ಅನೇಕ ಪ್ರಯತ್ನಗಳ ನಂತರ ನಿಮ್ಮ ಬೇಕಿಂಗ್ ಡಿಶ್, ಪೇಸ್ಟ್ರಿ ಬೇಕರಿಯ ಅಂಗಡಿಗಳ ತರಹ ನೀಟಾಗಿ ಬರದಿದ್ದರೆ, ಕೆಳಗಿನ ಸಲಹೆಗಳನ್ನು ಅಗತ್ಯವಾಗಿ ಗಮನಿಸಿ, ಅಳವಡಿಸಿಕೊಳ್ಳಿ. ಹ್ಯಾಪಿ ಬೇಕಿಂಗ್! ಕೇಕ್, ಕಟ್ ಲೆಟ್, ಪಿಜ್ಜಾ, ಬರ್ಗರ್, ಬಿಸ್ಕತ್ತುಗಳಂಥ ಬೇಕ್ಡ್ ವ್ಯಂಜನಗಳನ್ನು ಈಗ ಎಲ್ಲರೂ ಮನೆಯಲ್ಲೇ ತಯಾರಿಸಿ ಸವಿಯ ಬಯಸುತ್ತಾರೆ. ಮಾರುಕಟ್ಟೆಯಲ್ಲಿ ಎಲ್ಲವೂ ಅತಿ ದುಬಾರಿ, ಜೊತೆಗೆ ಕಲಬೆರಕೆಯ ಕಾಟ ಹಾಗೂ ಅನಾರೋಗ್ಯದ ಕಾರಣಗಳಿಂದಾಗಿ ಇಂಥ ಬೇಕಿಂಗ್ ವ್ಯಂಜನಗಳನ್ನು ಎಲ್ಲಾ ಗೃಹಿಣಿಯರೂ ಮನೆಯಲ್ಲೇ ಮಾಡತೊಡಗಿದ್ದಾರೆ. ಅದರಲ್ಲೂ ಓವನ್, ಮೈಕ್ರೋವೇವ್ ಇಷ್ಟು ಜನಪ್ರಿಯವಾಗಿರುವ ಈ ಕಾಲದಲ್ಲಿ ಇದು ಅಸಾಧ್ಯವೇನಲ್ಲ. ಆದರೆ ಅನೇಕ ಪ್ರಯತ್ನಗಳ ನಂತರ ಇಂಥ ಬೇಕಿಂಗ್ ಡಿಶೆಸ್, ಪೇಸ್ಟ್ರಿ ಬೇಕರಿ ಅಂಗಡಿಗಳಂಥ ಪರ್ಫೆಕ್ಷನ್ ನೀಡದ್ದಿದ್ದಾಗ, ಬಹಳ ನಿರಾಸೆಯಾಗುವುದು ಸಹಜ.
ಖಂಡಿತಾ ಬೇಸರಪಟ್ಟುಕೊಳ್ಳಬೇಡಿ, ಇಂಥ ಬೇಕಿಂಗ್ ವ್ಯಂಜನಗಳು ಚೆನ್ನಾಗಿ ಮೂಡಿಬರಲೆಂದೇ ಇಲ್ಲಿ ಹಲವಾರು ಸಲಹೆಗಳನ್ನು ನೀಡಲಾಗಿದೆ. ಇವನ್ನು ಅಳವಡಿಸಿಕೊಂಡು, ಅತ್ಯುತ್ತಮ ಬೇಕ್ಡ್ ಡಿಶೆಸ್ ತಯಾರಿಸಿ :
ಬೇಕಿಂಗ್ ಗಾಗಿ ಬಳಸಲಾಗುವ ಮೈದಾ, ಬೇಕಿಂಗ್ ಪೌಡರ್, ಸೋಡ ಇತ್ಯಾದಿಗಳಾವು ಹಳೆಯದಾಗಿರಬಾರದು. ಇವನ್ನು 3-4 ಬಾರಿ ಜರಡಿಯಾಡಬೇಕು, ಆಗ ಸುಲಭವಾಗಿ ಒಂದರೊಳಗೊಂದು ವಿಲೀನಗೊಳ್ಳುತ್ತವೆ.
ನೀವು ಕೇಕ್, ಬಿಸ್ಕತ್ತು ಮುಂತಾದ ಯಾವುದೇ ಡಿಶ್ ಮೇಲೆ ಬಾದಾಮಿ, ಗೋಡಂಬಿ ಚೂರುಗಳಿಂದ ಅಲಂಕರಿಸ ಬಯಸಿದರೆ, ಅವನ್ನು ಹಿಂದಿನ ರಾತ್ರಿಯೇ ಹಾಲಿನಲ್ಲಿ ನೆನೆಹಾಕಿಡಿ.
