ಎಲ್ಲರಿಗೂ ಜೀವನದಲ್ಲಿ ಕೆಲವು ಆಸೆಗಳಿರುವುದು ಸಹಜ. ಕೆಲವುರು ಅವುಗಳನ್ನು ಹೇಗೋ ಏನೋ ಯಾವಾಗಲಾದರೂ ಸರಿ, ತೀರಿಸಿಕೊಳ್ಳುತ್ತಾರೆ. ಇವರ ಜೀವನದಲ್ಲಿ ಆದದ್ದು ಅಷ್ಟೇ. ಇವರಿಗೆ ಮೊದಲಿನಿಂದ ಸಾಹಿತ್ಯದಲ್ಲಿ ಬಹಳ ಆಸಕ್ತಿ. ಯಾವ ಕಥೆ ಪುಸ್ತಕ, ಕಾದಂಬರಿ ಸಿಕ್ಕರೂ ಸಾಕು ಮನೆಯವರು ಎಷ್ಟೇ ಬೈದರೂ ಸರಿ ಕದ್ದು ಮುಚ್ಚಿಯಾದರೂ ಓದುತ್ತಾ ಇದ್ದರಂತೆ. ಓದುವುದೇನೋ ಸರಿ, ಆ ಕಥೆಯ ಕೆಳಗೆ ಅದನ್ನು ಬರೆದವರ ಹೆಸರು ಇರುತ್ತಲ್ಲ ಅದರ ಮೇಲೆ ಏನೋ ಮೋಹ. ಅದಕ್ಕೆ ಬೈ ಲೈನ್‌ ಎನ್ನುತ್ತಾರೆ. `ಪತ್ರಿಕೆಯಲ್ಲಿ ತನ್ನ ಹೆಸರು ಬಂದ್ರೆ ಎಷ್ಟು ಚೆನ್ನ! ತನ್ನ ಹೆಸರು ಬರಲಿ,’ ಎನ್ನುವುದು ಅವರ ಆಸೆ. ಅದಕ್ಕಾಗಿ `ತಾನೂ ಸಹಾ ಏನಾದರೂ ಬರಲೇಬೇಕು, ಬರೆಯೋಕೇನೋ ಆಸೆ, ಆದ್ರೆ ಹೇಗೆ ಅಂತಾ ಗೊತ್ತಿಲ್ಲ. ಹೋಗಲಿ ಬರೆದ ಮೇಲೆ ಪತ್ರಿಕೆಗೆ ಕಳಿಸುವುದು ಹೇಗೆ ಅದೂ ಗೊತ್ತಿಲ್ಲ,’ ಎನ್ನುವ ಅಳುಕು. ಅಂತೂ ಆಸೆಯಂತೂ ಮನಸ್ಸಿನಲ್ಲಿ ಇದ್ದೇ ಇತ್ತು. ಆದರೆ ಜೀವನ ನಿಂತು ಹೋಗುತ್ತಾ? ಅದು ತನ್ನಷ್ಟಕ್ಕೆ ಮುಂದುವರಿಯಿತು. ಬಾಲ್ಯದಿಂದ ಹರೆಯ, ಮುಂದೆ ಸಂಸಾರ, ಹೀಗೆ ಸಾಗಿತು ಜೀವನ. ಮಕ್ಕಳು ನಂತರ ಮೊಮ್ಮಕ್ಕಳು. ಆದರೆ ಆಸೆ ಮಾತ್ರ ಮನಸ್ಸಿನಲ್ಲಿ ಹಾಗೆಯೇ ಇತ್ತು. ತಮ್ಮೆಲ್ಲ ಜವಾಬ್ದಾರಿಗಳು ಒಂದು ಮಟ್ಟಕ್ಕೆ ಬಂತು ಅಂದಾಗ ಇವರಲ್ಲಿ ಸುಪ್ತವಾಗಿ ಮನಸ್ಸಿನಲ್ಲೇ ಇದ್ದ ಆಸೆ ಮತ್ತೆ ಚಿಗುರೊಡೆಯಿತು ಎನ್ನಬಹುದು.

ಅಷ್ಟು ಹೊತ್ತಿಗಾಗಲೇ ಇವರಿಗೆ ಐವತ್ತು ವರ್ಷ, ಆದರೆ ಯಾವಾಗಲೂ ಇವರ ಮನಸ್ಸಿನಲ್ಲಿ ಮೂಡುತ್ತಿದ್ದ ಪ್ರಶ್ನೆ ತಾನು ಏನು? ತನ್ನ ಐಡೆಂಟಿಟಿ ಏನು?

