ಆ ದಿನಗಳನ್ನು ಹೇಗೆ ತಾನೇ ಮರೆಯಲು ಸಾಧ್ಯ? ಕೊರೋನಾದ ಮಹಾಮಾರಿಯ ಕಾರಣದಿಂದ ದೇಶಾದ್ಯಂತ ತುರ್ತು ಲಾಕ್‌ ಡೌನ್‌ ಹೇರಲಾಗಿತ್ತು. ಎಲ್ಲೆಡೆಯೂ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮೊದಲನೆಯದು, ಅಪರಿಚಿತ ರೋಗ, ಇನ್ನೊಂದೆಡೆ ಆ ರೋಗಕ್ಕೆ ಯಾವುದೇ ಔಷಧಿಗಳಿರಲಿಲ್ಲ. ಹೀಗಾಗಿ ಭಯ ಎಲ್ಲೆಡೆ ಪಸರಿಸುತ್ತಿತ್ತು. ಎಲ್ಲರೂ ಕತ್ತಲೆಯಲ್ಲಿ ಬಾಣ ಬಿಡುತ್ತಿದ್ದರು. ಔಷಧಿಗಳ ಹೊರತಾಗಿ ಯಾರೊ ಕಷಾಯದ ಬಗ್ಗೆ ಹೇಳುತ್ತಿದ್ದರೆ, ಮತ್ತೆ ಕೆಲವರು ಯೋಗ ಪ್ರಾಣಾಯಾಮದ ಬಗ್ಗೆ ಸಲಹೆ ನೀಡುತ್ತಿದ್ದರು. ಯಾರಿಗೆ ಯಾವುದು ತೋಚುತ್ತದೋ ಅವರು ಅದನ್ನೇ ಪ್ರಯೋಗ ಮಾಡುತ್ತಿದ್ದರು.

ರೈಲುಗಳಾಗಲಿ, ಬಸ್‌ ಗಳಾಗಲಿ ಸಂಚರಿಸುತ್ತಿರಲಿಲ್ಲ. ಕೋಚಿಂಗ್‌ ಸೆಂಟರ್‌ ಹಾಗೂ ಹಾಸ್ಟೆಲ್ ‌ಗಳನ್ನು ಖಾಲಿ ಮಾಡಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಬಹುದೂರದಿಂದ ಬಂದವರು ಬಹಳ ತೊಂದರೆ ಅನುಭವಿಸುತ್ತಿದ್ದರು.

ನಿಕಿತಾಳ ಜೊತೆಗೂ ಹೀಗೆಯೇ ಆಯಿತು. ಅವಳು ತನ್ನ ವೀಕೆಂಡ್‌ ನ್ನು ಮನೋಜ್‌ ಜೊತೆಗೆ ಕಳೆಯಲೆಂದು  ಹೋಗಿ ಈ ಜಂಜಾಟದಲ್ಲಿ ಸಿಲುಕಿದ್ದಳು. ಅವರಿಬ್ಬರು ಮೊದಲ ಬಾರಿಗೆ ಹೀಗೆ ಸುತ್ತಾಡಲು ಹೋಗಿರಲಿಲ್ಲ. ಅವರು ಆಗಾಗ ಈ ತೆರನಾದ ಶಾರ್ಟ್‌ ಟ್ರಿಪ್‌ ಪ್ಲಾನ್‌ ಮಾಡುತ್ತಲೇ ಇರುತ್ತಿದ್ದರು.

ಅಂದಹಾಗೆ ಇಬ್ಬರು ತಮ್ಮ ಮನೆಗಳಿಂದ ಬಹುದೂರದ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದರು. ಹೀಗಾಗಿ ಅವರಿಗೆ ಯಾವುದೇ ಅಡೆತಡೆಗಳು ಇರಲಿಲ್ಲ. ಭವಿಷ್ಯದಲ್ಲಿ ಮದುವೆ ಮಾಡಿಕೊಳ್ಳುತ್ತೇವೋ ಇಲ್ಲವೋ ಎಂಬ ಬಗ್ಗೆ ಕಿಂಚಿತ್ತೂ ಯೋಚನೆ ಮಾಡದೇ ಇಬ್ಬರೂ ವರ್ತಮಾನದಲ್ಲಿ  ಜೀವಿಸುತ್ತಿದ್ದರು.

ಜನತಾ ಕರ್ಫ್ಯೂ ಘೋಷಣೆಯ ಜೊತೆ ಜೊತೆಗೆ ಮುಂಬರುವ ದಿನಗಳಲ್ಲಿ ಲಾಕ್‌ ಡೌನ್‌ ಹೇರುವ ಬಗೆಗಿನ ಸುಳಿವು ಕೂಡ ದೊರಕಿತು. ನಿಕಿತಾ ಹಾಗೂ ಮನೋಜ್‌ ಕೂಡ ತಾವೆಷ್ಟು ದಿನಗಳ ಕಾಲ ದೂರ ಇರಬೇಕಾಗಿ ಬರುತ್ತದೋ ಎಂದು ಯೋಚಿಸಿ ನಾವೇಕೆ ಮುಕ್ತವಾಗಿ ಜೀವಿಸಬಾರದು ಎನ್ನುವುದು ಅವರ ಧೋರಣೆ ಆಗಿತ್ತು.

ಅಂದಹಾಗೆ ನಿಕಿತಾ ವರ್ಕಿಂಗ್‌ ವುಮನ್‌ ಹಾಸ್ಟೆಲ್ ‌ನಲ್ಲಿ ವಾಸಿಸುತ್ತಿದ್ದಳು. ಮನೋಜ್‌ ಒಂದು ಪಿಜಿಯಲ್ಲಿದ್ದ. ಇಬ್ಬರೂ ಮನೋಜ್ ನ ಸ್ನೇಹಿತ ಶಶಿಧರ್‌ ಮನೆಯಲ್ಲಿ ಉಳಿದುಕೊಳ್ಳೋಣ ಎಂದು ಯೋಚಿಸಿದರು. ಸರಿಯಾಗಿ ಅದೇ ಸಮಯಕ್ಕೆ ಶಶಿಧರ್‌ ತನ್ನ ಗೆಳೆಯರೊಂದಿಗೆ ಗೋವಾಕ್ಕೆ ಹೋಗಿದ್ದ. ಹೀಗಾಗಿ ಅವನ ಮನೆ ಖಾಲಿಯಿತ್ತು. ಅದೇ ಅವಕಾಶದ ಲಾಭ ಪಡೆದುಕೊಂಡು ಇಬ್ಬರೂ ಎರಡು ದಿನ ರಜೆ ಪಡೆದು ಮಂಗಳೂರಿಗೆ ಹೊರಟರು.

ಇಬ್ಬರೂ ವೀಕೆಂಡ್‌ ನ ಎಂಜಾಯ್‌ ಮಾಡುತ್ತಿದ್ದರು. ಅಷ್ಟರಲ್ಲಿ ದೇಶಾದ್ಯಂತ ಲಾಕ್‌ ಡೌನ್‌ ಘೋಷಣೆ ಮಾಡಲಾಯಿತು. ಆ ಸುದ್ದಿ ಕೇಳುತ್ತಿದ್ದಂತೆ ಮನೋಜ್‌ ನ ಕಣ್ಣಲ್ಲಿ ಅದೇನೊ ಹೊಳಪು ಕಂಡಿತು.`ಹಮ್ ತುಮ್ ಏಕ್‌ ಕಮರೇ ಮೇ ಬಂದ್‌ ಹೋ…. ಔರ್ ಚಾಬಿ ಖೋ ಜಾಯ್‌…..’ ಎಂದು ಹಾಡು ಗುನುಗುನಿಸುತ್ತಾ ನಿಕಿತಾಳತ್ತ ನೋಡಿದ.

“ನಿನಗೆ ನಗು ಬರುತ್ತಿದೆ. ಆದರೆ ನಾವು ಎಂತಹ ಸಂಕಷ್ಟಕ್ಕೆ ಸಿಲುಕಿಬಿಟ್ಟೆವು ಎನ್ನುವ ಅಂದಾಜು ನಿನಗಿದೆಯಾ?” ನಿಕಿತಾ ಅವನನ್ನು ಗಂಭೀರಗೊಳಿಸಲು ಪ್ರಯತ್ನಿಸಿದಳು.

