ಸುರೇಶ್ : ಈ ಕೊರೋನಾದ ಕರ್ಮಕಾಂಡಗಳಿಂದ ಬಂದ ದೊಡ್ಡ ತೊಂದರೆ ಏನು?
ಮಹೇಶ್ : ಕೊರೋನಾದಿಂದ ಲಾಕಪ್ ತಪ್ಪಿದ್ದಲ್ಲ. ಲಾಕಪ್ ಅಂದ್ರೆ ಇಲ್ಲಿ ಪೊಲೀಸ್ ಕಸ್ಟಡಿ, ಲಾಕ್ ಡೌನ್ ಅಂದ್ರೆ ಹೆಂಡತಿ ಕಸ್ಟಡಿ ಅಂತ!
ಗುಂಡ : ಚೀನಾದವರು ಟಚ್ ಮೊಬೈಲ್, ಕಾರ್, ವಾಚ್ ಇನ್ನು ಬೇರೆ ಏನೇನೋ ಕಂಡುಹಿಡಿದು ಎಷ್ಟು ಮುಂದುವರಿದಿದ್ದಾರೆ ಗೊತ್ತಾ?
ಸೀನ : ಜೊತೆಗೆ ಪರಸ್ಪರ ಟಚ್ ಮಾಡಿಕೊಂಡ್ರೆ ಬರೋ ಕೊರೋನಾ ರೋಗವನ್ನೂ ಕಂಡುಹಿಡಿದವರು ಅವರೇ ತಾನೇ?
ರಂಗಮ್ಮ : ಪ್ರಪಂಚ ಎಷ್ಟು ಬದಲಾಗಿದೆ ಅಲ್ವಾ?
ನಿಂಗಮ್ಮ : ನೀನು ಯಾವ ದೃಷ್ಟಿಯಲ್ಲಿ ಹೇಳ್ತಿದ್ದೀಯಾ?
ರಂಗಮ್ಮ : ಹಿಂದೆಲ್ಲ ನೆಗೆಟಿವ್ ಯೋಚಿಸುವ ಜನರಿಂದ ದೂರ ಇರಿ ಅಂತಿದ್ದರು, ಈಗ ಯಾರು ಪಾಸಿಟಿವ್ ಆಗಿದ್ದಾರೆ, ಅವರಿಂದ ದೂರ ಓಡಿ ಅಂತಿದ್ದಾರೆ!
ನಾಣಿ : ಈ ಹಾಳಾದ ಕೊರೋನಾ ವೈರಸ್ ನಮ್ಮ ದೇಶ ಬಿಟ್ಟು ತೊಲಗಿದರೆ ಸಾಕಾಗಿದೆ. ಯಾವಾಗ ಹೋಗುತ್ತೋ ಏನೋ?
ವೆಂಕ : ಅದು ಹೇಗೆ ತೊಲಗಲು ಸಾಧ್ಯ? ಎಲ್ಲಿ ನೋಡಿದರೂ ಬಸ್ಸು, ರೈಲು, ವಿಮಾನ, ಹಡುಗುಗಳು ಲಾಕ್ ಡೌನ್ ನಿಂದ ಬಂದ್ ಆಗಿ ಕುಳಿತಿವೆಯಲ್ಲಾ….?
ಟೀಚರ್ : ಎಲ್ಲಿ…. ಯಾರಾದ್ರೂ ಕೊರೋನಾ ಬಗ್ಗೆ ಒಂದಿಷ್ಟು ಕೊರೆಯಿರಿ ನೋಡೋಣ.
ಗುಂಡ : ಈ ಕೊರೋನಾ ಹುಟ್ಟಿದ್ದು ಚೀನಾದಲ್ಲಿ, ಬೆಳೆದದ್ದು ಇಟಲಿಯಲ್ಲಿ, ಡಿಗ್ರಿ ತಗೊಂಡಿದ್ದು ಸ್ಪೇನ್ ನಲ್ಲಿ, ಕೆಲಸಕ್ಕೆ ಸೇರಿದ್ದು ಅಮೆರಿಕಾದಲ್ಲಿ, ರಿಟೈರ್ ಆಗ್ತಾ ಇರೋದು ಮಾತ್ರ ನಮ್ಮ ದೇಶದಲ್ಲಿ ಅನ್ಸುತ್ತೆ!