ಬೇಕಿಂಗ್ ಟ್ರೇಯನ್ನು ಓವನ್ ನಲ್ಲಿರಿಸುವಾಗ ಕುಕೀಸ್, ಡೋನಟ್ಸ್, ಬಿಸ್ಕತ್ತುಗಳನ್ನು ಬಹಳ ಹತ್ತಿರ ಹತ್ತಿರ ಇರಿಸಬಾರದು. ಸ್ಥಳಾಭಾವದ ಕಾರಣ, ಬೇಕಿಂಗ್ ಆಗುವಾಗ ಅವು ಹಿಗ್ಗಿ ಅಂಟಿಕೊಳ್ಳುವ ಸಾಧ್ಯತೆಗಳಿವೆ.
ಬೇಕಿಂಗ್ ಗೆ ಬೇಕಾಗುವ ಸಾಮಗ್ರಿಗಳನ್ನು ಖಂಡಿತಾ ಕಣ್ಣಳತೆ ಅಥವಾ ಅಂದಾಜಿನಲ್ಲಿ ಹಾಕಬಾರದು, ಪ್ರತಿಸಲ ಅಳತೆ ಪ್ರಮಾಣಬದ್ಧವಾಗಿರಲಿ.
ಬೇಕಿಂಗ್‌ವ್ಯಂಜನಗಳಿಗೆ ಗೋಡಂಬಿ, ಬಾದಾಮಿಗಳಂಥ ಡ್ರೈಫ್ರೂಟ್ಸ್ ಚೂರುಗಳನ್ನು ಬಳಸುವಾಗ, ಅಗತ್ಯವಾಗಿ ಅವನ್ನು ಡಸ್ಟಿಂಗ್ ಮಾಡಿ ನಂತರ ಬೇಕ್ ಆಗಲು ಸೇರಿಸಿ. ಆಗ ಅ ಕೆಳಗೆ ಹೋಗಿ ಸೆಟ್ ಆಗುವುದಿಲ್ಲ.
ಬೇಕಿಂಗ್ ಮಾಡುವಾಗ ಹಾಲು, ನೀರು ಅಥವಾ ಚಾಕಲೇಟ್ ಬಳಸಿದರೂ ಸಹ, ತುಸು ಬೆಚ್ಚಗೆ ಮಾಡಿ ನಂತರ ಬಳಸಬೇಕು. ಆಗ ಅವು ಸಹಜವಾಗಿ ಬೆರೆತುಕೊಳ್ಳುತ್ತವೆ.
ನೀವು ಕೇಕಿಗಾಗಿ ತುಪ್ಪದ ಬದಲು ಹಾಲಿನ ಕೆನೆ ಬಳಸುವಿರಾದರೆ, ಅದು ಆದಷ್ಟೂ ತಾಜಾ ಆಗಿರಬೇಕೆಂಬುದನ್ನು ನೆನಪಿಡಿ. ಇದರಲ್ಲಿನ ತುಸು ದುರ್ಗಂಧ ಸಹ ಇಡೀ ಡಿಶ್ ನ್ನು ಹಾಳುಮಾಡಬಹುದು.
ಕೇಕ್ ಬಿಸ್ಕತ್ತುಗಳಿಗೆ ಬೆಣ್ಣೆ ತುಪ್ಪ ಬಳಸುವುದಿದ್ದರೆ, ಅವನ್ನು ಮೊದಲೇ ಫ್ರಿಜ್ ನಲ್ಲಿರಿಸಿ ಚೆನ್ನಾಗಿ ಕೂಲ್ ಮಾಡಿ ನಂತರ ಬಳಸಬೇಕು. ಇದರಿಂದ ಅವನ್ನು ಚೆನ್ನಾಗಿ ಬೀಟ್ ಮಾಡಿಕೊಳ್ಳಲು ಅನುಕೂಲವಾಗುತ್ತದೆ.
ಕೇಕ್ ನಲ್ಲಿ ಸಕ್ಕರೆಯ ಬದಲಿಗೆ ಜೇನುತುಪ್ಪ ಬಳಸಿದರೆ, ಕೇಕ್ ಇನ್ನಷ್ಟು ಮೃದು ಹಾಗೂ ಸ್ವಾದಿಷ್ಟವಾಗುತ್ತದೆ.