ಮಗಳು ಡೆಕ್ಕನ್‌ ಹೆರಾಲ್ಡ್ ಪತ್ರಿಕೆಗೆ ಲೇಖನಗಳನ್ನು ಬರೆಯುತ್ತಿದ್ದಳು. ಟಿ.ವಿ. ಪ್ರೋಗ್ರಾಂ ಮಾಡುತ್ತಿದ್ದಳು. ಅವಳ ಲೇಖನಗಳಿಗೆ, ಟಿ.ವಿ. ಪ್ರೋಗ್ರಾಂಗೆ ಸ್ಕ್ರಿಪ್ಟ್ ಬರೆಯಲು ಸಹಾಯ ಮಾಡುತ್ತಿದ್ದರು. ಮಗ ಒಳ್ಳೆಯ ಚರ್ಚಾಪಟು. ಅವನ ಭಾಷಣಗಳಿಗೆ ಇವರದೇ ಸ್ಕ್ರಿಪ್ಟ್. ಹೀಗೆ ಇವರ ಬರವಣಿಗೆ ಅಷ್ಟಕ್ಕೇ ಸೀಮಿತ ಆಗಿತ್ತು. ಇವರಿಗೆ ತಮ್ಮ ಮಕ್ಕಳು, ಪತಿಯ ಬಗ್ಗೆ ಬಹಳ ಹೆಮ್ಮೆ. ಯಾರಿಗಾದ್ರೂ ಅವರನ್ನ ಪರಿಚಯ ಮಾಡಿಸೋಕೆ ಬಹಳ ಖುಷಿ. ನನ್ನವರು ಡಾಕ್ಟರ್‌, ನನ್ನ ಮಗಳು ಡಬ್ಬಲ್ ಗ್ರ್ಯಾಜುಯೆಟ್‌, ಮಗ ಎಂ.ಡಿ.ಎಸ್‌ ಮತ್ತು ಚಿಕ್ಕ ಮಗ ಎಂ.ಎಸ್‌ ಅಂತ. ಆದರೆ ಮನಸ್ಸಿನಲ್ಲಿ ಏನೋ ಕೊರತೆ, ಹಾಗಾದರೆ ತಾನು ಏನು? ಇವರ ತಾಯಿ ಅನ್ನೋದು ಬಿಟ್ಟರೆ ತಾನು ಬೇರೆ ಏನೂ ಅಲ್ಲಾ ಎನ್ನುವ ಬೇಸರ. ಹಾಗಾದರೆ ಏನು ಮಾಡಬೇಕು ಅಥವಾ ಏನು ಮಾಡಬಹುದು ಎಂದೂ ಗೊತ್ತಿರಲಿಲ್ಲ.

ಎದೆಯಲ್ಲಿ ಹುದುಗಿದ್ದ ಸಾಹಿತ್ಯ ಪ್ರೇಮ

ಬಹುತೇಕ ಮಹಿಳೆಯರು ಮಗಳಾಗಿ, ವಿದ್ಯಾರ್ಥಿನಿಯಾಗಿ, ಪತ್ನಿಯಾಗಿ, ತಾಯಿಯಾಗಿ, ಅತ್ತೆಯಾಗಿ, ಅಜ್ಜಿಯಾಗಿ ತಮ್ಮ ಕರ್ತವ್ಯಗಳನ್ನು ಪೂರೈಸುತ್ತಾರೆ. ಆದರೆ ಅವರ ವೈಯಕ್ತಿಕ ಆಸೆಗಳು ಅನೇಕ ಬಾರಿ ಮುದುಡಿ ಹೋಗುತ್ತವೆ. ಚಿಕ್ಕಂದಿನಲ್ಲಿ ಟಿಸಿಲೊಡೆದ ಹಲವಾರು ಹವ್ಯಾಸಗಳು ಬಹಳಷ್ಟು ಮಹಿಳೆಯರಿಗೆ ಸಂಸಾರದ ಜಂಜಾಟದಲ್ಲಿ ಬಾಡಿ ಹೋಗುತ್ತದೆ. ಆದರೆ ಮಂಜುಳಾ ರಾಜ್‌ ಎದೆಯಲ್ಲಿ ಬೆಚ್ಚಗೆ ಹುದುಗಿದ್ದ ಸಾಹಿತ್ಯ ಪ್ರೇಮ ತಾಯಿ. ಅಜ್ಜಿಯಾದ ನಂತರವೇ ಸರಿಯಾದ ರೂಪ ಪಡೆದದ್ದು. ನಂತರ ಅವರ ಪ್ರತಿಭೆಯ ಗುರುತಿಸುವಿಕೆಗೂ ಕಾರಣವಾಯಿತು. ಮಂಜುಳಾ ರಾಜ್‌ ತಮ್ಮೆಲ್ಲಾ ಸಂಸಾರದ ಜವಾಬ್ದಾರಿಗಳನ್ನು ಮುಗಿಸಿ ಬರವಣಿಗೆಯನ್ನು ಆರಂಭಿಸಿದರು.

