ಅದೊಂದು ಸುಂದರವಾದ ಸಂಜೆ. ಬೆಂಗಳೂರಿನ ಟ್ರಾಫಿಕ್ ಜಂಜಾಟದಿಂದ ಬಹುದೂರ ಮೈಸೂರಿನ ತಾರಾ ಹೋಟೆಲ್ ಕಂಟ್ರಿ ಇನ್‌ಹೋಟೆಲ್ ನಲ್ಲಿ ಸಡಗರ ಸಂಭ್ರಮ. `ದಿಲ್ ರಂಗೀಲಾ’ ಚಿತ್ರಕ್ಕೆ ಮುಹೂರ್ತದ ಗಳಿಗೆ. ಗೋಲ್ಡನ್ ಸ್ಟಾರ್ ಗಣೇಶ್, ರಚಿತಾ ರಾವ್, ಪ್ರಿಯಾಂಕಾ ರಾವ್ ತ್ರೀಸ್ಟಾರ್ ಗಳ ತಾರಾಗಣ. ಕೆ. ಮಂಜು ನಿರ್ಮಾಣ, ಪ್ರೀತಮ್ ಗುಬ್ಬಿ ನಿರ್ದೇಶನ. ಎಲ್ಲರೂ ಯಶಸ್ಸಿನ ಸರದಾರರೇ.
`ಮುಂಗಾರು ಮಳೆ’ ಚಿತ್ರದಲ್ಲಿ ಗಣೇಶನ ಡೈಲಾಗ್ಸ್ ಬರೆದಿದ್ದರು ಪ್ರೀತಮ್ ಗುಬ್ಬಿ. ಅದಾದ ನಂತರ ಅವರಿಬ್ಬರೂ ಮತ್ತೆ ಸೇರಿದ್ದು `ಮಳೆಯಲಿ ಜೊತೆಯಲಿ….’ ಸಿನಿಮಾದಲ್ಲಿ. ರೊಮ್ಯಾಂಟಿಕ್ ಚಿತ್ರಗಳನ್ನು ವಿಭಿನ್ನವಾಗಿ ಚಿತ್ರಿಸುವ ಗುಬ್ಬಿ ಕನ್ನಡ ಚಿತ್ರರಂಗದಲ್ಲಿ ಸದಭಿರುಚಿ ಚಿತ್ರಗಳನ್ನು ನೀಡುತ್ತಿರುವಂಥ ಯುವ ನಿರ್ದೇಶಕ.
ಅಂದು ಬೆಂಗಳೂರಿನಿಂದ ಪತ್ರಕರ್ತರನ್ನೆಲ್ಲ ಅಹ್ವಾನಿಸಲಾಗಿತ್ತು. ಕಂಟ್ರಿ ಇನ್ ಹೋಟೆಲ್ ನ ಜಿ.ಎಂ. ಆಗಿರುವ ಅವರು ತಮ್ಮ ಹೋಟೆಲ್ ನಲ್ಲಿ ನಡೆಯುವ ಮೊದಲ ಸಂಭ್ರಮ ಕನ್ನಡ ಚಿತ್ರರಂಗಕ್ಕೆ ಮೀಸಲು ಎಂದು ಮೊದಲೇ ಹೇಳಿದ್ದರಂತೆ. ಇವರ ಜೊತೆಗೂಡಿ ನಿಂತಿದ್ದಾರೆ ನಿರ್ಮಾಪಕಿ ಹಾಗೂ ಹೋಟೆಲ್ ನ ಪಿ.ಆರ್.ಓ. ಆಗಿರುವ ಪ್ರಭಾರಾಜ್. ಹೋಟೆಲ್ ಉದ್ಘಾಟನೆಯನ್ನು ಕನ್ನಡದ ನಟರಿಂದಲೇ ಮಾಡಿಸಬೇಕೆಂಬ ಆಸೆ ಅವರದಾಗಿತ್ತು. ಕೆ. ಮಂಜು ತಮ್ಮ ಚಿತ್ರದ `ದಿಲ್ ರಂಗೀಲಾ’ ಶೂಟಿಂಗ್ ನ್ನು ಅಲ್ಲಿಯೇ ಮಾಡುವುದಾಗಿ ನಿರ್ಧರಿಸಿದ್ದರು. ಸುಸಜ್ಜಿತ ತಾರಾ ಹೋಟೆಲ್ ನ್ನು ಉದ್ಘಾಟಿಸಲು ಗಣೇಶ್ ಟ್ರಿಮ್ಮಾಗಿ ಡ್ರೆಸ್‌ಮಾಡಿಕೊಂಡು ಬಂದಿದ್ದರು. ಜೊತೆಯಲ್ಲಿ ಸುಂದರವಾದ ನಟಿಯರು, ಯಾವುದೇ ಬಾಲಿವುಡ್ ನಟಿಯರಿಗೇನೂ ಕಡಿಮೆ ಇಲ್ಲ ಎನ್ನುವಷ್ಟು ಸುಂದರವಾಗಿ ಉಡುಗೆ ತೊಡುಗೆ ಧರಿಸಿ ಮಿಂಚುತ್ತಿದ್ದರು. ಇದೊಂದು ತ್ರಿಕೋನ ಪ್ರೇಮಕಥೆಯ ಚಿತ್ರವೆಂದು ಬೇಕಾದರೂ ಕರೆಯಬಹುದು.
