ಶ್ರೇಯಾ ಗರ್ಭಿಣಿಯಾಗಿದ್ದಳು. ಅವಳು ಹುಟ್ಟಲಿರುವ ಮಗುವಿನ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದಳು. ಅವಳಿಗೆ ಹೆರಿಗೆಯಾದಾಗ ಅವಳಿ ಮಕ್ಕಳು ಜನಿಸಿದವು. ತನಗೆ ಏಕಕಾಲಕ್ಕೆ ಎರಡು ಮಕ್ಕಳು ಹುಟ್ಟಲಿವೆ ಎಂದು ಅವಳು ಊಹೆ ಕೂಡ ಮಾಡಿರಲಿಲ್ಲ. ಏಕೆಂದರೆ ಅವಳು ಯಾವ ವೈದ್ಯರ ಬಳಿ ನಿಯಮಿತವಾಗಿ ಚೆಕ್ ಮಾಡಿಸುತ್ತಿದ್ದಳೊ, ಅವರು ಕೂಡ ಈ ಬಗ್ಗೆ ಖಚಿತಪಡಿಸಿರಲಿಲ್ಲ.
ವೈದ್ಯರು ಅವಳಿಗೆ ಅವಳಿ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕೆಂದು ಸೂಚನೆಗಳನ್ನು ಕೊಟ್ಟರು. ಆ ಎಳೆ ಕಂದಮ್ಮಗಳ ಸ್ವಚ್ಛತೆ, ಪೋಷಣೆ ಸಹಿತ ಬ್ರೆಸ್ಟ್ ಫೀಡಿಂಗ್ ಕುರಿತಾದ ಮಾಹಿತಿಗಳನ್ನು ಕೊಟ್ಟರು.
ಆಸ್ಪತ್ರೆಯಿಂದ ಮನೆಗೆ ಮರಳಿದ ಬಳಿಕ ಒಂದು ವಾರ ಎಲ್ಲವೂ ಸರಿಯಾಗಿತ್ತು. ಆದರೆ ಎರಡು ಮಕ್ಕಳು ಯಾವಾಗಲೂ ಅಳುತ್ತಿದ್ದವು. ಶ್ರೇಯಾ ಗಾಬರಿಗೊಂಡು ವೈದ್ಯರ ಬಳಿ ಹೋದಾಗ ಅವರು ಮಕ್ಕಳು ಕಿರಿಕಿರಿ ಮಾಡಲು ಸರಿಯಾಗಿ ಹಾಲುಣಿಸದೇ ಇರುವುದೇ ಕಾರಣ ಎಂದು ಹೇಳಿದರು.
ಎರಡು ಮಕ್ಕಳು ಹುಟ್ಟಿದಾಗ ಇದು ಸಾಮಾನ್ಯ ಸಂಗತಿ. ಹಾಗಾಗಿ ಅಂತಹ ಸಂದರ್ಭದಲ್ಲಿ ಮಕ್ಕಳಿಗೆ ಹಾಲುಣಿಸುವಾಗ ಹೆಚ್ಚು ಜಾಗರೂಕತೆ ವಹಿಸಬೇಕಾಗುತ್ತದೆ. ಆ ಬಳಿಕ ವೈದ್ಯರು ಬ್ರೆಸ್ಟ್ ಫೀಡಿಂಗ್ ಸಂದರ್ಭದಲ್ಲಿ ಅನುಸರಿಸಬೇಕಾದ ಕೆಲವು ಎಚ್ಚರಿಕೆಗಳನ್ನು ವಹಿಸಲು ತಿಳಿಸಿದರು. ಅವನ್ನು ಅನುಸರಿಸಿದ ಬಳಿಕ ಶ್ರೇಯಾಳಿಗೆ ಮಕ್ಕಳ ಸಮಸ್ಯೆ ನಿವಾರಣೆಯಾಯಿತು. 6 ತಿಂಗಳ ತನಕ ವಿಶೇಷ ಕಾಳಜಿ :
