ಖರ್ಜೂರದ ಮೋದಕ
ಸಾಮಗ್ರಿ : 1-1 ಕಪ್ ಮೈದಾ ಕಾದಾರಿದ ಹಾಲು, ಅರ್ಧರ್ಧ ಕಪ್ ರವೆ ತುಪ್ಪ, ಅಗತ್ಯವಿದ್ದಷ್ಟು ಪುಡಿಸಕ್ಕರೆ ಹಸಿ ಖರ್ಜೂರ ಸಿಹಿ ಖೋವಾ ಏಲಕ್ಕಿ ಪುಡಿ ಹಾಲಲ್ಲಿ ನೆನೆದ ಕೇಸರಿ, ಕರಿಯಲು ರೀಫೈಂಡ್ ಎಣ್ಣೆ, ಅಲಂಕರಿಸಲು ಬೆಳ್ಳಿ ರೇಕು, ಗೋಡಂಬಿ ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು (ಒಟ್ಟಾಗಿ ಅರ್ಧ ಕಪ್).
ವಿಧಾನ : ಒಂದು ಬಟ್ಟಲಿಗೆ ಮೈದಾ, ರವೆ ಚಿಟಕಿ ಉಪ್ಪು ಸೇರಿಸಿ, ಹಾಲು ಬೆರೆಸುತ್ತಾ ಮೃದುವಾದ ಪೂರಿ ಹಿಟ್ಟಿನ ಹದಕ್ಕೆ ಕಲಸಿಡಿ. ಇದಕ್ಕೆ ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಂಡು ನೆನೆಯಲು ಬಿಡಿ. ಒಂದು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ, ಅದಕ್ಕೆ ಖೋವಾ, ಮಸೆದ ಹಸಿ ಖರ್ಜೂರ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ನಂತರ ಇದಕ್ಕೆ ಏಲಕ್ಕಿ, ಕೇಸರಿ, ಸಕ್ಕರೆ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಸೇರಿಸಿ ಕೈಯಾಡಿಸಿ. ಹೂರಣ ಒಂದು ಉತ್ತಮ ಹದಕ್ಕೆ ಬಂದಾಗ ಕೆಳಗಿಳಿಸಿ, ಆರಲು ಬಿಡಿ. ಅದೇ ಸಮಯದಲ್ಲಿ ಅರ್ಧ ಕಪ್ ಸಕ್ಕರೆಗೆ ಅಷ್ಟೇ ನೀರು ಬೆರೆಸಿ ಒಂದೆಳೆ ಪಾಕ ತಯಾರಿಸಿ. ಇದಕ್ಕೆ ತುಸು ಕೇದಗೆ ಎಸೆನ್ಸ್ ಬೆರೆಸಿ ಆರಲು ಬಿಡಿ. ಈಗ ಮೈದಾ ಮಿಶ್ರಣಕ್ಕೆ ಮತ್ತಷ್ಟು ತುಪ್ಪ ಬೆರೆಸಿ ನಾದಿಕೊಂಡು, ಸಣ್ಣ ಉಂಡೆಗಳಾಗಿಸಿ, ಪುಟ್ಟ ಪೂರಿಗಳಾಗಿ ಲಟ್ಟಿಸಿಕೊಳ್ಳಿ. ಇದಕ್ಕೆ 2-3 ಚಮಚ ಹೂರಣ ತುಂಬಿಸಿ, ಚೆನ್ನಾಗಿ ಕವರ್ ಮಾಡಿ, ಚಿತ್ರದಲ್ಲಿರುವಂತೆ ಮೋದಕದ ಆಕಾರ ನೀಡಿ. ಹೀಗೆ ಎಲ್ಲವನ್ನೂ ಸಿದ್ಧಪಡಿಸಿಕೊಂಡು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಅವು ಚೆನ್ನಾಗಿ ಆರಿದ ಮೇಲೆ, ಸಕ್ಕರೆ ಪಾಕದಲ್ಲಿ ಅದ್ದಿ, ಹೊರತೆಗೆದು, ಒಣಗಿದ ಮೇಲೆ ಸವಿಯಲು ಕೊಡಿ.
