ಹಲೋ….! ಏನು ದೋಸ್ತ, ಊಟ ಆಯ್ತಾ…..? ಎಲ್ಲರೂ ಆರಾಮ ಇದ್ದಾರಾ….? ಮತ್ತೇನು ವಿಶೇಷ….! ಎಂದೆಲ್ಲಾ ಕೇಳುತ್ತಲೇ ಮೊಬೈಲ್ ನಲ್ಲಿ ಪುಷ್ಕಳ ಮಾತು ನುರಿಯುವ ಈ ಮಂದಿಯ ಕಿರಿಕಿರಿ ಮಧ್ಯರಾತ್ರಿಯಾದರೂ ತೀರಿರುವುದಿಲ್ಲ ಎಂದರಿತೇ ಗೋವಿಂದರಾಜು ಟಿ.ವಿ.ಯಲ್ಲಿ ಕನ್ನಡ ವಾರ್ತೆ ಮುಗಿದದ್ದೇ ಮೊಬೈಲ್ ಫೋನ್ ಗಂಟಲನ್ನು ಹಿಚುಕಿಬಿಡುತ್ತಿದ್ದ. ಬೆಳಗ್ಗೆ ಎದ್ದು ಅದರ ಗಂಟಲ ಗುಂಡಿಯನ್ನು ಸಡಿಲಿಸಿದ್ದೇ ತಡ, ಗಂಟಲಲ್ಲಿ ಸಿಕ್ಕಿಹಾಕಿಕೊಂಡ ಮೆಸೇಜ್ ಗಳು ಒಂದೊಂದಾಗಿ ಬಿಕ್ ಹಿಡಿದಂತೆ ಹೊರಬರುತ್ತಿದ್ದವು. ಅಂಥ ಹತ್ತಾರು ಮೆಸೇಜ್ ಗಳ ಸಾಲಲ್ಲಿ ಒಂದಾದರೂ ಕ್ರಿಯೇಟಿವ್ ಆಗಿರಬೇಕಲ್ಲ….? ಎಲ್ಲ ಇನ್ನೊಬ್ಬರಿಂದ ದಬ್ಬಿಸಿಕೊಂಡು…. ದಬ್ಬಿಸಿಕೊಂಡು ಬಂದವುಗಳೇ…. ಯಾವುದೋ ಕವಿಯ ಸಾಲು…. ಎಲ್ಲೋ ಓದಿದ್ದು…. ಕೇಳಿದ್ದು…. ಹೇಳಿದ್ದು…. ಹೀಗೆ ಈ ಹಳಸಲು ಮೆಸೇಜ್ ಗಳದ್ದೇ ಒಂದು ದೊಡ್ಡ ಕಿರಿಕಿರಿ.
ಗೋವಿಂದರಾಜು ಸಿಟ್ಟಿನಿಂದ ಆ ಮೊಬೈಲ್ ಸ್ಕ್ರೀನ್ ನ್ನು ದಿಟ್ಟಿಸುತ್ತಿರುವಾಗಲೇ ಮತ್ತೊಂದು ಮೆಸೇಜ್ ಅಲ್ಲಿ ಟಣ್ಣನೇ ಮಿಂಚಿ ಮಾಯವಾಯಿತು. ಮೊಬೈಲ್ ಕೈಗೆತ್ತಿಕೊಂಡು ಓದುತ್ತಿರುವಂತೆ ಅದು ದಾವಣಗೆರೆಯಲ್ಲಿರುವ ತನ್ನ ಕ್ಲಾಸ್ ಮೇಟ್ ಸರೋಜಾಳದು ಎಂದು ಗೊತ್ತಾಯಿತು. ಈ ಸರೋಜಾ ಮುಂಚಿನಿಂದಲೂ ಹಾಗೆಯೇ…. ತನ್ನ ಮೊಬೈಲ್ ಕರೆನ್ಸಿ ಖರ್ಚು ಮಾಡದೇ ಹಾಗೇ ಉಳಿಸಿಕೊಳ್ಳಲು ಪರಿಚಯದವರಿಗೆ ಬರೀ ಮಿಸ್ಡ್ ಕಾಲ್ ಕೊಡುವುದು, ಇಲ್ಲವೇ ಹೀಗೆ ಮೆಸೇಜ್ ಕೊಡುವುದು ಮಾತ್ರ ಮಾಡುತ್ತಿದ್ದಳು. ತೀರಾ ಆತ್ಮೀಯರ ಭಯಂಕರ ಸುದ್ದಿಗಳನ್ನು ರವಾನಿಸಲು ಮಾತ್ರ ಆಕೆ ಖುದ್ದಾಗಿ ಫೋನ್ ಮಾಡುವುದಿತ್ತು. ಇಂಥ ಸರೋಜಾ ನೋಡಲು ಸ್ಛುರದ್ರೂಪಿಯಾಗಿದ್ದರಿಂದ ಆಕೆ ಇನ್ನೂ ಸ್ನಾತಕೋತ್ತರ ಹಂತದ ಮೊದಲ ಸೆಮಿಸ್ಟರ್ ನಲ್ಲಿರುವಾಗಲೇ ಡಿಮ್ಯಾಂಡ್ ಬಂದಿತ್ತು. ನಮ್ಮವರು ಬೆಸಗೊಂಡರು…. ಶುಭಲಗ್ನ ಆಯಿತು. ಹುಡುಗ ಎಂಜಿನಿಯರ್‌ಅಪ್ಪ ಅಮ್ಮನಿಗೆ ಒಬ್ಬನೇ ಮಗ, ಹೆಸರು ಪ್ರದೀಪ. ದಾವಣಗೆರೆಯ ವಿನೋಬಾನಗರದಲ್ಲಿ ಭವ್ಯ ಬಂಗಲೆಯೊಂದಿಗೆ ಚಳ್ಳಕೇರಿಯಲ್ಲಿ 100 ಎಕರೆ ಜಮೀನಿದೆ, ಮಾಯಕೊಂಡದಲ್ಲಿಯೂ ಒಂದಷ್ಟು ಪೂರ್ವಜರ ಆಸ್ತಿ ಇದೆ. ಅವನಪ್ಪ, ಅಮ್ಮ ಇಬ್ಬರೂ ಮಾಯಕೊಂಡದಲ್ಲಿಯೇ ಇರೋದು. ಹೀಗೆಲ್ಲಾ ಸರೋಜಾ ತನ್ನ ಜೊತೆಗೆ ಓದುವ ಗೆಳತಿಯರ ಎದುರು ತನ್ನ ಗಂಡ ನಾಗುನ ಆಸ್ತಿಯ ವಿವರವನ್ನು ನೀಡಿ ಅವರಿಂದಲೇ ಕಬ್ಬಿನ ಹಾಲು ಕುಡಿದ ಬಿಲ್ ಕಕ್ಕಿಸುವುದಿತ್ತು. ಮದುವೆ ಆದ ಮೇಲೆ ಬಹುಶಃ ಸರೋಜಾ ಮಿಸ್ಡ್ ಕಾಲ್ ಮಾಡಲಿಕ್ಕಿಲ್ಲ ಎಂದು ಬಗೆದ ಗೋವಿಂದರಾಜುವಿಗೆ ತನ್ನ ನಿರೀಕ್ಷೆ ಹುಸಿಯಾದ ಬಗ್ಗೆ ಬೇಸರ ಇತ್ತು. ಸರೋಜಾ ತನ್ನ ಮದುವೆಯ ಸಂದರ್ಭದಲ್ಲಿ ಎಲ್ಲ ಕ್ಲಾಸ್ ಮೇಟ್ಸ್ ನ್ನು ಮದುವೆಗೆ ಆಹ್ವಾನಿಸಿದ್ದಳು. ಆಮಂತ್ರಣ ಪತ್ರಿಕೆ ಕೊಡುವಾಗ, “ನಮ್ಮ ಮನೆಯಲ್ಲಿರೋ ವಸ್ತುಗಳನ್ನೇ ಗಿಫ್ಟ್ ಆಗಿ ಕೊಡಬೇಡಿ, ಏನಾದರೂ ವಿಶೇಷವಾಗಿರೋದನ್ನು ಕೊಡಿ,” ಎಂದು ಹೇಳಿದ್ದು ಕೇಳಿ ಎಲ್ಲರೂ ಕಕ್ಕಾಬಿಕ್ಕಿಯಾಗಿದ್ದರು.
