ರಂಜಿತಾ ಆಫೀಸಿನಿಂದ ಮನೆಗೆ ತಲುಪಿದಾಗ ಮಗು ಆದರ್ಶ್ ಅತ್ತು ಅತ್ತು ಇಡೀ ಮನೆಯನ್ನು ರಚ್ಚೆ ಎಬ್ಬಿಸಿಬಿಟ್ಟಿದ್ದ. ರಂಜಿತಾಳನ್ನು ನೋಡುತ್ತಿದ್ದಂತೆ ಅವಳ ಅಮ್ಮ ನೆಮ್ಮದಿಯ ನಿಟ್ಟುಸಿರುಬಿಟ್ಟು ಆದರ್ಶ್ ನನ್ನು ಅವಳ ಕೈಗೆ ಕೊಡುತ್ತಾ, “ನಿನ್ನ ಮಗ ನಮಗೆ ಕೊಟ್ಟ ಕಷ್ಟ ಅಷ್ಟಿಷ್ಟಲ್ಲ. ಪಲ್ಲವಿ 1 ನಿಮಿಷ ಕೂಡ ನೆಮ್ಮದಿಯಿಂದ ಓದಲು ಆಗಲಿಲ್ಲ.”
ರಂಜಿತಾ ಒಂದೂ ಮಾತು ಆಡದೇ ಆದರ್ಶ್ ನನ್ನು ತನ್ನ ಮಡಿಲಲ್ಲಿ ಎತ್ತಿಕೊಳ್ಳುತ್ತಾ ವಾಶ್ ರೂಮ್ ಕಡೆ ಹೆಜ್ಜೆ ಹಾಕಿದಳು. ಅಲ್ಲಿಂದ ಬಂದ ನಂತರ ರಂಜಿತಾ ಚಹಾ ಮಾಡುತ್ತಲೇ, ಸಂಜೆ ಅಡುಗೆಗಾಗಿ ತರಕಾರಿ ಹೆಚ್ಚತೊಡಗಿದಳು.
ಚಹಾ ಹೀರುತ್ತಲೇ ರಂಜಿತಾ ಆದರ್ಶ್ ನನ್ನು ಮಲಗಿಸುವ ಪ್ರಯತ್ನ ಮಾಡತೊಡಗಿದಳು. ಅವನು ನಿದ್ರೆಗೆ ಜಾರುತ್ತಿದ್ದಂತೆ, ರಂಜಿತಾಳಿಗೂ ಕಣ್ಣು ಎಳೆಯುತ್ತಿತ್ತು. ಅಷ್ಟರಲ್ಲಿ ಅಮ್ಮ ರೂಮಿಗೆ ಬಿರುಗಾಳಿಯಂತೆ ಬಂದು, “ರಂಜಿತಾ, ಕೆಲಸ ಮಾಡೋಕೆ ನನಗೂ ಅಷ್ಟಿಷ್ಟು ನೆರವು ಕೊಡು,” ಎಂದು ಬಿರುಸಿನಿಂದ ಹೇಳಿದರು.
“ನನ್ನ ಪಾಲಿಗಂತೂ ಸುಖ ಕನಸಿನ ಮಾತೇ ಸರಿ.”
“ಮೊದಲು ಮಕ್ಕಳ ಜವಾಬ್ದಾರಿ ವಹಿಸಬೇಕು. ಆಮೇಲೆ ಅವರ ಮಕ್ಕಳ ಉಸ್ತುವಾರಿ ನೋಡಿಕೊಳ್ಳಬೇಕು.”
“ಅಮ್ಮಾ ಆದರ್ಶನನ್ನು ಮಲಗಿಸ್ತಾ ನನಗೂ ಹಾಗೆ ಜೋಂಪು ಹತ್ತಿಬಿಟ್ಟಿತ್ತು,” ಎಂದು ಸಂಕೋಚದಿಂದ ಹೇಳಿದಳು ರಂಜಿತಾ.
ಆದರ್ಶ್ ನನ್ನು ಮಲಗಿಸಿ, ರಂಜಿತಾ ಕೂದಲು ಕಟ್ಟಿಕೊಂಡು ಅಡುಗೆ ಮನೆಗೆ ಹೋದಳು. ಅಮ್ಮ ಅಪ್ಪನಿಗಾಗಿ ಸ್ವಲ್ಪ ಸಪ್ಪೆ ತಿಂಡಿ, ಪಲ್ಲವಿಗಾಗಿ ಹೈ ಪ್ರೋಟೀನ್ ಡಯೆಟ್ ಮತ್ತು ತನಗಾಗಿ ಎರಡರಲ್ಲೂ ಉಳಿದದ್ದು.
ರಂಜಿತಾ ಊಟದ ಸಿದ್ಧತೆಗಾಗಿ ಅಡುಗೆಮನೆಯಲ್ಲಿದ್ದಳು. ಅಷ್ಟರಲ್ಲಿಯೇ ಆದರ್ಶ್ ಎದ್ದ. ರಂಜಿತಾಳಿಗೆ ದೈನಂದಿನ ದಿನಚರಿ ಇದೇ ಆಗಿತ್ತು. ಅವಳಿಗೆ 4 ಗಂಟೆ ನಿದ್ರೆ ಕೂಡ ಪೂರ್ತಿ ಆಗುತ್ತಿರಲಿಲ್ಲ.
ರಂಜಿತಾ ಆದರ್ಶ್ ಗೆ ಹಾಲನ್ನು ಸಿದ್ಧಪಡಿಸಿಕೊಂಡು ತನ್ನ ಕೋಣೆಗೆ ಹೋಗಿ ಬಾಗಿಲು ಮುಚ್ಚಿಕೊಂಡಳು. ಆದರ್ಶ್ ನ ಒಂದಿಷ್ಟು ಧ್ವನಿ ಕೇಳಿದರೆ ಸಾಕು, ಮರುದಿನ ಅಮ್ಮನಿಗೆ ತಲೆನೋವು ಬರುತ್ತಿತ್ತು.
