ಕಡಲೆಯ ಫ್ರೆಂಚ್ಫ್ರೈಸ್

ಮೂಲ ಸಾಮಗ್ರಿ : 1 ಕಪ್‌ ಕಡಲೆಹಿಟ್ಟು, ಕರಿಯಲು ಎಣ್ಣೆ, ಅಗತ್ಯವಿದ್ದಷ್ಟು ಉಪ್ಪು, ಖಾರ, ಅರಿಶಿನ, ಓಮ, ಶುಂಠಿ, ಬೆಳ್ಳುಳ್ಳಿ ಪೇಸ್ಟ್. ಟೆಂಪರ್ಡ್ಕೆಚಪ್ಗಾಗಿ ಸಾಮಗ್ರಿ : ಒಗ್ಗರಣೆಗೆ ಸಾಸುವೆ, ಜೀರಿಗೆ, ಸೋಂಪು, ತುಸು ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು, ಕರಿಬೇವು, ಪುದೀನಾ, ಕೊ.ಸೊಪ್ಪು, ಟೊಮೇಟೊ ಕೆಚಪ್‌.

ಗಾರ್ನಿಂಶಿಂಗ್ಸಾಮಗ್ರಿ : ಒಂದಿಷ್ಟು ಹೆಚ್ಚಿದ ಟೊಮೇಟೊ, ಈರುಳ್ಳಿ, ಸೌತೆಕಾಯಿ, ಕೊ.ಸೊಪ್ಪು, ಉಪ್ಪು, ಮೆಣಸು, ನಿಂಬೆರಸ. ಟೆಂಪರ್ಡ್ಕೆಚಪ್ಗಾಗಿ ವಿಧಾನ : ಒಂದು ಸಣ್ಣ ಪ್ಯಾನಿನಲ್ಲಿ ಮೇಲೆ ಹೇಳಿದಂತೆ, ತುಸು ಎಣ್ಣೆ ಬಿಸಿ ಮಾಡಿ, ಒಂದೊಂದಾಗಿ ಎಲ್ಲಾ ಸಾಮಗ್ರಿ ಹಾಕಿ ಕೆದಕಬೇಕು. ನಂತರ ಇದಕ್ಕೆ ಟೊಮೇಟೊ ಕೆಚಪ್‌, ತುಸು ನೀರು ಬೆರೆಸಿ 1-2 ಕುದಿ ಬರಿಸಿ ಕೆಳಗಿಳಿಸಿ.

ಫ್ರೆಂಚ್ಫ್ರೈಸ್ಗಾಗಿ ವಿಧಾನ : ಮೇಲೆ ಹೇಳಿದ ಮೂಲ ಸಾಮಗ್ರಿಗಳನ್ನೆಲ್ಲ ಒಂದು ಬೇಸನ್ನಿನಲ್ಲಿ ಬೆರೆಸಿಕೊಂಡು, ಪಕೋಡ ಮಿಶ್ರಣದ ಹದಕ್ಕೆ ಗಟ್ಟಿಯಾಗಿ ಕಲಸಿಡಿ. ನಂತರ ಇದನ್ನು ಅರ್ಧ ಗಂಟೆ ಕಾಲ ನೆನೆಯಲು ಬಿಡಿ. ನಂತರ ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ, ಈ ಮಿಶ್ರಣ ಅದಕ್ಕೆ ಹಾಕಿ ಮಂದ ಉರಿಯಲ್ಲಿ ಬಾಡಿಸಬೇಕು. ನಂತರ ಇದನ್ನು ಹೊರತೆಗೆದು ಆರಲು ಬಿಡಿ. ತಣ್ಣಗಾದ ಮೇಲೆ ಚಿತ್ರದಲ್ಲಿರುವಂತೆ, ಫ್ರೆಂಚ್‌ ಫ್ರೈ ಆಕಾರದಲ್ಲಿ ಕತ್ತರಿಸಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಮಂದ ಉರಿಯಲ್ಲಿ ಇವನ್ನು ಹೊಂಬಣ್ಣಕ್ಕೆ ಕರಿದು ತೆಗೆಯಿರಿ. ಇವನ್ನು ಬಟರ್‌ ಪೇಪರ್‌ ಮೇಲೆ ಹರಡಿ, ಹೆಚ್ಚುವರಿ ಎಣ್ಣೆ ಹಿಂಗಿಸಿ. ನಂತರ ಚಿತ್ರದಲ್ಲಿರುವಂತೆ ಟೊಮೇಟೊ ಸಲಾಡ್‌, ಟೆಂಪರ್ಡ್‌ ಕೆಚಪ್‌ ಜೊತೆ ಸಂಜೆಯ ಬಿಸಿ ಬಿಸಿ ಕಾಫಿ/ಟೀ ಜೊತೆ ಸವಿಯಲು ಕೊಡಿ.

ಸ್ಪೆಷಲ್ ವೆಜ್ಕಬಾಬ್

ಮೂಲ ಸಾಮಗ್ರಿ : 1-1 ಕಪ್‌ ಬೆಂದ ರಾಜ್ಮಾ, ಕಡಲೆಕಾಳು, ಸುವರ್ಣಗೆಡ್ಡೆ ಹೋಳು, ಅರ್ಧ ಸೌಟು ತುಪ್ಪ, 12-15 ಗೋಡಂಬಿ, ತುಸು ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಖಾರ, ಧನಿಯಾಪುಡಿ.

ಕಬಾಬ್ಗಾಗಿ ಮಸಾಲೆ ಸಾಮಗ್ರಿ : ಅಗತ್ಯವಿದ್ದಷ್ಟು ಅಚ್ಚ ಖಾರದಪುಡಿ, ಧನಿಯಾಪುಡಿ, ಗರಂಮಸಾಲ, ಚಾಟ್‌ ಮಸಾಲ, ಚಕ್ಕೆ, ಮೊಗ್ಗು, ಲವಂಗ, ಜಾಪತ್ರೆ, ಜಾಯಿಕಾಯಿ, ಏಲಕ್ಕಿ ಇತ್ಯಾದಿ.