ಗೋವಿಂದರಾಜು, “ನಾವೇನೂ ಕೊಡುವವರಲ್ಲ. ಏಕೆಂದರೆ ನಿನ್ನ ಮಾವನ ಮನೆಯವರು ಆಮಂತ್ರಣದಲ್ಲಿ ಆಶೀರ್ವಾದವೇ ಉಡುಗೊರೆ ಎಂದು ಹಾಕಿರುವುದಿದೆ, ಇಲ್ನೋಡು…..” ಎಂದು ಸರೋಜಾಗೆ ತೋರಿಸಿದ.
ಆಕೆ ನಗುತ್ತಲೇ, “ಮಾರಾಯ, ಅದೆಲ್ಲಾ ಹೀಗೆ ಹಾಕಿರ್ತಾರೆ…. ನೀವು ಮಾತ್ರ ಬರಿಗೈಲಿ ಬರಬೇಡಿ,” ಎಂದು ತಾಕೀತು ಮಾಡಿದಾಗ ಎಲ್ಲರೂ ಗೊಳ್ಳೆಂದು ನಕ್ಕಿದ್ದರು.
ಮದುವೆಯಾಗಿ ನಾಲ್ಕು ವರ್ಷಗಳೇ ಆಗಿತ್ತು. ಸರೋಜಾ ದಾವಣಗೆರೆಯಲ್ಲಿರುವುದು ಎಲ್ಲರಿಗೂ ಗೊತ್ತಿತ್ತು. ಆದರೆ ಯಾರಿಗೂ ಆಕೆ ಒಂದೇ ಒಂದು ಕಾಲ್ ಕೂಡಾ ಮಾಡಿರಲಿಲ್ಲ. ಮಿಸ್ಡ್ ಕಾಲ್ ಆದರೂ…. ಮದುವೆಯಾದ ಮೇಲೆ ನಮ್ಮನ್ನೆಲ್ಲಾ ಮರೀಬೇಡ ಮಾರಾಯ್ತಿ ಎಂದು ಎಲ್ಲರೂ ಹೇಳಿದಾಗ, “ಅದು ಹೇಗೆ ಸಾಧ್ಯ….? ಎಷ್ಟೇ ಆಗಲಿ ನೀವು ನನ್ನ ಕ್ಲಾಸ್ ಮೇಟ್ಸ್ ಅಲ್ಲಾ….?” ಎಂದ ಸರೋಜಾ ನಾಲ್ಕು ವರ್ಷಗಳಾಗುತ್ತಾ ಬಂದರೂ ಸುದ್ದೀನೇ ಇರಲಿಲ್ಲ.
ಒಂದು ಸಲ ಗೋವಿಂದರಾಜು ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ಸಮಾವೇಶ ಒಂದರಲ್ಲಿ ಭಾಗವಹಿಸಲು ಹೋದಾಗ, ಅಶೋಕ ರಸ್ತೆಯಲ್ಲಿ ಸಾಯಂಕಾಲ ಗಂಡ ಹಾಗೂ ಮಗುವಿನೊಂದಿಗ ಸರೋಜಾ ಬಟ್ಟೆ ಅಂಗಡಿಯೊಂದರಿಂದ ಹೊರಬರುತ್ತಿರುವುದನ್ನು ಕಂಡು, ಗೋವಿಂದರಾಜುವೇ ಮುಂದಾಗಿ ಹೋಗಿ ಮಾತನಾಡಿಸಿದ. ಅವಳಿಗೂ ತುಂಬಾ ಖುಷಿಯಾಗಿತ್ತು. ಮನೆಗೆ ಬಾ ಎಂದು ಒತ್ತಾಯಿಸಿದಳು. ಗೋವಿಂದರಾಜು, ಜೊತೆಗೆ ಗೆಳೆಯರೆಲ್ಲಾ ಇದ್ದಾರೆ, ಇನ್ನೊಂದು ಬಾರಿ ಖಂಡಿತಾ ಬರ್ತೇನೆ ಎಂದು ಹೇಳಿ ನಡೆದ. ಹೋಟೆಲ್ ನಲ್ಲಿ ಚಹಾ ಕುಡಿಯೋಣ ಬಾ ಎಂದು ಕರೆದಳು. ಗೋವಿಂದರಾಜುವಿಗೆ ನಿರಾಕರಿಸಲಾಗಲಿಲ್ಲ. ಗಂಡನಿಗೆ ಮತ್ತೆ ಮತ್ತೆ ಗೋವಿಂದರಾಜು ಬಗ್ಗೆ ಹೇಳುತ್ತಿದ್ದಳು.
“ನಮ್ಮ ವಿಭಾಗದಲ್ಲಿಯೇ ಇವನು ತುಂಬಾ ಜಾಣ ವಿದ್ಯಾರ್ಥಿ. ಈಗ ಇವನು ಹುಬ್ಬಳ್ಳಿಯಲ್ಲಿ ಮನೋವೈದ್ಯನಾಗಿ ಕೆಲಸ ಮಾಡುತ್ತಿದ್ದಾನೆ. ಅದೆಷ್ಟೋ ಜನ ನೆಮ್ಮದಿ ಕಳೆದುಕೊಂಡವರಿಗೆ ಸಾಂತ್ವನ ನೀಡಿದ್ದಾನೆ,” ಎಂದಳು. ಅದಕ್ಕೆ ಪ್ರದೀಪ್ ನಗುತ್ತಾ, “ನಾವೇನಾದರೂ ಜಗಳವಾಡಿದರೆ ನಿಮ್ಮಲ್ಲಿಗೇ ಬರೋದು. ನೀವೇ ನಮಗೆ ಶಾಂತಿಮಂತ್ರ ನೀಡಬೇಕು,” ಎಂದಾಗ, “ಆ ಸ್ಥಿತಿ ನಿಮಗೆ ಬಾರದಿರಲಿ ಎಂದು ಆಶಿಸುತ್ತೇನೆ,” ಎನ್ನುತ್ತಾ ಟೇಬಲ್ ಮೇಲಿರುವ ನೀರಿನ ಗ್ಲಾಸನ್ನು ತಿರುವುತ್ತಾ ಆತ ಕುಳಿತುಬಿಟ್ಟಿದ್ದ.
ಅವರ ಆತಿಥ್ಯವನ್ನು ಸ್ವೀಕರಿಸಿ ಹೊರಟಾಗ, ಗೋವಿಂದರಾಜು ಹೊರಳಿ ನಗುತ್ತಾ, “ಹುಬ್ಬಳ್ಳಿಗೆ ಬಂದಾಗ ಬನ್ನಿ,” ಎಂದು ಕರೆ ನೀಡಿದ. ತನ್ನ ಮದುವೆಯಾಗಿ ಎರಡು ವರ್ಷವಾಯ್ತು. ತನಗೂ ಒಂದು ಗಂಡು ಮಗುವಿದೆ, ಹೆಂಡತಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಅಲ್ಲೇ ಹತ್ತಿರದ ಊರೊಂದರಲ್ಲಿ ಕೆಲಸ ಮಾಡುವ ಬಗ್ಗೆ ಹೇಳಿದ. ಅವಸರದಲ್ಲಿ ಮದುವೆಗೆ ಎಲ್ಲಾ ಸ್ನೇಹಿತರನ್ನೂ ಕರೆಯಲಾಗಲಿಲ್ಲ ಎಂದು ಹೇಳಿದ.
ಆಗ ಸರೋಜಾ ತುಂಟನೋಟ ಬೀರಿ, “ಲವ್ ಮ್ಯಾರೇಜಾ?” ಎನ್ನುವ ಪ್ರಶ್ನೆ ಕೇಳುತ್ತಿರುವಂತೆ ಗೋವಿಂದಾರಾಜು ನಗುವಿನಲ್ಲೇ ಉತ್ತರಿಸಿದ್ದ.
ಮನೆಗೆ ಬಂದು ಊಟ ಮಾಡಿಕೊಂಡು ಹೋದ್ರೆ ಚೆನ್ನಾಗಿತ್ತು ಎಂದು ಸರೋಜಾ ಹೇಳುತ್ತಲೇ ಇದ್ದಳು. ಆಕೆಯ ಗಂಡನೂ ಕೂಡ, “ಬನ್ನಿ, ಈ ದಿನ ನಾನೂ ಫ್ರೀ ಇದ್ದೇನೆ,” ಅಂದಾಗಲೂ ಗೋವಿಂದರಾಜು ಮನಸ್ಸು ಮಾಡಿರಲಿಲ್ಲ.