ರಂಜಿತಾಳ ಜೀವನ ಕೆಲವು ದಿನಗಳ ಹಿಂದಿನ ತನಕ ಬಹಳ ವಿಭಿನ್ನವಾಗಿತ್ತು. ರಂಜಿತಾ ಬಹಳ ಬಿಂದಾಸ್ ಪ್ರವೃತ್ತಿಯವಳು, ಜಗತ್ತಿನ ಹಂಗೇ ಇರದಂಥವಳು. ಉದ್ದನೆಯ ಕಾಯ, ಗೋದಿ ಬಣ್ಣ, ದೊಡ್ಡ ದೊಡ್ಡ ಕಣ್ಣುಗಳು, ಗುಂಗುರು ಕೂದಲು ಹಾಗೂ ಬೆರಗುಗೊಳಿಸುವ ಮುಗುಳ್ನಗು.
ಕಾಲೇಜು ಹಾಗೂ ಆಫೀಸಿನಲ್ಲಿ ಪ್ರತಿಯೊಬ್ಬರೂ ಅವಳ ಅಭಿಮಾನಿಗಳಾಗಿದ್ದರು. ಆದರೆ ರಂಜಿತಾ ಅಭಯ್ ನ ಅಭಿಮಾನಿಯಾಗಿದ್ದಳು. ಅಭಯ್ ಅವಳ ಜೊತೆಗೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ. ಇಬ್ಬರಲ್ಲೂ ಸ್ನೇಹ ಗಾಢವಾಗಿ ಅದು ಪ್ರೀತಿಯಲ್ಲಿ ಪರಿವರ್ತನೆಗೊಂಡಿತ್ತು.
ರಂಜಿತಾಳ ಅಮ್ಮ ಅಪ್ಪ ಅಭಯ್‌ನ ಮನೆಗೆ ಹೋಗಿ, ಅವನ ತಾಯಿ ತಂದೆಯ ವರ್ತನೆ ಕಂಡು ಮಗಳಿಗೆ, “ರಂಜು, ಇಂತಹ ಪ್ರೀತಿ ಬಹಳ ಕಾಲ ಉಳಿಯುವುದಿಲ್ಲ. ನಮ್ಮಲ್ಲಿ ಮದುವೆಯ ಬಾಂಧವ್ಯ ಇಬ್ಬರ ನಡುವೆ ಅಲ್ಲ ಎರಡು ಕುಟುಂಬಗಳ ನಡುವೆ ಆಗುತ್ತದೆ. ನಮ್ಮ ಮತ್ತು ಅವರ ಕುಟುಂಬದ ನಡುವೆ ಸಾಕಷ್ಟು ವ್ಯತ್ಯಾಸವಿದೆ,” ಎಂದು ಹೇಳಿದ್ದರು.
ಆದರೆ ಆಗ ರಂಜಿತಾಳಿಗೆ ಏನೊಂದು ಹೊಳೆಯುತ್ತಿರಲಿಲ್ಲ. ಅವಳು ಜಗಳವಾಡಿ ವಿನಂತಿಸಿಕೊಂಡು ಕೊನೆಗೂ ತನ್ನ ಕುಟುಂಬದವರನ್ನು ಒಪ್ಪಿಸಿಯೇಬಿಟ್ಟಳು.
ಅಭಯ್ ನ ಕುಟುಂಬದವರು ಕೂಡ ಮನಸ್ಸಿಲ್ಲದ ಮನಸ್ಸಿನಿಂದ ಸಿದ್ಧರಾದರು.
ರಂಜಿತಾ ಹಾಗೂ ಅಭಯ್ ಹನಿಮೂನ್ ಗೆ ಹೋದಾಗ ಅಭಯ್ ನ ವರ್ತನೆ ಅವಳಿಗೆ ಬಹಳ ವಿಚಿತ್ರ ಎನಿಸಿತ್ತು.
ರಂಜಿತಾ ಈವರೆಗೆ ಸ್ತ್ರೀ-ಪುರುಷ ಸಂಬಂಧಗಳ ಬಗ್ಗೆ ಅಪರಿಚಿತಳಾಗಿದ್ದಳು. ಅಭಯ್ ಸಮಾಗಮದ ಸಂದರ್ಭದಲ್ಲಿ ಅದೇಕೋ ಪ್ರಾಣಿಯಂತೆ ವರ್ತಿಸುತ್ತಿದ್ದ. ಅವಳು ಪರಿಪೂರ್ಣ ಖುಷಿಯನ್ನಂತೂ ಅನುಭವಿಸಿರಲಿಲ್ಲ. ಅಭಯ್ ಮುಖ ತಿರುಗಿಸಿ ಮಲಗಿಬಿಡುತ್ತಿದ್ದ.
ಹನಿಮೂನ್ ನಿಂದ ವಾಪಸ್ ಆದ ಬಳಿಕ ಅವನ ವರ್ತನೆಯಲ್ಲೇನೂ ಬದಲಾವಣೆ ಆಗಲಿಲ್ಲ. ಅವಳಿಗೂ ಕೂಡ ಏನೊಂದು ತಿಳಿಯುತ್ತಿರಲಿಲ್ಲ. ತಾನು ಏನು ಮಾಡಬೇಕು? ತನ್ನ ಸಮಸ್ಯೆಯನ್ನು ಯಾರ ಮುಂದೆ ಹೇಳಿಕೊಳ್ಳಬೇಕು? ಅಭಯ್ ಕುಟುಂಬದವರು ಮೇಲಿಂದ ಮೇಲೆ ರಂಜಿತಾಳ ಕುಟುಂಬದವರನ್ನು ಹೀಯಾಳಿಸಿ ಮಾತನಾಡುತ್ತಿದ್ದರು. ಅಭಯ್ ಮಾತ್ರ ತನಗೆ ಅದೂ ಏನೂ ಸಂಬಂಧ ಇಲ್ಲದವನಂತೆ ಇದ್ದುಬಿಡುತ್ತಿದ್ದ.
