ಆಯುರ್ವೇದಂ ಆರೋಗ್ಯಂ ಆಯುಷ್ಯಂ. ಹೌದು, ಶತಶತಮಾನಗಳಿಂದ ಮನುಕುಲದ ಜೀವನದ ಭಾಗವಾಗಿರುವ, ದಶಕಗಳಿಂದಲೂ ಮನುಷ್ಯನ ಜೀವನ ಶೈಲಿ ಬದಲಾದರೂ, ಬದಲಾಗದೇ ಇರುವ ಆಯುರ್ವೇದ ಈಗ ನರಮಾನವನ ದೀರ್ಘಾಯಸ್ಸಿನ ಸತ್ಯ. ಆಧುನಿಕತೆಯ ಈ ಯುಗದಲ್ಲಿ ತಂತ್ರಜ್ಞಾನ, ವಿಜ್ಞಾನ ಅದೆಷ್ಟೇ ಬೆಳೆದರೂ ಜನರೀಗ ಪೂರ್ವಜರು ಅನುಸರಿಸುತ್ತಿದ್ದ ಆರೋಗ್ಯ ಪದ್ಧತಿಯ ಮೊರೆ ಹೋಗುತ್ತಿದ್ದಾರೆ. ಅಲೋಪತಿ ಹಿಂದೆ ಬಿದ್ದು ಹಾನಿಕಾರಕ ಮೆಡಿಸನ್ ಗೀಳು ಹಚ್ಚಿಕೊಂಡು ಅಲ್ಪಾಯುಷಿ ಆಗುವುದಕ್ಕಿಂತ ಆಯುರ್ವೇದದಲ್ಲೇ ನೆಮ್ಮದಿ ಆರೋಗ್ಯ ಕಂಡುಕೊಳ್ಳಲು ಜನ ಮುಂದಾಗಿದ್ದಾರೆ. ಹಾಗಂತ ಎಲ್ಲೆಂದರಲ್ಲಿ ಸಿಕ್ಕಸಿಕ್ಕ ಗಿಡಮೂಲಿಕೆಗಳನ್ನು ಬಳಸುವುದು, ಆಯುರ್ವೇದ ಔಷಧಿ ಸೇವನೆ ಒಳ್ಳೇದಲ್ಲ. ಹಾಗಾಗಿಯೇ ಜನರಿಗೆ ನಂಬಿಕಾರ್ಹ ಆಯುರ್ವೇದ ಚಿಕಿತ್ಸೆ ಕೊಡುತ್ತಿದೆ ಪ್ರತಿಧೀ ಆಯುರ್ವೇದ ಕೇಂದ್ರ.
ಯಾವುದೇ ದುರುದ್ದೇಶವಿಲ್ಲದೇ, ಯಾವುದೇ ಕಲಬೆರಕೆ ಇಲ್ಲದೇ ಅಪ್ಪಟ ಔಷಧೀಯ ಗಿಡಮೂಲಿಕೆಗಳ ಚಿಕಿತ್ಸೆ ಕೊಡುತ್ತಿರುವ ಪ್ರತಿಧೀ ಆಯುರ್ವೇದ ಕೇಂದ್ರದ ಬಗ್ಗೆ ಬರೆಯುವುದಕ್ಕೂ ಮುನ್ನ ಪ್ರತಿಧೀ ಹಿಂದಿನ ಶಕ್ತಿಯ ಕುರಿತು ಹೇಳಲೇಬೇಕು. ಜನರ ಆರೋಗ್ಯಕ್ಕಾಗಿ ಸದಾ ಸೇವಾನಿರತ ಪ್ರತಿಧೀ ಆಯುರ್ವೇದ ಕೇಂದ್ರವನ್ನು ಸಂಸ್ಥಾಪಿಸಿದವರೇ ಡಾ. ಪ್ರಜ್ವಲಾ ರಾಜ್. ಪ್ರಾಚೀನ ಆಯುರ್ವೇದ ವಿಜ್ಞಾನ ಕ್ಷೇತ್ರದಲ್ಲಿ ಡಾ.