ಒಂದೆಡೆ ನಳಿನಿ ಲೇಡಿ ಡಾಕ್ಟರ್ ವಿ. ಡಿಸೋಜಾರ ಮೆಟರ್ನಿಟಿ ಹಾಸ್ಪಿಟಲ್ ನ ಲೇಬರ್ ವಾರ್ಡ್ ನಲ್ಲಿ ಸಹಜ ಹೆರಿಗೆಗಾಗಿ ಅಸಹನೀಯ ನೋವಿನಿಂದ ನರಳುತ್ತಿದ್ದರೆ, ಇನ್ನೊಂದೆಡೆ ಅವಳ ಪತಿ ಪವನ್ ಹಾಗೂ ರಾಬರ್ಟ್ ನಡುವೆ ಬೆಟಿಂಗ್ ನಡೆಯುತ್ತಿತ್ತು.
ರಾಬರ್ಟ್ ತನ್ನೊಂದಿಗೆ ಯೂನಿವರ್ಸಿಟಿಯಲ್ಲಿ ಓದಿದ್ದ ತನ್ನ ಆಪ್ತ ಮಿತ್ರ ಪವನ್ ಜೊತೆಗೆ ಬೆಟಿಂಗ್ ಕಟ್ಟುವುದರಲ್ಲಿ ನಿರತನಾಗಿದ್ದ. ತನ್ನ ಸ್ವಭಾವಕ್ಕನುಗುಣವಾಗಿ ತಮಾಷೆ ಮಾಡಲೆಂದೊ ಅಥವಾ ಹಾಗೆಯೇ ಸುಮ್ಮನೆ ಟೆನ್ಶನ್ ನಿಂದ ಅತ್ತಿತ್ತ ಸುತ್ತುತ್ತಿದ್ದ ಪವನ್ ನ ಮೂಡ್ ರಿಫ್ರೆಶ್ ಮಾಡಲೆಂದೊ ರಾಬರ್ಟ್ ಈ ಬೆಟಿಂಗ್ ಕಟ್ಟಿದ್ದ.
“ನೋಡು ಪವನ್, ನಿನ್ನಿಬ್ಬರು ಅವಳಿ ಮಕ್ಕಳು ಕಪ್ಪಗೆ ಇರುತ್ತವೆ,” ರಾಬರ್ಟ್ ಹೇಳಿದ.
“ನೀನೇಕೆ ಹೀಗೆ ಹೇಳುತ್ತಿರುವೆ?” ಪವನ್ ಕೇಳಿದ.
“ಏಕೆಂದರೆ, ನೀನು ನನ್ನ ಸ್ನೇಹಿತ ಆಗುವ ಮೊದಲು ನನ್ನ ಕಪ್ಪು ಬಣ್ಣವನ್ನು ಅದೆಷ್ಟು ಟೀಕಿಸುತ್ತಿದ್ದೆ. ನನ್ನ ಮದುವೆಗೆ ಮುಂಚೆ ನೀನು ನನಗೆ ಚಾಲೆಂಜ್ ಮಾಡಿದ್ದೆ. ಅದೇನೆಂದರೆ ಶ್ವೇತ ವರ್ಣದ ಮಮತಾ ನನ್ನನ್ನು ಮದುವೆಯಾಗುವುದಿಲ್ಲವೆಂದು. ಆದರೆ ನೀನು ಆ ಪಣದಲ್ಲಿ ಸೋತಿದ್ದೆ.”
“ಹೌದು, ಚೆನ್ನಾಗಿ ನೆನಪಿದೆ. ನೀನು ಕೇವಲ ಅವಳನ್ನು ಮದುವೆಯನ್ನಷ್ಟೇ ಆಗಲಿಲ್ಲ. ಮದುವೆಯ ಬಳಿಕ ಮಮತಾಳನ್ನು ಮರ್ಸಿ ಆಗಿಸಿಬಿಟ್ಟೆ.”
“ಹಾಗಾದರೆ ಈ ಸಲ ನೀನು ಧೈರ್ಯವಾಗಿ ಬೆಟ್ ಕಟ್ಟಬಹುದು.”
“ನಾನು ಬೆಟ್ ಕಟ್ಟುವುದಿಲ್ಲ. ನಾನು ಹಾಗೂ ನಳಿನಿ ಇಬ್ಬರೂ ಬೆಳ್ಳಗಿರುವಾಗ ಹುಟ್ಟು ಮಕ್ಕಳು ಕಪ್ಪಗಿರಲು ಸಾಧ್ಯವೇ ಇಲ್ಲ.”
ಆಗ ಲೇಬರ್ ವಾರ್ಡ್ ನ ಹೊರಗೆ ಅಳವಡಿಸಿದ್ದ ಉದ್ದನೆಯ ಸ್ಟೀಲ್ ಬೆಂಚ್ ಮೇಲೆ ಕುಳಿತಿದ್ದ ಮರ್ಸಿ ಹೇಳಿದಳು, “ನೀವಿಬ್ಬರೂ ಹೊತ್ತಲ್ಲದ ಹೊತ್ತಿನಲ್ಲಿ ಎಂಥದೊ ಜಾಗದಲ್ಲಿ ಪಣದಲ್ಲಿ ತೊಡಗ್ತೀರಾ. ಎದುರುಗಡೆ ಇರುವ ಫಲಕದಲ್ಲಿ ಏನು ಬರೆದಿದ್ದಾರೆ ನೋಡಿ ಸ್ವಲ್ಪ.”
ಮರ್ಸಿ ಅವರ ಗಮನ ಸೆಳೆದಾಗ ಇಬ್ಬರೂ ಅತ್ತ ಕಡೆ ಗಮನಹರಿಸಿದರು. ಫಲಕದ ಮೇಲೆ `ಕೀಪ್ ಸೈಲೆನ್ಸ್’ ಎಂದು ಬರೆಯಲಾಗಿತ್ತು.
ಇಬ್ಬರೂ ಬೋರ್ಡ್ ನೋಡಿ ಸುಮ್ಮನಾದರು. ಆದರೆ ಹೆಚ್ಚು ಹೊತ್ತು ಹಾಗೆಯೇ ಸುಮ್ಮನಿರುವುದು ಇಬ್ಬರ ಸ್ವಭಾವ ಆಗಿರಲಿಲ್ಲ. ಹೀಗಾಗಿ ಇಬ್ಬರೂ ಅಲ್ಲಿಂದ ಎದ್ದು ಹೊರಗಿದ್ದ ಕೆಫೆಟೆರಿಯಾದಲ್ಲಿ ಕಾಫಿ ಕುಡಿಯಲು ಹೋದರು.
“ಅಂದ ಹಾಗೆ ನಾನು ಒಂದು ಸಲ ಪಣದಲ್ಲಿ ಸೋತಿದ್ದು ಬಿಟ್ಟರೆ, ಹೆಚ್ಚಿನ ಸಲ ಗೆದ್ದಿದ್ದೇನೆ. ಆದರೆ ಈ ಸಲ ನನ್ನ ಮಾತು ನಿಜ ಆಗದಿದ್ದರೆ ನಾನು ನಿನ್ನ ಜೊತೆ ಬೆಟಿಂಗ್ ಕಟ್ಟೋದನ್ನು ನಿಲ್ಲಿಸಿಯೇ ಬಿಡ್ತೀನಿ.”
“ರಾಬರ್ಟ್ ನೀನು ಬೆಟಿಂಗ್ ಕಟ್ಟುವುದು ಬಿಡುವುದರ ಬಗ್ಗೆ ಕನಿಷ್ಠ ನನ್ನ ಮುಂದಾದರೂ ಹೇಳಬೇಡ. ಅಂದಹಾಗೆ ನೀನು ಹಾರ್ಟ್ ಪೇಶೆಂಟ್ ಆಗಿಯೂ ಕೂಡ ಪ್ರಮಾಣ ಮಾಡಿದಾಗ್ಯೂ ಸಿಗರೇಟು ಸೇದುವುದನ್ನು ಈವರೆಗೂ ನಿಲ್ಲಿಸಿಲ್ಲ. ಹಾಗಾಗಿ ನೀನು ನನ್ನ ಜೊತೆಗೆ ಬೆಟಿಂಗ್ ಕಟ್ಟುವುದನ್ನು ನಿಲ್ಲಿಸುವುದಿಲ್ಲ.”
“ಒಂದು ವಿಷಯ ಹೇಳು, ನೀನು ಈ ಚಾಲೆಂಜ್ ನಲ್ಲಿ ಗೆದ್ದರೆ ನನಗೆ ಯಾವ ಸಿನಿಮಾ ತೋರಿಸ್ತೀಯಾ?” ರಾಬರ್ಟ್ ಪುನಃ ಅವನನ್ನು ಕೆಣಕಿದ.
“ನನಗೆ ನಿನ್ನ ಜೊತೆ ಬೆಟಿಂಗ್ ಕಟ್ಟುವುದೇ ಇಷ್ಟ ಇಲ್ಲ ಎಂದ ಮೇಲೆ ನಿನಗೆ ಸಿನಿಮಾ ತೋರಿಸುವ ಬಗ್ಗೆ ಪ್ರಶ್ನೆ ಎಲ್ಲಿ ಉದ್ಭವಿಸುತ್ತದೆ? ನನಗಂತೂ ಸುಖವಾಗಿ ಹೆರಿಗೆ ಆದರೆ ಸಾಕು ಅನ್ನಿಸಿದೆ. ಡಾಕ್ಟರ್ ಡಿಸೋಜಾ ಪ್ರಕಾರ, ನಳಿನಿಗೆ ಹಿಮೋಗ್ಲೋಬಿನ್ ಕಡಿಮೆ ಇದೆ ಹಾಗೂ ಡೆಲಿವರಿ ಕಾಂಪ್ಲಿಕೆಟೆಡ್ ಆಗಿದೆ.”
“ಪವನ್, ನೀನು ಅದರ ಬಗ್ಗೆ ಚಿಂತೆ ಮಾಡಬೇಡಪ್ಪ. ಡಾ. ಡಿಸೋಜಾ ಈ ನಗರದಲ್ಲಿ ಒಳ್ಳೆಯ ಡಾಕ್ಟರ್. ಇದಕ್ಕೂ ಹೆಚ್ಚಿನ ಕಾಂಪ್ಲಿಕೇಟೆಡ್ ಕೇಸ್ ಗಳನ್ನು ಅವರು ಹ್ಯಾಂಡಲ್ ಮಾಡಿದ್ದಾರೆ. ಎಲ್ಲಕ್ಕೂ ಮಹತ್ವದ ವಿಷಯವೆಂದರೆ, ಅವರ ಪ್ರಯತ್ನ ಯಾವಾಗಲೂ ನಾರ್ಮಲ್ ಡೆಲಿವರಿ ಮಾಡಿಸುವುದೇ ಆಗಿರುತ್ತದೆ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಅವರು ಸಿಸೇರಿಯನ್ ಡೆಲಿವರಿ ಮಾಡುತ್ತಾರೆ,” ರಾಬರ್ಟ್ ಹೇಳಿದ.
ಆ ಮಾತಿಗೆ, “ನೀನು ಹೇಳ್ತಿರುವುದನ್ನು ನೋಡಿದರೆ, ಡಾ. ಡಿಸೋಜಾ ಮಾಡಿಸುವ ಪ್ರತಿಯೊಂದು ಡೆಲಿವರಿ ರಿಪೋರ್ಟ್ ನಿನಗೆ ಮೊದಲೇ ಸಿಕ್ಕಿರುತ್ತದೆ ಅನಿಸುತ್ತದೆ,” ಎಂದ ಪವನ್.
“ಅವರು ನಮ್ಮ ರೆಡ್ ಕ್ರಾಸ್ ಸೊಸೈಟಿಯ ಎಲ್ಲಕ್ಕೂ ನುರಿತ ಡಾಕ್ಟರ್ ಅನ್ನುವುದನ್ನು ನೀನು ಮರೆತಿದ್ದೀಯಾ ಅನಿಸುತ್ತೆ. ಅದೆಲ್ಲ ಬಿಡು, ನಾನು ಒಂದು ಬೆಟಿಂಗ್ ಕಟ್ಟಲು ತಯಾರಿದ್ದೇನೆ. ಅದೇನೆಂದರೆ ನಳಿನಿಯ ಡೆಲಿವರಿ ನಾರ್ಮಲ್ ಆಗುತ್ತದೆ.”
ಇಬ್ಬರ ಕಾಫಿ ಕಪ್ ಖಾಲಿಯಾಗಿದ್ದವು. ರಾಬರ್ಟ್ ಬಿಲ್ ಕೊಟ್ಟ ಬಳಿಕ ಇಬ್ಬರೂ ಮರ್ಸಿ ಕುಳಿತ ಜಾಗದ ಬಳಿ ಬಂದರು. ಅವರು ಅಲ್ಲಿಗೆ ತಲುಪಿದ ಬಳಿಕ ಲೇಬರ್ ವಾರ್ಡ್ ನಿಂದ ಹೊರ ಬಂದ ನರ್ಸ್ ಖುಷಿಯ ಸುದ್ದಿಯೊಂದನ್ನು ಕೊಟ್ಟಳು.
