ವೆಜ್ಜಿ ಶ್ಯಾವಿಗೆ

ಸಾಮಗ್ರಿ : 2 ಕಪ್‌ ಅಕ್ಕಿಯ ಒತ್ತು ಶ್ಯಾವಿಗೆ (ರೆಡಿಮೇಡ್‌), ಹೆಚ್ಚಿದ 2 ಈರುಳ್ಳಿ, 3 ಬಗೆ ಕ್ಯಾಪ್ಸಿಕಂ (ತಲಾ ಅರ್ಧ ಕಪ್‌), 2 ಟೊಮೇಟೊ, ತುಸು ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಹಸಿ ಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ತುಸು ಎಣ್ಣೆ, ಒಗ್ಗರಣೆ ಸಾಮಗ್ರಿ, ತೆಂಗಿನ ತುರಿ.

ವಿಧಾನ : ಒಂದು ದೊಡ್ಡ ಬಾಣಲೆಯಲ್ಲಿ ನೀರು ಬಿಸಿ ಮಾಡಿ ಚಿಟಕಿ ಉಪ್ಪು, ತುಸು ಎಣ್ಣೆ ಬೆರೆಸಿ ಶ್ಯಾವಿಗೆ ಬೇಯಿಸಿ. ಬಸಿದು, ಬೇರೆಯಾಗಿಡಿ. ಅದೇ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಒಗ್ಗರಣೆ ಕೊಡಿ. ನಂತರ ಹಸಿ ಮೆಣಸು, ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಹಾಕಿ ಕೆದಕಬೇಕು. ನಂತರ ಒಂದೊಂದಾಗಿ ತರಕಾರಿ ಹಾಕಿ ಬಾಡಿಸಿ. ಕೊನೆಯಲ್ಲಿ ಉಪ್ಪು, ತೆಂಗಿನ ತುರಿ ಸೇರಿಸಿ, ಶ್ಯಾವಿಗೆ ಸಮೇತ ಬೆರೆಸಿ ಕೆಳಗಿಳಿಸಿ. ಕೊ.ಸೊಪ್ಪು ಉದುರಿಸಿ ಬಿಸಿಯಾಗಿ ಸವಿಯಲು ಕೊಡಿ.

ಸ್ಪ್ರೌಟ್ದಾಲ್ ಮೂಂಗ್ ವೆಟ್

AA-spraouts-daal-monglate-(1)

ಸಾಮಗ್ರಿ : 1 ಕಪ್‌ ಬೇಯಿಸಿದ ಮೊಳಕೆ ಕಟ್ಟಿದ ಹೆಸರುಕಾಳು, ಹೆಚ್ಚಿದ 2 ಈರುಳ್ಳಿ, 3 ಬಗೆ ಕ್ಯಾಪ್ಸಿಕಂ (ಒಟ್ಟಾರೆ 1 ಕಪ್‌), ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅಕ್ಕಿ ಹಿಟ್ಟು, ರೀಫೈಂಡ್‌ ಎಣ್ಣೆ, ತುಪ್ಪ.

ವಿಧಾನ : ಬೆಂದ ಕಾಳನ್ನು ಮಿಕ್ಸಿಗೆ ಹಾಕಿ, ಅಕ್ಕಿ ಹಿಟ್ಟಿನೊಂದಿಗೆ ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕೊ.ಸೊಪ್ಪು ಎಲ್ಲಾ ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಬೇಕಿಂಗ್‌ ಪೌಡರ್‌ ಬೆರೆಸಿ 10 ನಿಮಿಷ ಮುಚ್ಚಿರಿಸಿ. ಒಂದು ನಾನ್‌ ಸ್ಟಿಕ್‌ಪ್ಯಾನಿನಲ್ಲಿ ತುಸು ತುಪ್ಪ ಬಿಸಿ ಮಾಡಿ. ಇದರಲ್ಲಿ ಹೆಚ್ಚಿದ ಈರುಳ್ಳಿ, ನಂತರ ಕ್ಯಾಪ್ಸಿಕಂ ಹಾಕಿ ಬಾಡಿಸಿ. ನಂತರ ಇನ್ನಷ್ಟು ಉಪ್ಪು, ಮೆಣಸು ಹಾಕಿ ಕೆದಕಬೇಕು. ಕೊನೆಯಲ್ಲಿ ರುಬ್ಬಿದ ಮಿಶ್ರಣ ಹಾಕಿ ಎಲ್ಲ ಬೆರೆತುಕೊಳ್ಳುವಂತೆ ಕೆದಕಿ ಕೆಳಗಿಳಿಸಿ. ಬಿಸಿ ಬಿಸಿಯಾಗಿ ಇದನ್ನು ಸಾಸ್‌ ಜೊತೆ ಸವಿಯಲು ಕೊಡಿ.

