ಮಗು ಇನ್ನೂ ಹೊಟ್ಟೆಯಲ್ಲಿರುವಾಗಲೇ ಮಗುವಿನ ಭವಿಷ್ಯದ ಬಗ್ಗೆ ಪೋಷಕರಿಗೆ ಚಿಂತೆ ಶುರುವಾಗುತ್ತದೆ. ಹುಟ್ಟಲಿರುವ ತನ್ನ ಮಗು ಹೇಗಿರಬಹುದು? ಅದರ ಆರೋಗ್ಯ, ವ್ಯಕ್ತಿತ್ವ, ಓದಿನ ಕುರಿತಂತೆ ಆಗಲೇ ಯೋಚನೆ ಶುರು ಮಾಡುತ್ತಾರೆ. ಮಗು ಹುಟ್ಟಿದ ಬಳಿಕ ಅದರ ಪಾಲನೆ ಪೋಷಣೆ ಮತ್ತು ವರ್ತನೆಯ ಬಗ್ಗೆ ಗಮನಹರಿಸುವುದು ಸ್ವಾಭಾವಿಕ. ಒಂದು ವೇಳೆ ನಿಮ್ಮ ಮಗು ತಾಯಿತಂದೆ ಹಾಗೂ ಇತರೆ ನಿಕಟ ಸಂಬಂಧಿಗಳ ಹೊರತಾಗಿ ಬೇರೆ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಅಸಹಜತೆ ಅಥವಾ ಭಯದ ಅನುಭವ ಮಾಡಿಕೊಳ್ಳುತ್ತಿದ್ದಲ್ಲಿ, ಮುಂದೆ ಮಗು ಶಾಂತ ಹಾಗೂ ಅಂತರ್ಮುಖಿ ಆಗಬಹುದು ಅಥವಾ ಅನಾವಶ್ಯಕವಾಗಿ ಸಂಕೋಚ ಮನೋಭಾವದ್ದಾಗಬಹುದು. ಇದು ಮಗುವಿನ ವ್ಯಕ್ತಿತ್ವದ ಸಂಪೂರ್ಣ ವಿಕಾಸದಲ್ಲಿ ಬಾಧಕವಾಗಿ ಪರಿಣಮಿಸಬಹುದು.
ಅಂತರ್ಮುಖಿ ವ್ಯಕ್ತಿತ್ವದವರು ಅಪರೂಪ ಎಂದೇನಲ್ಲ. ನಮ್ಮ ಸಮಾಜದಲ್ಲಿ ಅಂಥವರ ಸಂಖ್ಯೆ ಶೇ.30ರಿಂದ 50ರಷ್ಟು ಇರಬಹುದು. ಇದು ಸಾಮಾನ್ಯವಾಗಿ ಆನುವಂಶಿಕವಾಗಿರಬಹುದು. ಒಂದು ವೇಳೆ ನಿಮ್ಮ ಮಗು ಅಂತರ್ಮುಖಿಯಾಗಿದ್ದರೆ, ಆರಂಭದಲ್ಲಿಯೇ ಅದರ ಲಕ್ಷಣಗಳು ಸುಲಭವಾಗಿ ಕಂಡುಬರುತ್ತದೆ.
ಆಸುಪಾಸಿನ ವಾತಾವರಣದ ಬಗ್ಗೆ ಅಸಹಜತೆ : ಒಂದು ವೇಳೆ ನಿಮ್ಮ ಮಗು ಅತಿಯಾದ ಬೆಳಕಿನಲ್ಲಿ, ಅತಿಯಾದ ಗದ್ದಲದಲ್ಲಿ, ಅಪರಿಚಿತರು ಸಂಪರ್ಕಕ್ಕೆ ಬಂದಾಗ ಅಳಲು ಆರಂಭಿಸಿದರೆ, ಜೋರು ಜೋರಾಗಿ ಕೈ ಕಾಲು ಅಲ್ಲಾಡಿಸತೊಡಗಿದರೆ ಮುಂದೆ ಅದು ಸಂಕೋಚ ಸ್ವಭಾವದ್ದು, ಹೆದರಿಕೆ ಮನೋಭಾವದ್ದು, ಇಲ್ಲವೇ ಅಂತರ್ಮುಖಿ ಸ್ವಭಾವದ್ದಾಗಬಹುದು. ಶಿಶುವಿನಲ್ಲಿ ಇಂತಹ ಪ್ರತಿಕ್ರಿಯೆಗಳು ಕಂಡುಬಂದಾಗ, ಅದನ್ನು ಸಹಜಗೊಳಿಸಲು, ಆರಂಭದಲ್ಲಿಯೇ ಬೆಳಕು ಹಾಗೂ ಧ್ವನಿ ಕಡಿಮೆಗೊಳಿಸಿ ಅವರಿಗೆ ಒಂದು ಸುರಕ್ಷಿತ ವಾತಾವರಣ ಕಲ್ಪಿಸಿ. ಆದರೆ ಈ ರೀತಿಯ ವಾತಾವರಣ ಯಾವಾಗಲೂ ಇರಬಾರದು. ಪರಿಸ್ಥಿತಿಗೆ ತಕ್ಕಂತೆ ಬದಲಾಗಲು ಅವರಿಗೆ ಪ್ರೇರೇಪಿಸಿ.
