ನನಗೆ ಹತ್ತು ವರ್ಷವಿದ್ದಾಗಿನಿಂದ ಪುಸ್ತಕ ಓದುವ ಅತಿಯಾದ ಹುಚ್ಚು ನನ್ನಲ್ಲಿತ್ತು, ಅದಕ್ಕೆ ಕಾರಣ ಅಮ್ಮನ ಈ ಅಭಿರುಚಿ ನನ್ನ ಸ್ವಭಾವದಲ್ಲಿ ಮುಂದುವರೆಯುತ್ತಾ ಬಂದಿದೆ ಎನ್ನುವ ಭಾವನೆ ನನಗೆ!
ಆಗೆಲ್ಲಾ ಮಕ್ಕಳಿಗಾಗಿ ಬರುವ ಬಾಲಮಿತ್ರ, ಚಂದಮಾಮಾ ನಾನು ತುಂಬಾ ಇಷ್ಟಪಟ್ಟು ಓದುವ ಪುಸ್ತಕಗಳಾಗಿದ್ದವು.
ಈಗಿನಂತೆ ಸುಲಭವಾಗಿ ಹಣ ಖರ್ಚು ಮಾಡಲು ಕೈಯಲ್ಲಿ ದುಡ್ಡು ಇರುತ್ತಿರಲಿಲ್ಲ, ದೈನಂದಿನ ಜೀವನದಲ್ಲಿ ಉಳಿತಾಯ ಮಾಡಿ
ನನ್ನ ಅಮ್ಮ ದಿನ ಪತ್ರಿಕೆ, ಎಲ್ಲಾ ರೀತಿಯ ವಾರಪತ್ರಿಕೆ, ಮಾಸಪತ್ರಿಕೆಗಳನ್ನು ಮನೆಗೆ ತರಿಸುತ್ತಿದ್ದರು! ಪ್ರಾಪಂಚಿಕ ಜ್ಞಾನ ಪುಸ್ತಕ ,ಪತ್ರಿಕೆ ಓದುವದರಿಂದಲೇ ಬರುವುದು ಎಂದು ಹೇಳುತ್ತಿದ್ದರು! ಹೀಗಾಗಿ ಆಗ ಓದಲು ಹುಟ್ಟಿದ ಆಸಕ್ತಿಯೇ ಬಹುಶಃ ನನಗೆ ಈಗ ಬರೆಯಲು ಪ್ರೇರಣೆಯಾಗಿರಬಹುದು!
ಅವರು ಸಿನಿಮಾಕ್ಕೆ ಎಂದೂ ದುಡ್ಡು ಖರ್ಚು ಮಾಡುತ್ತಿರಲಿಲ್ಲ, ಅವರಿಗೆ ಸಿನಿಮಾ ನೋಡುವ ಆಸಕ್ತಿಯೂ ಇರಲಿಲ್ಲ ಕೂಡ!
ಅಕ್ಕಪಕ್ಕದ ಮನೆಯವರು ವಾರಕ್ಕೊಂದು ಸಿನಿಮಾಗೆ ಹೋಗುತ್ತಿದ್ದರು, ಅವರು ಅತಿಯಾಗಿ ಒತ್ತಾಯ ಮಾಡಿದಾಗ ವರ್ಷದೊಳಗೆ ಒಂದೆರಡು ಸಿನಿಮಾ ನೋಡಿರಬಹುದು ನಮ್ಮ ತಾಯಿ ಅಷ್ಟೇ, ಆದರೆ ಅದೇ ದುಡ್ಡನ್ನೇ ಪತ್ರಿಕೆ ತರಿಸುವದರಲ್ಲಿ ವ್ಯಯಿಸುತಿದ್ದರು! ಈಗ ಇಡುವ ಟಿವಿ, ಮೊಬೈಲ್, ಲ್ಯಾಪ್ ಟಾಪ್ ಎಲ್ಲಾ ಸ್ಥಳವನ್ನುಆಗ ಪುಸ್ತಕವೊಂದೇ ಆಕ್ರಮಿಸಿದ್ದವು
ನಮ್ಮ ಮನೆಯಲ್ಲಿ!
