ಅದೊಂದು ಸುಂದರವಾದ ಸಂಜೆ. ಬೆಂಗಳೂರಿನ ಟ್ರಾಫಿಕ್ ಜಂಜಾಟದಿಂದ ಬಹುದೂರ ಮೈಸೂರಿನ ತಾರಾ ಹೋಟೆಲ್ ಕಂಟ್ರಿ ಇನ್‌ಹೋಟೆಲ್ ನಲ್ಲಿ ಸಡಗರ ಸಂಭ್ರಮ. `ದಿಲ್ ರಂಗೀಲಾ' ಚಿತ್ರಕ್ಕೆ ಮುಹೂರ್ತದ ಗಳಿಗೆ. ಗೋಲ್ಡನ್ ಸ್ಟಾರ್ ಗಣೇಶ್, ರಚಿತಾ ರಾವ್, ಪ್ರಿಯಾಂಕಾ ರಾವ್ ತ್ರೀಸ್ಟಾರ್ ಗಳ ತಾರಾಗಣ. ಕೆ. ಮಂಜು ನಿರ್ಮಾಣ, ಪ್ರೀತಮ್ ಗುಬ್ಬಿ ನಿರ್ದೇಶನ. ಎಲ್ಲರೂ ಯಶಸ್ಸಿನ ಸರದಾರರೇ.
`ಮುಂಗಾರು ಮಳೆ' ಚಿತ್ರದಲ್ಲಿ ಗಣೇಶನ ಡೈಲಾಗ್ಸ್ ಬರೆದಿದ್ದರು ಪ್ರೀತಮ್ ಗುಬ್ಬಿ. ಅದಾದ ನಂತರ ಅವರಿಬ್ಬರೂ ಮತ್ತೆ ಸೇರಿದ್ದು `ಮಳೆಯಲಿ ಜೊತೆಯಲಿ....' ಸಿನಿಮಾದಲ್ಲಿ. ರೊಮ್ಯಾಂಟಿಕ್ ಚಿತ್ರಗಳನ್ನು ವಿಭಿನ್ನವಾಗಿ ಚಿತ್ರಿಸುವ ಗುಬ್ಬಿ ಕನ್ನಡ ಚಿತ್ರರಂಗದಲ್ಲಿ ಸದಭಿರುಚಿ ಚಿತ್ರಗಳನ್ನು ನೀಡುತ್ತಿರುವಂಥ ಯುವ ನಿರ್ದೇಶಕ.
ಅಂದು ಬೆಂಗಳೂರಿನಿಂದ ಪತ್ರಕರ್ತರನ್ನೆಲ್ಲ ಅಹ್ವಾನಿಸಲಾಗಿತ್ತು. ಕಂಟ್ರಿ ಇನ್ ಹೋಟೆಲ್ ನ ಜಿ.ಎಂ. ಆಗಿರುವ ಅವರು ತಮ್ಮ ಹೋಟೆಲ್ ನಲ್ಲಿ ನಡೆಯುವ ಮೊದಲ ಸಂಭ್ರಮ ಕನ್ನಡ ಚಿತ್ರರಂಗಕ್ಕೆ ಮೀಸಲು ಎಂದು ಮೊದಲೇ ಹೇಳಿದ್ದರಂತೆ. ಇವರ ಜೊತೆಗೂಡಿ ನಿಂತಿದ್ದಾರೆ ನಿರ್ಮಾಪಕಿ ಹಾಗೂ ಹೋಟೆಲ್ ನ ಪಿ.ಆರ್.ಓ. ಆಗಿರುವ ಪ್ರಭಾರಾಜ್. ಹೋಟೆಲ್ ಉದ್ಘಾಟನೆಯನ್ನು ಕನ್ನಡದ ನಟರಿಂದಲೇ ಮಾಡಿಸಬೇಕೆಂಬ ಆಸೆ ಅವರದಾಗಿತ್ತು. ಕೆ. ಮಂಜು ತಮ್ಮ ಚಿತ್ರದ `ದಿಲ್ ರಂಗೀಲಾ' ಶೂಟಿಂಗ್ ನ್ನು ಅಲ್ಲಿಯೇ ಮಾಡುವುದಾಗಿ ನಿರ್ಧರಿಸಿದ್ದರು. ಸುಸಜ್ಜಿತ ತಾರಾ ಹೋಟೆಲ್ ನ್ನು ಉದ್ಘಾಟಿಸಲು ಗಣೇಶ್ ಟ್ರಿಮ್ಮಾಗಿ ಡ್ರೆಸ್‌ಮಾಡಿಕೊಂಡು ಬಂದಿದ್ದರು. ಜೊತೆಯಲ್ಲಿ ಸುಂದರವಾದ ನಟಿಯರು, ಯಾವುದೇ ಬಾಲಿವುಡ್ ನಟಿಯರಿಗೇನೂ ಕಡಿಮೆ ಇಲ್ಲ ಎನ್ನುವಷ್ಟು ಸುಂದರವಾಗಿ ಉಡುಗೆ ತೊಡುಗೆ ಧರಿಸಿ ಮಿಂಚುತ್ತಿದ್ದರು. ಇದೊಂದು ತ್ರಿಕೋನ ಪ್ರೇಮಕಥೆಯ ಚಿತ್ರವೆಂದು ಬೇಕಾದರೂ ಕರೆಯಬಹುದು.
