ಟಾಲಿವುಡ್ನ ಮೋಸ್ಟ್ ಸೆನ್ಸೇಷನಲ್ ಸೀನಿಯರ್ ನಟ ಅಂದ್ರೆ ಅಂದು ನಂದಮೂರಿ ಬಾಲಕೃಷ್ಣ. ಈ ವರ್ಷಕ್ಕೆ ಬರೋಬ್ಬರಿ 64 ವರ್ಷ ದಾಟಿದ್ರೂ ಕ್ರೇಜ್ ಮಾತ್ರ ಹಾಗೇ ಇದೆ. ತೆಲುಗು ಚಿತ್ರರಂಗದಲ್ಲಿ ‘ಬಿಲ್ಡಪ್ ಬಾಲಯ್ಯ’ ಅಂತಾನೇ ಫೇಮಸ್ ಆಗಿರೋ ಎನ್ಬಿಕೆ ಹೊಡೆಯುವ ಡೈಲಾಗ್, ಅವರ ಌಕ್ಷನ್ ಅಭಿಮಾನಿಗಳಿಗೆ ಒಂದು ರೀತಿಯ ರಸದೌತಣ. ಹುರಿಮೀಸೆ ಬಿಟ್ಟು, ಬಿಳಿಬಟ್ಟೆ ತೊಟ್ಟು ಅತಿವೇಗವಾಗಿ ಮುನ್ನುಗ್ಗುವ ರೈಲನ್ನೇ ನಿಲ್ಲಿಸೋ ನಟನಾ ಚತುರ. ಅಷ್ಟೇ ಅಲ್ಲ, ಆ ಟ್ರೇನ್ ಕೂಡ ಹೆದರಿ ವಾಪಸ್ ಹೋಗುತ್ತೆ ಎಂಬುದನ್ನು ತೆರೆಮೇಲೆ ಕಾಮಿಡಿ ಜೊತೆಗೆ ಭರ್ಜರಿ ಌಕ್ಷನ್ ಸಮೇತ ತೋರಿಸುವ ನಟ ಬಾಲಯ್ಯ ಸದಾ ಒಂದಲ್ಲಾ ಒಂದು ವಿವಾದಕ್ಕೆ ಗುರಿಯಾಗ್ತಾನೇ ಇರ್ತಾರೆ.
ಹಿಂದೂಪುರ ಅಸೆಂಬ್ಲಿ ಕ್ಷೇತ್ರದ ಎಂಎಲ್ಎ ಕೂಡ ಆಗಿರುವ ನಂದಮೂರಿ ಬಾಲಕೃಷ್ಣ 70ರ ದಶಕದಿಂದಲೂ ತೆಲುಗು ಚಿತ್ರರಂದಲ್ಲಿ ಬಹುಬೇಡಿಕೆಯ ನಟರಾಗಿದ್ದಾರೆ. ಇವರ ನಟನೆ ಒಂದು ರೀತಿಯ ಕಾಮಿಡಿ ಅನ್ನಿಸಿದ್ರೂ ಇವರ ಮೈಮೇಲೆ ಎಳೆದುಕೊಳ್ಳುವ ಕೆಲ ವಿವಾದಗಳಿಂದ ಖುದ್ದು ಕಾಮಿಡಿ ಆಗಿದ್ದೇ ಹೆಚ್ಚು. ಇವರ ಪ್ರತಿ ಸಿನಿಮಾದಲ್ಲೂ ಇವರು ಹಾಕೋ ಸ್ಟೆಪ್ಗಳು ನಗೆಬರಿಸುತ್ತದೆ. ಆದ್ರೂ ಇವರಿಗಿರೋ ಫ್ಯಾನ್ಸ್ ಫೋಲೋವಿಂಗ್ ಮಾತ್ರ ಎಲ್ಲರ ಹುಬ್ಬೇರುವಂತೆ ಮಾಡುತ್ತದೆ. ಇಷ್ಟು ಫ್ಯಾನ್ಸ್ ಕ್ರೇಜ್ ನೋಡ್ತಿರೋ ಬಾಲಯ್ಯ, ಮತ್ತೊಂದು ದೊಡ್ಡ ಕಾಂಟ್ರವರ್ಸಿಗೆ ಕಾರಣರಾಗಿದ್ದಾರೆ. ತಮ್ಮ ನಟನೆಯ ‘ಡಾಕು ಮಹರಾಜ್’ ಸಿನಿಮಾದ ಹಾಡೊಂದರಲ್ಲಿ ಇವರು ಹಾಕಿರೋ ಸ್ಟೆಪ್ಗೆ ಎಲ್ಲೆಡೆ ಟೀಕೆ ವ್ಯಕ್ತವಾಗ್ತಿದೆ.