ಇತರ ಸಾಮಗ್ರಿ : 2 ಈರುಳ್ಳಿ (ಬಿಲ್ಲೆಗಳಾಗಿ ಹೆಚ್ಚಿ ಎಣ್ಣೆಯಲ್ಲಿ ಕರಿದಿಡಿ), ಅರ್ಧ ಕಪ್‌ ಕಡಲೆಹಿಟ್ಟು, ತುಸು ತುಪ್ಪ, ಉಪ್ಪು.

ಚಟ್ನಿಗಾಗಿ ಸಾಮಗ್ರಿ : ಒಂದಿಷ್ಟು ಹೆಚ್ಚಿದ ಅಖರೋಟು, ಹಸಿ ಖರ್ಜೂರ, ಒಣದ್ರಾಕ್ಷಿ, ಜೀರಿಗೆ, ಸೋಂಪು, ಹಸಿ ಮೆಣಸು (ಎಲ್ಲವನ್ನೂ ಲಘು ಹುರಿದಿಡಿ), 1 ಕಪ್‌ ಮೊಸರು, ಉಪ್ಪು, ಖಾರ.

ಕಬಾಬ್ಮಸಾಲ ವಿಧಾನ : ಇಲ್ಲಿನ ಸಾಮಗ್ರಿಗಳನ್ನು ತುಪ್ಪದಲ್ಲಿ ಹುರಿದು ಎಲ್ಲಾ ಪುಡಿಗಳ ಜೊತೆ ಮಿಕ್ಸಿಯಲ್ಲಿ ನುಣ್ಣಗೆ ಮಾಡಿಡಿ.

ಚಟ್ನಿಗಾಗಿ ವಿಧಾನ : ಹುರಿದ ಪದಾರ್ಥ ಮಿಕ್ಸಿಗೆ ಹಾಕಿ ಮೊಸರಿನೊಂದಿಗೆ ಉಪ್ಪು ಖಾರ ಬೆರೆಸಿ ನುಣ್ಣಗೆ ತಿರುವಿಕೊಳ್ಳಿ.

ಕಬಾಬ್ಮಿಶ್ರಣಕ್ಕಾಗಿ ವಿಧಾನ : ಮೊದಲು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಗೋಡಂಬಿ ಹಾಕಿ ಹುರಿಯಿರಿ. ನಂತರ ಮಿಕ್ಸಿಗೆ ನೇರವಾಗಿ ಬೆಂದ ಪದಾರ್ಥಗಳು, ಹುರಿದ ಗೋಡಂಬಿ ಹಾಗೂ ಇತರೆ ಎಲ್ಲಾ ಸಾಮಗ್ರಿ ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ. ಇದನ್ನು ಒಂದು ಬೇಸನ್ನಿಗೆ ಹಾಕಿಕೊಂಡು ಮೇಲೆ ಕರಿದ ಈರುಳ್ಳಿ ಬಿಲ್ಲೆ, ಕಬಾಬ್‌ ಮಸಾಲ, ಉಪ್ಪು, ಕಡಲೆಹಿಟ್ಟು ಇತರ ವಸ್ತುಗಳೊಂದಿಗೆ ಗಟ್ಟಿಯಾಗಿ ಬೆರೆಸಿಕೊಳ್ಳಿ. ಒಂದು ದೊಡ್ಡ ಇದ್ದಿಲನ್ನು ಸ್ಟವ್ ನಲ್ಲಿ ಬಿಸಿ ಮಾಡಿ ಕೆಂಡ ಮಾಡಿ. ಇದನ್ನು ಲೋಹದ ಬಟ್ಟಲಿಗೆ ಹಾಕಿ, ಮೇಲೆ ಲವಂಗ, ತುಪ್ಪ ಹಾಕಿ ತಕ್ಷಣ ಮುಚ್ಚಿರಿಸಿ, ಅದನ್ನು ಕಬಾಬ್‌ ಮಿಶ್ರಣದ ಬೇಸನ್ನಿನಲ್ಲಿರಿಸಿ, ದೊಡ್ಡ ಮುಚ್ಚಳ ಮುಚ್ಚಿಬಿಡಿ. 10 ನಿಮಿಷ ಬಿಟ್ಟು, ಆ ಮಿಶ್ರಣವನ್ನು ಮತ್ತೊಮ್ಮೆ ಕಲಸಿಕೊಂಡು, ಸಣ್ಣ ಉಂಡೆಗಳಾಗಿಸಿ. ಅಳ್ಳಕವಾದ ಬಾಣಲೆಗೆ ತುಪ್ಪ ಹಾಕಿ, ಚಿತ್ರದಲ್ಲಿರುವಂತೆ ಇದನ್ನು ಅಂಗೈ ಮೇಲೆ ತಟ್ಟಿಕೊಂಡು, ಎರಡೂ ಬದಿ ಬೇಯುವಂತೆ ಶ್ಯಾಲೋ ಫ್ರೈ ಮಾಡಿ. ರೆಡಿ ಚಟ್ನಿ ಜೊತೆ ಸರ್ವ್ ಮಾಡಿ.

ಪೊಟೇಟೊ ಟೋರ್ನೆಡೋ ಚಾಟ್

ಮೂಲ ಸಾಮಗ್ರಿ : 2-3 ಮಧ್ಯಮ ಗಾತ್ರದ ಆಲೂ, 2 ವುಡನ್‌ ಸ್ಕೀರ್‌, ಕರಿಯಲು ಎಣ್ಣೆ, ತುಸು ಉಪ್ಪು, ಮೆಣಸು.

ಡ್ರೈ ಗ್ರೀನ್ಚಟ್ನಿಯ ಸಾಮಗ್ರಿ : ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಹಸಿ ಮೆಣಸು, ಅರ್ಧ ಕಪ್‌ ಹುರಿಗಡಲೆ, ತುಸು ಅಮ್ಚೂರ್‌ ಪುಡಿ, ಜೀರಿಗೆಪುಡಿ, ಉಪ್ಪು.

