ಅಭಿಮಾನ ಅತಿರೇಕವಾಗಬಾರದು.. ಅಂಧಾಭಿಮಾನ ದುರಂತಗಳಿಗೆ ಆಹ್ವಾನ ನೀಡಬಾರದು.. ಆಚರಣೆಗಳು ಅನಾಹುತ ಸೃಷ್ಟಿಸಬಾರದು.. ನಟ, ನಟಿಯರ, ರಾಜಕಾರಣಿಗಳ ಜನ್ಮದಿನವಾಗಲಿ, ಮದುವೆಗಳಾಗಲಿ, ಮತ್ತೊಂದು ಸಮಾರಂಭಗಳಾಗಲಿ. ಅವೆಲ್ಲವುಗಳಲ್ಲೂ ಸುರಕ್ಷತೆ ಮುಖ್ಯ. ಅಭಿಮಾನಿಗಳು ಅಭಿಮಾನವನ್ನಷ್ಟೇ ಇಟ್ಟುಕೊಳ್ಳಬೇಕೇ ಹೊರತು ಪ್ರಾಣವನ್ನೇ ತ್ಯಾಗ ಮಾಡುವ ಮಟ್ಟಿಗೆ ಹೋಗಬಾರದು. ಯಾಕಂದ್ರೆ, ಅವರನ್ನು ನಂಬಿಕೊಂಡು ಬದುಕುತ್ತಿರುವ ಕುಟುಂಬಗಳಿರುತ್ತವೆ. ಇಷ್ಟೆಲ್ಲಾ ಹೇಳುತ್ತಿರುವುದೇಕೆ ಅಂದರೆ ಕಳೆದ ವರ್ಷ ನಟ ಯಶ್ ಜನ್ಮದಿನದ ಆಚರಣೆ ವೇಳೆ ಸಂಭವಿಸಿದಂತಹ ದುರಂತ ಮರುಕಳಿಸಬಾರದು. ಇದೇ ಜನವರಿ 8ಕ್ಕೆ ನಟ ಯಶ್ 39ನೇ ವರ್ಷಕ್ಕೆ ಕಾಲಿಡುತ್ತಿರುವುದರಿಂದ ಅದು ಸಂತಸದ ದಿನವಾಗಬೇಕು. ಶೋಕದ ದಿನವಾಗಬಾರದು.
2024ರ ಜನವರಿ 8ರಂದು ದುರಂತ ನಡೆದಿತ್ತು. ಮೆಚ್ಚಿನ ನಟನ ಹುಟ್ಟುಹಬ್ಬದ ಹಿನ್ನೆಲೆ ಕಟೌಟ್ ಹಾಕುವಾಗ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಮೂವರು ಯುವಕರು ಮೃತಪಟ್ಟು, ಕೆಲವರು ಗಾಯಗೊಂಡಿದ್ದರು. ಗದಗ ಜಿಲ್ಲೆಯ ಸೂರಣಗಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ ಬೆನ್ನಲ್ಲೇ ತಮ್ಮ ಸಿನಿಮಾ ಕೆಲಸಗಳನ್ನು ಸ್ಥಗಿತಗೊಳಿಸಿ ಯಶ್ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ಇದೀಗ ಮತ್ತೆ ನಟ ಯಶ್ ಜನ್ಮದಿನ ಆಚರಣೆಗೆ ಅಭಿಮಾನಿಗಳು ಸಜ್ಜಾಗಿದ್ದಾರೆ. ಕಳೆದ ವರ್ಷದ ಘಟನೆಯಿಂದ ತೀವ್ರವಾಗಿ ಮನನೊಂದಿರುವ ನಟ ಯಶ್ ಈ ಸಲ ಒಂದು ವಾರ ಮುಂಚೆಯೇ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಬಾರಿ ನನ್ನ ಮನಸ್ಸಿಗೆ ನೋವು ಕೊಡಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ತಮ್ಮ ಹುಟ್ಟುಹಬ್ಬಕ್ಕೆ 8 ದಿನ ಮುಂಚಿತವಾಗಿಯೇ ಯಶ್ ಈ ಮನವಿ ಮಾಡಿಕೊಂಡಿರೋದಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಅಭಿಮಾನಿಗಳು ಮತ್ತವರ ಕುಟುಂಬಗಳ ಮೇಲಿಟ್ಟಿರುವ ಕಾಳಜಿ ನಿಜಕ್ಕೂ ಮೆಚ್ಚುವಂಥದ್ದು ಎಂದು ಕೊಂಡಾಡುತ್ತಿದ್ದಾರೆ.