ರಾಮಣ್ಣ : ನಮ್ಮ ಸನಾತನ ಧರ್ಮದ ಆಚರಣೆಗೂ ಕೊರೋನಾಗೂ ಏನಾದರೂ ಹೋಲಿಕೆಗಳಿವೆಯೇ?
ಭೀಮಣ್ಣ : ಓಹೋ…. ಯಾಕಿಲ್ಲ? ಕ್ವಾರಂಟೈನ್ ಅಂದ್ರೆ ಮೈಲಿಗೆ, ಸೋಶಿಯ್ ಡಿಸ್ಟೆನ್ಸಿಂಗ್ ಅಂದ್ರೆ ಮಡಿ. ಸ್ಯಾನಿಟೈಸರ್ ಅಂದ್ರೆ ಪವಿತ್ರ ಮಂತ್ರ ಸ್ನಾನ, ಲಾಕ್ ಡೌನ್ ಅಂದ್ರೆ ಚಾತುರ್ಮಾಸ ವ್ರತ.
ಗಿರೀಶ್ : ಕೊರೋನಾ ಲಾಕ್ ಡೌನ್ ಕೃಪೆಯಿಂದ ಮೂಡಿದ ಹೊಸ ಗಾದೆ ಯಾವುದು?
ಸುರೇಶ್ : ಒಳಗೆ ಹಾಕಿಕೊಳ್ಳಲು ಚಡ್ಡಿ ಇಲ್ಲದಿದ್ದರೂ ಸರಿ, ಹೊರಗೆ ಬಾಯಿಮೂಗಿಗೆ ಹಾಕಲು ಮಾಸ್ಕ್ ಬೇಕೇಬೇಕು!
ಶೀಲಾ : ಏನು ಮಾಡಿದ್ರೂ ಈ ಕೊರೋನಾ ಲಾಕ್ ಡೌನ್ ನಿಂದ ಟೈಂಪಾಸ್ ಆಗ್ತಾ ಇಲ್ಲ. ಏನು ಮಾಡುವುದು?
ಲೀಲಾ : ಸಿಂಪಲ್ ಹೀಗೆ ಮಾಡು! ನೀನೇ ನಟಿಸಿರುವ ನಿನ್ನದೇ ಮದುವೆಯ ಸಿ.ಡಿ ಹಾಕಿಕೊಂಡು ನೋಡು. ಆದರೆ ಇಲ್ಲಿ ಫಾರ್ವರ್ಡ್ ಮಾಡಲು ಹೋಗಬಾರದು. ಇಲ್ಲದಿದ್ದರೆ 5 ನಿಮಿಷದಲ್ಲಿ ಕೊನೆಯ ಸೀನ್ ಬಂದೀತು!
ರಾಜು : ಛೇ….ಛೇ! ಈ ಹಾಳು ಲಾಕ್ ಡೌನ್ ನಿಂದಾಗಿ ಎಲ್ಲಾ ಅಂಗಡಿಗಳೂ ಮುಚ್ಚಿವೆ. ಏನೂ ಸಿಕ್ತಾ ಇಲ್ಲ.
ರವಿ : ಎಷ್ಟು ಬೇಕಾದ್ರೂ ಲಿಕ್ಕರ್ ಸಿಗುತ್ತೆ, ಅರ್ಜೆಂಟ್ ಅಂದ್ರೆ ಒಂದು ನಿಕ್ಕರ್ ಮಾತ್ರ ಸಿಕ್ಕಲ್ಲ!
ಸೂಚನೆ : ಲಾಕ್ ಡೌನ್ ಕಾರಣ ಮದುವೆ ನಿಲ್ಲಿಸಲಾಗದು. ಮದುವೆ ಮುಹೂರ್ತಕ್ಕೆ ಅವಕಾಶ ಇದೆ. ಆದರೆ ಜವಳಿ ಅಂಗಡಿ, ಒಡವೆ ಅಂಗಡಿ, ಫ್ಯಾನ್ಸಿ ಅಂಗಡಿ…. ಇತ್ಯಾದಿ ಎಲ್ಲಾ ಬಂದ್. ಛತ್ರ, ವಾಲಗದವರು, ಹೂ…. ಏನೂ ಸಿಗೋದಿಲ್ಲ.