ಒಂದು ವೇಳೆ ರಂಜಿತಾ ಅಭಯ್ ಜೊತೆಗೆ ಮಾತುಕಥೆ ನಡೆಸಲು ಪ್ರಯತ್ನಿಸಿದರೆ ಅವನು, “ಅಮ್ಮ ಅಪ್ಪ ನಮ್ಮ ನಿರ್ಧಾರವನ್ನು ಗೌರವಿಸಿದ್ದಾರೆ. ಈಗ ಸೊಸೆಯಾಗಿ ನಿನ್ನ ಜವಾಬ್ದಾರಿಯೆಂದರೆ, ನೀನು ಅವರ ಹೃದಯ ಗೆಲ್ಲಲು ಪ್ರಯತ್ನಿಸು,” ಎಂದು ಹೇಳುತ್ತಿದ್ದ.
ರಂಜಿತಾಗೆ ಚಕ್ರವ್ಯೂಹದಲ್ಲಿ ಸಿಲುಕಿದಂತಾಗಿತ್ತು. ಆಫೀಸಿನ 8 ಗಂಟೆಯಲ್ಲಷ್ಟೇ ಅವಳು ಮುಕ್ತವಾಗಿ ಉಸಿರಾಡಲು ಸಾಧ್ಯವಾಗುತ್ತಿತ್ತು. ರಾತ್ರಿ ಹೊತ್ತು ಅಭಯ್ ರಂಜಿತಾಳ ದೇಹ ನರಳುವಂತೆ ಮಾಡಿಬಿಡುತ್ತಿದ್ದ. ಹಗಲು ಹೊತ್ತು ಅಭಯ್ ನ ಕುಟುಂಬದವರು ರಂಜಿತಾಳ ಸ್ವಾಭಿಮಾನವನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದರು.
ಲವ್ ಮ್ಯಾರೇಜ್ ಆಗಿರಬಹುದು ಅಥವಾ ಅರೇಂಜ್ಡ್ ಮ್ಯಾರೇಜ್, ಎರಡರಲ್ಲೂ ಹುಡುಗಿಯೇ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿ ಬರುತ್ತದೆ ಎನ್ನುವ ವಿಷಯ ಅವಳ ಗಮನಕ್ಕೆ ಬಂದಿತು. ಈ ಮಧ್ಯೆ ರಂಜಿತಾ ಗರ್ಭಿಣಿಯಾದಳು. ಇನ್ಮುಂದೆ ತನ್ನ ವೈವಾಹಿಕವೆಂಬ ಮರದ ಬೇರುಗಳು ಬಹಳ ಗಟ್ಟಿಯಾಗುತ್ತವೆ ಎಂದು ರಂಜಿತಾ ಭಾವಿಸಿದ್ದಳು. ಆದರೆ ಆದರ್ಶ್ ನ ಜನನದ ಬಳಿಕ ಸಮಸ್ಯೆ ಹೇಗಿದ್ದವೋ ಹಾಗೆಯೇ ಉಳಿದವು.
ಈಗ ರಂಜಿತಾಳ ಜವಾಬ್ದಾರಿಗಳು ಮತ್ತಷ್ಟು ಹೆಚ್ಚಾಗಿದ್ದವು. ರಾತ್ರಿ ಹೊತ್ತು ಆದರ್ಶ್ ನ ಜವಾಬ್ದಾರಿ ಹಾಗೂ ಹಗಲು ಹೊತ್ತು ಆಫೀಸಿನ ಹೊಣೆಗಾರಿಕೆಯಿಂದಾಗಿ ರಂಜಿತಾ ಬಹಳಷ್ಟು ಸೊರಗಿಹೋದಳು.
ಮದುವೆಯಾದ ಒಂದೂವರೆ ವರ್ಷದಲ್ಲಿಯೇ ರಂಜಿತಾಳಿಗೆ ಅಭಯ್ ಯಕ್ಷಪ್ರಶ್ನೆಯಾಗಿ ಪರಿಣಮಿಸಿದ್ದವು. ರಂಜಿತಾಳ ಗಮನಕ್ಕೆ ಬಂದ ಸಂಗತಿಯೆಂದರೆ, ಅಭಯ್ ತನ್ನ ಪುರುಷ ದೌರ್ಬಲ್ಯವನ್ನು ಬಚ್ಚಿಡಲೆಂದೇ ಅವನು ಅವಳ ಮೇಲೆ ಸದಾ ಆವರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ. ತನ್ನ ಯಾವುದೇ ಮಾತುಗಳಿಂದ ಅವನ ಪುರುಷ ಪ್ರತಿಷ್ಠೆಗೆ ಧಕ್ಕೆಯಾಗದಂತೆ ಎಚ್ಚರವಹಿಸುತ್ತಿದ್ದ. ಆದರೆ ದಿನದಿನ ಅವನ ಪ್ರವೃತ್ತಿ ಹೇಸಿಗೆ ಹುಟ್ಟಿಸಲಾರಂಭಿಸಿದಾಗ, ಅವಳು ಒಂದು ದಿನ ತನ್ನ ಸಾಮಾನುಗಳು ಮತ್ತು ಮಗುವನ್ನು ಕರೆದುಕೊಂಡು ತನ್ನ ತವರಿಗೆ ಬಂದುಬಿಟ್ಟಳು.