ಸರೋಜಾ ಈಗ ತುಸು ದಪ್ಪಗಾಗಿದ್ದಾಳೆ. ಕೈತುಂಬಾ ಬಂಗಾರದ ಬಳೆ, ಕತ್ತಲ್ಲಿರುವ ನೆಕ್ಲೇಸ್ ಆಕೆ ಸುಖವಾಗಿರುವ ಬಗ್ಗೆ ಕಥೆ ಹೇಳುತ್ತಿದ್ದ. ಗೋವಿಂದರಾಜುವಿನಿಂದ ಮತ್ತೆ ತನ್ನ ಸ್ನೇಹಿತರ ಎಲ್ಲಾ ಫೋನ್ ನಂಬರ್ ಸಮೇತ ವಿವರಗಳನ್ನು ಕಲೆಕ್ಟ್ ಮಾಡಿದ್ದ ಸರೋಜಾ ಆಗಾಗ ಮಿಸ್ಡ್ ಕಾಲ್ ಕೊಟ್ಟು ಮಾತನಾಡುತ್ತಿದ್ದಳು.
ಗೋವಿಂದರಾಜುವಿನ ಜೊತೆಗಂತೂ ಆಕೆ ತುಂಬಾ ಹೊತ್ತು ಹರಟುತ್ತಿದ್ದಳು. ಹೆಂಡತಿ ತನುಜಾಗೆ ಆಕೆಯ ಬಗ್ಗೆ ಗುಮಾನಿ ಬರುವುದು ಬೇಡವೆಂದು ಗೋವಿಂದರಾಜು ಅವಳ ಬಗ್ಗೆ ಎಲ್ಲವನ್ನೂ ಮೊದಲೇ ಹೇಳಿದ್ದ. ಆಕೆಯ ಕಾಲ್ ಬಂದೊಡನೆ ಮೊದಲು ತನ್ನ ಹೆಂಡತಿ ತನುಜಾಗೇ ಮಾತನಾಡಲು ಹೇಳುತ್ತಿದ್ದ.
ಒಂದು ಬಾರಿ ಗಂಡನ ಸಂಬಂಧಿಯೊಬ್ಬರ ಮದುವೆಗೆ ಹುಬ್ಬಳ್ಳಿಗೆ ಬಂದಾಗ ಸರೋಜಾ ಗೋವಿಂದರಾಜುವಿನ ಮನೆಗೆ ಬಂದು ಹೋಗಿದ್ದಳು. ಹಾಗೆ ಮನೆಗೆ ಬಂದು ಹೋದ ನಂತರವಂತೂ ತನುಜಾಗೆ ಅವಳ ಬಗ್ಗೆ ತುಂಬಾ ಅಟ್ಯಾಚ್ ಮೆಂಟ್‌ಬಂದಂತಾಗಿತ್ತು.
ಆ ದಿನ ಬೆಳಗ್ಗೆ ಸರೋಜಾಳಿಂದ ಬಂದ ಮೆಸೇಜ್ ನ್ನು ಆತ ತುಂಬಾ ಸೀರಿಯಸ್ ಆಗಿ ಓದುತ್ತಿದ್ದ. ಅದು ಹೀಗಿತ್ತು, `ಹತ್ತು ಗಂಟೆಯ ನಂತರ ನನಗೆ ಕರೆ ಮಾಡು….. ಅರ್ಜೆಂಟ್’ ಎಂದಿತ್ತು.
ಗೋವಿಂದರಾಜುವಿಗೆ ಏಕಿರಬಹುದು ಎನ್ನುವ ಕುತೂಹಲ. ಹತ್ತು ಗಂಟೆ ಆಗುವುದನ್ನೇ ಕಾಯುತ್ತಿದ್ದ. ತಾನು ಹತ್ತೂವರೆಗೆ ಆಸ್ಪತ್ರೆಗೆ ತೆರಳಬೇಕು. ಅಲ್ಲಿ ಮಾತಾಡಲು ಸರಿಯಾಗುವುದಿಲ್ಲ ಎಂದು ಭಾವಿಸಿ ತಕ್ಷಣ ಅವಳಿಗೆ ಕಾಲ್ ಮಾಡಿದ. ಏನು ವಿಷಯ…..? ಎಂದು ಕೇಳಿದ. ಆಕೆಯ ಮಾತು ಮಧ್ಯೆ ಮಧ್ಯೆ ತುಂಡಾಗುತ್ತಿತ್ತು. ಸರೋಜಾ ಮಾತಾಡುವುದನ್ನು ಬಿಟ್ಟು ಅಳಲಿಕ್ಕೆ ಶುರು ಮಾಡಿದಳು. ಗೋವಿಂದರಾಜುವಿಗೆ ಏನಾಯ್ತು ಎನ್ನುವುದೇ ತಿಳಿಯದಾಯ್ತು. ಅವಳು ಅಳುತ್ತಲೇ ಇದ್ದಳು…..
“ಪ್ರದೀಪ್ ಒಂದು ವಾರದಿಂದ ಮನೆಗೇ ಬಂದಿಲ್ಲ. ರಾತ್ರಿ ಹನ್ನೊಂದರ ಸುಮಾರು ಫೋನ್ ಮಾಡ್ತಾರೆ…. ಒಂದೇ ಮಾತು…. ಬೆಂಗಳೂರಿನಲ್ಲಿದ್ದೇನೆ…. ಆಫೀಸ್ ಕೆಲಸ ಇನ್ನೊಂದೆರಡು ದಿನ ಅಂತ ಹೇಳ್ತಾರೆ.”
“ಆಯ್ತು ಬಿಡು. ಅದಕ್ಯಾಕೆ ಅಳ್ತೀಯಾ…?”
“ವಿಷಯ ಅದಲ್ಲ, ನಮ್ಮ ಪಕ್ಕದ ಮನೆಯ ಡಾಕ್ಟರ್ ಶ್ರೀನಿವಾಸ್ ಅವರನ್ನು ತುಮಕೂರಿನ ಮನೆಯೊಂದರಲ್ಲಿ ನೋಡಿದ್ದಾರಂತೆ.”
“ನೋಡು, ಯಾರೋ ಏನೋ ಹೇಳಿದರು ಅಂತ ಅದಕ್ಯಾಕೆ ಇಷ್ಟೆಲ್ಲಾ…..”
“ನೀನು ಅಂದ್ಕೊಂಡಂಗೆ ಅಲ್ಲ, ಆಕೆ ದಿನಾಲು ರಾತ್ರಿ ಫೋನ್ ಮಾಡ್ತಿದ್ದಳು. ಇವರು ಮೇಲೆ ಹೋಗಿ ಸಿಗರೇಟ್ ಸೇದ್ತಾ ಗಂಟೆಗಟ್ಟಲೆ ಅವಳ ಜೊತೆಗೆ ಮಾತಾಡ್ತಿದ್ದರು…..”
“ಎಷ್ಟು ದಿನದಿಂದ ಹೀಗೆ….?”
“ಒಂದೆರಡು ತಿಂಗಳಾಯ್ತು, ನೋಡಿ…. ನೋಡಿ…. ನನಗೂ ಬೇಜಾರಾಗಿ ನಿನಗೆ ಮೆಸೇಜ್ ಮಾಡಿದೆ.”
“ಹಿಂದೆ ಮುಂದೆ ಗೊತ್ತಿಲ್ಲದೇ ಏನೂ ಮಾತಾಡಲಿಕ್ಕಾಗಲ್ಲ.”
“ಈಗ ನನ್ನನ್ನು ಏನು ಮಾಡು ಅಂತಿ…..?”
“ತುಮಕೂರಲ್ಲಿ ನನ್ನ ಗೆಳೆಯ ಒಬ್ಬನಿದ್ದಾನೆ. ಅವನಿಗೆ ಹೇಳ್ತೀನಿ, ವಿಷಯ ಏನೂಂತ ಗೊತ್ತಾಗ್ತದೆ. ಅಲ್ಲಿಯವರೆಗೆ ನೀನು ಹೀಗೆ ಫೋನ್ ಮಾಡಿ ಬೇರೆಯವರ ಮುಂದೆಲ್ಲಾ ಹೇಳಬೇಡ,” ಅಂದಾಗ ಸರೋಜಾ `ಹುಂ” ಅಂದಿದ್ದಳು.