“ಸಿಸೇರಿಯನ್ ಡೆಲಿವರಿ ಆಗಿದೆ ಹಾಗೂ ಎರಡೂ ಹೆಣ್ಣು ಶಿಶುಗಳು. ಆಶ್ಚರ್ಯದ ಸಂಗತಿಯೆಂದರೆ, ಹುಟ್ಟಿರುವ ಎರಡೂ ಮಕ್ಕಳು ಕಪ್ಪಗಿವೆ!”
“ಸಿಸ್ಟರ್, ನಾನು ನನ್ನ ಹೆಂಡತಿಯನ್ನು ಭೇಟಿ ಆಗಲು ಒಳಗೆ ಹೋಗಬಹುದಾ?” ಪವನ್ ಪ್ರಶ್ನಿಸಿದಾಗ ನರ್ಸ್ ಹೇಳಿದಳು, “ಇಲ್ಲ ಸರ್, ಈಗಲೇ ಹೋಗಲು ಆಗುವುದಿಲ್ಲ. ಕ್ಲೀನಿಂಗ್ ನಡೆಯುತ್ತಿದೆ. ಇನ್ನು ಸ್ವಲ್ಪ ಹೊತ್ತಿನ ಬಳಿಕ ನಾವು ಅವರನ್ನು ಪ್ರೈವೇಟ್ ವಾರ್ಡ್ ಗೆ ಶಿಫ್ಟ್ ಮಾಡುತ್ತೇವೆ. ಆಗ ನೀವು ಹೋಗಿ ನೋಡಬಹುದು. ಮೇಡಂ, ನೀವು ಮಾತ್ರ ಒಳಗೆ ಹೋಗಬಹುದು,” ಎಂದು ಮರ್ಸಿಯ ಕಡೆ ನೋಡುತ್ತಾ ಹೇಳಿದಳು.
ಮರ್ಸಿ ನರ್ಸ್ ಜೊತೆಗೆ ಒಳಗೆ ಹೋದಳು. ಆಗ ಇಬ್ಬರೂ ಸ್ನೇಹಿತರು ಬೆಂಚ್ ಮೇಲೆ ಕುಳಿತರು. ಆಗ ರಾಬರ್ಟ್ ಹೇಳಿದ, “ನೀನು ಬೆಟ್ ಕಟ್ಟದೇ ಇದ್ದುದು ಒಳ್ಳೆಯದೇ ಆಯಿತು. ಇಲ್ಲದಿದ್ದರೆ ನೀನು ಸೋತುಬಿಡ್ತಿದ್ದೆ. ಇರಲಿ ಆ ವಿಷಯ ಬಿಡು. ಎಲ್ಲಕ್ಕೂ ಮೊದಲು ನನ್ನ ಗುಡ್ ವಿಶೆಸ್ ಸ್ವೀಕರಿಸುವ ಹಾಗೂ ಇಬ್ಬಿಬ್ಬರು ಕನ್ಯಾ ರತ್ನಗಳಿಗೆ ಜನ್ಮ ಕೊಟ್ಟ ಪ್ರಯುಕ್ತ ನೀನು ಯಾವ ಹೋಟೆಲ್ ನಲ್ಲಿ ಟ್ರೀಟ್ ಕೊಡ್ತೀಯಾ ಹೇಳು?” ಎಂದು ತನ್ನ ಸ್ವಭಾವಕ್ಕೆ ತಕ್ಕಂತೆ ಜೋರಾಗಿ ನಕ್ಕ.
ಆ ಬಳಿಕ ಅವನ ಗಮನ ಪವನ್ ಮುಖದ ಕಡೆ ಹೋಗಿ ತನ್ನ ನಗು ನಿಲ್ಲಿಸುತ್ತಾ, “ನೀನಿವತ್ತು ಖುಷಿಯಾಗಿರುವ ಬದಲು ದುಃಖಿತನಾಗಿರುವುದೇಕೆ ಹಾಗೂ ನನ್ನನ್ನು ಈ ರೀತಿ ದುರುಗುಟ್ಟಿ ನೋಡುತ್ತಿರುವುದೇಕೆ?” ಎಂದು ಕೇಳಿದ.
ರಾಬರ್ಟ್ ಒತ್ತಿ ಒತ್ತಿ ಕೇಳಿದಾಗ, ಯಾವುದೋ ಗಾಢ ಯೋಚನೆಯಿಂದ ಹೊರಬಂದು, “ನೀನು ಅವನ್ನು ರತ್ನ ಅಂತ ಹೇಳ್ತಿದ್ದೀಯಲ್ಲ. ರತ್ನಗಳೆಂದೂ ಕಪ್ಪಗಿರುವುದಿಲ್ಲ. ಕಪ್ಪು ಬಣ್ಣವನ್ನು ಯಾವಾಗಲೂ ಕೆಟ್ಟದೆಂದು ಹೇಳಲಾಗುತ್ತದೆ,” ಎಂದು ಹೇಳಿದ ಪವನ್.
“ಹಾಗೇನಿಲ್ಲ ಪವನ್, ಕಪ್ಪು ಬಣ್ಣಕ್ಕೆ ತನ್ನದೇ ಆದ ಮಹತ್ವವಿದೆ. ನನ್ನ ಬಣ್ಣ ಕೂಡ ಎಷ್ಟು ಕಪ್ಪಗಿದೆ, ನನ್ನಲ್ಲಿ ಏನು ಕಡಿಮೆ ಇದೆ ಹೇಳು. ಸುಂದರವಾದ ಹೆಂಡತಿ ಮರ್ಸಿ ಹಾಗೂ ಒಳ್ಳೆಯ ಪ್ರತಿಷ್ಠೆ ಮತ್ತು ನಿನ್ನಂಥ ಒಳ್ಳೆಯ ಸ್ನೇಹಿತ………”
ರಾಬರ್ಟ್ ಮಾತನಾಡುತ್ತಲೇ ಇದ್ದ ಪವನ್ ನ ಫ್ಯೂಸ್ ಹೋದ ಬಲ್ಬ್ ಹಾಗೆ ಮುಖ ಜೋತು ಬಿದ್ದವನಂತೆ ಕುಳಿತಿರುವುದನ್ನು ನೋಡಿ, “ವಿಚಿತ್ರ ಸ್ವಭಾವ ನಿನ್ನದು, ಖುಷಿಯಾಗಿರುವ ಬದಲು, ಜೋಲು ಮುಖ ಹೊತ್ತಿರುವೆ. ಏನು ನಡೆಯುತ್ತಿದೆ ನಿನ್ನ ಮನಸ್ಸಿನಲ್ಲಿ?” ಎಂದು ಕೇಳಿದ.
“ನಾನಂತೂ ನನ್ನ ಪ್ರಾರಬ್ಧವನ್ನು ಹಳಿದುಕೊಳ್ಳುತ್ತಿರುವೆ.”
ಪವನ್ ನ ಬಾಯಿಂದ ಈ ಮಾತು ಕೇಳುತ್ತಿದ್ದಂತೆಯೇ ರಾಬರ್ಟ್ ಅವನಿಗೆ ತಿಳಿವಳಿಕೆ ನೀಡಿದ, “ನೋಡು ಪವನ್, ನನ್ನ ಹಾಗೂ ಮರ್ಸಿಯ ಪಾಲಿಗೆ ಸಂತಾನ ಸುಖವೇ ಬರೆದಿಲ್ಲ. ಒಂದು ವೇಳೆ ಮರ್ಸಿ ಗರ್ಭಕೋಶದ ಕ್ಯಾನ್ಸರ್ ನಿಂದ ಅವಳ ಗರ್ಭಕೋಶ ತೆಗೆಸಿ ಹಾಕದೇ ಇದ್ದಿದ್ದರೆ, ಅವಳು ಗರ್ಭಿಣಿ ಆಗಿದ್ದರೆ ನಾನು ಹೆಣ್ಣು ಮಗವನ್ನೇ ಅಪೇಕ್ಷಿಸುತ್ತಿದ್ದೆ.
“ಇತ್ತೀಚೆಗೆ ಗಂಡಿಗಿಂತ ಹೆಚ್ಚಾಗಿ ಹೆಣ್ಣಿಗೆ ಹೆಚ್ಚು ಪ್ರಾಮುಖ್ಯತೆ ಬಂದಿದೆ. ಬಹುಶಃ ನಿನಗೆ ಗೊತ್ತಿಲ್ಲ ಅನಿಸುತ್ತೆ. ವಿವಾಹಿತ ಹುಡುಗರ ಹೊಸ ಡೈಲಾಗ್ ಏನಾಗಿದೆ ಅಂತಾ,” ರಾಬರ್ಟ್ ಸತತ ಮಾತನಾಡುತ್ತಲೇ ಇದ್ದ.
“ಏನು?” ಎಂದು ಪವನ್ ಕೇಳಿದ.
“ನಾನು ಅಪಾರ್ಟ್ ಮೆಂಟಿನ ಪಾರ್ಕಿನಲ್ಲಿ ಬೆಳಗ್ಗೆ ವಾಕ್ ಮಾಡುವಾಗ ಸಾಮಾನ್ಯವಾಗಿ ಸೀನಿಯರ್ ಗಳು ತಮ್ಮ ವಿವಾಹಿತ ಮಕ್ಕಳ ಉದಾಹರಣೆ ಕೊಡುವುದನ್ನು ಕೇಳಿದ್ದೇನೆ,” ಎಂದು ಹೇಳಿದ ರಾಬರ್ಟ್ ಮುಂದುವರಿಸಿದ, “ ಒಬ್ಬಾತ ತನ್ನ ಮಗನ ಉದಾಹರಣೆ ಕೊಡುತ್ತಾ, `ಕೋವಿಡ್ ನಲ್ಲಿ ಎಲ್ಲರೂ ಹೋದರು. ಆದರೆ ಈ ಮುದುಕ ಎಲ್ಲಿಯವರೆಗೆ ಜೀವಿಸುತ್ತಾನೊ?’ `ಕೋವಿಡ್ ಪಾಸಿಟಿವ್ ಬಂದಿತ್ತು. ಆದರೆ ಆ ಮುದುಕ ಅದನ್ನು ಗೆದ್ದು ಪುನಃ ಮನೆಗೆ ವಾಪಸ್ ಬಂದ,’ ಇನ್ನೊಬ್ಬಾತ ತನ್ನ ಮಗನ ಬಗ್ಗೆ ಹೇಳುತ್ತಿದ್ದರು.
“ಆದರೆ ಪವನ್, ನಾನು ಯಾರೊಬ್ಬರ ಬಾಯಿಂದಲೂ ತಮ್ಮ ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ನೋಡಿಲ್ಲ. ಎಷ್ಟೋ ಹೆಣ್ಣುಮಕ್ಕಳು ತಮ್ಮ ತಂದೆಯ ದಯನೀಯ ಸ್ಥಿತಿ ನೋಡಿ ಅವರನ್ನು ತಮ್ಮ ಜೊತೆಗೆ ಕರೆದುಕೊಂಡು ಹೋಗುತ್ತಾರಂತೆ,” ಹೇಳಿದ.
“ರಾಬರ್ಟ್, ಎಲ್ಲ ಗಂಡು ಮಕ್ಕಳು ಹೀಗೆಯೇ ವಿಚಾರ ಮಾಡುತ್ತಾರೆಂದೇನಲ್ಲ. ನಮ್ಮ ನೆರೆಮನೆಯ ಸುರೇಶ್ ರ ಇಬ್ಬರು ಮಕ್ಕಳು ಕೊರೋನಾದಿಂದ ಗುಣಮುಖರಾದ ತಮ್ಮ ವೃದ್ಧ ಅತ್ತೆಮಾವಂದಿರ ಬಗೆಗೂ ವಿಶೇಷ ಕಾಳಜಿ ವಹಿಸುತ್ತಾರೆ,” ಎಂದು ಹೇಳಿ ತಾನು ಮೌನವಾಗಿಲ್ಲ ಎಂದು ತೋರಿಸಿದ.
ಅವನು ಇಷ್ಟು ಹೇಳುತ್ತಿದ್ದಂತೆಯೇ ರಾಬರ್ಟ್, “ಪವನ್, ನಾನು ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ನಿನ್ನೊಂದಿಗೆ ಬೆಟ್ ಕಟ್ಟಲು ಸಿದ್ಧನಿದ್ದೇನೆ. ಅವರ ಸೇವೆಯ ಹಿಂದೆ ಸುರೇಶ್ ರ ಲಕ್ಷಾಂತರ ರೂ. ಬಂಡವಾಳ ಅಥವಾ ಜಮೀನು ಆಸ್ತಿ ಇರಬಹುದು.”
ಅವರಿಬ್ಬರ ಮಾತುಕಥೆ ಇನ್ನಷ್ಟು ಮುಂದುವರಿಯುತ್ತಿತ್ತು. ಅಷ್ಟರಲ್ಲಿ ಮರ್ಸಿ ಹತ್ತಿರ ಬಂದು, “ರಾಬರ್ಟ್, ನಾನು ನನ್ನ 30 ವರ್ಷಗಳ ಜೀವನದಲ್ಲಿ ಒಮ್ಮೆ ಕೂಡ ಕಪ್ಪಗಿದ್ದರೂ ಇಷ್ಟೊಂದು ಸುಂದರವಾದ ಮಕ್ಕಳನ್ನು ನೋಡಿಲ್ಲ. ಒಂದು ಮಗು ಗುಲಾಬಿ ಹೂವಿನ ಮೇಲೆ ಬಿದ್ದ ನೆರಳಿನಂತೆ ಮತ್ತೊಂದು ಮಗು ಬೆಳಗುತ್ತಿರುವ ರಾತ್ರಿಯ ಹಾಗೆ ಆಕರ್ಷಕವಾಗಿದೆ,” ಎಂದಳು.