ಜಿಜ್ಞಾಸೆ, ಸಂದೇಹ ಅಥವಾ ಭಯ : ತಮ್ಮ ಆಸುಪಾಸು ಹೊಸ ಹೊಸ ಸಂಗತಿಗಳನ್ನು ಕಂಡು ಆ ಬಗ್ಗೆ ತಿಳಿಯುವ ಕುತೂಹಲ ಮಕ್ಕಳಿಗೆ ಇರುತ್ತದೆ. ಆದರೆ ಅವರ ಪ್ರತಿಕ್ರಿಯೆ ವಿಭಿನ್ನವಾಗಿರುತ್ತದೆ. ಕೆಲವು ಮಕ್ಕಳು ಆ ಬಗ್ಗೆ ತಿಳಿಯುವ ಕುತೂಹಲ ಹೊಂದಿರುತ್ತಾರೆ. ಆದರೆ ಅವರು ಅನವಶ್ಯವಾಗಿ ಭಯಭೀತರೂ ಆಗುತ್ತಾರೆ. ಅವರು ಅಂತಹ ಸಂಗತಿಗಳನ್ನು ದೂರದಿಂದಲೇ ನೋಡಲು ಇಚ್ಛಿಸಬಹುದು ಹಾಗೂ ತಮ್ಮದೇ ಆದ ಆಂತರಿಕ ಲೋಕದಲ್ಲಿ ಉಳಿದುಬಿಡುಬಹುದು. ಮನಸ್ಸಿನಲ್ಲಿಯೇ ಅದರ ಬಗ್ಗೆ ಯೋಚಿಸಬಹುದು. ಆದರೆ ಅದರ ಬಗ್ಗೆ ಸಮೀಪ ಹೋಗುವುದಾಗಲಿ, ತಾವೇ ಸ್ವತಃ ಪಾಲ್ಗೊಳ್ಳುವುದಾಗಲಿ ಮಾಡುವುದಿಲ್ಲ. ಇವು ಅವರು ಅಂತರ್ಮುಖಿಯಾಗುವುದರ ಲಕ್ಷಣಗಳು.
ಬಹುಬೇಗ ಗಾಬರಿಗೊಳಗಾಗುದು : ಕೆಲವು ಮಕ್ಕಳು ಸಾಧಾರಣ ಕೂಗುವಿಕೆ, ಆಕ್ರಂದನ ಹಾಗೂ ಗದ್ದಲ ಕೇಳಿಸುತ್ತಿದ್ದಂತೆ ಒಮ್ಮೆಲೇ ಚೀರುತ್ತಾರೆ. ಇಂತಹ ಮಕ್ಕಳು ಭವಿಷ್ಯದಲ್ಲಿ ಅಂತರ್ಮುಖಿಗಳಾಗಬಹುದು.
ಹೊಸ ಮಕ್ಕಳ ಸಂಪರ್ಕ ಅಥವಾ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ವಿಳಂಬ ಮಾಡುವುದು, ಇತರೆ ಮಕ್ಕಳು ಅಥವಾ ಜನರ ನಡುವೆ ಗಾಬರಿಗೊಳ್ಳುವುದು. ಆ ವಾತಾವರಣಕ್ಕೆ ಹೊಂದಿಕೊಳ್ಳದಿದ್ದರೆ ಉದಾಸತನದ ಅನುಭವ ಮಾಡಿಕೊಳ್ಳುತ್ತಿದ್ದರೆ ಇವು ಮಗು ಅಂತರ್ಮುಖಿಯಾಗುವ ಲಕ್ಷಣಗಳು.
