ಸ್ಯಾಂಡಲ್ ವುಡ್ ಅಧ್ಯಕ್ಷ ಶರಣ್ ನಟಿಸಿರುವ ಕನ್ನಡದ ಬಹು ನಿರೀಕ್ಷಿತ ಹಾರರ್ ಜೋನರ್ ಚಿತ್ರ ‘ಛೂ ಮಂತರ್’, ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಕೆಲವೊಂದು ಅನಿವಾರ್ಯ ಕಾರಣಗಳಿಂದ ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿತ್ತು ಈ ವರ್ಷ ಸಂಕ್ರಾಂತಿಯ ಕೊಡುಗೆಯಾಗಿ ಜನವರಿ 10 ರಂದು ಬೆಳ್ಳಿ ತೆರೆಯಲ್ಲಿ ಬಿಡುಗಡೆಯಾಗುತ್ತಿದೆ.

ಈಗಾಗಲೇ ಸಾಕಷ್ಟು  ಹಾರರ್ ಚಿತ್ರಗಳು ಕನ್ನಡದಲ್ಲಿ ಬಂದು ಹೋಗಿವೆ. ಚಿತ್ರತಂಡದ ಪ್ರಕಾರ ಗಟ್ಟಿಯಾದ ಕಥೆ ಹಾಗೂ   ಅತ್ಯುತ್ತಮ ಗುಣಮಟ್ಟದ ನಿರ್ಮಾಣ, ಮತ್ತು ಅನುಭವಿ ಕಲಾವಿದರ ಅಭಿನಯ ಈ ಚಿತ್ರದ ಹೈಲೈಟ್ಸ್ ಆಗಿದೆ.

ಇತ್ತೀಚಿನ ದಿನಗಳಲ್ಲಿ ಶರಣ್ ಬರೀ ಕಾಮಿಡಿ ಚಿತ್ರಗಳಿಗಷ್ಟೆ ಜೋತು ಬೀಳದೆ ಎಲ್ಲ ರೀತಿಯ ಪಾತ್ರಗಳನ್ನು ಮಾಡುವ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ. ಇದಕ್ಕೆ ‘ಗುರು ಶಿಷ್ಯರು ‘ ಮತ್ತು ‘ಅವತಾರ ಪುರುಷ’  ಚಿತ್ರಗಳ ಯಶಸ್ಸೇ ಸಾಕ್ಷಿ . ಹಾರರ್ ಚಿತ್ರಗಳ ಅಪ್ಪಟ ಅಭಿಮಾನಿಯಾಗಿರುವ ಶರಣ್ ಗೆ ಈ ಚಿತ್ರದಲ್ಲಿ ಅಭಿನಯಿಸಿರುವುದು ಖುಷಿ ತಂದಿದೆಯಂತೆ.

ಸಾಮಾನ್ಯವಾಗಿ ನಮ್ಮ ದೇಶದ ಸಿನಿಮಾಗಳಲ್ಲಿ ಭೂತ ಪ್ರೇತ ದಮನ ಮಾಡಲು ಮಂತ್ರವಾದಿ ಇರ್ತಾನೆ. ಆದರೆ ‘ಛೂ ಮಂತರ್’ ಚಿತ್ರದಲ್ಲಿ ಶರಣ್ ಹಾಲಿವುಡ್ ಸಿನಿಮಾ ಮಾದರಿಯಲ್ಲಿ ಕ್ರಿಶ್ಚಿಯನ್ ಭೂತೋಚ್ಚಾಟಕ (Exorcist) ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

IMG-20250106-WA0007

ಈಗೀಗ ಬರುತ್ತಿರುವ ಎಲ್ಲಾ ಹಾರರ್ ಚಿತ್ರಗಳಲ್ಲಿ ನಾಯಕಿಯರ ಕೈಯಲ್ಲಿ ನಿರ್ದೇಶಕರು ದೆವ್ವದ ಪಾತ್ರ ಮಾಡಿಸುತ್ತಾರೆ.ಈ ಚಿತ್ರದಲ್ಲಿ ಕೂಡ ಮುದ್ದಾದ ದೆವ್ವಗಳಿವೆ. ನಾಯಕಿಯಾರಾಗಿ ಅದಿತಿ ಪ್ರಭುದೇವ, ಮೇಘನಾ ಗಾಂವಕರ್ ಮತ್ತು  ರಜನಿ ಭಾರಧ್ವಜ್ ಅಭಿನಯಿಸಿದ್ದಾರೆ .ಈಗಾಗಲೇ ಬಿಡುಗಡೆಯಾಗಿರುವ ಟ್ರೈಲರ್ ನಲ್ಲಿ ಮುದ್ದಾಗಿ ಕಾಣುವ ಈ ನಾಯಕಿಯರು ಕೆಲವೊಂದು ಸನ್ನಿವೇಶಗಳಲ್ಲಿ ಪ್ರೇಕ್ಷಕರಿಗೆ ಭಯ ಮೂಡಿಸುವ ಕಾರ್ಯಕ್ರಮಗಳನ್ನು ಕೂಡ ಇಟ್ಟುಕೊಂಡಿದ್ದಾರೆ.