“ನಿನಗೆ ಕಾಲೇಜಿನಲ್ಲಿ ಇಂಗ್ಲಿಷ್ ಜೊತೆಗೆ ಆಪ್ಶನ್ ಕನ್ನಡ ಓದಲು ಅವಕಾಶ ದೊರೆತಿದೆ. ಹಾಗಾಗಿ ನೀನು ಇಷ್ಟೊಂದು ಸುಂದರ ಉಪಮೇಯಗಳನ್ನು ಕೊಡಲು ಶುರು ಮಾಡಿರುವೆ,” ರಾಬರ್ಟ್ ತನ್ನ ಸ್ವಭಾವಕ್ಕನುಗುಣವಾಗಿ ಖುಷಿಯಿಂದ ಮರ್ಸಿಗೆ ಹೇಳಿದ.
“ಈ ಪವನ್ ಅಣ್ಣನಿಗೆ ಏನಾಗಿದೆ. ಖುಷಿ ಆಗಿರುವ ಬದಲು ಇವನು ಉದಾಸ ಏಕಾಗಿದ್ದಾನೆ?” ಅವಳ ಗಮನ ಪವನ್ ಕಡೆ ಹೋಗಿತ್ತು.
“ಇವನು ನಳಿನಿ ಜೊತೆಗೆ ಬೆಟಿಂಗ್ ನಲ್ಲಿ ನೋಡ್ತಿದ್ದಾನೆ. ನಾನು ಅವನಿಗೆ ಅದೆಷ್ಟೋ ಸಲ ಬೆಟ್ ಮಾಡುವುದಿದ್ದರೆ ನನ್ನ ಜೊತೆಗೆ ಮಾಡು ಎಂದು ಹೇಳಿದ್ದೇನೆ,” ಎಂದು ಹೇಳುತ್ತಾ ರಾಬರ್ಟ್ ಪುನಃ ನಕ್ಕ.
ವಾತಾವರಣ ತಿಳಿಗೊಳಿಸಲು ರಾಬರ್ಟ್ ಪುನಃ ನಗೆ ಚಟಾಕಿ ಹಾರಿಸಿದ. ಆದರೂ ಅವನು ಇನ್ನೂ ಗಂಭೀರವಾಗಿ ಕುಳಿತಿರುವುದನ್ನು ನೋಡಿದ ಮರ್ಸಿ, “ಪವನ್ ಅಣ್ಣ, ಈಗ ನಳಿನಿಯನ್ನು ಪ್ರೈವೇಟ್ ವಾರ್ಡ್ ಗೆ ಶಿಫ್ಟ್ ಮಾಡಿದ್ದಾರೆ. ನಾವು ಅಲ್ಲಿಯೇ ಹೋಗಿ ಕುಳಿತುಕೊಂಡು ಮಾತಾಡೋಣ. ಎರಡೂ ಮಕ್ಕಳನ್ನು ನೋಡಿ ನೀವು ಖುಷಿಪಡುವಿರಿ. ಇಬ್ಬರೂ ಮಕ್ಕಳು ಬಹಳ ಮುದ್ದಾಗಿದ್ದಾರೆ. ನಾನು ಅವರಿಗೆ ನಾಮಕರಣ ಕೂಡ ಮಾಡಿದ್ದೇನೆ. ಸೀತಾ ಮತ್ತು ಗೀತಾ,” ಎಂದು ಹೇಳಿದಳು.
ಅವರು ಅಲ್ಲಿಂದ ಎದ್ದು ಪ್ರೈವೇಟ್ ರೂಮಿನ ಕಡೆ ಹೊರಟರು. ದೀರ್ಘಾವಧಿ ಹೆರಿಗೆಯ ಬಳಿಕದ ದಣಿವು. ಆದರೆ ಅಕ್ಕಪಕ್ಕ ಮಕ್ಕಳು ಖುಷಿ ಖುಷಿಯಿಂದ ಕಾಲು ಬಡಿಯುತ್ತಿರುವುದನ್ನು ನೋಡಿ ಅವಳು ನಿದ್ರೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಪವನ್ ನನ್ನು ನಳಿನಿಯ ಬೆಡ್ ಬಳಿ ಕುಳಿತುಕೊಳ್ಳಲು ಕುರ್ಚಿ ಕೊಟ್ಟ ಮರ್ಸಿ, “ನಾಳೆ ಆನ್ ಲೈನ್ ಕ್ಲಾಸ್ ಮುಗಿಸಿಕೊಂಡು ಪುನಃ ಬರುತ್ತೇವೆ,” ಎಂದು ಹೇಳಿ ಇಬ್ಬರೂ ಹೊರಟರು.
ಆ ಬಳಿಕದ ದಿನಗಳಲ್ಲಿ ರಾಬರ್ಟ್ ನಂತೂ ಕ್ರಿಶ್ಚಿಯನ್ ವೆಲ್ ಫೇರ್ ಸೊಸೈಟಿಯ ಚೇರ್ ಮನ್ ಆಗಿರುವ ಕಾರಣದಿಂದ, ಸೊಸೈಟಿಯ ವಾರ್ಷಿಕ ಸಮಾರಂಭ ಆಯೋಜಿಸಲು ವ್ಯಸ್ತನಾಗಿರುವ ಕಾರಣದಿಂದ ಈ ಕಡೆ ಬರಲಾಗಲಿಲ್ಲ. ಆದರೆ ಮರ್ಸಿ ಮಾತ್ರ ನಳಿನಿ ಡಿಸ್ ಚಾರ್ಜ್ ಆಗುವ ತನಕ ಹಾಸ್ಪಿಟಲ್ ಗೆ ಬರುವುದು, ಹೋಗುವುದು ನಡೆದೇ ಇತ್ತು. ಡಿಸ್ ಚಾರ್ಜ್ ಬಳಿಕ ಅವಳೇ ನಳಿನಿಯನ್ನು ಕರೆದುಕೊಂಡು ಅಮ್ಮನ ಮನೆಗೆ ಬಂದಳು. ಅಮ್ಮನ ಬಳಿ ಇದ್ದರೆ ಮಾತ್ರ ಅವಳಿಗೆ ಸರಿಯಾದ ನಿಗಾ ಸಿಗುತ್ತದೆಂದು ಅವಳಿಗೆ ಅನಿಸಿತು.
ಆ ಬಳಿಕ ಅಮ್ಮನ ಮನೆಯಲ್ಲಿ ನಳಿನಿಯನ್ನು ಭೇಟಿಯಾಗಲು ಮರ್ಸಿ ಬಂದಾಗ, ಪವನ್ ಬಹಳ ಗಂಭೀರ ಯೋಚನೆಯಲ್ಲಿ ತನ್ನೊಳಗೆ ತಾನು ಕಳೆದುಹೋಗಿರುವುದು ಕಂಡುಬಂತು.
ಪವನ್ ತನ್ನ ಹೆಚ್ಚಿನ ಸಮಯವನ್ನು ಬ್ಯಾಂಕಿನಲ್ಲಿ ಕಳೆಯಲು ಶುರು ಮಾಡಿದ್ದ. ಮ್ಯಾನೇಜರ್ ಹುದ್ದೆ ಹೊಣೆಗಾರಿಕೆ ನಿಭಾಯಿಸಿ ತಡವಾಗಿ ಮನೆಗೆ ಬಂದಾಗೆಲ್ಲ ನಳಿನಿಯ ಜೊತೆಗೆ ಮರ್ಸಿ ಕುಳಿತಿರುವುದು ಕಾಣುತ್ತಿತ್ತು. ಪುಟ್ಟ ಮಕ್ಕಳನ್ನು ತನ್ನ ಕೈಗೆತ್ತಿಕೊಳ್ಳುವುದು ಬಿಡಿ, ಅವುಗಳ ಹತ್ತಿರ ಕುಳಿತುಕೊಳ್ಳುವುದೂ ಕೂಡ ತಪ್ಪು ಎಂಬಂತೆ ಪವನ್ ವರ್ತಿಸುತ್ತಿದ್ದ.
ಕಾಲ ಹೀಗೆ ಸರಿಯುತ್ತಿತ್ತು. ಎರಡೂ ಮಕ್ಕಳು ಮರ್ಸಿಯ ಸ್ಪರ್ಶವನ್ನು ಗುರುತಿಸತೊಡಗಿದ್ದವು. ಗುರುತಿಸದೇ ಇರಲು ಹೇಗೆ ಸಾಧ್ಯ? ಅವಳು ಅವರ ದೊಡ್ಡಮ್ಮನೇ ಅಲ್ವಾ? ಮೊದಲು ನಳಿನಿಯ ಅಕ್ಕನಾಗಿ ಅವಳು ಮಮತಾ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದಳು. ಯೂನಿವರ್ಸಿಟಿಯಲ್ಲಿ ಇಂಗ್ಲಿಷ್ ಲಿಟರೇಚರ್ ನಲ್ಲಿ ಎಂ.ಎ ಮಾಡುತ್ತಿದ್ದ ಸಂದರ್ಭದಲ್ಲಿ ಹಸನ್ಮುಖಿ ಸ್ವಭಾವದ ಕಪ್ಪು ಬಣ್ಣದ ರಾಬರ್ಟ್ ಅವಳ ಜೀವನದಲ್ಲಿ ಪ್ರವೇಶಿಸಿದ್ದ. ಅಮ್ಮ ಹಾಗೂ ಮಾವಂದಿರ ವಿರೋಧದ ನಡುವೆಯೂ ಅವಳು ರಾಬರ್ಟ್ ನನ್ನು ಮದುವೆಯಾಗಿ ಕ್ರೈಸ್ತ ಧರ್ಮ ಸ್ವೀಕರಿಸಿದಳು.
ತಂದೆ ಬಹಳ ಮೊದಲೇ ಈ ಜಗತ್ತನ್ನು ಬಿಟ್ಟು ಹೋಗಿದ್ದರು. ಆ ಬಳಿಕ ಅವಿಭಕ್ತ ಕುಟುಂಬದಲ್ಲಿ ಮಗಳೊಬ್ಬಳು ವಿದೇಶಕ್ಕೆ ಹೋಗಿ ನೆಲೆಸಿದ್ದರಿಂದ ಚಿಕ್ಕಮ್ಮ ಕೂಡ ಹೆಚ್ಚು ದಿನ ಉಳಿಯಲಿಲ್ಲ. ತಮ್ಮಿಬ್ಬರು ಮಕ್ಕಳು ಹಾಗೂ ಮೈದುನನ ಜವಾಬ್ದಾರಿಯನ್ನು ಕೂಡ ಹೊರಬೇಕಾಗಿ ಬಂತು.
ನಳಿನಿ ಹಾಗೂ ಮಮತಾರ ತಂದೆಯ ಸಾವಿನ ಬಳಿಕ ಚಿಕ್ಕಪ್ಪನೇ ಅವರ ಜವಾಬ್ದಾರಿಯನ್ನು ನಿಭಾಯಿಸಿದ್ದರು. ಮಮತಾ ಮರ್ಸಿಯಾದಾಗ, ಆರಂಭದಲ್ಲಿ ಒಂದಿಷ್ಟು ಬೇಸರಪಟ್ಟುಕೊಂಡಿದ್ದ. ಆ ಬಳಿಕ ಅಲ್ಸರ್ ನ ಆಪರೇಶನ್ ಗಾಗಿ ನಳಿನಿ ಮರ್ಸಿಯ ಬಳಿ ಪರಾಮರ್ಶೆ ಮಾಡಿದಾಗ, ರಾಬರ್ಟ್ ತನ್ನ ಪರಿಚಯದ ಪ್ರಭಾವದಿಂದ ತನ್ನದೇ ಸೊಸೈಟಿಯ ಚಾರಿಟೆಬಲ್ ಹಾಸ್ಪಿಟಲ್ ಗೆ ಕರೆದುಕೊಂಡು ಹೋಗಿ ಆಪರೇಷನ್ ಮಾಡಿಸಿದ್ದರಿಂದಾಗಿ ಮರ್ಸಿ ಹಾಗೂ ರಾಬರ್ಟ್ ಬಗೆಗೆ ಅಷ್ಟಿಷ್ಟು ಒಲವು ತೋರಿಸತೊಡಗಿದ. ಆ ಬಳಿಕ ಮರ್ಸಿ ಹಾಗೂ ರಾಬರ್ಟ್ ಇಬ್ಬರೂ ಅವರ ಮನೆಗೆ ಆಗಾಗ ಹೋಗುವುದು ಬರುವುದು ನಡೆದಿತ್ತು. ಆದರೆ ಅವರ ಚಿಕ್ಕಪ್ಪ ಹೆಚ್ಚು ದಿನ ಬದುಕಲಿಲ್ಲ.
