ಬಾದಾಮಿ ಬರ್ಫಿ
ಸಾಮಗ್ರಿ : 1 ಕಪ್ ಕಡಲೆಹಿಟ್ಟು, ಅರ್ಧ ಕಪ್ ಬಾದಾಮಿ ಪುಡಿ, 1 ಕಪ್ ಸಕ್ಕರೆ, ಅರ್ಧ ಕಪ್ ಕಾದಾರಿದ ಹಾಲು, ಅಗತ್ಯವಿದ್ದಷ್ಟು ತುಪ್ಪ, ಡ್ರೈ ಫ್ರೂಟ್ಸ್.
ವಿಧಾನ : ಮೊದಲು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿಕೊಂಡು ಕಡಲೆ ಹಿಟ್ಟು ಹಾಕಿ ಹುರಿಯಿರಿ. ನಂತರ ಬಾದಾಮಿಪುಡಿ ಹಾಕಿ ಹುರಿಯಿರಿ. 2-3 ನಿಮಿಷ ಬಿಟ್ಟು ಕೆಳಗಿಳಿಸಿ. ಒಂದು ಪಾತ್ರೆಯಲ್ಲಿ ನೀರು ಬಿಸಿ ಮಾಡಿ, ಸಕ್ಕರೆ ಹಾಕಿ, ಒಂದೆಳೆ ಪಾಕ ತಯಾರಿಸಿ. ಇದಕ್ಕೆ ಬಾದಾಮಿ ಮಿಶ್ರಣ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ನಡುನಡುವೆ ತುಪ್ಪ ಹಾಕಿ ಕೈಯಾಡಿಸಿ. ಮೈಸೂರುಪಾಕಿನ ಹದ ಬರಲಿ. ನಂತರ ಕೆಳಗಿಳಿಸಿ, ತುಪ್ಪ ಸವರಿದ ತಟ್ಟೆಗೆ ಹರಡಿ, ಮೇಲೆ ಡ್ರೈಫ್ರೂಟ್ಸ್ ಉದುರಿಸಿ, ಚೆನ್ನಾಗಿ ಆರಿದ ನಂತರ ಫ್ರಿಜ್ ನಲ್ಲಿರಿಸಿ, ನಂತರ ಹೊರತೆಗೆದು ಬರ್ಫಿ ಕತ್ತರಿಸಿ.
ಪನೀರ್ ಕಲಾಕಂದ್
ಸಾಮಗ್ರಿ : 1 ಲೀ. ಗಟ್ಟಿ ಹಾಲು, 1-1 ಕಪ್ ಪನೀರ್ ಸಕ್ಕರೆ, ಅರ್ಧ ಕರ್ಪ್ ಫ್ರೆಶ್ ಕ್ರೀಂ, ಒಂದಿಷ್ಟು ತುಪ್ಪ, ಡ್ರೈಫ್ರೂಟ್ಸ್.
ವಿಧಾನ : ಮೊದಲು ಬಾಣಲೆಯಲ್ಲಿ ಹಾಲು ಕಾಯಿಸಿ. ಮಂದ ಉರಿ ಮಾಡಿ ಕೈ ಆಡಿಸುತ್ತಾ, ಅರ್ಧದಷ್ಟು ಹಿಂಗುವವರೆಗೂ ಕುದಿಸಿರಿ. ನಂತರ ಇದನ್ನು ಕೆಳಗಿಳಿಸಿ ಆರಲು ಬಿಡಿ. ತುರಿದ ಪನೀರ್ ಮಸೆದು ಇದಕ್ಕೆ ಬೆರೆಸಿರಿ. ತಾಜಾ ಕ್ರೀಂ ಬೆರೆಸಿ ಮತ್ತೆ ಮಂದ ಉರಿಯಲ್ಲಿ ಒಲೆ ಮೇಲಿರಿಸಿ, ಕೆದಕಬೇಕು. ಸ್ವಲ್ಪ ಹೊತ್ತು ಬಿಟ್ಟು ಇದು ಖೋವಾ ತರಹ ಆದಾಗ, ಸಕ್ಕರೆ ಬೆರೆಸಿ ಕೆದಕಬೇಕು. ಇದು ಮತ್ತಷ್ಟು ಗಟ್ಟಿ ಆಗುವವರೆಗೂ ಕೆದಕಿ ಕೆಳಗಿಳಿಸಿ. ತುಪ್ಪ ಸವರಿದ ತಟ್ಟೆಗೆ ಇದನ್ನು ಹರಡಿ, ಡ್ರೈ ಫ್ರೂಟ್ಸ್ ಉದುರಿಸಿ, ಚಿತ್ರದಲ್ಲಿರುವಂತೆ ಬರ್ಫಿಗಳಾಗಿ ಕತ್ತರಿಸಿ.
