ಅರ್ಥಾತ್ ಎಷ್ಟು ಆಹಾರವನ್ನು ತಿಂದರೂ, ಅದರಿಂದ ದೇಹಕ್ಕೆ ಪುಷ್ಟಿ ಸಿಗುವುದು, ನಿನ್ನ ದೇಹ ಜೀರ್ಣಿಸಿಕೊಳ್ಳುವಷ್ಟು ಮಾತ್ರ. ಅಧಿಕವಾಗಿ ತಿಂದದ್ದೆಲ್ಲ ಜೀರ್ಣವಾಗದೇ, ಮಲರೂಪದಲ್ಲಿ ಕಸವಾಗಿ ಹೊರಬರುತ್ತದೆ. ಎಷ್ಟು ಸಂಪತ್ತನ್ನು ಗಳಿಸಿದರೂ, ಹಸಿವಾದಾಗ ನೀನು ಸೇವಿಸಲಾಗುವುದು ಕೇವಲ ಒಂದು ಮುಷ್ಠಿ ಅನ್ನ ತಾನೆ. ಕವಿ ಡಾ. ಡಿ.ವಿ. ಗುಂಡಪ್ಪ ಅವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಆಹಾರದ ಅಗತ್ಯವೆಷ್ಟು ಎಂಬುದರ ಕುರಿತಾಗಿ ಎಷ್ಟು ಸೊಗಸಾಗಿ ಹೇಳಿದ್ದಾರೆ.

“ಊಟ ಬಲ್ಲವನಿಗೆ ರೋಗವಿಲ್ಲ” ಎಂಬ ಗಾದೆ ಮಾತಿದೆ. ನಮ್ಮ ಸನಾತನ ಧರ್ಮದ ಪ್ರಕಾರ ಊಟ ಎಂಬುದು ಒಂದು ಯಜ್ಞದಂತೆ. ಯಜ್ಞದಲ್ಲಿ ಹವಿಸ್ಸನ್ನು ಅಗ್ನಿಗೆ ಆಹುತಿಯಾಗಿ ಕೊಟ್ಟು ದೇವತೆಗಳನ್ನು ಸುಪ್ರೀತರನ್ನಾಗಿಸಿ ತಮಗೆ ಬೇಕಾದ ಶ್ರೇಯಸ್ಸನ್ನು ಪಡೆಯುವಂತೆ, ಪರಮಾತ್ಮ ಸ್ವರೂಪಿಯಾದ ಜಠರದ ಅಗ್ನಿಗೆ ಆಹುತಿಯನ್ನಾಗಿ ಆಹಾರವನ್ನು ಸೇವಿಸಿ ನಮ್ಮ ದೇಹಕ್ಕೆ ಬೇಕಾದ ಪುಷ್ಠಿಯನ್ನು ಪಡೆಯುತ್ತೇವೆ.

ಒಬ್ಬ ವ್ಯಕ್ತಿ ತಾನು ಸೇವಿಸುವ ಆಹಾರ ಹೇಗಿರಬೇಕು? ಎಷ್ಟು ಮಿತವಾಗಿ ಸೇವಿಸಬೇಕು ಎಂಬುದನ್ನು ಯೋಚಿಸುವುದಿಲ್ಲ… ಬದಲಿಗೆ ತಾನೆಷ್ಟು ತಿಂದೆ.. ಎಷ್ಟು ರುಚಿಕರವಾಗಿದ್ದನ್ನು ತಿಂದೆ.. ಎಷ್ಟು ಮೌಲ್ಯದ ಆಹಾರ ಸೇವಿಸಿದೆ ಎಂಬುದನ್ನು ಮಾತ್ರ ಆಲೋಚಿಸುತ್ತಾನೆ. ಆದರೆ, ಹೋಟೆಲ್‌ಗಳಲ್ಲಾಗಲಿ ಅಥವಾ ಮನೆಯಲ್ಲಾಗಲಿ ತಾನು ನಿತ್ಯ ತೆಗೆದುಕೊಳ್ಳುವ ಆಹಾರದಲ್ಲಿ ಬಳಸುವ ವಸ್ತುಗಳು ಎಷ್ಟು ವಿಷಕಾರಿ ಮತ್ತು ಅಪಾಯಕಾರಿ ಎಂಬುದು ಆತನಿಗೆ ಅರಿವು ಇರುವುದಿಲ್ಲ. ಅದರಲ್ಲೂ ಅಡುಗೆಗೆ ಬಳಸುವ ಎಣ್ಣೆ ಆರೋಗ್ಯಕ್ಕೆ ಎಷ್ಟು ಮಹತ್ವದ ಪಾತ್ರ ವಹಿಸುತ್ತದೆ? ಅಡುಗೆಯ ಅಂದ ಹೆಚ್ಚಿಸುವ.. ಅಡುಗೆಗೆ ಪರಿಮಳ ನೀಡುವ ಈ ಎಣ್ಣೆ ಯಾವುದಿದ್ದರೆ ಒಳ್ಳೇದು..? ಅದನ್ನು ಎಷ್ಟು ಪ್ರಮಾಣದಲ್ಲಿ ಬಳಸಬೇಕು..? ನಮ್ಮ ಆರೋಗ್ಯದ ಮೇಲೆ ಅಡುಗೆ ಎಣ್ಣೆ ಹೇಗೆ ಪರಿಣಾಮ ಬೀರುತ್ತದೆ..? ಎಂಬುದನ್ನು ತಿಳಿಯಲೇಬೇಕು.