ಬೇಕಿಂಗ್ ಡಿಶ್ ಗೆ ಕೇಕ್ ಮಿಶ್ರಣ ಹರಡುವ ಮೊದಲು, ಅಲ್ಲಿ ಡ್ರೈ ಬ್ರೆಡ್ ಕ್ರಂಬ್ಸ್ ಉದುರಿಸಿ. ಕೇಕಿನ ಅರ್ಧ ಮಿಶ್ರಣ ಹಾಕಿ, ಅದರ ಮೇಲೆ ಮತ್ತೆ ಬ್ರೆಡ್ ಕ್ರಂಬ್ಸ್ ಉದುರಿಸಿ, ಅದರ ಮೇಲೆ ಉಳಿದ ಕೇಕಿನ ಮಿಶ್ರಣ ಹರಡಬೇಕು. ಇದರಿಂದ ಕೇಕ್ ಹೆಚ್ಚು ಹಿಗ್ಗಲು ಸ್ವಾದಿಷ್ಟಗೊಳ್ಳಲು ಅನುಕೂಲವಾಗುತ್ತದೆ.
ಅಗತ್ಯ ಪರಿಕರ ಹಾಗೂ ತಾಪಮಾನ
ನೀವು ಕುಕ್ಕರ್ ಅಥವಾ ಗ್ಯಾಸ್ ತಂದೂರ್ ನಲ್ಲಿ ಬೇಕಿಂಗ್ ಮಾಡುತ್ತಿದ್ದರೆ, ಅಲ್ಯುಮಿನಿಯಂ ಅಥವಾ ಸ್ಟೀಲ್ ಪಾತ್ರೆಗಳನ್ನೇ ಬಳಸಬೇಕು. ಬೇಕಿಂಗ್ ಡಿಶ್ ಇರಿಸುವ ಮೊದಲು ಮರಳಿನ ಒಂದು ಪದರ ಹರಡಿ, ಅದರ ಮೇಲೆ ಅಗತ್ಯವಾಗಿ ಒಂದು ಜಾಲರ ಇರಿಸಿ, ಆಗ ಕೆಳಭಾಗದಿಂದ ಕೇಕ್ ಸೀಯುಲಪದಿಲ್ಲ.
ಕೇಕಿನ ಮಿಶ್ರಣ ಹರಡುವ ಮೊದಲು, ಆ ಡಿಶ್ ನ ಒಳಭಾಗ ಪೂರ್ತಿ ಜಿಡ್ಡಿನಿಂದ ಸವರಿಡಿ. ಆಮೇಲೆ ಮೈದಾ ಉದುರಿಸಿ ಡಸ್ಟಿಂಗ್ ಮಾಡಿ.
ಮೈಕ್ರೋವೇವ್ ಓವನ್ ನಲ್ಲಿ, ಗಾಜಿನ ಅಲ್ಯುಮಿನಿಯಂ ಪಾತ್ರೆಗಳನ್ನು ಬಳಸಬಹುದು.
ಮೈಕ್ರೋವೇವ್ ನಲ್ಲಿ ಏನನ್ನಾದರೂ ಬೇಕ್ ಮಾಡುವ ಮೊದಲು ಮೈಕ್ರೋವೇವ್ ಪ್ರೂಫ್ ಡಿಶ್ ಗೆ ಅಗತ್ಯವಾಗಿ ಜಿಡ್ಡು ಸವರಿ ನಂತರ ಬಳಸಬೇಕು.
ಬೇಕಿಂಗ್ ಮಾಡುವಾಗ ಅತ್ಯಧಿಕ ಅಥವಾ ಅತಿ ಕಡಿಮೆ ತಾಪಮಾನ ಇರದಂತೆ ಎಚ್ಚರವಹಿಸಿ. ಹೆಚ್ಚಿನ ತಾಪಮಾನದಿಂದ ಬೇಕ್ಡ್ ಐಟಮ್ಸ್, ಮೇಲ್ಭಾಗದಿಂದ ಸೀಯುತ್ತದೆ, ಆದರೆ ಒಳಭಾಗ ಬೆಂದಿರುವುದಿಲ್ಲ. ಅದೇ ಕಡಿಮೆ ತಾಪಮಾನದಿಂದ ಅದು ಸ್ಪಾಂಜಿಯಾಗಿ ಅಥವಾ ಪದರಪದರ (ಪಫ್ ಗೆ ಬೇಕಾಗುವಂತೆ)ವಾಗಿ ಬರುವುದಿಲ್ಲ.
ಸ್ಟೀಲ್ ಕಡ್ಡಿ/ ಟೂಥ್ ಪಿಕ್ ಟೆಸ್ಟ್
ಕೇಕ್ ಅಥವಾ ಬಿಸ್ಕತ್ತು ಪೂರ್ತಿ ಬೆಂದಿದೆಯೋ ಇಲ್ಲವೋ ಎಂದು ತಿಳಿಯಲು, ಒಂದು ಶುಭ್ರ ಸ್ಟೀಲ್ ಕಡ್ಡಿ ಅಥವಾ ಟೂಥ್ ಪಿಕ್ ನ್ನು ಅದಕ್ಕೆ ಚುಚ್ಚಿ ನೋಡಿ. ಕಡ್ಡಿಗೆ ಮಿಶ್ರಣ ಅಂಟಿಕೊಳ್ಳದೆ ಸಲೀಸಾಗಿ ಒಳಹೋಗಿ ಹೊರಬಂದರೆ, ನಿಮ್ಮ ವ್ಯಂಜನ ಬೆಂದಿದೆ ಎಂದರ್ಥ.
