ದೀಪಾವಳಿಯ ದಿನದಂದು ಮಧ್ಯಾಹ್ನ ಹೇಮಾಳ ಮನೆಯತ್ತ ಲಗುಬಗೆಯಿಂದ ಹೆಜ್ಜೆ ಹಾಕುತ್ತಿದ್ದ ರವಿರಾಜ್ ಗೆ ಸ್ನೇಹಿತ ಪ್ರಸಾದ್ ಭೇಟಿಯಾದ. ಪರಿಚಯದ ನಗು ನಕ್ಕು ಕೈ ಕುಲುಕಿದ ಪ್ರಸಾದ್, “ಗೆಳೆಯಾ ಹ್ಞೂಂ…. ಅಂತೀಯಾ, ಉಹ್ಞೂಂ ಅಂತಿಯಾ ಬೇಗ ತಿಳಿಸು ಮಹಾರಾಯ!” ಎಂದ.
“ಹ್ಞೂಂ… ಎನ್ನಬೇಕಾ? ಉಹ್ಞೂಂ ಎನ್ನಬೇಕಾ? ಎಂದು ಇನ್ನೂ ಆಲೋಚಿಸುತ್ತಿದ್ದೇನೆ,” ಎಂದ ರವಿರಾಜ್.
“ಹಾಗಲ್ಲ ರವಿ…. ಈಗಾಗ್ಲೆ ನಿನಗೆ 32 ವರ್ಷ ಆಗ್ತಾ ಬಂತು. ಮದುವೆ ಆದಮೇಲೆ ಮಕ್ಕಳು ಮರಿ ಅಂತೆಲ್ಲ ಆಗ್ತಿ. ನಿನಗೆ 60 ವರ್ಷ ತುಂಬುವಷ್ಟರಲ್ಲಿ ಮಕ್ಕಳೂ ಸೆಟಲ್ ಆದರೆ ಒಳ್ಳೆಯದಲ್ಲವೇ?”
“ನೀನು ಹೇಳುತ್ತಿರುವುದೇನೋ ಸರಿ ಕಣೋ, ಆದರೆ ನನಗೆ ಎರಡನೇ ಮದುವೆ ಮಾಡಿಕೊಳ್ಳಲು ಆಸಕ್ತಿಯೇ ಬರುತ್ತಿಲ್ಲ.”
“ಗೆಳೆಯ, ನನ್ನ ವಿಧವೆ ನಾದಿನಿ ತುಂಬಾ ಸುಂದರವಾಗಿದ್ದಾಳೆ, ಜಾಣೆ ಕೂಡ. ನನ್ನ ಮಾವನ ಮನೆಯವರೆಲ್ಲ ಇಂದು ನಮ್ಮ ಮನೆಗೆ ಬಂದಿದ್ದಾರೆ. ಅವಳೂ ಕೂಡ ಬಂದಿದ್ದಾಳೆ. ನೀನು ಒಂದ್ಸಲ ಅವರನ್ನು ಭೇಟಿಯಾದರೂ ಮಾಡು.”
“ಇನ್ನೊಂದ್ಸಲ ಭೇಟಿಯಾಗುವೆ ಬಿಡು. ಈಗ ಸ್ವಲ್ಪ ಅರ್ಜೆಂಟ್ ನಲ್ಲಿದ್ದೇನೆ, ಮತ್ತೆ ಸಿಗೋಣ,” ಎಂದು ವಿದಾಯ ಹೇಳಲು ಕೈ ಮುಂದೆ ಚಾಚಿದ.
“ಇನ್ನೂ ಹೆಚ್ಚು ದಿನ ಕಾಯುವ ತಾಳ್ಮೆ ಅವರಿಗಿಲ್ಲ ಕಣೋ.”
“ಹಾಗಾದರೆ ಬೇರೆ ಸಂಬಂಧಗಳನ್ನು ನೋಡಲು ಹೇಳು,” ಎಂದ ರವಿರಾಜ್ ಅವನ ಕೈ ಕುಲುಕಿ ಅಲ್ಲಿಂದ ಹೊರಟೇಬಿಟ್ಟ.
ಹೇಮಾಳ ಮನೆ ತಲುಪುತ್ತಿದ್ದಂತೆಯೇ ಅವಳ ಗಂಡ ಸಂದೀಪನ ಕೈಯಲ್ಲಿ 2 ಸಾವಿರ ರೂಪಾಯಿಗಳನ್ನಿಟ್ಟು, “ರಾಹುಲ್ ಮತ್ತು ಮೇಘಾರಿಗೆ ಪಟಾಕಿ ಕೊಡಿಸಿ ಹೋಗಿ,” ಎಂದ.
“ಇಷ್ಟೊಂದು ಹಣಕ್ಕೆ ಪಟಾಕಿಯೇ….?”
“ಬೇಗ ಹೊರಡಿ, ಮಕ್ಕಳು ಕಾಯ್ತಾ ಇವೆ,” ಎಂದ ರವಿರಾಜ್ ಅವನಿಗೆ ಹೆಚ್ಚು ಮಾತನಾಡುವ ಅವಕಾಶ ಕೊಡಲಿಲ್ಲ.
“ನೀವು ಬನ್ನಿ, ಹೋಗಿ ಬರೋಣ.”
“ಬೇಡ, ನಾನು ಬೆಳಗ್ಗೆಯಿಂದ ಮನೆ ಕ್ಲೀನಿಂಗ್ ಮಾಡಿ ಸುಸ್ತಾಗಿದ್ದೇನೆ. ಹೇಮಾ ಕೈಯಲ್ಲಿ ಒಂದು ಕಪ್ ಬಿಸಿ ಬಿಸಿ ಕಾಫಿ ಕುಡಿದು ಸುಧಾರಿಸಿಕೊಳ್ಳುವೆ.”
“ಸರಿ ಹಾಗಾದ್ರೆ, ನಾವು ಹೊರಡುತ್ತೇವೆ,” ಎಂದ ಸಂದೀಪನ ಧ್ವನಿಯಲ್ಲಿ ಋಣಭಾರದ ಛಾಯೆ ಸ್ಪಷ್ಟ ಗೋಚರಿಸಿತ್ತು. ಮಕ್ಕಳಿಬ್ಬರನ್ನೂ ಕರೆದುಕೊಂಡು ಹೊರಟುನಿಂತ.