ಪವನ್ ಬ್ಯಾಂಕಿನಲ್ಲಿ ಆಫೀಸರ್ ಆಗಿ ನೇಮಕಗೊಂಡ ಬಳಿಕ ಆರಂಭದ ಒಂದಷ್ಟು ದಿನ ರಾಬರ್ಟ್ ವೆಲ್ ಫೇರ್ ಸೊಸೈಟಿಯ ಗೆಸ್ಟ್ ಹೌಸ್ ನಲ್ಲಿ ಉಳಿದುಕೊಳ್ಳುತ್ತಿದ್ದ.
ಅದೊಂದು ದಿನ ರಾಬರ್ಟ್ ಮರ್ಸಿಯ ಜೊತೆಗೆ ನಳಿನಿ ಎಂಎಸ್ಸಿ ಡಿಗ್ರಿ ಪಡೆದುಕೊಂಡದ್ದಕ್ಕಾಗಿ ಅಭಿನಂದನೆ ಹೇಳಲು ಬಂದಾಗ ಮರ್ಸಿಯ ಅಮ್ಮ , “ಮರ್ಸಿ ನೀನು ನಳಿನಿಗೂ ರಾಬರ್ಟ್ ನಂಥ ಒಬ್ಬ ಹುಡುಗನನ್ನು ಹುಡುಕು ನನಗೂ ವಯಸ್ಸಾಯಿತು. ಯಾವಾಗ ಏನು ಹೇಳೋಕೂ ಆಗದು. ಮನಸ್ಸಿನಲ್ಲಿ ಯಾವುದಾದರೂ ಇಚ್ಛೆ ಹಾಗೆಯೇ ಬಾಕಿ ಉಳಿದರೆ, ಆಗ ಮನಸ್ಸು ಏಕಾಂಗಿಯಾಗಿ ಸುತ್ತುತ್ತಾ ಇರುತ್ತದೆ.”
ಅತ್ತೆಯ ಮಾತು ಕೇಳಿಸಿಕೊಂಡು ರಾಬರ್ಟ್ ಜೋರಾಗಿ ನಗುತ್ತಾ, “ಜೀವ ಸತ್ತಾಗ, ಅದು ಮನಸ್ಸನ್ನು ಕೂಡ ತನ್ನೊಂದಿಗೆ ತೆಗೆದುಕೊಂಡು ಹೋಗುತ್ತದೆ. ಮನಸ್ಸೂ ಜೊತೆಗೆ ಹೋದಾಗ ಸುತ್ತಾಡುವವರು ಯಾರು?”
“ಏನ್ರಿ ನೀವು….? ಅತ್ತೆಯ ಜೊತೆಗೂ ಬೆಟಿಂಗ್ ಕಟ್ಟಲು ಶುರು ಮಾಡಿದ್ರಾ. ನಿಮ್ಮ ದೃಷ್ಟಿಯಲ್ಲಿ ಯಾರಾದ್ರೂ ಹುಡುಗರಿದ್ರೆ ಹೇಳ್ತೀರಾ?”
ಮರ್ಸಿ ಹೀಗೆ ಹೇಳಿದಾಗ ರಾಬರ್ಟ್ ಕಣ್ಣು ಪಿಳುಕಿಸದೆ ನಳಿನಿಯನ್ನು ನೋಡತೊಡಗಿದ.
ತನ್ನತ್ತ ಹೀಗೆ ದಿಟ್ಟಿಸಿ ನೋಡುವುದನ್ನು ಕಂಡ ನಳಿನಿ, “ನೀವೇಕೆ ನನ್ನನ್ನು ಹಾಗೆ ನೋಡುತ್ತಿದ್ದೀರಿ?” ಎಂದು ಕೇಳಿದಳು.
“ನಾನು ನಿನ್ನನ್ನು ಹಾಗೇ ನೋಡಲು ಕಾರಣ ಇಷ್ಟೇ. ಇಷ್ಟೊಂದು ಬೆಳ್ಳಗಿನ ಸುಂದರ ಕಾಯದ ಬೆಡಗಿಗೆ ಯಾವೊಬ್ಬ ಹುಡುಗರೂ ಯಾಕೆ ಬಲೆಗೆ ಬಿದ್ದಿಲ್ಲ ಅಂತ ಯೋಚಿಸುತ್ತಿರುವೆ.”
“ನನ್ನ ಹೆಸರು ನಳಿನಿ, ಮಮತಾ ಅಲ್ಲ. ಯಾರಾದರೂ ಅವಳನ್ನು ಬಲೆಗೆ ಬೀಳಿಸೋಕೆ.”
“ಸರಿ ಸರಿ ನನ್ನ ಫ್ರೆಂಡ್ ಒಬ್ಬ ಬ್ಯಾಂಕಿನಲ್ಲಿ ಪಿ.ಓ. ಅವನೂ ಸಹ ಹೇಳ್ತಿರ್ತಾನೆ ತನ್ನನ್ನು ಯಾವ ಹುಡುಗಿಯೂ ಮರುಳು ಮಾಡಲು ಸಾಧ್ಯವಿಲ್ಲವೆಂದು. ಒಂದು ಆಶ್ಚರ್ಯದ ಸಂಗತಿಯೆಂದರೆ, ಅವನು ಬಹಳ ಸ್ಮಾಟ್, ಗುಡ್ ಲುಕಿಂಗ್, ಅವನನ್ನು ಮರ್ಸಿ ಚೆನ್ನಾಗಿ ಬಲ್ಲಳು.”
“ಹಾಗಾದರೆ ಅವನ ಜೊತೆ ಮಾತಾಡಿ ನೋಡಿ. ಅವನಿಗೆ ನಳಿನಿ ಇಷ್ಟಾದರೂ ಆಗಬಹುದು.”
“ಅತ್ತೆ, ನನಗೆ ಪರಿಪೂರ್ಣ ವಿಶ್ವಾಸವಿದೆ. ಆತ ನಳಿನಿಯನ್ನು ರಿಜೆಕ್ಟ್ ಮಾಡಲು ಸಾಧ್ಯವೇ ಇಲ್ಲ.”
ಅದು ನಿಜವೇ ಆಯಿತು. ಪವನ್ ಗೆ ಪ್ರಥಮ ಭೇಟಿಯಲ್ಲೇ ನಳಿನಿ ಇಷ್ಟವಾದಳು. ಇಬ್ಬರ ಮದುವೆ ಮಾಡಲು ರಾಬರ್ಟ್ ಬಹು ದೊಡ್ಡ ಜವಾಬ್ದಾರಿ ನಿಭಾಯಿಸಿದ. ಮದುವೆಯ ಬಳಿಕ ನಳಿನಿ ತನ್ನ ಅತ್ತೆ ಮನೆಯಲ್ಲಿ ಕೆಲವು ದಿನ ಉಳಿದು, ಬ್ಯಾಂಕ್ ನಿಂದ ಕೊಡಲ್ಪಟ್ಟ ಆಫೀಸ್ ಕ್ವಾರ್ಟರ್ಸ್ ಗೆ ಬಂದಳು.
ರಾಬರ್ಟ್ ಹಾಗೂ ಮರ್ಸಿ ಮೇಲಿಂದ ಮೇಲೆ ಅವರನ್ನು ಭೇಟಿ ಆಗಲು ಬರುತ್ತಿದ್ದರು. ಕೆಲವೊಮ್ಮೆ ರಾಬರ್ಟ್ ಏಕಾಂಗಿಯಾಗಿ ತನ್ನ ಹೆಂಡತಿಯ ತಂಗಿಯ ಮನೆಗೆ ಕಾಫಿ ಕುಡಿಯಲೆಂದು ಬರುತ್ತಿದ್ದ.
ರಾಬರ್ಟ್ ಹಸನ್ಮುಖಿ ಸ್ವಭಾವದ. ಮಾತು ಮಾತಿನಲ್ಲಿಯೇ ಯಾರೊಂದಿಗಾದರೂ ಬೆಟ್ ಕಟ್ಟುತ್ತಿದ್ದ. ನಳಿನಿಗೆ ಅಕ್ಕನ ಗಂಡ ಹಾಗೂ ನಾದಿನಿಯ ಸಂಬಂಧದ ಸಲಿಗೆಯಂತೂ ಇದ್ದೇ ಇತ್ತು. ಜೊತೆಗೆ ನಳಿನಿಗೆ ಹುಡುಗನನ್ನು ಹುಡುಕಲು ನೆರವಾಗಿದ್ದನೆಂಬ ಕಾರಣದಿಂದ ರಾಬರ್ಟ್ ಬಗ್ಗೆ ನಳಿನಿಯ ಅಮ್ಮನಿಗೆ ಗೌರವ ಕೂಡ ಇತ್ತು.
ಕಾಲಕ್ರಮೇಣ ನಳಿನಿ ಗರ್ಭ ಧರಿಸಿದಳು. ಡಾಕ್ಟರ್ ಡಿಸೋಜಾ ನಳಿನಿಯನ್ನು ಪರೀಕ್ಷಿಸಿ, ಅವಳ ಹೊಟ್ಟೆಯಲ್ಲಿ ಅವಳಿಗಳು ಬೆಳೆಯುತ್ತಿವೆ ಎಂದು ಪವನ್ ಗೆ ತಿಳಿಸಿದ್ದರು.
ಆಗಿನಿಂದ ಪವನ್ ಒಂದು ವಿಚಿತ್ರ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದ. ನಳಿನಿ ಅವನಿಗೆ ತಿಳಿಸಿ ಹೇಳುತ್ತಿದ್ದಳು, “ನೀವಂತೂ ಹೇಗೆ ಗಾಬರಿಗೊಳ್ಳುತ್ತಿರುವಿರಿ ಎಂದರೆ, ನೀವೇ ಗರ್ಭ ಧರಿಸಿರುವೆತೆ.”
“ನಿನಗೆ ತಮಾಷೆ ಹೊಳೆಯುತ್ತಿದೆ. ನನಗೆ ಮಾತ್ರ ಚಿಂತೆ ಆಗ್ತಿದೆ. ತೆಳ್ಳನೆಯ ಕಾಯದ ನೀನು ಅದ್ಹೇಗೆ ಎರಡೆರಡು ಮಕ್ಕಳನ್ನು ಸಂಭಾಳಿಸ್ತಿಯಾ ಅಂತ.”
“ಗರ್ಭಕೋಶದ ಬಗ್ಗೆ ನನಗೆ ಗೊತ್ತಿರೊ ಮಾಹಿತಿಯ ಪ್ರಕಾರ, ಅದು ಅಗತ್ಯಕ್ಕೆ ತಕ್ಕಂತೆ ತನ್ನ ಗಾತ್ರ ಬದಲಿಸಿಕೊಳ್ಳಬಲ್ಲದು. ಈ ಜಗತ್ತಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಿರುವುದು ನಾನೊಬ್ಳೇನಾ?”
9 ತಿಂಗಳು ಹೇಗೆ ಕಳೆದವೋ…. ಪವನ್ ಗೆ ಗೊತ್ತೇ ಆಗಲಿಲ್ಲ. ಅಂದಹಾಗೆ ನಳಿನಿ ತನ್ನ ಹೊಟ್ಟೆಯಲ್ಲಾಗುವ ಚಲನವಲನಗಳನ್ನು ಬಹಳ ಕುತೂಹಲದಿಂದ ಗಮನಿಸುತ್ತಿದ್ದಳು. ಅವಳು ಆ ನೋವನ್ನು ಕೂಡ ಬಹಳ ಹಿತಕರ ಎಂಬಂತೆ ಅನುಭವಿಸುತ್ತಿದ್ದಳು.
ಅದರ ಪರಿಣಾಮ ಈಗ ಎದುರಿಗಿತ್ತು. ಇಬ್ಬರೂ ಪುಟ್ಟ ಕಂದಮ್ಮಗಳನ್ನು ಎತ್ತಿಕೊಂಡು ತನ್ನ ಅನುಭವಿ ಅಮ್ಮನ ಮನೆಗೆ ಹೋಗಿದ್ದಳು. ಮರ್ಸಿ ದಿನ ಆ ಮನೆಗೆ ಬಂದು ಹೋಗಿ ಮಾಡುತ್ತಿದ್ದಳು.
ಮಕ್ಕಳು ರಾತ್ರಿ ಹೊತ್ತು ಅಳುತ್ತಿದ್ದವು. ಅಮ್ಮನ ಉಸ್ತುವಾರಿಯಲ್ಲಿ ಸೀತಾ ಹಾಗೂ ಗೀತಾ ಬೆಳಯತೊಡಗಿದರು, ರಾಬರ್ಟ್ ಕೂಡ ಆಗಾಗ ಅಲ್ಲಿಗೆ ಬಂದು ಎಲ್ಲರ ಮನಸ್ಸು ಗೆಲ್ಲುವಂತಹ ಮಾತಾಡುತ್ತಿದ್ದ. ಅವನು ನಳಿನಿಗೆ, “ಪವನ್ ಯಾವಾಗ ಬ್ಯಾಂಕ್ ನಿಂದ ವಾಪಸ್ಸಾಗುತ್ತಾನೆ?” ಕೇಳಿದ.
ಅವಳ ಇಳಿದುಹೋದ ಮುಖ ಕಂಡು ಅವನು ಅಮ್ಮನಿಗೆ, “ಅತ್ತೆ, ನಾನು ಈ ಕಡೆ ಬಂದಾಗೆಲ್ಲ, ಪವನ್ ನ ಭೇಟಿಯೇ ಆಗ್ತಿಲ್ಲ.”