ಬೇಕಿಂಗ್ ಶಬ್ದಾವಳಿ
ಗ್ರೀಸಿಂಗ್ : ಬೇಕ್ಡ್ ಮಿಶ್ರಣ ಇರಿಸಬೇಕಾದ ಕಂಟೇನರ್ ನ್ನು ಒಳಭಾಗದಿಂದ ಚೆನ್ನಾಗಿ ಜಿಡ್ಡು ಸರಬೇಕು ಎಂದರ್ಥ.
ಡಸ್ಟಿಂಗ್ : ಗ್ರೀಸಿಂಗ್ ಮಾಡಿದ ಕಂಟನೇರ್ ಗೆ ಮೇಲ್ಭಾಗದಿಂದ ಸಮಾನವಾಗಿ ಮೈದಾ ಉದುರಿಸುವುದು, ನಂತರ ಅದನ್ನು ಬೋರಲು ಹಾಕಿ, ಹೆಚ್ಚುವರಿ ಮೈದಾ ತೆಗೆದುಬಿಡುವುದು.
ಐಸಿಂಗ್ : ಸಿದ್ಧಗೊಡ ಕೇಕ್, ಪೇಸ್ಟ್ರಿ, ಪುಡ್ಡಿಂಗ್ ಇತ್ಯಾದಿಗಳನ್ನು ಕ್ರೀಂ ಐಸಿಂಗ್ ಶುಗರ್ ನಿಂದ ಅಲಂಕರಿಸುವುದು ಎಂದರ್ಥ.
ವಿಪ್ಡ್ ಪೌಡರ್ : ಕೇಕ್, ಪೇಸ್ಟ್ರಿ ಇತ್ಯಾದಿಗಳಿಗೆ ಐಸಿಂಗ್ ಸಂದರ್ಭದಲ್ಲಿ ಬಳಸಲಾಗುವ ಪೌಡರ್. ಇದರಲ್ಲಿ ಪುಡಿ ಸಕ್ಕರೆ ಕ್ರೀಂ ಬೆರೆತಿರುತ್ತದೆ.
ಮಾರ್ಗರೀನ್ : ಇದು ರೆಡಿಮೇಡ್ ಲಭ್ಯವಿರುವ ಕೃತಕ ಬೆಣ್ಣೆ. ಇದನ್ನು ಚೆನ್ನಾಗಿ ಗೊಟಾಯಿಸಿ, ಬೇಕಿಂಗ್ ವ್ಯಂಜನಗಳಿಗೆ ನೇರವಾಗಿ ಬಳಸಲಾಗುತ್ತದೆ.
ಐಸಿಂಗ್ ಶುಗರ್ : ನುಣ್ಣಗೆ ಪುಡಿ ಮಾಡಿದ ಸಕ್ಕರೆಗೆ, ಕಾರ್ನ್ ಫ್ಲೋರ್ ಬೆರೆಸಿ ಇದನ್ನು ತಯಾರಿಸಲಾಗುತ್ತದೆ.
ಕ್ಯಾರೆಮಲ್ ಶುಗರ್ : ಸಕ್ಕರೆಯನ್ನು ಬಿಸಿ ಮಾಡಿ, ಬ್ರೌನ್ ಆದನಂತರ, ತಣ್ಣಗೆ ಮಾಡಿ, ನುಣ್ಣಗೆ ಪುಡಿ ಮಾಡಲಾಗಿರುತ್ತದೆ.
ಬ್ರೌನ್ ಶುಗರ್ : ಸಕ್ಕರೆಗೆ ಚಾಕಲೇಟ್ ಬಣ್ಣ ಬೆರೆಸಿ ಇದನ್ನು ತಯಾರಿಸಲಾಗುತ್ತದೆ.
ಲೈನಿಂಗ್ ಪೇಪರ್ : ಇದನ್ನು ಬಟರ್ ಪೇಪರ್ ಎಂದೂ ಹೇಳಲಾಗುತ್ತದೆ. ಇದು ಮೈಕ್ರೊವೇವ್ ಪ್ರೂಫ್ ಆಗಿರುತ್ತದೆ.
– ಪ್ರತಿಭಾ ಭಟ್