ದೀಕ್ಷಾ ದೇವಾಡಿಗ ಸ್ಯಾಕ್ಸೋಫೋನ್ ವಾದ್ಯದಲ್ಲಿ ಬಗೆಬಗೆಯ ಹಾಡುಗಳನ್ನು ನುಡಿಸುವುದರ ಮೂಲಕ ಹೊಸದೊಂದು ಅಧ್ಯಾಯ ಬರೆದಿದ್ದಾರೆ. ಅವರ ನಾದ ಹೊರ ಹೊಮ್ಮಿಸುವಿಕೆಗೆ ನಾಡಿನ ವಿವಿಧ ಕ್ಷೇತ್ರಗಳ ಪ್ರಖ್ಯಾತ ವ್ಯಕ್ತಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಸ್ಯಾಕ್ಸೋಫೋನ್ ವಾದ್ಯ ನುಡಿಸುವ ಮಹಿಳೆಯರ ಸಂಖ್ಯೆ ಬೆರಳೆಣಿಕೆಯಷ್ಟು. ಅಂಥವರಲ್ಲಿ ದೀಕ್ಷಾ ದೇವಾಡಿಗ ಅವರ ಹೆಸರು ಮುಂಚೂಣಿಯಲ್ಲಿದೆ.
ಸ್ಯಾಕ್ಸೋಫೋನ್ ಎಂಬ ವಾದ್ಯವನ್ನು ಹುಟ್ಟು ಹಾಕಿದವರು ಬೆಲ್ಜಿಯಂ ದೇಶದ ಅಡಾಲ್ಫ್ ಸ್ಯಾಕ್ಸ್ ಎಂಬುವರು. ಹೀಗಾಗಿ ಈ ವಾದ್ಯದೊಂದಿಗೆ ಅವರ ಹೆಸರು ಥಳುಕು ಹಾಕಿಕೊಂಡಿದೆ. ಈ ವಾದ್ಯವನ್ನು ಭಾರತದಲ್ಲಿ ಅದರಲ್ಲೂ ಕರ್ನಾಟಕ ಸಂಗೀತದಲ್ಲಿ ಹೆಚ್ಚು ಪ್ರಚಲಿತಗೊಳಿದವರೆಂದರೆ, ಕದ್ರಿ ಗೋಪಾಲನಾಥ್.
ಅಪ್ಪನೇ ಮೊದಲ ಗುರು
ಮಹಿಳೆಯರು ಈ ವಾದ್ಯ ನುಡಿಸಲು ಹೆಚ್ಚು ಆಸಕ್ತಿ ತೋರಿಸುವುದಿಲ್ಲ. ಅಂಥದರಲ್ಲಿ ದೀಕ್ಷಾ ದೇವಾಡಿಗ ಅವರಿಗೆ ಈ ಆಸಕ್ತಿ ಹೇಗೆ ಬಂತು? ಅವರ ತಂದೆ ನಾದಸ್ವರ ನುಡಿಸುವುದರಲ್ಲಿ ಎತ್ತಿದ ಕೈ. ಸ್ಯಾಕ್ಸೋಫೋನ್ ನುಡಿಸಲು ಕೂಡ ಗೊತ್ತಿತ್ತು. ತಂದೆ ರಾಘವ ಶೇರಿಗಾರರ ಬಳಿ 2 ವರ್ಷ ಕಲಿತು, ಬಳಿಕ ಉಡುಪಿ ಕೆ. ರಾಘವೇಂದ್ರ ರಾವ್ ರ ಬಳಿ 11 ವರ್ಷಗಳ ಕಾಲ ನಿರಂತರ ಅಭ್ಯಾಸ ಮಾಡಿ, ಸ್ಯಾಕ್ಸೋಫೋನ್ ನ್ನು ಹೇಗ್ಹೇಗೆ ನುಡಿಸಬಹುದು ಎಂಬ ಪಟ್ಟುಗಳನ್ನೆಲ್ಲ ಕಲಿತುಕೊಂಡರು. ಆನಂತರದ ಅಭ್ಯಾಸವನ್ನು ವಿದೂಷಿ ಮಾಧವಿ ಭಟ್ ಬಳಿ ಮುಂದುವರಿಸಿದ್ದಾರೆ.
ವಾದ್ಯ ನುಡಿಸುವುದರ ಜೊತೆ ಜೊತೆಗೆ ಶೈಕ್ಷಣಿಕವಾಗಿಯೂ ದೀಕ್ಷಾ ಬಹಳ ಗಮನ ಕೊಟ್ಟರು. 2017 ರಲ್ಲಿ ಎಂ.ಎ ಶಿಕ್ಷಣ ಪೂರೈಸಿದ ಅವರು, 2020 ರಲ್ಲಿ ಬಿ.ಎಡ್ ವ್ಯಾಸಂಗ ಮುಗಿಸಿದರು.