ಪ್ರಜ್ವಲಾ ರಾಜ್ ಅವರು ಸುಮಾರು ೨೦ ವರ್ಷಗಳ ಅನುಭವ ಹೊಂದಿದ್ದಾರೆ. ಔಷಧೀಯ ಗಿಡಮೂಲಿಕೆಗಳ ಬಗ್ಗೆ ಸಂಶೋಧನೆ, ಅಧಿಕೃತ ಆಯುರ್ವೇದ ಚಿಕಿತ್ಸೆಯನ್ನು ಒದಗಿಸುವ ಏಕೈಕ ಉದ್ದೇಶದಿಂದ ಆಸ್ಪತ್ರೆಯನ್ನು ಆರಂಭಿಸಿದರು. ವೃತ್ತಿಯಲ್ಲಿ ಆಯುರ್ವೇದ ತಜ್ಞೆಯಾಗಿರುವ ಡಾ. ಪ್ರಜ್ವಲಾ ರಾಜ್, ಕೇವಲ ತಮ್ಮ ಆಸ್ಪತ್ರೆ ಕೆಲಸಗಳಿಗೆ ಮಾತ್ರ ಸೀಮಿತರಾಗಿರದೆ, ಹಲವಾರು ಸಮಾಜಮುಖಿ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಮೂಲತಃ ಬೆಂಗಳೂರಿನವರಾದ ಆಯುರ್ವೇದ ತಜ್ಞೆ ಪ್ರಜ್ವಲಾ ರಾಜ್, ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿದರು. ತಂದೆ ಸರ್ಕಾರಿ ಆಯುರ್ವೇದ ಹಾಸ್ಪಿಟಲ್‌ನಲ್ಲಿ ಫಾರ್ಮಸಿಸ್ಟ್ ಹಾಗೂ ತಾಯಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅಸಿಸ್ಟೆಂಟ್ ಡೈರಕ್ಟರ್ ಆಗಿದ್ದವರು.
ಅತ್ತಿಗುಪ್ಪೆ, ಚಂದ್ರಾಲೇಔಟ್ ಹಾಗೂ ರಾಜಾಜಿನಗರದಲ್ಲಿ ಆಯುರ್ವೇದ ಕೇಂದ್ರಗಳನ್ನು ಸ್ಥಾಪಿಸಿರುವ ಪ್ರಜ್ವಲಾ ರಾಜ್, ಕಸ್ಟಮೈಸ್ಟ್ ಮೆಡಿಸನ್ ಕೊಡುತ್ತಾ ಬಂದಿದ್ದಾರೆ. ರೋಗಿಯ ದೇಹ ಪ್ರಕೃತಿ, ವಾತ, ಪಿತ್ತ, ಕಫ ಹಾಗೂ ಕಾಯಿಲೆಯ ಮೂಲ ಎಲ್ಲಿಂದ ಆರಂಭವಾಯಿತು ಎಂಬ ಹಿನ್ನೆಲೆ ಅವಲೋಕಿಸಿ ಅದಕ್ಕೆ ಯಾವ ಔಷಧ, ಚಿಕಿತ್ಸೆ ಸೂಕ್ತ ಎಂಬುದನ್ನು ಪರಿಗಣಿಸಿ ತಾವೇ ಖುದ್ದಾಗಿ ಔಷಧಗಳನ್ನು ತಯಾರಿಸಿ ನೀಡುತ್ತಿದ್ದಾರೆ.
