ಕುಬ್ಜ ಬೇವಿನ ಮರವೊಂದು ಮೃದುಲಾಳ ಶಾಲಾ ಕಛೇರಿಯ ಹೊರಭಾಗದಲ್ಲಿ ಬಹುಕಾಲದಿಂದಲೇ ಸುಸಜ್ಜಿತ ಕಾವಲುಗಾರನಂತೆ ಬೆಳೆದು ನಿಂತಿತ್ತು. ಯಾವ ನರಪಿಳ್ಳೆಯೂ ಮರದ ಸರ್ಪಗಾವಲಿನ ಕಣ್ಣು ತಪ್ಪಿಸಿ ಒಳ ಪ್ರವೇಶಿಸಲು ಸಾಧ್ಯವಿರಲಿಲ್ಲ. ಆದರೆ ಚುಮು ಚುಮು ಎಳೆ ಬಿಸಿಲಿಗೆ ಯಾರಪ್ಪನ ಅಂಕೆ? ಕಾವಲು ಮರದ ಕಣ್ತಪ್ಪಿಸಿ, ಅದರ ಗುತ್ತಾದ ಎಲೆಗಳ ಸಂದಿಯಲ್ಲೇ ತೆವಳಿಕೊಂಡು ಒಳಗೆ ತೂರಿಬಿಡುತ್ತದೆ. ಇವತ್ತೂ ಹಾಗೇ ಆಯಿತು. ಸೂರ್ಯ ಕಿರಣಗಳು ಒಳ ತೂರಿ ಬಂದು ಮೃದುಲಾಳ ಮೇಜಿನ ಮೇಲೆ  ವಿಜೃಂಭಣೆಯಿಂದ ಪ್ರತಿಫಲಿಸತೊಡಗಿದ್ದವು.

ಮೃದುಲಾಳಿಗೂ ಈ ಎಳೆಬಿಸಿಲು ತನ್ನಂತೆಯೇ ಮಹಾ ಹಠಮಾರಿ ಎಂದೆನಿಸಿತು. ಅದಕ್ಕೆ ತನ್ನಿಷ್ಟದಂತೆ ಹರಡಿಕೊಳ್ಳದಿರಲು ಲಂಗು ಲಗಾಮು ಹಾಕುವವರಾದರೂ ಯಾರು? ಸುಳಿಗಾಳಿಗೆ ಸಿಲುಕಿದ ಮರದ ಎಲೆಗಳು ಸಂತಸದಿಂದ ಸುಂಯೆನ್ನುತ್ತ ಉಯ್ಯಾಲೆ ಆಡುತ್ತಿದ್ದವು. ಎಲೆಗಳ ತೂಗುಯ್ಯಾಲೆಯ ಆಟದಿಂದ ಬೆಳಗಿನ ಪ್ರಖರತೆಯ ಮಧ್ಯೆ ತಂಪೆರವ ಅನುಭೂತಿಯೊಂದು ಮೃದುಲಾಳನ್ನು ಆವರಿಸಿತ್ತು.

ಮೃದುಲಾ ಯೋಚಿಸತೊಡಗಿದಳು. `ಎಲೆ, ಮರಗಳು ಕೂಡ ಪರಕೀಯರೊಂದಿಗೆ ಹೊಂದಿಕೊಳ್ಳಲು, ಸಾಮರಸ್ಯ ಬೆಳೆಸಿಕೊಳ್ಳಲು ಮನುಷ್ಯರಂತೆಯೇ ಕಷ್ಟಪಡಬೇಕಲ್ಲವೇ?’ ಎಂದುಕೊಂಡಳು.

ತನ್ನದೇ ಲೋಕದಲ್ಲಿ ಮುಳುಗಿ ನೆರಳು ಬೆಳಕಿನಾಟವನ್ನು ಗಮನಿಸುತ್ತಿದ್ದ ಮೃದುಲಾಳ ಆರ್ದ್ರಗೊಂಡ ಮನಸು ಅವಳಿಗೇ ಅರಿವಾಗದಂತೆ ಗಂಡನ ಮನೆಯ ಹಳೆಯ ನೆನಪುಗಳು ಅಂಗಳದಲ್ಲಿ ಹೋಗಿ ನಿಂತುಬಿಟ್ಟಿದ್ದವು.

ಶರತ್‌ ಒಂದು ಬ್ಯಾಂಕಿನಲ್ಲಿ ಗುಮಾಸ್ತ. ಇಬ್ಬರು ಅಣ್ಣ ತಮ್ಮಂದಿರು ಹಾಗೂ ಇಬ್ಬರು ಅಕ್ಕ ತಂಗಿಯರಲ್ಲಿ ಎಲ್ಲರಿಗಿಂತ ಅವನೇ ಹಿರಿಯ. ತಂದೆ ಇಲ್ಲದ ಕುಟುಂಬವಾದ ಕಾರಣ ಸಂಸಾರ ನೌಕೆಗೆ ಅವನೇ ನಾವಿಕ.

ನೋಡಲು ಬಹು ಸರಳ ಮತ್ತು ಸಾಧಾರಣವಾಗಿ ಕಾಣುವ ಮೃದುಲಾಳನ್ನು ಗಂಡನ ಮನೆಯವರೆಲ್ಲರೂ ಹಿಗ್ಗಿನಿಂದ ಸ್ವೀಕರಿಸಿದ್ದರು. ವಿದ್ಯಾವಂತ, ವಿನಯಶೀಲ, ಸರ್ಕಾರಿ ನೌಕರಿಯಲ್ಲಿರುವ ಹುಡುಗಿ ನಮ್ಮ ಸೊಸೆಯಾದಳಲ್ಲ ಎಂಬ ಅವರ ಹಮ್ಮು ಮೃದುಲಾಳ ಗಮನಕ್ಕೂ ಬಂದಿತ್ತು.

ತಂದೆಯ ಇನ್ನಿಲ್ಲದ ಅಕ್ಕರೆಯಿಂದಾಗಿ ಮೃದುಲಾ ಮನೆಗೆಲಸಗಳಲ್ಲಿ ಪಳಗಿರಲಿಲ್ಲ. ಅವಳ ಸೋಮಾರಿತನ ಗಂಡನ ಮನೆಯವರಿಗೆಲ್ಲ ಬಹುಬೇಗ ಅರಿವಾಗಿತ್ತು. ಆದರೆ ಅವಳ ಆದರ, ಸಮ್ಮಾನಗಳಿಗೆ ಯಾರೂ ಚ್ಯುತಿ ತರುವ ಯತ್ನ ಮಾಡಲಿಲ್ಲ. ಬದಲಾಗಿ ಮನೆಯವರೆಲ್ಲ ಅವಳನ್ನು ಹೆಚ್ಚು ವಾತ್ಸಲ್ಯದಿಂದ ನೋಡತೊಡಗಿದ್ದರು.