ಹೋಟೆಲ್ ನ ಉದ್ಘಾಟನೆಯ ನಂತರ `ದಿಲ್ ರಂಗೀಲಾ' ಚಿತ್ರಕ್ಕೆ ಶುಭಾರಂಭದ ಚಾಲನೆ. ಕೆ. ಮಂಜು ಅವರು ಬಹಳ ಅದ್ಧೂರಿಯಾಗಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಗಣೇಶ್ ಮತ್ತು ಪ್ರೀತಮ್ ಗುಬ್ಬಿ ಇವರಿಬ್ಬರ ಕಾಂಬಿನೇಷನ್ ಇರುವ ಚಿತ್ರವನ್ನು ಮಾಡಬೇಕೆಂಬ ಆಸೆ ಬಹಳ ದಿನಗಳಿಂದ ಇತ್ತು. ಅದಕ್ಕೆ ಸರಿಯಾಗಿ ಪ್ರೀತಮ್ ಒಳ್ಳೆ ಸ್ಕ್ರಿಪ್ಟ್ ತಂದಾಗ ಈ ಚಿತ್ರವನ್ನು ತಾವೇ ನಿರ್ಮಿಸಬೇಕು, ಒಂದೊಳ್ಳೆ ಅದ್ಧೂರಿ ಕನ್ನಡ ಚಿತ್ರವಾಗಬೇಕೆಂದು ಕೆ. ಮಂಜು ನಿರ್ಮಾಣಕ್ಕೆ ಕೈ ಹಾಕಿದರಂತೆ.
ಎಂದಿನಂತೆ ಪ್ರೀತಮ್ ಗುಬ್ಬಿ ವಿಭಿನ್ನವಾಗಿ `ದಿಲ್ ರಂಗೀಲಾ' ಎಂಬ ಟೈಟಲ್ ಇಟ್ಟಿದ್ದಾರೆ, ಒಂಥರಾ ಜೋಶ್ ಹುಟ್ಟಿಸುತ್ತೆ ಎನ್ನುತ್ತಿದ್ದರು.
`ದಿವ್ ರಂಗೀಲಾ' ವಿಶೇಷವೆಂದರೆ ಇಬ್ಬರು ನಟಿಯರೂ ಕನ್ನಡದವರೇ ಆಗಿರೋದು. ಇತ್ತೀಚೆಗೆ ದೊಡ್ಡ ಚಿತ್ರವೊಂದರೆ ಬಾಲಿವುಡ್ ನಿಂದ ಅಥವಾ ತಮಿಳು, ತೆಲುಗು ಚಿತ್ರರಂಗದಿಂದ ನಟಿಯರನ್ನು ಕರೆತರುತ್ತಿರುತ್ತಾರೆ. ಆದರೆ ರಚಿತಾ ಮತ್ತು ಪ್ರಿಯಾಂಕಾ ರಾವ್ ಇಬ್ಬರೂ ಕನ್ನಡದ ಕಣ್ಮಣಿಗಳೇ ಆಗಿದ್ದಾರೆ.
ರಚಿತಾ ಈಗಾಗಲೇ `ಬುಲ್ ಬುಲ್' ಚಿತ್ರದಲ್ಲಿ ನಟಿಸಿ ಯಶಸ್ವಿ ತಾರೆ ಎನಿಸಿಕೊಂಡಿದ್ದಾಳೆ. ಇನ್ನು ಪ್ರಿಯಾಂಕಾ ರಾವ್ ಮೈಸೂರಿನ ಹುಡುಗಿ. ಈಗಾಗಲೇ `ಸೂಪರ್ರೋ ರಂಗ' ಚಿತ್ರದಲ್ಲಿ ನಟಿಸುತ್ತಿದ್ದಾಳೆ. `ದಿಲ್ ರಂಗೀವಾ' ಪ್ರಿಯಾಂಕಾಳ ಎರಡನೇ ಕನ್ನಡ ಚಿತ್ರವಾಗಲಿದೆ.