ಅವರು ಮೂವರು ಹೊರಟುಹೋದ ನಂತರ ಭದ್ರವಾಗಿ ಬಾಗಿಲು ಮುಚ್ಚಿದ ಹೇಮಾ ತಿರುಗಿದಾಗ, ರವಿರಾಜ್ ಬಾಹುಗಳನ್ನು ಅಗಲಿಸಿದ. ಹೇಮಾ ಇನ್ನಿಲ್ಲದ ಪ್ರೀತಿಯಿಂದ ಮಾದಕ ನಗೆ ಬೀರುತ್ತ ಅವನ ಎದೆಯ ಮೇಲೆ ಒರಗಿಕೊಂಡಳು.
“ಇನ್ನೇನು ದೀಪಾವಳಿಯ ಮಹದಾನಂದವನ್ನು ಅನುಭವಿಸಲು ಶುರು ಮಾಡೋಣವೇ?” ಎಂದು ರವಿರಾಜ್ ಅವಳ ಕಿವಿಯಲ್ಲಿ ಪಿಸುಗುಟ್ಟಿದ.
“ಇಂತಹ ಮಹದಾನಂದ ಅನುಭವಿಸಲು ನಾನು ಯಾವಾಗಲೂ ಸಿದ್ಧಳಾಗಿರುತ್ತೇನೆ. ಅದ್ಸರಿ, ಸಾಹೇಬರು ಸುಸ್ತಾಗುವಷ್ಟು ಕೆಲಸ ಏನು ಮಾಡಿದಿರೊ ಮನೆಯಲ್ಲಿ?” ಎಂದು ಬಿನ್ನಾಣದಿಂದ ಕೇಳಿದಳು.
“ಏನೇನೂ ಮಾಡಿಲ್ಲ ಡಾರ್ಲಿಂಗ್. ಚೆನ್ನಾಗಿ ತಿಂದುಂಡು ನಿದ್ದೆ ಮಾಡಿ, ಇವತ್ತಿನ ಮಹಾನಂದವನ್ನು ಸಂಪೂರ್ಣವಾಗಿ ಅನುಭವಿಸಲು ಎಲ್ಲಾ ಎನರ್ಜಿಯನ್ನು ಕ್ರೋಢೀಕರಿಸಿಕೊಂಡು ಬಂದಿದ್ದೇನೆ.”
“ಪಟಾಕಿಗೇ ಅಂತ ಅಷ್ಟೊಂದು ಹಣ ಕೊಟ್ರಲ್ಲ, ಅಷ್ಟೊಂದು ಏಕೆ ಖರ್ಚು ಮಾಡುವುದು?”
“ರಾಹುಲ್ ಮತ್ತು ಮೇಘಾ ಸಂತೋಷವಾಗಿರುವುದನ್ನು ಕಂಡರೆ ನನಗೆ ತುಂಬಾ ಇಷ್ಟ. ಅದಕ್ಕೇ ಕೊಟ್ಟೆ.”
“ನಿಮ್ಮ ಈ ಬೆಂಬಲವೇ ನನ್ನ ಆಸ್ತಿ ರವಿರಾಜ್……”
“ನಿನ್ನ ಬಿಸಿಯಪ್ಪುಗೆಯೇ ನನ್ನ ಶಕ್ತಿ ಹೇಮಾ, ಅದಿರಲಿ, ಇವತ್ತು ನಾನು ಗಿಪ್ಟ್ ನೀಡಿದ್ದ ಸ್ಯಾರಿಯನ್ನೇ ಉಟ್ಟುಕೊಳ್ಳುವೆ ತಾನೆ?”
“ಇದೆಂತಹ ಪ್ರಶ್ನೆ? ಅದೇ ಸ್ಯಾರಿ ಉಟ್ಟುಕೊಳ್ಳುವೆ.”
“ಸರಿ, ಸದ್ಯಕ್ಕೆ ನೀನು ಉಟ್ಟಿರುವ ಸ್ಯಾರಿ ಕಿರಿಕಿರಿ ಎನಿಸುತ್ತಿದೆ.”
“ಒಹ್ಹೊಹ್ಹೊ….. ಆತುರ ನೋಡು ಎರಡೇ ದಿನಕ್ಕೆ….”
“ಆತುರವಾಗದೆ ಇನ್ನೇನು ಮತ್ತೆ! ಅದೇನು ಮೋಡಿ ಮಾಡಿರುವೆಯೋ ಏನೋ ನನ್ನ ಮೇಲೆ.”
“ಹೌದು, ನಾನೊಬ್ಬ ಮಾಯಗಾತಿ ನಿಜ. ಹ್ಯಾಪಿ ದೀಪಾವಳಿ…..” ಎನ್ನುತ್ತಾ ಹೇಮಾ ಅವನ ಕೆನ್ನೆಗೆ ಮಧುರವಾಗಿ ಮುತ್ತಿಕ್ಕಿದಳು.
ಹ್ಯಾಪಿ ದೀಪಾವಳಿ ಎಂದ ರವಿರಾಜ್ ಅವಳ ಕಡುಗೆಂಪು ಅಧರಗಳಿಗೆ ತನ್ನ ತುಟಿಗಳನ್ನು ಬೆಸೆಯುತ್ತಾ ಬಿಗಿದಪ್ಪಿಕೊಂಡು ಬೆಡ್ ರೂಮಿನತ್ತ ಕರೆದೊಯ್ದ.
“ಯೂ ಆರ್ ವೆರಿ ಬ್ಯೂಟಿಫುಲ್.”
“ಸುಳ್ಳು.”
“ಐ ಲವ್ ಯೂ.”
“ಅದೂ ಸುಳ್ಳು.”
“ಇರು, ನನ್ನ ನಿಜವಾದ ಪ್ರೀತಿಗೆ ಪುರಾವೆ ಒದಗಿಸುವೆ ನಿನಗೆ.”
ಆವೇಶಭರಿತನಾದ ರವಿರಾಜ್ ಅವಳನ್ನು ಬಿರುಸಾಗಿ ತಬ್ಬಿಕೊಂಡಾಗ ಹೇಮಾ ಮೈಮೂಳೆ ಮುರಿದಂತೆ ಹಿತವಾಗಿ ನರಳಿದಳು. ಅವನ ಬೆವರಿನ ಘಮಕ್ಕೆ ಉತ್ತೇಜಿತಳಾಗಿ ಸಂಪೂರ್ಣ ಸಹಕರಿಸತೊಡಗಿದಳು. ಕೆಲವೇ ಕ್ಷಣಗಳಲ್ಲಿ ಬೆಡ್ ರೂಮಿನ ತುಂಬ ಸುಖದ ನರಳಿಕೆಗಳು ಮಾರ್ದನಿಸತೊಡಗಿದವು.