ಪ್ರತಿಭೆಗೂ ವಯಸ್ಸಿಗೂ ನಿರ್ಬಂಧವಿಲ್ಲ

ಐವತ್ತನೇ ವಯಸ್ಸಿನಲ್ಲಿ ಭಾರತೀಯ ವಿದ್ಯಾಭವನದ ಸ್ನಾತಕೋತ್ತರ ಕನ್ನಡ ಪತ್ರಿಕೋದ್ಯಮ ಪದವಿಯನ್ನು (ಪೋಸ್ಟ್ ಗ್ರ್ಯಾಜುಯೇಷನ್‌ ಡಿಪ್ಲೋಮಾ ಇನ್‌ ಕನ್ನಡ ಜರ್ನಲಿಸಂ) ಪಡೆದರು. ಹರೆಯದ ಮಕ್ಕಳ ಮಧ್ಯೆ ಬೆರೆತು ಓದಿ ಎರಡನೆಯ ಸ್ಥಾನ ಗಳಿಸಿದರು. ಇಪ್ಪತ್ತು ವರ್ಷಗಳ ಹಿಂದೆಯೇ ಇವರು ಪೂರ್ಣವಾಗಿ ಕಂಪ್ಯೂಟರ್‌ ನಲ್ಲಿ ಟೈಪ್‌ ಮಾಡಿ, ಚಿತ್ರಗಳ ಸಮೇತ ಲೇಖನಗಳನ್ನು ಕಳುಹಿಸುವ ಜಾಣ್ಮೆಯನ್ನು ಹೊಂದಿದ್ದು, ಪ್ರತಿಭೆಗೂ ವಯಸ್ಸಿಗೂ ಯಾವುದೇ ನಿರ್ಬಂಧವಿಲ್ಲ ಎನ್ನುವುದನ್ನು ನಿರೂಪಿಸಿದ್ದಾರೆ.

ಸ್ವಲ್ಪ ನಿಧಾನವಾಗಿ ಪ್ರಾರಂಭವಾಗಿದ್ದರಿಂದಲೋ ಏನೋ ಇವರ ಬರವಣಿಗೆಯ ಓಟ ಬಹಳ ವೇಗವಾಗಿತ್ತು. ಕನ್ನಡದ ಎಲ್ಲ ಪತ್ರಿಕೆಗಳಲ್ಲೂ ಇವರ ಲೇಖನಗಳು ಪ್ರಕಟವಾದವು. ಮೊಟ್ಟ ಮೊದಲಿಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಒಳಾಂಗಣ ವಿನ್ಯಾಸದ ಬಗ್ಗೆ ಸರಣಿ ಲೇಖನಗಳನ್ನು ಬರೆದ ಹೆಗ್ಗಳಿಕೆ ಇವರದು.

ಬರವಣಿಗೆಯ ವಿಭಿನ್ನ ಆಯಾಮಗಳು

ಮಂಜುಳಾ ರಾಜ್‌ ರ 500ಕ್ಕಿಂತಲೂ ಹೆಚ್ಚು ಲೇಖನಗಳು ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಜಾವಾಣಿ, ವಿಜಯ ಕರ್ನಾಟಕ, ಕನ್ನಡಪ್ರಭ, ಹೊಸ ದಿಗಂತ, ದಿನ ಪತ್ರಿಕೆಗಳಾದರೆ, ವಾರ ಪತ್ರಿಕೆಗಳಾದ ಸುಧಾ, ತರಂಗ, ಮಂಗಳ ಮತ್ತು ಮಾಸ ಪತ್ರಿಕೆಗಳಾದ ಗೃಹಶೋಭಾ, ಸಖಿ, ತುಷಾರ ಮತ್ತು ಸ್ತ್ರೀ ಜಾಗೃತಿ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗುತ್ತಿವೆ.