ಅವಳೀಗ ದಿನಕ್ಕೆ ಒಮ್ಮೆಯಾದರೂ ಗೋವಿಂದರಾಜುವಿಗೆ ಫೋನ್ ಮಾಡಿ ಇದೇ ವಿಷಯ ಕುರಿತು ಮಾತನಾಡುತ್ತಾಳೆ. ಗೋವಿಂದರಾಜುವಿಗೆ ತನ್ನದೇ ಕಾಲೋನಿಯಲ್ಲಿ ಅಧಿಕಾರಿಯೊಬ್ಬ ಇದೇ ರೀತಿಯ ಗುಮಾನಿಯಲ್ಲಿ ಹೆಂಡತಿಯನ್ನೇ ತೊರೆದದ್ದು ಘಟಿಸಿ ಇನ್ನೂ ಒಂದು ವಾರ ಆಗಿರಲಿಲ್ಲ. ಹಿಂದಿನ ಮನೆಯ ಮೀನಾಕ್ಷಿ ತನ್ನ ಗಂಡ ಒಂದೇಟು ಹೊಡೆದ ಎನ್ನುವ ಕಾರಣಕ್ಕೆ ಕೋರ್ಟ್ ಮೆಟ್ಟಿಲೇರಿದ್ದಳು.
ತನ್ನ ಹುಟ್ಟೂರು ಬಿಜಾಪುರದಲ್ಲಿ ಹೆಂಡತಿಯೊಬ್ಬಳು ಗಂಡನ ಗೆಳೆಯನೊಂದಿಗೆ ಓಡಿಹೋದದ್ದು ಇಡೀ ಜಿಲ್ಲೆಯ ತಾಜಾ ಸುದ್ದಿಯಾಗಿತ್ತು. ಈ ನಡುವೆ ತನ್ನ ಕುಟುಂಬವನ್ನು ಹೇಗೆ ಕಾಯುವುದು….? ಎನ್ನುವ ಹೊಯ್ದಾಟದಲ್ಲಿಯೇ ಹೀಗೆ ಮತ್ತೆ ಮತ್ತೆ ಸರೋಜಾಳಿಂದ ಬರುತ್ತಿರುವ ಮಿಸ್ಡ್ ಕಾಲ್ ಗಳು ಗೋವಿಂದರಾಜುವನ್ನು ಧೃತಿಗೆಡಿಸಿದ್ದ. ಫೋನ್ ನಲ್ಲಿ ಮಾತಾಡುವಾಗ ಮತ್ತೆ ಮತ್ತೆ ಸಮಾಧಾನ, ದುಡುಕುಬೇಡ ನಾನಿದ್ದೇನೆ ಎನ್ನುವ ಮಾತುಗಳನ್ನು ಹೇಳುವುದನ್ನು ಕೇಳಿ ಕೇಳಿ ಗೋವಿಂದರಾಜುವಿನ ಹೆಂಡತಿ ತನುಜಾಗೂ ಇದೊಂಥರಾ ಕಿರಿಕಿರಿಯಾಗಿತ್ತು.
ಒಂದು ದಿನ ಬೆಳ್ಳಂಬೆಳಗ್ಗೆ ಸರೋಜಾ ಮಗುವಿನೊಂದಿಗೆ ತನ್ನ ತಾಯಿಯನ್ನೂ ಕರೆದುಕೊಂಡು ಸೀದಾ ಹುಬ್ಬಳ್ಳಿಗೆ ಬಂದಿಳಿದಳು. ಗೋವಿಂದರಾಜುವಿನ ಮನೆಯ ಬಾಗಿಲು ಬೆಲ್ ಆಗುತ್ತಿದ್ದಂತೆ ಶೇವಿಂಗ್ ಮಾಡಿಕೊಳ್ಳುತ್ತಿದ್ದ ಗೋವಿಂದರಾಜು, “ನೋಡು, ಬಹುಶಃ ಸರೋಜಾ ಇರಬೇಕು,” ಎಂಬ ಮಾತನ್ನು ಕೇಳಿ ಹೆಂಡತಿ ತನುಜಾಳ ಮುಖ ಗಂಟಾಗಿತ್ತು.
ಸರೋಜಾ ಬರುವ ವಿಷಯ ತನ್ನ ಗಂಡನಿಗೆ ಮೊದಲೇ ತಿಳಿದಿದ್ದರೂ ತನ್ನಿಂದ ಉದ್ದೇಶಪೂರ್ವಕವಾಗಿಯೇ ಮುಚ್ಚಿಟ್ಟ ಬಗ್ಗೆ ಒಳಗೊಳಗೆ ತನುಜಾ ಕುದಿಯಲು ಕಾರಣವಾಗಿತ್ತು. ಸರೋಜಾ ಹಾಗೂ ಅವಳ ತಾಯಿಯನ್ನು ಕಂಡು ಕಾಟಾಚಾರದ ನಗೆಯನ್ನು ನಗುತ್ತಾ, “ಬರ್ರಿ ಒಳಗೆ,” ಎಂದದ್ದನ್ನು ಗಮನಿಸಿದ ಗಂಡನಿಗೆ ಹೆಂಡತಿಯ ವರ್ತನೆ ಸರಿ ಎನಿಸಲಿಲ್ಲ. ಆತ ಸ್ನಾನ ಮುಗಿಸಿ ಬರುವುದನ್ನೇ ಕಾಯ್ದು ಕುಳಿತ ಸರೋಜಾ ತನ್ನ ಗಂಡನ ಬಗ್ಗೆ ಆರೋಪಗಳನ್ನು ಶುರು ಮಾಡಿದಳು.
“ಒಂದು ವಾರ ಆಗಿಹೋದರೂ ಇನ್ನೂ ಪತ್ತೆ ಇಲ್ಲ, ಫೋನ್ ಮಾಡಿದರೆ ಕಟ್ ಮಾಡ್ತಾರೆ. ಐದಾರು ಬಾರಿ ಮಾಡಿದ ಮೇಲೆ ಒಂದು ಸವಾಲು ಮಾತಾಡ್ತಾರೆ. ಮೀಟಿಂಗ್ ನಲ್ಲಿ ಇದ್ದೇನೆ ಅಂತ ಸುಳ್ಳು ಹೇಳ್ತಾರೆ.”
“ಅಲ್ಲ ಸರೋಜಾ, ಅವರು ಸುಳ್ಳು ಹೇಳ್ತಾರೆ ಅಂತ ನಿಮಗೆ ಫೋನ್ ನಲ್ಲಿ ಕಾಣಿಸುತ್ತಾ….?” ಎಂದು ತನುಜಾ ಅಡ್ಡ ಬಾಯಿ ಹಾಕಿದಾಗ ಗೋವಿಂದರಾಜುವಿನ ಕಣ್ಣು ಕೆಂಪಾಗಿದ್ದ. ಹೆಂಡತಿಯ ಕಡೆಗೆ ಹೊರಳಿ ನೋಡಿದ. ಆಕೆ ಸಿಡಿಮಿಡಿಗೊಂಡಳಂತೆ ಅಡುಗೆಮನೆಗೆ ನಡೆದಳು.
“ನೋಡು ಸರೋಜಾ, ಯಾವುದೇ ಕಾರಣಕ್ಕೂ ದುಡುಕಬಾರದು. ಇಲ್ಲಸಲ್ಲದ ಆರೋಪ ಬೇಡ. ನಾನು ಒಬ್ಬರಿಗೆ ಹೇಳಿಟ್ಟಿರುವೆ. ಅವನು ನನ್ನ ಕ್ಲೋಸ್ ಫ್ರೆಂಡ್, ಇಂಥಾ ಪತ್ತೇದಾರಿ ಕೆಲಸಗಳಲ್ಲಿ ನಿಸ್ಸೀಮ. ಇನ್ನೊಂದು 15 ದಿನ, ಎಲ್ಲನ್ನೂ ಫೋಟೋ ಸಮೇತ ತಂದು ನಿನ್ನ ಎದುರಿಗೆ ಇಡುತ್ತಾನೆ,” ಎನ್ನುತ್ತಿದ್ದಂತೆ ಆಕೆ ದೊಡ್ಡದಾದ ನಿಟ್ಟುಸಿರನ್ನು ಬಿಟ್ಟು ಟಾಯ್ಲೆಟ್ ಕಡೆಗೆ ನಡೆದಳು.