ಪ್ರೀತಿ ಅಧಿಕಾರವನ್ನೂ ಚಲಾಯಿಸುತ್ತೆ ಎಂಬ ಕಟುವಾಸ್ತವ ಆಗಿನ್ನೂ ಮೃದುಲಾಳ ಮೃದು ಮನಸ್ಸಿಗೆ ಹೊಳೆದಿರಲಿಲ್ಲ. ಸಂಸಾರದ ಬೇಕು ಬೇಡಗಳನ್ನು ಯಶಸ್ವಿಯಾಗಿ ಪೂರೈಸುವಷ್ಟರಲ್ಲಿ ಅವಳ ಹಾಗೂ ಶರತ್‌ ನ ಸಂಪಾದನೆಯೆಲ್ಲ ಸಮಾಪ್ತಿಯಾಗಿಬಿಡೋದು. ಸಂಪಾದನೆಗಾಗಿಯೇ ಇವರೆಲ್ಲ ತನಗಿಷ್ಟು ಗೌರವಾದರ ನೀಡುತ್ತಿದ್ದಾರೆ ಎಂದು ಭಾಸವಾಗತೊಡಗಿತು. ಅವರೂ ಅಷ್ಟೇ, ತಮ್ಮ ಸೊಸೆಗೆ ಯಾವುದೇ ಕಷ್ಟವಾಗದಂತೆ ನೋಡಿಕೊಳ್ಳುತ್ತಿದ್ದರು.

ಮಾಗದ ವಯಸ್ಸು, ನಿರಾಯಾಸ ಸಂಪಾದನೆಯಿಂದಾಗಿ ಮೃದುಲಾ ಸದಾಕಾಲ ಅಸಹನೆಯಿಂದ ಕುದಿಯತೊಡಗಿದ್ದಳು. ಶರತ್‌ ನ ಅಗಾಧ ಪ್ರೇಮದ ನೆರಳಿನಡಿಯಲ್ಲೂ ಮೃದುಲಾಳ ಅಸಹನೆಯ ಒಡಲಾಗ್ನಿ ತಣಿದಿರಲಿಲ್ಲ. ಮನೆ ಮಂದಿಯೆಲ್ಲ ಅವಳಿಗೆ ನಿಷ್ಪ್ರಯೋಜಕರು ಎಂದೆನಿಸತೊಡಗಿತ್ತು.

ಮೃದುಲಾಳ ಈ ಭಾವನೆಯನ್ನು ಕುಟುಂಬ ಸದಸ್ಯರ ನಿಷ್ಕಳಂಕ ವಾತ್ಸಲ್ಯವಾಗಲಿ, ಶರತ್‌ ನ ಪ್ರೀತಿಯ ಸೆಲೆಯಾಗಲಿ ಯಾವುದೂ ಬದಾಯಿಸಲಾಗಲಿಲ್ಲ. ಸ್ವಾವಲಂಬಿಯಾದ, ಆರ್ಥಿಕವಾಗಿ ಸ್ವತಂತ್ರಳಾಗಿದ್ದ ಮೃದುಲಾ ಕೇವಲ ತನಗಾಗಿ ಮಾತ್ರ ಜೀವಿಸಬೇಕೆಂದು ಬಯಸತೊಡಗಿದ್ದಳು.

ಅದೊಂದು ದಿನ ನಾದಿನಿ ಮೀನಾಳ ಕೈಯಿಂದ ಮೃದುಲಾಳ ದುಬಾರಿ ಟೀ ಸೆಟ್‌ ಜಾರಿ ಬಿದ್ದು ಒಡೆದು ಚೂರು ಚೂರಾಗಿ ಹೋದಾಗ, ಬೂದಿ ಮುಚ್ಚಿದ ಕೆಂಡದಂತಿದ್ದ ಕೋಪ ಭುಗಿಲೆದ್ದಿತ್ತು. ಆಕ್ರೋಶದಿಂದ ಪುಟಿದೆದ್ದ ಮೃದುಲಾ, “ಇದೇನು ಮಾಡಿಬಿಟ್ಟೆ ಮೀನಾ? ಯಾವತ್ತಾದರೂ ಇಂತಹ ದುಬಾರಿ ಟೀ ಸೆಟ್‌ ನ್ನು ಕಂಡಿದ್ದೀಯಾ?” ಎಂದು ಗರ್ಜಿಸಿದಳು. ಸೆಟ್‌ ಒಡೆದು ಗಾಯಗೊಂಡ ತಂಗಿಯ ಕೈಗೆ ಬಟ್ಟೆ ಕಟ್ಟುತ್ತಿದ್ದ ಶರತ್‌, “ಅವಳೇನು ಬೇಕೂಂತಲೇ ಒಡೆಯಲಿಲ್ಲ ಬಿಡು ಮೃದುಲಾ,” ಎಂದ. ನಡೆದ ಅಚಾತುರ್ಯಕ್ಕೆ ಹೃದಯ ಧಸಕ್ಕೆಂದ ಮೀನಾ ಮೌನವಾಗಿ ರೂಮಿನೊಳಗೆ ಹೊರಟುಹೋದಳು. ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನದಲ್ಲಿ ಶರತ್‌ ಮೃದುಲಾಳ ಕಣ್ಣೀರೊರೆಸಿ, ಹಣೆ ಮೇಲೊಂದು ಮುತ್ತಿಕ್ಕಿ, “ಯಾಕಿಷ್ಟು ಕಂಗಾಲಾಗುತ್ತಿರುವೆ ಚಿನ್ನ?” ಎಂದು ಸಂತೈಸತೊಡಗಿದ.