“ಹೌದು ರಾಬರ್ಟ್. ವಾರದ ಹಿಂದೆ ಅವನು ಇಲ್ಲಿಗೆ ಬಂದಾಗ, ಇತ್ತೀಚೆಗೆ ಬ್ಯಾಂಕಿನಲ್ಲಿ ಕೆಲಸದ ಒತ್ತಡ ಹೆಚ್ಚಾಗಿದೆ ಎಂದು ಹೇಳುತ್ತಿದ್ದ. ಸರ್ಕಾರ ಎಷ್ಟೊಂದು ಹಣಕಾಸು ಯೋಜನೆಗಳನ್ನು ತಂದಿವೆಯೆಂದರೆ ಸಾಲ ವಿತರಣೆ ಹಾಗೂ ಫಲಾನುಭವಿಗಳಿಗೆ ಸರ್ಕಾರಿ ಅನುದಾನವನ್ನು ಹಂಚಿಕೆ ಮಾಡುವುದರಲ್ಲಿ ಎಷ್ಟೊಂದು ದಣಿದು ಹೋಗುತ್ತಾನೆಂದರೆ, ರಾತ್ರಿ ಅಲ್ಲಿಯೇ ಗೆಸ್ಟ್ ಹೌಸ್ ನಲ್ಲಿ ಉಳಿದುಕೊಂಡುಬಿಡುತ್ತಾನೆ.”
“ಮತ್ತೆ ಊಟ ತಿಂಡಿ?”
“ಅಲ್ಲಿನ ಬ್ಯಾಂಕ್ ಕ್ಯಾಂಟೀನ್ ನಲ್ಲೇ ತಿನ್ನುತ್ತಾರೆ,” ಈ ಸಲ ನಳಿನಿ ಮಾತನಾಡಿದಳು.
“ಸರಿ,” ಎಂದು ಹೇಳುತ್ತಾ, ರಾಬರ್ಟ್ ಎರಡೂ ಮಕ್ಕಳನ್ನು ಸರದಿ ಪ್ರಕಾರ ಎತ್ತಿಕೊಂಡು ಬಳಿಕ ಅಮ್ಮನ ಕೈಗೆ ಕೊಟ್ಟು, ನಳಿನಿ ಮಾಡಿದ ಕಾಫಿ ಕುಡಿದು ಅಲ್ಲಿಂದ ಹೊರಟ.
ಮರುದಿನ ಅವನು ನೇರವಾಗಿ ಬ್ಯಾಂಕ್ ತಲುಪಿದ. ಅಲ್ಲಿನ ಸಿಬ್ಬಂದಿಯರನ್ನು ವಿಚಾರಿಸಿದಾಗ, ಕಳೆದ 10 ದಿನಗಳಿಂದ ಅವನು ರಜೆಯಲ್ಲಿದ್ದಾನೆಂದು ತಿಳಿಯಿತು. ಅವನು ಅವರಿಗೆ ಏನೊಂದು ಉತ್ತರ ಕೊಡದೇ ಅಲ್ಲಿಂದ ಪಾರ್ಕಿಂಗ್ ಗೆ ಬಂದು, ಕಾರಿನಲ್ಲಿ ಕುಳಿತು ಗಾಢ ಯೋಚನೆಯಲ್ಲಿ ಮುಳುಗಿದ.
10 ದಿನಗಳ ಹಿಂದಷ್ಟೇ ಮರ್ಸಿಗೆ ಅಮ್ಮನ ಮನೆಯಲ್ಲಿ ಅವನ ಭೇಟಿಯಾಗಿತ್ತು. ಅವನು ಗಡ್ಡ ಬೆಳೆಸಿದ್ದಾನೆ. ಅವನು ಏನು ಯೋಚನೆ ಮಾಡುತ್ತಿರಬಹುದು ಗೊತ್ತಾಗುತ್ತಿಲ್ಲ ಎಂದು ಮರ್ಸಿ ಹೇಳಿದಳು. ನಳಿನಿ ಅವನನ್ನು ಏನಾದರೂ ಕೇಳಿದರೆ, ಅವನು ವಿಚಿತ್ರ ದೃಷ್ಟಿಯಿಂದ ಅವಳತ್ತ ನೋಡುತ್ತಿದ್ದ.
ಅವಳು ಎಂದಾದರೂ ಮಕ್ಕಳನ್ನು ಅವನೆದುರು ತೆಗೆದುಕೊಂಡು ಹೋದರೆ, ಅವನು ಜೋರಾಗಿ ಅರಚುತ್ತಿದ್ದ, “ಈ ಮಕ್ಕಳನ್ನು ನನ್ನ ಕಣ್ಮುಂದೆ ತರಬೇಡ. ನನಗೆ ಈ ಮಕ್ಕಳ ಬಗ್ಗೆ ಯಾವುದೇ ಒಲವು ಇಲ್ಲ.”
“ರಾಬರ್ಟ್, ಪವನ್ ಮನೆಗೆ ಬರುವುದನ್ನೇ ನಿಲ್ಲಿಸಿಬಿಟ್ಟಿದ್ದಾನೆ. ನಳಿನಿಯ ನಂಬರ್ ನ್ನು ಬ್ಲಾಕ್ ಮಾಡಿದ್ದಾನೆ,” ಮರ್ಸಿಯೇ ಅವನಿಗೆ ಎಲ್ಲ ವಿಷಯವನ್ನು ತಿಳಿಸಿದ್ದಳು. ಕಾರಿನಲ್ಲಿ ಕುಳಿತ ರಾಬರ್ಟ್ ಪುನಃ ಯೋಚನೆಯಲ್ಲಿ ಮುಳುಗಿದ.
ಬ್ಯಾಂಕಿನ ಕೆಲಸದ ಒತ್ತಡ ಕೂಡ ಅರಿವಿಗೆ ಬರುತ್ತದೆ. ಆದರೆ ತನ್ನ ಹೆಂಡತಿ ಹಾಗೂ ಹುಟ್ಟಿದ ಮಕ್ಕಳನ್ನು ನೋಡದೆ ಹೇಗಿರುತ್ತಾನೆ? ಅವನು ರಜೆ ಪಡೆದು ಎಲ್ಲಿಗೆ ಹೋಗಿರಬಹುದು? 5 ದಿನಗಳಿಂದ ಮನೆಗೆ ಬಂದಿಲ್ಲ. ಅಂದರೆ ಅವನು ರಜೆ ಪಡೆದು 5 ದಿನಗಳಾಗಿವೆ.
ಆಕಸ್ಮಿಕವಾಗಿ ಅವನ ಗಮನ ಎರಡೂ ಮಕ್ಕಳತ್ತ ಹೋಯಿತು. ಮಕ್ಕಳು ಕಪ್ಪಗೆ ಹುಟ್ಟಿರುವುದು ಅವನು ದೂರ ಓಡಿಹೋಗಲು ಕಾರಣ ಆಗಿರಬಹುದೇ? ಕಪ್ಪಾಗಿ ಹುಟ್ಟುವುದು ಶಾಪವೇ? ನಾನೂ ಕಪ್ಪಾಗಿ ಇಲ್ವೆ? ನನ್ನ ತಾಯಿ ತಂದೆ ಇರುವಷ್ಟು ದಿನ ಅವರಿಗೆ ಇದರ ಅನುಭವ ಕೂಡ ಆಗಲಿಲ್ಲ. ತನಗೂ ಮುಂಚೆ ನೀಗ್ರೊಗಳ ಹಾಗಿರುವ ಮಗು ನಮ್ಮ ಕುಟುಂಬದಲ್ಲಿ ಜನಿಸಿರಲಿಲ್ಲ. ಎಷ್ಟೊಂದು ಚೆನ್ನಾಗಿ ಪಾಲನೆ ಪೋಷಣೆ ಮಾಡಿದರು. ಉನ್ನತ ಶಿಕ್ಷಣ ಕೊಡಿಸಿದರು. ಚರ್ಚ್ ನಲ್ಲಿ ಫಾದರ್ ಆಗಿರುವುದರ ಜೊತೆ ಜೊತೆಗೆ ಮನೆ ಹಾಗೂ ಸಮಾಜದ ಉನ್ನತಿಗಾಗಿ ಯೋಚಿಸಿದೆ. ಚಾರಿಟೆಬಲ್ ಟ್ರಸ್ಟ್ ಮುಖಾಂತರ ಹಾಸ್ಪಿಟಲ್ ಹಾಗೂ ಶಾಲೆ ಕಾಲೇಜು ನಿರ್ಮಿಸಿದೆ. ನನಗೇನಾದರೂ ಇವತ್ತು ಆದರ ಗೌರವ ಇದೆಯೆಂದರೆ, ಅವುಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋದ ಕಾರಣದಿಂದಲೇ ಅಲ್ವೇ?
ಆದರೆ ಈ ಪವನ್ ಎಲ್ಲಿಗೆ ಹೋದ? ತನ್ನೊಂದಿಗೆ ಆಪ್ತ ಸ್ನೇಹದ ಕಾರಣದಿಂದ ಅವನು ತನ್ನ ಪ್ರತಿಯೊಂದು ಖುಷಿ ಹಾಗೂ ಅಂತರಂಗದ ಎಷ್ಟೋ ವಿಷಯಗಳನ್ನು ಶೇರ್ ಮಾಡಿದ್ದಾನೆ. ಆದರೆ ಈ ಸಲ ಅವನ ಮನಸ್ಸಿನಲ್ಲಿ ಅಂಥದ್ದೇನು ಓಡ್ತಿದೆ, ತನಗೆ ಫೋನ್ ಕೂಡ ಮಾಡ್ತಿಲ್ಲ.
ಫೋನ್‌ವಿಚಾರ ಬರ್ತಿದ್ದಂತೆ ರಾಬರ್ಟ್ ತನ್ನ ಮೊಬೈಲ್ ಕೈಗೆತ್ತಿಕೊಂಡು ಪವನ್ ನ ನಂಬರ್ ಗೆ ಡಯೆಲ್ ಮಾಡಿದ. ಅದು ಔಟ್ ಆಫ್ ನೆಟ್ ವರ್ಕ್ ಏರಿಯಾ ಎಂದು ಬಂತು. ಅದನ್ನು ಕೇಳಿಸಿಕೊಂಡು ಅವನ ಮನಸ್ಸು ತಳಮಳಗೊಂಡಿತು.
ರಾಬರ್ಟ್ ಕಾರು ಸ್ಟಾರ್ಟ್ ಮಾಡಿದ. ಈ ವಿಷಯ ಮರ್ಸಿಗೆ ತಿಳಿಸಿದಾಗ, ಅವಳೂ ಕೂಡ ಚಿಂತಿತಳಾದಳು. ನಂತರ ಹೇಳಿದಳು, “ನಾವು ಈಗಲೇ ನಳಿನಿಯ ಬಳಿ ಹೋಗೋಣ. ಅವಳಿಗೆ ಏನಾದರೂ ಮೆಸೇಜ್ ಬಂದರೂ ಬಂದಿರಬಹುದು.”
ಇಬ್ಬರೂ ಒಂದೊಳ್ಳೆ ನಿರೀಕ್ಷೆ ಇಟ್ಟುಕೊಂಡು ಅವಳ ಬಳಿ ಹೋದರು. ಒಂದೂವರೆ ತಿಂಗಳ ಹಿಂದೆ ಹುಟ್ಟಿದ ಎರಡು ಮಕ್ಕಳನ್ನು ನೋಡುತ್ತಾ ರಾಬರ್ಟ್ ಮರ್ಸಿ ಖುಷಿಯಿಂದ ನಲಿಯ ತೊಡಗಿದರು.
ಆದರೆ ನಳಿನಿಯ ಮುಖ ಉದಾಸಗೊಂಡಿತ್ತು. ಅವಳ ಕಣ್ಣುಗಳನ್ನು ನೋಡಿದರೆ, ಅವಳು ರಾತ್ರಿಯಿಡೀ ಅತ್ತಿದ್ದಾಳೆಂದು ಗೊತ್ತಾಗುತ್ತಿತ್ತು.
ಮರ್ಸಿ ಅನಳನ್ನು ಪ್ರತ್ಯೇಕನಗಿ ರೂಮಿಗೆ ಕರೆದುಕೊಂಡು ಹೋಗಿ ಕೆದಕಿ ಕೇಳಿದಳು, “ನೀನೆಂಥ ಪರಿಸ್ಥಿತಿ ತಂದುಕೊಂಡೆ? ಮತ್ತು ಈ ಪವನ್‌ನಿನಗೆ ಹೇಳದೇ ಕೇಳದೆ ಎಲ್ಲಿಗೆ ಹೋಗಲು ಸಾಧ್ಯ? ನಿನಗೆ ಅವನು ಏನಾದರೂ ಕಾರಣ ತಿಳಿಸಿದ್ದಾನೆಯೇ?”