ಮೈದಾ ಬರ್ಫಿ
ಸಾಮಗ್ರಿ : ಅರ್ಧ ಲೀ. ಗಟ್ಟಿ ಹಾಲು, 1-1 ಕಪ್ ಸಕ್ಕರೆ, ಮೈದಾ, ಅಗತ್ಯವಿದ್ದಷ್ಟು ತುಪ್ಪ, ಏಲಕ್ಕಿಪುಡಿ, ಡ್ರೈಫ್ರೂಟ್ಸ್.
ವಿಧಾನ : ಮೊದಲು ಬಾಣಲೆಯಲ್ಲಿ ತುಪ್ಪು ಬಿಸಿ ಮಾಡಿಕೊಂಡು, ಮೈದಾ ಹಾಕಿ ಘಮ್ಮೆನ್ನುವಂತೆ ಹುರಿಯಿರಿ. ಅದನ್ನು ತಟ್ಟೆಗೆ ಹಾಕಿ, ಅದೇ ಬಾಣಲೆಯಲ್ಲಿ ಹಾಲು ಕಾಯಿಸಿ, ಕುದಿಸುತ್ತಾ ಅರ್ಧದಷ್ಟು ಹಿಂಗಿಸಿ. ಇದಕ್ಕೆ ಮೈದಾ ಬೆರೆಸಿ ಗಂಟಿಲ್ಲದಂತೆ ಕೆದಕಬೇಕು. ನಡುವೆ ತುಪ್ಪ ಬೆರೆಸುತ್ತಿರಿ. ನಂತರ ಸಕ್ಕರೆ ಬೆರೆಸಿ, ಮತ್ತೆ 6-7 ನಿಮಿಷ ಕೆದಕಬೇಕು. ನಂತರ ಕೆಳಗಿಳಿಸಿ, ಇದನ್ನು ತುಪ್ಪ ಸವರಿದ ತಟ್ಟೆಗೆ ಹರಡಿ, ಡ್ರೈಫ್ರೂಟ್ಸ್ ಉದುರಿಸಿ, ಆರಿದ ಮೇಲೆ ಬರ್ಫಿ ಕತ್ತರಿಸಿ.
ಹಾಲಿನ ಕೇಕು
ಸಾಮಗ್ರಿ : 1 ಲೀ. ಗಟ್ಟಿ ಹಾಲು, ಅರ್ಧ ಕಪ್ ಸಕ್ಕರೆ, 1 ಹೋಳು ನಿಂಬೆಹಣ್ಣು, ತುಸು ಏಲಕ್ಕಿ ಪುಡಿ, ತುಪ್ಪ.