ಮೊಸರಿನ ಮಿಶ್ರಣಕ್ಕಾಗಿ : 1 ಕಪ್‌ ಗಟ್ಟಿ ಮೊಸರು, 2 ದೊಡ್ಡ ಚಮಚ ಪುಡಿ ಸಕ್ಕರೆ, ತುಸು ಉಪ್ಪು, ಮೆಣಸು.

ಚಾಟ್ಗಾಗಿ ಸಾಮಗ್ರಿ : 2 ಚಮಚ ಹುಣಿಸೆ-ಬೆಲ್ಲದ ಚಟ್ನಿ, 1 ದೊಡ್ಡ ಚಮಚ ಡ್ರೈ ಗ್ರೀನ್‌ ಚಟ್ನಿ, ತುಸು ಉಪ್ಪು, ಖಾರ, ಜೀರಿಗೆ ಪುಡಿ, ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು, ಶುಂಠಿ, ಈರುಳ್ಳಿ ಸೀಡ್ಲೆಸ್‌ ದಾಳಿಂಬೆ, ಚಾಟ್‌ ಮಸಾಲ.

ಪೊಟೇಟೊ ಟಾರ್ನೆಡೋ ವಿಧಾನ : ಹರಿತ ಚಾಕು ಅಥವಾ ಸ್ಕೀರ್‌ ಸಹಾಯದಿಂದ ಪೊಟೇಟೋಗಳನ್ನು (ಚಿತ್ರದಲ್ಲಿರುವಂತೆ) ಟಾರ್ನೆಡೋ ಆಕಾರದಲ್ಲಿ ಕತ್ತರಿಸಿ. ನೀರಿಗೆ ಉಪ್ಪು ಬೆರೆಸಿ ಅದರಲ್ಲಿ ಇದನ್ನು ನೆನೆಹಾಕಿಡಿ. ನಂತರ ಹೊರತೆಗೆದು ಫ್ಯಾನಿನಡಿ ಪಂಚೆ ಮೇಲೆ ಒಣಗಿಸಿ, ಕಾದ ಎಣ್ಣೆಯಲ್ಲಿ ಅರೆ ಬೇಯುವಂತೆ ಕರಿಯಿರಿ. ಸರ್ವಿಂಗ್‌ ಗೆ ಮೊದಲು ಇವನ್ನು ಮತ್ತೊಮ್ಮೆ ಗರಿಗರಿಯಾಗಿ ಬರುವಂತೆ ಕರಿಯಬೇಕು.

ಡ್ರೈ ಗ್ರೀನ್ಚಟ್ನಿಯ ವಿಧಾನ : ಡ್ರೈ ಮಿಕ್ಸಿಗೆ ಮೇಲೆ ಹೇಳಿದ ಎಲ್ಲಾ ಚಟ್ನಿ ಸಾಮಗ್ರಿ ಸೇರಿಸಿ, ಹನಿ ನೀರೂ ಬೆರೆಸದೆ ಪುಡಿ ಮಾಡಿಡಿ.

ಮೊಸರಿನ ಮಿಶ್ರಣ : ಇದರ ಸಾಮಗ್ರಿಗಳನ್ನೆಲ್ಲ ಒಂದು ಬಟ್ಟಲಲ್ಲಿ ಬೆರೆಸಿಕೊಂಡು ಗೊಟಾಯಿಸಿ, ಒಂದು ಬದಿಗಿಡಿ.

ಚಾಟ್ವಿಧಾನ : ಮೊದಲು ಸರ್ವಿಂಗ್‌ ಪ್ಲೇಟಿಗೆ ಮೊಸರಿನ ಮಿಶ್ರಣ ಹರಡಿ, ಅದಕ್ಕೆ ಕರಿದ ಆಲೂ (ಚಿತ್ರದಲ್ಲಿರುವಂತೆ) ಸೇರಿಸಿ. ಇದರ ಮೇಲೆ ಹುಣಿಸೆ ಸಿಹಿ ಚಟ್ನಿ, ಡ್ರೈ ಚಟ್ನಿ, ಉಪ್ಪು, ಖಾರ, ಜೀರಿಗೆ ಪುಡಿ ಉದುರಿಸಿ. ಕೊನೆಯಲ್ಲಿ ಹೆಚ್ಚಿದ ಉಳಿದೆಲ್ಲ ಚಾಟ್ ಸಾಮಗ್ರಿ ಸೇರಿಸಿ. ಸ್ಟಾರ್ಟರ್‌ ಆಗಿ ಸವಿಯಲು ತಕ್ಷಣ ಸರ್ವ್ ಮಾಡಿ.

ದೇಶೀ ಫ್ರೆಂಚ್‌ ಟೋಸ್ಟ್ ಬೀಟ್‌ ರೂಟ್‌

ಚಟ್ನಿಯ ಸಾಮಗ್ರಿ : 2 ಕಪ್‌ ತುರಿದ ಬೀಟ್‌ ರೂಟ್‌ (ತುಸು ಮೊಸರು ಬೆರೆಸಿ ನುಣ್ಣಗೆ ಪೇಸ್ಟ್ ಮಾಡಿ), ತುಸು ಉಪ್ಪು, ಖಾರ, ವಿನಿಗರ್‌, ಸಕ್ಕರೆ.

ಮೊಟ್ಟೆ ಮಿಶ್ರಣಕ್ಕಾಗಿ ಸಾಮಗ್ರಿ : 2 ಮೊಟ್ಟೆ, ತುಸು ಹೆಚ್ಚಿದ ಹಸಿ ಮೆಣಸು, ಕೊ.ಸೊಪ್ಪು, ಅರ್ಧ ಕಪ್‌ ಹಾಲು, ಮೈದಾ, ಉಪ್ಪು, ಮೆಣಸು.

ಇತರ ಸಾಮಗ್ರಿ : 4-6 ಬ್ರೆಡ್‌ ಸ್ಲೈಸ್‌, ಅರ್ಧರ್ಧ ಕಪ್‌ ಹಸಿರು ಚಟ್ನಿ, ಹುಳಿ ಸಿಹಿ ಚಟ್ನಿ, 4-5 ಚೀಸ್‌ ಸ್ಲೈಸ್‌, ಅರ್ಧ ಸೌಟು ಬೆಣ್ಣೆ.