17 ವರ್ಷಗಳ ಶ್ರಮ
ಸ್ಯಾಕ್ಸೋಫೋನ್ ವಾದನದಲ್ಲಿ ದೀಕ್ಷಾರದು ಅವಿರತ ಶ್ರಮ. ಕಳೆದ 17 ವರ್ಷಗಳಿಂದ ಆ ವಾದ್ಯ ನುಡಿಸುತ್ತಿರುವ ಅವರು ಅನೇಕ ಕೃತಿಗಳನ್ನು ನುಡಿಸುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ತ್ಯಾಗರಾಜರ ಅನೇಕ ಕೃತಿಗಳು, ವರ್ಣಗಳು, ದೇವರ ನಾಮಗಳನ್ನು ನುಡಿಸುವುದರಲ್ಲಿ ನೈಪುಣ್ಯತೆ ಸಾಧಿಸಿದ್ದಾರೆ. ಕೀರವಾಣಿ ರಾಗವೆಂದರೆ ಅವರಿಗೆ ಬಲು ಇಷ್ಟ. ಈ ರಾಗದಲ್ಲಿಯೇ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆನಂದಭೈರವಿ, ಹಂಸಧ್ವನಿ, ಕಾನಡಾಗಳು ಕೂಡ ಅವರಿಗೆ ಇಷ್ಟದ ರಾಗಗಳಾಗಿವೆ.
8000ಕ್ಕೂ ಹೆಚ್ಚು ಕಾರ್ಯಕ್ರಮಗಳು
ಸ್ಯಾಕ್ಸೋಫೋನ್ ನುಡಿಸುವ ಬಗೆಗಿನ ಅವರ ಪ್ರಖ್ಯಾತಿ ರಾಜ್ಯಾದ್ಯಂತ ಪಸರಿಸಿದೆ. ಅದರ ಜೊತೆ ಜೊತೆಗೆ ಬೇರೆ ಬೇರೆ ರಾಜ್ಯಗಳಿಂದಲೂ ಕಾರ್ಯಕ್ರಮ ಕೊಡಲು ಅವರಿಗೆ ಆಹ್ವಾನಗಳು ಬರುತ್ತಿರುತ್ತವೆ. ಹಾಗಾಗಿ ದೀಕ್ಷಾ ಕನ್ನಡದ ಜೊತೆ ಜೊತೆಗೆ ಹಿಂದಿ, ತಮಿಳು ಭಾಷೆಯ ಗೀತೆಗಳನ್ನು ನುಡಿಸುತ್ತಾರೆ. ಆಯಾ ಭಾಷೆಗಳಲ್ಲಿನ ಜನಪ್ರಿಯ ಹಾಡುಗಳನ್ನೂ ನುಡಿಸಲು ಅವಿರತ ಪ್ರಯತ್ನ ನಡೆಸುತ್ತಿರುತ್ತಾರೆ.
ಉಡುಪಿ, ಮಂಗಳೂರು, ಧರ್ಮಸ್ಥಳ, ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ನಾಡಿನ ಉದ್ದಗಲಕ್ಕೂ ಅವರು ಕಾರ್ಯಕ್ರಮ ಕೊಟ್ಟು ತಮ್ಮ ಜನಪ್ರಿಯತೆಯ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿದ್ದಾರೆ. ಮುಂಬೈ, ಗೋವಾ, ಚೆನ್ನೈ, ಕೇರಳದಲ್ಲೂ ಅವರು ಕಾರ್ಯಕ್ರಮ ಕೊಟ್ಟು ಅನ್ಯ ಭಾಷಿಕರ ಪ್ರೀತಿಗೂ ಪಾತ್ರರಾಗಿದ್ದಾರೆ.
