ವಿಶ್ವ ಚೆಸ್​ನಲ್ಲಿ ಭಾರತದ ಪ್ರಾಬಲ್ಯಕ್ಕೆ ಮತ್ತೊಂದು ಹೆಮ್ಮೆಯ ಗರಿ ಸೇರ್ಪಡೆಗೊಂಡಿದೆ. ಭಾರತದ ಗ್ರಾಂಡ್‌ಮಾಸ್ಟರ್‌ ಕೊನೆರು ಹಂಪಿ ಫಿಡೆ ಮಹಿಳಾ ರ್‍ಯಾಪಿಡ್ ಚೆಸ್‌ನಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಒಂದಕ್ಕಿಂತ ಹೆಚ್ಚು ಬಾರಿ ಟ್ರೋಫಿ ಗೆದ್ದ ವಿಶ್ವದ 2ನೇ ಚೆಸ್ ತಾರೆ ಎನಿಸಿಕೊಂಡಿದ್ದಾರೆ.

ಆಂಧ್ರಪ್ರದೇಶ ವಿಜಯವಾಡದ 37 ವರ್ಷದ ಕೊನೆರು ಹಂಪಿ ಭಾನುವಾರ ಇಂಡೋನೇಷ್ಯಾದ ಐರಿನ್ ಸುಕಂದರ್ ಅವರನ್ನು ಮಣಿಸುವ ಮೂಲಕ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಈ ಮೊದಲು ಅವರು 2019 ರಲ್ಲಿ ಜಾರ್ಜಿಯಾದಲ್ಲಿ ನಡೆದ ವಿಶ್ವ ರ್‍ಯಾಪಿಡ್ ಚೆಸ್‌ ಚಾಂಪಿಯನ್​ಷಿಪ್​ನಲ್ಲಿ ಪ್ರಶಸ್ತಿ ಗೆದ್ದಿದ್ದರು. ಈಗ ಎರಡು ಬಾರಿ ಪ್ರಶಸ್ತಿ ಗೆದ್ದ ಎರಡನೇ ಆಟಗಾರ್ತಿ ಎನ್ನುವ ಖ್ಯಾತಿಗೆ ಭಾಜನರಾಗಿದ್ದಾರೆ. ಈ ಸಾಧನೆಗೈದ ಮೊದಲ ಆಟಗಾರ್ತಿ ಚೀನಾದ ಜು ವೆನ್​ಜುನ್ ಅವರ ಸಾಲಿಗೆ ಇದೀಗ ಸೇರಿಕೊಂಡಿದ್ದಾರೆ.

ಕೈತಪ್ಪಿದ್ದ ಕಿರೀಟ!

ಆರಂಭಿಕ ಸುತ್ತಿನಲ್ಲಿ ಸೋತಿದ್ದ ಕೊನೆರು ಹಂಪಿ, ಒಟ್ಟು 11 ಸುತ್ತಿನ ಪಂದ್ಯದಲ್ಲಿ ಇಂಡೋನೇಷ್ಯಾದ ಐರಿನ್ ಸುಕಂದರ್ ಅವರನ್ನು ಸೋಲಿಸುವ ಮೂಲಕ 8.5 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರು. ಕಳೆದ ಬಾರಿ ಕೈತಪ್ಪಿದ್ದ ಕಿರೀಟವನ್ನು ಇದೀಗ ತನ್ನದಾಗಿಸಿಕೊಂಡಿದ್ದಾರೆ. ಭಾರತದ ಹರಿಕಾ ದ್ರೋಣವಲ್ಲಿ ಸೇರಿದಂತೆ ಒಟ್ಟು ಮಂದಿ ತಲಾ 8 ಅಂಕದೊಂದಿಗೆ ಜಂಟಿ 2ನೇ ಸ್ಥಾನ ಹಂಚಿಕೊಂಡರು.