ನಳಿನಿ ಏನೂ ಮಾತನಾಡಲಿಲ್ಲ. ಅವಳು ಕೊರಿಯರ್ ನಿಂದ ಬಂದ ಒಂದು ಪತ್ರವನ್ನು ಮರ್ಸಿಗೆ ಕೊಟ್ಟಳು. ಪತ್ರ ಓದಿ ಮರ್ಸಿ ಚಿಂತಿತಳಾದಳು. `ಇದು ನಿಜ ಆಗಿರಬಹುದಾ? ನಾನು ಈ ಮುಂಚೆ ಭಾವ ನಾದಿನಿಯ ಸಂಬಂಧದ ಬಗ್ಗೆ ಸಾಕಷ್ಟು ಕೇಳಿದ್ದೇನೆ. ಪವನ್ ನ ಸಂದೇಹ ನಿಜ ಕೂಡ ಆಗಿರಬಹುದು. ರಾಬರ್ಟ್ ನ ಬಣ್ಣವನ್ನು ನಿಖರವಾಗಿ ಹೋಲುವ ಮಕ್ಕಳು. ರಾಬರ್ಟ್‌ಹಾಗೂ ನಳಿನಿಯ ಅಂತರಂಗದ ಸಂಬಂಧದ ಪರಿಣಾಮ ಆಗಿರಬಹುದಾ?`
ರಾಬರ್ಟ್‌ಆಗಾಗ ಆಫೀಸರ್ಸ್‌ಕ್ವಾರ್ಟರ್ಸ್ ನಲ್ಲಿದ್ದ ನಳಿನಿ ಪವನ್ ರ ಮನೆಗೆ ಕಾಫಿ ಕುಡಿಯಲೆಂದು ಹೋಗುತ್ತಿದ್ದ. ಅವನು ಬೆಟಿಂಗ್‌ಕಟ್ಟುವುದರ ಜೊತೆ ಜೊತೆಗೆ ಆಕರ್ಷಕವಾಗಿ ಮಾತನಾಡುವುದರ ಮೂಲಕ ಅನನು ಯಾರನ್ನಾದರೂ ತನ್ನ ಬಲೆಗೆ ಬೀಳಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದ. ಬಹಳ ಹಿಂದೆ ಅಂದರೆ ಮದುವೆಗೆ ಮುಂಚೆ ಅವಳೂ ಕೂಡ ತನ್ನ ಸರ್ವಸ್ವವನ್ನು ರಾಬರ್ಟ್ ಗೆ ಒಪ್ಪಿಸಿದ್ದಳು. ನಳಿನಿ ಕೂಡ ಅವನ ಪ್ರೇಮಜಾಲದಲ್ಲಿ ಸಿಲುಕಿರಬಹುದೇ?’ ಅವಳು ಪತ್ರ ಓದುತ್ತಾ, ಓದುತ್ತಾ ಸ್ವಲ್ಪ ಹೊತ್ತು ನಳಿನಿಯ ಮುಖ ನೋಡತೊಡಗಿದಳು.
ಅತ್ತ ಅಮ್ಮನ ಕೋಣೆಯಲ್ಲಿ ರಾಬರ್ಟ್‌ಮಕ್ಕಳೊಂದಿಗೆ ಹೇಗೆ ಮಾತಿನಲ್ಲಿ ತಲ್ಲೀನನಾಗಿದ್ದನೆಂದರೆ, ಆ ಮಕ್ಕಳು ಅವನ ಮಾತನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂಬಂತೆ.
ಆಗ ಆಕಸ್ಮಿಕಾಗಿ ಬಾಗಿಲಿನಿಂದ ಒಳಗೆ ನುಗ್ಗುತ್ತಾ ಜೋರಾಗಿ ಕಿರುಚಿದ ಪವನ್ ನ ಧ್ವನಿ ಪ್ರತಿಧ್ವನಿಸಿತು. ಮರ್ಸಿ ಹಾಗೂ ನಳಿನಿ ಕೂಡ ಪವನ್ ನ ಕೋಪಭರಿತ ಆಕ್ರೋಶದಿಂದ ಕೂಡಿದ ಧ್ವನಿ ಕೇಳಿಸಿಕೊಂಡು ತಮ್ಮ ಮಾತನ್ನು ಅಲ್ಲಿಗೇ ನಿಲ್ಲಿಸಿ, ಅಮ್ಮನ ಕೋಣೆಗೆ ಗಾಬರಿಯಿಂದ ಹೆಜ್ಜೆ ಹಾಕಿದರು.
ಬೆಳೆದ ಗಡ್ಡ, ಮದ್ಯದ ನಶೆಯಲ್ಲಿ ಮುಳುಗಿದ್ದ ಕೆಂಪು ಕಣ್ಣುಗಳು, ಬಾಯಿಯಿಂದ ಹೊರಬರುತ್ತಿದ್ದ ಬೈಗುಳದ ಮಾತುಗಳು. ಪವನ್ ವೇಗವಾಗಿ ಹೆಜ್ಜೆ ಹಾಕುತ್ತ ರಾಬರ್ಟ್ ನತ್ತ ಬರುತ್ತಿದ್ದ. ಅವನೆರಡು ಕೈಗಳು ರಾಬರ್ಟ್ ನ ಕುತ್ತಿಗೆಗೆ ಹೋಗುವ ಮೊದಲೇ ನಳಿನಿ ಹಾಗೂ ಮರ್ಸಿ ಮಧ್ಯೆ ಪ್ರವೇಶಿಸಿದರು. ಅವರು ತಮ್ಮೆಲ್ಲ ಶಕ್ತಿ ಉಪಯೋಗಿಸಿ ಪವನ್‌ರಾಬರ್ಟ್ ನತ್ತ ಹೋಗುವುದನ್ನು ತಡೆದರು.
ಆಗ ನಳಿನಿ ಕೂಗಿದಳು, “ನಿಮಗೇನು ಹುಚ್ಚಾ? ಅವರ ಜೊತೆ ಹಾಗೇಕೆ ದುರ್ವರ್ತನೆ ತೋರುತ್ತಿರುವಿರಿ? 5 ದಿನಗಳಿಂದ ನೀವು ನನ್ನನ್ನು ಒಂದಿಷ್ಟೂ ವಿಚಾರಿಸಿಕೊಳ್ಳಲಿಲ್ಲ. ಮಕ್ಕಳ ಬಗ್ಗೆಯೂ ಕೇಳಲಿಲ್ಲ. ನೀವು ಸ್ವತಃ ಭೇಟಿ ಆಗಲು ಬರದೇ ಕೊರಿಯರ್ ಮುಖಾಂತರ ಪತ್ರ ಕಳಿಸ್ತೀರಾ? ಅದನ್ನು ಬಹುಶಃ ನೀವು ಮದ್ಯ ಸೇವನೆಯ ನಶೆಯಲ್ಲಿ ವಿವೇಕ ಕಳೆದುಕೊಂಡು ಬರೆದಿದ್ದೀರಿ ಅನಿಸುತ್ತೆ.”
“ನೀನು ಮಧ್ಯೆ ಬರಬೇಡ. ನಿನಗೆ ನಾನು ಆಮೇಲೆ ತಿಳಿಸಿ ಹೇಳ್ತೀನಿ. ಮೊದಲು ಈ ವಿಷಕಾರಿ ಹಾವಿನೊಂದಿಗೆ ಸೆಣಸ್ತೀನಿ. ಇವನು ಸ್ನೇಹಕ್ಕೆ ಕಳಂಕ ತರುವ ವ್ಯಕ್ತಿ. ಕಪ್ಪಗಿರುವ ಇವರೆಡೂ ಶಿಶುಗಳು ಇವನದೇ. ಕಪ್ಪು ಕಾರ್ಯಾಚರಣೆಯ ಫಲ. ನನ್ನ ಮಕ್ಕಳು ಎಂದೂ ಕಪ್ಪಗಿರಲು ಸಾಧ್ಯವೇ ಇಲ್ಲ. ಇಂತಹ ಜನರು ಕುಟುಂಬದ ಹೆಂಗಸರನ್ನು ವೇಶ್ಯೆಯನ್ನಾಗಿಸುತ್ತಾರೆ.”
“ಪವನ್!” ನಳಿನಿ ಹಾಗೂ ಮರ್ಸಿ ಏಕಕಾಲಕ್ಕೆ ಕೂಗಿದರು.
ಅಮ್ಮನಿಗೆ ಏನೊಂದೂ ಅರ್ಥವಾಗುತ್ತಿರಲಿಲ್ಲ. ಅವರು ಸಮೀಪ ಬಂದು, “ಯಾರು ನಿನಗೆ ಇಷ್ಟೊಂದು ಕುಡಿಸಿದರು? ಜೊತೆಗೆ ನೀನು ಏನೇನೋ ಮಾತಾಡ್ತಿದಿಯಲ್ಲ? ಮೊದಲು ನೀನು ರಾಬರ್ಟ್‌ಬಗ್ಗೆ ಬಹಳ ಪ್ರಶಂಸೆ ಮಾಡ್ತಿದ್ದೆಯಲ್ಲ……?”
ರಾಬರ್ಟ್‌ಈವರೆಗೆ ತನ್ನನ್ನು ತಾನು ಸಂಭಾಳಿಸಿಕೊಂಡಿದ್ದ. ಅವನು ಪವನ್‌ಬಳಿಯಿಂದ ಎಲ್ಲರನ್ನೂ ದೂರ ಸರಿಸುತ್ತಾ, ಮರ್ಸಿಗೆ ಹೇಳಿದ, “ಮರ್ಸಿ, ನೀನು ಅಮ್ಮ ಹಾಗೂ ನಳಿನಿಯನ್ನು ಕರೆದುಕೊಂಡು ಒಳಗೆ ಹೋಗು. ನಾನು ಇವನ ತಪ್ಪು ಕಲ್ಪನೆ ನಿವಾರಿಸಿ ಇವನ ಕುಡಿತದ ನಶೆ ಇಳಿಸ್ತೀನಿ.”
ಅಮ್ಮನನ್ನು ಕರೆದಕೊಂಡು ಮರ್ಸಿ ಹಾಗೂ ನಳಿನಿ ಒಂದೇ ತೊಟ್ಟಿಲಲ್ಲಿ ಮಲಗಿದ್ದ ಮಕ್ಕಳ ಹತ್ತಿರವೇ ಇದ್ದ ಮಂಚದ ಮೇಲೆ ಕುಳಿತರು. ಇಬ್ಬರ ನಡುವೆ ಎಲ್ಲಿ ಹೊಡೆದಾಟ ನಡೆದುಬಿಡುತ್ತೊ ಎಂಬ ಹೆದರಿಕೆ ಅವರಲ್ಲಿ ಮನೆ ಮಾಡಿತ್ತು. ಹಾಗಾಗಿ ಅವರ ಗಮನ ಪಕ್ಕದ ಕೋಣೆಯಲ್ಲಿದ್ದ ರಾಬರ್ಟ್‌ಹಾಗೂ ಪವನ್‌ಕಡೆಯೇ ಇತ್ತು.
ಇಬ್ಬರೂ ಮಕ್ಕಳು ಕಾಲನ್ನು ಜೋರಾಗಿ ಮೇಲೆ ಕೆಳಗೆ ಮಾಡುತ್ತಾ ತಮ್ಮಲ್ಲಿ ತಾವು ಮಗ್ನವಾಗಿದ್ದವು. ಸ್ವಲ್ಪ ಹೊತ್ತು ಮುಂಚೆಯಷ್ಟೇ ಮಕ್ಕಳಿಗೆ ನಳಿನಿ ಹೊಟ್ಟೆ ತುಂಬ ಹಾಲುಣಿಸಿದ್ದಳು.
ರಾಬರ್ಟ್‌ಪವನ್ ನ ಕಣ್ಣೊಳಗೆ ಕಣ್ಣಿಟ್ಟು, “ನೀನು ನನ್ನನ್ನು ಹೊಡೆದು ಸಾಯಿಸಬೇಕು ಅಂತೀದಿಯಲ್ಲ. ನಾನು ನಿನ್ನ ಮುಂದೆಯೇ ನಿಂತಿದ್ದೇನೆ. ನಿನಗೆ ಹೇಗೆ ಬೇಕೋ ಹಾಗೆ ಮಾಡು. ಆದರೆ ಯಾವ ಕಾರಣದಿಂದ ನಿನ್ನ ಕಣ್ಣು ಕೆಂಪಾಗಿದೆಯೊ, ಅದಕ್ಕೆ ಕಾರಣ ನಿನ್ನೊಳಗೆ ಮೊಳೆತಿರು ಸಂದೇಹದ ಬೀಜ.
“ಯಾವಾಗ ಈ ಅವಳಿ ಮಕ್ಕಳು ನನ್ನ ಕಪ್ಪು ಬಣ್ಣದ ಹೋಲಿಕೆಯೊಂದಿಗೆ ಹುಟ್ಟಿದವೋ, ಆಗಿನಿಂದ ನಿನಗೆ ನನ್ನ ಹಾಗೂ ನಳಿನಿಯ ಅಕ್ರಮ ಸಂಬಂಧದ ಫಲ ಎಂದೆನಿಸುತ್ತಿದೆ. ಇದೇ ಕಾರಣದಿಂದ ನೀನು ಮಕ್ಕಳು ಹಾಗೂ ಹೆಂಡತಿಯನ್ನು ಅಮ್ಮನ ಮನೆಯಲ್ಲೇ ಬಿಟ್ಟು ಬ್ಯಾಂಕ್‌ಕ್ವಾರ್ಟರ್ಸ್ ನಲ್ಲಿಯೇ ಉಳಿಯಲು ನಿರ್ಧರಿಸಿಬಿಟ್ಟಿರುವೆ ಹಾಗೂ ಯಾರನ್ನೂ ಭೇಟಿಯಾಗಲು ಬರುತ್ತಿಲ್ಲ ಅಲ್ಲವೇ?” ಎಂದು ಕೇಳಿದ.