coconut12

ಅತ್ಯಂತ ವೇಗವಾಗಿ ಓಡುತ್ತಿರುವ ಈ ಕಲರ್‌ಫುಲ್ ಕಾಲದಲ್ಲಿ ಒಳ್ಳೆಯ ಅಡುಗೆ ಎಣ್ಣೆ ಯಾವುದು ಎಂದು ಹುಡುಕುತ್ತಾ ಹೋದರೆ, ಮಾರುಕಟ್ಟೆಯಲ್ಲಿ ತರಹೇವಾರಿ ಬ್ರಾಂಡ್ಗಳು ಲಭ್ಯವಾಗುತ್ತವೆ. ರಿಫೈನ್ಡ್.. ಡಬಲ್ ರಿಫೈನ್ಡ್.. ವಿಟಮಿನ್‌ಯುಕ್ತ.. ಹೀಗೆ ನಾನಾ ಟ್ಯಾಗ್‌ಲೈನ್ ಹೊಂದಿರುವ ಪಾಕೆಟ್‌ಗಳಲ್ಲಿ ಜನರನ್ನು ಆಕರ್ಷಿಸುತ್ತವೆ. ಸೂರ್ಯಕಾಂತಿ, ಕಡಲೇಕಾಯಿ, ರೈಸ್, ಆಲಿವ್, ಎಳ್ಳು, ಪಾಮ್ ಆಯಿಲ್ ಹೀಗೆ ನಾನಾ ಬಗೆಯ ಅಡುಗೆ ಎಣ್ಣೆಗಳು ಜನರನ್ನು ತಲುಪುತ್ತಿವೆ. ವಿಶೇಷವೆಂದರೆ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಒಂದೊಂದು ಭಾಗದ ಜನ ಒಂದೊಂದು ವಿಧದ ಎಣ್ಣೆಯನ್ನು ಮೆಚ್ಚಿಕೊಂಡಿದ್ದಾರೆ. ಇಲ್ಲಿ ಪ್ರತಿಯೊಂದು ಎಣ್ಣೆಯು ವಿಶಿಷ್ಟವಾದ ಕೊಬ್ಬಿನಾಂಶ ಮತ್ತು ವಿಶಿಷ್ಟ ಗುಣಗಳನ್ನು ಹೊಂದಿರುತ್ತವೆ.

ಸಾಮಾನ್ಯವಾಗಿ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳನ್ನು (ಎಂಯುಎಫ್‌ಎ) ಹೊಂದಿರುವ ತೈಲಗಳನ್ನು ಬಳಸಬೇಕು. ಏಕೆಂದರೆ ಎಂಯುಎಫ್‌ಎ ಉತ್ತಮ ಕೊಬ್ಬು. ಅಲ್ಲದೇ ಅನ್‌ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳಾದ ಪಿಯುಎಫ್‌ಎ ಒಮೆಗಾ-3 ಮತ್ತು ಒಮೆಗಾ-6 ಕೊಬ್ಬಿನಾಮ್ಲಗಳಾಗಿವೆ. ಇವು ನಮ್ಮ ದೇಹಕ್ಕೆ ತುಂಬಾ ಅವಶ್ಯಕ. ಒಬ್ಬ ಆರೋಗ್ಯಕರ ವ್ಯಕ್ತಿಗೆ ಎಲ್ಲಾ ರೀತಿಯ ಪೋಷಕಾಂಶಗಳು ಬೇಕು. ಅವೆಲ್ಲವೂ ನಿರ್ದಿಷ್ಟ ಪ್ರಮಾಣದಲ್ಲಿ ಇರಬೇಕು. ಮ್ಯಾಕ್ರೋ ಮತ್ತು ಮೈಕ್ರೋ ಎಂಬ ಪೋಷಕಾಂಶಗಳಿವೆ. ಅವುಗಳಲ್ಲಿ ಮ್ಯಾಕ್ರೋ ನ್ಯೂಟ್ರಿಷಿಯನ್ಸ್ ಎಂದರೆ ಕಾರ್ಬೋಹೈಡ್ರೇಟ್ಸ್, ಪ್ರೋಟೀನ್ಸ್ ಮತ್ತು ಫ್ಯಾಟ್ ಬರುತ್ತವೆ. ಹಾಗಾಗಿ ಫ್ಯಾಟ್ಸ್ ಮತ್ತು ಆಯಿಲ್ ಬಗ್ಗೆ ನೋಡುತ್ತಾ ಹೋದಾಗ ನಮ್ಮ ದೇಹಕ್ಕೆ ಕೊಬ್ಬಿನಾಂಶದ ಅವಶ್ಯಕತೆ ಎಲ್ಲರಿಗೂ ಇದೆ. ಒಂದು ವೇಳೆ ಇದರ ಕೊರತೆ ಉಂಟಾದಲ್ಲಿ ದೇಹದ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳಲಿದೆ. ಹೀಗಾಗಿ ವಿಟಮಿನ್ಸ್ ಉತ್ಪತ್ತಿಯಾಗಲು ಫ್ಯಾಟ್ ಇರಲೇಬೇಕು.