ಶಿಶು ತಜ್ಞೆ ಡಾ. ರಾಧಿಕಾ ಹೀಗೆ ಹೇಳುತ್ತಾರೆ, ಸಾಮಾನ್ಯವಾಗಿ ತಾಯಂದಿರು ಸ್ತನ್ಯಪಾನ ಮಾಡಿಸುವುದರ ಜೊತೆಗೆ ಆಗಾಗ ಹಸುವಿನ ಹಾಲು, ಜೇನುತುಪ್ಪ, ಗಂಜಿ ನೀರು ಮುಂತಾದವನ್ನು ಕುಡಿಸುತ್ತಾರೆ. ಎರಡು ಮಕ್ಕಳು ಏಕಕಾಲಕ್ಕೆ ಹುಟ್ಟಿದಾಗಲಂತೂ ಈ ಕ್ರಮ ಮತ್ತಷ್ಟು ಜೋರಾಗಿ ನಡೆಯುತ್ತದೆ. ಏಕೆಂದರೆ ತಾನು ಕುಡಿಸುತ್ತಿರುವ ಹಾಲು ಮಕ್ಕಳಿಗೆ ಸಾಲುತ್ತಿಲ್ಲ ಎಂದು ತಾಯಿಗೆ ಅನಿಸುತ್ತಿರುತ್ತದೆ. 6 ತಿಂಗಳಿಗೂ ಮುಂಚೆ ಕಂದನಿಗೆ ತಾಯಿಯ ಹಾಲಿನ ಜೊತೆಗೆ ಮೇಲಿನದನ್ನು ಏನಾದರೂ ಕೊಟ್ಟರೆ, ಅದು ಅನಾರೋಗ್ಯ ಪೀಡಿತವಾಗುವುದರ ಜೊತೆಗೆ, ಅದರ ಪೋಷಣೆಯ ಮೇಲೂ ಪ್ರಭಾವ ಬೀರುತ್ತದೆ. ಹೀಗಾಗಿ ತಾಯಿಯಾದವಳು ಕಂದಮ್ಮಗಳಿಗೆ ಎದೆಹಾಲಿನ ಹೊರತು ಬೇರೇನನ್ನೂ ಕೊಡಬಾರದೆಂದು ನಿರ್ಧರಿಸಬೇಕು. ಎರಡೂ ಮಕ್ಕಳಿಗೆ ಸಾಕಾಗುವಷ್ಟು ಹಾಲು ತಾಯಿಯ ಸ್ತನಗಳಲ್ಲಿ ಉತ್ಪತ್ತಿಯಾಗುತ್ತದೆ.
ಶಸ್ತ್ರಚಿಕಿತ್ಸೆಯಿಂದ ಹುಟ್ಟಿದ ಮಕ್ಕಳಿಗೂ ಕೂಡ ಎದೆಹಾಲು ಕುಡಿಸುವುದನ್ನು ಮುಂದುವರಿಸಿ. ಶಸ್ತ್ರಚಿಕಿತ್ಸೆಯ ಮೂಲಕ ಜನಿಸಿದ ಮಕ್ಕಳಿಗೆ ಎದೆಹಾಲು ಕುಡಿಸಲು ವಿಳಂಬವಾಗುತ್ತದೆ. ಅವಳಿ ಮಕ್ಕಳ ಬಾಬತ್ತಿನಲ್ಲಿ ಈ ವಿಳಂಬ ಇನ್ನಷ್ಟು ಹೆಚ್ಚುತ್ತದೆ. ಹೆರಿಗೆಯಾದ ಒಂದು ಗಂಟೆಯಲ್ಲಿಯೇ ಶಿಶುಗಳಿಗೆ ತಾಯಿಯ ಸ್ತನಗಳಲ್ಲಿ ಉತ್ಪತ್ತಿಯಾಗುವ ಗಾಢ ಹಳದಿ ಹಾಲು ಅಂದರೆ ಕೊಲೊಸ್ಟ್ರಮ್ ದೊರಕಬೇಕು. ಏಕೆಂದರೆ ಇದು ಮಕ್ಕಳನ್ನು ಹಲವು ರೋಗಗಳಿಂದ ರಕ್ಷಿಸುತ್ತದೆ. ಒಂದು ವೇಳೆ ಸಿಸೇರಿಯನ್ ಹೆರಿಗೆಯಾಗಿದ್ದರೆ, ತಾಯಿಯಾದವಳು ಸ್ತನ್ಯಪಾನ ಮಾಡಿಸಲು ಒಂದು ಬದಿಗೆ ಅಡ್ಡವಾಗಿ ಮಲಗಿ ಹಾಲು ಕುಡಿಸಬೇಕು. ಹೀಗೆ ಇನ್ನೊಂದು ಬದಿ ಅಡ್ಡವಾಗಿ ಮಲಗಿಕೊಂಡು ಇನ್ನೊಂದು ಮಗುವಿಗೆ ಹಾಲು ಕುಡಿಸಬೇಕು. ಹಾಲು ಕುಡಿಸುವಾಗ ಮಗುವಿನ ತಲೆಯ ಮೇಲೆ ಕೈಗಳ ಆಸರೆ ಕೊಡಿ.