ಈಗಲೂ ವಾರಪತ್ರಿಕೆ,ಮಾಸ ಪತ್ರಿಕೆಗಳು ನಮ್ಮ ಮನೆಗೆ ಬರುತ್ತವೆ, ಮೊಬೈಲ್ ಚಟಕ್ಕೆ ಬಿದ್ದು ವಾರಪತ್ರಿಕೆಯನ್ನು ಬೇಗ ಕೈಗೆ ತೆಗೆದುಕೊಳ್ಳುವುದಿಲ್ಲ ಮೊದಲಿನಂತೆ!
ಅದಕ್ಕೆ ಇನ್ನೊಂದು ಬೇಸರದ ಮುಖ್ಯ ಕಾರಣವೂ ಇದೆ ಕೂಡ! ಮೊದಲು ಬರುತಿದ್ದ ವಾರ ಪತ್ರಿಕೆಗಳು,ಮಾಸ ಪತ್ರಿಕೆಗಳು ಒಳ್ಳೆಯ ಗುಣಮಟ್ಟ ಕಾಯ್ದುಕೊಂಡಿದ್ದವು ಆದರೆ ಈಗ ಬರುವ ಅವೇ ಮಾಸ, ವಾರಪತ್ರಿಕೆಗಳ ಮುದ್ರಣದ ಗುಣಮಟ್ಟದಲ್ಲಿ ತುಂಬಾ ಇಳಿಕೆಯಾಗಿದೆ!
ಇವತ್ತು ಬೆಳಿಗ್ಗೆ ನಾನು ಓದಲು ಒಂದು ಕನ್ನಡ ಮಾಸಿಕ ಪತ್ರಿಕೆಯನ್ನು ಕೈಗೆ ತೆಗೆದುಕೊಂಡೆ, ಅದು ಮುದ್ರಣ ಆದ ರೀತಿ, ಪುಸ್ತಕದಲ್ಲಿ ದುಡ್ಡು ಉಳಿತಾಯ ಮಾಡಲು ತೆಳ್ಳಗಿನ ಹಾಳೆಗಳನ್ನು ಹೊಂದಿದ ಅತಿ ಚಿಕ್ಕ ಅಕ್ಷರಗಳನ್ನು ಹೊಂದಿ ಸೊರಗಿ ಹೋಗಿದೆ ಅನಿಸಿತು, ಮೊದಲಿನಂತೆ ಮನಸ್ಸನ್ನು ಆಕರ್ಷಿಸಿದವುದಿಲ್ಲ ಎಂದು ಅದನ್ನು ಬದಿಗೆ ಸರಿಸಿ ವಾರಪತ್ರಿಕೆಯನ್ನೊಂದು ಹಿಡಿದೆ.
ಅದು ಕೂಡ ಹಾಗೆ ಇದೆ ಮೊದಲಿನ ಪುಸ್ತಕದ ಗುಣಮಟ್ಟ ಇಲ್ಲವೇ ಇಲ್ಲ ಪುಸ್ತಕ ಮುದ್ರಣದಲ್ಲಿ! ಕೈಯಲ್ಲಿ ಹಿಡಿದುಕೊಂಡರೆ ತಕ್ಷಣ ಗೊತ್ತಾಗಿ ಬಿಡುತ್ತದೆ ಅವುಗಳ ಗುಣಮಟ್ಟ ಇವು ಉಳಿತಾಯ ಯೋಜನೆಯಲ್ಲಿ ಪ್ರಕಟಣೆಗೊಳ್ಳತ್ತಿರುವ ಪತ್ರಿಕೆಗಳೆಂದು! ತುಂಬಾ ಪ್ರಸಿದ್ಧಿಗೆ ಬಂದ ಪತ್ರಿಕೆಗಳೇ ಹೀಗಾದರೆ ಏನು ಗತಿ ಎಂದು ಮನಸ್ಸು ಒಂದು ಕ್ಷಣ ಚಿಂತಿತವಾಯಿತು ಕೂಡ !