ಗುಂಡ : ಹಾಗಾದರೆ…. ಮದುಮಕ್ಕಳು ಕೇವಲ ಬರ್ಮುಡಾ ನೈಟಿಯಲ್ಲೇ ಮದುವೆ ಆಗಬೇಕಾ?
ಕಿರಣ್ : ಕೊರೋನಾ ಲಾಕ್ ಡೌನ್ ನಿಂದ ಬರೀ ಕಷ್ಟ ಅಂತ ಅಲ್ಲ. ಬೇಕಾದಷ್ಟು ಲಾಭಗಳೂ ಇವೆ!
ವರುಣ್ : ಅದು ಹೇಗೆ?
ಕಿರಣ್ : ಬಾರ್‌ರೆಸ್ಟೋರೆಂಟ್ ಬಂದ್, ಹೆಂಡತಿ ಖುಷ್! ಬೆಳ್ಳಿ, ಬಂಗಾರದ, ಸೀರೆಗಳ ಅಂಗಡಿ ಬಂದ್, ಗಂಡ ಖುಷ್. ಸ್ಕೂಲು, ಕಾಲೇಜು ಬಂದ್, ಮಕ್ಕಳು ಖುಷ್! ಒಟ್ಟಿನಲ್ಲಿ ಸುಖ ಸಂಸಾರಕ್ಕೆ ಇದಕ್ಕಿಂತ ಇನ್ನೇನು ಬೇಕು?
ಪತ್ರಕರ್ತ : ನಿಮ್ಮ ನೆಚ್ಚಿನ ಆಟ ಯಾವುದು?
ಕೊರೋನಾ ರೋಗಿ : ಸದ್ಯಕ್ಕೆ ಉಸಿರಾಟ!
ಪತ್ರಕರ್ತ : ಕಾಲಗಳಲ್ಲಿ ಎಷ್ಟು ವಿಧ? ಯಾವವು?
ಆಧುನಿಕ ವಿದ್ಯಾಥಿ: ಕೊರೋನಾ ಮಧ್ಯೆ ಮನೆ ಒಳಗಿದ್ರೆ ಉಳಿಗಾಲ, ಹೊರಗೆ ಹೋದ್ರೆ ಕೊನೆಗಾಲ!
ರೂಪಾ : `ದೇರ್ ಲೈಸ್ ದಿ ಪಾಯಿಂಟ್’ ಇದನ್ನು ನೀನು ಕನ್ನಡದಲ್ಲಿ ಹೇಗೆ ಹೇಳ್ತೀಯಾ?
ವಿಜಯಾ : ಅಲ್ಲಿ ಮಲಗಿದ್ದಾಳೆ ನೋಡು ಬಿಂದು!
ಟೀಚರ್ : `ಗಂಡಾಂತರಕಾರಿ ಕೆಲಸ’ ಎಲ್ಲಿ ಯಾರಾದರೂ ಇದನ್ನು ನೀಟಾಗಿ ಆಂಗ್ಲದಲ್ಲಿ ಹೇಳಿ….
ಗುಂಡ : ಹಸ್ಬೆಂಡ್ ಬ್ರಿಂಗ್ಸ್ ವೆಜಿಟೆಬಲಸ್!
ಪ್ರಿನ್ಸಿಪಾಲ್ : ಒಂದು ನಿಮಿಷ ಇರಿ ಮೇಷ್ಟ್ರೇ… ಎಲ್ಲಿ ಯಾರಾದರೂ ಹೇಳಿ `ದ್ರೌಪದಿ ವಸ್ತ್ರಾಪಹರಣ’ ಮಾಡಿದವರು ಯಾರು?
ಸೀನ : ಈ ಮೇಷ್ಟ್ರೇ!
ಗುಂಡ : `ಬಾಹುಬಲಿ’ ಸಿನಿಮಾ ನೋಡೋಣ ಅಂತ ಥಿಯೇಟರ್ ಗೆ ಹೋದರೆ ಸೋಫಾ ಸೆಟ್ ಗೆ 800/ ಅನ್ನೋದಾ?
ಸೀನ : ಅದರ ಬದಲು 300/ರ 1 ಬಾಟಲಿ ಏರಿಸಿದರೆ ನೀನೇ `ಬಾಹುಬಲಿ’ ಆಗ್ಬಿಡ್ತಿದ್ದೆ ಬಿಡು!