ಬೀಟ್ರೂಟ್ಚಟ್ನಿಯ ವಿಧಾನ : ಮೊದಲು ಬಾಣಲೆಯಲ್ಲಿ ತುಸು ತುಪ್ಪು ಬಿಸಿ ಮಾಡಿ, ಅದಕ್ಕೆ ಬೀಟ್‌ ರೂಟ್‌ ಪೇಸ್ಟ್ ಬೆರೆಸಿ ಮಂದ ಉರಿಯಲ್ಲಿ ಕೆದಕಬೇಕು. ನಂತರ ಇದಕ್ಕೆ ಉಳಿದ ಸಾಮಗ್ರಿ ಬೆರೆಸಿ ಕೈಯಾಡಿಸಿ. ಸಾಕಷ್ಟು ಗಟ್ಟಿಯಾದಾಗ ಕೆಳಗಿಳಿಸಿ.

ಮೊಟ್ಟೆ ಮಿಶ್ರಣದ ವಿಧಾನ : ಒಂದು ಬಟ್ಟಲಿಗೆ ಮೊಟ್ಟೆ ಒಡೆದು ಹಾಕಿ, ಅದಕ್ಕೆ ಉಳಿದೆಲ್ಲ ಸಾಮಗ್ರಿ ಸೇರಿಸಿ ಚೆನ್ನಾಗಿ ಗೊಟಾಯಿಸಿ. ಇದನ್ನು ಒಂದು ಬದಿಗಿಡಿ.

ದೇಶೀ ಟೋಸ್ಟ್ ವಿಧಾನ : ಮೊದಲು ಬ್ರೆಡ್‌ ಸ್ಲೈಸ್‌ ಗಳಿಗೆ ಬೆಣ್ಣೆ ಸವರಿಡಿ. ನಂತರ ಒಂದಕ್ಕೆ ಬೀಟ್‌ ರೂಟ್‌ ಚಟ್ನಿ, ಇನ್ನೊಂದಕ್ಕೆ ಹಸಿ ಚಟ್ನಿ, ಎರಡರ ಮೇಲೆ ಹುಳಿಸಿಹಿ ಚಟ್ನಿ ಸವರಿಡಿ. ಒಂದರ ಮೇಲೆ ಚೀಸ್‌ ಸ್ಲೈಸ್‌ ಇರಿಸಿ, ಇನ್ನೊಂದನ್ನು ಮೇಲಿರಿಸಿ ಸ್ಯಾಂಡ್ ವಿಚ್‌ ಮಾಡಿ. ಒಂದು ಪ್ಯಾನ್‌ ನ್ನು ಬಿಸಿ ಮಾಡಿ, ಇದಕ್ಕೆ ಬೆಣ್ಣೆ ಸವರಿ ಬಿಸಿ ಮಾಡಿ. ನಂತರ ಸ್ಯಾಂಡ್‌ ವಿಚ್‌ ನ್ನು ಮೊಟ್ಟೆ ಮಿಶ್ರಣದಲ್ಲಿ ಅದ್ದಿ, ಪ್ಯಾನ್‌ ಗೆ ಹಾಕಿ, ಎರಡೂ ಬದಿ ಹೊಂಬಣ್ಣ ಬರುವಂತೆ ಬೇಯಿಸಿ. ಚಿತ್ರದಲ್ಲಿರುವಂತೆ ಸಲಾಡ್‌ ನಿಂದ ಅಲಂಕರಿಸಿ ಸವಿಯಲು ಕೊಡಿ.

ಎಗ್ಚಾಮೀನ್

Chow-mein

ಮೂಲ ಸಾಮಗ್ರಿ  : 2 ಪ್ಯಾಕೆಟ್‌ ನ್ಯೂಡಲ್ಸ್, 2 ಲಿ. ಬಿಸಿ ನೀರು, ತುಸು ಉಪ್ಪು, ಎಣ್ಣೆ.

ಚಾಮೀನ್ಸಾಮಗ್ರಿ : ಅರ್ಧ ಸೌಟು ಎಣ್ಣೆ, 2-3 ಮಧ್ಯಮ ಗಾತ್ರದ ಈರುಳ್ಳಿ, ತುಸು ಬೆಳ್ಳುಳ್ಳಿ (ಎರಡನ್ನೂ ಹೆಚ್ಚಿಡಿ), ಹೆಚ್ಚಿದ 3-4 ಹಸಿ ಮೆಣಸು, ಶುಂಠಿ, 3 ಬಗೆಯ ಕ್ಯಾಪ್ಸಿಕಂ, ಈರುಳ್ಳಿ ತೆನೆ, ಎಲೆಕೋಸು (ಅರ್ಧರ್ಧ ಬಟ್ಟಲು) ಬೆಂದ ನೂಡಲ್ಸ್, ರುಚಿಗೆ ತಕ್ಕಷ್ಟು ರೆಡ್‌ ಚಿಲೀ ಸಾಸ್‌, ಸೋಯಾ ಸಾಸ್‌, ವಿನಿಗರ್‌, ಟೊಮೇಟೊ ಸಾಸ್‌, ಗ್ರೀನ್‌ ಚಿಲೀ ಸಾಸ್‌, ಪುಡಿ ಸಕ್ಕರೆ, ಗರಂ ಮಸಾಲ, ಉಪ್ಪು, ಖಾರ.

ಮೊಟ್ಟೆ ಮಿಶ್ರಣದ ಸಾಮಗ್ರಿ : 2 ಮೊಟ್ಟೆ, ತುಸು ರೆಡ್‌ ಚಿಲೀ ಸಾಸ್‌, ಸೋಯಾ ಸಾಸ್‌.

ಅಲಂಕರಿಸಲು ಸಾಮಗ್ರಿ : ಹೆಚ್ಚಿದ ಈರುಳ್ಳಿ ತೆನೆ.

