ಅರ್ಥಾತ್ ಎಷ್ಟು ಆಹಾರವನ್ನು ತಿಂದರೂ, ಅದರಿಂದ ದೇಹಕ್ಕೆ ಪುಷ್ಟಿ ಸಿಗುವುದು, ನಿನ್ನ ದೇಹ ಜೀರ್ಣಿಸಿಕೊಳ್ಳುವಷ್ಟು ಮಾತ್ರ. ಅಧಿಕವಾಗಿ ತಿಂದದ್ದೆಲ್ಲ ಜೀರ್ಣವಾಗದೇ, ಮಲರೂಪದಲ್ಲಿ ಕಸವಾಗಿ ಹೊರಬರುತ್ತದೆ. ಎಷ್ಟು ಸಂಪತ್ತನ್ನು ಗಳಿಸಿದರೂ, ಹಸಿವಾದಾಗ ನೀನು ಸೇವಿಸಲಾಗುವುದು ಕೇವಲ ಒಂದು ಮುಷ್ಠಿ ಅನ್ನ ತಾನೆ. ಕವಿ ಡಾ. ಡಿ.ವಿ. ಗುಂಡಪ್ಪ ಅವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಆಹಾರದ ಅಗತ್ಯವೆಷ್ಟು ಎಂಬುದರ ಕುರಿತಾಗಿ ಎಷ್ಟು ಸೊಗಸಾಗಿ ಹೇಳಿದ್ದಾರೆ.
"ಊಟ ಬಲ್ಲವನಿಗೆ ರೋಗವಿಲ್ಲ" ಎಂಬ ಗಾದೆ ಮಾತಿದೆ. ನಮ್ಮ ಸನಾತನ ಧರ್ಮದ ಪ್ರಕಾರ ಊಟ ಎಂಬುದು ಒಂದು ಯಜ್ಞದಂತೆ. ಯಜ್ಞದಲ್ಲಿ ಹವಿಸ್ಸನ್ನು ಅಗ್ನಿಗೆ ಆಹುತಿಯಾಗಿ ಕೊಟ್ಟು ದೇವತೆಗಳನ್ನು ಸುಪ್ರೀತರನ್ನಾಗಿಸಿ ತಮಗೆ ಬೇಕಾದ ಶ್ರೇಯಸ್ಸನ್ನು ಪಡೆಯುವಂತೆ, ಪರಮಾತ್ಮ ಸ್ವರೂಪಿಯಾದ ಜಠರದ ಅಗ್ನಿಗೆ ಆಹುತಿಯನ್ನಾಗಿ ಆಹಾರವನ್ನು ಸೇವಿಸಿ ನಮ್ಮ ದೇಹಕ್ಕೆ ಬೇಕಾದ ಪುಷ್ಠಿಯನ್ನು ಪಡೆಯುತ್ತೇವೆ.
ಒಬ್ಬ ವ್ಯಕ್ತಿ ತಾನು ಸೇವಿಸುವ ಆಹಾರ ಹೇಗಿರಬೇಕು? ಎಷ್ಟು ಮಿತವಾಗಿ ಸೇವಿಸಬೇಕು ಎಂಬುದನ್ನು ಯೋಚಿಸುವುದಿಲ್ಲ... ಬದಲಿಗೆ ತಾನೆಷ್ಟು ತಿಂದೆ.. ಎಷ್ಟು ರುಚಿಕರವಾಗಿದ್ದನ್ನು ತಿಂದೆ.. ಎಷ್ಟು ಮೌಲ್ಯದ ಆಹಾರ ಸೇವಿಸಿದೆ ಎಂಬುದನ್ನು ಮಾತ್ರ ಆಲೋಚಿಸುತ್ತಾನೆ. ಆದರೆ, ಹೋಟೆಲ್‌ಗಳಲ್ಲಾಗಲಿ ಅಥವಾ ಮನೆಯಲ್ಲಾಗಲಿ ತಾನು ನಿತ್ಯ ತೆಗೆದುಕೊಳ್ಳುವ ಆಹಾರದಲ್ಲಿ ಬಳಸುವ ವಸ್ತುಗಳು ಎಷ್ಟು ವಿಷಕಾರಿ ಮತ್ತು ಅಪಾಯಕಾರಿ ಎಂಬುದು ಆತನಿಗೆ ಅರಿವು ಇರುವುದಿಲ್ಲ. ಅದರಲ್ಲೂ ಅಡುಗೆಗೆ ಬಳಸುವ ಎಣ್ಣೆ ಆರೋಗ್ಯಕ್ಕೆ ಎಷ್ಟು ಮಹತ್ವದ ಪಾತ್ರ ವಹಿಸುತ್ತದೆ? ಅಡುಗೆಯ ಅಂದ ಹೆಚ್ಚಿಸುವ.. ಅಡುಗೆಗೆ ಪರಿಮಳ ನೀಡುವ ಈ ಎಣ್ಣೆ ಯಾವುದಿದ್ದರೆ ಒಳ್ಳೇದು..? ಅದನ್ನು ಎಷ್ಟು ಪ್ರಮಾಣದಲ್ಲಿ ಬಳಸಬೇಕು..? ನಮ್ಮ ಆರೋಗ್ಯದ ಮೇಲೆ ಅಡುಗೆ ಎಣ್ಣೆ ಹೇಗೆ ಪರಿಣಾಮ ಬೀರುತ್ತದೆ..? ಎಂಬುದನ್ನು ತಿಳಿಯಲೇಬೇಕು.
