ಸರಸ್ವತಿ ಜಾಗೀರ್ದಾರ್
ಖ್ಯಾತ ಹಿರಿಯ ನಟಿ ಗಿರಿಜಾ ಲೋಕೇಶ್ ಐದು ದಶಕಗಳಿಂದ ಸಿನಿಮಾ, ಹಾಗು ಕಿರಿತೆರೆ, ರಂಗಭೂಮಿ ಕ್ಷೇತ್ರದಲ್ಲಿ ಹೆಸರು ಮಾಡಿರುವಂಥ ಪ್ರತಿಭಾವಂತೆ. ಇತ್ತೀಚೆಗೆ ಇವರಿಗೆ ಡಾ. ಗಂಗೂಬಾಯಿ ಹಾನಗಲ್ಲ ವಿಶ್ವವಿದ್ಯಾಲಯ ಸಂಗೀತ,ಪ್ರದರ್ಶಕ ಕಲೆಗಳ ಡಾಕ್ಟರೇಟ್ ಪದವಿ ಘೋಷಿಸಿದೆ.
ಅಬಚೂರಿನ ಪೋಸ್ಟ್ ಆಫೀಸು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಗಿರಿಜಾ ಲೋಕೇಶ್ ಹಿಂತಿರುಗಿ ನೋಡಲಿಲ್ಲ. ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಪುರಸ್ಕೃತರು. ಕಿರುತೆರೆಯಲ್ಲೂ ಸಾಕಷ್ಟು ಸಕ್ರೀಯರಾಗಿರುವ ಗಿರಿಜಾ ಉತ್ಸಾಹದ ಚಿಲುಮೆ. ಇವರಿಗೆ ನಮ್ಮ ಕಡೆಯಿಂದಲೂ ಅಭಿನಂದನೆಗಳು
ರಂಗಭೂಮಿ , ಕಿರುತೆರೆ , ಹಿರಿತೆರೆಯ ಹಿರಿಯ ಅಗ್ರಗಣ್ಯ ನಟಿ / ಕಲಾವಿದೆ, ನಿರ್ಮಾಪಕಿ….. ಗಿರಿಜಾ ಲೋಕೇಶ್
ಅವರಿಗೆ ಕರ್ಣಾಟಕ ರಾಜ್ಯ ಡಾಕ್ಟರ್ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಇಂದು ಅವರ ಕಲಾಸಾಧನೆಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿದೆ. ಇದು ಗಿರಿಜಾರವರ ಕಲಾಪ್ರತಿಭೆಗೆ ಮತ್ತು ಜೀವಮಾನ ಕಲಾಸಾಧನೆಗೆ ದೊರೆತ ಅತ್ಯಂತ ಗೌರವ ಪುರಸ್ಕಾರ.
ಕರ್ಣಾಟಕ ರಾಜ್ಯ ಸರ್ಕಾರ 2013 ರಲ್ಲಿ ಗಿರಿಜಾ ರವರು ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು. ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವ ಗಿರಿಜಾ ಲೋಕೇಶ್ ರವರು ನಡೆದು ಬಂದಿರುವ ಹಾದಿ ಸುಗಮವೆನಲ್ಲಾ ಬಹು ಕಠಿಣ.
ಸಾಮಾನ್ಯ ವರ್ಗದ ಕುಟುಂಬದಿಂದ ಬಂದಿರುವ ಗಿರಿಜಾ , ಶಾಲಾ ಶಿಕ್ಷಣದ ನಂತರ ಸಂಗೀತ ನೃತ್ಯಾಬ್ಯಾಸದಲ್ಲಿ ತೊಡಗಿ ಪರಿಣತಿ ಪಡೆದು, ಸಂಗೀತ, ನೃತ್ಯ, ನಟನೆ ಯನ್ನು ವೃತ್ತಿಯಾಗಿ ಸ್ವೀಕರಿಸಿ, ಮೊದಲಿಗೆ ಹವ್ಯಾಸಿ ರಂಗಭೂಮಿಯಲ್ಲಿ ತೊಡಗಿಸಿಕೊಂಡು ರಂಗಸಂಪದ, ನಟರಂಗ, ಪ್ರಭಾತ್ ಶಿಶುವಿಹಾರಗಳ ಮೂಲಕ ನೂರಾರು ನಾಟಕಗಳಲ್ಲಿ ಅಭಿನಯಿಸುತ್ತಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ, ಅಲ್ಲಿಯೂ ಯಶಸ್ಸು ಕಂಡ ಗಿರಿಜಾ ಸರಿಸುಮಾರು 200ಕ್ಕೂ ಅಧಿಕ ಚಲನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಅಭಿನಯಿಸದ ಪಾತ್ರಗಳೇ ಇಲ್ಲ. ನಾಯಕಿ, ತಾಯಿ, ತಂಗಿ, ಅಕ್ಕ, ಅತ್ತೆ, ಹೀಗೇ ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.