ವೆಂಕ : ಆ ಗುಂಡ ಏನು ಮಾಡಿದ ಗೊತ್ತಾ? ಯಾರೋ ಹೆಂಗಸಿನ ಫೋಟೋ ಡಿಪಿಗೆ ಹಾಕಿಕೊಂಡಿದ್ದ. ಅದನ್ನು `ಸೆಂಡ್ ಮಿ’ ಅಂತ ಮೆಸೇಜ್ ಕಳಿಸಿದ್ರೆ, ಅವನು ನನ್ನ ನಂಬರನ್ನೇ ಬ್ಲಾಕ್ ಮಾಡಿಬಿಡುವುದೇ?
ನಾಣಿ : ಅಯ್ಯೋ ಮುಠ್ಠಾಳ! ಅದು ಅವನ ಹೆಂಡತಿ ಫೋಟೋ ಇರಬೇಕು!
ಟೀಚರ್ : ಮಳೆ ಸುರಿಸುವ ಮೋಡಗಳು ಏಕೆ ಕಪ್ಪಾಗಿರುತ್ತವೆ?
ವೆಂಕ : ಸ್ವಲ್ಪ ಹೊತ್ತು ಬಿಸಿಲಲ್ಲಿ ಸುತ್ತಾಡಿದ್ರೇ ನಾವೇ ಕಪ್ಪಾಗ್ತೀವಿ ಟೀಚರ್, ಹಾಗಿದ್ರೆ ಪಾಪಾ, ಆ ಮೋಡಗಳು ಇಡೀ ದಿನ ಬಿಸಿಲಲ್ಲಿ ಇರುತ್ವೆ, ಇನ್ನೂ ಅದರ ಪಾಡು ಕೇಳಬೇಕೇ?
ರಾಗಿಣಿ : ನಿನ್ನೆ ಇಡೀ ದಿನ ಒಂದು ಮೊಡವೆ ಕಾಡುತ್ತಿತ್ತು. ಮಾಡ್ತೀನಿ ಇರು ಅಂತ ರಾತ್ರಿ ಅದನ್ನು ಉಗುರಲ್ಲಿ ಚಿವುಟಿಬಿಟ್ಟೆ. ಎಲ್ಲ ಸರಿಹೋಯ್ತು ಅಂತ ಬೆಳಗ್ಗೆ ಏಳ್ತೀನಿ….
ರಂಜನಿ : ಆಮೇಲೆ ಏನಾಯ್ತು?
ರಾಗಿಣಿ : ಅದು ಹೋಗಿ ತನ್ನ ಮನೆಯವರನ್ನೆಲ್ಲ ಜಗಳಕ್ಕೆ ಕರೆದುಕೊಂಡು ಬರೋದಾ…….?
ಪ್ರೇಮಿ, ಪ್ರೇಯಸಿ ಜೊತೆ ಬಿಝಿ ಆಗಿದ್ದ. ಗೆಳೆಯ ಹೊರಗಿನಿಂದ ಅವನನ್ನು ಕೂಗಿದಾಗ ಮೋಟಿವೇಟ್ ನೋಡ್ತಿದ್ದೀನಿ ಎಂದ. ಕಕ್ಕಾಬಿಕ್ಕಿಯಾದ ಗೆಳೆಯರಿಗೆ ಮೋಟಿಯ ವೇಟ್ ನೋಡ್ತಿದ್ದೀನಿ ಎಂದು ವಿವರಿಸಿದ.
ಮಹೇಶ : ಚಳಿಗಾಲದಲ್ಲಿ ಕೆಲವರಿಗೆ ಲವ್ ಆಗುತ್ತೆ, ಮತ್ತೆ ಕೆಲವರಿಗೆ ಮದುವೇನೂ ಆಗುತ್ತೆ….
ಸುರೇಶ : ಆದರೆ ನನಗೆ ನೆಗಡಿ, ಕೆಮ್ಮು ಬಿಟ್ಟರೆ ಏನೂ ಆಗಲ್ಲ!
ಮಹೇಶ : ನಿನಗೇ ವಾಸಿ, ನನಗಂತೂ ಈ ಸಲ ಕೊರೋನಾ ಕೂಡ ಆಗಿತ್ತು.