ಬರವಣಿಗೆಯ ವಿಭಿನ್ನ ಆಯಾಮಗಳನ್ನು ಮುಟ್ಟಿದವರು ಮಂಜುಳಾ ರಾಜ್‌. ವಿಷಯ ಯಾವುದಾದರೂ ಸರಿ ಅದಕ್ಕೆ ಅಕ್ಷರ ರೂಪ ಕೊಡುವಲ್ಲಿ ಸಮರ್ಥರು ಎನ್ನಬಹುದು. ಇವರು ಮಕ್ಕಳ, ಮಹಿಳೆಯರ, ಶಿಕ್ಷಣ, ಸಂಪ್ರದಾಯ ಕುರಿತ ಪ್ರಬಂಧ, ಲೇಖನಗಳನ್ನು ಕಥೆ, ಹಾಸ್ಯ ಲೇಖನಗಳನ್ನು ಬರೆದರು. ಇವರ ಪತಿ ಡಾ. ಎ.ಆರ್‌. ಗೋವಿಂದ ರಾಜುರವರಿಗೆ ವಿದೇಶ ಪ್ರವಾಸವೆಂದರೆ ಬಹಳ ಪ್ರೀತಿ. ಹೀಗಾಗಿ ಇವೆಲ್ಲಕ್ಕೂ ಒಳಾಂಗಣ ವಿನ್ಯಾಸದ ಬಗ್ಗೆ ಕನ್ನಡದಲ್ಲಿ ಬರೆಯುವವರು ಅಪರೂಪವಾಗಿದ್ದು ಇವರ ಲೇಖನಗಳಿಗೆ ಒಳ್ಳೆಯ ಪ್ರಾಶಸ್ತ್ಯ ದೊರೆಯಿತು.

ಅಭಿವೃದ್ಧಿ ಪತ್ರಿಕೋದ್ಯಮದತ್ತ

ನಂತರ ಸಿ.ಡಿ.ಎಲ್ (ಕಮ್ಯುನಿಕೇಶನ್‌ ಆಫ್‌ ಡೆಲಪ್‌ ಮೆಂಟ್‌ ಲರ್ನಿಂಗ್‌) ಸಂಸ್ಥೆಯ ಪರಿಚಯವಾಗಿ ಅಭಿವೃದ್ಧಿ ಪತ್ರಿಕೋದ್ಯಮದ ಬಗ್ಗೆ ಇವರ ಗಮನ ಹರಿಯಿತು. ಲೇಖಕರಿಗೆ ಮತ್ತು ಪತ್ರಕರ್ತರಿಗೆ ಯಾವುದಾದರೊಂದು ವಿಷಯದ ಬಗ್ಗೆ ಮಾಹಿತಿ ನೀಡಿ. ಲೇಖನ ಬರೆಯಲು ಪ್ರೋತ್ಸಾಹ ನೀಡುವ ಸಂಸ್ಥೆ ಅದು. ಕರ್ನಾಟಕದ ಕೆರೆಗಳ ಅಭಿವೃದ್ಧಿ ಬೀಜ, ಬ್ಯಾಂಕಿನಿಂದ ಶುರುವಾದದ್ದು ಕೃಷಿ ಹೊಂಡದ ತನಕ ಬೆಳೆಯಿತು. ಸಾವಯವ ಕೃಷಿ ನಡೆಸುತ್ತಿದ್ದು, ಕಸದ ತೊಟ್ಟಿಯಲ್ಲಿ ಬಿದ್ದಿದ್ದ ಹೆಣ್ಣು ಮಗುವನ್ನು ಎತ್ತಿಕೊಂಡು ಬಂದು, ಬೆಳೆಸಿ. ಮಗನಿಗೆ ಮದುವೆ ಮಾಡಿಕೊಂಡು ಎಲ್ಲರಿಗೂ ಮಾದರಿಯಾಗಿರುವ ಮಹಾನ್‌ ಮಾನವತಾವಾದಿ ಹೊಂಬಾಳಮ್ಮನ ಪರಿಚಯವಾಗಿ, `ಹೊನ್ನಿನ ವ್ಯಕ್ತಿತ್ವದ ಹೊಂಬಾಳಮ್ಮ’ ಎನ್ನುವ ಲೇಖನ ಬರೆದರು. ಅದು ಬಹಳ ಜನಪ್ರಿಯವಾಯಿತು. ಇವರ ಬರವಣಿಗೆಯ ಕಾಯಕ ಹಾಗೆಯೇ ಮುಂದುವರಿಯಿತು.