ಅವಳು ಹಾಗೆ ಬಂದಿದ್ದರಿಂದ ಅಮ್ಮ ಅಪ್ಪ ದಂಗಾಗಿ ಹೋಗಿದ್ದರು. ಆಗ ಅಪ್ಪ ಅವಳನ್ನುದ್ದೇಶಿಸಿ, “ಮೊದಲು ನಿನ್ನ ಇಚ್ಛೆಗೆ ತಕ್ಕಂತೆ ಮದುಎಯಾದೆ. ಈಗ ಪುನಃ ಇಲ್ಲಿಗೆ ಬಂದಿರುವೆ. ಈ ನಿನ್ನ ವರ್ತನೆಯಿಂದ ಪಲ್ಲವಿಯ ಮೇಲೆ ಏನು ಪ್ರಭಾವ ಬೀರುತ್ತದೆ ಎಂಬ ಅರಿವು ನಿನಗಿದೆಯೇ….?” ಎಂದು ಕೇಳಿದರು.
ಅಮ್ಮ ಮೃದು ಧ್ವನಿಯಲ್ಲಿ, “ಸ್ವಲ್ಪ ದಿನ ಇರಲಿ ಬಿಡಿ. ಅವಳು ಅದೆಷ್ಟು ಸೊರಗಿದ್ದಾಳೆ ನೋಡಿ,” ಎಂದರು.
ಆದರೆ ರಂಜಿತಾ ತವರಿಗೆ ಬಂದು 2 ತಿಂಗಳಾಗುವ ಹೊತ್ತಿಗೆ ಅಕ್ಕಪಕ್ಕದವರು ಹಾಗೂ ನೆರೆಮನೆಯವರ ಕಿವಿಗಳು ನೆಟ್ಟಗಾದವು. ಹಗಲು ಹೊತ್ತಿನಲ್ಲಿ ಅಕ್ಕಪಕ್ಕದವರು ಅಮ್ಮ ಅಪ್ಪನಿಗೆ ಮಾತಿನಿಂದ ಹಿಂಸಿಸುತ್ತಿದ್ದರೆ, ರಾತ್ರಿ ಹೊತ್ತ ಅಮ್ಮ ಅಪ್ಪ ರಂಜಿತಾಳನ್ನು ಹಿಂಸಿಸುತ್ತಿದ್ದರು.ರಂಜಿತಾ ಎಲ್ಲವನ್ನೂ ಕೇಳಿಸಿಕೊಂಡು ಕೂಡ ಏನೂ ಕೇಳಿಸದವಳಂತೆ ಇದ್ದುಬಿಡುತ್ತಿದ್ದಳು. ಎಷ್ಟೋ ಸಲ ಅವಳಿಗೆ ತನ್ನ ಸ್ಥಿತಿ ಮೊದಲಿನಂತೆಯೇ ಇದೆಯೆಂದು ಅನಿಸುತ್ತಿತ್ತು. ಅಮ್ಮ ಅಪ್ಪನ ಮನೆಯಲ್ಲಿ ಅವಳಿಗೆ ಯಾರೊಬ್ಬರೂ ದೈಹಿಕವಾಗಿ ಹಿಂಸೆಪಡಿಸದಿದ್ದರೂ ಮಾನಸಿಕವಾಗಿ ಮಾತ್ರ ಅವಳಿಗೆ ವಿಪರೀತ ಹಿಂಸೆ ಎನಿಸುತ್ತಿತ್ತು.
ರಂಜಿತಾ ತನ್ನ ಸಂಬಳದ ಮುಕ್ಕಾಲು ಭಾಗವನ್ನು ಅಮ್ಮನ ಕೈಗೆ ಇಡುತ್ತಿದ್ದಳು. ಅಮ್ಮ ಆ ಹಣವನ್ನು ಅತ್ಯಂತ ನಿರ್ದಯವಾಗಿ ತೆಗೆದುಕೊಂಡು, “ಈಗ ಎಷ್ಟೊಂದು ದುಬಾರಿ ಬೆಲೆಗಳು. ಹಾಲು ಮತ್ತು ತರಕಾರಿ ಬೆಲೆ ಗಗನ ಮುಟ್ಟಿದೆ. ಒಂದು ಲೀಟರ್ ಹಾಲನ್ನು ಆದರ್ಶನೇ ಕುಡಿದುಬಿಡುತ್ತಾನೆ,” ಎನ್ನುತ್ತಿದ್ದರು.
ಅಮ್ಮನ ಬಾಯಿಂದ ಈ ಮಾತುಗಳನ್ನು ಕೇಳಿ ರಂಜಿತಾಳ ಮನಸ್ಸಿಗೆ ಬಹಳ ಘಾಸಿಯಾಗುತ್ತಿತ್ತು. ಅಪ್ಪ ಆಗಾಗ, “ಇಲ್ಲಿ ನೀನು ಇದ್ದೀಯಾ ಅಂತ ನಿನ್ನದು ನಡೆಯುತ್ತಿದೆ. ಇಲ್ಲದಿದ್ದರೆ 30,000 ರೂ.ನಲ್ಲಿ ಏನೇನೂ ಆಗೋಲ್ಲ,” ಎನ್ನುತ್ತಿದ್ದರು.
ರಂಜಿತಾ ಆ ಮಾತುಗಳನ್ನು ಕೇಳಿಸಿಕೊಂಡು ಅಪ್ಪ ಅಮ್ಮನ ಋಣದಲ್ಲಿ ಹತ್ತಿಕ್ಕಿದಂತಾಗುತ್ತಿತ್ತು.