ಅಡುಗೆಗೆ ಯಾವ ಎಣ್ಣೆ ಸೂಕ್ತ?

ನಾವೆಲ್ಲಾ ನಿತ್ಯ ಮನೆಯಲ್ಲಿ ಅಡುಗೆ ಮಾಡುತ್ತೇವೆ. ಅದಕ್ಕಾಗಿ ಎಣ್ಣೆ ಬಳಸುತ್ತೇವೆ. ಹೋಟೆಲ್‌ನಲ್ಲೂ ತಿನ್ನುತ್ತೇವೆ. ಆದರೆ, ಅಲ್ಲಿ ಯಾವ ಎಣ್ಣೆ ಉಪಯೋಗಿಸುತ್ತಾರೆ ಎಂಬುದರ ಅರಿವು ನಮಗಿರುವುದಿಲ್ಲ. ಪ್ರತಿದಿನ ಹೋಟೆಲ್‌ನಲ್ಲಿ ತಿನ್ನುವುದು ಎಂದಿಗೂ ಆರೋಗ್ಯಕರವಲ್ಲ. ಅನೇಕ ರೀತಿಯ ಕೆಮಿಕಲ್ಸ್ ನಿಂದ ಕರಿದ ಎಣ್ಣೆಯಲ್ಲೇ ಮತ್ತೆ ಕರಿದಂತಹ ವ್ಯವಸ್ಥೆಯಲ್ಲಿ ಆಹಾರಗಳು ಅಲ್ಲಿ ತಯಾರಾಗುವುದರಿಂದಾಗಿ, ನಮ್ಮ ಆರೋಗ್ಯವೂ ಹದಗೆಡಲು ಕಾರಣವಾಗುತ್ತದೆ. ಹಾಗಾಗಿ, ಮನೆಯಲ್ಲೇ ತಯಾರಿಸಿದ ಆಹಾರವನ್ನು ಸೇವಿಸುವುದು ಉತ್ತಮ. ಹಾಗಾದರೆ, ಆರೋಗ್ಯಯುತವಾದ ಅಡುಗೆಯನ್ನು ಮಾಡಲು ನಾವು ಉತ್ತಮವಾದ ಎಣ್ಣೆಯನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ..? ಎಂಬುದೇ ನಮ್ಮ ಬುದ್ಧಿವಂತಿಕೆ. ನಮ್ಮ ಆರೋಗ್ಯವನ್ನು ನಮ್ಮ ಕೈಯಲ್ಲೇ ಇಟ್ಟುಕೊಳ್ಳುವುದು ನಮ್ಮ ಜಾಣತನ. ನಾವು ಆಸ್ಪತ್ರೆಯಲ್ಲಿ, ಔಷಧ ಅಂಗಡಿಗಳಲ್ಲಿ ಆರೋಗ್ಯವನ್ನು ಹುಡುಕುತ್ತಿದ್ದೇವೆ. ನಮ್ಮ ಆರೋಗ್ಯ ನಿಜವಾಗಿಯೂ ಅಡಗಿರುವುದು ಅಡುಗೆ ಮನೆಯಲ್ಲಿ. ಅಡುಗೆ ಮನೆಯಲ್ಲಿ ಬದಲಾವಣೆ ಮಾಡಿಕೊಂಡರೆ ಆರೋಗ್ಯದಲ್ಲಿ ಬದಲಾವಣೆ ಸಾಧ್ಯ. ಅಡುಗೆ ಮನೆಯೇ ಆಸ್ಪತ್ರೆ, ಆಹಾರವೇ ಔಷಧವಾಗಬೇಕು. ಈ ಬದಲಾವಣೆ ಅತ್ಯಗತ್ಯ.