ಕೆಲವು ಕ್ಷಣಗಳ ನಂತರ ತಲೆ ಮೇಲೆತ್ತಿದ ಮೃದುಲಾ, “ನನಗನ್ನಿಸಿದ ಮಟ್ಟಿಗೆ ಇಲ್ಲಿ ಎಲ್ಲಾ ಸಂಬಂಧಗಳೂ ಸ್ವಾರ್ಥಮಯವಾಗಿವೆ. ಇವರೆಲ್ಲ ಇನ್ನೂ ಎಷ್ಟು ದಿನ ಕಾಲ ನಮ್ಮ ಸಂಪಾದನೆಯಲ್ಲೇ ಮಜಾ ಮಾಡುವುದು?” ಎಂದಳು. ಅವಳ ಮಾತು ಕೇಳಿ ಹೃದಯ ಕಿವುಚಿದಂತಾದ ಶರತ್‌, “ಮೃದುಲಾ, ಸಂಬಂಧಗಳೆಂದರೆ ಏನೆಂಬುದೇ ನಿನಗರಿವಿಲ್ಲ. ನಿನಗೆ ಹಣವೊಂದೇ ಮುಖ್ಯವಾಗಿದೆಯಲ್ಲವೇ…. ಹೋಗುವ ಹಾಗಾದರೆ, ನಿನ್ನ ದುಡ್ಡಿನೊಂದಿಗೇ ಜೀವಿಸು, ಸುಖವಾಗಿರು,” ಎಂದುಬಿಟ್ಟ.

ಮೃದುಲಾ ಅಂತಿಮ ನಿರ್ಧಾರ ಮಾಡಿಯಾಗಿತ್ತು. ಅವಳ ದೃಷ್ಟಿಯಲ್ಲಿ ಆ ನಿರ್ಧಾರ ಅತ್ಯಂತ ಸೂಕ್ತವಾಗಿತ್ತು. ಕ್ಷಣ ಮಾತ್ರದಲ್ಲಿ ಸೆಟೆದು ನಿಂತು, ಬ್ಯಾಗಿನಲ್ಲಿ ಕೆಲವೊಂದಿಷ್ಟು ಬಟ್ಟೆ ತುಂಬಿಕೊಂಡು ಮನೆಯಿಂದ ಕಾಲು ಕಿತ್ತೇಬಿಟ್ಟಳು. ಕೋಪದಿಂದ ಭುಸುಗುಟ್ಟುತ್ತಿದ್ದ ಮೃದುಲಾ ತವರುಮನೆ ಹೇಗೆ ತಲುಪಿದಳೆಂದೇ ಗೊತ್ತಾಗಲಿಲ್ಲ. ತವರಿಗೆ ತಲುಪುತ್ತಿದ್ದಂತೆ ಎದುರಿಗೆ ತಾಯಿ ಕುಳಿತಿದ್ದರು. ತಾಯಿಯನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ರೋದಿಸತೊಡಗಿದಳು.

ಕೆಲವ ದಿನಗಳ ನಂತರ ಶರತ್‌ ಅವಳನ್ನು ಕರೆದೊಯ್ಯಲು ಬಂದನಾದರೂ, ಇದೀಗ ಅವಳಿಗೆ ಆ ಅವಿಭಕ್ತ ಕುಟುಂಬದಲ್ಲಿ ಬದುಕಲು ಸಮ್ಮತಿಯಿರಲಿಲ್ಲ. ತನ್ನ ವೈಯಕ್ತಿಕ ಜವಾಬ್ದಾರಿಗಳಿಗೆ ಕಂಕಣಬದ್ಧನಾಗಿದ್ದ ಶರತ್‌ ಕುಟುಂಬದಿಂದ ಬೇರೆಯಾಗಲು ನಿರಾಕರಿಸಿದರೆ, ಮೃದುಲಾ ಅವನೊಂದಿಗೆ ತೆರಳಲು ನಿರಾಕರಿಸಿದಳು.

ಸಂಬಂಧದ ಸೂತ್ರಗಳು ಗಾಳಿಗೋಪುರ ಆಗದಿರಲಿ ಎಂದು ಶರತ್‌ ನೇ ಮತ್ತೊಂದು ಪ್ರಯತ್ನ ಮಾಡಿದ. ಒಂದು ದಿನ ಮೃದುಲಾ ಶಾಲೆಯಿಂದ ಮನೆಗೆ ತೆರಳುತ್ತಿರುವಾಗ ಆಕಸ್ಮಿಕವಾಗಿ ಎದುರಾದ ಶರತ್‌, ಅಧಿಕಾರಯುತವಾಗಿ ಅವಳ ಮುಂಗೈ ಹಿಡಿದು, “ಬಾ ಮೃದುಲಾ, ನಮ್ಮ ಮನೆಗೆ ಹೋಗೋಣ,” ಎಂದ. ಆದರೆ ತನ್ನ ನಿರ್ಧಾರಕ್ಕೆ ಅಂಟಿಕೊಂಡ ಮೃದುಲಾ ಅವನ ಕೈ ಕೊಸರಿಕೊಂಡು ಹೊರಟುಹೋದಳು. ಅಲ್ಲಿಗೆ, ಸಂಬಂಧ ಸೂತ್ರವನ್ನು ಬಲಪಡಿಸಹೊರಟ ಶರತ್‌ ನ ಪ್ರಯತ್ನವೆಲ್ಲ ಗಾಳಿಗೋಪುರವಾಗಿಬಿಟ್ಟಿತು.

ಇದಾದ ನಂತರ ಯಾವತ್ತೂ ಶರತ್‌ ಅವಳ ಎದುರು ಕಾಣಿಸಿಕೊಳ್ಳಲಿಲ್ಲ. ಆದರೆ ಮೃದುಲಾಳಿಗೆ ಆಗಾಗ್ಗೆ ಶಾಲೆಯಿಂದ ಮನೆಗೆ ಹೋಗುವಾಗ ದಾರಿಯುದ್ದಕ್ಕೂ ತನ್ನನ್ನು ಯಾವುದೋ ಎರಡು ಕಣ್ಣುಗಳು ಹಿಂಬಾಲಿಸುತ್ತಿರುವಂತೆ ಭಾಸವಾಗುತ್ತಿತ್ತು.

ತಂದೆ, ಮಗಳ ನಿರ್ಧಾರವನ್ನು ಬಹು ದಿನಗಳರೆಗೆ ಬೆಂಬಲಿಸಲಾಗಲಿಲ್ಲ. ಮನೋವೇದನೆಯಿಂದ ಬಹುಬೇಗನೇ ತೀರಿಹೋದರು. ಹೀಗಾಗಿ ತಾಯಿ ಮಾತ್ರ ಅವಳ ಸುಖದುಃಖಗಳಿಗೆ ಆಸರೆಯಾಗಿದ್ದರು.