ಸರಿಯಾದ ಪೊಝಿಶನ್ : ಅವಳಿ ಮಕ್ಕಳಿಗೆ ಬ್ರೆಸ್ಟ್ ಫೀಡಿಂಗ್ ಬಾಬತ್ತಿನಲ್ಲಿ ಹಲವು ರೀತಿಯ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಏಕೆಂದರೆ ಮಗುವಿಗೆ ಹಾಲಿನ ಮುಖಾಂತರ ಸೂಕ್ತ ಪೋಷಣೆ ದೊರಕಬೇಕು. ಹೀಗಾಗಿ ಮಗುವಿಗೆ ಹಾಲುಣಿಸುವಾಗ ತಮ್ಮ ಪೊಝಿಶನ್ ಬಗ್ಗೆ ಗಮನ ಇರಬೇಕು. ಎರಡೂ ಮಕ್ಕಳಿಗೆ ಏಕಕಾಲಕ್ಕೆ ಹಾಲು ಕುಡಿಸಿ. ಏಕೆಂದರೆ ತಾಯಿಯ ಸ್ತನಗಳಲ್ಲಿ ಹಾಲು ಉತ್ಪತ್ತಿಯಾಗುವ ಪ್ರಕಿಯೆ ತಾಯಿ ಹಾಗೂ ಶಿಶುವಿನ ನಡುವೆ ಸರಿಯಾದ ಹೊಂದಾಣಿಕೆ ಇರುವ ಕಾರಣದಿಂದ ಹೊರಹೊಮ್ಮುವ ಹಾರ್ಮೋನುಗಳಿಂದ ಇದು ಸಾಧ್ಯವಾಗುತ್ತದೆ. ಹೀಗಾಗುವುದರಿಂದ ತಾಯಿಯ ಸ್ತನಗಳಲ್ಲಿ ಪ್ರೊಲ್ಯಾಕ್ಟಿನ್ ಮತ್ತು ಆ್ಯಕ್ಸಿಟೋಸಿನ್ ಎಂಬ ಹಾರ್ಮೋನುಗಳು ಹಾಲು ಉತ್ಪತ್ತಿ ಹಾಗೂ ಸ್ತನದಿಂದ ಹಾಲು ಹೊರಬರುವ ಪ್ರಕ್ರಿಯೆಗೆ ದಾರಿ ಮಾಡಿಕೊಡುತ್ತವೆ.