“ಇದರಲ್ಲಿ ನಾವು ತೊಂದರೆ ಅನುಭವಿಸುವುದೇನಿದೆ? ನಾವು ಇಲ್ಲಿ ಹೇಗೆ ಸಿಲುಕಿದ್ದೇವೋ, ಹಾಗೆಯೇ ಪಣಜಿಯಲ್ಲಿ ಶಶಿಧರ್ ಸಿಲುಕಿಕೊಂಡಿದ್ದಾನೆ. ಈ ಮನೆಯಲ್ಲಿ ಅಡುಗೆ ಸಾಮಗ್ರಿಗಳ ಸಂಗ್ರಹವಂತೂ ಇದ್ದೇ ಇದೆ. ಹೇಗೂ ನೀನು ಅಡುಗೆ ಮಾಡ್ತೀಯಾ, ನಾನು ಅದರ ರುಚಿ ಸವಿತೀನಿ,” ಎನ್ನುತ್ತಾ ಮನೋಜ್‌ ಅವಳನ್ನು ನಿಶ್ಚಿಂತಳಾಗಿಸಲು ಪ್ರಯತ್ನಿಸಿದ.

ಆದರೆ ನಿಕಿತಾಳಂತೂ ಬೇರೊಂದು ಚಿಂತೆಯಲ್ಲಿ ತಲೆ ಕೆಡಿಸಿಕೊಂಡಿದ್ದಳು, “ನಾವಿಬ್ಬರೂ ಜೊತೆ ಜೊತೆಗೆ ಒಂದೇ ಮನೆಯಲ್ಲಿ ಇರುವುದರ ಅರ್ಥ ನಿನಗೆ ಆಗುತ್ತಿರಬೇಕಲ್ಲವೇ? ಅದೂ ಕೂಡ ಯಾವುದೇ ಸುರಕ್ಷತೆಯ ಉಪಾಯಗಳಿಲ್ಲದೆ,” ಎಂದಳು ಆತಂಕದಿಂದ.

ಆ ಮಾತು ಕೇಳಿ ಮನೋಜ್‌ ಮತ್ತಷ್ಟು ಜೋರಾಗಿ ನಕ್ಕು, “ಅದರಿಂದೇನಾಗುತ್ತದೆ….. ಒಂದು ಪುಟ್ಟ ಮೊಗ್ಗು ಅರಳುತ್ತೆ ಅಷ್ಟೇ ತಾನೇ?” ಎಂದ.

ಅವನ ಮಾತಿಗೆ ನಿಕಿತಾ ಕಾಲು ಅಪ್ಪಳಿಸುತ್ತಾ ಕೋಪದಿಂದ ಹೊರಟುಹೋದಳು. ಅದು 21 ದಿನಗಳ ಲಾಕ್‌ ಡೌನ್‌ ಆಗಿತ್ತು. ಅವರು ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ಸುರಕ್ಷತೆಯ ಉಪಾಯ ಅನುಸರಿಸಿದರು. ಕೆಲವು ಸಲ ಅವರು ಸಂಯಮ ಕೂಡ ಕಾಪಾಡಿದರು. ಆದರೆ ಧೈರ್ಯದ ಕಟ್ಟೆ ಒಡೆದಾಗ ಇಬ್ಬರೂ ತಿಂಗಳ ಸುರಕ್ಷಿತ ದಿನಗಳ ಲೆಕ್ಕಾಚಾರದಲ್ಲಿ ಸಂಬಂಧ ಮಾಡಿದರು. ಆದರೆ ಅದರಿಂದ ಯಾವುದೇ ಖುಷಿಯ ಅನುಭವ ಸಿಗಲಿಲ್ಲ.

ಪ್ರತಿಯೊಬ್ಬರೂ ಚಿಂತೆಯಲ್ಲಿ ಕಾಲ ಕಳೆಯುತ್ತಿದ್ದರು. ಯಾವಾಗ ಲಾಕ್‌ ಡೌನ್‌ ಹಿಂಪಡೆಯುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ನಿಕಿತಾಳಿಗಿದ್ದ ತವಕ ತಾನು ಯಾವಾಗ ಮುಟ್ಟಾಗುತ್ತೇನೆ ಎಂಬುದಾಗಿತ್ತು. ಅದೊಂದು ದಿನ ಅವಳು ಮುಟ್ಟಾದಾಗ ಅವಳಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಜೀವನದಲ್ಲಿ ಇದೇ ಮೊದಲ ಬಾರಿ ಮುಟ್ಟಾದಾಗ ನಿಕಿತಾ ಖುಷಿಯಾಗಿದ್ದಳು.

ಇದಕ್ಕೂ ಮುಂಚೆ ಮುಟ್ಟು ಅವಳಿಗೆ ಬಹಳ ಅಸಹಜತೆಯನ್ನುಂಟು ಮಾಡುತ್ತಿತ್ತು. ಹೇಗೋ ಲಾಕ್‌ ಡೌನ್‌ ನ ಮೊದಲ 21 ದಿನಗಳು ಕಳೆದವು. ಆದರೆ ಆ ಲಾಕ್‌ ಡೌನ್‌ ನ್ನು ಮತ್ತಷ್ಟು ದಿನಗಳಿಗೆ ವಿಸ್ತರಿಸಲಾಯಿತು. ಆದರೆ ನಿರ್ಬಂಧಗಳಿಂದ ತುಸು ಸಡಿಲಿಕೆ ನೀಡಲಾಯಿತು. ಮನೋಜ್‌ ಹಾಗೂ ನಿಕಿತಾ ಹೇಗೋ ಮಂಗಳೂರಿನಿಂದ ಬೆಂಗಳೂರಿಗೆ ಬಂದರು. ನಿಕಿತಾ ನೆಮ್ಮದಿಯ ನಿಟ್ಟುಸಿರುಬಿಟ್ಟಳು.

ನಿಕಿತಾ ಆಧುನಿಕ ವಿಚಾರಧಾರೆಯ ಹುಡುಗಿ ಎನ್ನುವುದೇನೋ ನಿಜ. ಆದರೆ ಸಮಾಜದಲ್ಲಿ ಅವಿವಾಹಿತ ತಾಯಂದಿರು ಅನುಭವಿಸುವ ಸ್ಥಿತಿ ಅವಳಿಗೆ ಗೊತ್ತಿರಲಿಲ್ಲ ಎಂದೇನಲ್ಲ. ತಾನು ಲಾಕ್‌ ಡೌನ್‌ ನಲ್ಲಿ ಯಾವುದೇ ತೊಂದರೆಯಲ್ಲಿ ಸಿಲುಕಲಿಲ್ಲ ಎಂಬ ಬಗ್ಗೆ ಅವಳಿಗೆ ಖುಷಿಯಾಗಿತ್ತು.

ಒಂದು ಸಲ ನಿಷೇಧವನ್ನು ಮೀರಿ ನಿಂತರೆ ಮತ್ತೆ ಮತ್ತೆ ಅದನ್ನು ಹಿಮ್ಮೆಟ್ಟುವ ಅಪಾಯ ಇದ್ದೇ ಇರುತ್ತದೆ ಎಂದು ಹೇಳಲಾಗುತ್ತದೆ. ಲಾಕ್‌ ಡೌನ್‌ ನ ನಿರ್ಬಂಧಗಳ ನಡುವೆ ಜೀವನ ಸಹಜ ಸ್ಥಿತಿಗೆ ಬರುತ್ತಿತ್ತು. ಸಂಚಾರ ವ್ಯವಸ್ಥೆ ಆರಂಭವಾಗುತ್ತಿತ್ತು. ಈ ಮಧ್ಯೆ ಪ್ರವಾಸೋದ್ಯಮ ಕೂಡ ತನ್ನ ಚಟುವಟಿಕೆಯ ಹಳಿಗೆ ಬರುತ್ತಿತ್ತು. ಆ ನಂತರ ನಿಕಿತಾ ಮನೋಜ್‌ ಪುನಃ ವೀಕೆಂಡ್‌ ನಲ್ಲಿ ಜೊತೆ ಜೊತೆಗೆ ಕಾಣಿಸಿಕೊಳ್ಳತೊಡಗಿದರು. ಆದರೆ ಈ ಸಂದಿಗ್ಧ ಸಮಯ ನಿಕಿತಾಗೆ ತನ್ನ ಸಂಬಂಧಕ್ಕೆ ಅವಶ್ಯವಾಗಿ ಎಚ್ಚರದಿಂದಿರುವಂತೆ ಮಾಡಿತ್ತು. ಅವಳು ಮತ್ತು ಮನೋಜ್‌ ಇಬ್ಬರೂ ಮದುವೆಯಾಗುವ ನಿರ್ಧಾರ ಮಾಡಿದರು.