ಒಮ್ಮೊಮ್ಮೆ ಅಮ್ಮ, “ರಂಜಿತಾ, ಪಲ್ಲವಿಯ ಬಗ್ಗೆ ಯೋಚಿಸಿದರೆ ನನಗೆ ರಾತ್ರಿ ನಿದ್ದೆಯೇ ಬರುವುದಿಲ್ಲ. ಅವಳ ಅಕ್ಕ ಗಂಡನ ಮನೆ ಬಿಟ್ಟು ಬಂದು ಕುಳಿತುಕೊಂಡಿದ್ದಾಳೆಂದರೆ, ಅವಳನ್ನು ಯಾರು ತಾನೇ ಮದುವೆಯಾಗಲು ಇಷ್ಟಪಡುತ್ತಾರೆ?” ಎಂದು ಹೇಳುತ್ತಿದ್ದರು.
ಅಮ್ಮನ ಮನೆಗೆ ಬಂದು ಅವರಿಗೆ ದೊಡ್ಡ ಹೊರೆಯಾಗಿದ್ದೇನೆಂದು ಅವಳಿಗೆ ಅನಿಸಲಾರಂಭಿಸಿತು. ಪಲ್ಲವಿಯಂತೂ ಅಕ್ಕನ ಜೊತೆ ಮುಖ ಕೊಟ್ಟು ಮಾತನಾಡುತ್ತಲೇ ಇರಲಿಲ್ಲ. ಎಲ್ಲಿಯವರೆಗೆ ರಂಜಿತಾ ತನ್ನ ಮನೆಯಲ್ಲಿರುತ್ತಾಳೋ ಅಲ್ಲಿಯವರೆಗೆ ತನ್ನ ಸಂಬಂಧ ಕೂಡಿ ಬರುವುದಿಲ್ಲ ಎಂದು ಅವಳಿಗೆ ಅನಿಸಲಾರಂಭಿಸಿತ್ತು.
ಇವತ್ತು ಕೂಡ ಪಲ್ಲವಿಯನ್ನು ನೋಡಲು ಗಂಡಿನ ಕಡೆಯವರು ಬರಲಿದ್ದರು. ರಂಜಿತಾ ಆಫೀಸಿಗೆ ಹೋಗಲು ಸಿದ್ಧಳಾಗುತ್ತಿದ್ದಳು. ಅಲ್ಲಿಗೆ ಬಂದು ಅಮ್ಮ, “ಇವತ್ತು ಮನೆಗೆ ಬೇಗ ಬಾ. ಮನೆಗೆಲಸಳಲ್ಲಿ ನೆರವಾಗಬೇಕು!” ಎಂದರು.
“ಅಮ್ಮಾ, ಇವತ್ತು ಆಫೀಸಿನಲ್ಲಿ ಆಡಿಟ್ ಇದೆ,” ರಂಜಿತಾ ಅಳುಕತ್ತಲೇ ಹೇಳಿದಳು.
ಅಮ್ಮ ಕೋಪದಿಂದ, “ನಾನೊಬ್ಬಳೇ ಏನು ಮಾಡಲಿ? ಆದರ್ಶ್ ನನ್ನು ನೋಡ್ತಾ ಇರ್ಲಾ ಅಥವಾ ಅತಿಥಿಗಳನ್ನ ನೋಡ್ಲಾ…..?” ಎಂದರು.
“ಅಮ್ಮಾ, ನಾನು ಆದರ್ಶ್ ನನ್ನು ನನ್ನ ಗೆಳತಿಯ ಮನೆಯಲ್ಲಿ ಬಿಡ್ತೀನಿ,” ಎಂದು ಹೇಳಿದಳು.
ಅಪ್ಪ ಖಂಡತುಂಡವಾಗಿ, “ಆದರ್ಶ್ ಗೆ ಯಾವುದಾದರೂ ಕ್ರೀಚ್ ನ ವ್ಯವಸ್ಥೆ ಮಾಡಿಕೊ…. ನನಗೂ ನಿನ್ನಮ್ಮನಿಗೂ ಚಿಕ್ಕ ಮಗುವನ್ನು ಸಂಭಾಳಿಸಲು ಆಗುವುದಿಲ್ಲ,” ಎಂದರು.
“ರಂಜಿತಕ್ಕಾ, ನೀನು ಸಾಕಷ್ಟು ಗಳಿಸ್ತೀಯಾ ಆದರ್ಶನಿಗಾಗಿ ಒಬ್ಬ ಕೆಲಸದವಳನ್ನು ಏಕಿಡಬಾರದು….?” ಎಂದು ಕೇಳಿದಳು ಪಲ್ಲವಿ.
ಆಫೀಸ್ ಗೆ ಹೋದ ರಂಜಿತಾ ಬೇಗ ಬೇಗ ಕೆಲಸ ಮುಗಿಸಿದಳು. ಹಾಫ್ ಡೇ ಲೀವ್ ತೆಗೆದುಕೊಳ್ಳಲು ಬಾಸ್ ಬಳಿ ಹೋದಾಗ, “ರಂಜಿತಾ, ಈ ತಿಂಗಳಲ್ಲಿ ಇದು ನಿಮ್ಮ 3ನೇ ಹಾಫ್ ಡೇ,” ಎಂದರು.
ಮನೆಗೆ ಬಂದ ರಂಜಿತಾ ಗಡಿಬಿಡಿಯಿಂದಲೇ ಪಕೋಡಾ ಮಾಡಿದಳು. ಬಳಿಕ ಕೇಸರಿಬಾತ್ ಮಾಡಿಟ್ಟಳು. ಅದಾದ ನಂತರ ಆದರ್ಶನನ್ನು ಕರೆದುಕೊಂಡು ತನ್ನ ಕೋಣೆಯಲ್ಲಿ ಬಂಧಿಯಾದಳು. ರಂಜಿತಾ ಅತಿಥಿಗಳೆದುರು ಕಾಣಿಸಿಕೊಳ್ಳಲು ಇಷ್ಟಪಡುತ್ತಿರಲಿಲ್ಲ.