ಅವಳಿ ಮಕ್ಕಳ ಬ್ರೆಸ್ಟ್ ಫೀಡಿಂಗ್ ಅಟ್ಯಾಚ್ಮೆಂಟ್ : ತಾಯಿಯ ಸ್ತನಗಳಲ್ಲಿ ಸಾಕಷ್ಟು ಹಾಲು ಉತ್ಪತ್ತಿಯಾಗುತ್ತದೆ. ಆದರೂ ಒಮ್ಮೊಮ್ಮೆ ಆಕೆಗೆ ತನ್ನ ಕಂದಮ್ಮಗಳಿಗೆ ಸಾಕಷ್ಟು ಹಾಲು ಸಿಗುತ್ತಿಲ್ಲವೇನೊ ಎನಿಸುತ್ತದೆ. ಹೀಗಾಗಿ ಹಾಲುಣಿಸುವಾಗ ಮಗುವಿನ ಬಾಯಿ ಸರಿಯಾಗಿ ತೆರೆಯುವಂತೆ ಮಾಡಿ. ಸ್ತನಗಳ ನಿಪ್ಪಲ್ ಹತ್ತಿರದ ಕಪ್ಪು ವರ್ತುಲದ ಹೆಚ್ಚಿನ ಭಾಗ ಮಗುವಿನ ಬಾಯಲ್ಲಿರುವಂತೆ ನೋಡಿಕೊಳ್ಳಿ. ಸಾಮಾನ್ಯವಾಗಿ ತಾಯಂದಿರು ಮಗುವಿನ ಬಾಯಿಗೆ ಸ್ತನದ ನಿಪ್ಪಲ್ ಕೊಡುತ್ತಾರೆ. ಆದರೆ ಅದರಿಂದ ಮಗು ಹಾಲನ್ನು ಹೀರಿಕೊಳ್ಳಲು ಆಗುವುದಿಲ್ಲ. ಏಕೆಂದರೆ ತಾಯಿಯ ಸ್ತನಗಳಲ್ಲಿ ಹಾಲು ಕಪ್ಪು ವರ್ತುಲವಿರುವ ಭಾಗದಲ್ಲಿ ಇರುತ್ತದೆಯೇ ಹೊರತು ನಿಪ್ಪಲ್ ನಲ್ಲಿ ಅಲ್ಲ. ತಾಯಿ ಮಗುವಿಗೆ ನಿಪ್ಪಲ್ ಕೊಟ್ಟಾಗ ಅದರಲ್ಲಿ ಹಾಲು ಬರುವುದಿಲ್ಲ. ಹಾಗಾಗಿ ಮಗು ಹಾಲು ದೊರಕದ ಕಾರಣದಿಂದ ನಿಪ್ಪಲ್ ನ್ನು ಜೋರಾಗಿ ಎಳೆಯುತ್ತದೆ. ಹೀಗಾಗಿ ನಿಪ್ಪಲ್ ನಲ್ಲಿ ನೋವು, ಒಮ್ಮೊಮ್ಮೆ ಗಾಯ ಕೂಡ ಆಗಬಹುದು. ಇದರ ಹೊರತಾಗಿ ತಾಯಿ ಗಮನಿಸಬೇಕಾದ ಸಂಗತಿಯೆಂದರೆ, ಮಗುವಿನ ಬಾಯಿ ಪರಿಪೂರ್ಣವಾಗಿ ತಾಯಿಯ ಸ್ತನಕ್ಕೆ ಅಂಟಿಕೊಂಡಿರಬೇಕು. ಅದರಲ್ಲೂ ಕೆಳ ತುಟಿ ಹೊರಭಾಗ ಚಾಚಿಕೊಂಡಿರಬೇಕು. ಈ ವಿಧಾನ ಅನುಸರಿಸಿದಾಗಲೇ ಅವಳಿ ಮಕ್ಕಳಿಗೆ ಸಾಕಷ್ಟು ಹಾಲು ದೊರಕುತ್ತದೆ.