ಕ್ಯಾನ್ಸರ್ ತಡೆಗೆ ಪ್ರಜ್ವಲಾ ರಾಜ್ ಪ್ರತಿಜ್ಞೆ
ಸಾಮಾನ್ಯವಾಗಿ ಎಲ್ಲಿಂದಲೋ ಆಯುರ್ವೇದ ಔಷಧಿ ಅಂತಾ ತರಿಸಿ ಕೊಡುವ ಇವತ್ತಿನ ಪರಿಸ್ಥಿತಿಯಲ್ಲಿ ತಾವೇ ಖುದ್ದು ರೋಗಕ್ಕೆ ತಕ್ಕ ಗಿಡಮೂಲಿಕೆಗಳ ಮದ್ದನ್ನ ತಯಾರಿಸಿ ಕೊಡುತ್ತಿರುವ ಡಾ. ಪ್ರಜ್ವಲಾ ರಾಜ್ ವಿಶೇಷ ಸ್ಥಾನದಲ್ಲಿ ನಿಲ್ಲುತ್ತಾರೆ. ಅಷ್ಟೇ ಅಲ್ಲ, ಕ್ಯಾನ್ಸರ್ ತಡೆಗಟ್ಟಲು ಡಾ. ಪ್ರಜ್ವಲಾ ರಾಜ್ ಪಣ ತೊಟ್ಟಿದ್ದಾರೆ. ಅದಕ್ಕಾಗಿ ಈಗಾಗಲೇ ಅಧ್ಯಯನ ಕೂಡ ನಡೆಸಿದ್ದಾರೆ.
“ಗೃಹಶೋಭಾ” ಜೊತೆ ಮಾತನಾಡಿದ ಡಾ. ಪ್ರಜ್ವಲಾ ರಾಜ್, “ಇತ್ತೀಚೆಗೆ ಬ್ರೆಸ್ಟ್ ಕ್ಯಾನ್ಸರ್ ಮತ್ತು ಸರ್ವೇಕಲ್ ಕ್ಯಾನ್ಸರ್‌ನಲ್ಲಿ ಇಂಡಿಯಾ ನಂಬರ್ ಒನ್ ಎನಿಸಿಕೊಂಡಿದೆ. ಕ್ಯಾನ್ಸರ್ ಕಾಯಿಲೆಗೆ ಏನೇನು ಚಿಕಿತ್ಸೆ ನೀಡಬಹುದು ಎಂಬುದರ ಬಗ್ಗೆ ಬಹಳಷ್ಟು ಸಂಶೋಧನೆಗಳನ್ನು ನಡೆಸಿದ್ದೇನೆ ಹಾಗೂ ಅಧ್ಯಯನವನ್ನೂ ಮಾಡಿದ್ದೇನೆ. ನಮ್ಮದೇ ಆದ ಫಾರ್ಮುಲೇಶನ್ ಕೂಡಾ ಮಾಡಿಕೊಂಡಿದ್ದೇವೆ. ಒಂದು ಪ್ರಿವೆಂಟಿವ್ ಮೆಜರ್, ಮತ್ತೊಂದು ಟ್ರೀಟ್‌ಮೆಂಟ್ ಮೆಜರ್. ಮೊದಲನೆಯದು ಕ್ಯಾನ್ಸರ್ ಅಥವಾ ಯಾವುದೇ ಕಾಯಿಲೆಗಳು ಬರದಂತೆ ಜೀವನವನ್ನು ಹೇಗೆ ನಡೆಸಬೇಕು, ಆರೋಗ್ಯವಂತ ವ್ಯಕ್ತಿ ತನ್ನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದಾದರೆ, ಮತ್ತೊಂದು, ಕಾಯಿಲೆ ಬಂದ ಮೇಲೆ ಹೇಗೆ ಜೀವನ ಸಾಗಿಸಬೇಕು ಎಂಬುದಾಗಿದೆ. ಇದರಿಂದ ರೋಗ ಲಕ್ಷಣಗಳು ಕಡಿಮೆಯಾಗುತ್ತಾ ಬರುತ್ತವೆ. ಔಷಧಗಳ ಜೊತೆ, ಯೋಗ, ಧ್ಯಾನ, ಮ್ಯೂಸಿಕ್ ಥೆರಪಿ, ಕೌನ್ಸಿಲಿಂಗ್, ಅಕ್ಯುಪ್ರಶರ್, ಅಕ್ಯುಪಂಚರ್‌ನ್ನೂ ಕೂಡಾ ನೀಡಲಾಗುತ್ತದೆ. ಇದರಲ್ಲಿ ಕ್ಯಾನ್ಸರ್ ರೋಗಿ ಮತ್ತು ರೋಗಿಯ ಕುಟುಂಬದವರಿಗೂ ಸಲಹೆ ಸೂಚನೆಗಳನ್ನು ನೀಡಲಾಗುತ್ತದೆ” ಎನ್ನುತ್ತಾರೆ.
