ಒಂದೆಡೆ ನಳಿನಿ ಲೇಡಿ ಡಾಕ್ಟರ್ ವಿ. ಡಿಸೋಜಾರ ಮೆಟರ್ನಿಟಿ ಹಾಸ್ಪಿಟಲ್ ನ ಲೇಬರ್ ವಾರ್ಡ್ ನಲ್ಲಿ ಸಹಜ ಹೆರಿಗೆಗಾಗಿ ಅಸಹನೀಯ ನೋವಿನಿಂದ ನರಳುತ್ತಿದ್ದರೆ, ಇನ್ನೊಂದೆಡೆ ಅವಳ ಪತಿ ಪವನ್ ಹಾಗೂ ರಾಬರ್ಟ್ ನಡುವೆ ಬೆಟಿಂಗ್ ನಡೆಯುತ್ತಿತ್ತು.
ರಾಬರ್ಟ್ ತನ್ನೊಂದಿಗೆ ಯೂನಿವರ್ಸಿಟಿಯಲ್ಲಿ ಓದಿದ್ದ ತನ್ನ ಆಪ್ತ ಮಿತ್ರ ಪವನ್ ಜೊತೆಗೆ ಬೆಟಿಂಗ್ ಕಟ್ಟುವುದರಲ್ಲಿ ನಿರತನಾಗಿದ್ದ. ತನ್ನ ಸ್ವಭಾವಕ್ಕನುಗುಣವಾಗಿ ತಮಾಷೆ ಮಾಡಲೆಂದೊ ಅಥವಾ ಹಾಗೆಯೇ ಸುಮ್ಮನೆ ಟೆನ್ಶನ್ ನಿಂದ ಅತ್ತಿತ್ತ ಸುತ್ತುತ್ತಿದ್ದ ಪವನ್ ನ ಮೂಡ್ ರಿಫ್ರೆಶ್ ಮಾಡಲೆಂದೊ ರಾಬರ್ಟ್ ಈ ಬೆಟಿಂಗ್ ಕಟ್ಟಿದ್ದ.
``ನೋಡು ಪವನ್, ನಿನ್ನಿಬ್ಬರು ಅವಳಿ ಮಕ್ಕಳು ಕಪ್ಪಗೆ ಇರುತ್ತವೆ,'' ರಾಬರ್ಟ್ ಹೇಳಿದ.
``ನೀನೇಕೆ ಹೀಗೆ ಹೇಳುತ್ತಿರುವೆ?'' ಪವನ್ ಕೇಳಿದ.
``ಏಕೆಂದರೆ, ನೀನು ನನ್ನ ಸ್ನೇಹಿತ ಆಗುವ ಮೊದಲು ನನ್ನ ಕಪ್ಪು ಬಣ್ಣವನ್ನು ಅದೆಷ್ಟು ಟೀಕಿಸುತ್ತಿದ್ದೆ. ನನ್ನ ಮದುವೆಗೆ ಮುಂಚೆ ನೀನು ನನಗೆ ಚಾಲೆಂಜ್ ಮಾಡಿದ್ದೆ. ಅದೇನೆಂದರೆ ಶ್ವೇತ ವರ್ಣದ ಮಮತಾ ನನ್ನನ್ನು ಮದುವೆಯಾಗುವುದಿಲ್ಲವೆಂದು. ಆದರೆ ನೀನು ಆ ಪಣದಲ್ಲಿ ಸೋತಿದ್ದೆ.''
``ಹೌದು, ಚೆನ್ನಾಗಿ ನೆನಪಿದೆ. ನೀನು ಕೇವಲ ಅವಳನ್ನು ಮದುವೆಯನ್ನಷ್ಟೇ ಆಗಲಿಲ್ಲ. ಮದುವೆಯ ಬಳಿಕ ಮಮತಾಳನ್ನು ಮರ್ಸಿ ಆಗಿಸಿಬಿಟ್ಟೆ.''
``ಹಾಗಾದರೆ ಈ ಸಲ ನೀನು ಧೈರ್ಯವಾಗಿ ಬೆಟ್ ಕಟ್ಟಬಹುದು.''
``ನಾನು ಬೆಟ್ ಕಟ್ಟುವುದಿಲ್ಲ. ನಾನು ಹಾಗೂ ನಳಿನಿ ಇಬ್ಬರೂ ಬೆಳ್ಳಗಿರುವಾಗ ಹುಟ್ಟು ಮಕ್ಕಳು ಕಪ್ಪಗಿರಲು ಸಾಧ್ಯವೇ ಇಲ್ಲ.''