ಈ ಸಲ ಪಲ್ಲವಿಯ ಸಂಬಂಧ ಕುದುರಿತು. ಅಮ್ಮ ಈ ವಿಷಯವನ್ನು ರಂಜಿತಾಳಿಗೆ ತಿಳಿಸಲೆಂದು ಅವಳ ಕೋಣೆಯ ಬಾಗಿಲನ್ನು ತೆರೆಯುತ್ತಿದ್ದಂತೆ ಆದರ್ಶ್ ಕೋಣೆಯಿಂದ ಹೊರಗೋಡಿದ.
ಅನಿವಾರ್ಯವಾಗಿ ಅಮ್ಮ ಅಪ್ಪ ಅವಳ ಪರಿಚಯವನ್ನು ಅತಿಥಿಗಳಿಗೆ ಮಾಡಿಕೊಡಲೇಬೇಕಾಯಿತು. ಅತಿಥಿಗಳು ಅವಳ ಹಾಗೂ ಅವಳ ಗಂಡನ ಬಗ್ಗೆ ವಿಚಾರಿಸಿದಾಗ ಅಪ್ಪ ಪರಿಸ್ಥಿತಿ ಸಂಭಾಳಿಸಲು, “ನೀವು ಬರುವುದಕ್ಕೆ ಸ್ವಲ್ಪ ಹೊತ್ತು ಮುಂಚೆಯಷ್ಟೇ ಇಲ್ಲಿಗೆ ಬಂದಿದ್ದಾಳೆ,” ಎಂದರು.
“ನಮಗೆ ಆದರ್ಶ್ ಮೇಲೆ ಬಹಳ ಪ್ರೀತಿ. ಹಾಗಾಗಿ ಆಗಾಗ ಬರ್ತಾ ಇರ್ತಾಳೆ…..” ಎಂದರು ಅಮ್ಮ.
ಹುಡುಗನ ಕಡೆಯವರಿಂದ ಹೆಚ್ಚು ಕಡಿಮೆ ವಿಷಯ ಪಕ್ಕಾ ಆಯಿತು. ಇಡೀ ಕುಟುಂಬ ಬಹಳ ಖುಷಿಯಿಂದಿರುವುದು ಕಾಣುತ್ತಿತ್ತು. “ರಂಜಿತಾ, ಈಗ ನೀನು ನಿನ್ನ ಮನೆಗೆ ಹೋಗುವ ಬಗ್ಗೆ ಯೋಚಿಸು. ನಿನ್ನ ತಪ್ಪಿನಿಂದಾಗಿ ಪಲ್ಲವಿಗೆ ಶಿಕ್ಷೆಯಾಗುವುದು ಬೇಡ,” ಎಂದರು ಅಮ್ಮ.
ತನ್ನ ತಾಯಿ ತಂದೆ ಇಷ್ಟೊಂದು ಕಲ್ಲು ಹೃದಯದವರು ಹೇಗಾಗಲು ಸಾಧ್ಯ? ಎಂದು ರಂಜಿತಾ ಯೋಚಿಸುತ್ತಿದ್ದಳು. ಅವಳು ಎಲ್ಲ ವಿಷಯನ್ನು ಅವರ ಮುಂದೆ ಹೇಳಿಕೊಂಡಿದ್ದಳು.
ರಂಜಿತಾ ಪ್ರತಿದಿನ ಯೋಚಿಸುತ್ತಾಳೆ. ತಾನು ಹೋಗುವುದಾದರೂ ಎಲ್ಲಿಗೆ? ತಾನು ಏಕಾಂಗಿಯಾಗಿ ಇರಬಲ್ಲೇ ಎಂಬ ನಂಬಿಕೆ ಅವಳಿಗೆ ಸ್ವತಃ ತನ್ನ ಮೇಲೆಯೇ ಇರಲಿಲ್ಲ. ಆ ಬಳಿಕ ಅವಳು ಅಭಯ್ ನ ಮನೆಗೆ ಹೋಗಿಬಿಡುವುದೆಂದು ಯೋಚಿಸಿದಳು.
ತಾನು ಸುಖಿಯಾಗಿರದಿದ್ದರೂ ಸರಿ, ತನ್ನ ಕಾರಣದಿಂದ ಪಲ್ಲವಿಯ ಜೀವನಕ್ಕೆ ಯಾವುದೇ ಸಮಸ್ಯೆ ಆಗಬಾರದು ಎಂದು ನಿರ್ಧರಿಸಿದಳು.
ಹೀಗೆ ಒಂದು ದಿನ ರಂಜಿತಾ ಮುಖ ಸಪ್ಪಗೆ ಮಾಡಿಕೊಂಡು ಆಫೀಸಿನಲ್ಲಿ ಕುಳಿತಿದ್ದಳು. ಆಗ ಅವಳ ಸಹೋದ್ಯೋಗಿ ಅನಾಮಿಕಾ ಅವಳ ಬಳಿ ಬಂದು, “ರಂಜಿತಾ ಇವತ್ತು ಪಾರ್ಟಿ ಮಾಡಲು ಬರ್ತೀಯಾ?” ಎಂದು ಕೇಳಿದಳು.