ಭಾವಗೀತೆ/ಸಿನಿಮಾ ಗೀತೆಗಳಿಗೂ ಸೈಸ್ಯಾಕ್ಸೋಫೋನ್ ನಲ್ಲಿ ಅರು ಕೃತಿಗಳಿಗೆ ಪ್ರಾಧಾನ್ಯತೆ ಕೊಡುತ್ತಾರೆ. ಜನರ ಬೇಡಿಕೆಗೆ ಅನುಗುಣವಾಗಿ ಭಾವಗೀತೆಗಳು ಹಾಗೂ ಸಿನಿಮಾ ಗೀತೆಗಳನ್ನು ನುಡಿಸುತ್ತಾರೆ.`ಕಾಣದಾ ಕಡಲಿಗೆ ಹಂಬಲಿಸಿದೆ ಮನ’ ಜಿಎಸ್‌ಎಸ್ ಅವರ ಈ ಭಾವಗೀತೆ ಸ್ಯಾಕ್ಸೋಫೋನ್ ನಲ್ಲಿ ಕೇಳಿಸುತ್ತಿದ್ದಂತೆಯೇ ಪ್ರೇಕ್ಷಕರು ತನ್ಮಯರಾಗಿ ಕುಳಿತು ಬಿಡುತ್ತಾರೆ. ಅದೇ ರೀತಿ `ನೂರು ಜನ್ಮಕೂ ನೂರಾರು ಜನ್ಮಕೂ’ ಸೇರಿದಂತೆ ಹಲವು ಹಳೆಯ ಸಿನಿಮಾ ಹಾಡುಗಳನ್ನು ಅವರು ಸ್ಯಾಕ್ಸೋಫೋನ್ ನಲ್ಲಿ ನುಡಿಸುತ್ತಾರೆ. ಚಂದ್ರಮುಖಿ ಪ್ರಾಣಸಖಿ ಚಿತ್ರದ ನಾಯಕಿಯಲ್ಲಿ ಒಬ್ಬರಾದ ಭಾವನಾ, ದೀಕ್ಷಾ ನುಡಿಸಿದ ರೀತಿಗೆ ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ.
ತಂಪು ಪದಾರ್ಥ ನಿಷಿದ್ಧ
ಯಾವುದೇ ಒಂದು ಹಾಡನ್ನು ಸ್ಯಾಕ್ಸೋಫೋನ್ ನುಡಿಸಲು ಸಾಕಷ್ಟು ಅಭ್ಯಾಸ ಮಾಡಿ ಪಳಗಬೇಕಾಗುತ್ತದೆ. ಆಗಲೇ ಆ ಹಾಡು ಮಧುರ ಧ್ವನಿಯಾಗಿ ಹೊರಹೊಮ್ಮುತ್ತದೆ. ಅದಕ್ಕಾಗಿ ದೀಕ್ಷಾ ಬಹಳಷ್ಟು ಆಹಾರಗಳನ್ನು ತ್ಯಜಿಸಬೇಕಾಗಿ ಬರುತ್ತದೆ. `ತಂಪು ಪಾನೀಯಗಳು, ತಂಪು ಪದಾರ್ಥಗಳನ್ನು ನನಗೆ ನಾನೇ ನಿಷೇಧ ಹಾಕಿಕೊಂಡಿರುವೆ,’ ಎಂದು ದೀಕ್ಷಾ ಹೇಳುತ್ತಾರೆ.
ವಾದ್ಯ ನುಡಿಸುವುದರಿಂದ ಗಂಟಲು, ಶ್ವಾಸಕೋಶಕ್ಕೆ ಏನಾದರೂ ಸಮಸ್ಯೆ ಆಗುತ್ತದೆಯೇ? ಎಂಬ ಪ್ರಶ್ನೆಗೆ ಅವರು ಅಂಥದ್ದೇನೂ ಆಗಿಲ್ಲ. ಆದರೆ ಹಾಗೆ ಆಗದಂತೆ ಸಾಕಷ್ಟು ಎಚ್ಚರಿಕೆ ವಹಿಸುತ್ತೇನೆ. ತಂಪು ಪದಾರ್ಥಗಳನ್ನು ದೂರ ಇಡಬೇಕಾಗುತ್ತದೆ, ಎಂದು ಹೇಳುತ್ತಾರೆ.
ಶಿಷ್ಯರ ಸೃಷ್ಟಿ
ದೀಕ್ಷಾರ ಸ್ಯಾಕ್ಸೋಫೋನ್ ವಾದನಕ್ಕೆ ಬೆರಗಾಗಿ ಅವರ ಶಿಷ್ಯರಾಗಿ, ಅವರಿಂದ ಆ ಕಲೆಯನ್ನು ಕರಗತ ಮಾಡಿಕೊಳ್ಳಲು ಅನೇಕರು ಮುಂದೆ ಬರುತ್ತಿದ್ದಾರೆ. ಕೆಲವು ಪುಟ್ಟ ಹುಡುಗಿಯರು ಬಾಲ್ಯದಲ್ಲಿಯೇ ಕಲಿಯಲು ಉತ್ಸಾಹ ತೋರಿಸುತ್ತಿದ್ದರೆ, ಮತ್ತೆ ಕೆಲವೇ ಗೃಹಿಣಿಯರು ತಮಗೂ ಆ ಕಲೆ ಸಿದ್ಧಿಸಬೇಕು ಎಂದು ಕಲಿಯಲು ಮುಂದೆ ಬರುತ್ತಿದ್ದಾರೆ.