ಮೊಟ್ಟೆ ಮಿಶ್ರಣದ ವಿಧಾನ : ಒಂದು ಬಟ್ಟಲಿಗೆ ಮೊಟ್ಟೆ ಒಡೆದು ಹಾಕಿ, ಉಳಿದೆಲ್ಲ ಸಾಮಗ್ರಿ ಬೆರೆಸಿ ಚೆನ್ನಾಗಿ ಗೊಟಾಯಿಸಿ. ಇದನ್ನು ಹೆಂಚಿಗೆ ಸುರಿದು ಆಮ್ಲೆಟ್‌ ತಯಾರಿಸಿ. ಇದನ್ನು ಉದ್ದುದ್ದ ಸ್ಟ್ರಿಪ್ಸ್ ಆಗಿ ಕತ್ತರಿಸಿ ಒಂದು ಪಕ್ಕಕ್ಕಿಡಿ. (ಇದನ್ನು ಸರ್ವಿಂಗ್‌ ಗೆ ಮುನ್ನ ಮಾಡಿಕೊಂಡರೆ ಸಾಕು.)

ಚಾಮೀನ್ವಿಧಾನ : ಒಂದು ದೊಡ್ಡ ಪಾತ್ರೆಗೆ ಬಿಸಿ ನೀರು ಹಾಕಿ. ಕುದಿಯುವಾಗ ಉಪ್ಪು, ಎಣ್ಣೆ ಬೆರೆಸಿ ನೂಡಲ್ಸ್ ಹಾಕಿ ಬೇಯಿಸಿ. ಇದನ್ನು ಹೊರತೆಗೆದು ನೇರವಾಗಿ ಕೊಳಾಯಿಯ ಹರಿ ನೀರಿನಡಿ ಹಿಡಿದು ತೊಳೆಯಿರಿ. ಸ್ಟೀಲ್ ಜರಡಿಗೆ ಹಾಕಿಡಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ, ಶುಂಠಿ, ಹಸಿ ಮೆಣಸು ಹಾಕಿ ಬಾಡಿಸಿ. ನಂತರ ಎಲೆಕೋಸು, ಆಮೇಲೆ 3 ಬಗೆಯ ಕ್ಯಾಪ್ಸಿಕಂ ಹಾಕಿ ಬಾಡಿಸಬೇಕು. ನಂತರ ಇದಕ್ಕೆ ಬೆಂದ ನೂಡಲ್ಸ್ ಎಲ್ಲಾ ಸಾಸ್‌ ಗಳು, ಮಸಾಲೆ ಹಾಕಿ ಚೆನ್ನಾಗಿ ಕೈಯಾಡಿಸಿ. ಕೊನೆಯಲ್ಲಿ ಇದರ ಮೇಲೆ ಈರುಳ್ಳಿ ತೆನೆ ಉದುರಿಸಿ. ಆಮ್ಲೆಟ್‌ ಸ್ಟ್ರಿಪ್ಸ್ ಬೆರೆಸಿ ಬಿಸಿ ಬಿಸಿಯಾಗಿ ಸವಿಯಲು ಕೊಡಿ.

ಹ್ಯಾಸ್ಲೇ  ಬ್ಯಾಕ್ಪೊಟೇಟೋಸ್

Hasselback-Potatoes

ಮೂಲ ಸಾಮಗ್ರಿ : 3-4 ಮಧ್ಯಮ ಗಾತ್ರದ ಆಲೂ, 5-6 ಸ್ಲೈಸ್‌ ಚೀಸ್‌, ಉದ್ದಕ್ಕೆ ತೆಳುವಾಗಿ ಹೆಚ್ಚಿದ 2-3 ಹಸಿ ಮೆಣಸು, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ರೆಡ್‌ ಚಿಲೀ ಫ್ಲೇಕ್ಸ್, ಮೆಯೋನೀಸ್‌.

ಸಲಾಡ್ಗಾಗಿ ಸಾಮಗ್ರಿ : ಒಂದಿಷ್ಟು ಉದ್ದಕ್ಕೆ ಹೆಚ್ಚಿದ ಈರುಳ್ಳಿ, 3 ಬಗೆ ಕ್ಯಾಪ್ಸಿಕಂ, ಕೊ.ಸೊಪ್ಪು, ಪುದೀನಾ, ಚಾಟ್‌ ಮಸಾಲ, ಉಪ್ಪು, ಮೆಣಸು, ನಿಂಬೆರಸ.

ಸಲಾಡ್ವಿಧಾನ : ಒಂದು ಬಟ್ಟಲಿಗೆ ಮೇಲಿನ ಎಲ್ಲಾ ಸಾಮಗ್ರಿ ಹಾಕಿ ಬೆರೆಸಿಡಿ. ಇದನ್ನು  ಒಂದು ಕಡೆ ಇರಿಸಿ.

ಮೂಲ ವಿಧಾನ : ಮೊದಲು ಆದಷ್ಟೂ ತೆಳುವಾಗಿ ಆಲೂ ಹೆಚ್ಚಿಡಿ. 2 ನಿಮಿಷ ಇದನ್ನು ಕುದಿ ನೀರಿಗೆ ಹಾಕಿ. ಆಮೇಲೆ ಹೊರ ತೆಗೆದು ಆರಲು ಬಿಡಿ. ನಂತರ 2 ಆಲೂ ಮಧ್ಯ ಒಂದು ಚೀಸ್‌ ಬರುವಂತೆ ಇರಿಸಿ ಸ್ಯಾಂಡ್‌ ವಿಚ್‌ ಮಾಡಿ. ಇವನ್ನು ಬೇಕಿಂಗ್ ಟ್ರೇನಲ್ಲಿರಿಸಿ, ಮೇಲೆ ಹಸಿ ಮೆಣಸು ಉದುರಿಸಿ. ಆರಿದ ಮೇಲೆ ಕೊ.ಸೊಪ್ಪು, ಪುದೀನಾ ಬರಲಿ ಇದರ ಮೇಲೆ ರೆಡ್‌ ಚಿಲೀ ಫ್ಲೇಕ್ಸ್ ಉದುರಿಸಿ. ಇದರ ಮೇಲೆ ಇನ್ನಷ್ಟು ಚೀಸ್‌ ಸ್ಲೈಸ್‌ ಬರಲಿ. ನಂತರ ಇದನ್ನು ಪ್ರೀಹೀಟೆಡ್‌ ಓವನ್ನಿನಲ್ಲಿರಿಸಿ. 1750 ಡಿಗ್ರಿ ಶಾಖದಲ್ಲಿ 20-28 ನಿಮಿಷ ಬೇಕ್‌ ಮಾಡಿ. ನಂತರ ಹೊರತೆಗೆದು 2 ನಿಮಿಷ ಹಾಗೇ ಬಿಡಿ. ಈಗ ಸರ್ವಿಂಗ್‌ ಪ್ಲೇಟ್‌ ನಲ್ಲಿ ಮೊದಲು ಮೆಯೋನೀಸ್‌ ಸವರಿ, ಅದರ ಮೇಲೆ ಆಲೂ ಇರಿಸಿ. ಇದರ ಮೇಲೆ ಮತ್ತೆ ಮೆಯೋನೀಸ್‌ ಹಾಕಿ ಸಲಾಡ್‌ ಹರಡಬೇಕು. ಚಿತ್ರದಂತೆ ಅಲಂಕರಿಸಿ ಸವಿಯಿರಿ.