ಅಂದಹಾಗೆ ಲವ್ ಮ್ಯಾರೇಜ್‌ ಗಳು ಈಗ ನಿಷಿದ್ಧವಾಗೇನೂ ಉಳಿದಿಲ್ಲ. ಆದರೆ ಎರಡು ಬೇರೆ ಬೇರೆ ಜಾತಿಯ ವ್ಯಕ್ತಿಗಳು ಒಗ್ಗೂಡುವುದನ್ನು ಹಳೆಯ ತಲೆಮಾರಿನವರು ಈಗಲೂ ವಿರೋಧಿಸುತ್ತಾರೆ. ಆರಂಭಿಕ ವಿಘ್ನದ ಬಳಿಕ ಎರಡೂ ಕುಟುಂಬದವರು ಈ ಸಂಬಂಧಕ್ಕೆ ಅಂತೂ ಒಪ್ಪಿಗೆ ಸೂಚಿಸಿದರು.

ಅಕ್ಟೋಬರ್‌ ತಿಂಗಳಲ್ಲಿ ಎಲ್ಲವೂ ಸಾಮಾನ್ಯವಾಗಿದೆಯೆಂದು ತಿಳಿದಾಗ ಎರಡೂ ಕುಟುಂಬದವರು ನಿಕಿತಾ ಮತ್ತು ಮನೋಜರ ನಿಶ್ಚಿತಾರ್ಥ ಮಾಡಿ ಮುಗಿಸಿದರು.

ನಮ್ಮ ಸಮಾಜದಲ್ಲಿ ನಿಶ್ಚಿತಾರ್ಥ ಆಯಿತೆಂದರೆ, ಮದುವೆ ಖಚಿತ ಎಂದು ಭಾವಿಸಲಾಗುತ್ತದೆ. ಇಂತಹ ಸ್ಥಿತಿಯಲ್ಲಿ ಸಮಾಜ ಹಾಗೂ ಸಂಸ್ಕಾರ ಹುಡುಗ ಹುಡುಗಿಯ ಭೇಟಿಗೆ ಯಾವುದೇ ಆಕ್ಷೇಪ ಎತ್ತುವುದಿಲ್ಲ. ಇವರಿಬ್ಬರಂತೂ ಸ್ವಲ್ಪ ಹೆಚ್ಚಾಗಿಯೇ ಭೇಟಿಯಾಗುತ್ತಿದ್ದರು. ಈಗ ಒಂದಷ್ಟು ನಿರ್ಲಕ್ಷ್ಯ ಕೂಡ ಮಾಡುತ್ತಿದ್ದರು.

ಮದುವೆ ಏಪ್ರಿಲ್ ತಿಂಗಳಲ್ಲಿ ನಡೆಯಲಿತ್ತು. ಅದಕ್ಕೆ ಮುಂಚೆಯೇ ಬೇಡದ ಒಂದು ಸಮಸ್ಯೆ ಅವರೆದುರು ಪ್ರತ್ಯಕ್ಷವಾಯಿತು. ನಿಕಿತಾಳಿಗೆ ಈ ಸಲ ಮುಟ್ಟಾಗಲಿಲ್ಲ.

ನಿಕಿತಾ ಈ ವಿಷಯವನ್ನು ಮನೋಜ್‌ ಗೆ ತಿಳಿಸಿದಾಗ, ಅವನು ಎಂದಿನಂತೆ ಬೇಜವಾಬ್ದಾರಿಯುತ ರೀತಿಯಲ್ಲಿ, “ನಿಕಿತಾ, ನೀನೇಕೆ ಟೆನ್ಶನ್‌ ಮಾಡಿಕೊಳ್ಳುತ್ತಿರುವೆ? ಹೇಗೂ ನಮ್ಮ ಮದುವೆ ನಡೆಯಲಿದೆಯಲ್ಲ….. ಬೇಕೆನಿಸಿದರೆ ನೀನು ಗರ್ಭಪಾತ ಮಾಡಿಸಿಕೊಳ್ಳಬಹುದು,” ಅವಳನ್ನು ಚಿಂತಾಮುಕ್ತಗೊಳಿಸಲು ಅವನು ಅವಳಿಗೆ ಸಲಹೆ ನೀಡಿದ.

“ಇಲ್ಲ… ಇಲ್ಲ… ಮೊದಲ ಮಗು ಸೃಷ್ಟಿಯ ಕೊಡುಗೆಯಾಗಿರುತ್ತದೆ. ಮೊದಲ ಗರ್ಭವನ್ನು ತೆಗೆಸಿಹಾಕಿದರೆ, ಮತ್ತೆ ಗರ್ಭ ಧರಿಸಲು ಸಮಸ್ಯೆಯಾಗುತ್ತದೆ. ನಾನು ಈ ಮಗುವನ್ನು ತೆಗೆಸಿ ಹಾಕುವುದಿಲ್ಲ,” ಎಂದು ಹೇಳುತ್ತಾ ಅವಳು ಗರ್ಭಪಾತವನ್ನು ಸ್ಪಷ್ಟವಾಗಿ ನಿರಾಕರಿಸಿದಳು.

ಮಾರ್ಚ್‌ ತಿಂಗಳು ಆರಂಭವಾಗಿತ್ತು. ನಿಕಿತಾಳ ಹೊಟ್ಟೆ ಒಂದಷ್ಟು ಎದ್ದು ಕಾಣತೊಡಗಿತ್ತು. ಅದನ್ನು ಅವಳು ಸಡಿಲ ಬಟ್ಟೆಯಲ್ಲಿ ಬಚ್ಚಿಡಲು ಪ್ರಯತ್ನ ಮಾಡುತ್ತಿದ್ದಳು.

ಮನೋಜ್‌ ಜೊತೆ ಮದುವೆಯಾಗುವ ತನಕ ಹೊಟ್ಟೆಯಲ್ಲಿರುವ ಈ ಮಗು ಅನಧಿಕೃತ ಎಂದು ಕರೆಸಿಕೊಳ್ಳುತ್ತದೆ. ಸಪ್ತಪದಿ ತುಳಿಯುತ್ತಿದ್ದಂತೆ ಈ ಮಗು ಅಧಿಕೃತ ಎನಿಸಿಕೊಳ್ಳುತ್ತದೆ.

ಯಾರಾದರೂ ಯೋಚಿಸಿದ್ದು ಹಾಗೆಯೇ ಆಗುತ್ತಾ? ನಿಕಿತಾ ಯೋಚಿಸಿದಂತೆಯೇ ಆಗಲು ಸಾಧ್ಯವೇ? ಮಾರ್ಚ್‌ ಕೊನೆಯಾಗುತ್ತಾ ಬಂದಿತ್ತು. ಅಷ್ಟರಲ್ಲಿ ಇಡೀ ದೇಶ ಲಾಕ್‌ ಡೌನ್‌ ಮತ್ತೆ ಸ್ಥಿತಿಗೆ ಒಳಗಾಯಿತು. ಕೆಲವು ನಗರಗಳು ಪೂರ್ಣವಾಗಿ ಮತ್ತೆ ಕೆಲವು ಭಾಗಶಃ ಲಾಕ್‌ ಡೌನ್‌ ಹೇರಲಾಯಿತು. ಗಾಬರಿಯಿಂದಾಗಿ ನಿಕಿತಾಳ ಸ್ಥಿತಿ ಯಾರಿಗೂ ಬೇಡವಾಗಿತ್ತು.

ಕೊರೋನಾವನ್ನು ನಿಯಂತ್ರಣದಲ್ಲಿಡಲು ಸರ್ಕಾರ ಎಲ್ಲ ರೀತಿಯ ಕಾರ್ಯಕ್ರಮ ಹಾಗೂ ಮದುವೆ ಸಮಾರಂಭಗಳ ಮೇಲೆ ತಡೆಯೊಡ್ಡಲಾಯಿತು. ಮದುವೆಯನ್ನು 50 ಜನರಿಗಿಂತ ಕಡಿಮೆ ಜನರ ನಡುವೆ ಮಾಡಲು ಅವಕಾಶವಿತ್ತು. ಮನೋಜ್‌ ನ ಮನೆಯವರು ಮದುವೆಯ ದಿನಾಂಕವನ್ನು ಮುಂದೂಡುವ ಬಗ್ಗೆ ಹೇಳಿದಾಗ ಅದನ್ನು ನಿಕಿತಾಳ ಮನೆಯವರು ಒಪ್ಪಿದರು. ಮದುವೆಯನ್ನು ವಿಜೃಂಭಣೆಯಿಂದ ಮಾಡಬೇಕು. ಎಲ್ಲ ಸಂಬಂಧಿಕರು, ಸ್ನೇಹಿತರು ಅದರಲ್ಲಿ ಪಾಲ್ಗೊಳ್ಳಬೇಕು ಎಂಬುದೇ ಅವರ ಇಚ್ಛೆಯಾಗಿತ್ತು.