ಸೆಪ್ಟೆಂಬರ್​ನಲ್ಲಿ ನಡೆದ ಬುಡಾಪೆಸ್ಟ್ ಚೆಸ್ ಒಲಿಂಪಿಯಾಡ್ ಮಹಿಳಾ ತಂಡದಿಂದ ಹೊರಗುಳಿದಿದ್ದ ಭಾರತದ ನಂ.1 ಆಟಗಾರ್ತಿ ಕೊನೆರು ಹಂಪಿ, ಯಾವುದೇ ನಿರೀಕ್ಷೆಗಳಿಲ್ಲದೆ ಟೂರ್ನಿಯಲ್ಲಿ 10ನೇ ಶ್ರೇಯಾಂಕಿತೆಯಾಗಿ ಭಾಗವಹಿಸಿದ್ದರು. ಮೊದಲ ಸುತ್ತಿನಲ್ಲಿ ಸೋಲಿನ ಆಘಾತ ಎದುರಿಸಿದ್ದ ಅವರು, ಮೊದಲ 4 ಸುತ್ತಿನ ನಂತರ 2.5 ಅಂಕ ಕಲೆಹಾಕಿದರು. ಬಳಿಕ ಸತತ 4 ಸುತ್ತಿನಲ್ಲಿ ಗೆದ್ದು, ಅಂತಿಮ ಪಂದ್ಯದಲ್ಲಿ ಕಪ್ಪು ಕಾಯಿಗಳೊಂದಿಗೆ ಆಡುವ ಸವಾಲು ಪಡೆದರು. ಕೊನೆಯದಾಗಿ ಸವಾಲು ಜಯಿಸಿದ ಹಂಪಿ, ಅಂಕಪಟ್ಟಿಯಲ್ಲಿ ಒಟ್ಟು 11ರಲ್ಲಿ 8.5 ಕಲೆಹಾಕಿ ಅಗ್ರಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.

ನಡೆದು ಬಂದ ದಾರಿ:

2011ರ ವಿಶ್ವ ಚೆಸ್ ಚಾಂಪಿಯನ್​ಷಿಪ್​ನಲ್ಲಿ ರನ್ನರ್ ಅಪ್ ಆಗುವುದರೊಂದಿಗೆ ಮೊದಲ ಬಾರಿಗೆ ಪೋಡಿಯಂ ಏರಿದ ಕೊನೆರು ಹಂಪಿ, ಬಳಿಕ 2012ರಲ್ಲಿ ಮಾಸ್ಕೋದಲ್ಲಿ ನಡೆದ ರ್‍ಯಾಪಿಡ್ ಚೆಸ್‌ ಟೂರ್ನಿಯಲ್ಲಿ ಕಂಚಿನ ಪದಕ ಪಡೆದು ತೃಪ್ತಿಪಟ್ಟುಕೊಂಡಿದ್ದರು. 2019ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದರು. 2022ರ ಆವೃತ್ತಿಯ ಬ್ಲಿಟ್ಜ್ ವಿಭಾಗದ ಸ್ಪರ್ಧೆಯಲ್ಲಿ ಮತ್ತು ರನ್ನರ್ ಅಪ್ ಸ್ಥಾನಕ್ಕೆ ಸಮಾಧಾನ ಕಂಡುಕೊಂಡಿದ್ದರು. ಜತೆಗೆ 2020ರ ಒಲಿಂಪಿಯಾಡ್ ಗೆದ್ದ ಮಹಿಳಾ ತಂಡದ ಸದಸ್ಯೆಯೂ ಆಗಿದ್ದರು.

ಕೊನೆರು ಹಂಪಿ ಅವರ ಇಂದಿನ ಸಾಧನೆಯಿಂದ ಭಾರತ ಚೆಸ್ ನಲ್ಲಿ ಇನ್ನಷ್ಟು ಸಾಧನೆ ಮಾಡಿದೆ. ಇದಕ್ಕೂ ಮುನ್ನ ಡಿ ಗುಕೇಶ್ ಅವರು ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ ಸಿಂಗಾಪುರದಲ್ಲಿ ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗಿದ್ದರು. ಸೆಪ್ಟೆಂಬರ್‌ನಲ್ಲಿ ಬುಡಾಪೆಸ್ಟ್‌ನಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ನಲ್ಲಿ ಮುಕ್ತ ಮತ್ತು ಮಹಿಳಾ ವಿಭಾಗಗಳಲ್ಲಿ ದೇಶವು ತನ್ನ ಮೊದಲ ಚಿನ್ನದ ಪದಕಗಳನ್ನು ಗೆದ್ದುಕೊಂಡಿತ್ತು.