`ಆನ್ ಲೈನ್‌ನಲ್ಲಿಯೂ ಸ್ಯಾಕ್ಸೋಫೋನ್ ನುಡಿಸುವುದನ್ನು ಕಲಿಸಬಹುದಾ?’ ಎಂಬ ಪ್ರಶ್ನೆಗೆ ನಾನು ಕಲಿಯುವ ಉತ್ಸುಕರಿಗೆ ಮುಖಾಮುಖಿಯಾಗಿ ಮಾತ್ರ ಕಲಿಸಲು ಆಸಕ್ತಿ ಹೊಂದಿದ್ದೇನೆ. ಆನ್ ಲೈನ್ ನಲ್ಲಿ ವಾದನದ ಕೆಲವು ಪಟ್ಟುಗಳನ್ನು ಕಲಿಸಿಕೊಡುವುದು ಕಷ್ಟಕರ, ಎನ್ನುವುದು ದೀಕ್ಷಾರ ಅಭಿಪ್ರಾಯ.
ಘಟಾನುಘಟಿಗಳ ಪ್ರಶಂಸೆ
ದೀಕ್ಷಾರ ಸ್ಯಾಕ್ಸೋಫೋನ್ ನುಡಿಸುವ ವೈಖರಿಗೆ ಎಲ್ಲೆಲ್ಲೂ ಪ್ರಶಂಸೆಯ ಪ್ರತಿಕ್ರಿಯೆಗಳು ಕೇಳಿಬರುತ್ತಿರುತ್ತವೆ. ಒಂದು ಕಡೆ ಕಾರ್ಯಕ್ರಮ ಕೊಟ್ಟರೆ, ಮತ್ತೊಮ್ಮೆ ಕಾರ್ಯಕ್ರಮ ಕೊಡಲು ಆಹ್ವಾನಗಳು ಬರುತ್ತಿರುತ್ತವೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ನಟಿ ಅರುಂಧತಿ ನಾಗ್ ಸೇರಿದಂತೆ ಬಹಳಷ್ಟು ಗಣ್ಯರು ಅವರ ನಾದ ಹೊರಹೊಮ್ಮಿಸುವಿಕೆಗೆ ಬೆರಗಾಗಿ ಮೆಚ್ಚಗೆ ಸೂಚಿಸಿದ್ದಾರೆ. ಹತ್ತು ಹಲವು ಪ್ರಶಸ್ತಿಗಳನ್ನು ಕೊಟ್ಟು ಸನ್ಮಾನಿಸಿದ್ದಾರೆ.
`ಸ್ಯಾಕ್ಸೋಫೋನ್ ಕ್ಷೇತ್ರದಲ್ಲಿ ನಿಮ್ಮ ಮುಂದಿನ ಗುರಿ ಏನು?’ ಎಂಬ ಪ್ರಶ್ನೆಗೆ ಅವರು, ಈ ಕ್ಷೇತ್ರದಲ್ಲಿ ಇನ್ನಷ್ಟು ಅಭ್ಯಾಸ ಮಾಡಬೇಕು. ಸ್ವಂತ ರಾಗ ಸಂಯೋಜನೆ ಮಾಡಬೇಕು, ಆಸಕ್ತರಿಗೆ ಈ ವಿದ್ಯೆ ಧಾರೆ ಎರೆಯಬೇಕು, ಎನ್ನುತ್ತಾರೆ.
ಸ್ಯಾಕ್ಸೋಫೋನ್ ನುಡಿಸಲು ಬಯಸುವ ಇಂದಿನ ಯುವ ಪೀಳಿಗೆಗೆ ನೀವೇನು ಹೇಳಬಯಸುತ್ತೀರಾ? ಎಂಬ ಪ್ರಶ್ನೆಗೆ, ಯಾವುದೇ ವಾದ್ಯ ನುಡಿಸಲು ಎಲ್ಲಕ್ಕೂ ಮುಂಚೆ ಸ್ವ ಆಸಕ್ತಿ ಮುಖ್ಯ. ಯಾರದ್ದೋ ಒತ್ತಡಕ್ಕೆ ಖಂಡಿತ ಈ ಕ್ಷೇತ್ರಕ್ಕೆ ಬರಲು ಆಗದು. ದಿನ ಸಾಕಷ್ಟು ಅಭ್ಯಾಸ ಮಾಡಬೇಕು, ಪಳಗಬೇಕು. ಆಗಲೇ ಏನನ್ನಾದರೂ ಮಾಡಲು ಸಾಧ್ಯ. ಸಂಗೀತ, ಅದರಲ್ಲೂ ವಾದ್ಯ ನುಡಿಸುವ ಕ್ಷೇತ್ರದಲ್ಲಿ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬಹುದು. ಅಂಥವರಿಗೆ ಸಂಗೀತದ ಬಗೆಗೆ ತುಡಿತ ಇರಬೇಕು, ಹೊಸತನವನ್ನು ಮೈಗೂಡಿಸಿಕೊಳ್ಳುವ ಛಲ ಇರಬೇಕು.
– ಅಶೋಕ ಚಿಕ್ಕಪರಪ್ಪಾ