Dr. Nethravati

ತುಮಕೂರಿನ ಶ್ರೀದೇವಿ ವೈದ್ಯಕೀಯ ವಿಜ್ಣಾನ ಸಂಶೋಧನಾ ಆಸ್ಪತ್ರೆಯ ಡಯಟಿಶಿಯನ್ ಡಾ. ನೇತ್ರಾವತಿ ಡಿ.ಎಂ. ಅವರ ಪ್ರಕಾರ, “ಸಸ್ಯ ಮೂಲದಿಂದ ಪಡೆದ ಎಣ್ಣೆಗಳು ಯಾವಾಗಲೂ ಉತ್ತಮವಾಗಿರುತ್ತವೆ. ಉದಾಹರಣೆಗೆ ಕಡಲೇಬೀಜ, ಎಳ್ಳು, ಸೂರ್ಯಕಾಂತಿ. ಯಾಕೆಂದರೆ, ಈ ಎಣ್ಣೆಗಳು ಅನ್‌ಸಾಚುರೇಟೆಡ್ ಕೊಬ್ಬಿನಾಮ್ಲವನ್ನು ಹೊಂದಿರುತ್ತವೆ. ಅರ್ಥಾತ್ ಒಮೆಗಾ-3 ಮತ್ತು ಒಮೆಗಾ-6ನ್ನು ಹೊಂದಿರುತ್ತವೆ. ಈ ಕೊಬ್ಬಿನಾಂಶವು ನಮ್ಮ ದೇಹಕ್ಕೆ ಅತ್ಯಗತ್ಯ. ಇವು ಬ್ರೇನ್ ಡೆವಲಪ್‌ಮೆಂಟ್, ಚರ್ಮದ ಕಾಂತಿಯನ್ನು ಹೆಚ್ಚಿಸುತ್ತವೆ. ಇನ್ನು ಪ್ರಾಣಿಗಳಿಂದ ಬಂದಂತಹ ಕೊಬ್ಬಿನಾಮ್ಲವೆಂದರೆ ಬೆಣ್ಣೆ, ತುಪ್ಪ, ಚೀಸ್ ನ್ನು ಹೆಚ್ಚಾಗಿ ಬಳಸುವುದರಿಂದ ಸ್ಯಾಚುರೇಟೆಡ್ ಕೊಬ್ಬಿನಾಂಶ ಹೆಚ್ಚಾಗಿರುತ್ತದೆ. ಇದನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾಗಿ ಮುಂದೆ ನಾನಾ ರೀತಿಯ ತೊಂದರೆಗೆ ದಾರಿ ಮಾಡಿಕೊಡುತ್ತದೆ. ಒಬ್ಬ ಆರೋಗ್ಯಕರ ವ್ಯಕ್ತಿಗೆ ಆತನ ದೇಹದ ಎತ್ತರ ಮತ್ತು ತೂಕದ ಅನುಸಾರವಾಗಿ ಶೇ.15-20ರಷ್ಟು ಕ್ಯಾಲರಿಯನ್ನು ಫ್ಯಾಟ್‌ನಿಂದ ಪಡೆಯಬೇಕು. ಒಂದು ದಿನಕ್ಕೆ 3ರಿಂದ 4 ಟೀ ಸ್ಪೂನ್‌ನಷ್ಟು ಅಂದರೆ 15ರಿಂದ 20 ಎಂಎಲ್‌ನಷ್ಟು ಆಯಿಲ್‌ನ್ನು ಒಬ್ಬ ಆರೋಗ್ಯಕರ ವ್ಯಕ್ತಿ ಬಳಸಬಹುದು. ಇನ್ನು ಡಯಾಬಿಟಿಸ್, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಈ ಪ್ರಮಾಣ ಇನ್ನೂ ಕಡಿಮೆಯಾಗಬೇಕು.”