IMG-20250106-WA0006

ಇನ್ನು ಉಳಿದ ತಾರಾಗಣ ದಲ್ಲಿ ಕಳೆದ ವರ್ಷ ‘ಮರ್ಫಿ ‘ ಮತ್ತು ‘ಮರ್ಯಾದೆ ಪ್ರಶ್ನೆ ‘ಚಿತ್ರಗಳ ಅಭಿನಯದ ಮೂಲಕ ಗಮನ ಸೆಳೆದ ಪ್ರಭು ಮುಂಡ್ಕರ್ ಪ್ರಮುಖ ಪಾತ್ರದಲ್ಲಿದ್ದಾರೆ. ಸಂಗೀತ ನಿರ್ದೇಶಕ ಗುರುಕಿರಣ್, ನಿರ್ದೇಶಕ ಓಂ ಪ್ರಕಾಶ್, ಬಿಗ್ ಬಾಸ್ ಖ್ಯಾತಿಯ ಪ್ರಥಮ್, ವಿಜಯ್ ಚೆಂಡುರ್, ಅವಿನಾಶ್, ಶ್ರೀನಿವಾಸ್ ಪ್ರಭು, ಧರ್ಮ ಹೀಗೆ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ.

IMG-20250106-WA0005

ಹಾಸ್ಯ ನಟನಿಂದ ನಾಯಕನಾಗಿ ಭಡ್ತಿ ಪಡೆದಿರುವ ಚಿಕ್ಕಣ್ಣ ಕೂಡ ನಟಿಸಿದ್ದು,  ಶರಣ್ ಜೊತೆ ಕಾಂಬಿನೇಶನ್ ಸನ್ನಿವೇಶಗಳಲ್ಲಿ  ಹಾಸ್ಯದ ಮೂಲಕ ಹಾರರ್ ಮೂಡ್ ಮಧ್ಯೆ ಪ್ರೇಕ್ಷಕರಿಗೆ ರಿಲೀಫ್ ನೀಡಲಿದ್ದಾರೆ.

ಈ ಚಿತ್ರದ ಇನ್ನೊಂದು ವಿಶೇಷತೆ ಎಂದರೆ ‘ಸ್ಲಂ ಡಾಗ್ ಮಿಲ್ಲೆನಿಯರ್ ‘ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಪಡೆದ ರೆಸುಲ್ ಪೂಕುಟ್ಟಿ ಸೌಂಡ್ ಎಫೆಕ್ಟ್ ನೀಡಿರುವುದು. ಬಹುಷಃ ಥೀಯೇಟರ್ ನಲ್ಲಿ ಇವರ ಸೌಂಡ್ ಎಫೆಕ್ಟ್   ಒಳ್ಳೆ ಅನುಭವ ನೀಡುವ ಸಾಧ್ಯತೆಯಿದೆ.

ಹಾಡುಗಳನ್ನು ಚಂದನ್ ಶೆಟ್ಟಿ ಕಂಪೋಸ್ ಮಾಡಿದ್ದು ಅವಿನಾಶ್ ಹಿನ್ನಲೆ ಸಂಗೀತ ನೀಡಿದ್ದಾರೆ.

ಈ ಹಿಂದೆ ‘ಕರ್ವ ‘ಚಿತ್ರದ ಮೂಲಕ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭರವಸೆ ಮೂಡಿಸಿದ್ದ ನವನೀತ್ ಮತ್ತೆ ಹಾರರ್ ಜಾನರ್ ಚಿತ್ರಕ್ಕೆ ಮರಳಿದ್ದಾರೆ  .ಈ ಹಿಂದೆ ಶರಣ್ ನಾಯಕತ್ವದಲ್ಲಿ ‘ವಿಕ್ಟರಿ 2’ ನಿರ್ಮಿಸಿದ ತರುಣ್ ಸ್ಟುಡಿಯೋಸ್ ನ  ತರುಣ್  ಶಿವಪ್ಪ ಮತ್ತು ಮಾನಸಿ ತರುಣ್ ಈ ಚಿತ್ರ ನಿರ್ಮಿಸಿದ್ದಾರೆ.

ಒಟ್ಟಿನಲ್ಲಿ ಹೊಸ ವರ್ಷದಲ್ಲಿ  ಕುಟುಂಬ ಸಮೇತ ನೋಡುವಂತಹ,ಹಾರರ್ ಚಿತ್ರವನ್ನು  ಇಷ್ಟ ಪಡುವ  ಪ್ರೇಕ್ಷಕರನ್ನು ರಂಜಿಸಲು ‘ಛೂ ಮಂತರ್ ‘ ತೆರೆಗೆ ಬರಲಿದೆ.

 

*-ಶರತ್ ಚಂದ್ರ*

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