ಅಪರಿಪಕ್ವ ಮಕ್ಕಳು ಅಂತರ್ಮುಖಿಯಾಗುವ ಸಾಧ್ಯತೆ ಹೆಚ್ಚು : ಅವಧಿಗೆ ಮುನ್ನ ಜನಿಸಿದ ಮಕ್ಕಳು ಅಂತರ್ಮುಖಿಗಳಾಗುವ ಸಾಧ್ಯತೆ ಹೆಚ್ಚು. ಹುಟ್ಟುವಾಗ ಕಡಿಮೆ ತೂಕ ಹೊಂದಿರುವ ಮಕ್ಕಳು ಸಹ ಈ ಸಮಸ್ಯೆಗೊಳಗಾಗಬಹುದು. ತಾಯಿ ತಂದೆ ಇಂತಹ ಮಕ್ಕಳಿಗೆ ಸಾಮಾಜಿಕ ವಾತಾವರಣ ಕಲ್ಪಿಸಲು ಅವರಿಗೆ ತರಬೇತಿ ನೀಡಬೇಕು.
ಒಂದೇ ವಸ್ತು ಅಥವಾ ಆಟಿಕೆಯಲ್ಲಿ ಮಗ್ನರಾಗುವುದು : ಯಾವುದೇ ಒಂದು ಮಗು ಒಂದೇ ವಸ್ತು ಅಥವಾ ಆಟದಲ್ಲಿ ಮಗ್ನರಾಗಿದ್ದರೆ, ಅದರಿಂದ ಹೊರಬರದೇ ಇದ್ದರೆ ಮುಂದೆ ಅದು ಅಂತರ್ಮುಖಿಯಾಗಬಹುದು. ಅವರು ತಮ್ಮದೇ ಆದ ಒಂದು ಸೀಮಿತ ವಲಯ ಹೊಂದಿರುತ್ತಾರೆ. ಅವರು ಕಲ್ಪನೆಯಲ್ಲಿಯೇ ಮನರಂಜನೆ ಮಾಡಿಕೊಳ್ಳುತ್ತಾರೆ. ಇಂತಹ ಸ್ಥಿತಿಯಲ್ಲಿ ಪೋಷಕರು ಹಾಗೂ ಶಿಕ್ಷಕರು ಅವರ ಬಗ್ಗೆ ಗಮನಕೊಡಬೇಕಾಗುತ್ತದೆ. ಅದರ ಚಿಂತೆಯ ವಿಷಯ ಏನಾಗಿರುತ್ತದೊ ಅದರ ಬಗ್ಗೆ ಮುಕ್ತವಾಗಿ ಮಾತನಾಡಬೇಕು. ಇಲ್ಲದಿದ್ದರೆ ದೊಡ್ಡವನಾದ ಮೇಲೆ ಅದು ಅಂತರ್ಮುಖಿಯಾಗಬಹುದು.
ಅಂತರ್ಮುಖಿ ಹಾಗೂ ಸಂಕೋಚದಲ್ಲಿ ವ್ಯತ್ಯಾಸ : ಸಾಮಾನ್ಯವಾಗಿ ನಾವು ಶಾಂತರಾಗಿರುವುದನ್ನು ಅಂತರ್ಮುಖಿ ಅಥವಾ ಸಂಕೋಚ ಸ್ವಭಾವದವರು ಎಂದು ಬಿಡುತ್ತೇವೆ. ಅಂತರ್ಮುಖಿ ಸ್ವಭಾವದವರು ಶಾಂತ ವಾತಾವರಣವನ್ನು ಇಷ್ಟಪಡುತ್ತಾರೆ. ಬೇರೆಯವರ ಸಕಾರಾತ್ಮಕ ಧೋರಣೆಯ ಬಗ್ಗೆ ಕೆಲವು ಮಕ್ಕಳಲ್ಲಿ ಸಂಕೋಚ ಅಥವಾ ಭಯವಾಗುತ್ತದೆ. ಅದನ್ನೇ ಸಂಕೋಚ ಸ್ವಭಾವ ಎನ್ನುತ್ತೇವೆ. ಮತ್ತೆ ಕೆಲವು ಅಂತರ್ಮುಖಿ ಮಕ್ಕಳು ಸಂಕೋಚ ಸ್ವಭಾವದವರಾಗಿರುತ್ತಾರೆ.