ವಿಶೇಷ ಗಮನ ಇರಲಿ
ಹೆಚ್ಚಿನ ತಾಯಂದಿರ ಅವಳಿ ಮಕ್ಕಳ ಬಾಬತ್ತಿನಲ್ಲಿ ಒಂದು ಮಗುವಿಗೆ ಕಡಿಮೆ ಪೋಷಣೆ ದೊರಕುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತವೆ. ಇದಕ್ಕೆ ಕಾರಣವೇನೆಂದರೆ, ತಾಯಿಗೆ ಅವಳಿ ಮಕ್ಕಳಿಗೆ ಹೇಗೆ ಹಾಲುಣಿಸಬೇಕೆಂಬ ಮಾಹಿತಿ ಇರದೇ ಇರುವುದು. ಹೀಗಾಗಿ ಒಂದು ಮಗುವಿಗೆ ಸಾಕಷ್ಟು ಹಾಲು ದೊರಕುತ್ತದೆ. ಇನ್ನೊಂದಕ್ಕೆ ದೊರಕುವುದಿಲ್ಲ. ಇಂತಹದರಲ್ಲಿ ಆಕೆ ಎರಡೂ ಶಿಶುಗಳಿಗೆ ಸರಿಯಾಗಿ ಹಾಲು ದೊರಕುತ್ತಿದೆಯೇ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಕೆಲವು ತಾಯಂದಿರು ಎರಡು ಮಕ್ಕಳಿಗೆ ಬೇರೆ ಬೇರೆ ಸಮಯದಲ್ಲಿ ಹಾಲು ಕುಡಿಸುತ್ತಾರೆ. ಮೊದಲು ಹಾಲು ಕುಡಿಯುವ ಮಗುವಿಗೆ ಸಾಧಾರಣ ಹಾಲು ದೊರಕುತ್ತದೆ. ನಂತರ ಕುಡಿಯುವ ಮಗುವಿಗೆ ಪೋಷಕಾಂಶಗಳಿಂದ ಕೂಡಿದ ಗಾಢ ಹಾಲು ಸಿಗುತ್ತದೆ. ಈ ಕಾರಣದಿಂದ ಒಂದು ಮಗುವಿಗೆ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ.
ಅವಳಿ ಮಕ್ಕಳನ್ನು ಹೊಂದಿರುವ ತಾಯಿ, ಎರಡೂ ಶಿಶುಗಳಿಗೂ ಸಮಾನ ರೂಪದಲ್ಲಿ ಹಾಲು ದೊರಕುವಂತೆ ಮಾಡಬೇಕು. ಅದಕ್ಕಾಗಿ ಎರಡೂ ಶಿಶುಗಳಿಗೆ ಒಂದೊಂದು ಸ್ತನದ ಪೂರ್ತಿ ಹಾಲನ್ನು ಕುಡಿಸಬೇಕು. ಅದರಿಂದ ಮಗುವಿಗೆ ತೆಳ್ಳನೆಯ ಮತ್ತು ಗಟ್ಟಿ ಎರಡೂ ಪ್ರಕಾರದ ಹಾಲು ಲಭಿಸುತ್ತದೆ. ಪ್ರತಿ ಎರಡು ಗಂಟೆಗೊಮ್ಮೆ ಹಾಲು ಕುಡಿಸಬೇಕು. ಅದರಿಂದ ಆ ಶಿಶುಗಳ ಪೋಷಕಾಂಶಗಳ ಅವಶ್ಯಕತೆ ನೀಗುತ್ತದೆ.
ಮಗುವಿನ ತೂಕ ಕಡಿಮೆಯಾದರೆ : ಮೊದಲ ವಾರದಲ್ಲಿ ತಾಯಿ ಎರಡು ಮಕ್ಕಳಿಗೆ ಪರಿಪೂರ್ಣವಾಗಿ ಸ್ತನ್ಯಪಾನ ಮಾಡಿಸಿದರೂ ಅವುಗಳ ತೂಕ ಕಡಿಮೆಯಾಗುತ್ತಿರುವುದನ್ನು ಗಮನಿಸಿ ತಾಯಿಗೆ ಆತಂಕವಾಗುತ್ತದೆ. ಆದರೆ ಇದರಿಂದ ಗಾಬರಿಯಾಗುವ ಅವಶ್ಯಕತೆಯಿಲ್ಲ. ಏಕೆಂದರೆ ಮೊದಲ ವಾರ ಪರಿಪೂರ್ಣ ಹಾಲು ಕುಡಿಸಿದರೂ ಅವುಗಳ ತೂಕ ಹುಟ್ಟಿದಾಗ ಇರುವಷ್ಟೇ ಇರುತ್ತದೆ. ಇದು ನಿಮ್ಮ ಮಗುವಿಗೆ ಸೂಕ್ತ ಪ್ರಮಾಣದಲ್ಲಿ ಹಾಲು ದೊರಕುತ್ತಿದೆ ಎನ್ನುವುದರ ಸಂಕೇತ. ಒಂದು ವೇಳೆ ಆ ಬಳಿಕ ಒಂದು ವಾರ ಕುಗ್ಗಿದ ತೂಕ ಹೆಚ್ಚುತ್ತಿಲ್ಲವೆಂದರೆ ವೈದ್ಯರ ಜೊತೆ ಪರಾಮರ್ಶೆ ಮಾಡಿ.