ಕೆಜಿಎಫ್ 1, 2 ಸಿನಿಮಾದಲ್ಲಿನ ಅಮೋಘ ಅಭಿನಯದ ಮೂಲಕ ಭಾರತ ಚಿತ್ರರಂಗದಲ್ಲಿ ಜನಪ್ರಿಯರಾಗಿರುವ ನಟ ಯಶ್ ಸದ್ಯ ಬಹುಕೋಟಿ ವೆಚ್ಚದ ‘ಟಾಕ್ಸಿಕ್’ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಇಷ್ಟು ಬ್ಯುಸಿ ಶೆಡ್ಯೂಲ್ ಇರೋದ್ರಿಂದ ಅಭಿಮಾನಿಗಳ ಜೊತೆ ಬರ್ತ್ಡೇ ಆಚರಣೆ ಸಾಧ್ಯವಿಲ್ಲ, ಕ್ಷಮಿಸಿ ಅಂತಾ ಮುಂಚಿತವಾಗಿಯೇ ಕೇಳಿಕೊಂಡಿದ್ದಾರೆ.
ಎಲ್ಲರ ಮೆಚ್ಚುಗೆ ಪಡೆದ ಯಶ್ ಪತ್ರ : “ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ನಿಮ್ಮ ಅಭಿಮಾನದ ಅಪ್ಪುಗೆ ಮತ್ತೊಂದು ವರ್ಷವನ್ನು ಸಾರ್ಥಕಗೊಳಿಸಿದೆ. ಹೊಸ ವರ್ಷ ಹೊಸ ಭರವಸೆಗಳೊಂದಿಗೆ ನಗುನಗುತ್ತಾ ಬದುಕೋಣ. ಬದುಕನ್ನು ಮೆರಗುಗೊಳಿಸುವಂತಹ ಹೊಸ ಯೋಜನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ. ಸಿನಿಮಾ ಕೆಲಸದ ನಿಮಿತ್ತ ನಾನು ಹುಟ್ಟುಹಬ್ಬದಂದು ಊರಿನಲ್ಲಿ ಇರುವುದಿಲ್ಲ. ಬಬ್ಬರ ಹುಟ್ಟುಹಬ್ಬಕ್ಕೆ ನೀವು ತೋರುವ ಅಭಿಮಾನ ಜವಾಬ್ದಾರಿಯುತವಾಗಿರಲಿ ಎಂಬುದು ನನ್ನ ಪ್ರೀತಿಯ ಮನವಿ. ಹಾಗಾಗಿ ಫ್ಲೆಕ್ಸ್, ಬ್ಯಾನರ್ಗಳ ಯಾವುದೇ ಆಡಂಬರ ಮಾಡದೇ ನನ್ನ ಮನಸ್ಸಿಗೆ ನೋವಾಗುವ ನಡವಳಿಕೆ ತೋರದೇ ನೀವು ಇದ್ದಲ್ಲಿಂದಲೇ ನಿಮ್ಮ ಕುಟುಂಬದವರು ಹೆಮ್ಮೆ ಪಡುವ ಕೆಲಸ ನಿಮ್ಮಿಂದ ಆದರೆ ಅದಕ್ಕಿಂತ ದೊಡ್ಡ ಜನ್ಮದಿನದ ಉಡುಗೊರೆ ನನಗೆ ಮತ್ತೊಂದಿಲ್ಲ. ಆದಷ್ಟು ಬೇಗ ನಿಮ್ಮನ್ನೆಲ್ಲಾ ಬೇಟಿ ಆಗುತ್ತೇನೆ. ಎಲ್ಲರಿಗೂ ಹೊಸ ವರ್ಷ ಒಳಿತನ್ನು ತರಲಿ. ನಿಮ್ಮ ಪ್ರೀತಿಯ ಯಶ್”.