ಮೊದಲಿಂದಲೂ ಕನ್ನಡ ವಾರಪತ್ರಿಕೆಯಲ್ಲಿ ತರಂಗ, ಸುಧಾ, ಮಂಗಳಾ, ಕರ್ಮವೀರ,
ಗೃಹಶೋಭಾ, ತುಷಾರ, ಮಯೂರ ತುಂಬಾ ಆಪ್ತವಾದ ವಾರಪತ್ರಿಕೆಗಳು, ಇನ್ನೊಂದು ಪ್ರಜಾಮತ ಎನ್ನುವ ದೊಡ್ಡ ಅಕ್ಷರಗಳುಳ್ಳ ಉದ್ದ ಅಗಲದ ವಾರಪತ್ರಿಕೆ ಬರುತಿತ್ತು, ಅದರಲ್ಲಿ ಬರುವ ಧಾರಾವಾಹಿ ನನಗೆ ತುಂಬಾ ಇಷ್ಟವಾಗುತಿದ್ದವು, ಅಕ್ಷರಗಳ ಗಾತ್ರ ಮನಸ್ಸನ್ನು ಹಿಡಿದಿಡುತಿದ್ದವು, ಆ ಪತ್ರಿಕೆಯವರು ಅದನ್ನು ಪ್ರಸ್ತುತ ಪಡೆಸಿದ ರೀತಿ ಮುದ್ರಣ ಮನ ಸೂರೆಗೊಳ್ಳುತಿದ್ದವು!
ಓದುಗನಿಗೆ ಒಂದು ಪತ್ರಿಕೆ ಓದಬೇಕು ಅನಿಸಬೇಕಾದರೆ ಮುಖ್ಯವಾಗಿ ಆ ಹಾಳೆಯ ಗುಣಮಟ್ಟ, ಅಕ್ಷರಗಳ ಗಾತ್ರ , ಪದಗಳು, ಪ್ಯಾರಾಗಳ ನಡುವಿನ ಅಂತರ ಎಲ್ಲಾ ಸರಿಯಾಗಿ ಇರಬೇಕು, ಆಗ ಮಾತ್ರ ಆ ಪತ್ರಿಕೆಯಲ್ಲಿ ಬಂದ ಕಥೆಗಳು, ಧಾರಾವಾಹಿಗಳು, ಲೇಖನಗಳು ನಮ್ಮ ಮನಸೂರೆಗೊಂಡು ಓದಲು ಮನಸ್ಸಿಗೆ ಉತ್ಸಾಹ ಕೊಡುತ್ತವೆ! ಇಲ್ಲದಿದ್ದರೆ ಅದರಲ್ಲಿ ಬರುವ ಯಾವುದೇ ಕಥೆಯಾಗಲಿ, ಧಾರಾವಾಹಿಯಾಗಲಿ ಓದುವ ಹುಮ್ಮಸ್ಸು, ಕಾತುರತೆ ಓದುಗನಿಗೆ ಬರುವುದೇ ಇಲ್ಲ! ಪತ್ರಿಕೆಗಳನ್ನು ಖರೀದಿಸಿ ಓದುವ ಆಕಾಂಕ್ಷೆಯತ್ತ ಮನಸ್ಸು ನಿರಾಸಕ್ತಿ ಹೊಂದುತ್ತದೆ!
ಇದನ್ನೆಲ್ಲಾ ಯಾರು ಹೇಳಬೇಕು ಪತ್ರಿಕೆಯ ಪ್ರಕಾಶಕರಿಗೆ ಅನಿಸಿ ಬಿಡುತ್ತದೆ! ಇಷ್ಟು ವರ್ಷಗಳ ಅನುಭವವಿದ್ದರೂ ಕೂಡ ಬರುಬರುತ್ತಾ ತಮ್ಮ ಛಾಪನ್ನು ಕಳೆದುಕೊಳ್ಳುತ್ತಾ ಬರುವ ಕನ್ನಡ ವಾರಪತ್ರಿಕೆಗಳ ಬಗ್ಗೆ ಆತಂಕ, ಬೇಸರ ಉಂಟು ಮಾಡಿದೆ ಮನದಲ್ಲಿ!
