ಮದುವೆಗೆ ಮೊದಲು ನನ್ನ ಭಾವಿ ಪತ್ನಿ ಡಯೆಟೀಶಿಯನ್ ಅಂದರೆ ಆಹಾರತಜ್ಞೆ ಎಂದು ತಿಳಿದಾಗ ನನ್ನ ವೃದ್ಧ ತಂದೆ ತಾಯಿಗಳಿಗೆ ಬಹಳ ಅನುಕೂಲವಾಗುತ್ತದೆ ಎಂದು ಸಂತೋಷವಾಗಿತ್ತು. ಮನೆಯಲ್ಲಿದ್ದೇ ಯಾವ ರೀತಿಯ ಆಹಾರ ತಿನ್ನಬೇಕು, ಯಾವುದು ಪಥ್ಯ, ಯಾವುದನ್ನು ತಿಂದರೆ ತೊಂದರೆಯಾಗಬಹುದು, ಯಾವ ವಸ್ತುಗಳು ತಮ್ಮ ಆಹಾರದಲ್ಲಿ ಸೇರಿರಬೇಕು ಎಂದೆಲ್ಲಾ ಅವರಿಗೆ ತಿಳಿದಿರುತ್ತದೆ. ಜೊತೆಗೆ ಅವಳನ್ನು ಮದುವೆಯಾದ ನಂತರ ನನ್ನ ಊಟದ ಗುಣಮಟ್ಟ ಹೆಚ್ಚಾಗುತ್ತದೆ, ಎಂದೆಲ್ಲಾ ಬಹಳ ಸಂತೋಷಪಟ್ಟಿದ್ದೆ. ಒಟ್ಟಿನಲ್ಲಿ ಡಯೆಟೀಶಿಯನ್ ಳೊಂದಿಗೆ ಮದುವೆಯ ಬಗ್ಗೆ ನಾನು ಬಹಳಷ್ಟು ಸುಂದರ ಕನಸುಗಳನ್ನು ಕಂಡಿದ್ದೆ.
ಅಂತೂ ನಮ್ಮಿಬ್ಬರ ಮದುವೆ ಆಯ್ತು. ಈ ಪ್ರಪಂಚದಲ್ಲಿ ನಾನೇ ಅತ್ಯಂತ ಸೌಭಾಗ್ಯಶಾಲಿ ಪುರುಷ. ಅದಕ್ಕೇ ಇಷ್ಟು ಒಳ್ಳೆಯ ಗುಣವಂತಳಾದ ಹೆಂಡತಿ ಸಿಕ್ಕಿದ್ದು ಅನ್ನಿಸುತ್ತಿತ್ತು. ಹೀಗೆ ಯೋಚಿಸುವಾಗ ತಮ್ಮ ಕಣ್ಮಣಿಯನ್ನು ನನಗೆ ಕೊಟ್ಟು ಮದುವೆ ಮಾಡಿ ನನ್ನ ಜೀವನವನ್ನು ಧನ್ಯ ಮಾಡಿದ ನನ್ನ ಅತ್ತೆ ಮಾವಂದಿರ ಬಗ್ಗೆ ಕೃತಜ್ಞತೆ ಉಕ್ಕುತ್ತಿತ್ತು. ಮದುವೆಯ ನಂತರ ನಗು, ಸಂತಸದ ವಾತಾವರಣದಲ್ಲಿ ದಿನಗಳು ಕಳೆಯತೊಡಗಿದವು. ಆದರೆ ಒಂದು ಹಳೆಯ ಸೂಕ್ತಿಯಂತೆ ಒಳ್ಳೆಯ ದಿನಗಳು ಬೇಗನೆ ಮುಗಿದು ಹೋಗುತ್ತಂತೆ. ನನ್ನ ಒಳ್ಳೆಯ ದಿನಗಳೂ ಮುಗಿದುಹೋಗುವ ಸಮಯ ಬಂತು. ನನ್ನ ಸಂತಸಗಳ ಮೇಲೆ ನನ್ನನ್ನು ಕಂಡು ಕರುಬರ ದೃಷ್ಟಿ ಬಿತ್ತು. ಒಂದು ಭಾನುವಾರ ಬೆಳಗ್ಗೆ ನಾನು ಎದ್ದಾಗ ನನ್ನ ನವವಿವಾಹಿತೆ ಹೇಳಿದಳು, “ರೀ, ಇತ್ತೀಚೆಗೆ ನಿಮಗೆ ಬೊಜ್ಜು ಬರ್ತಾ ಇದೆ. ನಿಮ್ಮ ರೂಪ ಹಾಳಾಗ್ತಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಹೀಗಾದರೆ ಚೆನ್ನಾಗಿರಲ್ಲ. ಅದಕ್ಕೆ ಕಾರಣ ಏನೂಂತ ಗೊತ್ತಾ?”
