ಬಾಂಬೆ ಸಾಗು
ಸಾಮಗ್ರಿ : 2-3 ಆಲೂಗಡ್ಡೆ, 2 ಈರುಳ್ಳಿ, 2-2 ಚಮಚ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಕಡಲೆಹಿಟ್ಟು ಕಿವುಚಿದ ಹುಣಿಸೆ-ಬೆಲ್ಲದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, 2-2 ಚಿಟಕಿ ಅರಿಶಿನ, ಮೆಂತ್ಯದ ಪುಡಿ, ಒಗ್ಗರಣೆಗೆ ಅರ್ಧ ಸೌಟು ಎಣ್ಣೆ, ಸಾಸುವೆ, ಜೀರಿಗೆ, ಮೆಂತ್ಯ, ತುಂಡರಿಸಿದ ಒಣ ಮೆಣಸಿನಕಾಯಿ, ಒಂದಿಷ್ಟು ಹೆಚ್ಚಿದ ಕರಿಬೇವು, ಪುದೀನಾ.
ವಿಧಾನ : ಸಿಪ್ಪೆ ಸಹಿತ ಆಲೂಗಡ್ಡೆಯನ್ನು ಸಣ್ಣದಾಗಿ ಹೆಚ್ಚಿಕೊಂಡು, ಚಿಟಕಿ ಉಪ್ಪು ಹಾಕಿ ಬೇಯಿಸಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಒಗ್ಗರಣೆ ಕೊಡಿ. ಅದು ಚಟಪಟಾಯಿಸಿದ ನಂತರ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ಆಮೇಲೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಖಾರ, ಬೆಲ್ಲ ಉಳಿದ ಮಸಾಲೆ ಸೇರಿಸಿ ಕೆದಕಬೇಕು. ಆಮೇಲೆ ಬೆಂದ ಆಲೂ (ನೀರಿನ ಸಮೇತ) ಬೆರೆಸಿ ಮಂದ ಉರಿಯಲ್ಲಿ ಕೈಯಾಡಿಸುತ್ತಾ ಕುದಿಸಬೇಕು. ಕೊನೆಯಲ್ಲಿ ಕಡಲೆಹಿಟ್ಟನ್ನು ತುಸು ಬೆಚ್ಚಗಿನ ನೀರಿನಲ್ಲಿ ಕದಡಿಕೊಂಡು ಇದಕ್ಕೆ ಬೆರೆಸಿ, ಗ್ರೇವಿ ಗಟ್ಟಿಯಾಗುವವರೆಗೂ ಕುದಿಸಿ ಕೆಳಗಿಳಿಸಿ. ಕೊನೆಯಲ್ಲಿ ಹೆಚ್ಚಿದ ಪುದೀನಾ, ಕೊ.ಸೊಪ್ಪು ಸೇರಿಸಿ, ಚಪಾತಿ/ ಪೂರಿಗಳ ಜೊತೆ ಸವಿಯಲು ಕೊಡಿ.
ಗೋಲಾ ಸ್ಪ್ರಿಂಗ್ ರೋಲ್ಸ್
ಮೂಲ ಸಾಮಗ್ರಿ : 2 ಕಪ್ ಮೈದಾ, 1 ಮೊಟ್ಟೆ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ತುಸು ಕಾದಾರಿದ ಹಾಲು.
ಹೂರಣದ ಸಾಮಗ್ರಿ : ಬೆಂದ 1 ಆಲೂ, 1-2 ಕ್ಯಾರೆಟ್, 1 ಕ್ಯಾಪ್ಸಿಕಂ, ಅರ್ಧ ಕಪ್ ಹೆಚ್ಚಿದ ಹೂಕೋಸು, 100 ಗ್ರಾಂ ಹೆಚ್ಚಿದ ಅಣಬೆ, 2-3 ಹಸಿ ಮೆಣಸು, 2 ಈರುಳ್ಳಿ, 5-6 ಎಸಳು ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಗರಂಮಸಾಲ, ಚಾಟ್ ಮಸಾಲ, ಸೋಯಾ ಸಾಸ್, ಟೊಮೇಟೊ ಸಾಸ್, ಒಗ್ಗರಣೆಗೆ ಎಣ್ಣೆ, ಸಾಸುವೆ, ಜೀರಿಗೆ, ಸೋಂಪು, ಕರಿಬೇವು.
ವಿಧಾನ : ಮೈದಾಗೆ ಮೊಟ್ಟೆ ಒಡೆದು ಹಾಕಿ, ಉಪ್ಪು, ಮೆಣಸು, ಹಾಲು ಬೆರೆಸಿಕೊಂಡು ಚೆನ್ನಾಗಿ ಗೊಟಾಯಿಸಿ, ದೋಸೆ ಹಿಟ್ಟಿನ ಹದಕ್ಕೆ ಮಾಡಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ಹೆಚ್ಚಿದ ಬೆಳ್ಳುಳ್ಳಿ, ಹಸಿ ಮೆಣಸು ಆಮೇಲೆ ಈರುಳ್ಳಿ ಹಾಕಿ ಬಾಡಿಸಿ. ನಂತರ ಅಣಬೆ, ಕ್ಯಾಪ್ಸಿಕಂ, ಹೂಕೋಸು ಸೇರಿಸಿ ಬಾಡಿಸಬೇಕು. ಆಮೇಲೆ ಬೆಂದ ಆಲೂ, ಕ್ಯಾರೆಟ್ ಹೋಳು ಸೇರಿಸಿ ಕೆದಕಬೇಕು. ಇದಕ್ಕೆ ಉಪ್ಪು, ಖಾರ ಉಳಿದ ಮಸಾಲೆ ಬೆರೆಸಿ, ಕೈಯಾಡಿಸಿ ಕೆಳಗಿಳಿಸಿ. ಇದನ್ನು ತುಸು ಆರಲು ಬಿಡಿ. ಮೈದಾ ಮಿಶ್ರಣದಿಂದ ಒಂದೊಂದೇ ದೋಸೆ ತಯಾರಿಸಿ. ದೋಸೆ ಕೆಳಗಿಳಿಸಿ, ಅದರ ಮಧ್ಯೆ 2-3 ಚಮಚ ತರಕಾರಿ ಮಿಶ್ರಣ ತುಂಬಿಸಿ, ಚಿತ್ರದಲ್ಲಿರುವಂತೆ ನೀಟಾಗಿ ಪ್ಯಾಕೆಟ್ ತರಹ ಮಡಿಚಿ, ಅಂಚು ಬಿಟ್ಟುಕೊಳ್ಳದಂತೆ ಮೈದಾ ಪೇಸ್ಟ್ ಅಂಟಿಸಿ. ಇವನ್ನು ತಲಾ ಮೇಲೆ ಶ್ಯಾಲೋ ಫ್ರೈ ಮಾಡಿ, ಬಿಸಿಯಾಗಿ ಸವಿಯಲು ಕೊಡಿ.