ಅಂತರ್ಮುಖಿಗಳು ಸಂಕೋಚ ಸ್ವಭಾವದವರಾಗಿರುವುದು ಅಥವಾ ಸಂಕೋಚ ಸ್ವಭಾದವರು ಅಂತರ್ಮುಖಿಗಳಾಗುತ್ತಾರೆ ಏಂದೇನಿಲ್ಲ : ಅಂತರ್ಮುಖಿ ವ್ಯಕ್ತಿ ಏಕಾಂಗಿತನದ ಆನಂದ ಪಡೆಯುತ್ತಾನೆ. ಬೇರೆ ವ್ಯಕ್ತಿ ತನ್ನ ಬಗ್ಗೆ ಏನು ಯೋಚಿಸುತ್ತಾನೆ ಎಂಬ ಬಗ್ಗೆ ಅವನಿಗೆ ಚಿಂತೆ ಇರುವುದಿಲ್ಲ. ಸಂಕೋಚ ಸ್ವಭಾವದ ವ್ಯಕ್ತಿ ಏಕಾಂಗಿಯಾಗಿರಲು ಇಷ್ಟಪಡುವುದಿಲ್ಲ. ಅಂದರೆ ಆತ ಬೇರೆಯವರ ಜೊತೆ ಸುತ್ತಾಡಲು ಹೆದರುತ್ತಾನೆ.
ಸಂಕೋಚ ಸ್ವಭಾವದಿಂದ ದೂರ ಇರಬಹುದು : ಬೇರೆಯವರ ಸಹಾಯದಿಂದ ಅಥವಾ ಥೆರಪಿ ಮುಖಾಂತರ ಸಂಕೋಚ ಸ್ವಭಾವದಿಂದ ದೂರ ಇರಬಹುದು. ಆದರೆ ಅಂತರ್ಮುಖಿ ಸ್ವಭಾವದಿಂದ ಅಲ್ಲ. ಅಂತರ್ಮುಖಿಯನ್ನು ಬಹಿರ್ಮುಖಿಯಾಗಿಸಲು ಆತನಿಗೆ ಬಹಳಷ್ಟು ಒತ್ತಡ ಉಂಟಾಗುತ್ತದೆ. ಆತ್ಮಗೌರವಕ್ಕೆ ಚ್ಯುತಿ ಉಂಟಾಗುತ್ತದೆ. ಅಂತರ್ಮುಖಿ ಒಂದಷ್ಟು ಮಟ್ಟಿಗೆ ಸಾಮಾಜಿಕ ಸ್ಥಿತಿಯನ್ನು ನಿಭಾಯಿಸುತ್ತಾರೆ. ಆದರೆ ಆತ ಬಹಿರ್ಮುಖಿಯಾಗುವುದಿಲ್ಲ.
ಭಾವನಾತ್ಮಕ ದೌರ್ಬಲ್ಯ : ಅಂತರ್ಮುಖಿ ವ್ಯಕ್ತಿ ಭಾವನಾತ್ಮಕವಾಗಿ ದುರ್ಬಲನಾಗಿರುತ್ತಾನೆ. ಒಂದು ವೇಳೆ ಅವನ ಆತ್ಮಗೌರವಕ್ಕೆ ಚ್ಯುತಿ ಉಂಟಾದರೆ ಬಹಳ ನೋವಾಗುತ್ತದೆ. ಅದರಿಂದ ಹೊರಬರಲು ಸಾಕಷ್ಟು ಸಮಯ ತಗಲುತ್ತದೆ.
ಉಪಯುಕ್ತ ಟಿಪ್ಸ್ : ಒಂದು ವೇಳೆ ಮಗು ಅಂತರ್ಮುಖಿಯಾಗಿದ್ದು ಅದರ ಆತ್ಮವಿಶ್ವಾಸದಲ್ಲಿ ಕೊರತೆ ಉಂಟಾದರೆ, ಈ ಟಿಪ್ಸ್ ನಿಮಗೆ ಉಪಯುಕ್ತವಾಗಿ ಪರಿಣಮಿಸಬಹುದು.
ಈ ರೀತಿಯ ಸ್ವಭಾವದ ಮಗುವಿಗೆ ತಾನೇನು ಮಾಡಬೇಕು, ಮಾಡಬಾರದು ಎಂಬ ಬಗ್ಗೆ ಅರಿವಿರುವುದಿಲ್ಲ. ಇಂತಹ ಸ್ಥಿತಿಯಲ್ಲಿ ಅದಕ್ಕೆ ಎಂತಹದೇ ಪರಿಸ್ಥಿತಿ ನಿಭಾಯಿಸುವ ಬಗ್ಗೆ ಕಲಿಸಿಕೊಡಿ. ಕ್ರಮೇಣ ಅದಕ್ಕೆ ಒಂದು ದಿಸೆ ದೊರಕುತ್ತದೆ.