ಎಚ್‌..ವಿ/ಏಡ್ಸ್ ಲೇಖನಗಳು

ಮುಂದಿನ ವರ್ಷಗಳಲ್ಲಿ ಎಚ್‌.ಐ.ವಿ/ ಏಡ್ಸ್ ನ ಬಗ್ಗೆ ಬಹಳಷ್ಟು ಲೇಖನಗಳನ್ನು ಬರೆದರು. ಎಚ್‌.ಐ.ವಿ. ಹೊಂದಿರುವ ಅನೇಕ ಮಹಿಳೆಯರು ಮತ್ತು ಮಕ್ಕಳ ಸಂದರ್ಶನ ಮಾಡಿದರು. ಅನೇಕ ಪಾಸಿಟಿವ್ ‌ನೆಟ್‌ ವರ್ಕ್‌ ಕೇಂದ್ರಗಳಿಗೆ ಭೇಟಿ ನೀಡಿದರು. ಅವರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಮತ್ತು ತಮ್ಮದಲ್ಲದ ತಪ್ಪಿಗೆ ನೋವನ್ನು ಅನುಭವಿಸುವ ಅನೇಕರ ಬಗ್ಗೆ ಮನ ಮಿಡಿಯುವ ಲೇಖನಗಳನ್ನು ಬರೆದರು. ಯೂನಿಸೆಫ್‌ ನಿಂದ ಎಚ್‌.ಐ.ವಿ/ಏಡ್ಸ್ ಕನ್ನಡ ಪತ್ರಿಕೋದ್ಯಮ ಪ್ರಶಸ್ತಿಯನ್ನೂ ಪಡೆದರು. ಒ.ವಿ.ಸಿ ಮಕ್ಕಳು ಅಂದರೆ ದುರ್ಬಲ ಮತ್ತು ಅನಾಥ ಮಕ್ಕಳ ಬಗ್ಗೆ ಸಹ ವರ್ಲ್ಡ್ ವಿಶನ್‌ ಜೊತೆಗೂಡಿ ಅನೇಕ ಲೇಖನಗಳನ್ನು ಬರೆದರು.

ಅಕಾಶವಾಣಿಯ ನಂಟು

ಆಕಾಶವಾಣಿಯಲ್ಲಿ ಹಲವಾರು ನಾಟಕಗಳಲ್ಲಿ ಧ್ವನಿ ನೀಡಿದ್ದಾರೆ ಹಾಗೂ ಬಿ ಗ್ರೇಡ್‌ ಕಲಾವಿದೆಯೂ ಹೌದು. ಅನೇಕ ವಿಭಿನ್ನ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸಂದರ್ಶನಗಳನ್ನು ಒಳಗೊಂಡ ರೂಪಕಗಳು, ಚರ್ಚೆ, ಭಾಷಣ ಜೊತೆಗೆ ಮಾನವ ವಿಕಾಸದ ಸರಣಿ ಎನ್ನುವ ವಿಜ್ಞಾನ ಕಾರ್ಯಕ್ರಮದ ಕೆಲವು ಕಂತುಗಳನ್ನು ನಿರ್ವಹಿಸಿದ್ದಾರೆ.

ಆಪ್ತ ಸಮಾಲೋಚನೆ

ಬೆಂಗಳೂರಿನ ಪ್ರಸನ್ನ ಕೌನ್ಸೆಲಿಂಗ್‌ ಸೆಂಟರ್‌ ನಿಂದ ಆಪ್ತ ಸಮಾಲೋಚನೆಯ ಶಿಕ್ಷಣ ಪಡೆದಿದ್ದಾರೆ. ಹಾಗಾಗಿ ಈಗಲೂ ಆಪ್ತ ಸಮಾಲೋಚಕಿಯಾಗಿ ಸಲಹೆ ನೀಡುತ್ತಿದ್ದಾರೆ. ಎಂ.ಎಲ್.ಎ. ಕಾಲೇಜಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೂ ಆಪ್ತ ಸಮಾಲೋಚನೆಯ ತರಗತಿಗಳನ್ನು ತೆಗೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಪರೀಕ್ಷಾ ಭಯ, ಪೋಷಕರ ತಳಮಳ, ಯುವಕ/ಯುವತಿಯರಿಗೆ ಪ್ರೇಮ ವೈಫಲ್ಯದ ನಂತರ ಉಂಟಾಗುವ ಮಾನಸಿಕ ಕಾಯಿಲೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಆಪ್ತ ಸಮಾಲೋಚನೆಗಳನ್ನು ನಡೆಸಿ ಅವರುಗಳು ಗುಣಮುಖರಾಗುವಂತೆ ಮಾಡಿದ್ದಾರೆ. ಅಂತೆಯೇ ಸಾಮಾನ್ಯವಾಗಿ ಎದುರಿಸುವ ಮಾನಸಿಕ ಸಮಸ್ಯೆಗಳ ಬಗ್ಗೆ ಅನೇಕ ಲೇಖನಗಳನ್ನು ಬರೆದಿದ್ದಾರೆ.