ಪಿಸ್ತಾ ಖೋವಾ ಕೇಕ್
ಸಾಮಗ್ರಿ : 250 ಗ್ರಾಂ ಮೈದಾ, 10 ಮೊಟ್ಟೆ, 250 ಗ್ರಾಂ ಪುಡಿಸಕ್ಕರೆ, 15 ಗ್ರಾಂ ಸ್ಪಂಜ್ ಜೆಲ್, 2 ಚಿಟಕಿ ಬೇಕಿಂಗ್ ಪೌಡರ್, 4 ಚಮಚ ರೀಫೈಂಡ್ ಎಣ್ಣೆ, 150 ಗ್ರಾ ಪಿಸ್ತಾ ಪೇಸ್ಟ್. 200 ಗ್ರಾಂ ಸಿಹಿ ಖೋವಾ, 100 ಗ್ರಾಂ ಚೀಜ್, 300 ಗ್ರಾಂ ಬೀಟ್ ಮಾಡಿಕೊಂಡ ಕ್ರೀಂ, ಅಗತ್ಯವಿದ್ದಷ್ಟು ಶುಗರ್ ಸಿರಪ್ ನೀರು.
ವಿಧಾನ : ಒಂದು ಬೇಸನ್ನಿಗೆ ಒಡೆದು ಗೊಟಾಯಿಸಿದ ಮೊಟ್ಟೆ, ಪುಡಿಸಕ್ಕರೆ, ಸ್ಪಂಜ್ ಜೆಲ್ ಬೆರೆಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಆಮೇಲೆ ಇದಕ್ಕೆ ಮೈದಾ, ಬೇಕಿಂಗ್ ಪೌಡರ್, ಪಿಸ್ತಾ ಪೇಸ್ಟ್ ಹಾಕಿ ಚೆನ್ನಾಗಿ ಬೆರೆಸಿಡಿ. ಆಮೇಲೆ ಸ್ವಲ್ಪ ಸ್ವಲ್ಪವಾಗಿ ನೀರು ಬೆರೆಸುತ್ತಾ ಪೂರಿ ಹಿಟ್ಟಿಗಿಂತಲೂ ಮೃದುವಾಗಿ ಬರುವಂತೆ ಕಲಸಬೇಕು. ಇದಕ್ಕೆ ರೀಫೈಂಡ್ ಎಣ್ಣೆ ಬೆರೆಸಿ ಚೆನ್ನಾಗಿ ನಾದಿಕೊಂಡು ನೆನೆಯಲು ಬಿಡಿ. ಅರ್ಧ ಗಂಟೆ ಬಳಿಕ ಬೇಕಿಂಗ್ ಡಿಶ್ಶಿಗೆ ತುಪ್ಪ ಸವರಿ, ಅದರ ಮೇಲೆ ಈ ಮಿಶ್ರಣ ಹರಡಿ. ಮೊದಲೇ ಪ್ರೀಹೀಟೆಡ್ ಓವನ್ನಿನಲ್ಲಿ 230 ಡಿಗ್ರಿ ಶಾಖದಲ್ಲಿ 7-8 ನಿಮಿಷ ಹದನಾಗಿ ಬೇಕ್ ಮಾಡಿ. ಇದನ್ನು ಹೊರತೆಗೆದು ಆರಿದ ಮೇಲೆ, ಶುಗರ್ ಸಿರಪ್ ಸವರಬೇಕು. ಅದರ ಮೇಲೆ ನೀಟಾಗಿ ತುರಿದ ಚೀಸ್, ಆ ಪದರದ ಮೇಲೆ ಬೀಟ್ ಮಾಡಿದ ಕ್ರೀಂ ಬರುವಂತೆ ಪೇರಿಸಿ. ಈ ತರಹ 3 ಪದರಗಳು ಬರುವಂತೆ ಮಾಡಿಕೊಂಡು, ಆಯತಾಕಾರವಾಗಿ ಕತ್ತರಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.