ಅಮ್ಮ ಮೃದುಲಾಳಿಗೆ ಸಾಕಷ್ಟು ತಿಳಿವಳಿಕೆ ಹೇಳುತ್ತಿದ್ದರು, “ಮಗಳೇ, ಒಂದು ಸಲ ಹಿಟ್ಟನ್ನು ನೀರಿನಲ್ಲಿ ಬೆರೆಸಿ ಕಲಸಿಬಿಟ್ಟರೆ ಮುಗಿಯಿತು, ಅದನ್ನೆಂದಿಗೂ ಬೇರ್ಪಡಿಸಲು ಸಾಧ್ಯವಿಲ್ಲ. ಸೊಸೆ ಕೂಡ ಹಾಗೆಯೇ, ಒಂದು ಸಲ ಗಂಡನ ಮನೆಗೆ ಕಾಲಿಟ್ಟರೆ ಮುಗಿಯಿತು, ಬೇರೆ ಮಾಡಲು ಅಸಾಧ್ಯ. ಹಳೆಯ ಕಹಿ ನೆನಪುಗಳನ್ನು ಮರೆತು ಹೊಂದಾಣಿಕೆ ಮಾಡಿಕೊಳ್ಳುವುದೇ ಬುದ್ಧಿವಂತಿಕೆ.”

“ಮೃದುಲಾ, ಗಂಡನ ಮನೆಯಲ್ಲಿ ಅತ್ತೆ ಮಾವ, ಭಾವ, ಮೈದುನ, ನಾದಿನಿ ಮುಂತಾದವರೆಲ್ಲ ವಿವಿಧ ರಂಗಿನ, ಪರಿಮಳದ ಹೂಗಳಿದ್ದಂತೆ. ಅಂತಹ ಹೂಗಳಿಂದಲೇ ಮನೆ ಎನ್ನುವ ಹೂದೋಟ ಸುಂದರವಾಗಿ ಗೋಚರಿಸುವುದು. ಈ ಸಂಬಂಧಗಳನ್ನು ಸಾಕ್ಷಾತ್‌ ಹೂಗಳನ್ನೇ ಸಲುಹಿದಂತೆ ಸಲುಹಬೇಕು. ಇಲ್ಲವಾದರೆ ಹೂಗಳೆಲ್ಲ ಮುದುಡಿ ಬದುಕು ದುರ್ಭರ ಎನಿಸತೊಡಗುತ್ತದೆ.”

ಆದರೆ ಮೃದುಲಾಳಿಗೆ ಇಂತಹ ಹಿತನುಡಿಗಳು ರುಚಿಸುತ್ತಿರಲಿಲ್ಲ. ಅವಳ ಅನಾದರ, ಅಸಡ್ಡೆಗಳನ್ನು ಕಂಡ ಅಮ್ಮ ಕೂಡ ಕೆಲವು ದಿನಗಳ ನಂತರ ತಿಳಿವಳಿಕೆ ಹೇಳುವುದನ್ನು ನಿಲ್ಲಿಸಿಬಿಟ್ಟರು. ಆನಂತರ ಹನ್ನೆರಡು ವಸಂತಗಳು ಉರುಳಿ ಹೋದದ್ದು ಅರಿವಿಗೇ ಬರಲಿಲ್ಲ. ಕೊನೆಗೊಂದು ದಿನ ಅವಳ ತಾಯಿ ಕೂಡ ವೃದ್ಧಾಪ್ಯದಿಂದಾಗಿ ಮೃದುಲಾಳನ್ನು ಒಂಟಿಯಾಗಿ ಬಿಟ್ಟು ಇಹಲೋಕ ತ್ಯಜಿಸಿಬಿಟ್ಟರು.

ಅಮ್ಮ ಬದುಕಿದ್ದಾಗ ಮೃದುಲಾಳಿಗೆ ಒಂಟಿತನದ ಬಿಸಿ ತಟ್ಟಿರಲಿಲ್ಲ. ಇದೀಗ ಅವಳು ತನ್ನ ಒಂಟಿತನದೊಂದಿಗೇ ಬಾಳಬೇಕಾಗಿ ಬಂದಿತ್ತು. ಇದೇ ಸಂದರ್ಭದಲ್ಲಿ ನಡೆದ ಆಕಸ್ಮಿಕ ಘಟನೆಯೊಂದರಿಂದಾಗಿ ಮೃದುಲಾ ತಲ್ಲಣಿಸಿಹೋದಳು.

ಅಭಿಜಿತ್‌ ಅವಳ ಶಾಲೆಯಲ್ಲಿಯೇ ಲೈಬ್ರೇರಿಯನ್‌ ಆಗಿದ್ದ. ಓದಿನ ಹವ್ಯಾಸದಿಂದಾಗಿ ಅವರಿಬ್ಬರಲ್ಲೂ ಸಹಜವಾಗಿಯೇ ಆತ್ಮೀಯ ಸ್ನೇಹ ಬೆಳೆದು ನಿಂತಿತ್ತು. ಶರತ್‌ ನಿಂದ ಬೇರೆಯಾಗಿ ಬಂದಾಗಿನಿಂದ ಅವಳನ್ನು ಮತ್ತಷ್ಟು ಕಾಳಜಿಯಿಂದ ನೋಡಿಕೊಳ್ಳತೊಡಗಿದ್ದ. ಘಾಸಿಗೊಂಡ ಮೃದುಲಾಳ ಮನಸ್ಸಿಗೆ ಅಭಿಜಿತ್‌ ನೊಂದಿಗಿನ ಒಡನಾಟ ತಂಪೆರಿದಂತಾಗಿತ್ತು. ಅವನೊಂದಿಗಿನ ಸ್ನೇಹ ಬಾಂಧವ್ಯದಲ್ಲಿ ತನ್ನ ನೋವುಗಳನ್ನು ಮರೆಯುವ ಪ್ರಯತ್ನ ಮಾಡಿದ್ದಳು.

ಆದರೆ ಒಂದು ದಿನ ಅಭಿಜಿತ್‌ ಶಾಲೆಯಲ್ಲಿ ಕುಳಿತ ಮೃದುಲಾಳನ್ನು, ಹಿಂದಿನಿಂದ ಬಂದು ಅಚಾನಕ್ಕಾಗಿ ತಬ್ಬಿಕೊಂಡುಬಿಟ್ಟ. ಅವನ ದೇಹದ ಬಿಸಿ ಸ್ಪರ್ಶದಿಂದ ದಿಗ್ಭ್ರಾಂತಳಾದ ಮೃದುಲಾ ತಕ್ಷಣ ಅವನ ಕೆನ್ನೆಗೆ ಬಾರಿಸಿಬಿಟ್ಟಳು. ಸ್ನೇಹ ಸಂಬಂಧವನ್ನು ಹೀಗೆ ದುರುಪಯೋಗ ಪಡಿಸಿಕೊಳ್ಳುವ ಯತ್ನ ಅವಳಿಗೆ ಒಂಚೂರು ಇಷ್ಟವಾಗಲಿಲ್ಲ. ಎರಡು ಮುದ್ದು ಮಕ್ಕಳ ತಂದೆಯಾಗಿ, ಮಾಧವಿಯಂತಹ ಸುಂದರ ಹೆಂಡತಿ ಇದ್ದೂ ಕೂಡ ಈ ಮನುಷ್ಯ ಇಂತಹ ನೀಚ ಕೃತ್ಯಕ್ಕೆ ಕೈ ಹಾಕಬಹುದೆಂದು ಮೃದುಲಾ ಯಾವತ್ತೂ ಯೋಚಿಸಿರಲಿಲ್ಲ.