ಗೆಲುವು ಅನಿರೀಕ್ಷಿತ:

“ಈ ಗೆಲುವು ನನಗೆ ತುಂಬಾ ಅನಿರೀಕ್ಷಿತವಾಗಿದೆ. ಏಕೆಂದರೆ, ಇಡೀ ವರ್ಷ ನಾನು ಸಾಕಷ್ಟು ಕಷ್ಟಪಟ್ಟಿದ್ದೇನೆ. ಇದಕ್ಕೂ ಹಿಂದೆ ನಡೆದ ಪಂದ್ಯದಲ್ಲಿ ಸೋಲನ್ನೂ ಅನುಭವಿಸಿದ್ದೆ. ಹಲವು ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರಲು ಸಹ ತನ್ನಿಂದ ಸಾಧ್ಯವಾಗಲಿಲ್ಲ. ಈ ಗೆಲುವು ಬಹಳ ವಿಶೇಷವಾಗಿದೆ. ಇಂದಿನ ಗೆಲುವು ಚೆಸ್​ನಲ್ಲಿ ಮತ್ತೆ ಮತ್ತೆ ತಾನು ತೊಡಗಿಕೊಳ್ಳಲು ಪ್ರೇರೇಪಣೆ ನೀಡಿದೆ ಎಂದಿದ್ದಾರೆ,” ಕೊನೆರು ಹಂಪಿ.

koneru hampy -1

ಅಭಿನಂದನೆ:

ನೂತನ ವಿಶ್ವ ಚಾಂಪಿಯನ್ ಕೊನೆರು ಹಂಪಿ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಆಂಧ್ರಪ್ರದೇಶ ಸಿ ಎಂ ಚಂದ್ರಬಾಬು ನಾಯ್ಡು, ಡಿಸಿಎಂ ಪವನ್ ಕಲ್ಯಾಣ್ ಸೇರಿದಂತೆ ದೇಶಾದ್ಯಂತ ಕ್ರೀಡಾಭಿಮಾನಿಗಳು ಅಭಿನಂದನೆಗಳ ಸುರಿಮಳೆ ಹರಿಸಿದ್ದು, ಕೊನೆರು ಹಂಪಿ ನೀನು ದೇಶದ ಕೀರ್ತಿ ಎಂದು ಶ್ಲಾಘಿಸಿದ್ದಾರೆ,

ಕೋಟ್ಯಂತರ ಜನರಿಗೆ ಸ್ಫೂರ್ತಿ:

“ಎರಡನೇ ಬಾರಿ ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಕೊನೆರು ಹಂಪಿ ಅವರ ಗೆಲುವು ಐತಿಹಾಸಿಕವಾಗಿದೆ. ನಿಮ್ಮ ದಿಟ್ಟತನ, ಬದ್ಧತೆ, ಪ್ರತಿಭೆ ಕೋಟ್ಯಂತರ ಭಾರತೀಯರಿಗೆ ಮಾದರಿಯಾಗಿದ್ದು, ಅದ್ಭುತ ಸಾಧನೆ ಮಾಡಿದ್ದೀರಿ. ಚೆಸ್ ನಲ್ಲಿ ಇದು ಭಾರತದ ಸಮಯ. ವಿಶ್ವ ಚಾಂಪಿಯನ್ ಗುಕೇಶ್ ನಮ್ಮಲ್ಲಿದ್ದಾರೆ. ಈಗ ರ್‍ಯಾಪಿಡ್‌ ಪಂದ್ಯದಲ್ಲಿ ಎರಡನೇ ವಿಶ್ವ ಚಾಂಪಿಯನ್‌ಶಿಪ್ ಗೆದ್ದಿದ್ದೇವೆ. ಭಾರತೀಯ ಚೆಸ್‌ ಪ್ರತಿಭೆಗಳಿಗೆ ಇದು ಪ್ರೇರಣೆಯಾಗಲಿದೆ.” ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್​ನಲ್ಲಿ  ಕೊಂಡಾಡಿದ್ದಾರೆ.

—-

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