ನಿಕಿತಾ ಈ ವಿಷಯ ಕೇಳಿ ಅವಳ ಕಾಲ ಕೆಳಗಿನ ನೆಲ ಅದುರಿದಂತಾಯಿತು. ಮುಂದಿನ ದಿನಾಂಕ ಏನಿಲ್ಲವೆಂದರೂ 3-4 ತಿಂಗಳ ಬಳಿಕವೇ ನಿರ್ಧಾರವಾಗುತ್ತದೆ. ಅಲ್ಲಿಯವರೆಗೆ ಅವಳು ತನ್ನ ಹೊಟ್ಟೆಯನ್ನು ಹೇಗೆ ಬಚ್ಚಿಟ್ಟುಕೊಳ್ಳಲು ಸಾಧ್ಯ? ಮೊದಲು ನಿಕಿತಾ ಮನೋಜ್‌ ಗೆ ಹಿಂದೆ ನಿರ್ಧರಿಸಲಾಗಿದ್ದ ದಿನಾಂಕದಂದೇ ಮದುವೆ ಆಗುವ ಬಗ್ಗೆ ಒತ್ತಡ ಹೇರಿದಳು. ಅವನು ತನ್ನ ಕುಟುಂಬದ  ಮುಂದೆ ಈ ವಿಷಯ ಹೇಳಿದಾಗ ಅವರಾರೂ ಅವನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಕೊನೆಗೊಮ್ಮೆ ಅವಳು ಧೈರ್ಯ ಮಾಡಿ ತನ್ನ ಅಮ್ಮನೊಂದಿಗೆ ಫೋನ್‌ ನಲ್ಲಿ ಮಾತನಾಡಿದಳು. ಮದುವೆಯಾಗುವ ಮೊದಲೇ ಮಗಳು ತಾಯಿಯಾಗುತ್ತಿರುವ ಸುದ್ದಿ ಕೇಳಿ ಅಳಮ್ಮನಿಗೆ ಪ್ರಜ್ಞೆ ತಪ್ಪಿದಂತಾಯಿತು.

“ನೀನು ಇಷ್ಟೊಂದು ತಿಳಿವಳಿಕೆಯುಳ್ಳವಳಾಗಿಯೂ ಇಂತಹ ತಪ್ಪು ಹೇಗೆ ಮಾಡಿದೆ?” ಅಮ್ಮ ತಲೆ ಚಚ್ಚಿಕೊಂಡರು. ಆದರೆ ಈಗ ಏನೂ ಮಾಡಲು ಸಾಧ್ಯವಿರಲಿಲ್ಲ. ಕೆಲವೇ ಕೆಲವು ಜನರ ಸಮ್ಮುಖದಲ್ಲಾದರೂ ಸರಿ ಮಗಳ ಮದುವೆ ಮಾಡಲೇಬೇಕು. ಇಲ್ಲದಿದ್ದರೆ ತಮ್ಮ ಪ್ರತಿಷ್ಠೆಗೆ ಪೆಟ್ಟುಬೀಳುತ್ತದೆ ಎಂದು ಅಮ್ಮ ಗಾಬರಿಗೊಂಡರು.

ಅಮ್ಮ ಅಪ್ಪನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಆಪತ್ತಿನ ಸೂಚನೆ ಕೊಟ್ಟರು. ಅವರು ಯೋಚನೆ ಮಾಡಿ ಮನೋಜ್‌ ನ ತಾಯಿ ತಂದೆಗೆ ವಸ್ತುಸ್ಥಿತಿ ವಿವರಿಸಿದರು. ಅವರು ಪ್ರಗತಿಪರ ವಿಚಾರಧಾರೆಯವರಾಗಿದ್ದರಿಂದ ಮೊದಲೇ ನಿಗದಿಪಡಿಸಿದ ದಿನದಂದು ಮದುವೆ ಮಾಡಲು ಒಪ್ಪಿಕೊಂಡರು. ಎಲ್ಲರೂ ನಿಶ್ಚಿಂತತೆಯ ನಿಟ್ಟುಸಿರುಬಿಟ್ಟರು. ಆದರೆ ಪ್ರತಿಯೊಂದು ಕಥೆಯ ಅಂತ್ಯ ಸುಖಾಂತ್ಯವಾಗುತ್ತದೆಂದು ಹೇಳಲಾಗದು. ನಿಕಿತಾಳ ಇನ್ನಷ್ಟು ಪರೀಕ್ಷೆಗಳನ್ನು ಎದುರಿಸಲೇಬೇಕಾಗಿತ್ತು.

ಇತ್ತ ಮದುವೆಗೆ ಇನ್ನೂ ಕೆಲವು ದಿನ ಮಾತ್ರ ಬಾಕಿ ಉಳಿದಿತ್ತು. ಆದರೆ ಕೊರೋನಾದ ಹಾವಳಿ ಇನ್ನೂ ಕಡಿಮೆ ಆಗಿರಲಿಲ್ಲ. ದಿನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಹೊರಟಿತ್ತು. ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಹೀಗಾಗಿ ಕೆಲವು ಕಡೆ ಕರ್ಫ್ಯೂ ಹಾಗೂ ಮತ್ತೂ ಕೆಲವು ಕಡೆ ಲಾಕ್‌ ಡೌನ್‌ ಹೇರಲಾಗಿತ್ತು. ಪರಿಸ್ಥಿತಿ ಎಷ್ಟು ವಿಕೋಪಕ್ಕೆ ಹೋಗಿತ್ತೆಂದರೆ, ಮದುವೆಯ ಸೀರೆ ಹಾಗೂ ವರನ ಡ್ರೆಸ್‌ ಖರೀದಿಸಲು ಕೂಡ ಸಾಧ್ಯವಾಗದಂತಾಗಿತ್ತು. ಏಕೆಂದರೆ ಅಂಗಡಿಗಳು ಅನಿರ್ದಿಷ್ಟ ಅವಧಿಗೆ ಮುಚ್ಚಲ್ಪಟ್ಟಿದ್ದವು.

ಕೊರೋನಾದ ಎರಡನೇ ಅಲೆ ತನ್ನ ಪ್ರಚಂಡ ಪ್ರಕೋಪವನ್ನು ತೋರಿಸುತ್ತಿತ್ತು. ಸಾವು ಸಂಭವಿಸದ ಗಲ್ಲಿಗಳೇ ಇರಲಿಲ್ಲ. ಅದಕ್ಕೆ ಮಿಗಿಲಾಗಿ ಆ್ಯಕ್ಸಿಜನ್‌ ಕೊರತೆ ಹಾಗೂ ಔಷಧಿಗಳ ಲಭ್ಯತೆ ಕಡಿಮೆಯಾಗಿ ಆಸ್ಪತ್ರೆಗಳಲ್ಲಿ ಬೆಡ್‌ ಸಿಗದ ಪರಿಸ್ಥಿತಿ ಎದುರಾಯಿತು. ಯಾವುದೇ ಒಬ್ಬ ವ್ಯಕ್ತಿ ಕೊರೋನಾಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದರೆ, ಅವನು ವಾಪಸ್‌ ಬರುತ್ತಾನೆ ಎಂಬ ಯಾವ ಗ್ಯಾರಂಟಿಯೂ ಇರಲಿಲ್ಲ. ಆಸ್ಪತ್ರೆಗಳಲ್ಲಿ ಅಂತಹದೇನು ನಡೆದಿತ್ತೋ ಗೊತ್ತೇ ಆಗುತ್ತಿರಲಿಲ್ಲ. ಆಸ್ಪತ್ರೆಗಳು ಸಾವಿನ ಮನೆ ಎಂಬಂತಹ ಸ್ಥಿತಿ ನಿರ್ಮಾಣವಾಗಿತ್ತು.

ನಿಕಿತಾ ಹಾಗೂ ಮನೋಜರ ಮನೆಯವರು ಎಷ್ಟೆಲ್ಲಾ ಮುಂಜಾಗ್ರತೆ ವಹಿಸಿ ಮದುವೆಯ ಸಿದ್ಧತೆಯಲ್ಲಿ ತೊಡಗಿದ್ದರು. ಪ್ರತಿದಿನ ಪರಿಸ್ಥಿತಿ ಬಿಕ್ಕಟ್ಟಾಗುತ್ತಾ ಹೊರಟಿತ್ತು. ಇಂತಹ ಸ್ಥಿತಿಯಲ್ಲಿ ಎಲ್ಲವನ್ನೂ ಸುಸೂತ್ರವಾಗಿ ನಡೆಸಿಕೊಂಡು ಹೋಗುವುದು ಸಾಧ್ಯವಿರಲಿಲ್ಲ. ಆದಾಗ್ಯೂ ಎಲ್ಲರೂ ಈ ಮದುವೆ ನಿರ್ವಿಘ್ನವಾಗಿ ನಡೆಯಲೆಂದು ಬಯಸುತ್ತಿದ್ದರು. ಏಕೆಂದರೆ ಈಗ ನಿಕಿತಾ ಗರ್ಭಪಾತ ಮಾಡಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ.