ನನ್ನಾಕೆಯ ಮಾತುಗಳನ್ನು ಕೇಳಿ ನಾನು ತಬ್ಬಿಬ್ಬಾದೆ. ಅವಳ ಬಾಯಿಂದ ನನ್ನ ಬೊಜ್ಜಿನ ಬಗ್ಗೆ ಕೇಳಿ ಬಹಳ ನಾಚಿಕೆಯಾಯಿತು. ಅವಳಿಗೆ ಹೇಗೆ ತಿಳಿಹೇಳಲಿ ಎಂದು ಗೊತ್ತಾಗಲಿಲ್ಲ. ಅವಳು ನನ್ನ ಬೊಜ್ಜಿನ ಬಗ್ಗೆ ಹೇಳಿದ್ದು ಕೇಳಿ ಮುಜುಗರವಾದರೂ ನನ್ನನ್ನು ರಕ್ಷಿಸಿಕೊಳ್ಳಲು ಏನಾದರೂ ಹೇಳಲೇಬೇಕಿತ್ತು. ಆದ್ದರಿಂದ ದೈನ್ಯತೆ ತುಂಬಿದ ಸ್ವರದಲ್ಲಿ, “ಈಗ ನಾನೇನು ಮಾಡೋಕಾಗುತ್ತೆ. ಆದರೂ ನಾನು ಯಾವುದಾದರೂ ಜಿಮ್ ಗೆ ಸೇರಿಕೊಂಡು ಈ ಬೊಜ್ಜನ್ನು ನಿಯಂತ್ರಿಸ್ತೀನಿ. ಇದರ ಬಗ್ಗೆ ನಿನ್ನ ಚಿಂತೇನ ದೂರ ಮಾಡಲು ಪ್ರಯತ್ನಿಸ್ತೀನಿ,” ಎಂದೆ.
“ನೀವಂತೂ ಕಾಯಿಲೆ ಕೈಮೀರಿ ಹೋದ್ಮೇಲೆ ಔಷಧಿ ತಗೊಳ್ಳೋ ಮಾತಾಡ್ತೀರಿ. ಇಷ್ಟು ಬೊಜ್ಜು ಬಂದ ಮೇಲೆ ಅದನ್ನು ನಿಯಂತ್ರಿಸೋದಕ್ಕೆ ಪ್ರಯತ್ನಿಸ್ತೀನಿ ಅಂತೀರಿ, ನಿಜವಾದ ವಿಷಯ ನೀವು ಅರ್ಥ ಮಾಡಿಕೊಳ್ತಿಲ್ಲ. ಈ ವಯಸ್ಸಿಗೇ ಬೊಜ್ಜು ಏಕೆ ಬಂತು ಅಂತ ಕಾರಣ ಹುಡುಕಬೇಕು. ಇದಕ್ಕೆ ಕಾರಣ ಏನು ಗೊತ್ತಾ? ನಿಮ್ಮ ಆಹಾರ ಪದ್ಧತಿ. ನೀವು ಕರಿದ ತಿಂಡಿಗಳನ್ನು ಹೆಚ್ಚಾಗಿ ತಿಂತೀರಿ.