ಹೋಟೆಲ್ ನ ಉದ್ಘಾಟನೆಯ ನಂತರ `ದಿಲ್ ರಂಗೀಲಾ’ ಚಿತ್ರಕ್ಕೆ ಶುಭಾರಂಭದ ಚಾಲನೆ. ಕೆ. ಮಂಜು ಅವರು ಬಹಳ ಅದ್ಧೂರಿಯಾಗಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಗಣೇಶ್ ಮತ್ತು ಪ್ರೀತಮ್ ಗುಬ್ಬಿ ಇವರಿಬ್ಬರ ಕಾಂಬಿನೇಷನ್ ಇರುವ ಚಿತ್ರವನ್ನು ಮಾಡಬೇಕೆಂಬ ಆಸೆ ಬಹಳ ದಿನಗಳಿಂದ ಇತ್ತು. ಅದಕ್ಕೆ ಸರಿಯಾಗಿ ಪ್ರೀತಮ್ ಒಳ್ಳೆ ಸ್ಕ್ರಿಪ್ಟ್ ತಂದಾಗ ಈ ಚಿತ್ರವನ್ನು ತಾವೇ ನಿರ್ಮಿಸಬೇಕು, ಒಂದೊಳ್ಳೆ ಅದ್ಧೂರಿ ಕನ್ನಡ ಚಿತ್ರವಾಗಬೇಕೆಂದು ಕೆ. ಮಂಜು ನಿರ್ಮಾಣಕ್ಕೆ ಕೈ ಹಾಕಿದರಂತೆ.
ಎಂದಿನಂತೆ ಪ್ರೀತಮ್ ಗುಬ್ಬಿ ವಿಭಿನ್ನವಾಗಿ `ದಿಲ್ ರಂಗೀಲಾ’ ಎಂಬ ಟೈಟಲ್ ಇಟ್ಟಿದ್ದಾರೆ, ಒಂಥರಾ ಜೋಶ್ ಹುಟ್ಟಿಸುತ್ತೆ ಎನ್ನುತ್ತಿದ್ದರು.
`ದಿವ್ ರಂಗೀಲಾ’ ವಿಶೇಷವೆಂದರೆ ಇಬ್ಬರು ನಟಿಯರೂ ಕನ್ನಡದವರೇ ಆಗಿರೋದು. ಇತ್ತೀಚೆಗೆ ದೊಡ್ಡ ಚಿತ್ರವೊಂದರೆ ಬಾಲಿವುಡ್ ನಿಂದ ಅಥವಾ ತಮಿಳು, ತೆಲುಗು ಚಿತ್ರರಂಗದಿಂದ ನಟಿಯರನ್ನು ಕರೆತರುತ್ತಿರುತ್ತಾರೆ. ಆದರೆ ರಚಿತಾ ಮತ್ತು ಪ್ರಿಯಾಂಕಾ ರಾವ್ ಇಬ್ಬರೂ ಕನ್ನಡದ ಕಣ್ಮಣಿಗಳೇ ಆಗಿದ್ದಾರೆ.
ರಚಿತಾ ಈಗಾಗಲೇ `ಬುಲ್ ಬುಲ್’ ಚಿತ್ರದಲ್ಲಿ ನಟಿಸಿ ಯಶಸ್ವಿ ತಾರೆ ಎನಿಸಿಕೊಂಡಿದ್ದಾಳೆ. ಇನ್ನು ಪ್ರಿಯಾಂಕಾ ರಾವ್ ಮೈಸೂರಿನ ಹುಡುಗಿ. ಈಗಾಗಲೇ `ಸೂಪರ್ರೋ ರಂಗ’ ಚಿತ್ರದಲ್ಲಿ ನಟಿಸುತ್ತಿದ್ದಾಳೆ. `ದಿಲ್ ರಂಗೀವಾ’ ಪ್ರಿಯಾಂಕಾಳ ಎರಡನೇ ಕನ್ನಡ ಚಿತ್ರವಾಗಲಿದೆ.