ಚೈನೀಸ್ಭೇಲ್

Chinese-Bhel - Copy

ಮೂಲ ಸಾಮಗ್ರಿ : ಒಂದಿಷ್ಟು ಹೆಚ್ಚಿದ ಎಲೆಕೋಸು, ತುರಿದ ಕ್ಯಾರೆಟ್‌, ಉದ್ದಕ್ಕೆ ಹೆಚ್ಚಿದ 3 ಬಗೆಯ ಕ್ಯಾಪ್ಸಿಕಂ, ತುಸು ಈರುಳ್ಳಿ ತೆನೆ, ತುಸು ಕೊ.ಸೊಪ್ಪು, ಪುದೀನಾ, ಈರುಳ್ಳಿ, ಶುಂಠಿ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಶೇರ್ವನ್ ಸಾಸ್‌, ರೆಡ್‌ ಚಿಲೀ ಸಾಸ್‌, ವಿನಿಗರ್‌, ಬೇಯಿಸಿ, ಒಣಗಿಸಿ, ಎಣ್ಣೆಯಲ್ಲಿ ಕರಿದ 1 ಕಪ್‌ ನೂಡಲ್ಸ್.

ಫ್ರೈಡ್ನೂಡಲ್ಸ್ ಸಾಮಗ್ರಿ : 2 ಕಪ್‌ ಬೆಂದ ನೂಡಲ್ಸ್.

ಮಂಚೂರಿಯನ್ಗಾಗಿ ಸಾಮಗ್ರಿ : ಒಂದಿಷ್ಟು ಹೆಚ್ಚಿದ ಎಲೆಕೋಸು, ಕ್ಯಾರೆಟ್‌, ಹಸಿಮೆಣಸು, ಕೊ.ಸೊಪ್ಪು, ಶುಂಠಿ, ಪುದೀನಾ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ನಿಂಬೆರಸ, 3-4 ಚಮಚ ಕಾರ್ನ್‌ ಸ್ಟಾರ್ಚ್, ಅರ್ಧ ಕಪ್‌ ಮೈದಾ.

ಫ್ರೈಡ್ನೂಡಲ್ಸ್ ಗಾಗಿ ವಿಧಾನ : ಮೊದಲು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಚೆನ್ನಾಗಿ ಕಾದ ನಂತರ, ಸಂಪೂರ್ಣ ಮಂದ ಉರಿಯಲ್ಲಿ ಬೇಯಿಸಿ, ಒಣಗಿಸಿದ ನೂಡಲ್ಸ್ ಹಾಕಿ ಹೊಂಬಣ್ಣ ಬರುವಂತೆ ಗರಿಗರಿ ಕರಿಯಿರಿ. ಹೊರತೆಗೆದು ಬಟರ್‌ ಪೇಪರ್‌ ಮೇಲೆ ಹರಡಿರಿ.

ಮಂಚೂರಿಯನ್ಗಾಗಿ ವಿಧಾನ : ಒಂದು ದೊಡ್ಡ ಸ್ಟೀಲ್ ‌ಬಟ್ಟಲಿನಲ್ಲಿ ಎಲೆಕೋಸು ಇತ್ಯಾದಿ ಎಲ್ಲಾ ಸಾಮಗ್ರಿ ಹಾಕಿಕೊಂಡು ತುಸು ನೀರು ಚಿಮುಕಿಸಿಕೊಂಡು ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ, ಮಿಶ್ರಣ ಕಲಸಿಡಿ. ಇದರಿಂದ ಸಣ್ಣ ಉಂಡೆಗಳಾಗಿಸಿ, ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಗರಿಗರಿಯಾಗಿ ಕರಿಯಿರಿ. ಇವನ್ನು ತೆಗೆದು ಬಟರ್‌ ಪೇಪರ್‌ ಮೇಲೆ ಹರಿಡಿರಿ.

ಭೇಲ್ ಗಾಗಿ ವಿಧಾನ : ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನೂ ಒಂದು ಬೇಸನ್ನಿಗೆ ಹಾಕಿಕೊಂಡು ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಸರ್ವಿಂಗ್‌ ಟ್ರೇಗೆ ಹಾಕಿಡಿ. ಇದನ್ನು ಪ್ಲೇಟ್‌ ಗಳಿಗೆ ಹರಡಿ, ಜೊತೆಗೆ ಮಂಚೂರಿಯನ್‌ ಬಾಲ್ಸ್ ನಿಂದ ಅಲಂಕರಿಸಿ ತಕ್ಷಣ ಸವಿಯಲು ಕೊಡಿ.

ದಹೀ ಪನೀರ್

Dahi-paneer - Copy

ಮ್ಯಾರಿನೇಶನ್ಗಾಗಿ ಮೂಲ ಸಾಮಗ್ರಿ : 500 ಗ್ರಾಂ ಪನೀರ್‌, ತುಸು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ, ಕಸೂರಿಮೇಥಿ, ಗರಂ ಮಸಾಲ, ಚಾಟ್‌ ಮಸಾಲ.