ಕೆನ್ನೆಗೆ ಬಾರಿಸಿದ ಛಟೀರ್‌…. ಶಬ್ದ ಕೇಳಿದ ಆಯಾ ಕೆಂಪಮ್ಮ ದಡಬಡಾಯಿಸಿ ಒಳಗೆ ಓಡಿ ಬಂದಿಳು. ಮೃದುಲಾಳ ಮುಖಭಾವದಲ್ಲಿ ಸಾಂದ್ರಗೊಂಡಿದ್ದ ಆತಂಕ, ಅಸಹ್ಯ, ಇನ್ನೊಂದೆಡೆ ಅಪರಾಧಿ ಭಾವದಿಂದ ಮೂಕನಾಗಿ ನಿಂತಿರುವ ಅಭಿಜಿತ್‌ ನನ್ನು ಕಂಡು ಏನು ನಡೆದಿರಬಹುದೆಂದು ಸುಲಭವಾಗಿ ಗ್ರಹಿಸಿದಳು.

ಕೆಂಪಮ್ಮ ಆ ಶಾಲೆಯ ಅತ್ಯಂತ ಹಳೆಯ ಆಯಾ. ಮೃದುಲಾಳನ್ನು ತನ್ನ ಸ್ವಂತ ಮಗಳಂತೆಯೇ ನೋಡಿಕೊಂಡಿದ್ದಳು. ಸರಿಯಾದ ಸಮಯದಲ್ಲಿ ಅವಶ್ಯಕ ಮಾರ್ಗದರ್ಶನ ನೀಡುವುದೇ ತನ್ನ ಕರ್ತವ್ಯ ಹಾಗೂ ಜವಾಬ್ದಾರಿ ಎಂದುಕೊಂಡು ಬದುಕುತ್ತಿರುವ ವೃದ್ಧ ಜೀವ ಅದು. ಕೆಂಪಮ್ಮನಿಗೆ ಇದೆಲ್ಲ ಅರಿವಾದದ್ದು ಕಂಡು ಮೃದುಲಾ ತುಂಬ ಅಪಮಾನಿತಳಾದಂತೆ ಗೋಚರಿಸಿದಳು. ತನ್ನ ದೌರ್ಭಾಗ್ಯ ಹಾಗೂ ನಿಸ್ಸಹಾಯಕತೆಗಳನ್ನು ಕಂಡು ದುಃಖ ಉಮ್ಮಳಿಸತೊಡಗಿತ್ತು. ತಾನು ಶರತ್‌ ನಿಂದ ಬೇರ್ಪಡುತ್ತಿದ್ದಂತೆ ಪರರ ಸ್ವತ್ತಾಗಿಬಿಟ್ಟೆನೇನೊ ಎಂಬಂತೆ ಮೃದುಲಾಳಿಗೆ ಭಾಸವಾಗತೊಡಗಿತು. ಇಂತಹ ಸ್ವತ್ತವನ್ನು ಯಾರು ಯಾರೋ ಅನುಭವಿಸಲು ಹೊಂಚು ಹಾಕುತ್ತಿರುವುದನ್ನು ಕಂಡು ಮನಸ್ಸಿಗೆ ಹೇಸಿಗೆ ಎನಿಸಿತು. ಇಂತಹ ಪೈಶಾಚಿಕ ಮನೋವೃತ್ತಿ ಯುಳ್ಳವರಿಂದ ತಪ್ಪಿಸಿಕೊಳ್ಳಲೆಂದೇ ಮೃದುಲಾ ಏಕಾಂತ ಕೋಶದೊಳಗೆ ಅಡಗಿಬಿಟ್ಟಳು. ಒಂಟಿತನದ ನಿರ್ಲಿಪ್ತ ಕವಚವೊಂದನ್ನು ತನ್ನ ಸುತ್ತ ಹೆಣೆದುಕೊಂಡುಬಿಟ್ಟಳು.

ಇವೆಲ್ಲವುಗಳ ನಡುವೆಯೇ, ತಾನು ಶರತ್‌ ನನ್ನು ಧಿಕ್ಕರಿಸಿ ಎಂತಹ ತಪ್ಪು ಮಾಡಿದೆ ಎಂದು ಅವಳಿಗೆ ಈಗ ಮನವರಿಕೆಯಾಗಿತ್ತು ಹಾಗೂ ಪಶ್ಚಾತ್ತಾಪದಿಂದ ಪರಿತಪಿಸ ತೊಡಗಿದ್ದಳು. ಆದರೆ ಅಭಿಜಿತ್‌ ನ ಅನಾಗರಿಕ ವರ್ತನೆಯಿಂದಾಗಿ, ಅವಳ ಹೃದಯ ಶರತ್ ಗಾಗಿ ಇನ್ನಿಲ್ಲದಂತೆ ಹಾತೊರೆಯ ತೊಡಗಿದ್ದಂತೂ ನಿಜ. ಮನಸ್ಸು ಪದೇ ಪದೇ ಶರತ್‌ ನನ್ನು ಜ್ಞಾಪಿಸಿಕೊಂಡು ಮುಲುಗತೊಡಗಿತು. ಅವಳ ಅತೃಪ್ತ ಹೃದಯದ ಮೂಕವೇದನೆಯನ್ನು ಅದೆಷ್ಟೇ ಸಂತೈಸಿದರೂ ಶರತ್‌ ನ ಅನುರಾಗಕ್ಕಾಗಿ ಭೋರ್ಗರವ ತುಡಿತಗಳಿಗೆ ಕಡಿವಾಣ ಹಾಕಲಾಗಲಿಲ್ಲ. ಶರತ್‌ ನ ಅಗಾಧ ಪ್ರೇಮದ ನೆರಳಿನ ತಂಪು ಕದಡಿಹೋಗಿ ದಶಕವೇ ಕಳೆದಿತ್ತು.