“ಅದರಿಂದಾಗಿ ನಿಮ್ಮ ಶರೀರದಲ್ಲಿ ಹೆಚ್ಚು ಕೊಬ್ಬು ಶೇಖರಣೆಯಾಗಿದೆ. ಅದರಿಂದಲೇ ಈ ಬೊಜ್ಜು. ಹೊಸದಾಗಿ ಮದುವೆಯಾದೋರು ನಾವು. ಅದಕ್ಕೇ ನಾನು ಏನೂ ಹೇಳಲಿಲ್ಲ. ಆದರೆ ಇನ್ನು ಮುಂದೆ ನಾನು ನಿಮ್ಮ ಊಟದ ಅಭ್ಯಾಸಗಳಿಗೆ ಸಂಪೂರ್ಣ ಗಮನ ಕೊಡ್ತೀನಿ.
“ಇವತ್ತಿನಿಂದ ನೀವು ಪೂರಿ ತಿನ್ನೋ ಹಾಗಿಲ್ಲ. ಎರಡೂ ಹೊತ್ತು ಬರೀ ಚಪಾತಿ ತಿನ್ನಬೇಕು. ಅದೂ ಎಣ್ಣೆ ತುಪ್ಪ ಇಲ್ಲದೆ, ನಿಮ್ಮ ದೇಹಕ್ಕೆ ಚಪಾತೀನೇ ಸರಿ. ಅದರಿಂದ ನಿಮ್ಮ ಬೊಜ್ಜು ಕಡಿಮೆಯಾಗುತ್ತೆ,” ನನ್ನಾಕೆ ನಿರ್ಣಾಯಕ ಸ್ವರದಲ್ಲಿ ಹೇಳಿದಳು. ನನ್ನಾಕೆಯ ಬಾಯಿಂದ ಬಂದ ಈ ಕಟು ಮಾತುಗಳನ್ನು ಕೇಳಿ ನನ್ನನ್ನು ಯಾರೋ ಬಲವಾಗಿ ಅಲುಗಾಡಿಸಿದಂತಾಯಿತು. ಶನಿವಾರ ಸಂಜೆಯಿಂದಲೇ ನಾನು ಭಾನುವಾರಕ್ಕಾಗಿ ಏನೇನೋ ಯೋಚಿಸಿದ್ದೆ, ಏನೇನೋ ಯೋಜನೆಗಳನ್ನು ಹಾಕಿಕೊಂಡಿದ್ದೆ. ಆದರೆ ಬೆಳಕಾಗುತ್ತಿದ್ದಂತೆ ನನ್ನಾಕೆ ನನಗೆ ಊಟದಲ್ಲಿ ಚಪಾತಿಯ ಶಾಕ್ ನೀಡಿದಳು. ನನಗೆ ಪೂರಿಗಳೆಂದರೆ ಬಹಳ ಇಷ್ಟ. ಹೀಗಿರುವಾಗ ಚಪಾತಿಯನ್ನು ಗಂಟಲಿಗೆ ಇಳಿಸುವ ಕಲ್ಪನೆಯಿಂದಲೇ ನಡುಗತೊಡಗಿದೆ. ಕೊನೆಯ ಪ್ರಯತ್ನವೆಂಬಂತೆ, “ಆಯ್ತು, ನಾನು ಎಕ್ಸರ್ ಸೈಜ್ ಮಾಡಿ ಈ ಹೆಚ್ಚುವರಿ ಕೊಬ್ಬನ್ನು ತೆಗೆದುಹಾಕಿ ನನ್ನ ಹೊಟ್ಟೇನ ಮೊದಲಿನ ಸ್ಥಿತೀಗೆ ತಂದ್ರೆ ಆಗ್ಲಾದ್ರೂ ಪರೋಟ ಮಾಡಿಕೊಡ್ತೀಯಾ?” ಎಂದು ಅಂಗಲಾಚಿದೆ.