“ನಾನು ಆಫೀಸಿಗೆ ಹೋಗಿ ಬರ್ತೇನೆ. ಮಧ್ಯಾಹ್ನ ವಿವರವಾಗಿ ಮಾತಾಡೋಣ. ತನುಜಾ, ಅವರಿಗೆ ತಿಂಡಿ, ಸ್ನಾನ ಎಲ್ಲಾ ವ್ಯವಸ್ಥೆ ಮಾಡು,” ಎಂದು ಹೆಂಡತಿಗೆ ಕೂಗಿ ಹೇಳಿದ ಮೇಲೂ ಆಕೆ ಪ್ರತಿಕ್ರಿಯಿಸಲಿಲ್ಲ. ಒಳಗೊಳಗೆ ತನ್ನ ಹೆಂಡತಿಯ ಸ್ವಭಾವ ಹೀಗೆ ದಿಢೀರನೇ ಬದಲಾದ ಬಗ್ಗೆ ಯೋಚಿಸುತ್ತಾ ನಡೆದ.
ತನುಜಾಗೆ ಸರೋಜಾಳ ಎಲ್ಲ ವಿಷಯ ತಿಳಿದಿದೆ. ತನ್ನ ಕುಟುಂಬ ಅವಳಂತಾಗಬಾರದು ಎಂದು ಹಾಗೆ ಅವಳ ಮೇಲೆ ಸಿಡಿಮಿಡಿಗೊಳ್ಳುತ್ತಿರಬಹುದೇ….? ಅಥವಾ ಇತ್ತೀಚಿನ ದಿನಗಳಲ್ಲಿ ತಾನು ಹೆಚ್ಚೆಚ್ಚು ಆಕೊಂದಿಗೆ ಫೋನಿನಲ್ಲಿ ಮಾತಾಡುತ್ತಿರುವುದನ್ನೇ ಈಕೆ ಅಪಾರ್ಥ ಮಾಡಿಕೊಂಡಿರಬಹುದೇ….? ಹೀಗೆ ಇನ್ನೂ ಏನೇನೋ ಯೋಚಿಸುತ್ತಿರುವಂತೆ ಆಫೀಸ್ ಸಮೀಪಿಸಿತು. ಆ ದಿನ ಎಂದಿನಂತೆ ಆಫೀಸ್ ಮುಗಿಸಿ ನೇರವಾಗಿ ಮನೆಗೆ ಬಂದ ಗೋವಿಂದರಾಜುವಿಗೆ ಅಚ್ಚರಿಯೇ ಕಾದಿತ್ತು. ಸರೋಜಾ ಹಾಗೂ ಆಕೆಯ ತಾಯಿ ವಾಪಸ್ಸು ದಾವಣಗೆರೆಗೆ ಹೊರಟಾಗಿತ್ತು. ಅಂದೇ ಬೆಳಗ್ಗೆ ಬಂದವರು ಅದೇ ದಿನ ಹೊರಡು ತರಾತುರಿಯಾದರೂ ಏನಿತ್ತು? ಎಂದು ವಿಚಾರಿಸಿಕೊಳ್ಳಬೇಕು ಎಂದು ಕಾಲ್ ಮಾಡಿದರೆ ಆ ಬದಿಯಿಂದ ಸ್ವಿಚ್ ಆಫ್ ಅನ್ನೋ ರೆಸ್ಪಾನ್ಸ್.
ಹೆಂಡತಿಯ ಕಡೆಗೆ ಹೊರಳಿ, “ಏನಿದೆಲ್ಲಾ…. ಅವ್ರ್ಯಾಕೆ ಹೋದ್ರು….?”
“ನನಗೇನು ಗೊತ್ತು….? ಹೋಗ್ತೀವಿ ಅಂದ್ರು ಹೋಗ್ರೀ ಅಂದೆ…..”
“ಇರ್ತೀವಿ ಅಂತ ಹೇಳಿದ್ರಲ್ಲ…?”
“ನನ್ನ ಮುಂದೆ ಹೋಗ್ತೀವಿ ಅಂದ್ರು.”
“ಹುಚ್ಚಿಯಂಗೆ ಮಾತಾಡಬ್ಯಾಡ.”
“ಹೌದು ನಾನು ಹುಚ್ಚಿ. ಅವಳೇ ಚಲೋ.”
“ಅಲ್ವೇ ಪಾಪ… ಅವಳು!”
“ಹೌದೌದು…. ಬೇರೆಯವರೆಲ್ಲಾ ಪಾಪ. ನನ್ನ ಬಗ್ಗೆ ಒಂಚೂರರೇ ಖಾಳಜಿ ಐತಾ…? ಬರೀ ಸರೋಜಾ, ಸರೋಜಾ…. ಹಿಂಗನ್ನುವವರು ನನ್ನನ್ಯಾಕೆ ಮದುವಿ ಆದ್ರಿ…..?”
“ಮತ್ತೆ ಮಳ್ಳರಂಗೆ….”
“ಹೌದು ನಾನು ಮಳ್ಳಿ….. ಆಕೆ ಶಾಣೆ!” ಗೋವಿಂದರಾಜುವಿಗೆ ಏನು ಮಾತನಾಡುವುದೆಂದೇ ತಿಳಿಯಲಿಲ್ಲ. ಇನ್ನೊಬ್ಬರ ಕುಟುಂಬ ಸರಿ ಮಾಡಲು ಹೋಗಿ ತಾನೇ ಪೇಚಿಗೆ ಸಿಲುಕಿದೆನೇನೋ… ಎಂದುಕೊಳ್ಳುತ್ತಿದ್ದ. ಅಷ್ಟಕ್ಕೂ ತಾನು ಕೆಟ್ಟದ್ದೇನೂ ಮಾಡಿರಲಿಲ್ಲ. ಆದರೂ ತನ್ನ ಹೆಂಡ್ತಿ…. ಎಂದೆಲ್ಲಾ ಯೋಚಿಸುತ್ತಿದ್ದಂತೆ ಗೋವಿಂದರಾಜುವಿನ ಫೋನ್ ರಿಂಗಣಿಸತೊಡಗಿತು.
ಕೈಗೆತ್ತಿ ಹಲೋ…. ಎನ್ನುತ್ತಿರುವಂತೆ, “ನಾನು ತುಮಕೂರಿನಿಂದ ಶೇಖರ ಪಾಟೀಲ ಮಾತಾಡೋದು,” ಎನ್ನುತ್ತಿರುವಂತೆ ಗೋವಿಂದರಾಜು ತನ್ನ ಕೋಣೆಗೆ ಹೋದ. ಸುಮಾರು ಹೊತ್ತು ಶೇಖರನೊಂದಿಗೆ ಮಾತನಾಡಿದ. “ಆ ಫೋಟೋ ಹಾಗೂ ಇನ್ನಿತರ ವಿವರಗಳನ್ನು ಸೇರಿಸಿ ಕೊರಿಯರ್ ಮಾಡು,” ಎಂದು ಹೇಳಿ ಫೋನ್ ಕಟ್ ಮಾಡಿದ. ಈ ವಿಷಯವನ್ನು ಸರೋಜಾಗೆ ಹೇಳುವುದಾದರೂ ಹೇಗೆ ಎಂದು ಪೇಚಾಡತೊಡಗಿದ. ಕೊರಿಯರ್ ಮೂಲಕ ಫೋಟೋ ಬಂದ ನಂತರ, ಹೆಂಡತಿಯ ಮುಂದೆ ಎರಡು ದಿನದ ಮಟ್ಟಿಗೆ ದಾವಣಗೆರೆಗೆ ಹೋಗಿಬರುವುದಾಗಿ ಹೇಳಿದ.
ಆಕೆ ಸಿಟ್ಟಿನಿಂದ, “ಎಲ್ಲಿಯಾದರೂ ಹೋಗ್ರಿ, ನಿಮಗೆ ಯಾರು ಹೇಳುವರು? ಮಕ್ಕಳು, ಹೆಂಡರ ಖಬರು ಇರಲಾರದವರಿಗೆ ಏನು ಹೇಳೋದು…?”
“ಬಾಯಿ ಮುಚ್ಕೋ….. ಎಲ್ಲಾ ತಿಳಿದವಳಂಗ ಮಾತಾಡಬ್ಯಾಡ!”