ಸ್ಟಫ್ಡ್ ಮಿಲೆಟ್ಸ್ ಪರೋಟ

AA-stuffedbajra-aaloo-prantha-(2)

ಮೂಲ ಸಾಮಗ್ರಿ : ಸಜ್ಜೆ, ನವಣೆ, ಗೋಧಿಹಿಟ್ಟು (ಅರ್ಧರ್ಧ ಕಪ್‌), 1 ಕಪ್‌ ಬೇಯಿಸಿ ಮಸೆದ ಆಲೂ, ತುಸು ಶುಂಠಿ, ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ತುಸು ಬಿಸಿ ನೀರು.

ಹೂರಣದ ಸಾಮಗ್ರಿ : ಮಸೆದ ಪನೀರ್‌, 3 ಬಗೆಯ ಹೆಚ್ಚಿದ ಕ್ಯಾಪ್ಸಿಕಂ (ಅರ್ಧರ್ಧ ಕಪ್‌), ತುಸು ಎಣ್ಣೆ, ಉಪ್ಪು, ಮೆಣಸು.

ವಿಧಾನ : ಮೂಲ ಸಾಮಗ್ರಿಗೆ ಬಿಸಿ ನೀರು ಬೆರೆಸಿ ಮೃದು ಚಪಾತಿ ಹಿಟ್ಟು ಕಲಸಿಡಿ. ಇದಕ್ಕೆ ತುಪ್ಪ ಬೆರೆಸಿ ನಾದಿಕೊಂಡು 1 ಗಂಟೆ ಕಾಲ ನೆನೆಯಲು ಬಿಡಿ. ಅದೇ ತರಹ ಮಸೆದ ಪನೀರ್‌ ಗೆ ಹೂರಣದ ಸಾಮಗ್ರಿ ಬೆರೆಸಿ ಮಿಶ್ರಣ ಕಲಸಿಡಿ. ನೆನೆದ ಹಿಟ್ಟಿನಿಂದ ನಿಂಬೆ ಗಾತ್ರದ ಉಂಡೆ ಮಾಡಿ ಲಟ್ಟಿಸಿ. ಇದರ ಮಧ್ಯೆ 2-3 ಚಮಚ ಹೂರಣವಿರಿಸಿ, ನೀಟಾಗಿ ಮಡಿಚಿ, ತುಪ್ಪ ಸವರುತ್ತಾ ಮತ್ತೆ ಲಟ್ಟಿಸಿ. ಇದನ್ನು ತಲಾ ಮೇಲೆ ಹಾಕಿ, ತುಪ್ಪ ಬೆರೆಸುತ್ತಾ ಎರಡೂ ಬದಿ ಬೇಯಿಸಿ. ಈ ಬಿಸಿ ಬಿಸಿ ಪರೋಟವನ್ನು ಚಟ್ನಿ, ಸಾಸ್‌, ಗಟ್ಟಿ ಮೊಸರಿನೊಂದಿಗೆ ಸೇವಿಸಿ.

ವೆಜ್ಆನ್ಟೋಸ್ಟ್

AA-veg-on-toast-(2)

ಸಾಮಗ್ರಿ : 7-8 ತುಂಡು ಬ್ರೆಡ್‌, ಒಂದಿಷ್ಟು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, 3 ಬಗೆ ಕ್ಯಾಪ್ಸಿಕಂ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಬೆಣ್ಣೆ, ಪಿಜ್ಜಾ ಸಾಸ್‌.