ಸಂದೀಪ್ ಮಕ್ಕಳಿಗಾಗಿ ಪಟಾಕಿ ಖರೀದಿಸಿ ಮರಳಿ ಮನೆಗೆ ಬಂದಾಗ, ಹೇಮಾ ಸ್ನಾನ ಮಾಡಿಕೊಂಡು ಕುಳಿತಿದ್ದಳು. ಇನ್ನೇನು ರವಿರಾಜ್ ಮನೆಗೆ ಹೊರಡುವ ತಯಾರಿಯಲ್ಲಿದ್ದ.
“ಸಂಜೆ ಎಂಟು ಗಂಟೆ ಸುಮಾರಿಗೆ ಬಂದುಬಿಡುತ್ತೇನೆ. ಆಗ ಎಲ್ಲರೂ ಸೇರಿಕೊಂಡು ಒಟ್ಟಿಗೆ ಪಟಾಕಿ ಹೊಡೋಣ,” ಎನ್ನುತ್ತಾ ಪ್ರೀತಿಯಿಂದ ರಾಹುಲ್ ನ ಕೆನ್ನೆಗಳನ್ನು ಮೃದುವಾಗಿ ಚಿವುಟಿ ಬಾಗಿಲಿನತ್ತ ಹೊರಟ.
“ಈಗಲೇ ಒಂದಿಷ್ಟು ಪಟಾಕಿ ಹೊಡೆಯೋಣ ಅಂಕಲ್,” ಎಂದ ರಾಹುಲ್ ರವಿರಾಜ್ ನ ಅಪ್ಪಣೆಗಾಗಿ ಎದುರು ನೋಡಿದ.
“ಅಂಕಲ್, ಪ್ಲೀಸ್ ಹ್ಞೂಂ ಅನ್ನಿ ಅಂಕಲ್,” ಎಂದು ಗೋಗರೆದಳು ಮೇಘಾ.
“ಬೇಡ, ನಾನು ಬಂದ ನಂತರವೇ ಎಲ್ಲಾ ಸೇರಿಕೊಂಡು ಪಟಾಕಿ ಹೊಡೆಯೋಣ,” ಎಂದು ಮಕ್ಕಳಿಬ್ಬರನ್ನೂ ಸಂತೈಸಿ ಅಲ್ಲಿಂದ ಹೊರಟುಹೋದ.
ರವಿರಾಜ್ ಮನೆ ತಲುಪಿದಾಗ ಅವನ ತಮ್ಮ ತನ್ನ ಹೆಂಡತಿ ಶೀಲಾಳೊಂದಿಗೆ ದೀಪಾಲಂಕಾರದಲ್ಲಿ ಮಗ್ನನಾಗಿದ್ದ. ಅವರಿಬ್ಬರನ್ನೂ ಮಾತನಾಡಿಸದೆ ಮೌನವಾಗಿಯೇ ಒಳಹೋದ. ಒಳಹೋಗುತ್ತಿದ್ದಂತೆ ಅಮ್ಮ ಎದುರಾದಳು.
“ಎಲ್ಲಿಗೆ ಹೋಗಿದ್ದೆಯೋ?” ಎಂದಳು ಅಮ್ಮ.
“ಹೊರಗಡೆ ಹೋಗಿದ್ದೆ.”
“ನಿನ್ನ ಅಪ್ಪನಿಗೆ ಔಷಧಿ, ತರಬೇಕಿತ್ತು. ಹೊರಗಡೆ ಹೋಗುವುದಾದರೆ ಹೇಳಿ ಹೋಗಬಾರದಿತ್ತೆ?”
“ಕವಿರಾಜನಿಗೆ ಹೇಳಿ ತರಿಸಬಹುದಿತ್ತಲ್ಲ?”
“ಮನೆ ಅಲಂಕಾರದಲ್ಲಿ ಅವನಿಗೆ ಪುರಸತ್ತೆಲ್ಲಿದೆ?”
“ಸರಿ, ಸ್ವಲ್ಪ ಹೊತ್ತು ಬಿಟ್ಟು ನಾನೇ ಹೋಗಿ ತೆಗೆದುಕೊಂಡುಬರುತ್ತೇನೆ.”
“ನಾಳೆ ಅವರನ್ನು ಡಾಕ್ಟರ್ ಬಳಿಗೂ ಕರೆದೊಯ್ಯಬೇಕು.”
“ಸರಿ, ಡಾಕ್ಟರ್ ಬಳಿಗೂ ಕರೆದೊಯ್ಯವೆ. ಇನ್ನೇನಾದ್ರೂ…..?”
“ಇನ್ನೇನಿಲ್ಲ.”
“ಸರಿ, ನಾನೀಗ ಸ್ನಾನಕ್ಕೆ ಹೊರಡಬಹುದಾ?”
ರವಿರಾಜ್ ಹೇಮಾಳ ಮನೆಗೆ ಹೊರಡುವ ತರಾತುರಿಯಲ್ಲಿದ್ದ. ಅದೆಷ್ಟೇ ಅವಸರವಸರಾಗಿ ತಯಾರಾದರೂ ರಾತ್ರಿ 8 ಗಂಟೆ ಆಗಿಯೇಬಿಟ್ಟಿತು. ಇನ್ನೇನು ಅವನು ಮನೆಯಿಂದ ಹೊರಡುವ ಸಮಯಕ್ಕೆ ಸರಿಯಾಗಿ ಕವಿರಾಜನ ಹೆಂಡತಿಯ ತಮ್ಮ ಹಾಗೂ ಅವನ ಹೆಂಡತಿ ದೀಪಾವಳಿ ಶುಭಾಶಯ ಹೇಳಲು ಬಂದುಬಿಟ್ಟರು.
ತೆಪ್ಪಗೆ ರವಿರಾಜ್ ಮನೆಯಿಂದ ಹೊರನಡೆದಾಗಲೇ ಅವನ ತಾಯಿಯ ಧ್ವನಿ ಕೇಳಿಬಂತು, “ಮನೆಗೆ ಬಂದ ಅತಿಥಿಗಳನ್ನು ಸೌಜನ್ಯದಿಂದ ಮಾತನಾಡಿಸದೆ ಹೊರಹೋದರೆ ಹೇಗೆ?”
ಇದನ್ನು ಕೇಳಿ ಸಿಡಿಮಿಡಿಗೊಂಡ ರವಿರಾಜ್, “ನೀನು ಮತ್ತು ಅಪ್ಪ ಕುಳಿತು ಅವರೊಂದಿಗೆ ಮಾತನಾಡಿ,” ಎಂದ.
“ನಿನ್ನ ಅಪ್ಪನ ಆರೋಗ್ಯ ಚೆನ್ನಾಗಿಲ್ಲ. ಅವರ ನಂತರ ಮನೆಯ ಹಿರಿತನದ ಜವಾಬ್ದಾರಿ ನಿನ್ನದೇ ಅಲ್ಲವೇ? ಸೌಜನ್ಯಕ್ಕಾದರೂ ಎರಡು ನಿಮಿಷ ಅವರೊಂದಿಗೆ ಕುಳಿತು ಮಾತನಾಡಿ ಹೋಗು.”
“ಹಿರಿಮಗ ಅನ್ನೋ ಒಂದೇ ಕಾರಣಕ್ಕೆ ಎಲ್ಲಾ ಜವಾಬ್ದಾರಿಗಳನ್ನೂ ನನ್ನ ತಲೆಗೇ ಕಟ್ಟುವ ಪ್ರಯತ್ನ ಮಾಡಬೇಡಮ್ಮ. ಸದ್ಯ ನಾನು ನನ್ನ ಗೆಳೆಯರನ್ನು ನೋಡಲು ಹೋಗಬೇಕಿದೆ.”
“ಓಹೋ, ಹಾಗಾದ್ರೆ ನಾವು ನಿಮಗೆ ಅಷ್ಟೊಂದು ಭಾರ ಆಗಿಬಿಟ್ಟೆವಾ?”
“ಇಂತಹ ಕೆಲಸಕ್ಕೆ ಬಾರದ ಮಾತುಗಳನ್ನಾಡಲು ನಿನ್ನನ್ನು ಮೀರಿಸುವವರೇ ಇಲ್ಲಮ್ಮ!”
“ಹೌದು….. ಹೌದು…. ನೀನೇನು ಕಡಿಮೇನಾ? ಆ ಮಾಯಗಾತಿ ಹೇಮಾ ಮನೆಗೆ ಹೋಗುವ ಮೊದಲು ಅತಿಥಿಗಳನ್ನು ಮಾತನಾಡಿಸಿಕೊಂಡು ಹೋಗು.”
“ವಿನಾಕಾರಣ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲಮ್ಮ……”
“ಮತ್ತೇ, ಪ್ರತಿದಿನ ನಿನ್ನನ್ನು ಖುಷಿಪಡಿಸಿ ತನ್ನ ಬುಟ್ಟಿಗೆ ಹಾಕಿಕೊಳ್ಳುವವಳನ್ನು ಮಾಯಗಾತಿ ಎನ್ನದೆ ಇನ್ನೇನನ್ನಬೇಕೋ?”
“ನೋಡಮ್ಮ, ನನ್ನ ಸಂಪಾದನೆಯಲ್ಲಿ ನನಗೆ ಹೇಗೆ ಬೇಕೋ ಹಾಗೆ ಖರ್ಚು ಮಾಡುತ್ತೇನೆ. ಹಾಗೆಂದ ಮಾತ್ರಕ್ಕೆ ನಿಮಗೇನಾದರೂ ಕೊರತೆ ಆಗುವಂತೆ ಮಾಡಿದ್ದೇನಾ?”
“ಸರಿಯಪ್ಪ, ನಿನ್ನೊಂದಿಗೆ ವಾದ ಮಾಡಿ ಆಗುವ ಪ್ರಯೋಜನವಾದರೂ ಏನು? ಬಂದಿರುವವರನ್ನು 2 ನಿಮಿಷ ಕೂತು ಮಾತನಾಡಿಸಿ ನಂತರ ಅದೆಲ್ಲಿಗೆ ಹೋಗ್ತಿಯೋ ಹೋಗು. ಇಲ್ಲಾಂದ್ರೆ ಅವರಿಗೂ ಅವಮಾನ ಮಾಡಿದಂತಾಗುತ್ತೆ, ಕವಿರಾಜ್ ಮತ್ತು ಶೀಲಾರಿಗೂ ಬೇಸರವಾಗುತ್ತೆ ಅಷ್ಟೆ.”
“ಆಗಲಿ, ಐದು ನಿಮಿಷ ಕೂತು ಮಾತಾಡಿಸ್ಕೊಂಡು ಹೊರಟುಬಿಡುತ್ತೇನೆ,” ಎಂದು ಒಲ್ಲದ ಮನಸ್ಸಿನಿಂದಲೇ ಪಡಸಾಲೆಯತ್ತ ಹೊರಟ.
ಅತಿಥಿಗಳನ್ನು ಮಾತನಾಡಿಸಿಕೊಂಡು, ಅವರೊಟ್ಟಿಗೆ ಕಾಫಿ ಕುಡಿದು ಮನೆಯಿಂದ ಹೊರಡುವಷ್ಟರಲ್ಲಿ ಎಂಟೂವರೆ ಆಗ್ಹೋಯ್ತು.
ರವಿರಾಜ್ ಹೊರ ಹೋಗುತ್ತಿರುವುದನ್ನು ಕಂಡ ಶೀಲಾ, “ಭಾವ, ಪಟಾಕಿ ಹೊಡೆಯದೇ ಹಾಗೇ ಹೊರಟಿರುವಿರಲ್ಲ…?” ಎಂದಳು.
“ಸ್ವಲ್ಪ ಹೊತ್ತಿವಲ್ಲೇ ಬಂದುಬಿಡುತ್ತೇನಮ್ಮ,” ಎನ್ನುತ್ತ ಶೀಲಾಳ ಮಮತೆಭರಿತ ಮಾತಿಗೆ ತೊಳಲಾಡುತ್ತ ಸಂಕೋಚದ ಮೂಟೆಯಾಗಿ ಹೊರಟೇಬಿಟ್ಟ.
ಲಗುಬಗೆಯಿಂದ ಹೆಜ್ಜೆ ಹಾಕಿ ಹೇಮಾಳ ಮನೆ ತಲುಪಿದ ರವಿರಾಜ್ ಅಲ್ಲಿನ ದೃಶ್ಯ ಕಂಡು ನಖಶಿಖಾಂತ ಉರಿದುಬಿದ್ದ. ಅವರು ನಾಲ್ಕೂ ಜನ ಸೇರಿಕೊಂಡು ಪಟಾಕಿ ಸುಡುತ್ತ ಸಂಭ್ರಮಿಸತೊಡಗಿದ್ದರು.
“ರಾಹುಲ್, ನಾನು ಬಂದ ನಂತರವೇ ಪಟಾಕಿ ಹೊಡೆಯೋಣ ಅಂತಾ ನಿನಗೆ ಹೇಳಿರಲಿಲ್ಲವೇ?” ಎಂದು ರವಿರಾಜ್ ಮಗುವನ್ನು ಗದರಿದ.