ಸಮಾಜಮುಖಿ, ನಿಸ್ವಾರ್ಥ ಸೇವೆಯಲ್ಲಿ ಪ್ರತಿಧೀ ಫೌಂಡೇಶನ್ :
ಡಾ. ಪ್ರಜ್ವಲಾ ರಾಜ್ ಅವರು, ಸಮಾನಮನಸ್ಕ ಸ್ನೇಹಿತರಿಂದ ಪ್ರತಿಧೀ ಫೌಂಡೇಶನ್ ಎನ್‌ಜಿಓ ಅನ್ನು ಸಹ ನಡೆಸುತ್ತಿದ್ದಾರೆ. ಈ ಫೌಂಡೇಶನ್ ಕ್ಯಾನ್ಸರ್ ರೋಗಿಗಳ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ.
ಫೌಂಡೇಶನ್ ಮೂಲಕ ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಶಾಲೆಗಳು, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ತೆರಳಿ ಕ್ಯಾನ್ಸರ್ ತಡೆಗಟ್ಟುವಿಕೆ, ಕ್ಯಾನ್ಸರ್ ಆರಂಭಿಕ ಪತ್ತೆ ಮತ್ತು ರೋಗನಿರ್ಣಯದ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಆ ಎಲ್ಲಾ ಮಾಹಿತಿ ಪಡೆದ ನಂತರ, ಅಲ್ಲಿನ ಜನರಿಗೆ ಸ್ಕ್ರೀನಿಂಗ್ ಮಾಡಲಾಗುತ್ತದೆ. ಇದಕ್ಕಾಗಿಯೇ ಒಂದು ತಂಡವಿದ್ದು, ಉಚಿತ ತಪಾಸಣೆ ನಡೆಸಲಾಗುತ್ತದೆ. ಕ್ಯಾನ್ಸರ್ ಲಕ್ಷಣಗಳು ಕಂಡುಬಂದರೆ, ಅವರನ್ನು ಉನ್ನತ ಕೇಂದ್ರಗಳಿಗೆ ಕರೆತರಲಾಗುತ್ತದೆ. ರಕ್ತ ಪರೀಕ್ಷೆ, ಸ್ಕ್ಯಾನಿಂಗ್ ಮಾಡಿಸಿ, ಡಯಾಕ್ನಸಿಸ್ ಮಾಡಲಾಗುತ್ತದೆ. ಅವರಿಗೆ ಸರ್ಜರಿ ಬೇಕಿದ್ದರೆ, ಬೆಂಗಳೂರಿನ ರಾಮಯ್ಯ ಕಾಲೇಜು, ತುಮಕೂರಿನ ಶ್ರೀದೇವಿ ಕಾಲೇಜು, ಸಿದ್ಧಾರ್ಥ ಕಾಲೇಜು, ಕೋಲಾರದಲ್ಲಿ ದೇವರಾಜ್ ಅರಸ್ ಕಾಲೇಜು ಹೀಗೆ ಕೆಲವು ಜಿಲ್ಲೆಯ ಪ್ರಮುಖ ಕಾಲೇಜುಗಳೊಂದಿಗೆ ಟೈಅಪ್ ಮಾಡಿಕೊಳ್ಳಲಾಗಿದ್ದು, ಆಯಾ ಜಿಲ್ಲೆಯ ರೋಗಿಗಳಿಗೆ ಅಲ್ಲಿಯೇ ಚಿಕಿತ್ಸೆ ದೊರೆಯುವಂತೆ ಮಾಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆಗಾಗಿ ರೋಗಿಗಳನ್ನು ಉನ್ನತ ಕೇಂದ್ರಗಳಿಗೆ ಕಳುಹಿಸಿಕೊಡುವುದು ಹಾಗೂ ಅಗತ್ಯವಿದ್ದರೆ ಹಣಕಾಸಿನ ನೆರವನ್ನೂ ಕೂಡ ಫೌಂಡೇಶನ್ ಮೂಲಕ ನೀಡಲಾಗುತ್ತದೆ.