ದಿಶಾ ಜೊತೆಗೂಡಿ

ಈಗಿನ ಯುವ ಜನತೆಗೆ ಸಂಸ್ಕೃತಿಯ ಪರಿಚಯ ಮಾಡಿಸುವ ನಿಟ್ಟಿನಲ್ಲಿ ದಿಶಾ ಭಾರತ ಸಂಸ್ಥೆಯವರು ಕಾಲೇಜು ವಿದ್ಯಾರ್ಥಿಗಳಿಗೆ ನಡೆಸುವ ಕಾರ್ಯಾಗಾರಗಳಲ್ಲಿ ಗ್ರೂಪ್‌ ಕೌನ್ಸೆಲರ್‌ ಆಗಿ ಕಾರ್ಯ ನಿರ್ವಹಿಸಿದ್ದಾರೆ.

ಆಶಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಣೆ

ಇವೆಲ್ಲದರ ಜೊತೆಗೆ ಬಡ ಮತ್ತು ದುರ್ಬಲ ಮಕ್ಕಳಿಗೆ ಉಚಿತವಾಗಿ ಇಂಗ್ಲಿಷ್‌ ಮತ್ತು ಕನ್ನಡ ಪಾಠಗಳನ್ನು ಹೇಳಿಕೊಡುವ ಆಶಾ ಇನ್ಛಿನೈಟ್‌ ಸಂಸ್ಥೆಯ ಕನ್ನಡ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ಮಾತನಾಡಲು ಕಲಿಸುವುದು ಮತ್ತು ಕನ್ನಡ ಓದಲು ಮತ್ತು ಬರೆಯಲು ಕಲಿಸಲು ಅನುಕೂಲವಾಗುವಂತೆ ಎರಡು ಪುಸ್ತಕಗಳನ್ನು ಬರೆದಿದ್ದಾರೆ.

ತಮ್ಮದೊಂದು ಬ್ಲಾಗ್

ಬರಹಗಾರ್ತಿಯ ದೃಷ್ಟಿಕೋನ ಎನ್ನುವ ಬ್ಲಾಗ್‌ ಪ್ರಾರಂಭಿಸಿ ತಮ್ಮ ಎಲ್ಲಾ ಲೇಖನಗಳನ್ನು ಅಲ್ಲಿ ಸೇರಿಸಿದ್ದಾರೆ. ಆಸಕ್ತಿ ಇದ್ದವರು ಓದಬಹುದು, ಜೊತೆಗೆ ತಮ್ಮೆಲ್ಲಾ ಲೇಖನಗಳನ್ನು ಒಂದು ಕಡೆ ಭದ್ರವಾಗಿ ಶೇಖರಿಸಿಡುವ ಅಭಿಪ್ರಾಯ ಅವರದು. ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ನಾಡಿನ ಹಲವಾರು ಸಂಘ ಸಂಸ್ಥೆಗಳು ಇವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿ ಗೌರವಿಸಿವೆ.