“ಹೌದು, ನನ್ನ ಯೋಚನೆ ತಪ್ಪಲ್ಲ. ನಳಿನಿಯ ಗರ್ಭದಲ್ಲಿ ನಿನ್ನ ಅಂಶ ಹೋಗದೇ ಇದ್ದಿದ್ದರೆ, ಇಷ್ಟೊಂದು ಕಪ್ಪು ಬಣ್ಣ ಹೊಂದಿರುವ ಮಕ್ಕಳು ಜನಿಸುತ್ತಲೇ ಇರಲಿಲ್ಲ. ನನ್ನ ಅನುಪಸ್ಥಿತಿಯಲ್ಲಿ ನೀನು ಆಗಾಗ ಅವಳನ್ನು ಭೇಟಿ ಆಗಲು ಬರ್ತಿದ್ದೆ ಅಲ್ವಾ?” ಎಂದು ಕೂಗಿದ ಪವನ್.
“ಹೌದು, ಅದು ನಿಜ. ನನ್ನ ವೆಲ್ ಫೇರ್‌ಸೊಸೈಟಿಗೆ ಹೋಗುವ ಮಾರ್ಗದಲ್ಲಿಯೇ ನಿನ್ನ ಬ್ಯಾಂಕಿನ ಕ್ವಾರ್ಟರ್ಸ್‌ಇರುವುದರಿಂದ ನಾನು ನಳಿನಿ ಮಾಡುವ ಸ್ವಾದಿಷ್ಟ ಕಾಫಿ ಕುಡಿಯಲು ಹಾಗೂ ನಿಮ್ಮೆಲ್ಲರ ಯೋಗಕ್ಷೇಮ ವಿಚಾರಿಸಿಕೊಳ್ಳಲು ಆಗಾಗ ನಿನ್ನ ಮನೆಗೆ ಹೋಗ್ತಿದ್ದೆ,” ಎಂದ ರಾಬರ್ಟ್.
“ಆದರೆ ನಿನ್ನ ನಿಯತ್ತು ಸರಿ ಇರಲಿಲ್ಲ.”
“ನನ್ನ ನಿಯತ್ತು ಸರಿಯಾಗಿ ಇತ್ತೋ ಇಲ್ವೋ ಇದನ್ನು ನಳಿನಿಯೇ ಹೇಳಬಲ್ಲಳು ಅಥವಾ ನನ್ನ ಆತ್ಮ.”
“ಇದಕ್ಕೆ ಪರಿಹಾರ ಡಿಎನ್‌ಎ ಪರೀಕ್ಷೆಯಿಂದಲೇ ಆಗಬೇಕು. ನಾನು ಈ ಬಗ್ಗೆ ಎಂದೂ ಯೋಚಿಸಿಯೇ ಇರಲಿಲ್ಲ. ನಿನಗೂ ಹಾಗೂ ನಳಿನಿಗೂ ಸಂಬಂಧ ಇರಬಹುದೆಂದು, ಎರಡೂ ಮಕ್ಕಳು ನಿನ್ನ ಬಣ್ಣದಲ್ಲಿಯೇ ಹುಟ್ಟಬೇಕೆಂದರೆ ಆಗ ನನ್ನ ಮುಂದೆ ಪ್ರಶ್ನೆ ಎದ್ದೇ ಏಳುತ್ತೆ. ನೀನು ಈಗ ಬರದೇ ಹೋಗಿದ್ದರೆ, ನಾನು ನಳಿನಿಯಿಂದ ಈ ಸತ್ಯಾಂಶ ತಿಳಿದೇ ತಿಳಿಯುತ್ತಿದ್ದೆ. ಅವಳೂ ಕೂಡ ಏನನ್ನೋ ಹೇಳಲು ಹೊರಟಿದ್ದಳು.
“ಹೀಗಾಗಿ ನಮ್ಮೆಲ್ಲರ ಡಿಎನ್‌ಎ ಟೆಸ್ಟ್ ಜೊತೆಗೆ ನಿನ್ನ ಡಿಎನ್‌ಎ ಟೆಸ್ಟ್ ಆಗುವುದು ಕೂಡ ಅತ್ಯವಶ್ಯ. ಏಕೆಂದರೆ ಏಕಾಂತದ ಕ್ಷಣದಲ್ಲಿ ಇಬ್ಬರು ತದ್ವಿರುದ್ಧ ಲಿಂಗಿಗಳಲ್ಲಿ ಸೆಕ್ಸ್ ಇಚ್ಛೆ ಉಂಟಾಗುವುದು ಹಾಗೂ ಆ ಕ್ರಿಯೆಯಲ್ಲಿ ಬದಲಾಗುವುದು ಹೊಸ ಸಂಗತಿಯೇನಲ್ಲ,” ಎಂದ ಪವನ್.
“ಸರಿ. ಒಂದು ವೇಳೆ ನೀನೂ ಕೂಡ ನನ್ನ ಮೇಲೆ ಸಂದೇಹ ತಾಳುವುದಾದರೆ, ನಾನು ನನ್ನ ಡಿಎನ್‌ಎ ಟೆಸ್ಟ್ ಮಾಡಿಸಲು ಸಿದ್ಧ. ಆದರೆ ಈ ಸಲ ನಾನು ಸ್ಟಾಂಪ್‌ಪೇಪರ್‌ಮೇಲೆ ಲಿಖಿತ ಷರತ್ತು ನಿಮ್ಮೆಲ್ಲರಿಗೂ ಹಾಕುತ್ತೇನೆ,” ರಾಬರ್ಟ್‌ಹೇಳಿದ.
“ಇದರಲ್ಲಿ ಷರತ್ತಿನ ಮಾತೇನಿದೆ?”
“ಹೌದು, ಇದರಲ್ಲೂ ಷರತ್ತಿನ ಸಂಗತಿ ಇದೆ. ಅದೂ ಕೂಡ ಲಿಖತವಾಗಿ. ಅದರಲ್ಲಿ ಎಲ್ಲರ ಹಸ್ತಾಕ್ಷರಗಳು ಇರುತ್ತವೆ. ಇದು ಗೆಲ್ಲುವವರಿಗೆ ನ್ಯಾಯ ಒದಗಿಸುವುದು ಹೇಗೆ ಎನ್ನುವುದು ಅಮ್ಮನ ನಿರ್ಧಾರದ ಮೇಲೆ ಅಲಂಬಿಸಿರುತ್ತದೆ. ಅದರಲ್ಲಿ ಸೋತವರಿಗೆ ಶಿಕ್ಷೆ ಏನು ಕೊಡಬೇಕೆಂದು? ಶಿಕ್ಷೆ ಏನು ಎಂದು ಅವರೇ ಹೇಳಬೇಕು. ಪವನ್, ನಿನಗೆ ಈ ಷರತ್ತಿನ ಬಗ್ಗೆ ಯಾವುದೇ ಆಕ್ಷೇಪ ಇಲ್ಲ ತಾನೇ?”
“ರಾಬರ್ಟ್, ನೀನು ಬಹಳ ಪ್ರಾಮಾಣಿಕನಂತೆ ವರ್ತಿಸಬೇಡ. ನಿನ್ನ ಷರತ್ತು ಏನು ಅಂತ ಹೇಳು,” ಪವನ್ ನ ನಶೆ ಸಂಪೂರ್ಣ ಇಳಿದುಹೋಗಿತ್ತು. ಅವನು ಸಮೀಪವೇ ಇದ್ದ ಕುರ್ಚಿ ಮೇಲೆ ಕುಳಿತು ರಾಬರ್ಟ್ ನನ್ನು ದಿಟ್ಟಿಸಿ ನೋಡುತ್ತಿದ್ದ.
“ನನ್ನ ಡಿಎನ್‌ಎ ರಿಪೋರ್ಟ್‌ಮಕ್ಕಳಿಗೆ ಹೊಂದಾಣಿಕೆಯಾಗದಿದ್ದರೆ ಎರಡರಲ್ಲಿ ಒಂದು ಮಗುವನ್ನು ನನಗೆ ಕಾನೂನುಬದ್ಧವಾಗಿ ಕೊಡಬೇಕು. ಒಂದು ವೇಳೆ ಅದು ಮ್ಯಾಚ್‌ಆದರೆ ಎರಡೂ ಮಕ್ಕಳು ನನ್ನವ….ಅವನ್ನು ಓದಿಸಿ ಡಾಕ್ಟರ್ ರನ್ನಾಗಿ ಮಾಡುವುದು ನನ್ನ ಜವಾಬ್ದಾರಿ.”
ರಾಬರ್ಟ್‌ನ ಮಾತು ಕೇಳಿ ಎಲ್ಲರೂ ಯೋಚನಾಮಗ್ನರಾಗಿರುವುದನ್ನು ನೋಡಿದ ಅಮ್ಮ, “ಈ ಷರತ್ತು ಅತ್ಯವಶ್ಯವೇ…..?” ಕೇಳಿದರು.
“ಹೌದು ಅತ್ತೆ. ಇದು ಕೇವಲ ನನ್ನ ಗೌರವದ ಪ್ರಶ್ನೆ ಅಷ್ಟೇ ಅಲ್ಲ. ಆದರೆ ಇದರ ಬಗ್ಗೆ ಯಾರೂ ನಿಮ್ಮತ್ತ ಬೆರಳು ತೋರಿಸಿ ಮಾತನಾಡುವುದೇ ನನಗೆ ಇಷ್ಟವಾಗುವುದಿಲ್ಲ. ಇಂದು ನನ್ನ ಈ ಸ್ನೇಹಿತ ನನ್ನನ್ನು ಹೊಡೆಯಲು ಬಂದಿದ್ದ. ಅದನ್ನು ನೋಡಿದರೆ ಸೋಲುವ ಸ್ಥಿತಿಯಲ್ಲಿ ಈ ನಗರದಿಂದ ಬಹುದೂರ ಹೋಗುವುದು ಸರಿಯಾಗಿರುತ್ತದೆ,” ಎಂದು ಹೇಳಿ ರಾಬರ್ಟ್‌ಎದ್ದು ನಿಂತ.
ಮರ್ಸಿಗೆ ಮನೆಗೆ ಹೊರಡುವಂತೆ ಸನ್ನೆ ಮಾಡಿದ. ಬಳಿಕ ನಳಿನಿಗೆ ಪವನ್‌ಬಗ್ಗೆ ಗಮನಕೊಡಲು ಹೇಳುತ್ತಾ, ಮಕ್ಕಳಿದ್ದ ತೊಟ್ಟಿಲ ಬಳಿ ಹೋಗಿ ಅವನು ಪ್ರೀತಿಯಿಂದ ನೋಡತೊಡಗಿದ.
ನಂತರ ಅತ್ತೆಯ ಬಳಿ ಹೋಗಿ, “ಅತ್ತೆ, ನಾನೀಗ ಹೊರಡ್ತೀನಿ. ನಾಳೆ ಬೆಳಗ್ಗೆ ವಕೀಲರ ಜೊತೆ ಸ್ಟಾಂಪ್‌ಪೇಪರ್‌ಸಹಿತ ಬರುತ್ತೇನೆ. ಆ ಬಳಿಕ ನಾವು ಡಿಎನ್‌ಎ ಟೆಸ್ಟ್ ಗಾಗಿ ಹೋಗೋಣ.”
ಮರ್ಸಿಯನ್ನು ಕರೆದುಕೊಂಡು ರಾಬರ್ಟ್‌ಹೊರಟುಹೋದಾಗ, ಇತ್ತ ನಳಿನಿ ಪವನ್ ನನ್ನು ಅವನ ಭುಜಕ್ಕೆ ತನ್ನ ಭುಜದ ಆಸರೆ ಕೊಡುತ್ತಾ ಕೋಣೆಗೆ ಕರೆದುಕೊಂಡು ಹೋಗಿ ಮಲಗಿಸಿದಳು.
“ನೀವು ಆರಾಮವಾಗಿ ಮಲಗಿಕೊಳ್ಳಿ. ನೀವು ನನ್ನ ಚಾರಿತ್ರ್ಯದ ಬಗ್ಗೆ ಹಾಗೂ ಮಕ್ಕಳ ಕಪ್ಪು ಬಣ್ಣದ ಕುರಿತು ಭಾವನ ಬಣ್ಣಕ್ಕೆ ಹೋಲಿಸಿಕೊಂಡು ಒಳಗೊಳಗೇ ಕೊರಗುವುದಕ್ಕಿಂತ. ನಿಮ್ಮ ಮನಸ್ಸಿನ ಮಾತನ್ನು ನನ್ನ ಬಳಿ ಶೇರ್‌ಮಾಡಿದ್ದರೆ ಈ ಪರಿಸ್ಥಿತಿಯೇ ಉದ್ಭವಿಸುತ್ತಿರಲಿಲ್ಲ.