“…………”
“ದರಿದ್ರದಳು….,” ಎಂದುಕೊಳ್ಳುತ್ತಲೇ ಗೋವಿಂದರಾಜು ಕೈಯಲ್ಲಿ ಬ್ಯಾಗ್ ಹಿಡಿದು ನಡೆದೇಬಿಟ್ಟ. ಬಸ್ಸಲ್ಲಿ ಕಿಟಕಿಯ ಬದಿ ತಲೆ ಆನಿಸಿ ಕಣ್ಣು ಮುಚ್ಚಿದ. ಗಾಳಿ ಒಂದೇ ಸಮನೆ ಮುಖಕ್ಕೆ ತೀಡುತ್ತಿತ್ತು. ಕಿಟಕಿಯ ಗ್ಲಾಸ್ ಎಳೆದ. ಸೀಟ್ ಹಿಂಬದಿ ಸರಳಿಗೆ ತಲೆ ಆನಿಸಿದ. ತುಮಕೂರಿನ ಶೇಖರನ ಧ್ವನಿ ಮತ್ತೆ ಮತ್ತೆ ತೇಲಿಬರತೊಡಗಿತು.
`ಆ ನಿನ್ನ ಕ್ಲಾಸ್ಮೇಟ್ ಗಂಡ ಪ್ರದೀಪ ಅಂತಿಂಥಾ ಆಸಾಮಿಯಲ್ಲ. ತುಮಕೂರಿನ ಆಯುರ್ವೇದ ಕಾಲೇಜ್ ನಲ್ಲಿ ನರ್ಸ್ ಆಗಿರೋ ರೂಪಿಣಿ ಎನ್ನುವಳ ಜೊತೆಗೆ ಅವನ ಸಹವಾಸ. ಇದು ಹೆಚ್ಚು ಕಮ್ಮಿ ಹತ್ತು ವರ್ಷದ ಮೇಲಾಯ್ತು. `ಆ ಮನೆಯನ್ನು ಅವನೇ ಕಟ್ಟಿಕೊಟ್ಟಿದ್ದ. ಅವರೊಂಥರಾ ಲಿವಿಂಗ್ ಟು ಗೆದರ್ ಫ್ಯಾಮಿಲಿ ಇದ್ದಂತೆ. ಕೆಲರೆಲ್ಲಾ ಅವನು ಅವಳನ್ನೂ ಮದುವೆ ಆಗಿದ್ದಾನೆ ಅಂತ ಆಡಿಕೊಳ್ಳುವುದೂ ಇದೆ. ಆದರೆ ಕೊರಳಲ್ಲಿ ತಾಳಿ ಮಾತ್ರ ಇಲ್ಲ. ಅವಳು ಕ್ರಿಶ್ಚಿಯನ್ ಹುಡುಗಿಯೂ ಅಲ್ಲ. `ರೂಪಿಣಿಗೆ ಇವನು ತಾನು ಮದುವೆಯಾದ ವಿಷಯವನ್ನೂ ಹೇಳಿರುವಂತಿದೆ. ಪುಣ್ಯಕ್ಕೆ ಅವರಿಬ್ಬರಿಗೂ ಮಕ್ಕಳಾಗಿಲ್ಲ. ಮದುವೆಯಾದ ಹೊಸತರಲ್ಲಿ ಹೆಂಡತಿಗೆ ಸಂಶಯ ಬರಬಾರದೆಂದು ಮೂರು ತಿಂಗಳಿಗೊಮ್ಮೆ ಅವಳ ಬಳಿ ಬರುತ್ತಿರುವುದು ಇತ್ತಂತೆ. ಆದರೆ ಈಗೀಗ ತಿಂಗಳಿಗೆ ಒಂದು ವಾರ ಠಿಕಾಣಿ ಇಲ್ಲೇ ಎನ್ನುವುದು ನನಗೆ ಗೊತ್ತಾಯ್ತು.
`ಅವರಿಬ್ಬರೂ ಕುಳಿತು ಐಸ್ ಕ್ರೀಮ್ ತಿಂತಾ ಇರೋ ಫೋಟೊ ಮತ್ತು ಆ ಮನೆಯ ಫೋಟೋ ಎರಡನ್ನೂ ನಿನಗೆ ಕೊರಿಯರ್ ನಲ್ಲಿ ಕಳುಹಿಸುತ್ತೇನೆ. ಅದೇನು ಮಾಡ್ತಿಯೋ ನೋಡು. ನನಗಂತೂ ಅವನು ಆ ನರ್ಸ್ ಳನ್ನು ಬಿಡ್ತಾನೆ ಎಂದೆನಿಸುವುದಿಲ್ಲ. ಇದು ತುಂಬಾ ಸೂಕ್ಷ್ಮವಾಗಿರುವ ವಿಷಯ. ಅದು ಹೇಗೆ ನೀನು ಹ್ಯಾಂಡ್ ಮಾಡ್ತಿಯೋ ನೋಡು,’ ಎಂದೆಲ್ಲಾ ಶೇಖರ ಮಾತಾಡಿದ್ದು ಮತ್ತೆ ಮರುಕಳಿಸಿತು.
ಗೋವಿಂದರಾಜುವಿಗೆ ಏನು ಮಾಡುವುದು? ಸರೋಜಾಳ ಎದುರು ಹೇಗೆ ಈ ವಿಷಯವನ್ನು ಪ್ರಸ್ತಾಪ ಮಾಡುವುದು? ಎನ್ನುವುದೇ ತಿಳಿಯದಂತಾಗಿತ್ತು. ನಿನ್ನ ಗಂಡ ಹೀಗಂತೆ ಎಂದು ನೇರವಾಗಿ ಹೇಳುವುದಾದರೂ ಹೇಗೆ….? ಅಥವಾ ಆ ನರ್ಸ್ ಫೋಟೋ ಮೊದಲು ಆಕೆಗೆ ತೋರಿಸಿ ಈ ಹುಡುಗಿ ನಿನಗೇನಾದರೂ ಗೊತ್ತಾ….? ಎಂದು ಕೇಳಿ ವಿಷಯ ಆರಂಭಿಸಿದರೆ….? ಇದಾವುದೂ ಬೇಡ, ನೇರವಾಗಿ ಆ ವಿಳಾಸಕ್ಕೆ ಇವಳನ್ನೇ ಕಳುಹಿಸಿಬಿಟ್ಟರೆ….? ನೋಡೋಣ ಎಲ್ಲದಕ್ಕೂ ಸಂದರ್ಭ ಹೇಗೆ ಬರುತ್ತದೆ ಎನ್ನುವುದನ್ನು ನೋಡಿ ಪ್ರಸ್ತಾಪಿಸುವುದು ಒಳಿತು ಎಂದುಕೊಂಡು ದೀರ್ಘವಾದ ನಿಟ್ಟುಸಿರೊಂದನ್ನು ಬಿಟ್ಟು ಕಣ್ಣು ಮುಚ್ಚಿದ. ಬಸ್ಸು ಹೈವೇನಲ್ಲಿ ಸರಾಗವಾಗಿ ಓಡುತ್ತಾ ರಸ್ತೆಯನ್ನು ನುಂಗುತ್ತಲೇ ಇತ್ತು. ದಾವಣಗೆರೆ ತಲುಪಿದಾಗ ರಾತ್ರಿ ಹತ್ತು ಗಂಟೆ. ಬಹುಶಃ ಸರೋಜಾ ಇನ್ನೂ ಮಲಗಿರಲಿಕ್ಕಿಲ್ಲ ಎಂದು ಲೆಕ್ಕಿಸಿ ಒಂದು ಕಾಲ್ ಮಾಡಿದ. ಸಾಯಂಕಾಲ ಬಂದ ಉತ್ತರವೇ ಬರುತ್ತಿತ್ತು. ಅದ್ಯಾಕೆ ಸರೋಜಾ ಹೀಗೆ ಫೋನ್ ಸ್ವಿಚ್ ಆಫ್ ಮಾಡಿರಬಹುದು….? ಮತ್ತೆ ಏನಾದರೂ ಅನಾಹುತ….! ಇಲ್ಲ ಇಲ್ಲ…. ಅವಳು ಆ ಥರದ ಪುಕ್ಕಲು ಹೆಣ್ಣಲ್ಲ. ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸುವಳು. ಅವನ ಪ್ಯಾಂಟ್ ಹಿಂಬದಿಯ ಕಿಸೆಯಲ್ಲಿ ಆಕೆಯ ಮನೆಯ ವಿಳಾಸವಿತ್ತು.