ಲಕ್ಷ್ಮಣ ಕೊಡಸೆಯವರ ಮನದ ಮಾತು

ಪ್ರಜಾವಾಣಿಯ ಸಹಾಯಕ ಸಂಪಾದಕರಾಗಿದ್ದ `ಲಕ್ಷ್ಮಣ ಕೊಡಸೆ’ ಮಂಜುಳಾ ರಾಜ್‌ ರ `ಅಮೆರಿಕಾ ಅಮೆರಿಕಾ’ ಪುಸ್ತಕದ ಬಗ್ಗೆ ಹೀಗೆ ಅಭಿಮಾನದಿಂದ ಬರೆದಿದ್ದಾರೆ. ಈ ಕೃತಿಯಲ್ಲಿ ಲೇಖಕಿ ಪ್ರಾಥಮಿಕ ಸಂಗತಿಗಳತ್ತ ಸಮಯ ವ್ಯರ್ಥ ಮಾಡಿಲ್ಲ. ನೇರವಾಗಿ ವಿಷಯ ಪ್ರವೇಶ ಮಾಡಿದ್ದಾರೆ. ಪತ್ರಿಕೆಗಳಿಗೆ ಬರೆಯುವ ಜಾಣ್ಮೆ ಸೂಕ್ಷ್ಮವಾಗಿದೆ. ಸುತ್ತ ಕಂಡದ್ದನ್ನು ಚಿಕಿತ್ಸಕ ನೋಟದಿಂದ ದಾಖಲಿಸಿದ್ದಾರೆ. ಸಣ್ಣ ಸಣ್ಣ ವಿವರಗಳನ್ನೂ ಗುರುತಿಸಿದ್ದಾರೆ. ಇದರಿಂದ ಓದುಗರು ತಾವೇ ಅಮೆರಿಕಾದಲ್ಲಿ ಪ್ರವಾಸ ಮಾಡಿ ಬಂದ ಹಾಗಾಗುತ್ತದೆ. ಬರವಣಿಗೆಯ ಯಶಸ್ಸು, ಓದುಗರನ್ನು ತನ್ನೊಟ್ಟಿಗೆ ಕರೆದೊಯ್ಯುವ ಕಲೆ, ಅವರಿಗೆ ಕರಗತವಾಗಿದೆ. ನಾಡಿನ ಹೆಸರಾಂತ ಪತ್ರಿಕೆಗಳಿಗೆ ನಿಯಮಿತವಾಗಿ ಲೇಖನಗಳನ್ನು ಬರೆಯುವ ಕೆಲವೇ ಯಶಸ್ವಿ ಲೇಖಕಿಯರಲ್ಲಿ ಇವರೂ ಒಬ್ಬರು.

ಪ್ರಶಸ್ತಿಗಳು

2019 ಕರ್ನಾಟಕ ಮಹಿಳಾ ಸಾಧಕಿ ಎನ್ನುವ ಪ್ರಶಸ್ತಿ.

2018 ಪ್ರತಿಷ್ಠಿತ ವಾಡ್ಲಿ ಮೀಡಿಯಾ ಪ್ರಶಸ್ತಿ, ಲಿಂಗ ಸಂವೇದನೆಯ ಬಗೆಗೆ ಬರೆದ ಲೇಖನಕ್ಕಾಗಿ ಸಂದ ಪ್ರಶಸ್ತಿ.

2017 ಬೆಂಗಳೂರಿನ ಎಚ್‌.ಎಸ್‌.ಆರ್‌ ಹಬ್ಬದಲ್ಲಿ `ಅತ್ಯಂತ ಪ್ರತಿಭಾವಂತ ಹಿರಿಯ ನಾಗರಿಕ’ ಪ್ರಶಸ್ತಿ.

2016 ಆಶಾ ಇನ್ಛಿನೈಟ್‌ ಸಂಸ್ಥೆಯಿಂದ ಸ್ಟಾರ್‌ ಸೇವಾಕರ್ತೆ ಪ್ರಶಸ್ತಿ.

2015 ಕರ್ನಾಟಕ ಲೇಖಕಿಯರ ಸಂಘದಿಂದ ಇವರ ಅಮೆರಿಕಾ ಅಮೆರಿಕಾ ಪ್ರವಾಸ ಕಥನಕ್ಕೆ 2011ರ ಉತ್ತಮ ಪ್ರವಾಸ ಕಥನವೆಂದು ಕಮಲಾ ರಾಮಸ್ವಾಮಿ ಧತ್ತಿ ನಿಧಿ ಪ್ರಶಸ್ತಿ.

2011 ಆ.ೀ.ಪಾ. ಬೆಂಗಳೂರು ಸಂಸ್ಥೆಯಿಂದ ಸಾಹಿತ್ಯ ಕ್ಷೇತ್ರದಲ್ಲಿನ ಅನುಕರಣನೀಯ ಸೇವೆಗಾಗಿ `2011ರ ಶ್ರೇಷ್ಠ ಮಹಿಳೆ’ ಪ್ರಶಸ್ತಿ.

2010 ಮತ್ತು 2011 ಯೂನಿಸೆಫ್‌ ನಿಂದ ಎಚ್‌.ಐ.ವಿ/ಏಡ್ಸ್ ಪೀಡಿತರ ಬಗ್ಗೆ ಕನ್ನಡದ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯಲು 2010 ಮತ್ತು 2011 ಎರಡು ವರ್ಷ ಅನುದಾನ ಪಡೆದ ಹೆಗ್ಗಳಿಕೆ.