“ನೀವ್ಯಾಕೆ ಇಷ್ಟೊಂದು ಲೇಟ್ ಆಗಿ ಬಂದಿರಿ?” ಎಂದು ಆ ಮಗು ಚೂಟಿಯಾಗಿ ಮರುಪ್ರಶ್ನೆ ಹಾಕಿತು.
“ಸ್ವಲ್ಪ ಹೊತ್ತು ಕಾಯ್ದಿದ್ದರೆ ಏನಾಗ್ತಿತ್ತು ನಿಮಗೆ?”
“ಅಂಕಲ್, ಮಿಕ್ಕವರೆಲ್ಲ ಪಟಾಕಿ ಹೊಡೆಯುತ್ತಿದ್ದಾರೆ, ಅವರನ್ನೆಲ್ಲ ಬಿಟ್ಟು ನನ್ನೊಬ್ಬನಿಗೆ ಬಯ್ಯುತ್ತೀರಲ್ಲ?” ಎಂದು ರಾಹುಲ್ ಅಳುವ ಧ್ವನಿಯಲ್ಲಿ ಹೇಳಿದ.
“ಇವತ್ತು ಹಬ್ಬದ ದಿನ. ಮಕ್ಕಳನ್ನು ಗದರಿಸಬೇಡಿ ರವಿ,” ಎನ್ನುತ್ತಾ ಮುಂದೆ ಬಂದ ಹೇಮಾ ರಾಹುಲ್ ನ ತಲೆಗೂದಲಲ್ಲಿ ಬೆರಳಾಡಿಸುತ್ತ ಭರವಸೆ ತುಂಬಿದಾಗ, ಮಗು ಆನೆ ಪಟಾಕಿ ಹೊಡೆಯಲು ಆತುರದಿಂದ ಓಡಿಹೋಯಿತು.
ಇದೀಗ ರವಿರಾಜ್ ನ ದೃಷ್ಟಿ ಸಂದೀಪ್ ನತ್ತ ತಿರುಗಿತು. ಈ ಮನುಷ್ಯ ಇಲ್ಲಿಗೆ ಏಕಾದರೂ ಬಂದನೋ ಎಂಬಂತಿತ್ತು ಅವನ ನೋಟ. ಸದಾ, ತನ್ನೆಡೆಗೆ ಗೌರವಾದರಗಳಿಂದ ನೋಡುತ್ತಿದ್ದ ಸಂದೀಪ್ ಕಣ್ಣಲ್ಲಿ ಗೋಚರಿಸುತ್ತಿದ್ದ ಅನಾದರ ಕಂಡು ಪಿಚ್ಚೆನಿಸಿತು. ಸಂದೀಪನ ಗುರಾಯಿಸುವಿಕೆಯನ್ನು ಎದುರಿಸಲಾಗದೆ ಮಕ್ಕಳ ಕಡೆಗೆ ತಿರುಗಿದ.
“ಈಗಾಗಲೇ ಬಹುತೇಕ ಎಲ್ಲಾ ಪಟಾಕಿಗಳನ್ನು ಹೊಡೆದುಬಿಟ್ಟಿದ್ದೀರಿ, ಇನ್ನೇನು ಮಾಡೋಕಾಗುತ್ತೆ?” ಎಂದ ರವಿರಾಜ್‌ತನಗಾಗುತ್ತಿರುವ ಅವಮಾನವನ್ನು ಸಹಿಸಿಕೊಳ್ಳುವ ಪ್ರಯತ್ನ ಮಾಡುತ್ತ ವಾತಾವರಣವನ್ನು ತಿಳಿಗೊಳಿಸಲು ಯತ್ನಿಸಿದ.
“ಇನ್ನೊಂದಿಷ್ಟು ಪಟಾಕಿಗಳನ್ನು ತರಿಸಬಾರದೆ?” ಎಂದು ವೈಯ್ಯಾರದಿಂದ ಹೇಳಿದ ಹೇಮಾ ರವಿರಾಜ್ ನ ಕಣ್ಣುಗಳಲ್ಲಿನ ನೋವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನಪಟ್ಟಳು.
“ಹ್ಞಾಂ…. ಹೌದು, ಇರು ನಾನೇ ಮಾರ್ಕೆಟ್ ಗೆ ಹೋಗಿ ಇನ್ನಷ್ಟು ಪಟಾಕಿ ತೆಗೆದುಕೊಂಡು ಬರುತ್ತೇನೆ,” ಎಂದ ರವಿರಾಜ್‌ಕ್ಷಣಾರ್ಧದಲ್ಲಿ ಅಲ್ಲಿಂದ ಹೊರಟೇಬಿಟ್ಟ.
ಕೂಗಿ ಕರೆದು ಅವನನ್ನು ತಡೋಣ ಎಂದುಕೊಂಡಳು ಹೇಮಾ. ಆದರೆ ರವಿರಾಜ್ ಕೋಪದಲ್ಲಿ ಕುದಿಯುತ್ತ ಅವರತ್ತ ತಿರುಗಿ ಕೂಡ ನೋಡದೆ ಹೊರಟುಹೋದ.
ರವಿರಾಜ್ ಮಾರ್ಕೆಟ್ ಗೆ ಹೋಗುವುದನ್ನು ಬಿಟ್ಟು ಮನೆಯತ್ತ ದಾಪುಗಾಲು ಹಾಕಿದ್ದ. ಅವನ ಮನಸ್ಸು ಚಿಂತಾಜನಕ ಹಂತಕ್ಕೆ ತಲುಪಿತ್ತು. ಅವನಿಗೆ ಬಾಲ್ಯದಿಂದಲೇ ಪಟಾಕಿ ಸುಡುವುದೆಂದರೆ ಭಲೇ ಹುಚ್ಚು. ಇಂದು, ಒಂದೂ ಪಟಾಕಿ ಸುಡದೇ ಇದ್ದುದರಿಂದ ಅವನ ಮನಸ್ಸು ತುಂಬಾ ಘಾಸಿಗೊಂಡಿತ್ತು.
ಮನೆಯ ಬಳಿಗೆ ಬರುತ್ತಿದ್ದಂತೆ, ಕವಿರಾಜ್ ತನ್ನ ಹೆಂಡತಿ ಶೀಲಾಳ ಕೈಹಿಡಿದು ಪಟಾಕಿಗೆ ಬೆಂಕಿ ಅಂಟಿಸುತ್ತಿದ್ದ ದೃಶ್ಯ ಕಾಣಿಸಿತು. ಬೆಂಕಿ ಅಂಟಿಸಿದ ಕ್ಷಣಮಾತ್ರದಲ್ಲಿ ದೊಡ್ಡ ಸದ್ದಿನೊಂದಿಗೆ ಸಿಡಿದಿತ್ತು ಆನೆ ಪಟಾಕಿ. ಭಯಗೊಂಡ ಶೀಲಾ ಪಕ್ಕದಲ್ಲೇ ಇದ್ದ ಗಂಡನನ್ನು ತಬ್ಬಿಕೊಂಡಳು.