ಟಾಪಿಂಗ್ಸಾಮಗ್ರಿ : ತುಸು ಎಣ್ಣೆ, ಒಂದಿಷ್ಟು ಹೆಚ್ಚಿದ ಶುಂಠಿ, ಹಸಿ ಮೆಣಸು, ಕರಿಬೇವು, ಪುದೀನಾ, ಕೊ.ಸೊಪ್ಪು, ಏಲಕ್ಕಿ, ಅರ್ಧ ಲೀ. ಕೆನೆ ಮೊಸರು, ಬೇಯಿಸಿ ಮಸೆದ ತುಸು ಆಲೂ, ಗೋಡಂಬಿ ಪೇಸ್ಟ್, ಉಪ್ಪು, ಖಾರ, ಅರಿಶಿನ, ಧನಿಯಾ ಪುಡಿ, ಅಮ್ಚೂರ್ ಪುಡಿ.

ಅಲಂಕರಿಸಲು ಸಾಮಗ್ರಿ : ತುಸು ಕಡೆದ ಮೊಸರು, ಚಿಲೀ ಆಯಿಲ್‌, ಪುದೀನಾ ಪೌಡರ್‌, ಹೆಚ್ಚಿದ ಕೊ.ಸೊಪ್ಪು, ಕರಿಬೇವು, ಪುದೀನಾ.

ವಿಧಾನ : ಎಲ್ಲಕ್ಕೂ ಮೊದಲು ಮ್ಯಾರಿನೇಶನ್‌ ಸಾಮಗ್ರಿಗಳೆಲ್ಲವನ್ನೂ ಚೆನ್ನಾಗಿ ಬೆರೆಸಿಕೊಂಡು 15 ನಿಮಿಷ ನೆನೆಯಲು (ಮ್ಯಾರಿನೇಟ್‌ ಆಗಲು) ಫ್ರಿಜ್‌ ನಲ್ಲಿ ಇರಿಸಿಬಿಡಿ. ನಂತರ ಒಂದು ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿ, ಇದನ್ನು ಶ್ಯಾಲೋ ಫ್ರೈ ಮಾಡಿ. ಇದನ್ನು ಪಕ್ಕಕ್ಕೆ ಇರಿಸಿ, ಇದರಲ್ಲಿ ಇನ್ನಷ್ಟು ಎಣ್ಣೆ ಬಿಸಿ ಮಾಡಿ. ಇದಕ್ಕೆ ಟಾಪಿಂಗ್‌ ಸಾಮಗ್ರಿ ಪೂರ್ತಿ ಬೆರೆಸಿ, ಉಪ್ಪು, ಮಸಾಲೆ, ಆಲೂ ಪೇಸ್ಟ್, ಗೋಡಂಬಿ ಪೇಸ್ಟ್ ಹಾಕಿ ಕೆದಕಬೇಕು. ಕೊನೆಗೆ ಮೊಸರು ಬೆರೆಸಿ ಕೆದಕಬೇಕು. ಅರ್ಧ ಲೋಟ ನೀರು ಬೆರೆಸಿ ಮಂದ ಉರಿಯಲ್ಲಿ ಕೆದಕುತ್ತಾ ಕೈಯಾಡಿಸಿ. ನಂತರ ಫ್ರೈ ಮಾಡಿದ ಪನೀರ್‌ ನ್ನು ಇದಕ್ಕೆ ಬೆರೆಸಿರಿ. ಕೆಳಗಿಳಿಸಿದ ನಂತರ ಉಳಿದೆಲ್ಲ ಸಾಮಗ್ರಿಗಳಿಂದ ಚಿತ್ರದಲ್ಲಿರುವಂತೆ ಅಲಂಕರಿಸಿ, ಬಿಸಿ ಬಿಸಿಯಾಗಿ ಚಪಾತಿ, ಪೂರಿ ಜೊತೆ ಸವಿಯಲು ಕೊಡಿ.

ಓಟ್ಸ್ ಊತ್ತಪ್ಪಂ

oats-uttappam

ಓಟ್ಸ್ ಪೌಡರ್ಗಾಗಿ ಸಾಮಗ್ರಿ : 1 ಕಪ್‌ ರೋಲ್ಡ್ ಓಟ್ಸ್, 2 ಚಮಚ ರವೆ, ತುಸು ತುಪ್ಪ.

ಓಟ್ಸ್ ಊತ್ತಪ್ಪಂಗಾಗಿ ಸಾಮಗ್ರಿ : ಮೇಲಿನ ಮಿಶ್ರಣ ಹುರಿದು ಪುಡಿ ಮಾಡಿದ ಓಟ್ಸ್, 1 ಕಪ್‌ ಹುಳಿ ಮೊಸರು, ತುಸು ಎಣ್ಣೆ, ಬೇಕಿಂಗ್‌ ಪೌಡರ್‌, ಉಪ್ಪು, ಮೆಣಸು.

ಟಾಪಿಂಗ್ಗಾಗಿ ಸಾಮಗ್ರಿ : 1 ಚಮಚ ರೋಲ್ಡ್ ಓಟ್ಸ್, 1 ಈರುಳ್ಳಿ, 2 ಟೊಮೇಟೊ, 2-3 ಹಸಿ ಮೆಣಸು, ತುಸು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು, ಶುಂಠಿ, ಬೆಳ್ಳುಳ್ಳಿ, ಉಪ್ಪು, ಮೆಣಸು.