ಮದುವೆಗೆ ಇನ್ನೂ 1 ವಾರ ಮಾತ್ರ ಬಾಕಿ ಇತ್ತು. ಹೊರಗಿನಿಂದ ಯಾರೂ ಅತಿಥಿಗಳು ಬರುವವರಿರಲಿಲ್ಲ. ಇಬ್ಬರ ಮನೆಯ ಕೆಲವೇ ಕೆಲವು ಜನರು ಹಾಗೂ ಪುರೋಹಿತರು ಸೇರಿ 30-40 ಜನ ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳುವವರಿದ್ದರು. ನಿಕಿತಾ ಹಾಗೂ ಮನೋಜ್‌ ಕಾರು ಬಾಡಿಗೆ ಪಡೆದು ತಮ್ಮ ತಮ್ಮ ಊರು ಸೇರಿದರು.

ಭವಿಷ್ಯದಲ್ಲಿ ಘಟಿಸಲಿರುವ ಅಪ್ರಿಯ ಘಟನೆಯೊಂದರ ಸುಳಿವು ನಮ್ಮ ಆರನೇ ಇಂದ್ರಿಯಕ್ಕೆ ಸಿಗುತ್ತದಂತೆ. ಆ ಸುಳಿವನ್ನು ನಾವು ಹೇಗೆ ಅರ್ಥೈಸಿಕೊಳ್ಳುತ್ತೇವೆ ಅದರ ಮೇಲೆ ಅದು ಅವಲಂಬಿಸಿರುತ್ತದೆ. 2 ದಿನಗಳ ಬಳಿಕ ನಿಕಿತಾಳ ಹೃದಯ ಯಾವುದೋ ಅನಿಷ್ಟ ಘಟನೆಯೊಂದರ ಬಗ್ಗೆ ಜೋರಾಗಿ ಹೊಡೆದುಕೊಳ್ಳುತ್ತಿತ್ತು. ಆ ದಿನ ಸಂಜೆ ಮನೋಜ್‌ ನಿಕಿತಾಳಿಗೆ ಫೋನ್‌ ನಲ್ಲಿ ತನಗೆ ಸಿಕ್ಕಾಪಟ್ಟೆ ಸುಸ್ತಾಗುತ್ತಿದೆ ಎಂದು ಹೇಳಿದ. ಆಗ ಅವಳು ತನ್ನ ಮನಸ್ಸಿಗೆ ಏನೋ ಸಮಜಾಯಿಷಿ ನೀಡಿ ಅವನಿಗೆ, “ಇದು ಪ್ರಯಾಣದ ಸುಸ್ತು ಅಷ್ಟೇ ಹೊರತು ಬೇರೇನಲ್ಲ,” ಎಂದು ಹೇಳಿದಳು. ಆದರೆ ಅವಳ ಒಳ ಮನಸ್ಸು ಅವಳು ಹೇಳಿದ್ದನ್ನು ಒಪ್ಪಲು ತಯಾರಿರಲಿಲ್ಲ.

ಮದುವೆಗೆ ಮೂರು ದಿನ ಮೊದಲು ಮನೋಜ್‌ ಗೆ ತೀವ್ರ ಜ್ವರ ಬಂದಿತು. ಅದನ್ನು ಪರೀಕ್ಷಿಸಿದಾಗ ಕೊರೋನಾ ಪಾಸಿಟಿವ್ ‌ಎನ್ನುವುದೇ ಗೊತ್ತಾಯಿತು. ಆ ಸುದ್ದಿ ತಿಳಿಯುತ್ತಿದ್ದಂತೆ ನಿಕಿತಾಳಿಗೆ ಪ್ರಜ್ಞೆ ತಪ್ಪಿದಂತಾಯ್ತು. ಅವಳಿಗೆ ಗೊತ್ತಿಲ್ಲದಂತೆಯೇ ಅವಳ ಕೈ ಹೊಟ್ಟೆಯ ಮೇಲೆ ಹೋದಾಗ ಅಲ್ಲೊಂದು ಜೀವ ತಾನು ಅಧಿಕೃತತೆಯ ನಿರೀಕ್ಷೆಯಲ್ಲಿ ಕಾಯ್ದು ಕುಳಿತಿತ್ತು.

ಶೇ.90ರಷ್ಟು ಜನರು ಆಸ್ಪತ್ರೆಗೆ ಹೋಗದೆಯೇ ಗುಣಮುಖರಾಗುತ್ತಾರೆ. ಇದರಲ್ಲಿ ಗಾಬರಿ ಆಗಬೇಕಿಲ್ಲ ಎಂದು ಬಹಳಷ್ಟು ಜನರು ಅವರಿಗೆ ಧೈರ್ಯ ಕೊಡುತ್ತಿದ್ದರು. ಆದರೆ ಮನೋಜ್‌ ಶೇ.10ರ ಗುಂಪಿನಲ್ಲಿದ್ದ. ಅವರ ಸ್ಥಿತಿ ವೈರಸ್‌ ನ ಕಾರಣದಿಂದ ಘಾತಕವಾಗುತ್ತದೆ. ಆದದ್ದು ಹಾಗೆಯೇ. ಮರುದಿನವೇ ಆ್ಯಕ್ಸಿಜನ್‌ ಲೆವೆಲ್ ‌ಕಡಿಮೆಯಾಗಿ ಅವನನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಬೇಕಾಯಿತು. ಆ ಬಳಿಕ ಏನಾಯ್ತು? ಏನಿಲ್ಲ ಎಂಬುದರ ಬಗ್ಗೆ ಗೊತ್ತೇ ಆಗಲಿಲ್ಲ. ಸರಿಯಾಗಿ ಮದುವೆ ನಡೆಯಬೇಕಾದ ದಿನವೇ ಮನೋಜ್‌ ಇನ್ನಿಲ್ಲ ಎಂಬ ಸುದ್ದಿ ಬಂದಿತು.

ನಿಕಿತಾಳಂತೂ ಯೋಚಿಸುವ ಶಕ್ತಿಯನ್ನೇ ಕಳೆದುಕೊಂಡಿದ್ದಳು. ತನ್ನೊಡಲಲ್ಲಿ ಜೀವ ತಳೆಯುತ್ತಿದ್ದ ಕೂಸನ್ನು ಅವಳು ತನ್ನ ಪ್ರೇಮದ ಸಂಕೇತವೆಂದು ಭಾವಿಸಿದ್ದಳು. ಅದನ್ನು ಯಾವುದೇ ಸ್ಥಿತಿಯಲ್ಲಾದರೂ ಉಳಿಸಿಕೊಳ್ಳಬೇಕೆನ್ನುವುದು ಅವಳ ಯೋಚನೆಯಾಗಿತ್ತು. ಅದೇ ಭಾಗ ಈಗ ಅವಳಿಗೆ ತನ್ನ ರೋಗಗ್ರಸ್ತ ಭಾಗ ಎಂದೆನಿಸತೊಡಗಿತ್ತು.

ಎರಡೂ ಮನೆಗಳಲ್ಲಿ ಅಲ್ಲೋಲ ಕಲ್ಲಲೋಲ ಸೃಷ್ಟಿಯಾಯಿತು. ಆದರೆ ಎರಡೂ ಮನೆಯ ಪರಿಸ್ಥಿತಿ ಬೇರೆ ಬೇರೆಯಾಗಿತ್ತು. ಒಂದು ಕುಟುಂಬ ತನ್ನ ದುಡಿಯುವ ಮಗನನ್ನು ಕಳೆದುಕೊಂಡಿತ್ತು. ಇನ್ನೊಂದು ಕುಟುಂಬದಲ್ಲಿ ಅವರ ಮಾನ ಗೌರವ ಪ್ರತಿಷ್ಠೆ ಪಣಕ್ಕೊಡಲ್ಪಟ್ಟಿತ್ತು. ಮಗಳ ಭವಿಷ್ಯದ ಬಗ್ಗೆ ಯೋಚಿಸಿ ಯೋಚಿಸಿ ಅವರು ಕಣ್ಣೀರಿಡುತ್ತಿದ್ದರು.

