ಕಳೆದ ವರ್ಷ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಒಂದು ದಶಕ ಪೂರೈಸಿದ ರಚಿತಾ ರಾಮ್ ಈಗಲೂ ಬೇಡಿಕೆಯಲ್ಲಿರುವ ನಟಿ. ಧಾರವಾಹಿಗಳಲ್ಲಿ ನಟಿಸುತ್ತಿದ್ದ ಬಿಂದಿಯಾ ರಾಮ್ 2013ರಲ್ಲಿ ದರ್ಶನ್ ತೂಗುದೀಪ ಬ್ಯಾನರ್ ನಲ್ಲಿ ನಿರ್ಮಿಸಿದ ‘ಬುಲ್ ಬುಲ್ ‘ ಚಿತ್ರದ ಮೂಲಕ ಎಂಟ್ರಿ ಕೊಟ್ಟು ಹೆಚ್ಚು ಕಡಿಮೆ ಕನ್ನಡದ ಎಲ್ಲಾ ಸೂಪರ್ ಸ್ಟಾರ್ ನಟರ ಜೊತೆ ನಾಯಕಿಯಾಗಿ ನಟಿಸಿ ತನ್ನದೇ ಆದ ಫ್ಯಾನ್ ಬೇಸ್ ಹೊಂದಿದ್ದಾರೆ.
ರಚಿತಾ ನಟಿಸಿರುವ ಸಂಜು ವೇಡ್ಸ್ ಗೀತಾ 2 ಇದೇ ತಿಂಗಳ ಹತ್ತನೇ ತಾರೀಕಿಗೆ ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ. ನಾಗಶೇಖರ್ ನಿರ್ದೇಶಿಸಿದ ‘ಸಂಜು ವೆಡ್ಸ್ ಗೀತಾ ‘ ಈ ಹಿಂದೆ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಮೊದಲನೇ ಭಾಗದಲ್ಲಿ ಗೀತಾ ಪಾತ್ರದಲ್ಲಿ ರಮ್ಯಾ ನಟಿಸಿದ್ದರೆ, ‘ಸಂಜು ವೇಡ್ಸ್ ಗೀತಾ 2’ ಚಿತ್ರದಲ್ಲಿ ರಚಿತಾ ಅಭಿನಯಿಸುತ್ತಿದ್ದಾರೆ. ಪಾರ್ಟ್ ಒನ್ ಮತ್ತು ಈ ಚಿತ್ರಕ್ಕೆ ಯಾವುದೇ ಸಂಬಂಧವಿಲ್ಲದಿದ್ದರೂ ಆ ಚಿತ್ರದ ಎಲ್ಲಾ ಮ್ಯಾಜಿಕ್ ಈ ಚಿತ್ರದಲ್ಲಿ ಮುಂದುವರಿಯಲಿದ್ದು, ಗೀತಾ ಪಾತ್ರದಲ್ಲಿ ರಚಿತಾ ಅಭಿನಯ ಅದ್ಭುತವಾಗಿ ಮೂಡಿಬಂದಿದೆಯೆಂದು ಚಿತ್ರತಂಡದ ಅಭಿಪ್ರಾಯ.
ಇತ್ತೀಚೆಗೆ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ರಚಿತಾ ಮದುವೆ ಯಾವಾಗ ಅಂತ ಪತ್ರಕರ್ತರು ಕೇಳಿದ ಪ್ರಶ್ನೆಗೆ, ನಾನಿನ್ನು ಕೆಲಸ ಮಾಡ್ತಾ ಇದ್ದೀನಿ,ಈ ವರ್ಷ ಕೂಡ ಬ್ಯುಸಿ ಯಾಗಿದ್ದೀನಿ ಮದುವೆ ಯೋಚನೆ ಸದ್ಯಕ್ಕಿಲ್ಲ ಅಂದಿದ್ದಾರೆ.ಈಗಾಗಲೇ ‘ಅಯೋಗ್ಯ 2’ ಕಲ್ಟ್,ಚಿತ್ರಗಳ ಚಿತ್ರೀಕರಣದಲ್ಲಿ ನಿರತರಾಗಿರುವ ರಚ್ಚು ಗೆ ಮದುವೆ ಬಗ್ಗೆ ಯೋಚನೆ ಮಾಡುವಷ್ಟು ಪುರುಸೊತ್ತು ಇಲ್ವಂತೆ.
ಇತ್ತೀಚೆಗೆ ರಚಿತಾ ರಾಮ್ ತಲೈವ ರಜನಿಕಾಂತ್ ನಟನೆಯ ‘ಕೂಲಿ ‘ ಚಿತ್ರದಲ್ಲಿ ನೆಗೆಟಿವ್ ಪಾತ್ರವೊಂದರಲ್ಲಿ ನಟಿಸುವ ಬಗ್ಗೆ ದೊಡ್ಡ ಸುದ್ದಿಯಾಗಿತ್ತು. ಚಿತ್ರ ತಂಡ ನನ್ನನ್ನು ಸಂಪರ್ಕಿಸಿದ್ದು ನಿಜ, ನಾನು ಶೂಟಿಂಗ್ ನಲ್ಲಿ ಭಾಗವಹಿಸುವರೆಗೆ ಆ ಬಗ್ಗೆ ಏನು ಹೇಳಲಾರೆ. ಈ ಬಗ್ಗೆ ನಾನೇ ಅಪ್ಡೇಟ್ ಮಾಡ್ತೀನಿ ಅಂತ ತಿಳಿಸಿದ್ದಾರೆ.
ಒಟ್ಟಿನಲ್ಲಿ ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ನಟಿ ದಶಕಗಳ ಕಾಲ ನಾಯಕಿಯಾಗಿ ಚಿತ್ರರಂಗವನ್ನು ಆಳುವುದು ಕಷ್ಟ ಸಾಧ್ಯ.ಆ ನಿಟ್ಟಿನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ರವರ ಈ ಸುದೀರ್ಘ ಪಯಣ ವನ್ನು ಮೆಚ್ಚಲೇ ಬೇಕು.
-ಶರತ್ ಚಂದ್ರ