ಓಟ್ಸ್ ಪೌಡರ್ವಿಧಾನ : ಪ್ಯಾನ್‌ ಬಿಸಿ ಮಾಡಿ ಅದರಲ್ಲಿ ಓಟ್ಸ್ ಹಾಕಿ ಮಂದ ಉರಿಯಲ್ಲಿ ಹುರಿಯಿರಿ. ನಂತರ ಇದಕ್ಕೆ ರವೆ, ತುಪ್ಪ ಬೆರೆಸಿ ಘಮ್ಮೆನ್ನುವಂತೆ ಹುರಿಯಿರಿ. ನಂತರ ಇದನ್ನು ಕೆಳಗಿಳಿಸಿ ಆರಿದ ಮೇಲೆ ಡ್ರೈ ಮಿಕ್ಸಿಯಲ್ಲಿ ಪೌಡರ್‌ ಮಾಡಿ, ತುಸು ಮೊಸರಿನೊಂದಿಗೆ ವೆಟ್‌ ಮಿಕ್ಸಿಯಲ್ಲಿ ಪೇಸ್ಟ್ ಮಾಡಿ.

ಊತ್ತಪ್ಪಂ ಟಾಪಿಕ್ವಿಧಾನ : ಒಂದು ಬೇಸನ್ನಿಗೆ ಹೆಚ್ಚಿದ ಈರುಳ್ಳಿ ಹಾಗೂ ಇತರ ಸಾಮಗ್ರಿ ಬೆರೆಸಿಕೊಂಡು ಒಂದು ಪಕ್ಕಕ್ಕಿಡಿ.

ಓಟ್ಸ್ ಊತ್ತಪ್ಪಂಗಾಗಿ ವಿಧಾನ : ಒಂದು ದೊಡ್ಡ ಬಟ್ಟಲಿಗೆ ಊತ್ತಪ್ಪಂಗಾಗಿ ಬೇಕಾದ ಸಾಮಗ್ರಿ, ತುಸು ನೀರು ಬೆರೆಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿಡಿ. ಇದು ಅರ್ಧ ಗಂಟೆ ನೆನೆಯಲಿ. ತುಸು ಅಳ್ಳಕವಾದ ತವಾಗೆ, ಎಣ್ಣೆ ಸವರಿ 1 ಸೌಟು ಹಿಟ್ಟು ಹಾಕಿ, ಒಂದೇ ಬದಿ ಬೇಯಿಸಬೇಕು. ನಡುವೆ ಇನ್ನಷ್ಟು ಎಣ್ಣೆ ಹಾಕಿ, ದೋಸೆ ತರಹ ತಿರುವಿ ಹಾಕುವುದು ಬೇಡ. ನಂತರ ಇದರ ಮೇಲೆ ರೋಲ್ಡ್ ಓಟ್ಸ್, ಟಾಪಿಂಗ್‌ ಸಾಮಗ್ರಿ ಉದುರಿಸಿ, ಇನ್ನಷ್ಟು ಬೇಯಿಸಿ. ನಂತರ ಸರ್ವಿಂಗ್‌ ಪ್ಲೇಟಿಗೆ ಹಾಕಿ, ಬೆಣ್ಣೆ, ಚಟ್ನಿ, ಸಾಂಬಾರ್‌ ಜೊತೆ  ಬಿಸಿ ಬಿಸಿಯಾಗಿ ಸವಿಯಲು ಕೊಡಿ.

ಇನ್ಸ್ಟೆಂಟ್ಬ್ರೋಕನ್ವೀಟ್ಪಲಾವ್

ಸಾಮಗ್ರಿ : 1 ಕಪ್‌ ಬ್ರೋಕನ್‌ ವೀಟ್‌, ಅರ್ಧ ಸೌಟು ತುಪ್ಪ, ಒಂದಿಷ್ಟು ಹೆಚ್ಚಿದ ಹಸಿ ಮೆಣಸು, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಕೊ.ಸೊಪ್ಪು, ಪುದೀನಾ, ಕರಿಬೇವು, ಅರ್ಧರ್ಧ ಕಪ್‌ ಹೆಚ್ಚಿದ ಕ್ಯಾರೆಟ್‌, ಎಲೆಕೋಸು, ಆಲೂ, ಬೀನ್ಸ್, 3-4 ಟೊಮೇಟೊ ಬಟಾಣಿ, ಉಪ್ಪು, ಖಾರ, ಮೆಣಸು, ನಿಂಬೆರಸ.

ವಿಧಾನ : ಮೊದಲು ಕುಕ್ಕರ್‌ ನಲ್ಲಿ ತುಪ್ಪ ಬಿಸಿ ಮಾಡಿಕೊಂಡು ಬ್ರೋಕನ್‌ ವೀಟ್‌ ಹಾಕಿ ಹುರಿಯಿರಿ. ಅದನ್ನು ಪಕ್ಕಕ್ಕಿರಿಸಿ, ಅದೇ ಕುಕ್ಕರ್‌ ಗೆ ಇನ್ನಷ್ಟು ತುಪ್ಪ ಹಾಕಿ ಒಗ್ಗರಣೆ ಕೊಡಿ. ನಂತರ ಬೆಳ್ಳುಳ್ಳಿ, ಈರುಳ್ಳಿ, ಶುಂಠಿ ಹಾಕಿ ಬಾಡಿಸಿ. ಆಮೇಲೆ ಟೊಮೇಟೊ ಸೇರಿಸಿ ಕೆದಕಿರಿ. ನಂತರ ಹೆಚ್ಚಿದ ಎಲ್ಲಾ ತರಕಾರಿ ಹಾಕಿ ಕೈಯಾಡಿಸಿ. ಇದರ ಮೇಲೆ ಪುದೀನಾ, ಕೊ.ಸೊಪ್ಪು ಉದುರಿಸಿ. ಕೊನೆಯಲ್ಲಿ ಉಪ್ಪ, ಖಾರ, ಮೆಣಸು ಹಾಕಿ ಕೆದಕಿ, ಬ್ರೋಕನ್‌ ವೀಟ್‌, ಅಗತ್ಯವಿದ್ದಷ್ಟು ನೀರು ಬೆರೆಸಿ 3 ಸೀಟಿ ಬರುವಂತೆ ಬೇಯಿಸಿ, ತಣಿದ ನಂತರ ಕೊ.ಸೊಪ್ಪು ಉದುರಿಸಿ, ನಿಂಬೆಹಣ್ಣು ಹಿಂಡಿಕೊಂಡು, ತುಪ್ಪ ಹಾಕಿ ಸವಿಯಿರಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