ಶರತ್‌ ನೊಂದಿಗೆ ಸಿನಿಮಾಗಳಿಗೆ ಹೋದಾಗ, ಬಸ್‌ ನಲ್ಲಿ ತೆರಳುವಾಗ ಅಥವಾ ಹೋಟೆಲ್ ‌ಗೆ ಹೋದಾಗ, ಅದೆಷ್ಟು ಸುರಕ್ಷತೆಯ ಅನುಭೂತಿ ತನಗಿರುತ್ತಿತ್ತು ಎಂದೆಲ್ಲ ಇದೀಗ ಅವಳಿಗೆ ನೆನಪಾಗತೊಡಗಿತ್ತು. ತನ್ನೆಡೆಗಿನ ಯಾವುದೇ ಕಾಕದೃಷ್ಟಿಯನ್ನು ಶರತ್ ಸಹಿಸುತ್ತಿರಲಿಲ್ಲ. ಆಗ ಅದೆಂತಹ ಭದ್ರತಾ ಮನೋಭಾವ ನನ್ನಲ್ಲಿ ಮನೆ ಮಾಡಿತ್ತು? ಆದರೆ ಈಗ ಅಂತಹ ಸುರಕ್ಷಿತ ಬದುಕಿಗಾಗಿ ತನ್ನನ್ನು ತಾನೇ ಅಜ್ಞಾತಕೋಶದಲ್ಲಿ ಅಡಗಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಯಿತಲ್ಲ ಎಂದು ಮೌನವಾಗಿ ರೋದಿಸತೊಡಗಿದಳು.

ಗೆಳತಿಯರಿಂದಲೂ ಕೂಡ ತಾನೇ ದೂರವಾಗಿದ್ದಳು. ಅವರೆಲ್ಲ ತಂತಮ್ಮ ಮಕ್ಕಳೊಂದಿಗೆ ಗಂಡನ ಮನೆಯಲ್ಲಿ ನೆಮ್ಮದಿಯ ಸಂಸಾರ ಸಾಗಿಸುತ್ತಿರುವುದನ್ನು ಕಂಡು ತಾನು ಮಾತ್ರ ಹೀಗೆ ಒಂಟಿ ಬಾಳು ಬದುಕುತ್ತಿರುವುದನ್ನು ಶಪಿಸಿಕೊಂಡಳು. ಹಣದ ಮತ್ತಿನಲ್ಲಿ ಗಂಡ ಹಾಗೂ ಗಂಡನ ಪರಿವಾರವನ್ನೆಲ್ಲ ಧಿಕ್ಕರಿಸಿದ್ದಕ್ಕಾಗಿ ಇಂದಿಗೂ ಅವರು ನೆಮ್ಮದಿಯಿಂದ ಬದುಕಲಾಗುತ್ತಿಲ್ಲ ಎಂದು ವ್ಯಥೆಪಟ್ಟಳು. ಮೃದುಲಾ ಎಲ್ಲವನ್ನೂ ಕಳೆದುಕೊಂಡ ಬಂಜರು ಭೂಮಿಯಂತಾಗಿದ್ದಳು.

“ಏನಾಯಿತಮ್ಮ, ಹುಷಾರಾಗಿದ್ದೀಯಾ ತಾನೆ?” ಎಂದಳು ಕೆಂಪಮ್ಮ.

ಕೆಂಪಮ್ಮಳ ಧ್ವನಿ ಕೇಳಿ ಮೃದುಲಾ ತನ್ನ ಕಲ್ಪನಾಲೋಕದಿಂದ ಹೊರಬಂದು, “ಆ್ಞಂ… ಹ್ಞಾಂ….” ಎಂದಳು ಕಕ್ಕಾಬಿಕ್ಕಿಯಾದವಳಂತೆ. ತನ್ನ ಮನದ ಆಂದೋಲನಗಳು ಕೆಂಪಮ್ಮಳಿಗೆ ಗೊತ್ತಾಗಬಾರದೆಂದು ಒಂದು ಕೃತಕ ದೇಶಾವರಿ ನಗೆ ಬೀರಿದಳು.

“ಊಟಕ್ಕೆ ಬಡಿಸಲೇ?”

“ಬೇಡ, ನನಗೇಕೊ ತಿನ್ನಬೇಕು ಅನಿಸುತ್ತಿಲ್ಲ.”

“ಇನ್ನೇನು ಹಾಗಾದರೆ, ಅನ್ನಾಹಾರ ಕೂಡ ಬಿಡಬೇಕು ಎಂದುಕೊಂಡಿರುವೆಯಾ?” ಎಂದ ಕೆಂಪಮ್ಮಳ ಧ್ವನಿ ತೀವ್ರ ಮೊನಚಾಗಿತ್ತು. ಕೆಂಪಮ್ಮ ತೀಕ್ಷ್ಣವಾಗಿ ಮೃದುಲಾಳ ಮುಖಭಾವಗಳನ್ನೇ ಗಮನಿಸತೊಡಗಿದ್ದಳು. ಮೃದುಲಾ ಅವಳಿಗೆ ಏನೋ ಹೇಳೋಣ ಎಂದುಕೊಂಡಳಾದರೂ, ನಾಲಿಗೆ ಹೊರಳಲಿಲ್ಲ. ಮೃದುಲಾಳ ಮನೆ ಶರತ್‌ ನ ಮನೆಯಿಂದ ಅನತಿ ದೂರದಲ್ಲಿತ್ತು. ಕೆಂಪಮ್ಮ ಆಗಾಗ್ಗೆ ಶರತ್‌ ಹಾಗೂ ಅವನ ಕುಟುಂಬದ ಆಗುಹೋಗುಗಳ ಕುರಿತಾಗಿ ಮೃದುಲಾಳಿಗೆ ವಿಷಯ ತಿಳಿಸುತ್ತಿದ್ದಳು. ಮೀನಾ ಮತ್ತು ಮಾಲಿನಿಯರ ಮದುವೆ ಕೂಡ ನೆರವೇರಿತ್ತು. ಇದೀಗ ಶರತ್‌ ಕೂಡ ಪ್ರಮೋಷನ್‌ ಮೇಲೆ ಪ್ರಮೋಷನ್‌ ಪಡೆದು ಹಿರಿಯ ಅಧಿಕಾರಿಯಾಗಿದ್ದ. ಅವನ ತಮ್ಮನಿಗೂ ಕೂಡ ಒಂದು ಒಳ್ಳೆಯ ನೌಕರಿ ಸಿಕ್ಕಿತ್ತು. ಕಳೆದ ವಾರವಷ್ಟೇ ಅನಂತನ ಮದುವೆ ಎಂದು ಕೆಂಪಮ್ಮ ಹೇಳಿದ್ದಳು. ಮೃದುಲಾ ನಿರ್ಭಾವುಕಳಾಗಿ ಕೆಂಪಮ್ಮನ ಮಾತುಗಳನ್ನೆಲ್ಲ ಕೇಳಿಸಿಕೊಂಡಳು. ಅದನ್ನೆಲ್ಲ ಕೇಳಿ ಅವಳ ಹೃದಯದಲ್ಲೆದ್ದ ಸುನಾಮಿ ಅಲೆಗಳು ಅವಳನ್ನು ಅಲ್ಲೋಲಕಲ್ಲೋಲಗೊಳಿಸಿದ್ದವು. ಆ ರೌದ್ರಾವತಾರ ತಹಬಂದಿಗೆ ಬರಲು ಸುಮಾರು ದಿನಗಳೇ ಬೇಕಾದವು. ಶಾಲೆ ಬಿಡುವ ಗಂಟೆಯ ಶಬ್ದ ಕೇಳಿ ಬಂತು. ನಾಳೆಯಿಂದ ಶಾಲೆಗೆ ಬೇಸಿಗೆ ರಜೆ ಆರಂಭವಾಗಲಿತ್ತು. ರಜೆ ಎಂಬ ಕಾರಣದಿಂದ ಸಂತೋಷದ ಪರಮಾವಧಿಯಲ್ಲಿ ಕೇಕೆ ಹಾಕುತ್ತಿರುವ ಮಕ್ಕಳ ಕಲರವ ಶಾಲಾ ಪರಿಸರದಲ್ಲಿ ಅನುಕರಣಿಸತೊಡಗಿತ್ತು. ಕಲರವ ಕ್ರಮೇಣ ಕುಂಠಿತಗೊಂಡು, ಕೆಲವೇ ಕ್ಷಣಗಳಲ್ಲಿ ಮತ್ತದೇ ಸ್ಮಶಾನ ಮೌನ ಆವರಿಸಿಕೊಂಡಿತು.

ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಇರುವಷ್ಟು ಹೊತ್ತು ಸಮಯ ಸರಿದದ್ದೇ ಅನುಭವಕ್ಕೆ ಬರುವುದಿಲ್ಲ. ರಜೆಯಲ್ಲಿ ಒಂಟಿಯಾಗಿ ಸಮಯ ಕಳೆಯುವುದಾದರೂ ಹೇಗೆಂಬ ಅನ್ಯಮನಸ್ಕತೆಯಿಂದ ಮೃದುಲಾ ಭಾರವಾದ ಹೆಜ್ಜೆ ಹಾಕುತ್ತ ಮನೆಯತ್ತ ನಡೆಯತೊಡಗಿದಳು. ರಸ್ತೆ ಬದಿಯ ಕಾಲುದಾರಿಯಲ್ಲಿ ಮೆಲ್ಲಗೆ ಹೆಜ್ಜೆ ಹಾಕುತ್ತ ನಡೆಯುತ್ತಿದ್ದಳು. ಹೆಜ್ಜೆ ಊರುತ್ತಿದ್ದಂತೆಯೇ ಕಾಲಡಿಯ ಹುಲ್ಲು ಮುದುಡಿಕೊಳ್ಳುತ್ತಿತ್ತು. ಹೆಜ್ಜೆ ಮೇಲೆತ್ತಿದ ಕೂಡಲೇ ಮತ್ತೆ ಮೊದಲಿನಂತೆಯೇ ಪುಟಿದೇಳುತ್ತಿತ್ತು. ಹುಲ್ಲಿಗಿರುವ ಆ ಸಹನಶೀಲತೆಯನ್ನು ಕಂಡ ಮೃದುಲಾ ಮೂಕವಿಸ್ಮಿತಳಾದಳು. ದಿನಂಪ್ರತಿ ಅದೆಷ್ಟು ಜನ ತುಳಿಯುತ್ತಾರೋ ಏನೋ? ಆದರೂ ನಗುನಗುತ್ತಲೇ ಪುಟಿದೇಳುತ್ತದೆ ಈ ಗರಿಕೆ ಹುಲ್ಲು! ಆದರೆ ನಾನು ಮಾತ್ರ ದುರಹಂಕಾರದಿಂದಾಗಿ ಜೀವನದ ಅತ್ಯಮೂಲ್ಯ ಸಮಯವನ್ನೇ ಹಾಳು ಮಾಡಿಕೊಂಡೆನಲ್ಲ ಎಂದು ಪರಿತಪಿಸಿದಳು. ತನ್ನನ್ನು ತಾನು ಮಹಾ ಮೇಧಾವಿ ಎಂದುಕೊಳ್ಳುವ ಮೃದುಲಾ, ಶರತ್‌ ನೇ ಆ ಕುಟುಂಬದ ಆಧಾರಸ್ತಂಭ ಎಂಬುದನ್ನು ಅದ್ಹೇಗೆ ಅರಿಯದಾದಳು? ಅಂತಹ ಆಧಾರಸ್ತಂಭಕ್ಕೆ ಆಸರೆಯಾಗಿ ಭದ್ರ ಬುನಾದಿಯಾಗುವುದನ್ನು ಬಿಟ್ಟು, ಸಹೃದಯ ಕುಟುಂಬದ ಜೀವನಾಡಿಯನ್ನೇ ಛಿದ್ರಗೊಳಿಸಿಬಿಟ್ಟಿದ್ದಳು.

ತನ್ನದೇ ಗುಂಗಿನಲ್ಲಿ ಹೆಜ್ಜೆ ಹಾಕುತ್ತಿದ್ದ ಮೃದುಲಾಳಿಗೆ ಪ್ರಪಂಚದ ಪರಿವೆಯೇ ಇರಲಿಲ್ಲ. ಎದುರಿಗೆ ಕಾರೊಂದು ಜರ್ರನೇ…. ಬ್ರೇಕ್ ಹಾಕಿದ ಸದ್ದು ಕೇಳಿ ಬೆಚ್ಚಿಬಿದ್ದು ತಲೆಯೆತ್ತಿ ನೋಡಿದಳು. ಕಾರಿನಲ್ಲಿ ಕುಳಿತಿದ್ದ ಆಸಾಮಿಯನ್ನು ಕಂಡ ಮೇಲಂತೂ ಆಶ್ಚರ್ಯಚಕಿತಳಾದಳು. ಕಾರಿನಿಂದ ಕೆಳಗಿಳಿದ ಶರತ್‌, ಉಸಿರು ತಾಕುವಷ್ಟು ಹತ್ತಿರಕ್ಕೆ ಬಂದು ನಿಂತ. ಪ್ರಬುದ್ಧ ವಯಸ್ಕನಾದ್ದರಿಂದ ಅವನ ವ್ಯಕ್ತಿತ್ವ ಇನ್ನೂ ಆಕರ್ಷಕವಾಗಿ ಕಂಗೊಳಿಸುತ್ತಿತ್ತು.