ಮೃತ ಕ್ಯಾನ್ಸರ್‌ಪೀಡಿತರ ಮಕ್ಕಳ ದತ್ತು:
ಡಾ. ಪ್ರಜ್ವಲಾ ರಾಜ್ ಜನರಿಗೆ ಅಚ್ಚುಮೆಚ್ಚು. ಅದಕ್ಕೆ ಕಾರಣ ಅವರ ನಿಸ್ವಾರ್ಥ ಸೇವೆ. ಹಣದ ಹಿಂದೆನೇ ಹೋಗುವ ಇವತ್ತಿನ ಆಸ್ಪತ್ರೆಗಳ ಯುಗದಲ್ಲಿ ತಮ್ಮ ಫೌಂಡೇಶನ್ ಮೂಲಕ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಸಮಾಜಮುಖಿ ಕಾರ್ಯ ನಿಜಕ್ಕೂ ಶ್ಲಾಘನೀಯ. ಕ್ಯಾನ್ಸರ್ ಪೀಡಿತ ವ್ಯಕ್ತಿ ಮೃತಪಟ್ಟರೆ, ಆ ವ್ಯಕ್ತಿಯ ಮಕ್ಕಳ ಜವಾಬ್ದಾರಿಯನ್ನು ಫೌಂಡೇಶನ್ ವಹಿಸಿಕೊಳ್ಳುತ್ತಾರೆ. ಆ ಕುಟುಂಬದ ಮಕ್ಕಳನ್ನು ದತ್ತು ತೆಗೆದುಕೊಂಡು ಆರೈಕೆ ಮಾಡುವುದರ ಜೊತೆಗೆ ಅವರ ಶಿಕ್ಷಣ ಮತ್ತು ಆರೋಗ್ಯದ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಾರೆ. ಜೊತೆಗೆ ಮಕ್ಕಳಿಗೆ ಉದ್ಯೋಗ ಆಧಾರಿತ ಕೋರ್ಸ್ ಗಳನ್ನು ಸಹ ಒದಗಿಸಲಾಗುತ್ತದೆ. ಅಚ್ಚರಿ ಅಂದರೆ, ಪ್ರತಿಧೀ ಫೌಂಡೇಶನ್ ಈಗಾಗಲೇ ಸುಮಾರು ೮೯ ಮಕ್ಕಳನ್ನು ದತ್ತು ತೆಗೆದುಕೊಂಡಿದೆ.
ಅಬಲೆಯರಿಗೆ ಆರ್ಥಿಕ ಸಬಲತೆ:
ಕುಟುಂಬಕ್ಕೆ ಆಧಾರವಾಗಿದ್ದ ಕ್ಯಾನ್ಸರ್ ಪೀಡಿತ ವ್ಯಕ್ತಿ ಮರಣ ಹೊಂದಿದ್ದರೆ, ಕುಟುಂಬದ ಮಹಿಳಾ ಸದಸ್ಯೆಯರಿಗೆ ಆರ್ಥಿಕವಾಗಿ ಸ್ವತಂತ್ರವಾಗಿರಲು ಅನುವು ಮಾಡಿಕೊಡಲಾಗುತ್ತಿದೆ. ಅವರಿಗೆ ಟೈಲರಿಂಗ್, ಕಂಪ್ಯೂಟರ್ ತರಬೇತಿ, ಬ್ಯೂಟಿಷಿಯನ್, ಹೀಗೆ ವಿವಿಧ ಉಚಿತ ತರಬೇತಿಗಳನ್ನು ನೀಡಿ ಮಹಿಳೆಯರು ಆರ್ಥಿಕವಾಗಿ ಸಬಲರಾಗುವಂತೆ ಮಾಡುವಲ್ಲಿ ಸಹಾಯಹಸ್ತ ಚಾಚಲಾಗುತ್ತಿದೆ. ಇದರಿಂದಾಗಿ ಅವರು ಆರ್ಥಿಕವಾಗಿ ಸದೃಢರಾಗಿ, ತಮ್ಮ ಬದುಕನ್ನು ತಾವು ನೋಡಿಕೊಳ್ಳಬಹುದು ಎಂಬುದು ಫೌಂಡೇಶನ್ ಉದ್ದೇಶ ಎನ್ನುತ್ತಾರೆ ಡಾ. ಪ್ರಜ್ವಲಾ ರಾಜ್.