ಭುಜಂಗಯ್ಯನ ದಶಾವತಾರ ಮತ್ತು ಸಿದ್ಲಿಂಗು ಚಲನಚಿತ್ರ ಗಳಲ್ಲಿ ಗಿರಿಜಾರವರ ಶ್ರೇಷ್ಟ ಅಭಿನಯ ಪ್ರತಿಭೆಗೆ ಕರ್ಣಾಟಕ ಸರ್ಕಾರ ಶ್ರೇಷ್ಟ ಪೋಷಕ ನಟಿ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.
21ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದ ” ಅಬಚೂರಿನ ಪೋಸ್ಟಾಫೀಸು ” ಗಿರಿಜಾರವರ ಪ್ರಥಮ ಕನ್ನಡ ಚಲನ ಚಿತ್ರ. ನಂತರ ಕಾಕನ ಕೋಟೆ , ಭೂತಯ್ಯನ ಮಗ ಅಯ್ಯು, ಹಳ್ಳಿ ಮೇ ಸ್ಟ್ರೂ ಇತ್ಯಾದಿ ಇನ್ನೂರಕ್ಕೂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಕಿರುತೆರೆಯಲ್ಲಿ ವೈಶಾಲಿ ಕಾಸರವಳ್ಳಿ ನಿರ್ದೇಶನದ ಮುತ್ತಿನ ತೋರಣದಲ್ಲಿ ಗಿರಿಜಾರವರ ಬಹುಮುಖಪ್ರತಿಭೆ ಅನಾವರಣವಾಯಿತು. ಚಲನ ಚಿತ್ರರಂಗದಲ್ಲಿ ಎಲ್ಲಾ ನಟನಟಿ ದಿಗ್ಗಜರೊಡನೆ ಅಭಿನಯಿಸಿ ” ಭೇಷ್ ” ಎನಿಸಿಕೊಂಡಿರುವ ಗಿರಿಜಾ ಪತಿ ಶ್ರೇಷ್ಟ ಕನ್ನಡ ರಂಗಭೂಮಿ ಮತ್ತು ಚಲನ ಚಿತ್ರ ನಟ ದಿಗ್ಗಜ ಲೋಕೇಶ್, ಮಗ ಸೃಜನ್ ಲೋಕೇಶ್ ನಟ, ನಿರ್ಮಾಪಕ, ಖ್ಯಾತ ನಿರೂಪಕ, ಮತ್ತು ಮಗಳು ಪೂಜಾ ಲೋಕೇಶ್ ಸಹ ಕನ್ನಡ ಮತ್ತು ತಮಿಳು ಕಿರುತೆರೆ ಮತ್ತು ಚಿತ್ರರಂಗದ ಕಲಾವಿದೆ.
ಗಿರಿಜಾರವರು ದಣಿವರಿಯದ ಕಲಾವಿದೆ. ಜೊತೆಗೆ ಒಂದಷ್ಟು ಅಸಕ್ತ ಕಲಾವಿದರಿಗೆ ಸಹಾಯ ಹಸ್ತ ಚಾಚುತ್ತ ದೀನ ದಲಿತರ ಸಮಾಜಸೇವೆಯಲ್ಲಿ ನಿರತರಾಗಿರುವ ಡಾIಗಿರಿಜಾ ಲೋಕೇಶ ರವರು ರಾಷ್ಟ್ರ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನ ರಾಗಲಿ ಎಂದು ಹಾರೈಸೋಣ.