coconut1

ಶಿರಸಿಯ ವೇದ ವೆಲ್ನೆಸ್ ಸೆಂಟರ್, ನಿಸರ್ಗ ಮನೆಯ ಮುಖ್ಯ ವೈದ್ಯರಾದ ಡಾ. ವೆಂಕಟರಮಣ ಹೆಗಡೆ ಅವರ ಪ್ರಕಾರ, “ಅಡುಗೆಗೆ ಗಾಣದ ಎಣ್ಣೆಯಲ್ಲಿ ತಯಾರಿಸಿದಂತಹ, ನೀವೇ ಕೊಬ್ಬರಿ ಅಥವಾ ಬೀಜಗಳನ್ನು (ಶೇಂಗಾ, ಎಳ್ಳು, ಕುಸುಬಿ) ತೆಗೆದುಕೊಂಡು ಹೋಗಿ ಮಾಡಿಸಿಕೊಂಡು ಬಂದಿರುವಂತಹ ಎಣ್ಣೆಗಳು ಸೂಕ್ತ. ಅದರಲ್ಲಿ ಮೊದಲ ಸ್ಥಾನ ಎಂದರೆ ಕೊಬ್ಬರಿ ಎಣ್ಣೆ. ಇದು ಬಹಳ ಒಳ್ಳೆಯದು. ಕೊಬ್ಬರಿ ಎಣ್ಣೆಯನ್ನು ಉಪಯೋಗಿಸುವಂತಹ ಅಭ್ಯಾಸ ಬಹಳ ಒಳ್ಳೆಯದು. ಮಂಗಳೂರು ಮತ್ತು ಕಾರವಾರದ ಭಾಗದಲ್ಲಿ ಹೆಚ್ಚಿನ ಜನರು ಬಳಸುವುದು ತೆಂಗಿನ ಎಣ್ಣೆಯನ್ನು ಹಾಗಾಗಿ ಅಲ್ಲಿನ ಜನರಲ್ಲಿ ಬೊಜ್ಜು ಕಂಡುಬರುವುದಿಲ್ಲ ಹಾಗೂ ಅವರು ಆರೋಗ್ಯಕರವಾದ ಜೀವನ ನಡೆಸುತ್ತಿರುತ್ತಾರೆ.”

Dr-Venkatramana-Hegde

“ತೆಂಗಿನ ಎಣ್ಣೆಯಿಂದ ಹಾರ್ಟ್ ಅಟ್ಯಾಕ್ ಬರುತ್ತದೆ. ಅದು ಘನೀಕೃತ, ಸ್ಯಾಚುರೇಟೆಡ್ ಫ್ಯಾಟ್ ಅದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಎಂಬ ತಪ್ಪು ಕಲ್ಪನೆಗಳಿವೆ. ಅದರ ಬಗ್ಗೆ ಯಾವುದೇ ಚಿಂತೆ ಮಾಡುವ ಅಗತ್ಯವಿಲ್ಲ. ಅಡುಗೆ ಮಾಡಲು, ಕರಿಯಲು ಸಹ ತೆಂಗಿನ ಎಣ್ಣೆ ಬಳಸಬಹುದು. ಆದರೆ, ಕೊಬ್ಬರಿಯನ್ನು ನೀವು ತೆಗೆದುಕೊಂಡು ಹೋಗಿ ಮಿಲ್‌ನಲ್ಲೋ ಅಥವಾ ಗಾಣದಲ್ಲೋ ಎಣ್ಣೆ ತೆಗೆಸಿಕೊಂಡು ಬಂದ ತಾಜಾ ಎಣ್ಣೆಯನ್ನೇ ಬಳಸಬೇಕು. ಇದು ಆಗುವುದಿಲ್ಲವೆಂದರೆ ಒರಿಜಿನ್ ಕೊಕನಟ್ ಆಯಿಲ್ ಬಳಸಬಹುದು” ಎಂದು ಡಾ. ವೆಂಕಟರಮಣ ಹೆಗಡೆ ಅವರು ಹೇಳುತ್ತಾರೆ.