ಸಮಾಜ ಸೇವೆಯಲ್ಲಿ ಸದಾ ಮುಂದು :
ಬೆಂಗಳೂರಿನ ಚಂದ್ರಾ ಲೇಔಟ್ ಎಲೈಟ್‌ನ ಲಯನ್ಸ್ ಕ್ಲಬ್‌ನ ಸ್ಥಾಪಕ ಅಧ್ಯಕ್ಷರೂ ಆಗಿರುವ ಡಾ. ಪ್ರಜ್ವಲಾ ರಾಜ್, ಕರ್ನಾಟಕ ರಾಜ್ಯ ಎನ್‌ಐಎಂಎ, ವೈದ್ಯರ ಸಂಘದ ಮಹಿಳಾ ವಿಭಾಗದ ಖಜಾಂಚಿಯಾಗಿ, ಹಿಂದುಳಿದವರ ಮಹಿಳಾ ಕಲ್ಯಾಣ ಸಂಘ, ಅಹಲ್ಯಾಬಾಯಿ ಹೋಳ್ಕರ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ಗಣ್ಯ ವ್ಯಕ್ತಿಗಳ ಪುಸ್ತಕಗಳನ್ನು ಪ್ರಕಟಿಸುವ ಟ್ರಸ್ಟ್ನ ಜನಮನ ಪ್ರತಿಷ್ಠಾನದ ಕಾರ್ಯದರ್ಶಿಯಾಗಿ ಸಮಾಜದ ವಿವಿಧ ಸ್ತರಗಳಲ್ಲಿ ಸದಭಿರುಚಿ ಕಾರ್ಯಕ್ರಮಗಳ ಮೂಲಕ ಲವಲವಿಕೆಯಿಂದ ಪಾಲ್ಗೊಳ್ಳುತ್ತಿದ್ದು ಮಹಿಳೆಯರಿಗೆ ಒಂದು ರೀತಿಯ ಸ್ಪೂರ್ತಿಯಾಗಿದ್ದಾರೆ.
ಗಮನ ಸೆಳೆದಿತ್ತು “ಸ್ವಸ್ಥ ಕರ್ನಾಟಕ“
ಪ್ರತಿಧಿ ಆಯುರ್ವೇದಿಕ್ ಮೆಡಿಕಲ್ ಸೆಂಟರ್ ಇತ್ತೀಚೆಗೆ ಸ್ವಸ್ಥ ಕರ್ನಾಟಕ ಮೆಗಾ ಹೆಲ್ತ್ ಎಕ್ಸ್‌ಪೋ 2024 ಅನ್ನು ಆಯೋಜಿಸಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಎರಡು ದಿನ ನಡೆದ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಿದ್ದರು. ಈ ವೇಳೆ ಉಚಿತ ಆರೋಗ್ಯ ತಪಾಸಣೆ, ವಿಚಾರ ಸಂಕಿರಣ, ಉದ್ಯೋಗ ಮೇಳ ಸೇರಿದಂತೆ ಹಲವಾರು ಕಾರ್ಯಕ್ರಮಗಳು ನಡೆದವು.