ರಂಜಿತಾಳಿಗೆ ಅನಾಮಿಕಾಳಲ್ಲಿ ಅಷ್ಟೊಂದು ಒಳ್ಳೆಯ ಸ್ನೇಹವೇನೂ ಇರಲಿಲ್ಲ. ಆದರೂ ಏಕೊ ಏನೋ ರಂಜಿತಾ ಅವಳ ಮುಂದೆ ಬಿಕ್ಕಿ ಬಿಕ್ಕಿ ಅತ್ತಳು ಹಾಗೂ ತನ್ನ ಪೂರ್ತಿ ಕಥೆಯನ್ನು ಹೇಳಿದಳು.
“ರಂಜಿತಾ, ನೀನೇಕೆ ಒಂದು ಬಳ್ಳಿಯ ಹಾಗೆ ಅತ್ತಿತ್ತ ಏಕೆ ಆಶ್ರಯ ಬಯಸ್ತೀಯಾ? ನೀನು ಸ್ವತಂತ್ರ ಮಹಿಳೆ. ನಿನ್ನ ಹಾಗೂ ನಿನ್ನ ಮಗನ ಕಾಳಜಿಯನ್ನು ನೀನೊಬ್ಬಳೇ ಮಾಡಬಹುದು,” ಎಂದಳು ಅನಾಮಿಕಾ.
“ಅನಾಮಿಕಾ, ನನಗೆ ಮನೆ ಎಲ್ಲಿದೆ? ಅದು ನನ್ನ ಪತಿಯ ಮನೆಯಾಗಿತ್ತು ಹಾಗೂ ಇಲ್ಲಿಯದು ನನ್ನ ತಾಯಿ ತಂದೆಯರದು. ನಾನ್ಹೇಗೆ ಆದರ್ಶ್ ನನ್ನು ಕರೆದುಕೊಂಡು ಏಕಾಂಗಿಯಾಗಿರಲು ಸಾಧ್ಯ? ತಪ್ಪು ನನ್ನದೇ ಆಗಿತ್ತು ಹಾಗೂ ಅದರ ಶಿಕ್ಷೆಯನ್ನು ನಾನೇ ಅನುಭವಿಸಬೇಕು,” ಎಂದಳು ರಂಜಿತಾ.
ಅನಾಮಿಕಾ ನಗುತ್ತಾ, “ಹುಚ್ಚು ಹುಡುಗಿ, ನಿನ್ನಿಚ್ಛೆಯಂತೆ ಮದುವೆ ಮಾಡಿಕೊಂಡಿದ್ದು ತಪ್ಪು ನಿರ್ಧಾರ ಆಗಿರಬಹುದು. ಆದರೆ ಇದಕ್ಕೆ ಶಿಕ್ಷೆ ಸಿಗಬೇಕು ಎನ್ನುವಂತಹ ತಪ್ಪೇನಲ್ಲ. ಈ ಸಾಮಾಜಿಕ ಬೇಡಿಗಳನ್ನು ಕಿತ್ತು ಬಿಸಾಡು ಹಾಗೂ ನಿನ್ನದೇ ಆದ ಸ್ವಂತ ಮನೆ ಮಾಡಿಕೊ,” ಎಂದಳು.
ಅನಾಮಿಕಾ ಆಫೀಸಿನಲ್ಲಿ ಬಹಳ ಜೋರು ಮಹಿಳೆ ಎಂದೇ ಎಲ್ಲರೂ ಹೇಳಿಕೊಳ್ಳುತ್ತಿದ್ದರು. ಏಕಂದರೆ ಅವಳು ತನ್ನ ಜೀವನವನ್ನು ತನ್ನದೇ ಆದ ರೀತಿಯಲ್ಲಿ ಜೀವಿಸುತ್ತಿದ್ದಳು. ಆದರೆ ಜೀವನದ ಈ ಸಂದಿಗ್ಧ ಸಮಯದಲ್ಲಿ ರಂಜಿತಾಳಿಗೆ ಅನಾಮಿಕಾ ಮಾತ್ರ ತಿಳಿಸಿ ಹೇಳಲು ಸಾಧ್ಯವಿತ್ತು. ಅವಳೇ ರಂಜಿತಾಳಿಗೆ ಗುರಾಣಿಯ ಹಾಗೆ ರಕ್ಷಣೆಗೆ ನಿಂತಳು.
ರಂಜಿತಾಳಿಗೆ ಅನಾಮಿಕಾಳೊಂದಿಗೆ ಸ್ನೇಹ ಬೆಳೆಸಿದ ನಂತರ ಅವಳಿಗೆ ಗೊತ್ತಾದ ಒಂದು ವಿಷಯವೆಂದರೆ, ಪ್ರತಿಯೊಬ್ಬ ಸ್ವತಂತ್ರ ಮಹಿಳೆಯನ್ನು `ಚಾಲೂ’ ಮಹಿಳೆ ಅಥವಾ ಬಹಳ ಜೋರು ಪ್ರವೃತ್ತಿಯವಳೆಂದು ಭಾವಿಸಲಾಗುತ್ತದೆ.
ಅನಾಮಿಕಾಳ ಧೈರ್ಯ ಮೆಚ್ಚಿಕೊಂಡ ಬಳಿಕವೇ ರಂಜಿತಾ, ತನ್ನ ಮಗನನ್ನು ಕರೆದುಕೊಂಡು ಮನೆ ತೊರೆಯಲು ನಿರ್ಧಾರ ಕೈಗೊಂಡಳು.
ಅನಾಮಿಕಾಳೇ ಮುಂದಾಗಿ ರಂಜಿತಾಳಿಗೆ ಒಬ್ಬ ವಕೀಲರನ್ನು ಭೇಟಿ ಮಾಡಿಸಿದಳು ಹಾಗೂ ಅವಳು ಅಭಯ್ ನಿಂದ ಕಾನೂನುಬದ್ಧವಾಗಿ ಪ್ರತ್ಯೇಕವಾಗಿರುವ ನಿರ್ಧಾರ ಮಾಡಿಸಿದಳು.