ಮನೋಜ್‌ ನ ಮನೆಯವರನ್ನು ಭೇಟಿಯಾಗಿ ಮಾತನಾಡಿಸಿಕೊಂಡು ಬರಬೇಕೆಂದು ಅಮ್ಮ ಅಪ್ಪ, ನಿಕಿತಾ ಅಲ್ಲಿಗೆ ಹೋದರು. “ನಾನು ನಿಮಗೆ ಏನೂಂತ ಸಾಂತ್ವನ ಹೇಳೋದು. ಒಂದೇ ದೋಣಿಯ ಸವಾರರು,” ಎಂದು ಹೇಳುತ್ತಾ ನಿಕಿತಾಳ ಅಪ್ಪ ಅತ್ತುಬಿಟ್ಟರು. ಅಮ್ಮನ ಮಾತುಗಳಂತೂ ಮೊದಲೇ ಕಣ್ಣೀರಲ್ಲಿ ಹರಿದುಹೋಗಿದ್ದ.

“ಏನು ಮಾಡಲಿ ಹೇಳಿ? ನಮಗೆ ಇನ್ನೊಬ್ಬ ಮಗನಾದರೂ ಇದ್ದಿದ್ದರೆ, ನಿಕಿತಾಳನ್ನು ಕೈಬಿಡುವ ಪ್ರಶ್ನೆಯೇ ಬರುತ್ತಿರಲಿಲ್ಲ,” ಎಂದು ಹೇಳುತ್ತಾ ಮನೋಜ್‌ ನ ತಾಯಿ ನಿಕಿತಾಳನ್ನು ತಬ್ಬಿಕೊಂಡರು.

“ನಾವಂತೂ ಜೀವಂತ ಇದ್ದೂ ಸತ್ತಂತಾಗಿದೆ. ಈಗ 6ನೇ ತಿಂಗಳಲ್ಲಿ ಮಗುವನ್ನು ತೆಗೆಯಿಸಿ ಹಾಕಿದರೆ ನಾವು ನಮ್ಮ ಮಗಳನ್ನು ಕಳೆದುಕೊಳ್ಳಬೇಕಾಗುತ್ತದೆ,” ಎಂದು ಹೇಳುತ್ತಾ, ನಿಕಿತಾಳ ಅಮ್ಮ ಪುನಃ ಬಿಕ್ಕಿ ಬಿಕ್ಕಿ ಅಳತೊಡಗಿದರು.

ಆಗ ಮನೋಜ್‌ ನ ಚಿಕ್ಕಪ್ಪನ ಮಗಳು ಹೇಳಿದಳು, “ಇಲ್ಲಿನ ಹಿರಿಯರು ಇಷ್ಟಪಡುವುದಾದರೆ, ನಿಕಿತಾ ಹಾಗೂ ಮನೋಜ್‌ ನ ಹುಟ್ಟಲಿರುವ ಮಗುವನ್ನು ನಾವು ದತ್ತು ತೆಗೆದುಕೊಳ್ಳುತ್ತೇವೆ. ನಾವಂತೂ ಮಗುವಿಗಾಗಿ ಅದೆಷ್ಟೇ ಪ್ರಯತ್ನ ಮಾಡಿದರೂ ಸಾಧ್ಯವಾಗಿಲ್ಲ. ಲಾಕ್‌ ಡೌನ್‌ ಮುಗಿದ ಬಳಿಕ ನಾವು ಯಾವುದಾದರೊಂದು ಮಗುವನ್ನು ದತ್ತು ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದೆ,” ಎಂದು ವನಿತಾ ಹೇಳಿದಳು.

ವನಿತಾಳ ಮಾತಿಗೆ ಅವಳ ಗಂಡ ರಮಣ್‌ ಕೂಡ ಒಪ್ಪಿಗೆ ಸೂಚಿಸುತ್ತಿದ್ದಂತೆ, ನಿಕಿತಾಳ ಅಮ್ಮನಿಗೆ ಒಂದಿಷ್ಟು ನಿರಾಳತೆ ಎನಿಸಿತು. ಎಲ್ಲರೂ ಈ ಬದಲಾದ ವಿಷಯದ ಬಗ್ಗೆ ಚರ್ಚಿಸತೊಡಗಿದರು.

ಕೊನೆಯಲ್ಲಿ ನಿರ್ಧಾರಾದ ವಿಷಯವೇನೆಂದರೆ, ನಿಕಿತಾ ಕೆಲವು ತಿಂಗಳು ರಜೆ ಪಡೆದು ವನಿತಾ ಹಾಗೂ ರಮಣ್‌ ಜೊತೆಗೆ ಹೈದರಾಬಾದ್‌ ಗೆ ಹೋಗುವುದು. ಅಲ್ಲಿಯೇ ಅವಳು ಮಗುವಿಗೆ ಜನ್ಮ ನೀಡುವುದು, ಒಂದು ತಿಂಗಳ ಬಳಿಕ ಮಗುವನ್ನು ಕಾನೂನು ರೀತ್ಯ ವನಿತಾಳಿಗೆ ಕೊಡುವುದೆಂದು. ದತ್ತು ಪ್ರಕ್ರಿಯೆಗೆ `ಸೆಮಿ ಓಪನ್‌ ಅಡಾಪ್ಷನ್‌’ ಅನುಸರಿಸಲು ತೀರ್ಮಾನಿಸಲಾಯಿತು. ಇದರ ಪ್ರಕಾರ ನಿಕಿತಾ ಅವರಿಗೆ ಮಗುವನ್ನು ಒಪ್ಪಿಸಿದ ಬಳಿಕ ಭೇಟಿ ಆಗುವ ಹಾಗಿಲ್ಲ.

ಮೊದಲೇ ನಿರ್ಧರಿಸಿದ ಪ್ರಕಾರ, ನಿಕಿತಾ ಅವರೊಂದಿಗೆ ಹೈದರಾಬಾದ್‌ ಗೆ ಹೋದಳು. ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಜೊತೆಗೆ ತಾನು ಯಾವುದೇ ರೀತಿಯ ಆತ್ಮೀಯತೆ ಬೆಳೆಸಿಕೊಳ್ಳುವುದಿಲ್ಲವೆಂದು ಅವಳು ತನ್ನ ಮನಸ್ಸಿಗೆ ಹೇಳಿಕೊಂಡಳು. ತನ್ನ ಉಬ್ಬಿದ ಹೊಟ್ಟೆಯನ್ನು ತನ್ನ ದೇಹದಲ್ಲಿ ಬೆಳೆಯುತ್ತಿರುವ ಒಂದು ಗಂಟು ಎಂದು ಭಾವಿಸುವೆ. ಅದಕ್ಕೆ ಕೆಲವು ತಿಂಗಳುಗಳ ಬಳಿಕ ಆಪರೇಷನ್‌ ಆಗುತ್ತದೆ. ಆ ಬಳಿಕ ಅದು ಮತ್ತೆ ಸಾಮಾನ್ಯ ಸ್ಥಿತಿಗೆ ಬರುತ್ತದೆ ಎಂದು ತಿಳಿಯುವೆ, ಎಂದುಕೊಂಡಳು.

ವನಿತಾ ಹಾಗೂ ರಮಣ್‌ ನಿಕಿತಾಳ ಬಗ್ಗೆ ಪರಿಪೂರ್ಣ ಗಮನ ಕೊಡುತ್ತಿದ್ದರು. ಅವಳು ಯಾವಾಗಲೂ ಖುಷಿಯಾಗಿರಬೇಕೆಂದು ಅವರು ಬಯಸುತ್ತಿದ್ದರು. ಆದರೆ ಹೇಗೆ ತಾನೇ ಖುಷಿಯಿಂದಿರಲು ಸಾಧ್ಯ? ಈ ಮಗುವಿನ ಮೇಲೆ ತನಗೆ ಹುಟ್ಟುವ ತನಕ ಮಾತ್ರ ಅಧಿಕಾರ ಇದೆ ಎಂಬುದು ಅವಳಿಗೆ ಅರಿವಿತ್ತು. ಹಾಗಾಗಿಯೇ ಅವಳು ಮಗುವಿನ ಮೋಹದಿಂದ ಹೊರಬರುತ್ತಿದ್ದಳು.

ಹೆರಿಗೆಯ ಸಮಯ ಹತ್ತಿರ ಬರುತ್ತಿತ್ತು. ಅವಳಿಗಾಗಿ ಒಂದು ಒಳ್ಳೆಯ ಮೆಟರ್ನಿಟಿ ಹೋಮ್ ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ವೈದ್ಯರು ಕೂಡ ಅವಳ ದೇಹದಲ್ಲಾಗುತ್ತಿದ್ದ ಪರಿವರ್ತನೆಗಳ ಮೇಲೆ ನಿಗಾ ಇಟ್ಟಿದ್ದರು. ಇಷ್ಟೆಲ್ಲ ವ್ಯವಸ್ಥೆಗಳ ಹೊರತಾಗಿಯೂ ನಿಕಿತಾ ಯಾವಾಗಲೂ ಬಾಲ್ಕನಿಯ ಹತ್ತಿರದ ಕಿಟಕಿಯಲ್ಲಿ ಶೂನ್ಯದತ್ತ ನೋಡುತ್ತಾ ಕಾಲ ಕಳೆಯುತ್ತಿದ್ದಳು.