ಸೀದಾ ಒಂದು ಆಟೋ ಹಿಡಿದು ವಿನೋಬಾನಗರದ ಎಂಟನೇ ಕ್ರಾಸ್ ನಲ್ಲಿ ಬಂದಿಳಿದ. ಹಾಗೇ ಮನೆ ನಂಬರನ್ನು ಹುಡುಕುತ್ತಾ ಒಂದೆಡೆ ಬರುತ್ತಿರುವಂತೆ ಗಕ್ಕನೇ ಒಂದು ಮನೆಯ ಎದುರು ನಿಂತ. ಹೌದು, ಅದು ಸರೋಜಾಳದೇ ಮನೆ. ವರಾಂಡದ ಎಲ್ಲ ಲೈಟುಗಳು ಆರಿದ್ದವು. ಮೆಲ್ಲಗೆ ಗೇಟು ತೆರೆದ. ಅದರ ಕೀರಲು ಆವಾಜಿಗೆ ಸರೋಜಾ ಹೊರಬರಬಹುದು ಎಂದು ಭಾವಿಸಿದ್ದೂ ಸುಳ್ಳಾದಾಗ ಆತ ಬೆಲ್ ಬಾರಿಸಿದ. ಒಳಗಿನಿಂದ ಯಾವ ಧ್ವನಿಯೂ ಇಲ್ಲ.
ಮತ್ತೆ ಬೆಲ್ ಮಾಡಿ. ಆಗಲೂ ಅಷ್ಟೇ, ಬಾಗಿಲಿಗೆ ಕಿವಿ ಆನಿಸಿದ. ಒಳಗಿನ ಕೋಣೆಯಲ್ಲಿ ಜೋರಾಗಿ ನಗು ಧ್ವನಿ ಕೇಳುತ್ತಿತ್ತು. ಆ ನಗುವಿನ ವಾಸನೆ ಅತ್ಯಂತ ರೊಮ್ಯಾಂಟಿಕ್ ಆಗಿತ್ತು. ಗೋವಿಂದರಾಜು ಬೆಲ್ ಆಫ್ ಮಾಡಿರಬಹುದು, ಇಲ್ಲವೇ ಕೆಟ್ಟಿರಬಹುದು ಎಂದು ಬಾಗಿಲನ್ನು ಬಡಿಯತೊಡಗಿದ. ಒಳಗಿನಿಂದ ಗಡಬಡಿಸಿ ಸರೋಜಾ ಬಂದವಳೇ ಬಾಗಿಲಿನ ಸಣ್ಣ ಕಿಂಡಿಯ ಭಾಗದಿಂದ ಗೋವಿಂದರಾಜುವನ್ನು ನೋಡಿದ್ದೇ ತಡವರಿಸಿದಂತೆ ಮಾತಾಡತೊಡಗಿದಳು. ಬಾಗಿಲು ತೆಗೆಯದೇ, “ಎಲ್ಲಾ ಬಿಟ್ಟು ಈಗ…. ನೀನು ಈ ಹೊತ್ತಲ್ಲಿ!” ಎಂದು ಗಾಬರಿಯಾದಂತೆ ಮಾತಾಡತೊಡಗಿದಳು.
ಅದನ್ನು ಕಂಡು ಗೋವಿಂದರಾಜು, “ಮೊದಲು ಬಾಗವಾದರೂ ತೆಗಿ ಮಾರಾಯ್ತಿ….!” ಎಂದ.
“ಹೌದ್ಲಾ…. ಸಾರಿ. ಮರೆತುಬಿಟ್ಟೆ,” ಮೆಲ್ಲಗೆ ಬಾಗಿಲು ತೆರೆದು ಅತ್ತಿತ್ತ ಮತ್ತೆ ಅವನ ಜೊತೆಗೆ ಯಾರಾದರೂ ಬಂದಿದ್ದಾರೆಯೇ ಎಂದು ನೋಡಿ ಬೇಗ ಬೇಗ ಬಾ ಎಂದು ಕರೆದಳು. ಗೋವಿಂದರಾಜುವಿಗೆ ಇವಳ ವರ್ತನೆ ವಿಚಿತ್ರವಾಗಿದೆಯಲ್ಲ…..? ಎನಿಸಿತು. ಒಳೆಗೆ ನಡೆದ.
ಬೆಡ್ ರೂಮಿನಿಂದ ತೆಳುವಾಗಿ ಸಿಗರೇಟ್ ವಾಸನೆ ಮೂಗಿಗೆ ಹರಿದುಬರುತ್ತಿತ್ತು. ಇವಳೇನಾದರೂ… ಎಂದು ಯೋಚಿಸುತ್ತಿರುವಂತೆಯೇ ಯಾರೋ ಗಂಡಸು ಕೆಮ್ಮಿದಂತೆ ಕೇಳಿಸಿತು. ಸರೋಜಾ ತನ್ನ ಕೆದರಿದ ಕೂದಲನ್ನು ಸರಿಪಡಿಸಿಕೊಳ್ಳತೊಡಗಿದಳು.
“ಪ್ರದೀಪ್ ಬಂದ್ರಾ…?”
“ಬರಲಿಲ್ಲ.”
“ಮತ್ತೆ ಕೆಮ್ಮಿದ್ದು….?”
“ಓ ಅದಾ….? ಚೆನ್ನೈನಿಂದ ನಮ್ಮ ಚಿಕ್ಕಪ್ಪನ ಮಗ ಕಿಶೋರ ಬಂದಿದ್ದಾನೆ,” ಎನ್ನುತ್ತಿರುವಂತೆ ಅವನು ಬೆಡ್ ರೂಮಿನಿಂದ ಸಿಗರೇಟ್ ಸೇದುತ್ತ ಎಂಭತ್ತರ ದಶಕದ ಕನ್ನಡ ಚಲನ ಚಿತ್ರದ ವಿಲನ್ ಥರಾ ಗೋವಿಂದರಾಜುವನ್ನೇ ದಿಟ್ಟಿಸುತ್ತಾ ಹೊರಬಂದ. ಮದುವೆಯಲ್ಲಿ ಅವನನ್ನು ತನ್ನ ಚಿಕ್ಕಮ್ಮನ ಮಗ ಎಂದು ಪರಿಚಯಿಸಿದ್ದ ನೆನಪು ಇನ್ನೂ ಹಸಿ ಹಸಿಯಾಗಿಯೇ ಇತ್ತು. ಇಷ್ಟೊತ್ತಿನಲ್ಲಿ ಸರೋಜಾ ಬೆಡ್ ರೂಮಿನಲ್ಲಿ ಇವನಿಗೇನು ಕೆಲಸ? ಎನ್ನುವ ಪ್ರಶ್ನೆ ಗೋವಿಂದರಾಜುವನ್ನು ಕೊರೆಯುತ್ತಲೇ ಇತ್ತು. ಆಕೆಯ ಮಗು ಬೇರೆ ಕೋಣೆಯಲ್ಲಿ ಮಲಗಿತ್ತು. ಆಕೆ ತನ್ನ ತಾಯಿಯನ್ನು ಊರಿಗೆ ಕಳುಹಿಸಿದ್ದಳು.
ಚಿಕ್ಕಪ್ಪನ ಮಗ ಅಂದರೆ, “ದೂರದ ಸಂಬಂಧ,” ಎಂದು ಅವಳು ವ್ಯಂಗ್ಯವಾಗಿ ನಗುವಲ್ಲಿಯೇ ಗೋವಿಂದನಿಗೆ ಗೂಢಾರ್ಥ ಹೊಳೆದಿತ್ತು.
“ಅಂದು ಹುಬ್ಬಳ್ಳಿಗೆ ಬಂದವಳು ಅಂದೇ ಮತ್ತೆ….” ಎನ್ನುವುದರೊಳಗೆ, “ಕಾರಣ ಕಿಶೋರ ಚೆನ್ನೈನಿಂದ ಬರ್ತಾ ಇರೋ ಮೆಸೇಜ್ ಸಿಕ್ತು…. ಓಡಿ ಬಂದೆ,” ಎಂದಾಗ ಗೋವಿಂದರಾಜುವಿಗೆ ತಾನು ಯಾವ ಕಾರಣಕ್ಕಾಗಿ ದಾಣಗೆರೆಗೆ ಬಂದಿದ್ದನೋ ಆ ಕಾರಣವನ್ನೇ ಅವನು ಮರೆತಂತಾಗಿತ್ತು. ತಾನು ತಪ್ಪು ಮಾಡಿದೆ. ಇವಳ ಸಂಸಾರ ಹಾಳಾಗುತ್ತದಲ್ಲ…? ಎಂದು ತಾನು ಯೋಚಿಸುವುದರಲ್ಲಿ ಯಾವ ಮೌಲ್ಯ ಇಲ್ಲ, ಎನಿಸಿತು.