ವಿಧಾನ : ದಪ್ಪ ತಳದ ಬಾಣಲೆಯಲ್ಲಿ ಹಾಲು ಕಾಯಿಸಿ. ಮಂದ ಉರಿಯಲ್ಲಿ ಇದನ್ನು ಕೈಯಾಡಿಸುತ್ತಾ ಮುಕ್ಕಾಲು ಭಾಗ ಹಿಂಗುವಂತೆ ಮಾಡಿ. ಒಂದು ಚಿಕ್ಕ ಬಟ್ಟಲಿಗೆ ನಿಂಬೆಹಣ್ಣು ಹಿಂಡಿ, ಅದಕ್ಕೆ 4 ಚಮಚ ನೀರು ಬೆರೆಸಿ, ಇದನ್ನು ಹಾಲಿಗೆ ಬೆರೆಸಿಕೊಳ್ಳಿ, ಸ್ವಲ್ಪ ಹೊತ್ತು ಹಾಗೇ ಬಿಟ್ಟು, ನಂತರ ನಿಧಾನವಾಗಿ ಕೈಯಾಡಿಸಿ. ಆಗ ಅದು ಬೂಂದಿಕಾಳಿನ ತರಹ ಒಡೆಯುತ್ತದೆ. ಆಗ ಇದಕ್ಕೆ ಸಕ್ಕರೆ ಬೆರೆಸಿ ಮತ್ತೆ ಕೈಯಾಡಿಸಿ. ನಂತರ ಏಲಕ್ಕಿ ಬೆರೆಸಿ, ಚೆನ್ನಾಗಿ ಮಿಶ್ರಗೊಳಿಸಿ. ಸಾಕಷ್ಟು ಗಟ್ಟಿಯಾದಾಗ, ತುಪ್ಪ ಸವರಿದ ಟ್ರೇ ಮೇಲೆ ಇದನ್ನು ಹರಡಿ, ಚಿತ್ರದಲ್ಲಿರುವಂತೆ ಕ್ಯೂಬ್ಸ್ ಆಗಿ ಕತ್ತರಿಸಿ ಸವಿಯಲು ಕೊಡಿ.
ಡ್ರೈ ಫ್ರೂಟ್ಸ್ ಲಡ್ಡು
ಸಾಮಗ್ರಿ : ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ, ಅಖರೋಟು, ಖರ್ಜೂರ, ಅಂಜೂರ, ಕರ್ಬೂಜಾ/ಕಲ್ಲಂಗಡಿ ಬೀಜ (ತಲಾ 100 ಗ್ರಾಂ) ತುಸು ಗೋಂದು, ತುಪ್ಪ, ಏಲಕ್ಕಿಪುಡಿ, ಮಿಲ್ಕ್ ಮೇಡ್.
ವಿಧಾನ : ಹಾಲಲ್ಲಿ ನೆನೆದ ಅಂಜೂರ, ಹಸಿ ಖರ್ಜೂರಗಳನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ. ತುಪ್ಪದಲ್ಲಿ ಉಳಿದೆಲ್ಲ ಡ್ರೈಫ್ರೂಟ್ಸ್ ಹುರಿದು ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಗೋಂದು ಬಿಸಿ ಮಾಡಿ ಕರಗಿಸಿ. ಇದನ್ನು ಮಿಲ್ಕ್ ಮೇಡ್ ಸಮೇತ ಉಳಿದೆಲ್ಲ ಸಾಮಗ್ರಿಗೆ ಬೆರೆಸಿಕೊಂಡು, ಸಣ್ಣ ಸಣ್ಣ ಉಂಡೆ ಕಟ್ಟಬೇಕು. ಇದೀಗ ಡ್ರೈ ಫ್ರೂಟ್ಸ್ ಲಡ್ಡು ರೆಡಿ!
ಡ್ರೈ ಫ್ರೂಟ್ಸ್ ಬರ್ಫಿ
ಸಾಮಗ್ರಿ : ಎಲ್ಲಾ ಬಗೆಯ ಡ್ರೈ ಫ್ರೂಟ್ಸ್ (ತಲಾ 100 ಗ್ರಾಂ), ಅರ್ಧರ್ಧ ಕಪ್ ಹಾಲು, ಸಕ್ಕರೆ, ಮಿಲ್ಕ್ ಪೌಡರ್, ಕಡಲೆಹಿಟ್ಟು, ಮಿಲ್ಕ್ ಮೇಡ್, ತುಸು ಏಲಕ್ಕಿ ಪುಡಿ, ತುಪ್ಪ.
