಿಸಲು ಎಂದೂ ಬ್ಲೇಡ್ ಅಥವಾ ಕತ್ತರಿ ಉಪಯೋಗಿಸಬೇಡಿ.
ಪ್ರತಿದಿನ 12-14 ಗ್ಲಾಸ್ ನೀರು ಕುಡಿಯಿರಿ. ನಿಮ್ಮ ಆಹಾರದಲ್ಲಿ ಹಸಿರು ತರಕಾರಿ, ಸೌತೇಕಾಯಿ, ಟೊಮೇಟೊ, ಈರುಳ್ಳಿ ಮುಂತಾದವುಗಳ ಸಲಾಡ್, ರಸಪೂರಿತ ಮೂಸಂಬಿ, ಕಿತ್ತಳೆ, ಕಲ್ಲಂಗಡಿಹಣ್ಣುಗಳನ್ನು ಹೆಚ್ಚು ಸೇವಿಸಿ. ಧಾರಾಳವಾಗಿ ಎಳನೀರು, ಬಾರ್ಲಿ ಕಾಯಿಸಿದ ನೀರು ಕುಡಿಯುತ್ತಿರಿ.
ಈ ರೀತಿಯ ಮನೆಮದ್ದುಗಳಿಂದಾಗಿಯೂ ನಿಮ್ಮ ಒಡೆದ ಹಿಮ್ಮಡಿ ಸರಿಹೋಗಲಿಲ್ಲವಾದರೆ, ಕೂಡಲೇ ಚರ್ಮ ತಜ್ಞರನ್ನು ಭೇಟಿಯಾಗಿ, ಚಿಕಿತ್ಸೆ ಪಡೆಯಿರಿ.
– ಸುಮನಾ ಭಟ್