ಆಗ ಲೇಬರ್ ವಾರ್ಡ್ ನ ಹೊರಗೆ ಅಳವಡಿಸಿದ್ದ ಉದ್ದನೆಯ ಸ್ಟೀಲ್ ಬೆಂಚ್ ಮೇಲೆ ಕುಳಿತಿದ್ದ ಮರ್ಸಿ ಹೇಳಿದಳು, ``ನೀವಿಬ್ಬರೂ ಹೊತ್ತಲ್ಲದ ಹೊತ್ತಿನಲ್ಲಿ ಎಂಥದೊ ಜಾಗದಲ್ಲಿ ಪಣದಲ್ಲಿ ತೊಡಗ್ತೀರಾ. ಎದುರುಗಡೆ ಇರುವ ಫಲಕದಲ್ಲಿ ಏನು ಬರೆದಿದ್ದಾರೆ ನೋಡಿ ಸ್ವಲ್ಪ.''
ಮರ್ಸಿ ಅವರ ಗಮನ ಸೆಳೆದಾಗ ಇಬ್ಬರೂ ಅತ್ತ ಕಡೆ ಗಮನಹರಿಸಿದರು. ಫಲಕದ ಮೇಲೆ `ಕೀಪ್ ಸೈಲೆನ್ಸ್' ಎಂದು ಬರೆಯಲಾಗಿತ್ತು.
ಇಬ್ಬರೂ ಬೋರ್ಡ್ ನೋಡಿ ಸುಮ್ಮನಾದರು. ಆದರೆ ಹೆಚ್ಚು ಹೊತ್ತು ಹಾಗೆಯೇ ಸುಮ್ಮನಿರುವುದು ಇಬ್ಬರ ಸ್ವಭಾವ ಆಗಿರಲಿಲ್ಲ. ಹೀಗಾಗಿ ಇಬ್ಬರೂ ಅಲ್ಲಿಂದ ಎದ್ದು ಹೊರಗಿದ್ದ ಕೆಫೆಟೆರಿಯಾದಲ್ಲಿ ಕಾಫಿ ಕುಡಿಯಲು ಹೋದರು.
``ಅಂದ ಹಾಗೆ ನಾನು ಒಂದು ಸಲ ಪಣದಲ್ಲಿ ಸೋತಿದ್ದು ಬಿಟ್ಟರೆ, ಹೆಚ್ಚಿನ ಸಲ ಗೆದ್ದಿದ್ದೇನೆ. ಆದರೆ ಈ ಸಲ ನನ್ನ ಮಾತು ನಿಜ ಆಗದಿದ್ದರೆ ನಾನು ನಿನ್ನ ಜೊತೆ ಬೆಟಿಂಗ್ ಕಟ್ಟೋದನ್ನು ನಿಲ್ಲಿಸಿಯೇ ಬಿಡ್ತೀನಿ.''
``ರಾಬರ್ಟ್ ನೀನು ಬೆಟಿಂಗ್ ಕಟ್ಟುವುದು ಬಿಡುವುದರ ಬಗ್ಗೆ ಕನಿಷ್ಠ ನನ್ನ ಮುಂದಾದರೂ ಹೇಳಬೇಡ. ಅಂದಹಾಗೆ ನೀನು ಹಾರ್ಟ್ ಪೇಶೆಂಟ್ ಆಗಿಯೂ ಕೂಡ ಪ್ರಮಾಣ ಮಾಡಿದಾಗ್ಯೂ ಸಿಗರೇಟು ಸೇದುವುದನ್ನು ಈವರೆಗೂ ನಿಲ್ಲಿಸಿಲ್ಲ. ಹಾಗಾಗಿ ನೀನು ನನ್ನ ಜೊತೆಗೆ ಬೆಟಿಂಗ್ ಕಟ್ಟುವುದನ್ನು ನಿಲ್ಲಿಸುವುದಿಲ್ಲ.''
``ಒಂದು ವಿಷಯ ಹೇಳು, ನೀನು ಈ ಚಾಲೆಂಜ್ ನಲ್ಲಿ ಗೆದ್ದರೆ ನನಗೆ ಯಾವ ಸಿನಿಮಾ ತೋರಿಸ್ತೀಯಾ?'' ರಾಬರ್ಟ್ ಪುನಃ ಅವನನ್ನು ಕೆಣಕಿದ.