ಅನಾರೋಗ್ಯ ತಡೆಗಟ್ಟುವಿಕೆ, ಜೀವನದ ಗುಣಮಟ್ಟ ಸುಧಾರಣೆ, ಮರಣದ ಪ್ರಮಾಣ ನಿಯಂತ್ರಣ, ಆರ್ಥಿಕ ಉತ್ಪಾದಕತೆಯನ್ನು ಬೆಂಬಲಿಸಲು ಎಕ್ಸ್ ಪೋ ಆಯೋಜಿಸಲಾಗಿತ್ತು. ವಿಶೇಷವಾಗಿ ಸಾವಿರಕ್ಕೂ ಹೆಚ್ಚು ಉನ್ನತ ಸಲಹೆಗಾರರು, ಸೂಪರ್ ಸ್ಪೆಷಾಲಿಟಿ ವೈದ್ಯರು, ೧೫೦ಕ್ಕೂ ಹೆಚ್ಚು ವಿಶ್ವ ದರ್ಜೆಯ ಪ್ರಮುಖ ಆಸ್ಪತ್ರೆಗಳು, ಡಯಾಗ್ನೋಸ್ಟಿಕ್ಸ್, ಫಾರ್ಮಾ ಕಂಪನಿಗಳು, ವೈದ್ಯಕೀಯ ಉಪಕರಣಗಳ ಕಂಪನಿಗಳು ಮತ್ತು ಉದ್ಯಮದ ಇತರರು ಎಕ್ಸ್ ಪೋದಲ್ಲಿ ಪಾಲ್ಗೊಂಡಿದ್ದರು. ಸುಮಾರು ೧೦ ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಸ್ವಸ್ಥ ಕರ್ನಾಟಕಕ್ಕೆ ಆಗಮಿಸಿ ಉಚಿತ ಸಲಹೆ-ಸೇವೆ ಪಡೆದರು.
ಮತ್ತೊಂದು ವಿಶೇಷವೆಂದರೆ ಆರೋಗ್ಯ ಕ್ಷೇತ್ರದಲ್ಲಿ ಇತ್ತೀಚಿನ ಬೆಳವಣಿಗೆ ಕುರಿತು ಶೈಕ್ಷಣಿಕ ಸಮ್ಮೇಳನಗಳಿಗೆ ಇದು ವೇದಿಕೆಯಾಗಿತ್ತು. ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆ / ಸಾಂಪ್ರದಾಯಿಕ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಯ ವಿರುದ್ಧ ರೋಬೋಟ್ ನೆರವಿನ ಶಸ್ತ್ರಚಿಕಿತ್ಸೆಯ ಅನುಕೂಲಗಳು ಮತ್ತು ಅನಾನುಕೂಲಗಳು, ಆರೋಗ್ಯ ರಕ್ಷಣೆಯಲ್ಲಿ ರೊಬೊಟಿಕ್ಸ್ ನ ಸವಾಲುಗಳ ಕುರಿತು ಚರ್ಚೆಗಳು ನಡೆದವು. ಕ್ಯಾನ್ಸರ್ ಸ್ಕ್ರೀನಿಂಗ್ ಮತ್ತು ತಡೆಗಟ್ಟುವಿಕೆ, ವಯಸ್ಕರಿಗೆ ಆರಂಭಿಕ ಕ್ಯಾನ್ಸರ್, ಸೆಲ್ಯುಲಾರ್ ಚಿಕಿತ್ಸೆಗಳು, ನಾವೆಲ್ ವ್ಯವಸ್ಥಿತ ಚಿಕಿತ್ಸೆಗಳು, ಶಸ್ತ್ರಚಿಕಿತ್ಸೆ ಮತ್ತು ವಿಕಿರಣ ಆಂಕೊಲಾಜಿ ನವೀಕರಣಗಳು ಸೇರಿದಂತೆ ಕ್ಯಾನ್ಸರ್ ಸಂಶೋಧನೆ ಮತ್ತು ಚಿಕಿತ್ಸೆಯಲ್ಲಿ ಹೊಸ ಆವಿಷ್ಕಾರಗಳು, ಸಪೋರ್ಟಿವ್ ಕೇರ್, ಜಾಗತಿಕ ಆರೋಗ್ಯ ರಕ್ಷಣೆ ಮತ್ತು ಕಾರ್ಯತಂತ್ರಗಳಲ್ಲಿ ನಾವೀನ್ಯತೆಗಳು; ಆಸ್ಪತ್ರೆಯ ಅಭಿವೃದ್ಧಿಗಾಗಿ ಕಾರ್ಯಾಚರಣೆಗಳು, ನೀತಿಗಳು ಮತ್ತು ಅಭ್ಯಾಸಗಳು, ಮಾನಸಿಕ ಆರೋಗ್ಯ ಮತ್ತು ಸಾರ್ವಜನಿಕ ಆರೋಗ್ಯದ ನಡುವಿನ ವ್ಯತ್ಯಾಸ, ಆರೋಗ್ಯ ಸೇವೆಗಳಲ್ಲಿ ಮಾನಸಿಕ ಆರೋಗ್ಯವನ್ನು ಸಂಯೋಜಿಸುವ ಸವಾಲುಗಳು, ಗಂಡು ಮತ್ತು ಹೆಣ್ಣು ಬಂಜೆತನ: ವಿಧಗಳು, ಕಾರಣಗಳು, ಲಕ್ಷಣಗಳು, ರೋಗನಿರ್ಣಯ ಮತ್ತು ಚಿಕಿತ್ಸೆ, ಸರ್ಕಾರದ ಆರೋಗ್ಯ ಯೋಜನೆಗಳು, ಕ್ಯಾನ್ಸರ್ ಗೆದ್ದವರ ಕಥೆಗಳು ಸೇರಿದಂತೆ ಹಲವಾರು ವಿಷಯಗಳ ಕುರಿತು ವಿಚಾರ ಸಂಕಿರಣಗಳು ನಡೆದಿದ್ದರಿಂದ ಆರೋಗ್ಯ ಕುರಿತ ಅಷ್ಟೂ ಮಾಹಿತಿ ಪಡೆದ ಸಾರ್ವಜನಿಕರು ಸಂತುಷ್ಟಗೊಳ್ಳುವ ಮೂಲಕ ಸ್ವಸ್ಥ ಕರ್ನಾಟಕವೂ ಸಂಪನ್ನಗೊಂಡಿತು. ಹೀಗೆ ನಿತ್ಯ ನಿರಂತರವಾಗಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ವಿಶೇಷ ಮತ್ತು ವಿಭಿನ್ನ ಸೇವೆ ಮೂಲಕ ಸಾರ್ವಜನಿಕ ಬದುಕಿಗೇ ತಮ್ಮ ವೃತ್ತಿಜೀವನವನ್ನು ಮುಡುಪಾಗಿಟ್ಟಿರುವ ಡಾ. ಪ್ರಜ್ವಲಾ ರಾಜ್ ಅವರು ಮಹಿಳಾ ಮುಂಚೂಣಿ ಸಾಧಕಿಯರಲ್ಲಿ ಒಬ್ಬರು ಎಂದರೆ ತಪ್ಪಾಗಲಿಕ್ಕಿಲ್ಲ ಮತ್ತು ಅತಿಶಯೋಕ್ತಿ ಎಂದೆನಿಸುವುದಿಲ್ಲ.
- ಸುನೀತಾ ಬಿ ಎಂ
******************************
ಕೋಟ್:
“ಮಕ್ಕಳಿಗೆ ಶಿಕ್ಷಣ ಹಾಗೂ ಆರೋಗ್ಯ ಬಹಳ ಮುಖ್ಯ. ಅವರಿಗೆ ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸ ತಪ್ಪಬಾರದು. ವಿದ್ಯಾಭ್ಯಾಸ ತಪ್ಪಬಾರದು ಎಂದರೆ, ಅವರ ಆರೋಗ್ಯ ಉತ್ತಮವಾಗಿರಬೇಕು. ಅವರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಿರಬೇಕು.”
ಡಾ. ಪ್ರಜ್ವಲಾ ರಾಜ್
ಸಂಸ್ಥಾಪಕಿ
ಪ್ರತಿಧೀ ಫೌಂಡೇಶನ್
********************************