“ಬಾ ಮೃದುಲಾ ಮನೆಗೆ ಹೋಗೋಣ. ಇನ್ನು ಮುಂದೆ ಆ ಒಂಟಿಮನೆಯಲ್ಲಿ ನೀನು ಬದುಕುವುದನ್ನು ನಾನು ಸಹಿಸಲಾರೆ,” ಎನ್ನುತ್ತಾ ಶರತ್‌ ಅವಳ ಕೈಯನ್ನು ಭದ್ರವಾಗಿ ಹಿಡಿದಾಗ, ಆ ಸ್ಪರ್ಶದಿಂದ ಅವಳ ಮೈಮನವೆಲ್ಲ ಒಮ್ಮೆಲೆ ಝೇಂಕರಿಸಿದಂತಾಯಿತು. ಕಣ್ಣಲ್ಲಿ ಆನಂದಬಾಷ್ಪದ ಅಣಿಮುತ್ತುಗಳು ಸರಸರನೇ ಹರಿಯತೊಡಗಿದವು.

“ಶರತ್‌….. ಅಮ್ಮ ತೀರಿಹೋದದ್ದು ನಿನಗ್ಹೇಗೆ ಗೊತ್ತಾಯಿತು?” ಎಂದು ಗದ್ಗದಿತ ಕಂಠದಲ್ಲೇ ವಿವಶಳಾಗಿ ಕೇಳಿದಳು.

“ನಾನು ನಿನ್ನನ್ನು ಪ್ರಾಣಕ್ಕಿಂತ ಮಿಗಿಲಾಗಿ ಪ್ರೀತಿಸುವವನು ಮೃದುಲಾ. ನಿನ್ನ ಪ್ರತಿ ಹೆಜ್ಜೆಯ ಹೋರಾಟದ ಅರಿವು ನನಗಿದೆ. ಇದೀಗ ನಾನು ನನ್ನೆಲ್ಲ ಜವಾಬ್ದಾರಿಗಳನ್ನು ಪೂರೈಸಿ ಋಣಮುಕ್ತನಾಗಿದ್ದೇನೆ. ಈಗಲಾದರೂ ನೀನು ನನ್ನೊಂದಿಗೆ ಬಾಳುವೆಯಾ?”

ದಶಕದಿಂದ ಅದುಮಿಟ್ಟುಕೊಂಡಿದ್ದ ಅವಳ ಹಮ್ಮು , ಬಿಮ್ಮು, ದುಃಖ, ದುಗುಡ, ದುಮ್ಮಾನಗಳೆಲ್ಲವೂ ಕ್ಷಣ ಮಾತ್ರದಲ್ಲಿ ಮಂಜು ಕರಗಿ ನೀರಾದಂತೆ ಕಣ್ಣಂಚಿನಿಂದ ಹರಿಯತೊಡಗಿದ್ದವು. ಅದೊಂದು ಅತ್ಯಪೂರ್ವ ಮಿಲನ ಘಳಿಗೆ. ಚಲಿಸುವ ಮೋಡಗಳು ತಬ್ಬಿಬ್ಬಾದವು. ಹಕ್ಕಿಗಳಿಂಚರ ಗಲಿಬಿಲಿಗೊಂಡಿತು. ಸುಳಿಯುವ ತಂಗಾಳಿ ಕೂಡ ಕ್ಷಣಕಾಲ ನಿಶ್ಚಲಗೊಂಡಿತು. ಮೃದುಲಾ ಮಾತ್ರ ಶರತ್‌ ನ ಬಿಗಿಯಪ್ಪುಗೆಯಲ್ಲಿ ಶಾಶ್ವತವಾಗಿ ಹುದುಗಿಹೋಗಿದ್ದಳು.

ಉರಿಯುತ್ತಿರುವ ಬಿಸಿಲೂ ಅವರಿಗೆ ಹಿತಕರವೆನಿಸಿತ್ತು. ನಿಮಿಷಗಳ ನಂತರ ಸಾವರಿಸಿಕೊಂಡ ಶರತ್‌, ಅವಳ ಕಣ್ಣೊರೆಸುತ್ತಾ, ಕಾರಿನ ಬಾಗಿಲು ಓಪನ್‌ ಮಾಡಿದ. ಮೃದುಲಾ ಕಾರಿನಲ್ಲಿ ಕುಳಿತ ನಂತರ ಇನ್ನಿಲ್ಲದ ನಿರಾಳತೆ ಅವಳನ್ನು ಆವರಿಸಿತ್ತು. ಕಾರು ಮುನ್ನಡೆದ ಸ್ವಲ್ಪ ಸಮಯದಲ್ಲೇ ಕೆಂಪಮ್ಮ ರಸ್ತೆ ಬದಿ ನಿಂತಿರುವುದು ಗೋಚರಿಸಿತು. ಅವಳ ಕಣ್ಣಾಲಿಗಳು ತೇವಗೊಂಡಿದ್ದವು. ಬಹುಕಾಲದ ನಂತರ ಈ ಅಪೂರ್ವ ಸಂಗಮ ದೃಶ್ಯ ಕಂಡು ಹನಿಗೂಡುತ್ತಿದ್ದ ಆನಂದಬಾಷ್ಪವನ್ನು ನಿಯಂತ್ರಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಳು. ಮೃದುಲಾಳಿಗೆ ಎಲ್ಲಾ ಅರ್ಥವಾಯಿತು. ಕೆಂಪಮ್ಮ ತಾಯಿಯ ಸ್ಥಾನದಲ್ಲಿ ನಿಂತು ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಡುವ ಎಲ್ಲ ವಿಧಿವಿಧಾನಗಳನ್ನು ಪೂರೈಸಿದಂತಾಗಿತ್ತು. ಹನ್ನೆರಡು ವರ್ಷಗಳ ವಿರಹ, ಅವಳಿಗೆ ಸಂಬಂಧಗಳ ಹಿರಿಮೆಯ ಪಾಠ ಕಲಿಸಿಕೊಟ್ಟಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