ಅನಾಮಿಕಾ ರಂಜಿತಾಳಿಗೆ ಅವಳ ಬಾಡಿಗೆಯ ಮನೆಯ ಫ್ಲಾಟಿನ ಕೀಯನ್ನು ಹಸ್ತಾಂತರಿಸುತ್ತಿದ್ದಾಗ ರಂಜಿತಾಳ ಕಣ್ಣಲ್ಲಿ ನೀರು ಬಂದುಬಿಟ್ಟಿತು.
ಅನಾಮಿಕಾ ಮುಗುಳ್ನಗುತ್ತಾ, “ರಂಜಿತಾ, ಫ್ಲಾಟ್ ಬಾಡಿಗೆಯದ್ದಾಗಿರಬಹುದು. ಆದರೆ ಈಗ ಇದನ್ನು ನಿನ್ನ ಮನೆಯಾಗಿ ಮಾಡಿಕೊಳ್ಳುವುದು ನಿನ್ನ ಜವಾಬ್ದಾರಿ. ನಿನ್ನ ಜೀವನಕ್ಕೆ ಬಣ್ಣ ತುಂಬುವುದು ನಿನ್ನ ಹೊಣೆಗಾರಿಕೆಯೆಂದು ಭಾವಿಸು,” ಎಂದಳು.
ರಂಜಿತಾ ತನ್ನ ಹಾಗೂ ಆದರ್ಶ್ ನ ಬಟ್ಟೆಬರೆಗಳನ್ನೆಲ್ಲಾ ಪ್ಯಾಕ್ ಮಾಡಿಕೊಳ್ಳಲು ಶುರು ಮಾಡಿದಾಗ ಅಮ್ಮ ಖುಷಿಯಿಂದ, “ನೀನು ನಿನ್ನ ಮನೆಗೆ ಹೋಗುವ ನಿರ್ಧಾರ ಮಾಡಿದ್ದು ಖುಷಿಯ ವಿಚಾರ,” ಎಂದರು.
ರಂಜಿತಾ ಅಮ್ಮನ ಮಾತು ಕೇಳಿ ಮುಗುಳ್ನಗುತ್ತಾ, “ಅಮ್ಮಾ, ನಾನು ನನ್ನ ಮನೆಗೆ ಹೋಗುವ ನಿರ್ಧಾರ ಮಾಡಿದ್ದೇನೆ ಎಂದು ನೀವು ಸತ್ಯವನ್ನೇ ಹೇಳಿದ್ದೀರಿ. ಎಲ್ಲಿಯವರೆಗೆ ನಾನು ನಿಮ್ಮ ಅಥವಾ ಇತರರ ಆಶ್ರಯದಲ್ಲಿರಲು ಸಾಧ್ಯ? ನಿಮಗೆ ನನ್ನಿಂದಾಗಿ ಯಾವುದೇ ತೊಂದರೆ ಆಗದು. ಆದರ್ಶ್ ನ ಜವಾಬ್ದಾರಿ ನನ್ನದು. ಅವನ ಜವಾಬ್ದಾರಿಯನ್ನು ನಾನೇ ನೋಡಿಕೊಳ್ಳುತ್ತೇನೆ,” ಎಂದಳು.
“ಏನು ನಿನ್ನ ಮಾತಿನ ಅರ್ಥ?” ಅಪ್ಪ ಕೋಪದಿಂದ ಕೇಳಿದರು.
“ಅಪ್ಪಾ, ಇದರರ್ಥ ಇಷ್ಟೇ. ಇನ್ನು ಮುಂದೆ ನಾನು ನನ್ನ ಜೀವನದ ಚುಕ್ಕಾಣಿಯನ್ನು ನನ್ನ ಕೈಗೇ ತೆಗೆದುಕೊಳ್ಳಲಿದ್ದೇನೆ. ಏನೇ ಒಳ್ಳೆಯದಾಗಲಿ, ಕೆಟ್ಟದ್ದಾಗಲಿ ಅದೆಲ್ಲದರ ಜವಾಬ್ದಾರಿ ನನ್ನದೇ. ನನ್ನ ಹಾಗೂ ಆದರ್ಶ್ ನ ಜವಾಬ್ದಾರಿಯಿಂದ ನಿಮ್ಮನ್ನು ಮುಕ್ತಾಯಗೊಳಿಸುತ್ತಿದ್ದೇನೆ,” ಎಂದಳು.
“ನಿನ್ನ ಬಗ್ಗೆ ಪಲ್ಲವಿಯ ಅತ್ತೆಯ ಮನೆಯವರಿಗೆ ಏನೆಂದು ಹೇಳುವುದು?” ಅಮ್ಮ ಕೇಳಿದರು.
“ಅಳು ತನ್ನದೇ ಆದ ರೀತಿಯಲ್ಲಿ ಜೀವನ ನಡೆಸುತ್ತಿದ್ದಾಳೆಂದು ಹೇಳಿ,” ಎಂದಳು.
ಆ ಬಳಿಕ ರಂಜಿತಾ ಒಂದು ಚೀಟಿಯಲ್ಲಿ ತನ್ನ ಹೊಸ ಮನೆಯ ವಿಳಾಸ ಬರೆದು ಅಪ್ಪನ ಕೈಗೆ ಇಟ್ಟಳು. ರಂಜಿತಾಳ ಮನೆ ಚಿಕ್ಕದಾಗಿರಬಹುದು. ಆದರೆ ಅದು ಅವಳ ಸ್ವಂತದ್ದಾಗಿತ್ತು. ಅಲ್ಲಿ ಅವಳ ಅಸ್ತಿತ್ವದ ಬೇರುಗಳು ಬಹಳ ಆಳವಾಗಿ ಊರಿದ್ದವು.