ಅತ್ಯಂತ ವೇಗವಾಗಿ ಓಡುತ್ತಿರುವ ಈ ಕಲರ್‌ಫುಲ್ ಕಾಲದಲ್ಲಿ ಒಳ್ಳೆಯ ಅಡುಗೆ ಎಣ್ಣೆ ಯಾವುದು ಎಂದು ಹುಡುಕುತ್ತಾ ಹೋದರೆ, ಮಾರುಕಟ್ಟೆಯಲ್ಲಿ ತರಹೇವಾರಿ ಬ್ರಾಂಡ್ಗಳು ಲಭ್ಯವಾಗುತ್ತವೆ. ರಿಫೈನ್ಡ್.. ಡಬಲ್ ರಿಫೈನ್ಡ್.. ವಿಟಮಿನ್‌ಯುಕ್ತ.. ಹೀಗೆ ನಾನಾ ಟ್ಯಾಗ್‌ಲೈನ್ ಹೊಂದಿರುವ ಪಾಕೆಟ್‌ಗಳಲ್ಲಿ ಜನರನ್ನು ಆಕರ್ಷಿಸುತ್ತವೆ. ಸೂರ್ಯಕಾಂತಿ, ಕಡಲೇಕಾಯಿ, ರೈಸ್, ಆಲಿವ್, ಎಳ್ಳು, ಪಾಮ್ ಆಯಿಲ್ ಹೀಗೆ ನಾನಾ ಬಗೆಯ ಅಡುಗೆ ಎಣ್ಣೆಗಳು ಜನರನ್ನು ತಲುಪುತ್ತಿವೆ. ವಿಶೇಷವೆಂದರೆ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಒಂದೊಂದು ಭಾಗದ ಜನ ಒಂದೊಂದು ವಿಧದ ಎಣ್ಣೆಯನ್ನು ಮೆಚ್ಚಿಕೊಂಡಿದ್ದಾರೆ. ಇಲ್ಲಿ ಪ್ರತಿಯೊಂದು ಎಣ್ಣೆಯು ವಿಶಿಷ್ಟವಾದ ಕೊಬ್ಬಿನಾಂಶ ಮತ್ತು ವಿಶಿಷ್ಟ ಗುಣಗಳನ್ನು ಹೊಂದಿರುತ್ತವೆ.
ಸಾಮಾನ್ಯವಾಗಿ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳನ್ನು (ಎಂಯುಎಫ್‌ಎ) ಹೊಂದಿರುವ ತೈಲಗಳನ್ನು ಬಳಸಬೇಕು. ಏಕೆಂದರೆ ಎಂಯುಎಫ್‌ಎ ಉತ್ತಮ ಕೊಬ್ಬು. ಅಲ್ಲದೇ ಅನ್‌ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳಾದ ಪಿಯುಎಫ್‌ಎ ಒಮೆಗಾ-3 ಮತ್ತು ಒಮೆಗಾ-6 ಕೊಬ್ಬಿನಾಮ್ಲಗಳಾಗಿವೆ. ಇವು ನಮ್ಮ ದೇಹಕ್ಕೆ ತುಂಬಾ ಅವಶ್ಯಕ. ಒಬ್ಬ ಆರೋಗ್ಯಕರ ವ್ಯಕ್ತಿಗೆ ಎಲ್ಲಾ ರೀತಿಯ ಪೋಷಕಾಂಶಗಳು ಬೇಕು. ಅವೆಲ್ಲವೂ ನಿರ್ದಿಷ್ಟ ಪ್ರಮಾಣದಲ್ಲಿ ಇರಬೇಕು. ಮ್ಯಾಕ್ರೋ ಮತ್ತು ಮೈಕ್ರೋ ಎಂಬ ಪೋಷಕಾಂಶಗಳಿವೆ. ಅವುಗಳಲ್ಲಿ ಮ್ಯಾಕ್ರೋ ನ್ಯೂಟ್ರಿಷಿಯನ್ಸ್ ಎಂದರೆ ಕಾರ್ಬೋಹೈಡ್ರೇಟ್ಸ್, ಪ್ರೋಟೀನ್ಸ್ ಮತ್ತು ಫ್ಯಾಟ್ ಬರುತ್ತವೆ. ಹಾಗಾಗಿ ಫ್ಯಾಟ್ಸ್ ಮತ್ತು ಆಯಿಲ್ ಬಗ್ಗೆ ನೋಡುತ್ತಾ ಹೋದಾಗ ನಮ್ಮ ದೇಹಕ್ಕೆ ಕೊಬ್ಬಿನಾಂಶದ ಅವಶ್ಯಕತೆ ಎಲ್ಲರಿಗೂ ಇದೆ. ಒಂದು ವೇಳೆ ಇದರ ಕೊರತೆ ಉಂಟಾದಲ್ಲಿ ದೇಹದ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳಲಿದೆ. ಹೀಗಾಗಿ ವಿಟಮಿನ್ಸ್ ಉತ್ಪತ್ತಿಯಾಗಲು ಫ್ಯಾಟ್ ಇರಲೇಬೇಕು.