ಮುಂದಾದರೂ ಮೊದಲಿನಂತೆ ಆಕರ್ಷಕ ರೀತಿಯಲ್ಲಿ ನಮ್ಮ ಹೆಮ್ಮೆಯ
ವಾರಪತ್ರಿಕೆಗಳು, ಮಾಸಪತ್ರಿಕೆಗಳು ,ದಿನ ಪತ್ರಿಕೆಗಳು ಮುದ್ರಣದ ಗುಣಮಟ್ಟ ಪಡೆದು ಆರೋಗ್ಯಕರವಾಗಿ ಹೊರಹೊಮ್ಮುಲಿ ಎನ್ನುವ ಆಶಯ, ಅಭಿಲಾಷೆ ನಮ್ಮೆಲ್ಲರದಾಗಿರಲಿ!
ಪತ್ರಿಕೆಗಳ ಗುಣಮಟ್ಟ ಕ್ಷೀಣಿಸಲು ನಾವೂ ಓದುಗರು ಕೂಡ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾರಣವಾಗುತ್ತೇವೆ!
ಮನೆ ಮನೆಗೆ ಪತ್ರಿಕೆ, ವಾರಪತ್ರಿಕೆ ತರಿಸುವುದು ಬಹುಶಃ ಶೇಕಡಾ ಐವತ್ತರಷ್ಟು ಕಡಿಮೆಯಾಗಿದೆ, ಸಾಮಾಜಿಕ ಜಾಲತಾಣಗಳ ಅವಲಂಬನೆ ಹೇರಳವಾಗಿ ಪತ್ರಿಕೆಯನ್ನು ಖರೀದಿಸಿ ಓದುವ ಓದುಗರ ಸಂಖ್ಯೆ ವಿರಳವಾಗಿದೆ!
ಈಗೀನ ಮಕ್ಕಳು, ಹರೆಯದವರು, ಯುವಕ,ಯುವತಿಯರು,
ಆಂಗ್ಲ ಮಾಧ್ಯಮದಲ್ಲಿ ಹೆಚ್ಚು ಆಸಕ್ತಿ ವಹಿಸುವದರಿಂದ ಕನ್ನಡ ಪತ್ರಿಕೆಗಳಿಗೆ ಒಂದು ರೀತಿಯ ಜೋರಾದ ಹೊಡೆತವೇ ಬಿದ್ದಿದೆ ಎಂದು ಹೇಳಬಹುದು!
ಹೀಗಾಗಿ ಸೊರಗಿ, ಕರಗಿ ಹೋಗುತ್ತಿರುವ ನಮ್ಮ ಕನ್ನಡ ಪತ್ರಿಕೆಗಳ ಉಳಿವಿಗಾಗಿ ನಾವು ಪತ್ರಿಕೆಗಳನ್ನು ಕೊಂಡು ಓದುವ ಅಭ್ಯಾಸ ಮಾಡಿಕೊಳ್ಳಬೇಕು! ಎಲ್ಲಾ ಪತ್ರಿಕೆಗಳು ಆದಷ್ಟು ಬೇಗ ಮುದ್ರಣದಲ್ಲಿ ಒಳ್ಳೆಯ ಗುಣಮಟ್ಟವನ್ನು ಕಾಯ್ದುಕೊಂಡು ಆಕರ್ಷಕವಾಗಿ, ಆರೋಗ್ಯಕರವಾಗಿ ಪ್ರಸ್ತುತ ಪಡಿಸಲಿ ಎನ್ನುವ ಭರವಸೆಯ ಬೆಳಕು ಹೆಮ್ಮೆಯ ಓದುಗರಿಗೆ ಸಿಗಲಿ!
ಸ್ನೇಹಾ ಆನಂದ್