ಅದೊಂದು ದಿನ ಬೆಳಗ್ಗೆ ನಿಕಿತಾಳಿಗೆ ಬೆಕ್ಕೊಂದರ ಗಲಾಟೆಯಿಂದ ಒಮ್ಮೆಲೆ ಎಚ್ಚರವಾಯಿತು. ಹೊರಗಡೆ ಇಣುಕಿ ನೋಡಿದಾಗ ಬಾಲ್ಕನಿಯಲ್ಲಿ ಬೆಕ್ಕೊಂದು ತನ್ನ ಮೂರು ಮರಿಗಳನ್ನು ಎತ್ತಿಕೊಂಡು ಬಂದಿದೆ. ಆ ಮರಿಗಳು ಎಷ್ಟು ಪುಟ್ಟದಾಗಿದ್ದವೆಂದರೆ, ಅವಿನ್ನೂ ಕಣ್ಣು ಸಹ ಬಿಟ್ಟಿರಲಿಲ್ಲ. ತಾಯಿ ಬೆಕ್ಕು ತನ್ನ ಮರಿಗಳನ್ನು ಒಂದಾದ ಮೇಲೊಂದರಂತೆ ತನ್ನ ನಾಲಿಗೆಯಿಂದ ನೆಕ್ಕುತ್ತಿತ್ತು. ಒಮ್ಮೆ ಅದು ಬಾಹುಗಳಲ್ಲಿ ತೆಗೆದುಕೊಳ್ಳಲು ಪ್ರಯತ್ನಿಸಿದರೆ, ಮತ್ತೊಮ್ಮೆ ಎದೆಗಾನಿಸಿಕೊಂಡು ಹಾಲು ಕುಡಿಸುತ್ತಿತ್ತು. ಇನ್ನೊಮ್ಮೆ ಅದು ಒಂದು ಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ಹೋಗಲು ಪ್ರಯತ್ನಿಸಿದಾಗ ನಿಕಿತಾಳ ಹೃದಯ ನಿಂತಂತೆ ಭಾಸವಾಯಿತು.

`ಏ ಬೆಕ್ಕೇ ಸ್ವಲ್ಪ ಜಾಗ್ರತೆಯಿಂದ ತೆಗೆದುಕೊಂಡು ಹೋಗು. ಮರಿಗೆ ಎಲ್ಲಾದರೂ ಪೆಟ್ಟಾದೀತು,’ ಎಂದು ಅವಳು ಮನಸ್ಸಿನಲ್ಲಿಯೇ ಹೇಳಿಕೊಂಡಳು. ತಾಯಿ ಬೆಕ್ಕು ಮರಿಗಳ ಜೊತೆ ನಡೆಸುತ್ತಿದ್ದ ಮುದ್ದಾಟ ನೋಡಿ ತನ್ನ ಮನಸ್ಸಿನಲ್ಲಾಗುತ್ತಿರುವ ಬದಲಾವಣೆಗಳನ್ನು ಗಮನಿಸತೊಡಗಿದಳು.

ಆ ಪುಟ್ಟ ಮರಿಗಳ `ಮ್ಯಾಂವ್‌’ ಶಬ್ದ ಎಷ್ಟು ಇಂಪಾಗಿತ್ತೆಂದರೆ, ಆ ಶಬ್ದಗಳಲ್ಲೇ ನಿಕಿತಾ ಕಳೆದುಹೋದಳು. ಆಕಸ್ಮಿಕವಾಗಿ ಅವಳಿಗೆ ತನ್ನ ಸ್ತನಗಳಲ್ಲಿ ಹಾಲು ಸ್ರವಿಸಿದಂತೆ ಭಾಸವಾಯಿತು. ಆ ಬಳಿಕ ಅವಳು ಕೈಯಿಂದ ತನ್ನ ಹೊಟ್ಟೆಯನ್ನು ಸವರಿಕೊಂಡಾಗ ಅವಳ ಕಣ್ಣಿನಿಂದ ನೀರು ತಂತಾನೇ ಹರಿಯತೊಡಗಿತು.

dhara-ke-viprit-story2

ಅವಳ ಕಣ್ಣುಗಳು ಕಿಟಕಿಯಿಂದ ಬದಿಗೆ ಸರಿದರೂ ಕಿವಿಗಳು ಮಾತ್ರ ಅಲ್ಲಿಂದ ದೂರ ಸರಿದಿರಲಿಲ್ಲ. ಅವುಗಳ ಮ್ಯಾಂವ್‌…. ಮ್ಯಾಂವ್‌…..  ಮೋಹಕ ಧ್ವನಿಯನ್ನು ಕೇಳಿ ಅವಳಲ್ಲಿ ವಿಚಿತ್ರ ಕಂಪನ ಉಂಟಾಯಿತು. ಆನಂತರ ಅವಳು ತನಗಾಗಿ ತಂದಿಟ್ಟಿದ್ದ ಹಾಲನ್ನು ಬಟ್ಟಲಲ್ಲಿ ಹಾಕಿ ಬಾಲ್ಕನಿಯಲ್ಲಿ ಇಟ್ಟಳು.

ಆ ರಾತ್ರಿ ನಿಕಿತಾಳಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ವನಿತಾ ಹಾಗೂ ರಮಣ್‌ ಗೂ ಇದೇ ಗಳಿಗೆಯ ನಿರೀಕ್ಷೆಯಿತ್ತು. ಅವರು ತಕ್ಷಣವೇ ಅವಳನ್ನು ಆಸ್ಪತ್ರೆಗೆ ಸೇರಿಸಿದರು. 2 ಗಂಟೆಯಲ್ಲಿಯೇ ಅವಳು ಪುಟ್ಟ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ನಿಕಿತಾ ಇನ್ನೂ ಔಷಧಿಗಳ ಪರಿಣಾಮದಿಂದ ಅರೆ ಪ್ರಜ್ಞಾಸ್ಥೆಯಲ್ಲಿದ್ದಳು. ಆದರೆ ಅವಳ ಕೈಗಳು ತನ್ನ ಅಕ್ಕಪಕ್ಕ ಏನ್ನನ್ನೋ ಹುಡುಕುತ್ತಿದ್ದವು. ವನಿತಾ ಅವಳ ನೋವನ್ನು ಅರ್ಥ ಮಾಡಿಕೊಂಡಳು. ಅವಳು ತಕ್ಷಣವೇ ನಿಕಿತಾಳ ಕೈಯನ್ನು ನವಜಾತ ಶಿಶುವಿಗೆ ಸ್ಪರ್ಶಿಸಿದಳು. ನಿಕಿತಾಳಿಗೆ ಆ ಕೋಮಲ ಸ್ಪರ್ಶದ ಅನುಭೂತಿ ಆಗುತ್ತಿದ್ದಂತೆಯೇ ಪುಳಕಿತಳಾದಳು.

ಸಂಜೆ ನಿಕಿತಾಳಿಗೆ ಪ್ರಜ್ಞೆ ಬರುತ್ತಿದ್ದಂತೆ ನರ್ಸ್‌ ಅವಳಿಗೆ ಎದೆ ಹಾಲು ಕುಡಿಸಲು ಹೇಳಿದಳು. ಅಷ್ಟಿಷ್ಟು ಪ್ರಯತ್ನದ ಬಳಿಕ ಮಗು ಹಾಲು ಕುಡಿಯತೊಡಗಿತು. ನಿಕಿತಾ ಆಗ ಅಲೌಕಿಕ ಸುಖದಲ್ಲಿ ಮುಳುಗಿದಳು. ಅದು ಎಂತಹ ಒಂದು ಅನುಭವವಾಗಿತ್ತೆಂದರೆ ಅದನ್ನು ಶಬ್ದಗಳಲ್ಲಿ ವರ್ಣಿಸಲಾಗದು. ನಿಕಿತಾಳ ಕೈಗಳು ಮಗುವಿನ ತಲೆಯನ್ನು ನೇವರಿಸತೊಡಗಿದವು. ಹಾಲು ಕುಡಿಯುತ್ತಿರುವಾಗ ಮಗುವಿನ ಬಾಯಿಂದ ಹೊರಹೊಮ್ಮುತ್ತಿದ್ದ ಶಬ್ದ ಕೋಣೆಯಲ್ಲಿ ಕೊಳಲೂದಿದಂತೆ ಭಾಸವಾಗುತ್ತಿತ್ತು. ವನಿತಾ ಕೂಡ ಮನಸ್ಸಿನಲ್ಲಿಯೇ ಈ ಸುಖದ ಕಲ್ಪನೆಯಲ್ಲಿ ಮುಳುಗೇಳುತ್ತಿದ್ದಳು.