ಮಗು ಸರಿಯಾಗಿ ಹಾಲು ಕುಡಿಯುತ್ತದೆ ಎಂದು ಹೇಗೆ ಗಮನಿಸುದು? : ಮಗುವಿಗೆ ಸೂಕ್ತ ರೀತಿಯಲ್ಲಿ ಹಾಲು ಕುಡಿಸಿದ ಬಳಿಕ ಒಮ್ಮೊಮ್ಮೆ ಕಂದನಿಗೆ ಸಾಕಷ್ಟು ಹಾಲು ದೊರಕುತ್ತಿಲ್ಲವೇ ಎನಿಸುತ್ತದೆ. ತನ್ನ ಎರಡೂ ಕಂದಮ್ಮಗಳು ಕೇವಲ ಒಂದೇ ಸ್ತನದಿಂದ ಮಾತ್ರ ಹಾಲು ಕುಡಿಯುತ್ತವೆ, ಅವುಗಳಿಗೆ ಸಾಕಾಗುತ್ತಿಲ್ಲವೇನೊ ಎನಿಸುತ್ತದೆ.
ನೀವು ಸರಿಯಾದ ಪೊಜಿಶನ್ ನ್ನು ಗಮನದಲ್ಲಿಟ್ಟುಕೊಂಡರೆ, ಶಿಶುಗಳಿಗೆ ಸ್ತನ್ಯಪಾನ ಮಾಡಿಸಿದರೆ, ಅವುಗಳಿಗೆ ಅಗತ್ಯವಿರುವಷ್ಟು ಹಾಲು ದೊರಕುತ್ತದೆ. ಅದನ್ನು ನಾವು ಈ ರೀತಿಯಲ್ಲಿ ಪರೀಕ್ಷಿಸಬಹುದು. ಮಗುವಿನ ಹೊಟ್ಟೆ ತಾಯಿಯ ಹಾಲಿನಿಂದ ಭರ್ತಿಯಾಗಿದ್ದರೆ, ಅದು 24 ಗಂಟೆಗಳಲ್ಲಿ ಕನಿಷ್ಠ 7-8 ಸಲವಾದರೂ ಮೂತ್ರ ವಿಸರ್ಜನೆ ಮಾಡುತ್ತದೆ. ಮಗು ಹಾಲು ಕುಡಿದ ಬಳಿಕ 2 ಗಂಟೆಗಳ ಕಾಲ ನಿದ್ರಿಸಬೇಕು. ಅದರ ತೂಕ ಅದರ ಯಸ್ಸಿಗನುಗುಣವಾಗಿ ವಾರಕ್ಕೆ ಸರಾಸರಿ 150 ಗ್ರಾಂ ಹೆಚ್ಚಬೇಕು. ಹೀಗೆಯೇ ಆಗುತ್ತಿದ್ದರೆ ಮಗುವಿನ ಹೊಟ್ಟೆಗೆ ತಾಯಿಯ ಹಾಲು ಸರಿಯಾಗಿ ಸೇರುತ್ತಿದೆ ಎಂದರ್ಥ.