‘ಡಾಕು ಮಹಾರಾಜ್’ ಚಿತ್ರದ ‘ದಬಿಡಿ ದಿಬಿಡಿ’ ಎಂಬ ಐಟಂ ಹಾಡು ಜನವರಿ 2ರಂದು ರಿಲೀಸ್ ಆಗಿತ್ತು. ಎಸ್. ಥಮನ್ ಸಂಗೀತ ನೀಡಿರುವ ಈ ಹಾಡನ್ನು ಕಾಸರ್ಲಾ ಶ್ಯಾಮ್ ಬರೆದಿದ್ದಾರೆ. ಈ ಹಾಡಿನಲ್ಲಿ ಬಾಲಯ್ಯ ಜೊತೆಗೆ ನಟಿ ಹಾಗೂ ಐಟಂ ಡ್ಯಾನ್ಸರ್ ಊರ್ವಶಿ ರೌಟೇಲಾ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಆದ್ರಿಲ್ಲಿ ಊರ್ವಶಿ ಮಾಡಿರೋ ಡ್ಯಾನ್ಸ್ಗೆ ಟೀಕೆ ವ್ಯಕ್ತವಾಗಿಲ್ಲ. ಬದಲಿಗೆ ಬಾಲಯ್ಯ ಹಾಕಿರೋ ಡ್ಯಾನ್ಸ್ ಸ್ಟೆಪ್ಸ್ ತೀರಾ ಅಶ್ಲೀಲ, ಅಸಹ್ಯ ಅಂತಾ ಜನ ಬಾಯಿಗೆ ಬಂದಂಗೆ ಬೈದುಕೊಳ್ತಿದ್ದಾರೆ. ನೃತ್ಯ ನಿರ್ದೇಶನ ಮಾಡಿರೋ ಶೇಖರ್ ಮಾಸ್ಟರ್ಗೆ ಹಿಡಿಶಾಪ ಹಾಕ್ತಿದ್ದಾರೆ.
ಸ್ವಲ್ಪ ಅತಿರೇಕ ಅನ್ನಿಸುವಷ್ಟರ ಮಟ್ಟಿಗೆ ಸ್ಟೆಪ್ ಹಾಕಿರೋ ಬಾಲಯ್ಯ, ನಟಿಯ ಹಿಂಭಾಗಕ್ಕೆ ಹೊಡೆಯುವ ರೀತಿ ಒಂಥರಾ ಕಸಿವಿಸಿ ಉಂಟು ಮಾಡುತ್ತದೆ. ಅಷ್ಟೇ ಅಲ್ಲ, ಆಕೆಯ ಮುಂಭಾಗದ ನಡುವಿನ ಬಟ್ಟೆಗೆ ಕೈ ಹಾಕಿ ಎಳೆಯುವುದೂ ಕೂಡ, ಜೊತೆಗೆ ನಟಿಯ ಪೃಷ್ಟಗಳನ್ನು ತಬಲದ ರೀತಿ ಬಡಿಯುವ ಹಾಗೆ ಮಾಡಿರುವುದು ಜನರ ಸಿಟ್ಟಿಗೆ ಕಾರಣವಾಗಿದೆ. ಬಾಲಯ್ಯಗೆ ಈಗ 64 ವರ್ಷ ವಯಸ್ಸು. ನಟಿ ಊರ್ವಶಿಗೆ ಜಸ್ಟ್ 30 ವರ್ಷ ವಯಸ್ಸು. ಹೀಗಿರುವಾಗ ಮಗಳ ವಯಸ್ಸಿನ ನಟಿ ಜೊತೆ ಈ ರೀತಿಯ ಡ್ಯಾನ್ಸ್ ಬೇಕಿತ್ತಾ ಅಂತಾ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಅದ್ರಲ್ಲೂ ಒಬ್ಬ ಎಂಎಲ್ಎ ಆಗಿ ಜವಾಬ್ದಾರಿ ಮರೆತು ಪೋಲಿ ಹುಡುಗನ ರೀತಿ ಮಾಡಿರೋದು ಸರಿಯಲ್ಲ ಎಂದು ತೆಗಳುತ್ತಿದ್ದಾರೆ.