ನಾಲ್ಕು ದಿನಗಳ ನಂತರ ನಿಕಿತಾ ಆಸ್ಪತ್ರೆಯಿಂದ ಮನೆಗೆ ಬಂದಳು. ಮನೆಗೆ ಬರುತ್ತಿದ್ದಂತೆ ಬೆಕ್ಕುಗಳಿದ್ದ ಕಡೆ ಹೋಗಿ ಬಟ್ಟಲಿಗೆ ಹಾಲು ಹಾಕಿದಳು. ಆವರೆಗೆ ನಿಕಿತಾಳ ಅಮ್ಮ ಕೂಡ ಬಾಣಂತಿಯನ್ನು ನೋಡಿಕೊಳ್ಳಲು ಅಲ್ಲಿಗೆ ಬಂದಿದ್ದರು. ಇಡೀ ಕುಟುಂಬ ಆ ಒಂದು ಮಗುವಿನ ಸುತ್ತ ಇತ್ತು. ನೋಡ ನೋಡುತ್ತಿದ್ದಂತೆ ಹೆರಿಗೆಯಾಗಿ ತಿಂಗಳಾಗುತ್ತ ಬಂತು. ನಿಕಿತಾ ಈಗ ಮಗುವಿನಿಂದ ದೂರ ಹೋಗುವ ಸಮಯ ಬಂದಿತ್ತು. ರಮಣ್‌ ಮಗುನ್ನು ದತ್ತು ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ವೇಗವಾಗಿ ನಡೆಸುತ್ತಿದ್ದ.

ಅದೊಂದು ಸಂಜೆ ಅವನು ಆಫೀಸಿನಿಂದ ಹಿಂತಿರುಗಿದಾಗ ಬಹಳ ಸಂತೋಷವಾಗಿದ್ದ.

“ನಾನು ಎಲ್ಲ ಅವಶ್ಯಕ ಔಪಚಾರಿಕತೆಗಳನ್ನು ಮುಗಿಸಿರುವೆ. ಇನ್ನೆರಡು ದಿನಗಳಲ್ಲಿ ನಮ್ಮ ಮನೆಯ ಸರ್ವೆ ನಡೆಸಲಾಗುತ್ತದೆ. ತೃಪ್ತಿಕರ ವರದಿ ಬಂದ ಬಳಿಕ ಕೆಲವೇ ದಿನಗಳಲ್ಲಿ ಈ ಪುಟ್ಟ ಮುದ್ದು ಮಗು ಕಾನೂನು ರೀತ್ಯಾ ವನಿತಾಳದ್ದಾಗುತ್ತದೆ,” ಎಂದೆನ್ನುತ್ತಾ ರಮಣ್‌ ಮಗುವನ್ನು ತನ್ನ ಕೈಗೆತ್ತಿಕೊಂಡು ಅದಕ್ಕೊಂದು ಮುತ್ತಿಟ್ಟ.

ಆ ವಿಷಯ ಕೇಳಿ ವನಿತಾ ಪುಳಕಿತಳಾದಳು. ಯಾರೊಬ್ಬರೂ ನಿಕಿತಾಳ ಭಾವನೆಗಳ ಬಗ್ಗೆ ಗಮನಕೊಡಲಿಲ್ಲ. ಅವಳು ಹಠಾತ್ತನೇ ಮೇಲೆದ್ದು ರಮಣ್‌ ಕೈಯಿಂದ ಮಗುವನ್ನು ಕಸಿದುಕೊಂಡು, “ನಾನು ಈ ಮಗುವನ್ನು ಯಾರಿಗೂ ಕೊಡುವುದಿಲ್ಲ!” ಎಂದು ಹೇಳಿದಳು.

ಅವಳ ಮಾತು ಕೇಳಿ ಎಲ್ಲರೂ ದಿಗ್ಭ್ರಮೆಗೊಳಗಾದರು.“ಇದೇನು ಮಾತಾಡುತ್ತಿರುವೆ ನೀನು? ಇದೆಲ್ಲ ಮೊದಲೇ ಮಾತಾಗಿತ್ತು. ಅದೇ ಕರಾರಿನ ಮೇರೆಗೆ ನಿನ್ನನ್ನು ಇಲ್ಲಿಗೆ ಕಳಿಸಿಕೊಡಲಾಗಿತ್ತು,” ಅಮ್ಮ ನಿಕಿತಾಳನ್ನು ತರಾಟೆಗೆ ತೆಗೆದುಕೊಳ್ಳುತ್ತಾ ಹೇಳಿದರು.

“ಆಂಟಿ ಸರಿಯಾಗಿಯೇ ಹೇಳ್ತಿದ್ದಾರೆ. ಇದು ನಿನ್ನ ಒಪ್ಪಿಗೆಯ ಬಳಿಕವೇ ಆಗಿತ್ತು,” ವನಿತಾ ಅವಳಿಗೆ ನೆನಪು ಮಾಡಿಕೊಟ್ಟಳು.

“ಹೌದು, ಆದರೆ ಈ ಮಗುವನ್ನು ನಾನೇ ಸಾಕಬೇಕೆಂದು ನಿರ್ಧರಿಸಿರುವೆ,” ನಿಕಿತಾ ತನ್ನ ಮಗುವನ್ನು ಎದೆಗವಚಿಕೊಂಡು ಹೇಳಿದಳು.

“ನಿನಗೇನು ಹುಚ್ಚು ಹಿಡಿದಿದೆಯಾ? ನಿನ್ನ ಈ ನಿರ್ಧಾರ ಸಮಾಜದ ನಿಯಮಗಳಿಗೆ ವಿರುದ್ಧ ಎನ್ನುವುದು ನಿನಗೆ ತಿಳಿದಿಲ್ಲವೇ?” ಅಮ್ಮ ಅವಳಿಗೆ ಎಚ್ಚರಿಸಿದರು.

ಆದರೆ ನಿಕಿತಾ ಯಾರೊಬ್ಬರ ಮಾತನ್ನೂ ಕೇಳಿಸಿಕೊಳ್ಳಲು ತಯಾರಿರಲಿಲ್ಲ. ಅವಳು ತನ್ನ ನಿರ್ಧಾರ ಬದಲಿಸಲು ನಿರಾಕರಿಸಿದಳು. ಅವಳು ಎಲ್ಲರನ್ನು ಅಸಮಂಜಸ ಸ್ಥಿತಿಯಲ್ಲಿ ಬಿಟ್ಟು ತನ್ನ ಕೋಣೆಗೆ ಹೋಗಿ ತನ್ನ ಹಾಗೂ ಮಗುವಿನ ಸಾಮಾನುಗಳನ್ನು ಪ್ಯಾಕ್‌ ಮಾಡತೊಡಗಿದಳು.

ಅಷ್ಟರಲ್ಲಿ ಅವಳಿಗೆ ಬಾಲ್ಕನಿಯಿಂದ ಅದೇ ಮಧುರ `ಮ್ಯಾಂವ್‌’ ಧ್ವನಿ ಕೇಳಿಸಿತು. ನಿಕಿತಾ ಅತ್ತ ಕಡೆ ದೃಷ್ಟಿ ಹರಿಸಿದಾಗ ಮೂರು ಮರಿಗಳು ನಿಕಿತಾ ಬಟ್ಟಲಿನಲ್ಲಿ ಹಾಕಿದ್ದ ಹಾಲನ್ನು ನೆಕ್ಕುತ್ತಿದ್ದವು. ತಾಯಿ ಬೆಕ್ಕು ತನ್ನ ಮೂರು ಮರಿಗಳನ್ನು ಸರದಿ ಪ್ರಕಾರ ಪ್ರೀತಿಯಿಂದ ನೆಕ್ಕುತ್ತಿತ್ತು. ನಿಕಿತಾ ಕೂಡ ತನ್ನ ಮಗುವಿನ ಹಣೆಯನ್ನು ಚುಂಬಿಸಿದಳು.

ತನ್ನ ಈ ನಿರ್ಧಾರವನ್ನು ಎಲ್ಲರೂ ಬಲವಾಗಿ ವಿರೋಧಿಸುತ್ತಾರೆಂದು ನಿಕಿತಾಳಿಗೆ ಚೆನ್ನಾಗಿ ಗೊತ್ತಿತ್ತು. ಆದರೆ ತನ್ನ ನಾವೆಯನ್ನು ಹರಿವಿಗೆ ವಿರುದ್ಧವಾಗಿ ತಿರುಗಿಸುವ ಅವಳ ನಿರ್ಧಾರ ಅಚಲವಾಗಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