ತೇಗು ಬರುವಂತೆ ನೋಡಿಕೊಳ್ಳಿ : ನೀವು ಅವಳಿ ಮಕ್ಕಳ ತಾಯಿಯಾಗಿದ್ದಲ್ಲಿ. ಅವುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದ ಅಗತ್ಯ ಇರುತ್ತದೆ. ಮಗುವಿಗೆ ಹಾಲು ಕುಡಿಸಿದ ಬಳಿಕ ಅದನ್ನು ಭುಜದ ಮೇಲೆ ಹಾಕಿಕೊಂಡು ಅದರ ಬೆನ್ನನ್ನು ನಿಧಾನವಾಗಿ ಸವರಬೇಕು. ಇದರ ಹೊರತಾಗಿ ಮಗುವನ್ನು ನಿಮ್ಮ ಕಾಲುಗಳ ಮೇಲೆ ಬೆನ್ನು ಮೇಲಿರುವಂತೆ ಮಲಗಿಸಿಕೊಂಡು, ನಿಧಾನವಾಗಿ ಅದರ ಬೆನ್ನು ಸವರುತ್ತಿರಬೇಕು. ಹೀಗೆ ಮಾಡುವುದರಿಂದ ಮಗುವಿಗೆ ಸಹಜವಾಗಿ ತೇಗು ಬರುತ್ತದೆ. ಆಗ ಹಾಲು ಸುಲಭವಾಗಿ ಪಚನವಾಗುತ್ತದೆ ಮತ್ತು ಅದು ವಾಂತಿ ಮಾಡಿಕೊಳ್ಳುವುದಿಲ್ಲ. ಹೀಗೆ ಮಾಡುವುದರಿಂದ ಅದರ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುವುದಿಲ್ಲ.
ನಿಮ್ಮ ಬಗ್ಗೆಯೂ ಗಮನವಿರಲಿ : ಅವಳಿ ಮಕ್ಕಳಿಗೆ ಜನ್ಮ ಕೊಟ್ಟ ತಾಯಿ ಮಕ್ಕಳ ಜೊತೆಗೆ ತನ್ನ ಬಗೆಗೂ ಕಾಳಜಿ ವಹಿಸಬೇಕು. ಸಾಕಷ್ಟು ಪೋಷಣೆಯುಕ್ತ ಆಹಾರ ಸೇವನೆ ಮಾಡಬೇಕು. ಆಕೆ ತನ್ನ ಆಹಾರದಲ್ಲಿ ಹಸಿರು ಸೊಪ್ಪುಗಳು, ಹಾಲು, ಹಣ್ಣು, ಮೊಸರು, ಬೇಳೆ ಮುಂತಾದವನ್ನು ಸೇವಿಸಬೇಕು. ದೇಹಕ್ಕೆ ವಿಶ್ರಾಂತಿ ದೊರಕುವುದರ ಜೊತೆಗೆ ವ್ಯಾಯಾಮ ಮಾಡಬೇಕಾದ ಅಗತ್ಯವಿರುತ್ತದೆ.
ಪೋಷಾಕು ಹೇಗಿರಬೇಕು? : ನೀವು ಅವಳಿ ಮಕ್ಕಳಿಗೆ ಬ್ರೆಸ್ಟ್ ಫೀಡಿಂಗ್ ಮಾಡುವ ಮಹಿಳೆಯಾಗಿದ್ದು, ಹೊರಗೆ ಹೋದಾಗ ಬ್ರೆಸ್ಟ್ ಫೀಡಿಂಗ್ ಗೆ ತೊಂದರೆ ಉಂಟಾಗಬಹುದು. ಇಂತಹ ಸ್ಥಿತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಇಷ್ಟವಿದ್ದೂ ಕೂಡ ಬ್ರೆಸ್ಟ್ ಫೀಡಿಂಗ್ ಮಾಡಲು ಆಗುವುದಿಲ್ಲ. ಹೀಗಾಗಿ ನೀವು ನಿಮ್ಮ ಪೋಷಾಕಿನ ಬಗ್ಗೆ ವಿಶೇಷ ಗಮನಕೊಡಿ. ಅದಕ್ಕಾಗಿ ನೀವು ಎಂತಹ ಟಾಪ್ ಗಳನ್ನು ಖರೀದಿಸಬೇಕೆಂದರೆ ಸ್ತನಗಳು ಹೆಚ್ಚು ಮುಕ್ತವಾಗಿರಬೇಕು. ಅದರಿಂದಾಗಿ ಬಟ್ಟೆಗಳನ್ನು ಮೇಲೆ ಕೆಳಗೆ ಮಾಡುವುದು ತಪ್ಪುತ್ತದೆ.