ಈ ದೃಶ್ಯ ಕಂಡಕೂಡಲೇ ರವಿರಾಜನಿಗೆ ತನ್ನ ತೀರಿಹೋದ ಹೆಂಡತಿಯ ನೆನಪಾಯಿತು. ಕೇವಲ ಒಂದೇ ಒಂದು ದೀಪಾವಳಿಯನ್ನು ಆತ ಹೆಂಡತಿಯೊಂದಿಗೆ ಆಚರಿಸಿದ್ದ. ಅವತ್ತು ಹೀಗೆಯೇ ಮಮತಾ ಕೂಡ ಆನೆ ಪಟಾಕಿಯ ಢಮಾರ್…. ಸದ್ದು ಕೇಳಿ ಬೆದರಿ ಕಂಗಾಲಾಗಿ ಬಾವಲಿಯಂತೆ ತನ್ನನ್ನು ಅಪ್ಪಿಕೊಂಡಿದ್ದು ನೆನೆದು ಅವನ ಹೃದಯ ವಿಲವಿಲ ಒದ್ದಾಡಿತು. ಮಮತಾಳ ನೆನಪುಗಳು ಧುತ್ತೆಂದು ಆರಿಸಿಕೊಂಡಾಗ ಅವನ ಕಣ್ಣಾಲಿ ತುಂಬಿಬಂದವು.
ಅವನ ತಂದೆ ಮನೆಯಿಂದ ಹೊರಬಂದಿರಲಿಲ್ಲ, ಹೀಗಾಗಿ ಆತ ಕವಿರಾಜ್ ಮತ್ತು ಶೀಲಾರ ಬಳಿ ನಿಲ್ಲದೆ, ತಂದೆಯ ರೂಮಿನತ್ತ ನಡೆದ. ತಂದೆ ಮಂಚದ ಮೇಲೆ ನಿಶ್ಚೇಷ್ಟಿತರಾಗಿ ಮಲಗಿದ್ದರು.
ಬಳಿ ಬಂದ ರವಿರಾಜ್ ನನ್ನು ಕಂಡು, “ಎಲ್ಲರಿಗೂ ತಂತಮ್ಮ ಸಂಭ್ರಮದ್ದೇ ಯೋಚನೆ. ನನ್ನ ಕುರಿತು ಯಾರಿಗೂ ಚಿಂತೆಯಿಲ್ಲ. ಆ ಪಟಾಕಿ ಹೊಡೆಯುವ ಸದ್ದು ನನ್ನ ಗುಂಡಿಗೆಯನ್ನೇ ಒಡೆದು ಹಾಕುತ್ತಿದೆ,” ಎಂದರು.
“ಕಿವಿಗೆ ತುಂಬಿಕೊಳ್ಳಲು ಹತ್ತಿ ಕೊಡಲೇ?” ಎಂದು ತುಂಬಾ ಪ್ರಯಾಸದಿಂದ ತನ್ನ ಅಸಮಾಧಾನ ಹತ್ತಿಕ್ಕಿಕೊಂಡ ರವಿರಾಜ್.
“ಬೇಡ. ಆದರೆ ಈ ಜನಗಳ ಬುದ್ಧಿವಂತಿಕೆ ಕಂಡು ಬೇಸರವಾಗುತ್ತಿದೆ. ಆ ಕವಿರಾಜನಿಗಾದ್ರೂ ಬುದ್ಧಿ ಬೇಡ್ವಾ? ಅಲ್ಲಾ ಅದೆಂತಹ ದೊಡ್ಡ ಸದ್ದು ಮಾಡುವ ಪಟಾಕಿಗಳನ್ನು ತಂದಿದ್ದಾನೆ. ನಾನು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದೇನೆ ಎಂಬ ಸಣ್ಣ ತಿಳಿವಳಿಕೆಯೂ ಅನಿಗಿಲ್ಲವೆ?”
“ಅದಕ್ಯಾಕೆ ಅಪ್ಪ ಅಷ್ಟೊಂದು ಕೋಪ ಮಾಡ್ಕೋತೀಯ?”
“ಒಬ್ಬರ ಕಷ್ಟ ಇನ್ನೊಬ್ಬರಿಗೆ ಅರ್ಥವಾಗುವುದಿಲ್ಲ ಬಿಡು,” ಎಂದ ತಂದೆ ಮಮತೆಯಿಂದ ನೋಡಿಕೊಳ್ಳುತ್ತಿದ್ದ ರವಿರಾಜ್ ನ ಮೇಲೆಯೂ ಅಸಮಾಧಾನ ವ್ಯಕ್ತಪಡಿಸಿದರು.
“ಸರಿಯಾಗಿಯೇ ಹೇಳಿದ್ರಿ ಅಪ್ಪ. ಈ ಮಾತು ಎಲ್ಲರಿಗೂ ಅನ್ವಯಿಸುತ್ತೆ ಅಂದುಕೊಳ್ಳುತ್ತೇನೆ,” ಎಂದ ರವಿರಾಜ್‌ನಿಟ್ಟುಸಿರೊಂದನ್ನು ಹೊರಚೆಲ್ಲುತ್ತ, “ನಾನು ಸ್ವಲ್ಪ ಹೊತ್ತು ಟೆರೇಸ್ ಮೇಲೆ ಹೋಗಿ ಬರುತ್ತೇನೆ,” ಎಂದು ಹೇಳಿದ.
ಟೆರೇಸ್ ಮೇಲೆ ಅಸಮಾಧಾನದಿಂದ ಶತಪಥ ತುಳಿಯುತ್ತಿದ್ದ ರವಿರಾಜ್ ಕೆಳಗೆ ಕಣ್ಣು ಹಾಯಿಸಿದಾಗ, ಕವಿರಾಜ್ ಮತ್ತು ಶೀಲಾ ಇನ್ನೂ ಹೆಚ್ಚಿನ ಉತ್ಸಾಹದಿಂದ ಪಟಾಕಿ ಸುಡುತ್ತಿರುವ ದೃಶ್ಯ ಕಣ್ಣಿಗೆ ರಾಚಿತು. ಪಟಾಕಿ, ಮಿಠಾಯಿ, ಹೇಮಾಳಿಗೆಂದೇ ತೆಗೆದ ಸೀರೆ ಎಲ್ಲಾ ಸೇರಿ ಹತ್ತು ಸಾವಿರಕ್ಕಿಂತಲೂ ಹೆಚ್ಚಿಗೆ ಖರ್ಚಾಗಿದ್ದರೂ ಕೂಡ ರವಿರಾಜ್ ನ ಅಂತರಾತ್ಮಕ್ಕೆ ದೀಪಾವಳಿಯ ಸಂಭ್ರಮದ ಸುಳಿವು ಸಿಕ್ಕಿರಲಿಲ್ಲ.