“ಏನೂ! ನೀವು ಎಕ್ಸರ್ ಸೈಜ್ ಮಾಡ್ತೀರಾ? ಬೆಳಗ್ಗೆ ಏಳೋದೇ 8 ಗಂಟೆಗೆ. ಇನ್ನೂ ಲೇಟಾದ್ರೆ ಆಫೀಸಿಗೆ ಹೋಗೋದು ಲೇಟಾಗುತ್ತೆ ಅಂತ ಏಳ್ತೀರಿ. ಎಕ್ಸರ್ ಸೈಜ್ ಮಾಡ್ತೀನಿ ಅಂತ ಕನಿಷ್ಠ ನನ್ನ ಮುಂದೆ ಹೇಳಬೇಡಿ.
“ಸಂಜೇನೂ ಅಷ್ಟೇ ನಿಮ್ಮ ಗೆಳೆಯರ ಗುಂಪಿನಿಂದ ನೀವು ಹೊರಬರೋದೇ ಕಷ್ಟ. ಅದಕ್ಕೇ ನಾನು ಹೇಳೋದು. ನಿಮ್ಮ ಆಹಾರದಲ್ಲಿ ನಿಯಂತ್ರಣ ಮಾಡಿ ಹೇಗಾದರೂ ನಿಮ್ಮ ಬೊಜ್ಜನ್ನು ನಿಯಂತ್ರಿಸೋಕೆ ಪ್ರಯತ್ನಿಸ್ತೀನಿ,” ಎಂದಳು.
ನಾನಿನ್ನೂ ಚಪಾತಿಯ ಹೊಡೆತದ ಆಘಾತದಿಂದ ಸರಿಯಾಗಿ ಹೊರಬಂದಿರಲಿಲ್ಲ. ಅಷ್ಟರಲ್ಲಿ ನನ್ನ ಟೀ ಕುಡಿಯುವ ಅಭ್ಯಾಸದ ಮೇಲೂ ಅವಳು ಆಕ್ರಮಣ ಮಾಡಿದಳು. ನನಗಂತೂ ಟೀ ಕುಡಿಯೋದಂದ್ರೆ ಪಂಚಪ್ರಾಣ. ಈಗ ಕಡಿಮೆ ಸಕ್ಕರೆ ಹಾಕಿದ ಟೀ ಕುಡಿಯ ಬೇಕಿತ್ತು. ನನ್ನಾಕೆಯ ದೃಷ್ಟಿಯಲ್ಲಿ ನನ್ನ ಟೀ ಪ್ರೀತಿಯೂ ನನ್ನ ಬೊಜ್ಜನ್ನು ಬೆಳೆಸುವಲ್ಲಿ ಮಹತ್ವಪೂರ್ಣ ಪಾತ್ರ ನಿಭಾಯಿಸುತ್ತಿತ್ತು. ಅವಳು ನನ್ನ ಟೀಯಲ್ಲಿ ಸಕ್ಕರೆಯ ಪ್ರಮಾಣ ಕಡಿಮೆ ಮಾಡಿದಳು. ಜೊತೆಗೆ ನಾನು ಕುಡಿಯಬೇಕಾದ ಟೀ ಪ್ರಮಾಣವನ್ನು ನಿರ್ಧರಿಸಿದಳು. ಟೀ, ಪೂರಿಗಳ ನಂತರ ನನ್ನ ಆಹಾರತಜ್ಞೆ ಪತ್ನಿ ನನ್ನ ಆಹಾರ ನಿಯಂತ್ರಣ ಕಾರ್ಯಕ್ರಮವನ್ನು ಇನ್ನಷ್ಟು ಕಠೋರ ಮಾಡಿದಳು. ನನ್ನ ಊಟದಲ್ಲಿನ ನಿಯಂತ್ರಣದ ಉರುಳನ್ನು ಇನ್ನಷ್ಟು ಬಿಗಿ ಮಾಡಿದಳು. ಟೀ, ಪೂರಿಗಳ ನಂತರ ಪಲ್ಯಗಳಲ್ಲಿ ಎಣ್ಣೆ ಮತ್ತು ಮಸಾಲಾ ಪದಾರ್ಥಗಳ ಪ್ರಮಾಣ ಕಡಿಮೆ ಮಾಡುವುದು ಅವಳ ಮುಂದಿನ ಹೆಜ್ಜೆಯಾಗಿತ್ತು. ನನ್ನಾಕೆಯ ದೃಷ್ಟಿಯಲ್ಲಿ ಅವು ಕೂಡ ನನ್ನ ಆರೋಗ್ಯದ ಶತ್ರುಗಳಾಗಿದ್ದವು. ಅವನ್ನು ಹೊಡೆದೋಡಿಸುವುದು ಅವಳಿಗೆ ಚೆನ್ನಾಗಿ ಗೊತ್ತಿತ್ತು. ನನ್ನ ಆಹಾರದಲ್ಲಿ ಬರೀ ಬೇಯಿಸಿದ ತರಕಾರಿ ಅಥವಾ ಅತ್ಯಂತ ಕಡಿಮೆ ಖಾರ, ಮಸಾಲೆ ಹಾಕಿದ ತರಕಾರಿ ಸ್ಥಾನ ಪಡೆದಿತ್ತು. ಆಲೂಗಡ್ಡೆ, ಅನ್ನ ಇತ್ಯಾದಿ ಬೊಜ್ಜಿಗೆ ಕಾರಣವೆಂದು ಬ್ಯಾನ್ ಆಗಿದ್ದವು. ಶತ್ರುವಿನೊಂದಿಗೆ ಯುದ್ಧ ಮಾಡುವುದೆಂದು ನಿಶ್ಚಯಿಸಿರುವಾಗ ಶತ್ರುವಿನ ಸಹಚರರೊಂದಿಗೆ ಸರಸವಾಡಲು ಹೇಗೆ ಸಾಧ್ಯ? ಆದರೂ ನನ್ನ ವಿಶೇಷ ಮನವಿಗೆ ಓಗೊಟ್ಟು ಕೊಂಚ ಉದಾರತೆ ತೋರಿಸಿದ ನನ್ನಾಕೆ ಊಟದಲ್ಲಿ ಕೊಂಚ ಅನ್ನ ತಿನ್ನಲು ನನಗೆ ಅನುಮತಿ ನೀಡಿದಳು.
ಊಟದ ನಂತರ ಕೊಂಚ ಸ್ವೀಟ್ಸ್ ತಿನ್ನುವ ಪ್ರಶ್ನೆಯೇ ಏಳುತ್ತಿರಲಿಲ್ಲ. ಏಕೆಂದರೆ ಆ ಸ್ವೀಟ್ಸ್ ನನ್ನ ಬೊಜ್ಜಿಗೆ ಪ್ರಮುಖ ಕಾರಣವಾಗಿತ್ತು. ಜೊತೆಗೆ ನನ್ನ ಊಟದಲ್ಲಿ ಬಹಳಷ್ಟು ಸಲಾಡ್ ಗಳೂ ಸೇರಿಕೊಂಡವು. ಅಂತೂ ನನ್ನ ಡಯೆಟೀಶಿಯನ್ ಹೆಂಡತಿ ನನ್ನ ಆರೋಗ್ಯಕ್ಕೆ ತಕ್ಕ ಆಹಾರ ಒದಗಿಸುವ ಪ್ರಯತ್ನದಲ್ಲಿ ಯಾವ ಹಂತಕ್ಕೆ ಒಯ್ಯುತ್ತಾಳೋ ತಿಳಿಯುತ್ತಿಲ್ಲ. ನನ್ನ ಊಟದ ತಟ್ಟೆಯಿಂದ ಮುಂದೆ ಯಾವ ಯಾವ ಆಹಾರ ಮಾಯವಾಗುತ್ತದೋ ಎಂಬ ಯೋಚನೆಯಿಂದ ಕೊರಗಿ ಕೊರಗಿ ಕೃಶನಾಗುತ್ತಿದ್ದೇನೆ.