“ಅವರನ್ನು ಹೊಡೆದು ಸಾಯಿಸುವ ಮಾತು ನಿಮ್ಮ ಮನಸ್ಸಿನಲ್ಲಿ ಹೇಗಾದರೂ ಬಂತು? ಒಂದು ವೇಳೆ ಮಕ್ಕಳು ಹುಟ್ಟಿದ ತಕ್ಷಣವೇ ನಿಮಗೆ ಸಂದೇಹ ಬಂದಿದ್ದರೆ ಅದರ ತಪ್ಪನ್ನು ನನ್ನ ಮೇಲೆ ಹೊರೆಸಿ, ನನ್ನ ಕುತ್ತಿಗೆ ಹಿಸುಕಬೇಕಾಗಿತ್ತು.”
ಪವನ್‌ಈ ತನಕ ಶಾಂತವಾಗಿಯೇ ಇದ್ದವನು, “ನಳಿನಿ, ನನಗೂ ಹಾಗೆಯೇ ಮಾಡು ಇಚ್ಛೆ ಇತ್ತು. ಆದರೆ ನಿನ್ನೊಂದಿಗೆ ಈ ಮಕ್ಕಳು ಕೊಲೆಗಡುಕ ಎಂದು ಕರೆಸಿಕೊಳ್ಳಬೇಕಾಗುತ್ತಿತ್ತು. ನಿನ್ನನ್ನು ಬಹಳ ಸುಲಭವಾಗಿ ಸಾಯಿಸಬಹುದು. ನಾನು ಇದೇ ಯೋಚನೆಯಲ್ಲಿ 5 ದಿನಗಳ ಕಾಲ ಅಲ್ಲಿ ಇಲ್ಲಿ ಸುತ್ತಾಡುತ್ತಾ ಇದ್ದೆ.
“ಒಂದು ಸಲವಂತೂ ನಾನು ಏನು ಯೋಚಿಸಿದ್ದೇನೆಂದರೆ, ಇದೆಲ್ಲವನ್ನು ಮಾಡುವ ಬದಲು ನನ್ನನ್ನೇ ನಾನು ಕೊನೆಗೊಳಿಸಿಕೊಳ್ಳಬೇಕು ಎಂದು ಅಂದುಕೊಂಡಿದ್ದೆ. ಆದರೆ ಮರುಕ್ಷಣವೇ ಇದೆಲ್ಲದರ ತಪ್ಪಿತಸ್ಥ ರಾಬರ್ಟ್‌ಆಗಿದ್ದಾನೆ ಎನಿಸಿತು. ಈ ಕಪ್ಪು ಮಕ್ಕಳು ಅವನದೇ ಉಡುಗೊರೆ.
“ನಾನು ಇದೇ ಸ್ಥಿತಿಯಲ್ಲಿ ಬಾರ್ ಗೆ ಹೋದೆ. ಅತಿಯಾಗಿ ಕುಡಿದೆ. ಅಲ್ಲಿಂದೆದ್ದು ನೇರವಾಗಿ ರಾಬರ್ಟ್‌ಮನೆಗೆ ಹೋದೆ. ಅವನ ಮನೆ ಲಾಕ್‌ಆಗಿರುವುದನ್ನು ನೋಡಿ, ಇಲ್ಲಿಗೆ ಬಂದೆ.”
“ನೀವು ಇದೆಲ್ಲ ಮಾಡಿದ್ದು ಈ ಮಕ್ಕಳು ಕಪ್ಪಗೆ ಹುಟ್ಟಿದವು ಎಂದಲ್ಲವೇ? ಒಂದು ವೇಳೆ ನೀವು ಈ ಮಕ್ಕಳನ್ನು ಎತ್ತಿಕೊಂಡು ಆ ಮಕ್ಕಳ ಹೃದಯ ಬಡಿತ ಆಲಿಸಿದ್ದರೆ, ನಿಮಗೆ ಮನವರಿಕೆ ಆಗುತ್ತಿತ್ತು. ಈ ಮಕ್ಕಳು ನಿಮ್ಮದೇ ಪ್ರೀತಿಯ ಕಾಣಿಕೆ ಎಂದು.”
“ಅದನ್ನಂತೂ ಎಲ್ಲರ ಡಿಎನ್‌ಎ ಟೆಸ್ಟ್ ನ ಫಲಿತಾಂಶ ತಿಳಿಸುತ್ತದೆ.”
“ಆದರೆ ಅದಕ್ಕೂ ಮೊದಲು ಭಾವ ಯಾವ ಕಾನೂನು ಷರತ್ತುಗಳನ್ನು ಹಾಕಿ, ಅದರ ಕಾಗದ ತೆಗೆದುಕೊಂಡು ಬರುತ್ತಿದ್ದಾರೊ, ಅದರ ಪ್ರಕಾರವೇ ಷರತ್ತಿನಲ್ಲಿ ಗೆದ್ದಾಗ ನಮ್ಮದೇ ಸೋಲಾಗುತ್ತದೆ. ನಾವು ಒಂದು ಮಗುವನ್ನು ಕಳೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ ಷರತ್ತಿನಲ್ಲಿ ಸೋತರೆ ಎರಡೂ ಮಕ್ಕಳನ್ನೂ ಕಳೆದುಕೊಳ್ಳಬೇಕಾಗುತ್ತದೆ.”
“ಅದರಿಂದ ವ್ಯತ್ಯಾಸ ಏನಾಗುತ್ತದೆ. ಟೆಸ್ಟ್ ರಿಪೋರ್ಟ್‌ಬಂದಾಗ, ಹಾಲು ಯಾವುದು? ನೀರು ಯಾವುದು ಎಂದು ಗೊತ್ತಾಗುತ್ತಲ್ವೇ?”
“ಅಂದರೆ ನಿಮಗೆ ನನ್ನ ಮಾತಿನ ಮೇಲೆ ನಂಬಿಕೆ ಇಲ್ವೇ?”
ಆ ಮಾತಿಗೆ ಪವನ್‌ಏನೊಂದೂ ಮಾತಾಡಲಿಲ್ಲ. ಅವನು ಮಗ್ಗಲು ಬದಲಿಸಿ ಮಲಗಿದ. ನಳಿನಿ ಸ್ವಲ್ಪ ಹೊತ್ತು ಸುಮ್ಮನಿದ್ದು ತಾನೂ ಮಗ್ಗಲು ಬದಲಾಯಿಸಿ ಮಲಗಿದಳು. ಹಾಗೆಯೇ ಪವನ್ ಗೆ ಹೇಳಿದಳು, “ಇಂದಿನ ರಾತ್ರಿಗಾಗಿ ನನ್ನದೊಂದು ಕೋರಿಕೆ ನಡೆಸಿಕೊಡುವಿರಾ?”
“ಎಂತಹ ಕೋರಿಕೆ?”
“ಇಂದು ರಾತ್ರಿಯಿಡೀ ಇದೇ ಮಂಚದ ಮೇಲೆ ಎರಡೂ ಮಕ್ಕಳು ನಮ್ಮಿಬ್ಬರ ನಡುವೆ ಮಲಗಬೇಕು ಅನ್ನೋದೆ ನನ್ನ ಬಯಕೆ.”
“ಇದರಿಂದ ಏನಾಗುತ್ತದೆ?”
“ಇದರಿಂದ ಏನಾಗುತ್ತದೆಂದು ನನಗೆ ಗೊತ್ತಿಲ್ಲ. ಆದರೆ ನಿಮ್ಮ ಒಂದು ತಪ್ಪಿನಿಂದಾದರೂ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು. ಅದೇನೆಂದರೆ, ಮಕ್ಕಳು ಹುಟ್ಟಿದ ಬಳಿಕ ಒಂದು ದಿನ ಕೂಡ ತಮ್ಮ ತಂದೆಯ ಬಳಿ ಮಲಗಿರಲಿಲ್ಲ ಎನ್ನುವುದೇ…?”
“ಸರಿ, ನಾನು ಒಂದು ದಿನದ ಮಟ್ಟಿಗೆ ನಿನ್ನ ಕೋರಿಕೆಯನ್ನು ಒಪ್ಪುತ್ತೇನೆ.”
ಆ ರಾತ್ರಿ ಮಕ್ಕಳು ಪವನ್‌ಪಕ್ಕದಲ್ಲಿ ಮಲಗಿದ್ದವು. ಮಕ್ಕಳ ಎಳೆಯ ಕೈಗಳ ಸ್ಪರ್ಶ ಪವನ್ ಗೆ ಆಯಿತು. ಅವನು ಮಗ್ಗಲು ಬದಲಿಸಿ ಮಕ್ಕಳ ಕಡೆ ಹೊರಳಿದ. ಅವನ್ನು ತನ್ನೆದೆಗೆ ಆನಿಸಿಕೊಂಡಾಗ, ಅವುಗಳ ಹೃದಯ ಸ್ಪಂದನ ಅವನಿಗೆ ಅದೆಷ್ಟೋ ಸಂವಾದ ನಡೆಸಿದಂತೆ ಭಾಸವಾಯಿತು.
ಬೆಳಗ್ಗೆ ರಾಬರ್ಟ್‌ಮರ್ಸಿಯ ಜೊತೆಗೆ ಕಾನೂನಿನ ಷರತ್ತೊಳಗೊಂಡ ಕಾಗದವೊಂದನ್ನು ಟೈಪ್‌ಮಾಡಿಸಿಕೊಂಡು ಬಂದಿದ್ದ. ಅವನ ಮುಖದಲ್ಲಿ ನಗುವಿನ ಬದಲು ಗಂಭೀರ ಛಾಯೆ ಆವರಿಸಿಕೊಂಡಿತ್ತು. ಅವನ ಜೊತೆಗೆ ಬಂದಿದ್ದ ಲಾಯರ್‌ಎಲ್ಲರ ಸಹಿಗಳನ್ನು ಪಡೆದರು.
ಡಿಎನ್‌ಎ ಟೆಸ್ಟ್ ರಿಪೋರ್ಟ್‌ಬಂದಾಗ ರಾಬರ್ಟ್ ನ ಡಿಎನ್‌ಎಗೂ ಮಕ್ಕಳ ಡಿಎನ್‌ಎಗೂ ಯಾವುದೇ ಹೊಂದಾಣಿಕೆ ಆಗಲಿಲ್ಲ. ಪವನ್ ನ ಡಿಎನ್‌ಎ ಮಕ್ಕಳ ಜೊತೆಗೆ ಹೊಂದಾಣಿಕೆ ಆಗಿರುವುದು ಅದರಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿತ್ತು.
ಮೊದಲೇ ಮಾಡಿಕೊಂಡ ಷರತ್ತಿನ ಪ್ರಕಾರ ಪವನ್‌ಹಾಗೂ ನಳಿನಿ ತಮ್ಮಿಬ್ಬರ ಮಕ್ಕಳಲ್ಲಿ ಒಂದು ಮಗುವನ್ನು ರಾಬರ್ಟ್‌ಹಾಗೂ ಮರ್ಸಿಗೆ ಕೊಡಬೇಕಾಗಿ ಬಂತು. ಮರ್ಸಿಗೆ ಬಂದ ಮಗುವಿನ ಹೆಸರು ಗೀತಾ.
ನೋಡು ನೋಡತ್ತಿದ್ದಂತೆ ಪವನ್ ನಿಂದ ದೂರ ಸರಿದ ಮಗು, ಮರ್ಸಿಯ ಮಡಿಲಿನಿಂದ ಕೆಳಕ್ಕೆ ಬಗ್ಗಿ ಅಳುತ್ತಾ ಗೀತಾ ತನ್ನ ತಂದೆಯನ್ನು ಕೇಳಿದಂತಿತ್ತು, `ಅಪ್ಪ ನನ್ನದೇನೂ ತಪ್ಪಿಲ್ಲ. ನನ್ನನ್ನು ನನ್ನ ತಾಯಿಯಿಂದಲೂ ಅಗಲಿಸಿದಿರಿ. ನನ್ನ ಸೋದರಿಯಿಂದ ಅಗಲಿಸಿದ್ದು ಸರೀನಾ?’
ಇಂದು ಈ ಘಟನೆಗೆ 1 ವರ್ಷವೇ ಆಗಿದೆ. ರಾಬರ್ಟ್‌ಹಾಗೂ ಮರ್ಸಿ ಬೆಂಗಳೂರಿನಿಂದ ದೂರದ ದೆಹಲಿಗೆ ಹೊರಟುಹೋದರು. ಪವನ್ ಗೂ ಕೂಡ ಪ್ರಮೋಷನ್‌ಜೊತೆಗೆ ಮುಂಬೈ ಬ್ಯಾಂಕಿನ ಹೆಡ್‌ಆಫೀಸ್ ಗೆ ಟ್ರಾನ್ಸ್ ಫರ್‌ಆಯ್ತು. ಅವನು ಸೀತಾಳನ್ನು ಕರೆದುಕೊಂಡು ಮುಂಬೈಗೆ ಹೊರಟುಹೋದ.
ಗೀತಾಳ ಪಾಲಿನ ಹಾಲು ಈಗಲೂ ನಳಿನಿಯ ಸ್ತನಗಳಲ್ಲಿ ತುಂಬುತ್ತದೆ. ಆಗ ಅವಳು ನೋವಿನಿಂದ ಚಡಪಡಿಸುತ್ತಾಳೆ.