ಅದೇ ಸಮಯಕ್ಕೆ ರವಿರಾಜ್ ನ ಮೊಬೈಲ್ ಸದ್ದಾಯಿತು. ಹೇಮಾ ಕಾಲ್ ಮಾಡಿದ್ದಳು, “ನೀವು ಬರಲು ಇನ್ನೂ ಎಷ್ಟು ಹೊತ್ತಾಗುತ್ತೆ?” ಎಂದು ಕೇಳಿದ ಹೇಮಾಳ ಧ್ವನಿಯಲ್ಲಿ ದಿಗಿಲು ತುಂಬಿತ್ತು.
“ನಾನು ಮತ್ತೆ ಬರೋಕಾಗಲ್ಲ,” ಎಂದ ರವಿರಾಜ್ ಧ್ವನಿಯಲ್ಲಿ ಮುನಿಸು ಸ್ಪಷ್ಟವಾಗಿ ಹೊರಹೊಮ್ಮಿತ್ತು.
“ಸುಮ್ನೆ ಹಠ ಮಾಡಬೇಡಿ ರವಿ, ಇವತ್ತು ನಮ್ಮೊಟ್ಟಿಗೇ ನೀವು ಊಟ ಮಾಡಬೇಕು.”
“ಅದ್ಯಾಕೋ….., ಊಟವನ್ನೂ ನನ್ನನ್ನು ಬಿಟ್ಟೇ ಮಾಡಬಹುದಲ್ಲ?” ಎಂದು ಕುಟುಕಿದ.
“ಏನು? ಇವತ್ತು ಹಬ್ಬದ ದಿನವೇ ನನ್ನೊಂದಿಗೆ ಕಿತ್ತಾಡಬೇಕೆಂದಿರುವಿರಾ?”
“ನನಗೆ ಯಾರೊಟ್ಟಿಗೂ ಕಿತ್ತಾಡುವ ಅವಶ್ಯಕತೆಯಿಲ್ಲ.”
“ಇಲ್ಲಿಗೆ ಬಂದಾದ್ರೂ ಬನ್ನಿ ರವಿ. ಆಮೇಲೆ ನಿಮ್ಮನ್ನು ಹೇಗೆ ಸಮಾಧಾನ ಮಾಡಬೇಕು ಅಂತ ನನಗೆ ಗೊತ್ತಿದೆ. ನೋಡಿ, ಮಕ್ಕಳೆಲ್ಲ ನಿಮಗೋಸ್ಕರ ಕಾಯ್ತಾ ಇವೆ. ಬೇಗ ಬಂದುಬಿಡಿ.”
“ಅದ್ಯಾಕೋ?”
“ನೀವೇ ಹೇಳಿ ಹೋದ್ರಲ್ಲ, ಇನ್ನೊಂದಿಷ್ಟು ಪಟಾಕಿ ತೆಗೆದುಕೊಂಡು ಬರುವೆನೆಂದು, ಪಟಾಕಿ ತರದೇ ಇದ್ದರೂ ಪರವಾಗಿಲ್ಲ, ನೀವಾದ್ರೂ ಬನ್ನಿ ರವಿ.”
ಆಗಲೇ ಕೆಳಗಿನಿಂದ ಕೂಗಿದ ಅಮ್ಮನ ಗಡಸು ಧ್ವನಿ ಕಿವಿಗೆ ಅಪ್ಪಳಿಸಿತ್ತು, “ಏಯ್ ರವಿ….. ನಿಮ್ಮಪ್ಪನ ಔಷಧಿಯನ್ನಾದ್ರೂ ತೆಗೆದುಕೊಂಡು ಬಾರಪ್ಪ. ಈಗಾಗಲೇ ಅವರ ಊಟದ ಸಮಯಾಗ್ತಾ ಬಂತು,” ಎಂದಳು.
ಆಗ ಕೆಳಗೆ ಇಣುಕಿ ನೋಡಿದ ರವಿರಾಜ್. ಶೀಲಾ ಮತ್ತು ಕವಿರಾಜ್ ಇನ್ನೂ ಬೆಸೆದುಕೊಂಡೇ ನಿಂತಿದ್ದರು. ಅವರ ಎದುರು ಹೂಕುಂಡ ಪಟಾಕಿ ಸುಂದರವಾಗಿ ಉರಿಯುತ್ತಿತ್ತು. ಹೂಕುಂಡದ ವೈವಿಧ್ಯಮಯ ರಂಗುರಂಗಿನ ಬೆಳಕಿನಲ್ಲಿ ಅವರಿಬ್ಬರ ಮುಖದ ಮೇಲೆ ಕಳೆಗಟ್ಟಿದ್ದ ಸಂಭ್ರಮ ಸಂತಸ ಹೃದ್ಗೋಚರಾಗುತ್ತಿತ್ತು. ರವಿರಾಜ್ ಅವರನ್ನು ಹೀಗೆ ಗಮನಿಸುತ್ತಿರುವಾಗಲೇ ಕವಿರಾಜ್ ಮೆಲ್ಲಗೆ ಶೀಲಾಳತ್ತ ಬಾಗಿ, ಅವಳ ಕೆನ್ನೆಗೆ ಮುತ್ತಿಕ್ಕಿದ್ದ.
“ಸಾರಿ, ನಾನು ಬರೋದಿಲ್ಲ….. ಇವತ್ತು ಮಾತ್ರವಲ್ಲ, ಇನ್ಯಾವತ್ತು ನಿನ್ನ ಬಳಿ ಸುಳಿಯುವುದಿಲ್ಲ,” ಅಚಾನಕ್ಕಾಗಿ ಅವನು ಕಠಿಣ ನಿರ್ಧಾರಕ್ಕೆ ಬಂದಿದ್ದ.
“ಇದೇನು ಹುಚ್ಚುಚ್ಚಾಗಿ ಮಾತಾಡುತ್ತಿದ್ದಿರಾ ರವಿ?” ಎಂದು ಹೇಮಾ ಆತಂಕದಿಂದ ಕೇಳಿದಳು.