ಅವಳು ಗೋವಿಂದರಾಜುವನ್ನು ಊಟ ಮಾಡುವ ಎಂದಾಗಲೀ…. ಇವತ್ತೊಂದಿನ ಉಳಿ ಎಂದಾಗಲೇ ಹೇಳಲಿಲ್ಲ. ಹಾಗೆ ಅವಳಿಂದ ಹೇಳಿಸಿಕೊಂಡು ಉಳಿಯುವ ಮನಸ್ಥಿತಿಯೂ ಅವನದಾಗಿರಲಿಲ್ಲ. ತಕ್ಷಣವೇ ಅಲ್ಲಿಂದ ಹೊರಟ.
ಒಂದು ಬದಿ ಸರೋಜಾಳ ಗಂಡ ಪ್ರದೀಪ್ ಹಾಗೂ ಆ ನರ್ಸ್, ಇನ್ನೊಂದು ಬದಿಯಲ್ಲಿ ಕ್ಲಾಸ್ಮೆಟ್ ಸರೋಜಾ ಹಾಗೂ ಆಕೆಯ ದೂರದ ಸಂಬಂಧಿ ಕಿಶೋರ…. ಇವರೆಲ್ಲರನ್ನು ಇಟ್ಟುಕೊಂಡು ಇವರ ವಿಚಿತ್ರ ಬಗೆಯ ಸಂಬಂಧಗಳನ್ನು ಧ್ಯಾನಿಸುತ್ತಾ ಬಸ್ ನಿಲ್ದಾಣದ ಕಡೆಗೆ ಬರುತ್ತಿರುವಾಗ ಬಸ್ ಡ್ರೈವರನೊಬ್ಬ ಜೋರಾಗಿ, “ರೀ ಯಣ್ಣಾ….. ನಮ್ಮ ಗಾಡಿಗೇ ಸಿಕ್ಕಿ ಸಾಯಬೇಕೇನ್ರಿ… ನೋಡಕೊಂಡು ಹೋಗ್ರಿ!” ಎಂದು ಚೀರಿದ್ದೇ ಗೋವಿಂದರಾಜು ವಾಸ್ತವಕ್ಕೆ ಮರಳಿದ್ದ.
ಈಗಿನ ಕಾಲದಲ್ಲಿ ಯಾರನ್ನು ನಂಬುವುದು….. ನಂಬದೇ ಇರುವುದು ಎನ್ನುವ ಗೊಂದಲದ ನಡುವೆಯೇ ಬಸ್ ನಿಲ್ದಾಣ ತಲುಪಿದ್ದ. ಸರೋಜಾ ಮನೆಯಲ್ಲಿ ಆಕೆಯ ಗಂಡ ಇಲ್ಲದಿರುವಾಗಲೂ ಬೆಡ್ ರೂಮಿನ ಆ ಮೋಹಕ ನಗು ಮಾಸಿರುವುದಿಲ್ಲ.
ಅತ್ತ ಪ್ರದೀಪ ತನ್ನ ಹೆಂಡತಿ ಇಲ್ಲದಿರುವಾಗಲೂ ನರ್ಸ್ ಳೊಂದಿಗೆ ಸರಸವಾಡುವುದನ್ನು ನೆನೆದು ಗೋವಿಂದರಾಜು ಮನಸ್ಸು ಹೇಸಿಕೊಂಡಂತಾಯಿತು. ಸಪ್ತಪದಿಯನ್ನು ಉಲ್ಟಾ ತುಳಿಯುವ ಇಂಥವರ ಸಾಲಲ್ಲಿ ತನ್ನ ಕ್ಲಾಸ್ಮೆಟ್ ಸರೋಜಾ ಸೇರಬಾರದು ಎನ್ನುವ ಏಕೈಕ ಕಾರಣದಿಂದ ಹೀಗೆ ರಾತ್ರೋರಾತ್ರಿ ಹೊರಟು ಬಂದ ಗೋವಿಂದರಾಜುವಿಗೆ ಇಲ್ಲಿ ಎಲ್ಲರೂ ನೆಟ್ಟಗಿದ್ದಾರೆ, ತಾನೇ ನೆಟ್ಟಗಿಲ್ಲ ಎಂಬಂತಾಗಿತ್ತು.
ಮಧ್ಯರಾತ್ರಿಯೇ ಮತ್ತೆ ಬಸ್ಸನ್ನೇರಿದ. ಹುಬ್ಬಳ್ಳಿ ತಲುಪಿದಾಗ ನಸುಕಿನ ನಾಲ್ಕು ಗಂಟೆ. ಮೈ ಭಾರವಾಗಿತ್ತು, ಮನಸ್ಸು ಕಹಿಯಾಗಿತ್ತು. ಆ ಬೆಡ್ ರೂಮಿನ ರೊಮ್ಯಾಂಟಿಕ್ ನಗು….. ಸಿಗರೇಟ್ ವಾಸನೆಯ ಘಮಲು ಅವನನ್ನು ದಾವಣಗೆರೆಯಿಂದ ಹುಬ್ಬಳ್ಳಿಯ ತನ್ನ ಮನೆಯವರೆಗೂ ಹಿಂಬಾಲಿಸಿತ್ತು.
ನಿತ್ರಾಣದ ನಡಿಗೆಯಲ್ಲಿ ಮನೆಗೆ ಬಂದು ತಲುಪಿದ. ಬೆಲ್ ಬಾರಿಸಿದ…. ಪ್ರತಿಕ್ರಿಯೆ ಇಲ್ಲ…. ಮತ್ತೆ ಬೆಲ್ ಮಾಡಿದ. ಆಗಲೂ ಒಳಗಿನಿಂದ ಪ್ರತಿಕ್ರಿಯೆ ಇಲ್ಲ.
ಥಟ್ಟನೇ ದಾವಣಗೆರೆಯ ಸರೋಜಾಳ ಮನೆ ನೆನಪಾಯಿತು. ಒಂದ ಕ್ಷಣ ತಲ್ಲಣಿಸಿಹೋದ! ಕೆಳಗೆ ನೋಡಿದ. ಬಾಗಿಲನ್ನು ಲಾಕ್ ಮಾಡಲಾಗಿತ್ತು. ಪಕ್ಕದ ಮನೆಯ ರುದ್ರಪ್ಪ ಮನೆ ಬಾಗಿಲು ತೆರೆದ ಸದ್ದು ಕೇಳಿಸಿತು.
“ತಗೊಳ್ರಿ ಮನಿ ಚಾವಿ,” ಅಂತ ತುಸು ಸಿಟ್ಟಿನಲ್ಲಿಯೇ ಅದನ್ನು ಗೋವಿಂದರಾಜುವಿನ ಕೈಗಿಟ್ಟ. ಹೆಂಡತಿ ಏನಾದರೂ ಹೇಳಿರಬಹುದು ಎಂದು ನಿರೀಕ್ಷಿಸಿ ರುದ್ರಪ್ಪನ ಮುಖವನ್ನೇ ನೋಡುತ್ತಿದ್ದ. ರುದ್ರಪ್ಪ ವಿಕಾರವಾಗಿ ಆಕಳಿಸುತ್ತಾ ತನ್ನ ಮನೆಯೊಳಗೆ ನಡೆದ. ಗೋವಿಂದರಾಜು ಮನೆಯ ಬಾಗಿಲನ್ನು ತೆರೆದು ಒಳಗೆ ಬಂದ. ಮೆಲ್ಲಗೆ ಮಲಗು ಕೋಣೆಗೆ ನಡೆದ. ಮಂಚ ಖಾಲಿ ಖಾಲಿಯಾಗಿತ್ತು. ಯಾರು ಸರಿ, ಯಾರು ತಪ್ಪು ಎನ್ನುವ ಲೆಕ್ಕಚಾರದಲ್ಲಿ ಮಂಚದ ಮೇಲೆ ಉರುಳಿದ. ಸಂಕ್ರಮಣಕ್ಕಾಗಿ ಸುಂಕ ತೆತ್ತನಂತೆ ಮುದ್ದೆಯಾಗಿ ಮಲಗಿದ. ಹಾಗೆ ಮಲಗಿದ ಅವನ ಪ್ರತಿಮೆಯಲ್ಲಿ ಸೋಲಿನ ಕಳೆಯಿತ್ತು.