ತಾಯಿಯ ಎದೆಹಾಲಿನಲ್ಲಿರುವಂತಹ ಅಂಶಗಳನ್ನು ಒಳಗೊಂಡಿರುವಂತಹ ಏಕೈಕ ಆಹಾರ ವಸ್ತು ಈ ಪ್ರಪಂಚದಲ್ಲಿ ಯಾವುದಾದರೂ ಇದೆ ಎಂದರೆ ಅದು ತೆಂಗಿನ ಕಾಯಿ ಎಣ್ಣೆ. ತೆಂಗಿನ ಕಾಯಿಯ ಹಾಲನ್ನು ತೆಗೆದು, ಅದನ್ನು ಕೋಲ್ಡ್ ಕಂಪ್ರೆಸ್ ಮಾಡಿ, ಅದರಿಂದ ತೆಗೆದ ಒರಿಜಿನ್ ಕೊಕನಟ್ ಆಯಿಲ್ ಅಡುಗೆಗೆ ಬಳಸುವುದು ಬಹಳ ಸೂಕ್ತ. ಇದನ್ನು ಕೇರಳದಲ್ಲಿ ಮನೆಮಂದಿ ಮನೆಯಲ್ಲೇ ಯಥೇಚ್ಛವಾಗಿ ತಯಾರಿಸಿ ಬಳಸುತ್ತಾರೆ. ಸಾಮಾನ್ಯವಾಗಿ, ಮಲೆಯಾಳಿ ಮಂದಿಯನ್ನು ಗಮನಿಸಿದಾಗ ಅವರ ಕೂದಲು ದಟ್ಟವಾಗಿ, ಕಪ್ಪಾಗಿರುವುದು ಮತ್ತು ಆರೋಗ್ಯ ಸ್ಥಿರವಾಗಿರುವುದನ್ನು ನಾವು ಕಾಣುತ್ತೇವೆ. ಅದಕ್ಕೆ ಕಾರಣ ತೆಂಗಿನ ಕಾಯಿಯ ಎಣ್ಣೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಕೆಲವೆಡೆ ಮಾತ್ರ ಟ್ರೆಂಡಿಂಗ್ ರೀತಿಯಲ್ಲಿ ಉತ್ಪಾದಿಸುತ್ತಾರೆ. ಆದರೆ, ಇದು ಎಲ್ಲರಿಗೂ ಕೈಗೆಟುಕುವ ಬೆಲೆಯಲ್ಲಿ ಸಿಗಲಿಕ್ಕಿಲ್ಲ. ಹಾಗಾಗಿ, ಅದು ಸಾಧ್ಯವಾಗದಿದ್ದರೆ ಕೊಬ್ಬರಿ ಎಣ್ಣೆ ಬಳಸುವುದು ಒಳ್ಳೆಯದು. ಆದೂ ಗಾಣದಿಂದ ತೆಗೆದ ಈ ಎಣ್ಣೆಯನ್ನು ಬಳಸಿದರೆ ಉತ್ತಮ.

coconut

ವಿಶೇಷ ಎಂದರೆ ಉತ್ತರ ಕರ್ನಾಟಕದ ಭಾಗದಲ್ಲಿ ಕೊಬ್ಬರಿ ಎಣ್ಣೆಯಿಂದ ಮಾಡಿದ ಅಡುಗೆಯ ರುಚಿಯನ್ನು ಅವರು ಇಷ್ಟಪಡುವುದಿಲ್ಲ. ಬದಲಿಗೆ ಅವರೇ ಬೆಳೆದ ಶೇಂಗಾದಿಂದಲೇ ಗಾಣದಿಂದ ಎಣ್ಣೆ ಮಾಡಿಸಿಕೊಂಡು ಬರುತ್ತಾರೆ. ಮಿಲ್‌ನಲ್ಲೇ ಅಥವಾ ಗಾಣದಲ್ಲಿ ಮಾಡಿಸಿಕೊಂಡು ಬಂದಂತಹ ಶೇಂಗಾ ಬೀಜದ ಎಣ್ಣೆ ಅಥವಾ ಕಡಲೇಕಾಯಿ ಎಣ್ಣೆ ಶ್ರೇಷ್ಠವಾಗಿದೆ. ಯಾಕೆಂದರೆ, ಇಲ್ಲಿ ಯಾವುದೇ ರೀತಿಯ ಕಲಬೆರಕೆ ಆಗಿರುವುದಿಲ್ಲ.  ಇಲ್ಲಿ ಮೊದಲ ಸ್ಥಾನ ಕೊಬ್ಬರಿ ಎಣ್ಣೆಗೆ ಇದ್ದರೆ, ಎರಡನೇ ಸ್ಥಾನ ಕಡಲೇಕಾಯಿ (ಶೇಂಗಾ) ಎಣ್ಣೆಗೆ. ಮತ್ತೆ ನಂತರದಲ್ಲಿ ನೀವೇ ಮಿಲ್‌ನಲ್ಲಿ ಮಾಡಿಸಿಕೊಂಡು ಬಂದಂತಹ ಎಳ್ಳು, ಕುಸುಬಿ ಎಣ್ಣೆಯಿಂದಲೂ ಅಡುಗೆ ಮಾಡಬಹುದು. ಇದರ ಜೊತೆಗೆ ಎಳ್ಳೆಣ್ಣೆ ಮತ್ತು ಕೊಬ್ಬರಿ ಎಣ್ಣೆ, ಸೂರ್ಯಕಾಂತಿ ಎಣ್ಣೆ ಮತ್ತು ಶೇಂಗಾ ಎಣ್ಣೆಯನ್ನು ಮಿಶ್ರಣ ಮಾಡಿ ಬಳಸಿದಲ್ಲಿ ಸಮತೋಲಿತ ಪೋಷಕಾಂಶಗಳು ದೊರೆಯುತ್ತವೆ.