ವಿಧಾನ : ಮೊದಲು ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ ಹೆಚ್ಚಿದ ಪದಾರ್ಥ ಒಂದೊಂದಾಗಿ ಹಾಕಿ ಬಾಡಿಸಿ. ಉಪ್ಪು, ಮೆಣಸು, ಪಿಜ್ಜಾ ಸಾಸ್‌ ಸೇರಿಸಿ ಕೆದಕಿ ಕೆಳಗಿಳಿಸಿ. ಬ್ರೆಡ್‌ ಗೆ ಮೊದಲು ಬೆಣ್ಣೆ,  ನಂತರ ಸಾಸ್‌ ಸವರಬೇಕು. ಇದರ ಮೇಲೆ ಸಮನಾಗಿ ಬಾಡಿಸಿದ ಪದಾರ್ಥ ಹರಡಿರಿ. ಬೇಕಾದರೆ ತುಸು ಟೊಮೇಟೊ ಸಾಸ್‌ ಸಹ ಹರಡಿ. ಬ್ರೆಡ್‌ ನ ಅಡಿ ಭಾಗ ಬಿಸಿ ಮಾಡಿ, ತಕ್ಷಣ ಸವಿಯಲು ಕೊಡಿ.

ಕಾರ್ನ್ಫ್ಲೇಕ್ಸ್ ಅವಲಕ್ಕಿ

AA-corn-flakes-poha-(2)

ಸಾಮಗ್ರಿ : 2-2 ಕಪ್‌ ಕಾರ್ನ್‌ ಫ್ಲೇಕ್ಸ್ ಪೇಪರ್‌ ಅವಲಕ್ಕಿ, ಅರ್ಧರ್ಧ ಕಪ್‌ ಬೇಯಿಸಿ ಮಸೆದ ಆಲೂ ಹೆಚ್ಚಿದ 3 ಬಗೆಯ ಕ್ಯಾಪ್ಸಿಕಂ, ಈರುಳ್ಳಿ, ಬೆಳ್ಳುಳ್ಳಿ, ಹಸಿ ಶುಂಠಿ/ಮೆಣಸು, ಒಂದಿಷ್ಟು ಕಾಯಿ ತುರಿ, ಕ್ಯಾರೆಟ್‌ ತುರಿ, ಬೆಂದ ಹಸಿ ಬಟಾಣಿ, ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ, ನಿಂಬೆರಸ, ಒಗ್ಗರಣೆಗೆ ಎಣ್ಣೆ, ಸಾಸುವೆ, ಜೀರಿಗೆ, ಕ/ಉ ಬೇಳೆ, ಕರಿಬೇವು.

ವಿಧಾನ : ಮೊದಲು ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ಹಸಿ ಮೆಣಸು/ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಹಾಕಿ ಬಾಡಿಸಿ. ನಂತರ ಒಂದೊಂದಾಗಿ ಹೆಚ್ಚಿದ ತರಕಾರಿ, ಟೊಮೇಟೊ ಸೇರಿಸಿ ಬಾಡಿಸಿ. ನಂತರ ಬೆಂದ ಬಟಾಣಿ, ಆಲೂ ಸೇರಿಸಿ ಕೆದಕಬೇಕು. ಕೊನೆಯಲ್ಲಿ ಉಪ್ಪು, ಖಾರ, ಅರಿಶಿನ, ಕಾರ್ನ್‌ ಫ್ಲೇಕ್ಸ್, ನೀರಲ್ಲಿ ಅದ್ದಿ ತೆಗೆದ ಪೇಪರ್‌ ಅವಲಕ್ಕಿ ಬೆರೆಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಕೈಯಾಡಿಸಿ. ಕೆಳಗಿಸಿದ ಮೇಲೆ ಹೆಚ್ಚಿದ ಕೊ.ಸೊಪ್ಪು ಉದುರಿಸಿ, ನಿಂಬೆಹಣ್ಣು ಹಿಂಡಿಕೊಂಡು ತಕ್ಷಣ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