2010 ಯೂನಿಸೆಫ್‌ ಮತ್ತು ಸಿಡಿಎಲ್ ನಿಂದ ಸೂಕ್ಷ್ಮ, ಪ್ರಬುದ್ಧ ಮತ್ತು ತಿಳಿವಳಿಕೆ ಕೊಡುವ ಲೇಖನಗಳನ್ನು ಕನ್ನಡ ಪತ್ರಿಕೆಗಳಲ್ಲಿ ಬರೆದು, ಪ್ರಕಟಿಸಿದ್ದಕ್ಕಾಗಿ `ಯೂನಿಸೆಫ್‌ ಎಚ್‌.ಐ.ವಿ/ಏಡ್ಸ್’ ಕನ್ನಡ ಪತ್ರಿಕೋದ್ಯಮ ಪ್ರಶಸ್ತಿಯನ್ನು ಪಡೆದ ಧನ್ಯತೆ.

ಪ್ರಕಟಿತ ಪುಸ್ತಕಗಳು

ಮಕಾಲ್ ನಿಂದ ಮಸೈಮಾರಾದವರೆಗೆ 2020

ಜನರೇಶನ್‌ ಗ್ಯಾಪ್‌ 2020

ಅವರಿಗೂ ಸ್ಪೇಸ್‌ ಕೊಡಿ 2020

ಹಾಂಕಾಂಗ್‌ ಮಕಾಲ್ ‌ಚೈನಾ 2012

ನಿನ್ನ ಪ್ರಯಾರಿಟಿ ಲಿಸ್ಟಿನಲ್ಲಿ ನಾನೆಲ್ಲಿ? 2012

ಅಮೆರಿಕಾ ಅಮೆರಿಕಾ 2010

ಭೂಮಿಕಾ 2009

ಶಿಕ್ಷಣ ಒಂದು ನೋಟ 2009

ಒಳಾಂಗಣ ವಿನ್ಯಾಸ 2007

ಯೂರೋಪ್‌ ಯಾತ್ರೆ 2007

ಮನೆ ಒಳಾಂಗಣ ವಿನ್ಯಾಸ 2010

ಪ್ರತಿಷ್ಠಿತ ಸುಧಾ ವಾರ ಪತ್ರಿಕೆಯ ಯುಗಾದಿ ವಿಶೇಷ ಸಂಚಿಕೆಯ ಜೊತೆ ನೀಡುವ ಉಚಿತ ಸಂಚಿಕೆಯನ್ನು ಬರೆದುಕೊಟ್ಟ ಹೆಗ್ಗಳಿಕೆ.

`ನಾನು ಬಯಸಿದ್ದು ಒಂದು ಹೂವಷ್ಟೇ, ಆದರೆ ಆ ಭಗವಂತ ನನಗೆ ಹೂವಿನ ಗೊಂಚಲನ್ನೇ ನೀಡಿದ್ದಾನೆ. ಈಗ ನನ್ನ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ. ಬರೆಯುವ ಹಂಬಲ ಮತ್ತೂ ತೀವ್ರವಾಗಿದೆ,’ ಎನ್ನುತ್ತಾರೆ ಮಂಜುಳಾ ರಾಜ್‌.

ವಯಸ್ಸಾಯಿತು, ಜವಾಬ್ದಾರಿ ಮುಗಿಯಿತು ಎನ್ನುವವರಿಗೆ ಇವರು ಒಳ್ಳೆಯ ಉದಾಹರಣೆ. ಎಚ್‌.ಎಸ್‌.ಆರ್‌ ಲೇಔಟ್‌ ನಲ್ಲಿ ಮನೆ ಮಂದಿಯೆಲ್ಲಾ ಕುಳಿತು ಚರ್ಚಿಸಿ ಕಟ್ಟಿಸಿರುವ ಸುಂದರವಾದ ಮನೆಯಲ್ಲಿ ಕುಟುಂಬದವರೆಲ್ಲರ ಪ್ರೀತಿಯ ಸಿಂಚನದಲ್ಲಿ ಸಾಹಿತ್ಯ ಕೃಷಿ ಮಾಡುತ್ತಿರುವ ಮಂಜುಳಾ ರಾಜ್‌ ಇನ್ನೂ ಹೆಚ್ಚಿನ ಬರಹಗಳನ್ನು ನಾಡಿಗೆ ನೀಡಲಿ ಎಂದು ಗೃಹಶೋಭಾ ಹಾರೈಸುತ್ತಾಳೆ.

ಗಮನಿಸಿ :   ಲೇಖನ ಅಚ್ಚಿಗೆ ಹೋಗುವ ಹೊತ್ತಿಗೆ ಲೇಖಕಿ ಮಂಜುಳಾ ರಾಜ್ ತೀರಿಕೊಂಡರು ಎಂದು ತಿಳಿಸಲು ವಿಷಾಧಿಸುತ್ತೇವೆ.

ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