ರಿಫೈನ್ಡ್ ಆಯಿಲ್ ಏಕೆ ಬೇಡ?

ಡಾ. ವೆಂಕಟರಮಣ ಹೆಗಡೆ ಅವರ ಪ್ರಕಾರ, “ರಿಫೈನ್ಡ್ ಆಯಿಲ್ ಟೋಟಲ್ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಆದರೆ, ಹಾರ್ಟ್ ಅಟ್ಯಾಕ್‌ಗೆ ಕಾರಣವಾಗುವಂತಹ ಆಕ್ಸಿಡೈಸ್ ಎಲ್‌ಡಿಎಲ್ ಜಾಸ್ತಿಯಾಗುತ್ತದೆ. ಅದು ನಮಗೆ ಗೊತ್ತಾಗುವುದೇ ಇಲ್ಲ. ಟೋಟಲ್ ಕೊಲೆಸ್ಟ್ರಾಲ್ ಕಡಿಮೆಯಾದರೂ ಕೂಡ, ಆಕ್ಸಿಡೈಸ್ ಎಲ್‌ಡಿಎಲ್ ಹೆಚ್ಚಾಗುವುದರಿಂದ ಅದು ಒಳ್ಳೆ ಕೊಲೆಸ್ಟ್ರಾಲ್ ಎಚ್‌ಡಿಎಲ್ ಕಡಿಮೆ ಮಾಡುವುದರಿಂದ ಹೃದಯ ರೋಗ ಬರುವಂತಹ ಪ್ರಮಾಣ ಜಾಸ್ತಿಯಾಗುತ್ತದೆ. ರಿಫೈನ್ಡ್ ಆಯಿಲ್ಸ್ ಮಾಡುವಂತಹ ಪ್ರಕ್ರಿಯೆಯಲ್ಲಿ ಕಾಟನ್ ಸೀಡ್ ನ್ನು ಬಳಸುತ್ತಾರೆ. ಬೇರೆ ಬೇರೆ ಬ್ರಾಂಡ್ ಎಂದು ತೆಗೆದುಕೊಂಡರೂ ಸಹ ಆ ಎಣ್ಣೆಗಳಲ್ಲಿ ಸಾಮಾನ್ಯವಾಗಿ ಅರ್ಧದಷ್ಟು, ಕಾಟನ್ ಸೀಡ್ ಮಿಕ್ಸ್ ಆಗಿರುತ್ತದೆ. ಒಮ್ಮೆ ಅದು ರಿಫೈನ್ಡ್ ಆದ ನಂತರ ಅದು ಯಾವ ಎಣ್ಣೆ ಎಂದು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ.”

“ಮೊದಲು ಅದನ್ನು ಎಕ್ಸೇಲ್ ಎನ್ನುವಂತಹ ಕೆಮಿಕಲ್ ಹಾಕಿ, ಆ ಬೇರ್ಪಡಿಸುವಿಕೆಯನ್ನು ಮಾಡುತ್ತಾರೆ. ಎಕ್ಸೇಲ್ ಕೆಮಿಕಲ್ ಹಾಕಿ ಬೇರ್ಪಟ್ಟ ನಂತರ ಆ ಎಣ್ಣೆ ಕೆಂಪಾಗಿರುತ್ತದೆ. ಅದಾದ ನಂತರ ಕ್ರೂಡ್ ಆಯಿಲ್‌ನಲ್ಲಿ ಬಿ ಫ್ಯಾಟಿ ಆ್ಯಸಿಡ್ ಮತ್ತು ವ್ಯಾಕ್ಸ್ ಇರುತ್ತದೆ. ಅದು ವಿಷಕಾರಕ. ಅದೆರಡನ್ನೂ ತೆಗೆಯಲು, 100 ರಿಂದ 300 ಡಿಗ್ರಿಯಲ್ಲಿ ಅದನ್ನು ಬಾಯಿಲ್ ಮಾಡಬೇಕಾಗುತ್ತದೆ. ಅಷ್ಟೊಂದು ಹೈಟೆಂಪ್ರೇಚರ್‌ನಲ್ಲಿ ಯಾವುದಾದರೂ ವಸ್ತುವನ್ನು ಇಟ್ಟಾಗ ಅದರಲ್ಲಿರುವ ಎಲ್ಲಾ ಒಳ್ಳೆಯ ಅಂಶಗಳೂ ಕೂಡಾ ಆಕ್ಸಿಡೈಸ್ ಆಗುತ್ತವೆ. ಅದು ಒಳ್ಳೆಯದು ಎಂಬ ತಪ್ಪು ನಂಬುಗೆಯಲ್ಲಿದ್ದೇವೆ. ಹಾಗಾಗಿ ರಿಫೈಂಡ್ ಆಯಿಲ್ ಬಳಸಿ ನಮ್ಮ ಆರೋಗ್ಯ ಹಾಳುಮಾಡಿಕೊಳ್ಳುತ್ತಿದ್ದೇವೆ.”

ತುಪ್ಪದ ಪಾತ್ರವೇನು..?

ಇಷ್ಟು ಅಡುಗೆ ಎಣ್ಣೆಗಳ ಮಧ್ಯೆ ತುಪ್ಪದ ಪಾತ್ರವೇನು ಎಂಬ ಅನುಮಾನ ನಿಮ್ಮನ್ನ ಕಾಡದೇ ಇರದು. ಅಸಲಿಗೆ ಬೆಸ್ಟ್ ಫ್ಯಾಟ್ ಯಾವುದೆಂದರೆ ಮೊದಲ ರ‍್ಯಾಂಕ್ ತುಪ್ಪಕ್ಕೆ. ತುಪ್ಪ ಬಹಳ ಒಳ್ಳೆಯದು. ತುಪ್ಪದಲ್ಲಿ ಅಪರೂಪಕ್ಕೊಮ್ಮೆ ಕರಿದೂ ತಿನ್ನಬಹುದು. ಅದರಿಂದ ಏನೂ ತೊಂದರೆಯಿರುವುದಿಲ್ಲ. ಅದನ್ನು ಸಾಕಷ್ಟು ಉಪಯೋಗಿಸಬಹುದು. ಸಂಜೆ ಹೊತ್ತಲ್ಲಿ ಒಂದು ಕಪ್ ಬಿಸಿಬಿಸಿ ನೀರಿಗೆ 2-3 ಚಮಚ ತುಪ್ಪವನ್ನು ಹಾಕಿ ಕುಡಿಯುವುದರಿಂದ ಬೆಳಗ್ಗೆ ಮಲವಿಸರ್ಜನೆ ಸರಾಗವಾಗಿ ಆಗುತ್ತದೆ. ನಮ್ಮ ಆರೋಗ್ಯವರ್ಧನೆಯಾಗುತ್ತದೆ. ಮೆದುಳಿನ ಶಕ್ತಿ ಜಾಸ್ತಿಯಾಗುತ್ತದೆ. ಹೊಟ್ಟೆ ಆರೋಗ್ಯ, ಕರುಳಿನ ಆರೋಗ್ಯ ಸುಧಾರಿಸುತ್ತದೆ. ಒಳ್ಳೆಯ ಬ್ಯಾಕ್ಟೀರಿಯಾಗಳು ಇಂಪ್ರೂ ಆಗುತ್ತವೆ. ಸಂಪೂರ್ಣ ಆರೋಗ್ಯ ಸುಧಾರಿಸುತ್ತದೆ.

ಹೀಗೆ ತುಪ್ಪ, ತೆಂಗಿನಕಾಯಿ ಎಣ್ಣೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಒರಿಜಿನ್ ಕೊಕನಟ್ ಆಯಿಲ್ ಅನ್ನು ನಿತ್ಯ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಮುಂಚೆ ಎರಡೆರಡು ಚಮಚ ಔಷಧಿಯಂತೆ ಸೇವಿಸುತ್ತಾ ಬಂದರೆ, ಗ್ಯಾಸ್ಟ್ರಿಕ್, ಮಲಬದ್ಧತೆ ಕಡಿಮೆಯಾಗುತ್ತದೆ. ಚರ್ಮದ ಆರೋಗ್ಯ ಹೆಚ್ಚುತ್ತದೆ. ಒಳ್ಳೆ ಕೊಲೆಸ್ಟ್ರಾಲ್ ಎಚ್‌ಡಿಎಲ್ ಹೆಚ್ಚಾಗುತ್ತದೆ. ಸಂಪೂರ್ಣ ಆರೋಗ್ಯ ಹೆಚ್ಚಾಗುತ್ತದೆ. ಒಳ್ಳೆಯ ಕೊಬ್ಬು ನಮ್ಮ ಜೀವವನ್ನು ಉಳಿಸಬಲ್ಲದು. ಕೆಟ್ಟ ಕೊಬ್ಬು ನಮ್ಮ ಜೀವವನ್ನು ತೆಗೆದುಕೊಂಡು ಹೋಗುತ್ತದೆ. ಕೆಟ್ಟ ಕೊಬ್ಬನ್ನು ತ್ಯಜಿಸಿ, ಒಳ್ಳೆ ಕೊಬ್ಬನ್ನು ತನ್ನಿ. ಆಹಾರವೇ ಔಷಧವಾಗಲಿ.

  • ಸುನೀತಾ ಬಿ ಎಂ

************

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