“ಇದರಲ್ಲಿ ಹುಚ್ಚುತನವಿಲ್ಲ. ನನ್ನ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡೇ ಈ ಮಾತು ಹೇಳಿದ್ದೇನೆ. ಇವತ್ತು ನಾನೊಂದು ಒಳ್ಳೆಯ ಪಾಠ ಕಲಿತಂತಾಯಿತು. ಇನ್ನೊಬ್ಬರ ಖುಷಿಗೋಸ್ಕರ ನನ್ನ ಜೀವನವನ್ನೇ ಬಲಿಕೊಡಲು ನಾನು ಒಪ್ಪಲಾರೆ. ಇಂದಿನಿಂದ ನಾನೂ ಒಬ್ಬ ಸ್ವಾರ್ಥಿಯಾಗಿ ಬದುಕಲು ಕಲಿಯುತ್ತೇನೆ.
“ನನ್ನ ಮೇಲೆ ಅನುಕಂಪ ತೋರಿಸುವವರೆಲ್ಲ ನನ್ನ ಸಂಪಾದನೆಯಲ್ಲೇ ಮಜಾ ಉಡಾಯಿಸುತ್ತಿದ್ದಾರೆ. ನನ್ನ ಹಿತೈಷಿಗಳು, ಪ್ರೀತಿಪಾತ್ರರೂ ಎನಿಸಿಕೊಂಡ ನನ್ನ ಮನೆ ಸದಸ್ಯರೇ ನನ್ನ ಬಗ್ಗೆ ಕಾಳಜಿ ತೋರಿಸುತ್ತಿಲ್ಲ. ಇನ್ನು ನೀನ್ಯಾವ ಲೆಕ್ಕ? ಇದೆಲ್ಲವನ್ನೂ ಮೀರಿ ಪ್ರತಿದಿನ ನಾನು ಹಾಕುವ ಅನ್ನವನ್ನೇ ತಿಂದುಕೊಂಡು ಬಿದ್ದಿರು ಆ ನಿನ್ನ ನಪುಂಸಕ ಗಂಡ ಕೂಡ ನನ್ನನ್ನು ತಿರಸ್ಕರಿಸುವ ಮಟ್ಟಕ್ಕೆ ಬೆಳೆದುಬಿಟ್ಟಿದ್ದಾನೆ. ಇನ್ನು ಮೇಲೆ ನನಗ್ಯಾರ…..”
“ಬಾಯ್ಮುಚ್ಚಿ ರವಿ,” ಎಂದು ಏರು ದನಿಯಲ್ಲಿ ಕಿರುಚಿದ ಹೇಮಾ ರವಿರಾಜ್ ನನ್ನು ತೆಪ್ಪಗಾಗಿಸುವ ವ್ಯರ್ಥ ಪ್ರಯತ್ನ ಮಾಡಿದಳು. ಆದರೆ ರವಿರಾಜ್ ತನ್ನ ಮನಸ್ಸಿಗೆ ತೋಚಿದ್ದನ್ನೆಲ್ಲ ಮಾತನಾಡಿಯೇಬಿಟ್ಟ. ಹೇಮಾ ಏನೇನೋ ಹೇಳಿ ಸಮಜಾಯಿಶಿ ನೀಡಲು ಮುಂದಾದಳು, ಆದರೆ ಅಷ್ಟರಲ್ಲಿ ಶಾಶ್ವತ ಗುಡ್ ಬೈ ಹೇಳಿದ್ದ ರವಿರಾಜ್ ಫೋನ್ ಕಟ್ ಮಾಡಿಬಿಟ್ಟ.
ಅನಂತರ ರಭಸದಿಂದ ಮೆಟ್ಟಿಲಿಳಿದು ಕೆಳಬಂದು, ಮುಖ್ಯ ಬಾಗಿಲನತ್ತ ತೆರಳಿ ತನ್ನ ತಾಯಿಗೆ ಕೂಗಿ ಹೇಳಿದ, “ನಾನು ಅಪ್ಪನಿಗೆ ಔಷಧಿ ತರಲು ಹೊರಗಡೆ ಹೋಗ್ತಾ ಇದ್ದೀನಿ.”
“ಎಲ್ಲರೊಟ್ಟಿಗೆ ನೀನೂ ಊಟ ಮಾಡಬೇಕೆಂದಿದ್ದರೆ ಬೇಗ ಮರಳಿ ಬಾ,” ಎಂದು ಅಮ್ಮ ನಿರ್ವಿಕಾರವಾಗಿ ಪ್ರತಿಕ್ರಿಯಿಸಿದಾಗ ಅವನ ಅಸಹನೆ ಆಂದೋಲನಗಳಿಗೆ ಕಿಚ್ಚು ಹಚ್ಚಿದಂತಾಯಿತು.
ಮುಂದಿನ ಕೆಲವು ನಿಮಿಷಗಳಲ್ಲಿ ತನ್ನನ್ನು ತಾನು ಸುಧಾರಿಸಿಕೊಂಡ ರವಿರಾಜ್, ಕೋಪ ಹತ್ತಿಕ್ಕಿಕೊಂಡು ತನ್ನ ಭಾವಿ ಬದುಕಿನ ಕುರಿತಾಗಿ ಒಂದು ಮಹತ್ತರ ನಿರ್ಧಾರ ಕೈಗೊಂಡ. ಔಷಧಿ ಖರೀದಿಸಿದ ನಂತರ ತನ್ನ ಸ್ನೇಹಿತ ಪ್ರಸಾದ್ ಮನೆಗೆ ಹೋಗುವುದಾಗಿ ನಿರ್ಧರಿಸಿದ. ಅವನ ವಿಧವೆ ನಾದಿನಿಯನ್ನು ನೋಡಬೇಕೆಂದು ದೃಢಸಂಕಲ್ಪ ಮಾಡಿದ. ತನ್ನ ಬದುಕನ್ನು ಹೊಸ ದಿಶೆಯಲ್ಲಿ ಪುನರಾರಂಭಿಸಬೇಕು ಎಂದು ಅವನ ಹೃದಯ ಪದೇ ಪದೇ ಚಡಪಡಿಸತೊಡಗಿತ್ತು.
ಆಗಲೇ ಅವನ ಮೊಬೈಲ್ ಮತ್ತೆ ಸದ್ದು ಮಾಡಿತು. ಮೊಬೈಲ್ ನಲ್ಲಿ ಹೇಮಾಳ ನಂಬರ್ ಕಾಣುತ್ತಿದ್ದಂತೆಯೇ ರವಿರಾಜ್ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಬಿಟ್ಟ.