ಗಣೇಶನ ಜೊತೆಯಲ್ಲಿ ನಟಿಸುತ್ತಿರುವುದು ಇವರಿಬ್ಬರಿಗೂ ಖುಷಿ ತಂದಿದೆ. ಗಣೇಶ್ ಕೂಡಾ ಈ ಚಿತ್ರಕ್ಕಾಗಿ ಹೊಸ ರೀತಿಯ ಹೇರ್ ಕಟ್ ಮಾಡಿಸಿಕೊಂಡ ಹಾಗಿದೆ. ಸಾಕಷ್ಟು ಟ್ರಿಮ್ಮಾಗಿ ಸ್ಮಾರ್ಟಾಗಿ ಕಾಣುತ್ತಿದ್ದ ಗಣೇಶ್ ನಿಜಕ್ಕೂ `ದಿಲ್ ರಂಗೀಲಾ’ ಟೈಟಲ್ ಗೆ ಹೇಳಿ ಮಾಡಿಸಿದಂತಿದ್ದರು.
ಜನಪ್ರಿಯತೆಯನ್ನು ಕಳೆದುಕೊಂಡಿದ್ದ ಗಣೇಶ್ ಇತ್ತೀಚೆಗೆ `ಆಟೋರಾಜ’ ಚಿತ್ರದ ನಂತರ ಮತ್ತೆ ಯಶಸ್ಸನ್ನು ಕಾಣುವಂತಾಗಿತ್ತು. `ಆಟೋರಾಜ’ ನಂತರ ಗಣೇಶ್ ಗೆ ಮತ್ತೆ ಬೇಡಿಕೆ ಹೆಚ್ಚಾಗಿದೆ. ಅವರೇ ಹೇಳುವಂತೆ, “ಒಳ್ಳೆ ಚಿತ್ರಗಳು ಆಗಲಿ ಎಂದೇ ಎಲ್ಲರೂ ಶ್ರಮವಹಿಸಿ ಸಿನಿಮಾ ಮಾಡ್ತೀವಿ. ಆದರೆ ಪ್ರೇಕ್ಷಕನಿಗೆ ಅದು ಇಷ್ಟವಾದರೆ ಮಾತ್ರ ಗೆಲುವು ಸಿಗುತ್ತದೆ. ಪ್ರೇಕ್ಷಕರು ಎಂಥ ಚಿತ್ರಗಳನ್ನು ಇಷ್ಟಪಡುತ್ತಾರೆಂಬ ಫಾರ್ಮುಲಾ ಇದುವರೆಗೂ ಯಾರಿಗೂ ಸಿಕ್ಕಿಲ್ಲ. “ನಾನು ಯಾವುದೇ ಚಿತ್ರವನ್ನು ಒಪ್ಪಿಕೊಳ್ಳುವ ಮೊದಲು ನನ್ನ ಕಡೆಯಿಂದ ಸಂಪೂರ್ಣವಾಗಿ ಎಫರ್ಟ್ ಹಾಕ್ತೀನಿ. ನನ್ನ ಸ್ವಂತ ಚಿತ್ರದಂತೆ ಕೆಲಸ ಮಾಡ್ತೀನಿ. ಕೆಲವು ಸಲ ಚಿತ್ರ ಸಕ್ಸಸ್ ಆಗುತ್ತೆ, ಕೆಲವು ಸಲ ಆಗೋದಿಲ್ಲ.
“ಗೆದ್ದಾಗ ಇನ್ನಷ್ಟು ಒಳ್ಳೆ ಚಿತ್ರ ಮಾಡೋಣ ಅಂದ್ಕೋತೀವಿ. ಹಾಗೆಯೇ ಸೋತಾಗ ಒಳ್ಳೆ ಚಿತ್ರ ಮಾಡುವ ಪ್ರಯತ್ನಕ್ಕಿಳಿಯುತ್ತೇವೆ. ಒಟ್ಟಿನಲ್ಲಿ ನಾನು ಸೋಲು ಗೆಲುವನ್ನು ಸರಿಸಮಾನವಾಗಿ ತೆಗೆದುಕೊಳ್ಳುತ್ತೀನಿ,” ಎಂದು ಗೋಲ್ಡನ್ ಸ್ಟಾರ್ ಹೇಳುತ್ತಾರೆ.