ವಿಧಾನ : ಹಿಂದಿನ ರಾತ್ರಿ ಬಾದಾಮಿ, ಪಿಸ್ತಾ, ಅಂಜೂರ, ಅಖರೋಟ್ ನ್ನು ಹಾಲಿನಲ್ಲಿ ನೆನೆಹಾಕಿ. ಮಾರನೇ ಬೆಳಗ್ಗೆ ಇದನ್ನು ಆ ಹಾಲಿನ ಸಮೇತ ಬೇಯಿಸಿ. ಆರಿದ ನಂತರ ಮಿಕ್ಸಿಗೆ ಹಾಕಿ. ಉಳಿದ ಡ್ರೈ ಫ್ರೂಟ್ಸ್ ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿ. ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ. ಅದಕ್ಕೆ ಸಕ್ಕರೆ ಸೇರಿಸಿ ಕರಗಿಸಿ. ನಂತರ ಮಿಕ್ಸಿಯ ಮಿಶ್ರಣ, ಮಿಲ್ಕ್ ಮೇಡ್ ಬೆರೆಸಿ ಮಂದ ಉರಿಯಲ್ಲಿ ಕೈಯಾಡಿಸಿ. ನಡುನಡುವೆ ತುಪ್ಪ ಬೆರೆಸುತ್ತಾ ಮೈಸೂರುಪಾಕ್ ಹದಕ್ಕೆ ಸಿದ್ಧಪಡಿಸಿ, ಏಲಕ್ಕಿ ಸಹ ಸೇರಿಸಿ. ಜೊತೆಗೆ ಕಡಲೆಹಿಟ್ಟು, ಮಿಲ್ಕ್ ಪೌಡರ್, ಮಿಲ್ಕ್ ಮೇಡ್ ಸಹ ಬೆರೆಸಿ ಎಲ್ಲವನ್ನೂ ಗಟ್ಟಿ ಮಿಶ್ರಣ ಆಗಿಸಿ. ಇದನ್ನು ಕೆಳಗಿಳಿಸಿ, ತುಪ್ಪ ಸವರಿದ ತಟ್ಟೆಗೆ ಹರಡಿ, ಚಿತ್ರದಲ್ಲಿರುವಂತೆ ಬರ್ಫಿ ಕತ್ತರಿಸಿ.
ಪೌಷ್ಟಿಕ ಡ್ರೈ ಫ್ರೂಟ್ಸ್ ರೋಲ್
ಸಾಮಗ್ರಿ : ಅರ್ಧರ್ಧ ಕಪ್ ಹುರಿದ ಕಡಲೆಬೀಜ, ಎಳ್ಳು, ಕರ್ಬೂಜಾ/ಕಲ್ಲಂಗಡಿ ಬೀಜ, ತುಪ್ಪದಲ್ಲಿ ಹುರಿದ ಎಲ್ಲಾ ಬಗೆಯ ಡ್ರೈ ಫ್ರೂಟ್ಸ್ (ತಲಾ 100 ಗ್ರಾಂ), ತುಸು ಕೊಬ್ಬರಿ ತುರಿ, ಏಲಕ್ಕಿ ಪುಡಿ, ತುಪ್ಪ, ಮಿಲ್ಕ್ ಮೇಡ್.
ವಿಧಾನ : ಎಲ್ಲವನ್ನೂ ತರಿತರಿ ಪುಡಿ ಮಾಡಿ, ಅಂಜೂರ, ಹಸಿ ಖರ್ಜೂರ ಬೇರೆಯಾಗಿ ಪೇಸ್ಟ್ ಮಾಡಿ. ಒಂದು ಬಟ್ಟಲಿಗೆ ಮಿಸ್ಕ್ ಮೇಡ್ ಸಮೇತ ಎಲ್ಲವನ್ನೂ ಹಾಕಿ ಮಿಶ್ರಣ ಕಲಸಿಡಿ. ಇದಕ್ಕೆ ಕೊಬ್ಬರಿ ತುರಿ ಸೇರಿಸಿ, ಸ್ವಲ್ಪ ಸ್ವಲ್ಪ ಉಂಡೆ ಕಟ್ಟಿ ಚಿತ್ರದಲ್ಲಿರುವಂತೆ ಸುರಳಿ ಆಕಾರ ಬರುವಂತೆ ಮಾಡಿ ಸವಿಯಲು ಕೊಡಿ.