ಒಂದು ವೇಳೆ ಮಗುವಿಗೆ ಹೊಸ ವಾತಾವರಣದಲ್ಲಿ ಅಥವಾ ಜನರ ನಡುವೆ ಅಥವಾ ಒಬ್ಬ ವಿಶಿಷ್ಟ ವ್ಯಕ್ತಿಯ ಜೊತೆ ಬೆರೆಯಲು ತೊಂದರೆ ಅನಿಸುತ್ತಿದ್ದರೆ, ಅದರ ಜೊತೆ ಸಹಜವಾಗಿ ಮಾತುಕಥೆ ನಡೆಸಿ, ಅದರ ಕಾರಣ ಕಂಡುಕೊಳ್ಳಲು ಪ್ರಯತ್ನಿಸಿ. ಅದು ಅಂತರ್ಮುಖಿಯಾಗಿರುವುದರಿಂದ ಹಾಗೆ ಮಾಡುತ್ತಿದೆ ಎಂದು ಭಾವಿಸಿ ಸುಮ್ಮನಿರಬೇಡಿ.
ಅಂತರ್ಮುಖಿ ಮಗು ಸಾಮಾನ್ಯ ಮಗುವಿನ ಹಾಗೆಯೇ ಇರುತ್ತದೆ. ಅದರೊಳಗೆ ಅಂತಹದೇ ಪ್ರತಿಭೆ ಇರುತ್ತದೆ. ನೀವು ಅದನ್ನು ಗುರುತಿಸುವ ಪ್ರಯತ್ನ ಮಾಡಬೇಕು. ಅದನ್ನು ನಿಮ್ಮ ಹೊರತಾಗಿ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ.
ಈ ತೆರನಾದ ಸ್ವಭಾವದ ಮಗು ಬೇರೆ ಮಕ್ಕಳ ಹಾಗೆ ಹೊರಗೆ ಹೋಗಿ ಆಟ ಆಡಲು ಇಷ್ಟಪಡಲಿಕ್ಕಿಲ್ಲ. ಆದರೆ ಇದರರ್ಥ ಅದಕ್ಕೆ ಆಟದಲ್ಲಿ ಆಸಕ್ತಿಯೇ ಇಲ್ಲ ಎಂದು ಭಾವಿಸಬಾರದು. ಅದು ಹಿಂದೇಟು ಹಾಕುತ್ತಿದೆ ಅಷ್ಟೇ. ನೀವು ಆ ಮಗುವಿನ ಜೊತೆ ಔಟ್ ಡೋರ್ ಗೇಮ್ಸ್ ಆಡಲು ಪ್ರಾರಂಭಿಸಿ. ಕ್ರಮೇಣ ಇತರ ಮಕ್ಕಳ ಜೊತೆ ಆಡಿದರೆ ಇನ್ನೂ ಖುಷಿ ಆಗುತ್ತದೆ ಎಂಬುದರ ಬಗ್ಗೆ ತಿಳಿಸಿ ಹೇಳಿ.
ಅಂತರ್ಮುಖಿ ಮಗುವಿನ ಬಗ್ಗೆ ಅಪ್ಪಿತಪ್ಪಿಯೂ ಕೂಡ ಸುರಕ್ಷಾತ್ಮಕ ಧೋರಣೆ ತಳೆಯಬೇಡಿ. ನೀವು ಸದಾ ಅದಕ್ಕೆ ಬೆಂಬಲವಾಗಿ ನಿಲ್ಲುವುದು ಅಥವಾ ಅದು ಮಾಡದೇ ಇರುವ ಕೆಲಸವನ್ನು ನೀವೇ ಮಾಡಲು ಆರಂಭಿಸಿದರೆ ಅದಕ್ಕೆ ತನ್ನಲ್ಲಿ ಏನೊ ಕೊರತೆ ಇದೆ ಎನಿಸುತ್ತದೆ.
ಒಂದು ಸಂಗತಿ ಗಮನದಲ್ಲಿರಲಿ, ಪ್ರತಿಯೊಂದು ಮಗುವಿನ ಸ್ವಭಾವ ಹಾಗೂ ದೈಹಿಕ ಸಾಮರ್ಥ್ಯದಲ್ಲಿ ವ್ಯತ್ಯಾಸ ಇರುತ್ತದೆ. ಅದರ ವ್ಯಕ್ತಿತ್ವವನ್ನು ಸರಿಯಾಗಿ ಅವಲೋಕಿಸಿ ನೀವು ಅದರ ಭವಿಷ್ಯಕ್ಕೆ ಸೂಕ್ತ ಅಡಿಪಾಯ ಹಾಕಬಹುದು.
– ಶ್ರೀವಾಣಿ