ಪ್ರೀತಮ್ ಗುಬ್ಬಿ ಭರವಸೆ ಮೂಡಿಸಿರುವ ಯುವ ನಿರ್ದೇಶಕ. ಮಳೆಯಲಿ ಜೊತೆಯಲಿ…., ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್, ಜಾನೂ ಚಿತ್ರಗಳಂಥ ಯಶಸ್ವಿ ಸಿನಿಮಾಗಳನ್ನು ನೀಡಿರುವ ಗುಬ್ಬಿ ತಮ್ಮ ಮೊದಲನೇ `ಹಾಗೇ ಸುಮ್ಮನೆ’ ಚಿತ್ರದಲ್ಲಿ ಒಳ್ಳೆ ಸಂದೇಶ ಎನ್ನುವಂಥ ಲವ್ ಸ್ಟೋರಿ ಮಾಡಿದ್ದರು. ಆದರೆ ನಿರೀಕ್ಷಿಸಿದ ಹಾಗೆ ಚಿತ್ರ ಓಡದಿದ್ದರೂ ಚಿತ್ರದ ಹಾಡುಗಳು ಸಾಕಷ್ಟು ಜನಪ್ರಿಯವಾಗಿತ್ತು. ಒಂದೊಳ್ಳೆ ಪ್ರಯತ್ನ ಮಾಡಿದ್ದರೆಂಬ ಪ್ರಶಂಸೆಗೆ ಗುಬ್ಬಿ ಒಳಗಾಗಿದ್ದರು.
ಈಗಿನ ಯುವ ಪ್ರೇಕ್ಷಕರು ಇಷ್ಟಪಡುವಂಥ ವಾತಾವರಣವನ್ನು ತಮ್ಮ ಸಿನಿಮಾಗಳಲ್ಲಿ ಕ್ರಿಯೇಟ್ ಮಾಡುವ ಪ್ರೀತಮ್ ಗುಬ್ಬಿ `ದಿಲ್ ರಂಗೀಲಾ’ ಚಿತ್ರದಲ್ಲೂ ಸಹ ಅಂಥವೊಂದು ಪ್ರಯತ್ನ ಮಾಡಿದ್ದಾರೆ ಅನಿಸುತ್ತೆ.
ಚಿತ್ರದ ನಾಯಕಿಯರಾದ ರಚಿತಾ, ಪ್ರಿಯಾಂಕಾ ರಾವ್ ಇವರಿಬ್ಬರಿಗೂ ಗಮನ ಸೆಳೆಯುವಂಥ ಪಾತ್ರಗಳನ್ನೇ ನೀಡಿದ್ದಾರಂತೆ. ರಚಿತಾ ಈಗಾಗಲೇ ಯಶಸ್ವಿ ತಾರೆ ಅನಿಸಿಕೊಂಡಿದ್ದಾಳೆ. ಪ್ರಿಯಾಂಕಾ ರಾವ್ ಗೆ ತಾನು ಹೊಸಬಳು ಅಂತ ಅನಿಸದಿರುವಷ್ಟು ಚಿತ್ರತಂಡ ಚೆನ್ನಾಗಿ ನೋಡಿಕೊಳ್ಳುತ್ತಿದೆಯಂತೆ.
ಪ್ರೀತಮ್, ಗಣೇಶ್ ಇಬ್ಬರೂ ಸೇರಿಬಿಟ್ಟರೆಂದರೆ ಚಿತ್ರೕಕರಣದಲ್ಲಿ ನಗುವಿಗೆ ಬರವಿರುವುದಿಲ್ಲ. ನಾವು ಎಷ್ಟೇ ಸೀರಿಯಸ್ ಸೀನ್ ಮಾಡುತ್ತಿದ್ದರೂ ಒಂದೊಂದ್ಸಲ ಇವರಿಬ್ಬರೂ ಜೋಕ್ ಮಾಡಿ ನಗಿಸಿಬಿಡುತ್ತಾರೆ ಎಂದು ಪ್ರಿಯಾಂಕಾ ಹೇಳುತ್ತಾಳೆ.
ಚಿತ್ರದ ನಿರ್ಮಾಪಕ ಕೆ. ಮಂಜು, ಒಬ್ಬ ಒಳ್ಳೆಯ ನಿರ್ಮಾಪಕ ಎಂದು ಇಡೀ ತಂಡ ಹೊಗಳುತ್ತದೆ. ಸಿನಿಮಾಗೆ ಏನೇ ಬೇಕಿರಲಿ ಹಿಂದು ಮುಂದು ನೋಡದೆ ಬಜೆಟ್ ಬಗ್ಗೆ ತಲೆ ಕೆಡಿಸಿಕೊಳ್ಳದೇ ಅವೆಲ್ಲವನ್ನು ಪೂರೈಸುತ್ತಾರಂತೆ.
ಒಟ್ಟಿನಲ್ಲಿ `ದಿಲ್ ರಂಗಿಲಾ’ ಹೆಸರಿಗೆ ತಕ್ಕಂತೆ ಇಡೀ ಚಿತ್ರತಂಡ ಶೂಟಿಂಗ್ ನ್ನು ಸಾಕಷ್ಟು ಎಂಜಾಯ್ ಮಾಡಿಕೊಂಡು ಕೆಲಸ ಮಾಡುತ್ತಿದೆಯಂತೆ.
– ಜಾಗೀರ್ ದಾರ್