ಬ್ರೆಸ್ಟ್ ಫೀಡಿಂಗ್ ಮಾಡುವ ತಾಯಂದಿರು ತಮ್ಮೊಂದಿಗೆ ದುಪಟ್ಟಾ ಅಥವಾ ಸ್ಟೋಲ್ ನ್ನು ಇಟ್ಟುಕೊಳ್ಳಬೇಕು. ಅದರ ಹೊರತಾಗಿ ಮನೆಯಲ್ಲಿ ಇರುವಾಗ ಮೇಲಿನಿಂದ ತೆರೆಯಲ್ಪಡುವ ಗೌನ್, ಮ್ಯಾಕ್ಸಿ ಅಥವಾ ಸಾಧಾರಣ ಬಟ್ಟೆ ಧರಿಸಬೇಕು. ನೀವು ಯಾವುದಾದರೊಂದು ಪಾರ್ಟಿ ಅಥವಾ ಫಂಕ್ಷನ್ ಅಟೆಂಡ್ ಮಾಡಲು ಹೋಗುತ್ತಿದ್ದರೆ, ಆಗಲೂ ಕೂಡ ನೀವು ನಿಮ್ಮ ಮುದ್ದು ಮಕ್ಕಳಿಗೆ ಹಾಲುಣಿಸುವ ಕಾಳಜಿ ಹೊಂದಿರಬೇಕು. ಹೀಗಾಗಿ ಫ್ಯಾಷನ್ ಎಕ್ಸ್ ಪರ್ಟ್ ಗಳ ಸಲಹೆಯ ಮೇರೆಗೆ ಬ್ರೆಸ್ಟ್ ಫೀಡಿಂಗ್ ಗಾಗಿ ಯಾವುದೇ ತೊಂದರೆ ಉಂಟಾಗದಂತಹ ಬಟ್ಟೆಗಳನ್ನು ಆಯ್ದುಕೊಳ್ಳಬೇಕು.
ಅವಳಿ ಮಕ್ಕಳ ತಾಯಿ ಉದ್ಯೋಗಸ್ಥೆಯಾಗಿದ್ದರೆ, ಅಂತಹ ಸ್ಥಿತಿಯಲ್ಲಿ ಎದೆ ಹಾಲನ್ನು ತೆಗೆದು ಸ್ಟೋರ್ ಮಾಡಿಡಬಹುದು. ಆ ಹಾಲನ್ನು ಫ್ರಿಜ್ ನಲ್ಲಿ ಇಡಬೇಕಾದ ಅಗತ್ಯವಿಲ್ಲ. ಅದನ್ನು ಸಾಮಾನ್ಯ ತಾಪಮಾನದಲ್ಲಿ 6 ಗಂಟೆಗಳ ಕಾಲ ಸುರಕ್ಷಿತವಾಗಿಡಬಹುದು.
ಸ್ತನಗಳಿಂದ ಹಾಲು ಹೊರತೆಗೆಯಲು ಸ್ವಚ್ಛವಾದ ಪಾತ್ರೆಯನ್ನು ಬಳಸಿ. ಹೆಬ್ಬೆರಳು ಹಾಗೂ ಪಕ್ಕದ ತೋರುಬೆರಳಿನ ಸಹಾಯದಿಂದ ಮೇಲಿನಿಂದ ಕೆಳಭಾಗದತ್ತ ಗೋಲಾಕಾರದಲ್ಲಿ ಎರಿಯೋಲಾದ ಮೇಲೆ ಒತ್ತಡ ತಂದರೆ ಹಾಲು ಹೊರಬರುತ್ತದೆ. ಒಂದು ವೇಳೆ ಬ್ರೆಸ್ಟ್ ಫೀಡಿಂಗ್ ಸಂದರ್ಭದಲ್ಲಿ ಸ್ತನದಲ್ಲಿ ನೋವು ಅಥವಾ ಗಾಯ ಆಗಿದ್ದರೆ, ನಿಮ್ಮ ಮಗು ಸುಸ್ತಾಗಿದ್ದರೆ ಅಥವಾ ಸ್ತನದಿಂದ ಹಾಲು ಹೀರಿಕೊಳ್ಳಲು ತೊಂದರೆ ಅನುಭವಿಸುತ್ತಿದ್ದರೆ ವೈದ್ಯರ ಸಲಹೆ ಪಡೆಯಿರಿ.
– ಅಮೂಲ್ಯಾ